ವೈದಿಕ ಜ್ಞಾನ – ಒಂದು ಪಾಠಕ್ರಮ-3

ವೈದಿಕ ಸಂಸ್ಕೃತಿ ಹಾಗೂ ಕೃಷ್ಣಪ್ರಜ್ಞಾ ಚಳವಳಿಗಳಿಗೆ ಅಡಿಪಾಯವಾಗಿ ನಿಂತಿರುವ ತತ್ತ್ವಶಾಸ್ತ್ರೀಯ ಗ್ರಹಿಕೆಗಳ ಬಗೆಗೆ ಈ ಲೇಖನಮಾಲೆ ಕ್ರಮಬದ್ಧ ವಿವರಣೆ ನೀಡುತ್ತದೆ.

ಪುನರವತಾರ

– ಆಂಗ್ಲಮೂಲ : ಪವನೇಶಣ ದಾಸ, ಅನುವಾದ: ಚಿರಂಜೀವಿ

ಭಗವದ್ಗೀತೆಯ ಪ್ರಾರಂಭದಲ್ಲಿ ಶ್ರೀ ಕೃಷ್ಣ ಪುನರವತಾರವನ್ನು ವಿವರಿಸುತ್ತಾನೆ (2.13) “ದೇಹಸ್ಥವಾಗಿರುವ ಆತ್ಮಈ ದೇಹದಲ್ಲಿ ನಿರಂತರವಾಗಿ, ಬಾಲ್ಯದಿಂದ ಯೌವನಕ್ಕೆ, ಅದರಿಂದ ಮುಪ್ಪಿಗೆ ಮುಂದುವರಿಯುತ್ತದೆ, ಮತ್ತು ಇದೇ ರೀತಿ ಸಾವು ಬ೦ದಮೇಲೆ ಇನ್ನೊಂದು ದೇಹಕ್ಕೆ ವರ್ಗಾವಣೆಗೊಳ್ಳುತ್ತದೆ.”

ನಾವು ಪ್ರತಿಯೊಬ್ಬರೂ ಒಮ್ಮೆ ಮಗುವಿನ ದೇಹವನ್ನು ಹೊಂದಿದ್ದೆವು, ಮತ್ತು ಈಗ ಪ್ರಾಯಕ್ಕೆ ಬಂದಮೇಲೆ ವಯಸ್ಕರ ದೇಹವನ್ನು ಹೊಂದಿದ್ದೇವೆ. ಆದರೆ, ಇವೆರಡು ದೇಹಗಳೂ ಸಂಪೂರ್ಣವಾಗಿ ವಿಭಿನ್ನವಾದವು. ಅವೆರಡೂ ಒಂದೇ ರೀತಿಯಾಗಿ ಕಾಣಿಸುವುದಿಲ್ಲ, ಮತ್ತು ಎಲ್ಲ ರಾಸಾಯನಿಕ ಅಂಶಗಳೂ ಬದಲಾಗಿ ಹೋಗಿರುತ್ತವೆ. ಹೀಗಿದ್ದರೂ, ನಮ್ಮ ತಾಯಂದಿರು ನಮ್ಮನ್ನು ಅದೇ ವ್ಯಕ್ತಿಯಾಗಿಯೇ ಭಾವಿಸಿಕೊಂಡಿದ್ದಾರೆ.

ನಾವು ಮೂವತ್ತು ಅಥವಾ ಮೂವತ್ತೈದು ವರ್ಷ ವಯಸ್ಸಾದವರಾದಾಗ, ಮತ್ತೆ ನಮ್ಮ ದೇಹ ಭಿನ್ನವಾಗಿ ಕಾಣಿಸುತ್ತದೆ. ಆದರೂ ನಾವು ಅದೇ ವ್ಯಕ್ತಿಯಾಗಿಯೇ ಉಳಿದುಕೊಂಡಿರುತ್ತೇವೆ. ಹಾಗಾದರೆ ಆ ಅದೇ ರೀತಿ ಉಳಿದುಕೊಂಡಿರುವುದು ಯಾವುದು? ಅದು ನಮ್ಮ ನಿಜವಾದ ನಾವು, ನಮ್ಮ ಚೇತನಾತ್ಮ. ಈ ರೀತಿಯಾಗಿ ನಾವು ಪುನರವತಾರವನ್ನು ಸ್ವಲ್ಪಮಟ್ಟಿಗೆ ಈಗಿನ ಜೀವಿತಾವಧಿಯಲ್ಲಿ ಗಮನಿಸಬಹುದು.

ವ್ಯಕ್ತಿಯೊಬ್ಬ ಸತ್ತಾಗ, ನಾವು ಸಾಮಾನ್ಯವಾಗಿ ಹೀಗೆನ್ನುತ್ತೇವೆ, ಅವನು ಹೋದ, ಅವನ ದೇಹ ನಮ್ಮ ಎದುರಿನಲ್ಲೇ ಬಿದ್ದಿದ್ದರೂ ನಮ್ಮ ಬಾಯಿಯಿಂದ ಈ ಮಾತುಗಳು ಬರುತ್ತವೆ. ಅವನು ಹೋದ ಎಂದು ನಾವೇಕೆ ಹೇಳುತ್ತೇವೆ? ಯಾರು ಹೋಗಿದ್ದು? ಮತ್ತು ಅವನು ಹೋಗಿದ್ದು ಎಲ್ಲಿಗೆ?

ಆ ದೇಹ ಇನ್ನೂ ನಮ್ಮ ಎದುರಿನಲ್ಲೇ ಬಿದ್ದಿರುವುದರಿಂದ, ಇಲ್ಲಿಂದ ಹೋಗಿದ್ದು ಅದರಲ್ಲಿದ್ದ ಆತ್ಮ ಎನ್ನುವುದನ್ನು ನಾವು ತಿಳಿದುಕೊಳ್ಳಬೇಕು. ನಮಗೆ ಚೆನ್ನಾಗಿ ಗೊತ್ತಿದ್ದ ಎಂದು ಭಾವಿಸಿದ್ದ ಮನುಷ್ಯ ಯಾವತ್ತೂ ಅವನ ದೇಹಕ್ಕೆ ತದ್ರೂಪನಾಗಿ ಇರಲಿಲ್ಲ. ನಿಜಸ್ಥಿತಿಯೆಂದರೆ, ನಿಜವಾದ ಅವನನ್ನು ಯಾರೂ ಕಂಡೇ ಇಲ್ಲ.

ಒಬ್ಬ ಅತಿ ಸುಂದರ ಚಲನಚಿತ್ರ ತಾರೆ ಲಕ್ಷ ಲಕ್ಷ ಅಭಿಮಾನಿಗಳ ಆರಾಧನೆಗೆ ಕೇಂದ್ರವಾಗಿದ್ದಿರಬಹುದು, ಆದರೆ, ಅವಳು ಸತ್ತಾಗ, ಅವಳ ದೇಹ ಮೊದಲಿನ ಹಾಗೆಯೇ ಇದ್ದರೂ, ಯಾರು ಅವಳತ್ತ ಆಕರ್ಷಕರಾಗುವುದಿಲ್ಲ. ನಿಸ್ಸಂಶಯವಾಗಿ, ಅವಳ ದೇಹ ಆಕರ್ಷಣೆಯ ನಿಜಕೇಂದ್ರಬಿಂದು ಆಗಿರಲಿಲ್ಲ.

ಆತ್ಮವೆನ್ನುವುದು ದೇಹವನ್ನು ಬಿಟ್ಟು ಹೋದ ಮೇಲೆ, ಅಲ್ಲಿ ಕಳೆದುಹೋಗಿರುವ ಯಾವ ಯಾವುದೇ ರಾಸಾಯನಿಕಗಳನ್ನು ಅದರೊಳಗೆ ಸೇರಿಸಿ ಏನೇನು ಪ್ರಯತ್ನಗಳನ್ನು ಮಾಡಿದರೂ ಮತ್ತೆ ಅದನ್ನು ಜೀವಂತಗೊಳಿಸಲಾಗುವುದಿಲ್ಲ – ಹೀಗೆಂದು ಶ್ರೀ ಕೃಷ್ಣ ಭಗವದ್ಗೀತೆಯಲ್ಲಿ ಹೇಳಿದ್ದಾನೆ (2.20, 22)

ಆತ್ಮಕ್ಕೆ ಯಾವ ಕಾಲದಲ್ಲೂ ಹುಟ್ಟು ಎನ್ನುವುದೊ ಅಥವಾ ಸಾವು ಎನ್ನುವುದೊ ಇಲ್ಲ. ಅವನು ಅಸ್ತಿತ್ವಕ್ಕೆ ಬರಲಿಲ್ಲ, ಅಸ್ತಿತ್ವಕ್ಕೆ ಬರುವುದಿಲ್ಲ ಮತ್ತು ಅಸ್ತಿತ್ವದೊಳಗೆ ಬರುವುದೂ ಇಲ್ಲ. ಅವನು ಹುಟ್ಟಿದವ ಶಾಶ್ವತವಾಗಿರುವವ, ಯಾವತ್ತೂ ಅಸ್ತಿತ್ವದಲ್ಲಿರುವವ ಮತ್ತು ಅನಾದಿ. ಶರೀರವನ್ನು ನಾಶಪಡಿಸಿದಾಗ ಅವನು ನಾಶವಾಗುವುದಿಲ್ಲ.

ಒಬ್ಬ ವ್ಯಕ್ತಿ ಹಳೆಯದನ್ನು ಬಿಸಾಡಿ, ಹೊಸ ಉಡುಪು ಧರಿಸುವ ಹಾಗೆ, ಆತ್ಮ ಹಳೆಯ ಮತ್ತು ನಿರುಪಯುಕ್ತವಾದವುಗಳನ್ನು ಕೈಬಿಟ್ಟು ಹೊಸ ಪ್ರಾಪಂಚಿಕ ಶರೀರಗಳನ್ನು ಸ್ವೀಕರಿಸುತ್ತದೆ.

ಈಗ ಒಬ್ಬ ವಿಜ್ಞಾನಿ ಅಥವಾ ಒಬ್ಬಕಟ್ಟಾ ಪ್ರಾಪಂಚಿಕವಾದಿ ಹೀಗೆ ಹೇಳಬಹುದು, “ಆತ್ಮಕ್ಕೆ ಮತ್ತು ಪುನರವತಾರಕ್ಕೆ ಪುರಾವೆಗಳೆಲ್ಲಿದೆ? ಇವನ್ನು ಪ್ರತ್ಯಕ್ಷವಾಗಿ ಯಾರೂ ನೋಡಿಯೇ ಇಲ್ಲವಲ್ಲ.”

ಇಂತಹದೊಂದು ಸವಾಲು, ಎಲ್ಲ ವೈಜ್ಞಾನಿಕ ‘ಸತ್ಯ’ ಗಳನ್ನೂ ನೇರವಾಗಿ ಗಮನಿಸಲಾಗಿದೆ ಎಂದು ಆತ್ಮವಿಶ್ವಾಸ ಕಾಣಿಸುತ್ತದೆ. ಇದು ಖಂಡಿತವಾಗಿಯೂ ನಿಜವಲ್ಲ. ಕೋಟ್ಯಂತರ ಮಕ್ಕಳಿಗೆ ಪ್ರಾಣ ಎನ್ನುವುದು ಭೌತದ್ರವ್ಯದಿಂದ ಬರುತ್ತದೆ ಎಂದು ಕಲಿಸಲಾಗಿದೆ. ಮತ್ತು ಇದು, “ಬಿಗ್ ಬ್ಯಾಂಗ್’ ಅಥವಾ ‘ಪ್ರಿಮಾರ್ಡಿಯಲ್ ಸೂಪ್’ ನಿಂದ ಪ್ರಾರಂಭವಾಯಿತು ಎಂದು ತಿಳಿಸಲಾಗುತ್ತದೆ.

ಅನಂತರ, ಆಕಸ್ಮಿಕವಾಗಿ ರಾಸಾಯನಿಕಗಳು ತಾವಾಗಿಯೇ ಸೇರಿಕೊಳ್ಳುತ್ತ ಬಂದು, ಕೊನೆಗೆ ಅತ್ಯಂತ ಚುರುಕು ಮಾನವರು ಆಗಿ ವಿಕಾಸಗೊಂಡಿತು ಎನ್ನುವುದಾಗಿದೆ.

ಈ ಪ್ರಕ್ರಿಯೆಯನ್ನು ಯಾರೂ ಯಾವತ್ತೂ ಗಮನಿಸಿಲ್ಲ ಎನ್ನುವುದನ್ನು ವಿಶ್ವಾಸದಿಂದ ನಾವು ಹೇಳಬಹುದು. ಏಕೆಂದರೆ ಕೋಟ್ಯಂತರ ವರ್ಷಗಳ ಹಿಂದೆ, ಗಮನಿಸುವ ಜನ ಸುತ್ತಮುತ್ತ ಇರದಿದ್ದ, ಮಾನವ ಕುಲವೇ ಇಲ್ಲದಿದ್ದ ಕಾಲದಲ್ಲಿ ಇದು ನಡೆದದ್ದು. ರಾಸಾಯನಿಕಗಳಿಂದ ಜೀವ ಉದ್ಭವಗೊಂಡಿತು ಎನ್ನುವ ವಿಚಾರ ಸರಣಿಗಳ ಪ್ರತಿಪಾದನೆ ಇಂದಿನವರೆಗೂ ರುಜುವಾತು ಆಗಿಲ್ಲ. ಭೌತದ್ರವ್ಯಗಳು ಜೀವವನ್ನು ಉತ್ಪತ್ತಿ ಮಾಡುವುದನ್ನು ಎಂದಿಗೂ ಯಾರೂ ನೋಡಿಲ್ಲ.

ಚೈತನ್ಯವಿರುವ ಜೀವಿಗಳು ಹೇಗೆ ಭೌತದ್ರವ್ಯಗಳನ್ನು ಉತ್ಪತ್ತಿ ಮಾಡುತ್ತವೆ ಎನ್ನುವುದನ್ನು ನಾವು ಪ್ರತಿದಿನವೂ ಗಮನಿಸುತ್ತಲೇ ಇದ್ದೇವೆ: ಕೂದಲು, ಬೆವರುವುದು, ಕೈಬೆರಳುಗಳ ಉಗುರುಗಳು, ಮತ್ತಿತರ ಅಂಶಗಳ ಮೂಲಕ, ಆದ್ದರಿಂದ, ಪುನರವತಾರ ಎನ್ನುವುದು ಪ್ರತ್ಯಕ್ಷ ಕಾಣುವ ಘಟನೆಗಳಿಗೆ, ರಾಸಾಯನಿಕ ವಿಕಾಸ ಪ್ರತಿಪಾದನೆಗಳಿಗಿಂತಲೂ ಹೆಚ್ಚು ಸಂಗತವಾಗುತ್ತದೆ.

ಭೌತದ್ರವ್ಯಗಳು ಸ್ಪಷ್ಟವಾಗಿ ಚೈತನ್ಯವನ್ನು ಅವಲಂಬಿಸಿವೆ. ದೇಹ ಬದಲಾಗುತ್ತಿರುವುದನ್ನು ಮತ್ತು ವ್ಯಕ್ತಿ ಹಾಗೆಯೇ ಉಳಿದಿರುವುದನ್ನು ನೋಡುತ್ತಿದ್ದೇವೆ, ಮತ್ತು ನಾವು ಜೀವ ಚೈತನ್ಯ ಭೌತದ್ರವ್ಯವನ್ನು ಉತ್ಪಾದಿಸುವುದನ್ನು ನೋಡುತ್ತಿದ್ದೇವೆ.

ಆಧುನಿಕ ವಿಜ್ಞಾನದ ಪ್ರತಿಪಾದನೆಗಳಿಂದ ದಾರಿತಪ್ಪುವಂತಾಗಿ, ಜನರಿಗೆ, ಆತ್ಮ ಮತ್ತು ಅವತಾರದ ವಿಶ್ವ ನಿಯಮಗಳ ಪರಿಚಯವೇ ಇಲ್ಲದಂತಾಗಿದೆ. ಸಾವು ಎನ್ನುವುದೇ ನಮ್ಮ ಅಸ್ತಿತ್ವದ ಅಂತ್ಯವಾದ್ದರಿಂದ ಈ ಜೀವನವನ್ನು ಎಷ್ಟು ಸಾಧ್ಯವಾಗುತ್ತದೋ ಅಷ್ಟು ಸುಖಿಸಿಬಿಡಬೇಕು ಎಂದವರು ಭಾವಿಸುತ್ತಾರೆ.

ಈ ಬಗೆಯ ಜಿಜ್ಞಾಸೆ, ಕ್ರೌರ್ಯ, ಸ್ವಾರ್ಥತೆ, ಅಪರಾಧ ಮತ್ತು ಬೇಜವಾಬ್ದಾರಿತನಗಳನ್ನು ಉತ್ತೇಜಿಸುತ್ತದೆ. ಪ್ರಪಂಚದ ನಿಯಮಗಳಿಗೆ ಮೋಸಮಾಡಿ ತಪ್ಪಿಸಿಕೊಂಡು ಬಿಡಬಹುದು ಮತ್ತು ಈ ವಿಧದಲ್ಲಿ ತಮ್ಮ ಕೆಲಸ ಕಾರ್ಯಗಳಿಗೆ ಪ್ರತಿಕ್ರಿಯೆನ್ನು ತಪ್ಪಿಸಿಕೊಂಡು ಬಿಡಬಹುದು ಎಂದುಕೊಂಡುಬಿಟ್ಟಿದ್ದಾರೆ. ಆದರೆ, ಪ್ರತಿಯೊಂದು ಜೀವಿಯೂ ಇನ್ನೊಂದು ಪ್ರತಿಕ್ರಿಯೆಯನ್ನು ಹುಟ್ಟಿಸುತ್ತದೆ ಎನ್ನುವ ಸೂಕ್ಷ್ಮ ನಿಯಮದಿಂದ ತಪ್ಪಿಸಿಕೊಳ್ಳುವುದು ಸಾಧ್ಯವಿಲ್ಲ ಎನ್ನುವುದು ಇವರಿಗೆ ಗೊತ್ತಿಲ್ಲ.

ಪುನರವತಾರವನ್ನು ಅರ್ಥಮಾಡಿಕೊಳ್ಳುವುದು ನಮಗೆ ನಡತೆ, ಪ್ರಾಮಾಣಿಕತೆ, ಮತ್ತು ಸಹಜೀವಿಗಳೊಂದಿಗೆ ಪ್ರೀತಿವಿಶ್ವಾಸ ಮೊದಲಾದವು ತುಂಬಿದ ಬದುಕನ್ನು ಸಾಗಿಸಲು ಸ್ಫೂರ್ತಿ ಕೊಡುತ್ತದೆ. ಏಕೆಂದರೆ, ಈ ಜನ್ಮದ ಎಲ್ಲ ಬಗೆಯ ಕೆಲಸಗಳಿಗಾಗಿ ಮುಂದಿನ ಜನ್ಮದಲ್ಲಿ ನಾವು ಜವಾಬ್ದಾರಿಯಾಗಿರಬೇಕಾಗುತ್ತದೆ ಎನ್ನುವುದು ನಮಗೆ ಅರ್ಥವಾಗುತ್ತದೆ.

ಪುನರವತಾರ ಅನೇಕ ಗೂಢವಾದ ಸಂಗತಿಗಳನ್ನು ವಿವರಿಸುತ್ತದೆ. ಉದಾಹರಣೆಗೆ, ಬರೀ ಐದು ವರ್ಷದವನಾಗಿದ್ದಾಗಲೇ ತನ್ನ ಪಿಯಾನೋ ವಾದನದಿಂದ, ಮೊಜಾರ್ಟ್‌‌ (ಪ್ರಪಂಚ ಪ್ರಸಿದ್ಧ ಪಿಯಾನೋ ವಾದಕ- ಸಂಯೋಜಕ) ಜನರ ಹೃದಯಗಳನ್ನು ಕರಗಿಸಲು ಹೇಗೆ ಸಾಧ್ಯವಾಯಿತು;

ಅನೇಕರಿಗೆ ಎಷ್ಟೋ ವರ್ಷಗಳು ಅಭ್ಯಾಸ ಮಾಡಿದರೂ ಯಾವುದನ್ನೂ ಸರಿಯಾಗಿ ನುಡಿಸಲು ಬರುವುದಿಲ್ಲ ಏಕೆ? ಉತ್ತರ ಬಲು ಸರಳ: ‘ಮೊಜಾರ್ಟ್‌‌ ಖಂಡಿತವಾಗಿ ಹಿಂದಿನ ಇಡೀ ಜನ್ಮಕಾಲ ಪಿಯಾನೋ ಅಭ್ಯಾಸ ಮಾಡಿರಬೇಕು’.

ಈ ವಾದ ಖ೦ಡಿತವಾಗಿ ವೈಜ್ಞಾನಿಕ ಅಲ್ಲದಿರಬಹುದು, ಆದರೆ, ನಮ್ಮ ಸಾಮರ್ಥ್ಯಗಳು ಆಕಸ್ಮಿಕವಾಗಿ ಬರುವಂತಹದು ಎಂದು ಹೇಳುವುದಕ್ಕಿಂತಲೂ ಇದು ಹೆಚ್ಚು ಸಮಂಜಸವಾಗಿರುವಂತಹದು. ಇಷ್ಟಾದರೂ, ಕೆಲವು ಮಂದಿ ಪುನರವತಾರವನ್ನು ಯಾವ ಅನುಭವಜನ್ಯ ಪುರಾವೆಯೂ ಇಲ್ಲದೆ ಒಪ್ಪಿಕೊಳ್ಳಲು ನಿರಾಕರಿಸುತ್ತಾರೆ.

ಇದಕ್ಕೆ ನಾವು, ಈ ಪುನರವತಾರದ ವಿಷಯ ವಿಜ್ಞಾನ ಪ್ರಯೋಗ ಶಾಲೆಯೊಂದರಲ್ಲಿ ಪರೀಕ್ಷೆ ಮಾಡುವಂತಹದಲ್ಲ ಎಂದು ಮಾತ್ರ ಹೇಳಬಹುದು. ಇದೇ ರೀತಿ, ಅನೇಕ ಅಂಗೀಕೃತ ಸಂಗತಿಗಳನ್ನು ಆ ರೀತಿಯಾಗಿ ವಿವರಿಸುವುದೂ ಸಾಧ್ಯವಿಲ್ಲ. ಪ್ರೀತಿ, ಪಶ್ಚಾತ್ತಾಪ, ಅಸಮಾಧಾನ, ಪರೋಪಕಾರ – ಮೊದಲಾದವನ್ನು ಪ್ರಯೋಗ ಶಾಲೆಯಲ್ಲಿ ಪರೀಕ್ಷೆಗೊಳಪಡಿಸಲಾಗುವುದಿಲ್ಲ. ಆದರೆ ಇವೆಲ್ಲವೂ ಅಸ್ತಿತ್ವದಲ್ಲಿವೆ ಎನ್ನುವುದು ನಮಗೆ ಗೊತ್ತು.

ಪುನರವತಾರವನ್ನು ಖಡಾಖಂಡಿತವಾಗಿ ತಳ್ಳಿ ಹಾಕುವುದು ಒಂದು ರೀತಿಯ ಹಠದ ನಡವಳಿಕೆಯೆನಿಸಿಕೊಳ್ಳುತ್ತದೆ. ಕೊನೆಪಕ್ಷ ಜನ ಈ ಪುನರವತಾರ ಎನ್ನುವುದು ಇದೆಯೇ ಇಲ್ಲವೇ ಎನ್ನುವುದು ಗೊತ್ತಿಲ್ಲ ಎಂದಾದರೂ ಸರಳವಾಗಿ ಒಪ್ಪಿಕೊಳ್ಳಬೇಕು. ಮತ್ತೆ ಅದು ಇಲ್ಲ ಎಂದು ಹೇಳುವುದಕ್ಕೂ ಯಾವ ಆಧಾರವೂ ಇಲ್ಲ, ಅಲ್ಲವೇ?

ಒಬ್ಬಪ್ರಾಪಂಚಿಗ ವಿಶ್ವನಿಯಮಗಳಿಗೆ ವಿರುದ್ಧವಾಗಿ, ಪವಿತ್ರ ವೈದಿಕ ಗ್ರಂಥ ಸಾರುವ ನಿಯಮಗಳಿಗೆ ವಿರುದ್ಧವಾಗಿ ಮತ್ತು ಆತ್ಮಸಾಕ್ಷಾತ್ಕಾರ ಹೊಂದಿದವರ ಸಲಹೆಗೆ ವಿರುದ್ಧವಾಗಿ, ತನಗಿಷ್ಟ ಬಂದ ರೀತಿಯ ಜೀವನವನ್ನು ಬಾಳುವ ಅವಕಾಶವನ್ನು ತೆಗೆದುಕೊಂಡರೆ, ಅವನು ಒಂದು ಪ್ರಾಣಿಯಾಗಿ ಅಥವಾ ಬೇರೆ ಎಂತಹದಾದರೂ ಅಹಿತವಾದ ಪರಿಸ್ಥಿತಿಯಲ್ಲಿ ಜನ್ಮತಾಳುವ ಅಪಾಯವನ್ನು ಎದುರಿಸಬೇಕಾಗುತ್ತದೆ.

ಅಂತೂ ಹೇಗೋ ಈ ಜನ್ಮವನ್ನು ಸಾವಿನಲ್ಲಿ ಮುಗಿಸಿದರೂ, ಭವಿಷ್ಯದ ಬಗ್ಗೆ ಚಿಂತಿಸದೆ ಬೇಜವಾಬ್ದಾರಿಯ ಬದುಕನ್ನು ಸಾಗಿಸಿದ್ದಕ್ಕಾಗಿ, ಮುಂದೆ ಅವನು ಸಂತೋಷವಾಗಿರುತ್ತಾನೆಂದು ಹೇಳಲಾಗದು.

ಭಗವದ್ಗೀತೆಯಲ್ಲಿ (16.23) ಶ್ರೀ ಕೃಷ್ಣ ಈ ಸಲಹೆ ನೀಡುತ್ತಾನೆ :

ಯಾವನು ಪವಿತ್ರ ವೈದಿಕ ಗ್ರಂಥಗಳ ನಿಯಮಗಳನ್ನು ಕಡೆಗಣಿಸಿ, ತನಗಿಷ್ಟಬಂದಂತೆ ನಡೆದುಕೊಳ್ಳುತ್ತಾನೊ, ಅಂತಹವನು ಪರಿಪೂರ್ಣತೆಯನ್ನಾಗಲಿ, ಸಂತೋಷವನ್ನಾಗಲಿ ಅಥವಾ ಮೋಕ್ಷವನ್ನಾಗಲಿ ಹೊಂದುವುದಿಲ್ಲ.

ಆದರೆ, ಒಬ್ಬಭಕ್ತ ನಷ್ಟ ಅನುಭವಿಸುವುದಿಲ್ಲ. ಪುನರವತಾರ ಎನ್ನುವುದು ಒಂದು ಸತ್ಯಾಂಶವೇ ಆಗಿದ್ದಲ್ಲಿ ಮರುಜನ್ಮದಲ್ಲಿ ಅವನಿಗೊಂದು ಉತ್ತಮ ಸ್ಥಾನಮಾನ ಖಚಿತವಾಗಿ ದೊರಕುತ್ತದೆ. ಒಂದು ವೇಳೆ ಪುನರವತಾರ ಎನ್ನುವುದು ಇಲ್ಲವೇ ಇಲ್ಲ ಎಂದಾದರೂ, ಈ ಜನ್ಮದಲ್ಲಂತೂ ಅವನು ಒಬ್ಬ ದೈವಭಕ್ತನ ಸಂತೋಷ-ನೆಮ್ಮದಿಯ ಬದುಕನ್ನು ಬಾಳಿರುತ್ತಾನೆ.

ಇವೆಲ್ಲ ಅನಿಸಿಕೆಗಳನ್ನು ಪಕ್ಕಕ್ಕಿಟ್ಟರೂ, ಕೃಷ್ಣಪ್ರಜ್ಞೆ ಎನ್ನುವುದು ಒಂದು ಆಧ್ಯಾತ್ಮಿಕ ವಿಜ್ಞಾನ. ಇದರ ಮೂಲಕ ಯಾರೊಬ್ಬರಿಗಾದರೂ ತತ್ತ್ವಶಾಸ್ತ್ರದ ದರ್ಶನವನ್ನು ಮಾಡಿಕೊಳ್ಳಲು ಸಾಧ್ಯವಾಗುತ್ತದೆ ಎಂದಂತೂ ಭಕ್ತರಿಗೆ ಅರ್ಥವಾಗುತ್ತದೆ.

ಭಕ್ತಿಯೋಗವನ್ನು ಅಭ್ಯಸಿಸುವುದರಿಂದ ಭಕ್ತನೊಬ್ಬ ಆತ್ಮದ ಪ್ರಕೃತಿ ಮತ್ತು ಅದರ ಚಟುವಟಿಕೆಗಳ ಬಗ್ಗೆ ತನ್ನೆಲ್ಲ ಅನುಮಾನಗಳಿಂದ ಮುಕ್ತನಾಗುತ್ತಾನೆ ಮತ್ತು ಅವನ ಎಲ್ಲ ಸಾಧನೆ ಸಾಕ್ಷಾತ್ಕಾರಗಳನ್ನು ಅಧಿಕೃತ ವೈದಿಕ ಗ್ರಂಥಗಳು ಮತ್ತು ಸಾವಿರಾರು ಮಹಾನ್ ಋಷಿಗಳು ಮತ್ತು ಗುರುಗಳ ದೃಢವಚನಗಳು ರುಜುವಾತು ಮಾಡುತ್ತವೆ.

ಮಾನವ ಬದುಕು ಒಂದು ಕೂಡುಹಾದಿ, ಎತ್ತರಕ್ಕೇರುವ ಅಥವಾ ಪಾತಾಳಕ್ಕಿಳಿಯುವ ಎರಡು ದಾರಿಗಳು ಇಲ್ಲಿವೆ. ಲಕ್ಷ ಲಕ್ಷ ಕ್ಷುದ್ರ ಜೀವಿ ಜನ್ಮಗಳನ್ನು ತಾಳಿ, ಜನ್ಮ ಜನ್ಮಗಳ ವಿಷಚಕ್ರದಿಂದ ಒಂದೆ ಸಲಕ್ಕೆ ತಪ್ಪಿಸಿಕೊಂಡು ಆಧ್ಯಾತ್ಮಿಕ ಪ್ರಪಂಚದಲ್ಲಿ ನಮ್ಮ ಮೂಲ ಮಹದಾನಂದದ ಸ್ಥಾನಮಾನ ತಲಪುವಂತಹ, ಈಗಿನ ಮಾನವ ಜನ್ಮ ನೀಡುವ ವಿಶಿಷ್ಟ ಚಳವಳಿಗಳನ್ನು ನಾವು ಕಳೆದುಕೊಳ್ಳುವುದು ಒಂದು ಅತಿ ದೊಡ್ಡ ದುರಂತ.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi