ಶ್ರೀ ಜಗನ್ನಾಥನ ಮೂಲಸ್ಥಾನ

ಒರಿಸ್ಸಾ ಎಂದ ಕೂಡಲೇ ನೆನಪಾಗುವುದು ಪುರಿಜಗನ್ನಾಥ. ಶ್ರೀ ಜಗನ್ನಾಥಸ್ವಾಮಿಯ ದಿವ್ಯನೆಲೆಯದು. ಭಾರತದ ಧಾರ್ಮಿಕ-ಆಧ್ಯಾತ್ಮಿಕ ಕ್ಷೇತ್ರದಲ್ಲಿ ಪುರಿಯ ಸ್ಥಾನ ಮಹತ್ತ್ವದ್ದು. ಇಲ್ಲಿನ ಪ್ರಮುಖ ದೇವತೆ ಶ್ರೀ ಜಗನ್ನಾಥಸ್ವಾಮಿ ಸುವರ್ಣಾವತಾರಿ ಶ್ರೀ ಚೈತನ್ಯ ಮಹಾಪ್ರಭುಗಳ ಇಷ್ಟದೈವ.

ಈ ಕಾರಣದಿಂದಲೇ ಭಕ್ತರಿಗೆ, ಅದರಲ್ಲೂ ಚೈತನ್ಯ ಪರಂಪರೆಯ ವೈಷ್ಣವರಿಗೆ ಇದು ಅತ್ಯಂತ ಪ್ರಮುಖ ತೀರ್ಥಕ್ಷೇತ್ರ.

ಭಗವಾನ್ ಶ್ರೀ ಜಗನ್ನಾಥನನ್ನು ಪುರಿಕ್ಷೇತ್ರದಲ್ಲಿ ಮರದ ವಿಗ್ರಹ ರೂಪದಲ್ಲಿ ಪೂಜಿಸಲಾಗುತ್ತದೆ. ಇದು ಇಲ್ಲಿನ ವೈಶಿಷ್ಟ್ಯ ಕೂಡ. ಈ ಅಪರೂಪದ ಪದ್ಧತಿಯ ಹಿಂದೊಂದು ಕಥೆಯಿದೆ. ಅದು, ಒರಿಸ್ಸಾದ ನಯಾಗಡ್ ಜಿಲ್ಲೆಯ ಕಾಂತಿಲೋ ಎಂಬಲ್ಲಿಂದ ಆರಂಭವಾಗುತ್ತದೆ.

ಕಾಂತಿಲೋ ಇರುವುದು ಮಹಾನದೀ ತೀರದಲ್ಲಿ. ಬ್ರಹ್ಮಗಿರಿ ಶ್ರೇಣಿಯ ತಪ್ಪಲಲ್ಲಿ. ಈ ಗುಡ್ಡಗಾಡು ಪ್ರದೇಶ ಶಬರ ಜನಾಂಗದ ಆಶ್ರಯ ತಾಣ. ಇಲ್ಲಿನ ಪುಟ್ಟ ಗುಹೆಯೊಂದರಲ್ಲಿ ಭಗವಂತನು ‘ನೀಲಮಾಧವ’ ಎನ್ನುವ ಹೆಸರಿನಿಂದ ಚಿಕ್ಕ ಕಪ್ಪು ಮೂರ್ತಿಯ ಸ್ವರೂಪದಲ್ಲಿ ಪೂಜಿಸಲ್ಪಡುತ್ತಿದ್ದ.

ಶಬರನ ಅರಸ ವಿಶ್ವವಸು ನಿತ್ಯವೂ ನೀಲಮಾಧವನನ್ನು ಆರಾಧಿಸುತ್ತಿದ್ದ. ಸ್ಥಳೀಯ ಭಾಷೆಯಲ್ಲಿ ನೀಲ ಮಾಧವನನ್ನು ‘ಕಿತುಂಗ್’ ಎಂದು ಕರೆಯಲಾಗುತ್ತಿತ್ತು. ‘ಕಿತುಂಗ್’ ಎಂದರೆ ‘ದೇವರು’ ಎಂದರ್ಥ.

ಪುರಾಣದಲ್ಲಿ ಕೂಡ ಜಗನ್ನಾಥನು ಆರಂಭದಲ್ಲಿ ‘ ನೀಲ ಮಾಧವʼ ಸ್ವರೂಪದಲ್ಲಿ ಪೂಜಿಸಲ್ಪಡುತ್ತಿದ್ದುದರ ಅನಂತರದ ದಿನಗಳಲ್ಲಿ ‘ದಾರುಮೂರ್ತಿ’ (ಮರದಿಂದ ಮಾಡಿದ) ಯ ಪೂಜೆ ಆರಂಭವಾದುದರ ಉಲ್ಲೇಖವಿದೆ.

ಹೀಗೆ ನೀಲ ಮಾಧವಮೂರ್ತಿ ದಾರುಮೂರ್ತಿಯಾಗಿ ಪೂಜೆ ಪಡೆಯತೊಡಗಿದುದರ ವಿವರ ಹೀಗಿದೆ:

ಒಮ್ಮೆ ವಿದ್ಯಾಪತಿಯ ಹೆಂಡತಿ ಲಲಿತೆ ತನ್ನ ಪತಿಯನ್ನು ಕುರಿತು, ತನ್ನ ತಂದೆ ದಟ್ಟ ಕಾಡಿನ ನಡುವೆ ನೀಲ ಮಾಧವನ ಪೂಜೆ ನಡೆಸುತ್ತಿದ್ದುದನ್ನು ಹೇಳಿದಳು. ನೀಲಮಾಧವನ ಹೆಸರು ಕೇಳುತ್ತಿದ್ದಂತೆಯೇ ವಿದ್ಯಾಪತಿಗೆ ತನ್ನ ಧ್ಯೇಯೋದ್ದೇಶ ಈಡೇರುವ ದಿನ ದೂರವಿಲ್ಲವೆನಿಸಿತು.

ಆ ಸ್ಥಳಕ್ಕೆ ತನ್ನನ್ನು ಕರೆದುಕೊಂಡು ಹೋಗುವಂತೆ ಪತ್ನಿಯನ್ನು ಕೇಳಿಕೊಂಡ. ಆದರೆ, ಹೋಗುವಾಗ ಆತನು ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಹೋಗಬೇಕೆನ್ನುವ ಷರತ್ತಿನ ಮೇಲೆ ಆಕೆ ಅವನನ್ನು ಅಡವಿಯೊಳಕ್ಕೆ ಕರೆದೊಯ್ದಳು.

ಬುದ್ಧಿವಂತ ವಿದ್ಯಾಪತಿ ಹೊರಡುವಾಗ ಒಂದು ಮುಷ್ಟಿ ಸಾಸಿವೆ ಕೊಂಡೊಯ್ದು ದಾರಿಯುದ್ದಕ್ಕೂ ಅದನ್ನು ಹಾಕುತ್ತ ನಡೆದ. ಅದು ಮುಂಗಾರಿನ ಸಮಯ, ಮಳೆಬಿದ್ದು ನೀಲ ಮಾಧವನಿದ್ದ ಗುಹೆಯವರೆಗೆ ಅಡವಿಯ ದಾರಿಯುದ್ದಕ್ಕೂ ಹಸಿರು ಸಾಸಿವೆ ಗಿಡಗಳು ನಳನಳಿಸಿದವು.

ನೀಲ ಮಾಧವನ ದರ್ಶನ ಪಡೆದು ಬಂದ ವಿದ್ಯಾಪತಿ ಇಂದ್ರದ್ಯುಮ್ನ ರಾಜನ ಬಳಿ ಹೋಗಿ ವಿಷಯ ತಿಳಿಸಿದ. ಅವರಿಬ್ಬರೂ ಒಟ್ಟಾಗಿ ಉತ್ಕಲದತ್ತ ಪ್ರಯಾಣ ಬೆಳೆಸಿದರು. ಆದರೆ, ಅವರು ಅಡವಿಯನ್ನು ತಲಪುವುದರೊಳಗೆ ಅಶರೀರವಾಣಿಯೊಂದು ‘ನೀಲಮಾಧವನು ಅಂತರ್ಧಾನನಾಗಿರುವನೆಂದೂ, ಪ್ರಸ್ತುತ ಸಮುದ್ರದಲ್ಲಿ ತೇಲುತ್ತಿರುವನೆಂದೂ ನುಡಿಯಿತು.

ಇತ್ತ, ತನ್ನ ಅಳಿಯ ವಿದ್ಯಾಪತಿಯು ಭಗವಂತನಿಗೆ ಬೇಸರವುಂಟು- ಮಾಡಿದನೆಂದು ವಿಶ್ವವಸುವು ಕೋಪಗೊಂಡಿದ್ದನು. ಆದರೆ ರಾಜ ಇಂದ್ರದ್ಯುಮ್ನನು ಅವನನ್ನು ಸಾಂತ್ವನಪಡಿಸಿ ಪುರಿಗೆ ಬರುವಂತೆ ಮನವೊಲಿಸಿದನು.

ಪುರಿಯ ಸಮುದ್ರದಲ್ಲಿ ಭಗವಂತನ ಮೂರ್ತಿಯು ದೊಡ್ಡದೊಂದು ಮರದ ದಿಮ್ಮಿಯಾಗಿ ಪರಿವರ್ತನೆಗೊಂಡು ದಂಡೆಗೆ ಬಂದು ತಲಪಿತು. ಈ ದಿಮ್ಮಿಯಿಂದಲೇ ಶ್ರೀ ಜಗನ್ನಾಥ, ಬಲಭದ್ರ, ಸುಭದ್ರೆಯರ ಮೂರ್ತಿಗಳನ್ನು ಮಾಡಿ ಚಿಕ್ಕ ಗುಡಿಯೊಂದರಲ್ಲಿ ಪ್ರತಿಷ್ಠಾಪಿಸಲಾಯಿತು.

ಪುರಿಯು ಈಗಿನ ಸ್ವರೂಪ ಪಡೆದುಕೊಂಡಿದ್ದು ಕ್ರಿ.ಶ 12 ರ ಸುಮಾರಿಗೆ. ಈ ವೇಳೆಗೆ ಜಗನ್ನಾಥ ಪಂಥ ಕೂಡ ಸಾಕಷ್ಟು ಮಗ್ಗಲುಗಳನ್ನು ಕಂಡಿತು. ಜಗನ್ನಾಥನೂ ‘ಶಬರಿನಾರಾಯಣ’, ‘ನೀಲಾಕ್ಷ ಮಾಧವ’, ಇತ್ಯಾದಿ ಹೆಸರುಗಳನ್ನು ಪಡೆದು, ಅಂತಿಮವಾಗಿ ಒರಿಸ್ಸಾದುದ್ದಗಲಕ್ಕೂ ‘ನೀಲಮಾಧವ’ನೆಂಬ ಹೆಸರಿನಿಂದ ಸುಪರಿಚಿತನಾದನು. ಅಷ್ಟೇ ಅಲ್ಲ ದೇಶದುದ್ದಗಲಕ್ಕೆ ಜಗನ್ನಾಥ ಪಂಥದ ವ್ಯಾಪ್ತಿ ಹರಡಿಕೊಂಡಿತು.

ಒರಿಸ್ಸಾದಲ್ಲಿ ಈಗಲೂ ನೀಲಮಾಧವ ಪೂಜೆಗೇ ಆದ್ಯತೆ. ಯಾವುದೇ ಶುಭ ಸಮಾರಂಭದ ಮೊದಲು ನೀಲ ಮಾಧವನನ್ನು ಆವಾಹಿಸುವುದು ಅಲ್ಲಿನ ರೂಢಿ. ಅದರ ಅನಂತರವಷ್ಟೆ ವಿಘ್ನೇಶ್ವರನ ಪೂಜೆ. ಕಾಲಾನುಕ್ರಮದಲ್ಲಿ ಕಟ್ಟಲಾದ ನೀಲಮಾಧವ ದೇಗುಲಗಳಲ್ಲಿ ಕಾಂತಿಲೋದಲ್ಲಿ ಕಟ್ಟಿರುವ ದೇವಾಲಯಕ್ಕೆ ಸಹಜವಾಗಿ ಮೊದಲ ಪ್ರಾಮುಖ್ಯವಿದೆ.

ಇಲ್ಲಿ ದೇವಾಲಯ ನಿರ್ಮಿಸಿದ್ದು ‘ಗಂಧಮರ್ದನ ದೇವ’ ಎನ್ನುವ ರಾಜ. ಈತ ಬೌದ್ಧ ಅರಸು ಮನೆತನಕ್ಕೆ ಸೇರಿದವನು. ಗಂಧಮರ್ದನನು ಮಹಾನದಿ – ಕುಆನ್ರಿಯಾ ಕುಸುಮಿ ನದಿಗಳ ತ್ರಿವೇಣಿ ಸಂಗಮದಲ್ಲಿ ಪುರಿಯ ಜಗನ್ನಾಥ ದೇವಾಲಯದ ರೀತಿಯಲ್ಲೇ ನೀಲ ಮಾಧವ ದೇಗುಲವನ್ನು ಕಟ್ಟಿಸಿದನು.

ಮಂದವಾಗಿ ಹರಿಯುವ ಮಹಾನದಿಯ ಪ್ರಶಾಂತ ದಂಡೆ, ಎಡಭಾಗದಲ್ಲಿ ಕ್ಷಿತಿಜದೆಡೆಗೆ ಬೆಸೆದುಕೊಂಡಿರುವ ಪರ್ವತಶ್ರೇಣಿ. ಇವೆಲ್ಲವುಗಳ ನಡುವೆ ನಿಂತಿರುವ ದಿವ್ಯ ನಯನ ಮನೋಹರ ತಾಣ ಕಾಂತಿಲೋ, ಧಾರ್ಮಿಕ ಕ್ಷೇತ್ರ ಮಾತ್ರವಲ್ಲ, ಒರಿಸ್ಸಾದ ಪ್ರಮುಖ ಪ್ರವಾಸಿತಾಣವೂ ಹೌದು.

ಇಲ್ಲಿ ಭಗವಂತನ ಪಾದಗಳೆಡೆಯಿಂದ ನಿರಂತರವಾಗಿ ಹರಿದುಬರುವ ಪವಿತ್ರ ತೀರ್ಥವನ್ನು ಪಡೆಯಲೆಂದೇ ಸಾವಿರಾರು ಯಾತ್ರಾರ್ಥಿಗಳು ಭೇಟಿ ನೀಡುತ್ತಿರುತ್ತಾರೆ.

ಭಗವಂತನ ಈ ದಿವ್ಯಧಾಮಕ್ಕೆ ಪ್ರವಾಸ ಮಾಡುವುದರಿಂದ ಎರಡು ಲಾಭ. ಒಂದು, ಸುಂದರ ನಿಸರ್ಗ ನೀಡುವ ಆಹ್ಲಾದ, ಅದಕ್ಕಿಂತ ಹೆಚ್ಚಿನದಾಗಿ ನೀಲಮಾಧವನ ದರ್ಶನ ಭಾಗ್ಯದಿಂದ ಪುಣ್ಯ ಸಂಚಯ! ಅಲ್ಲವೇ?

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi