ಇಂದ್ರಾದಿ ದೇವತೆಗಳಿಗೆ ವಿಶ್ವರೂಪನು ‘ನಾರಾಯಣ ಕವಚ’ ವನ್ನು ಬೋಧಿಸಿದನು. ಇದರಿಂದ ದೇವತೆಗಳು ಅಸುರರ ವಿರುದ್ಧ ನಿರಂತರ ಜಯವನ್ನು ಸಾಧಿಸಿದರು. (ಭಾಗವತ 6.8)

ನಾರಾಯಣ ಕವಚದಲ್ಲಿ ಪರಮಪ್ರಭುವಿನ ವಿಭಿನ್ನ ಸ್ವರೂಪಗಳು ಮತ್ತು ಅವತಾರಗಳು ಯಾವ ಯಾವ ಸಂದರ್ಭದಲ್ಲಿ ರಕ್ಷಿಸುವವು ಎಂಬುದರ ವರ್ಣನೆಯಿದೆ. ಅವುಗಳನ್ನು ಸಂಗ್ರಹಿಸಿ ಇಲ್ಲಿ ನೀಡಲಾಗಿದೆ;
ಶ್ರೀ ವರಾಹ – ದರೋಡೆಕೋರರಿಂದ ರಕ್ಷಣೆ
ಪರಶುರಾಮ – ಪರ್ವತ ಶಿಖರಗಳಲ್ಲಿ ರಕ್ಷಣೆ
ನರಸಿಂಹದೇವ – ಸರ್ವ ದಿಕ್ಕುಗಳಲ್ಲಿ ರಕ್ಷಣೆ
ಶ್ರೀರಾಮಚಂದ್ರ ಮತ್ತು ಲಕ್ಷ್ಮಣ – ಪರದೇಶಗಳಲ್ಲಿ ರಕ್ಷಣೆ
ಮಹಾಮತ್ಸ್ಯ- ಜಲಚರಗಳಿಂದ ರಕ್ಷಣೆ
ವಾಮನ – ಭೂಮಿಯ ಮೇಲೆ ರಕ್ಷಣೆ
ವಿಶ್ವರೂಪ – ಆಕಾಶದಲ್ಲಿ ರಕ್ಷಣೆ
ಶ್ರೀಮನ್ನಾರಾಯಣ – ಅಧರ್ಮದಿಂದ ರಕ್ಷಣೆ
ನರ – ಗರ್ವದಿಂದ ರಕ್ಷಣೆ
ದತ್ತಾತ್ರೇಯ – ಭಕ್ತಿಯೋಗ ಚ್ಯುತನಾಗದಂತೆ ರಕ್ಷಣೆ
ಕಪಿಲ – ಪ್ರಾಪಂಚಿಕ ವ್ಯಾಮೋಹದಿಂದ ರಕ್ಷಣೆ
ಸನತ್ಕುಮಾರ – ಕಾಮೇಚ್ಛೆಯಿಂದ ರಕ್ಷಣೆ
ಹಯಗ್ರೀವ – ದೇವನಿಂದನೆ ಮಾಡದಂತೆ ರಕ್ಷಣೆ
ನಾರದ – ದೇವಪೂಜೆಯಲ್ಲಿ ಅಪಚಾರವೆಸಗದಂತೆ ರಕ್ಷಣೆ
ಕೂರ್ಮ – ನರಕ ಪತಿತನಾಗದಂತೆ ರಕ್ಷಣೆ
ಧನ್ವಂತರಿ – ಅಪಥ್ಯ ಆಹಾರ ಭಕ್ಷಣೆಯಿಂದ ಮತ್ತು ರೋಗದಿಂದ ರಕ್ಷಣೆ
ಋಷಭದೇವ – ಶೀತೋಷ್ಣ ದ್ವಂದ್ವ ಭಯದಿಂದ ರಕ್ಷಣೆ
ಯಜ್ಞ – ಮಾನಹಾನಿ ಮತ್ತು ಅಪಾಯಗಳಿಂದ ರಕ್ಷಣೆ
ಶೇಷನ ರೂಪದಲ್ಲಿ ಬಲರಾಮ – ಈರ್ಷ್ಯಾ ಸರ್ಪಗಳಿಂದ ರಕ್ಷಣೆ
ದ್ವೈಪಾಯನ – ಅಜ್ಞಾನದಿಂದ ರಕ್ಷಣೆ
ಬುದ್ಧ – ನಾಸ್ತಿಕತೆಯ ಮೋಹದ ಹುಚ್ಚಿನಿಂದ ರಕ್ಷಣೆ
ಕಲ್ಕಿ – ಕಲಿಯುಗದ ಕಲ್ಮಷದಿಂದ ರಕ್ಷಣೆ

ದಿನದ ವಿವಿಧ ಯಾಮಗಳಲ್ಲಿ ಭಗವಂತನಿಂದ ರಕ್ಷಣೆ
ಕೇಶವನ ಗದೆ – ದಿನದ ಪ್ರಥಮ ಭಾಗದಲ್ಲಿ ರಕ್ಷಣೆ
ಕೊಳಲನ್ನೂದುತ್ತಿರುವ ಗೋವಿಂದ – ದಿನದ ಎರಡನೇ ಭಾಗದಲ್ಲಿ ರಕ್ಷಣೆ
ಸಮಸ್ತ ಶಕ್ತಿ ಸಂಪನ್ನನಾದ ನಾರಾಯಣ – ದಿನದ ಮೂರನೇ ಭಾಗದಲ್ಲಿ ರಕ್ಷಣೆ
ಚಕ್ರಧಾರಿ ವಿಷ್ಣು – ದಿನದ ನಾಲ್ಕನೇ ಭಾಗದಲ್ಲಿ ರಕ್ಷಣೆ
ಧನುರ್ಧಾರಿ ಮಧುಸೂದನ – ದಿನದ ಐದನೇ ಭಾಗದಲ್ಲಿ ರಕ್ಷಣೆ
ತ್ರಿಮೂರ್ತಿಗಳಾಗಿ ತೋರುವ ಮಾಧವ – ಸಾಯಂಕಾಲದಲ್ಲಿ ರಕ್ಷಣೆ
ಭಗವಾನ್ ಹೃಷೀಕೇಶ – ರಾತ್ರಿಯ ಪ್ರಾರಂಭದಲ್ಲಿ ರಕ್ಷಣೆ
ಭಗವಾನ್ ಪದ್ಮನಾಭ – ನಟ್ಟನಡು ರಾತ್ರಿಯಲ್ಲಿ ರಕ್ಷಣೆ
ಶ್ರೀವತ್ಸಧಾರಿ ಪರಮಪ್ರಭು – ನಡುರಾತ್ರಿಯ ಅನಂತರ ಅರುಣೋದಯಕ್ಕೆ ಮುನ್ನ ರಕ್ಷಣೆ
ಖಡ್ಗಧಾರಿ ಜನಾರ್ದನ – ರಾತ್ರಿಯ ಕೊನೆಯ ಭಾಗದಲ್ಲಿ ರಕ್ಷಣೆ
ದಾಮೋದರ – ಮುಂಜಾವಿನಲ್ಲಿ ರಕ್ಷಣೆ
ವಿಶ್ವೇಶ್ವರ – ಹಗಲು ರಾತ್ರಿಗಳ ಸಂಧಿಕಾಲದಲ್ಲಿ ರಕ್ಷಣೆ
ಭಗವಂತನ ಆಯುಧಗಳು ನೀಡುವ ರಕ್ಷಣೆ
ಸುದರ್ಶನ ಚಕ್ರ – ಶತ್ರುಗಳನ್ನು ಸುಟ್ಟು ಬೂದಿ ಮಾಡುವುದು
ಭಗವಂತನ ಗದೆ – ಕುಷ್ಮಾಂಡರು, ವೈನಾಯಕರು, ಯಕ್ಷ ರಾಕ್ಷಸ – ಭೂತಗಳೇ ಮೊದಲಾದ ಜೀವಿಗಳನ್ನು ಪುಡಿಪುಡಿ ಮಾಡುವುದು
ಪಾಂಚಜನ್ಯ- ರಾಕ್ಷಸರು, ಪ್ರಮಥಗಣಗಳು, ಪ್ರೇತಗಳು, ಮಾತೃಗಳು, ಪಿಶಾಚ ಮತ್ತು ಬ್ರಹ್ಮ ರಾಕ್ಷಸರ ಹೃದಯಗಳಲ್ಲಿ ಕಂಪನ ಮೂಡಿಸುವುದು.
ಭಗವಂತನ ಖಡ್ಗ – ಶತ್ರುಗಳನ್ನು ತುಂಡರಿಸುವುದು
ದೇವೋತ್ತಮ ಪರಮಪುರುಷನ ಪವಿತ್ರನಾಮಗಳು, ಅವನ ದಿವ್ಯ ರೂಪಗಳು, ಅವನ ವಾಹನಗಳು, ಅವನೊಡನೆ ಸದಾ ಭೂಷಣವಾಗಿರುವ ಆಯುಧಗಳು ನಮ್ಮ ಬುದ್ಧಿ, ಇಂದ್ರಿಯ, ಮನಸ್ಸು ಮತ್ತು ಪ್ರಾಣವಾಯುವನ್ನು ಎಲ್ಲ ಅಪಾಯಗಳಿಂದ ರಕ್ಷಿಸುತ್ತವೆ. ಸರ್ವಜ್ಞನಾದ ಪ್ರಭುವು ಎಲ್ಲೆಡೆಯೂ ಉಪಸ್ಥಿತನಿದ್ದು, ಸಕಲ ಆಪತ್ತುಗಳಿಂದ ನಮ್ಮ ರಕ್ಷಣೆ ಮಾಡಲಿ.






Leave a Reply