ಕಲ್ಕತ್ತೆಯಲ್ಲಿ ಗೌರಮೋಹನ ಡೇ ಮತ್ತು ರಜನಿ ಅನ್ನುವ ದಂಪತಿಗಳಿದ್ದರು. ಅವರಿಗೊಬ್ಬಮಗ, ಅಭಯಚರಣ, ಬಹಳ ಚೂಟಿ ಹುಡುಗ. ತನ್ನ ತಂದೆ-ತಾಯಿಗಳ ಹಾಗೆಯೇ ಅವನಿಗೂ ಕೃಷ್ಣನ ಪೂಜೆ- ಅಲಂಕಾರಗಳಂದ್ರೆ ಬಹಳ ಪ್ರೀತಿ. ದಿನಾಲು ತನ್ನ ತಂದೆ ಕೊಟ್ಟ ರಾಧಾಕೃಷ್ಣರ ಮೂರ್ತಿಗಳನ್ನು ಶ್ರದ್ದೆಯಿಂದ ಪೂಜಿಸುತ್ತಿದ್ದ.

ಒಮ್ಮೆ ಗೌರಮೋಹನರು ತಮ್ಮ ಮಗ ಪುಟ್ಟ ಅಭಯನನ್ನ ರಥಯಾತ್ರೆಗೆ ಕರೆದುಕೊಂಡು ಹೋದ್ರು. ದೊಡ್ಡ ದೊಡ್ಡ ರಥಗಳಲ್ಲಿ ಭಗವಂತನನ್ನ ಕುಳ್ಳಿರಿಸಿ ನೂರಾರು ಜನ ತೇರಿನ ಹಗ್ಗವನ್ನ ಎಳೀತಿದ್ರು. ಆ ವೈಭವ ನೋಡಿ ಅವನು ಕುಣಿದಾಡಿ ಬಿಟ್ಟ.
ಮನೆಗೆ ಬಂದ ಅಭಯನಿಗೆ ಅದೇ ಗುಂಗು. ಕಣ್ತುಂಬ ರಥೋತ್ಸವವೇ ತುಂಬಿಕೊಂಡು ಬೇರೆಲ್ಲ ಆಸಕ್ತಿಗಳೂ ಕಳೆದುಹೋಗ್ಬಿಟ್ವು. ಒಂದೇ ಸಮ ತನ್ನಪ್ಪನನ್ನ ಕಾಡಲಾರಂಭಿಸಿದ ಅಭಯ. ಅವನದು ಒಂದೇ ಹಠ. “ಅಪ್ಪಾ ನಂಗೂ ಒಂದು ರಥ ತಂದುಕೊಡು. ನಾನೂ ರಥೋತ್ಸವ ಮಾಡ್ತೀನಿ!”
ಮಗನ ಉತ್ಸಾಹ ಗೌರಮೋಹನರಿಗೆ ಖುಷಿಯೇನೋ ಕೊಟ್ಟಿತು. ಆದ್ರೆ, ರಥ ಮಾಡೋದು ಅಂದ್ರೆ ಅಷ್ಟು ಸುಲಭಾನಾ! ಅದಕ್ಕೆ ಬೇಕಾಗೋ ಮರ, ಬಡಗಿಗೆ ಮಜೂರಿ ಎಲ್ಲವಕ್ಕೂ ಹಣ ಹೊಂದಿಸ್ಬೇಕಲ್ಲ? ಅಂತ ಯೋಚಿಸಿದ್ರೂ, ಮಗನ ಆಸೆ ಅತ್ಯಂತ ಉನ್ನತವಾದದ್ದು ಅಂದ್ಕೊಂಡು ಹೊರಟ್ರು.
ಆದರೇನು ಮಾಡೋದು? ಯಾವ ಬಡಗಿಯೂ ಕಡಮೆ ಹಣಕ್ಕೆ ರಥ ಮಾಡಿಕೊಡಲು ಒಪ್ಲೇ ಇಲ್ಲ. ಒಂದಡೆ ಅಭಯನ ಸಂಕಟ ಹೆಚ್ಚಲೇ ಇತ್ತು. ಮತ್ತೊಂದಡೆ ಅದನ್ನ ಕಂಡು ತಂದೆಯ ದುಃಖ!

ಹೀಗಿರುವಾಗ ಅಪ್ಪ-ಮಗನಿಗೆ ಸಾಧಾರಣ ಹೆಂಗಸೊಬ್ಬಳು ಎದುರಾದ್ಲು. ಆಳುತ್ತಿದ್ದ ಅಭಯನನ್ನ ನೋಡಿ ಕಾರಣ ವಿಚಾರಿಸಿದ್ಲು. ಅದೃಷ್ಟ! ಅವಳ ಮನೆಯಲ್ಲೊಂದು ಪುಟ್ಟ ರಥವಿತ್ತು!! ಸಾಧಾರಣ ಹೆಂಗಸಂತೆ ಕಂಡಿದ್ದ ಅವಳು ಅಭಯನ ಪಾಲಿಗೆ ಸಂತೋಷದ ನಿಧಿಯನ್ನೇ ತಂದು ಬಿಟ್ಟಿದ್ಲು!
ರಥಕ್ಕೆ ಬಳಿದ ಬಣ್ಣಗಳೇನು! ಸಿಂಗಾರವೇನು? ಗಲ್ಲಿಯ ಹುಡುಗರನ್ನೆಲ್ಲ ಕರೆಸಿ ಹಗ್ಗಕಟ್ಟಿ ಎಳೆದದ್ದೇನು!? (ಅಂತೂ ಹೀಗೆ ಶುರುವಾಯ್ತು ಅಭಯನ ಮೊಟ್ಟ ಮೊದಲ ರಥಯಾತ್ರೆ) ಅಭಯಚರಣ ಅವತ್ತು ಕಲ್ಕತ್ತದ ಚಿಕ್ಕ ಬೀದಿಯಲ್ಲಿ ನಡೆಸಿದ ರಥ ಯಾತ್ರೆ ಬೆಳಗಾಗುವುದರಲ್ಲಿ ಮನೆಮಾತಾಗಿಹೋಯ್ತು. ಆಗ ಅವನಿಗಿನ್ನು ಐದು ವರ್ಷ ವಯಸ್ಸು!
ಮುಂದೆ ಅಭಯಚರಣ ಬೆಳೆದು ನಿಂತ. ಅವನ ಎತ್ತರಕ್ಕೆ ಕಲ್ಕತ್ತದ ಬೀದಿ ಸಾಲದಾಯಿತು. ಜಗತ್ತಿನ ಬೀದಿ ಬೀದಿಗಳಲ್ಲಿ ಭಗವಂತನ ರಥೋತ್ಸವ ನಡೆಸಬೇಕೆಂದು ಹಂಬಲಪಟ್ಟ. ಪರಿಣಾಮ….. ಅಮೆರಿಕದ ಬೀದಿಗಳಲ್ಲಿ, ಲಂಡನ್ನಿನ ಚೌಕಗಳಲ್ಲಿ, ಆಸ್ಟ್ರೇಲಿಯಾದಲ್ಲಿ.. ಎಲ್ಲೆಡೆಯೂ ಭಕ್ತರು ಸಾಲುಗಟ್ಟಿ ರಥ ಎಳೆದರು!
ಹೀಗೆ ಚಿಕ್ಕ ವಯಸ್ಸಿನಲ್ಲೇ ಮಹಾಭಕ್ತನ ಲಕ್ಷಣ ನೋಡಿ, ದೊಡ್ಡವನಾದ ಮೇಲೆ ಜಗತ್ತಿಗೆಲ್ಲ ಕೃಷ್ಣ ಸಂದೇಶ ಬಿತ್ತಿದ ಅಭಯಚರಣ ಯಾರು ಗೊತ್ತಾ? ಅವರೇ ಇಸ್ಕಾನ್ ಸಂಸ್ಥಾಪನಾಚಾರ್ಯ ಶ್ರೀ ಶ್ರೀಮದ್ ಎ.ಸಿ.ಭಕ್ತಿವೇದಾಂತ ಸ್ವಾಮಿ ಪ್ರಭುಪಾದರು!






Leave a Reply