ಜಾತ ಗೋಸ್ವಾಮಿಗಳು
– ಆಂಗ್ಲಮೂಲ : ಸುಹೋತ್ರಸ್ವಾಮಿ, (ಮೂಲ ಲೇಖನ ಕೃಪೆ: BTG), ಕನ್ನಡಕ್ಕೆ: ಗಾಯತ್ರಿ
ವೈಷ್ಣವ ಪಂಥದವರೆಂದು ಹೇಳಿಕೊಳ್ಳುತ್ತ, ಹರೇಕೃಷ್ಣ ಮಂತ್ರ ಜಪಿಸುವಾಗ ಮದ್ಯಪಾನ ಮಾಡುವವರು, ಕೃಷ್ಣನೊಂದಿಗೆ ಇತರ ದೇವತೆಗಳನ್ನು ಇತರ ಪಂಥಗಳನ್ನು ಬೆರೆಸಿ ಮಾತನಾಡುವವರಿಗೇನೂ ಕಡಿಮೆಯಿಲ್ಲ. ಆದರೆ ಈ ಪಂಥದವರಾರೂ ವೈಷ್ಣವ ಸಂಪ್ರದಾಯಕ್ಕೆ ಸೇರುವುದಿಲ್ಲ.

ಇವರೆಲ್ಲರೂ ಬಹಳ ಹಿಂದೆಯೇ ಮುಖ್ಯ ವೈಷ್ಣವ ಪಂಥದಿಂದ ಕವಲೊಡೆದು ರೂಪಿತಗೊಂಡು ಬೆಳೆದು ಬಂದ ಅಪಸಂಪ್ರದಾಯಗಳು. ಇಂಥ ಹದಿಮೂರು ಅಪಸಂಪ್ರದಾಯ ವೈಷ್ಣವ ಪಂಥದ ಕವಲುಗಳು ಇಂದು ಅಸ್ತಿತ್ವದಲ್ಲಿವೆ.
ಆದರೆ, ಈ ಕವಲುಗಳನ್ನು ಗಮನಿಸುವ ಮುನ್ನ “ಕೃಷ್ಣಪ್ರಜ್ಞೆಯ ಸಂಸ್ಕೃತಿ” ಎಂದರೆ ಏನು ಎನ್ನುವುದನ್ನು ಸರಿಯಾಗಿ ಅರ್ಥಮಾಡಿಕೊಳ್ಳಬೇಕು. ಅನುಕರಣೀಯವೋ ಅಲ್ಲವೋ, ಆಧ್ಯಾತ್ಮಿಕ ಜೀವನಕ್ಕೊಂದು ನಿಖರವಾದ ಮಾನದಂಡ ಇದ್ದೇ ಇರುತ್ತದೆ. ಇದನ್ನು ‘ಸಂಪ್ರದಾಯ’ ಎನ್ನುತ್ತಾರೆ.
‘ಸಂಪ್ರದಾಯ’ ಎ೦ದರೆ, “ಗುರುಪರಂಪರೆಯ ಮೂಲಕ ಸ್ವೀಕರಿಸಲ್ಪಡುವ ಮಹೋನ್ನತ ನಿರ್ದೇಶನಗಳು” (ಗುರು ಪರಂಪರಾಗತ ಸದುಪದೇಶಸ್ಯ – ಅಮರಕೋಶ) ಭಗವದ್ಗೀತೆಯ 14ನೇ ಅಧ್ಯಾಯದಲ್ಲಿ ಶ್ರೀಕೃಷ್ಣನು ತನ್ನನ್ನು ತಾನು ಮಹೋನ್ನತ ಆಧ್ಯಾತ್ಮಿಕ ತಿಳುವಳಿಕೆಯ ಮೂಲ ಆಕರ ಎಂದು ಘೋಷಿಸಿಕೊಂಡಿದ್ದಾನೆ ಮತ್ತು, ತನ್ನ ಉಪದೇಶಗಳನ್ನು ಗುರು-ಶಿಷ್ಯಪರಂಪರೆಯ ಮೂಲಕವೇ ಸ್ವೀಕರಿಸಬೇಕೆಂದು ನಿರ್ದೇಶಿಸಿದ್ದಾನೆ.
ಮಹೋನ್ನತ ಆಧ್ಯಾತ್ಮಿಕ ನಿರ್ದೇಶನಗಳು, ಮಾನವ ಜೀವಿಗಳಲ್ಲಿ ಆದರ್ಶ ಗುಣಗಳನ್ನು ಬೆಳೆಸುವುದಕ್ಕಾಗಿಯೇ ಇವೆ. ಸತ್ಯಸಂಧತೆ, ಶುಚಿತ್ವ, ತಪೋನಿಷ್ಠೆ, ದಯಾರ್ದ್ರತೆ, ಅನುಕಂಪ ಮತ್ತು ಭೌತಿಕ ಬಯಕೆಗಳಿಂದ ಮುಕ್ತಿ, ಇವು ‘ದೈವೀ ಸಂಪತ್ತು” ಗಳೆಂದು ಕರೆಸಿಕೊಳ್ಳುತ್ತವೆ. ಏಕೆಂದರೆ, ಇವುಗಳ ಮೂಲ ಅಲೌಕಿಕವಾದ ದೇವೋತ್ತಮ ಪರಮ ಪುರುಷ ಶ್ರೀಕೃಷ್ಣನಲ್ಲಿದೆ.
ಆದರೆ, ಪತಿತಾತ್ಮರು ಶ್ರೀಕೃಷ್ಣನೊಡನೆ ಸಂಬಂಧ ಬೆಸೆಯಲು ಎಲ್ಲ ನೇರ ಮಾರ್ಗಗಳೂ ಮುಚ್ಚಲ್ಪಟ್ಟಿರುತ್ತವೆ. ಶಾಸ್ತ್ರ ಗ್ರಂಥಗಳಲ್ಲಿ ಹೇಳಿರುವಂತೆ ‘ಸರ್ವಮಹಾಗುಣಗಣ ವೈಷ್ಣವ ಶರೀರೇ’ – ಜಗತ್ತಿನ ಎಲ್ಲ ಸದ್ಗುಣಗಳೂ ಕೃಷ್ಣನ ಶುದ್ಧ ಭಕ್ತರಾದ ವೈಷ್ಣವರ ಮೂಲಕ ಅಭಿವ್ಯಕ್ತಗೊಂಡಿವೆ.
ವೈಷ್ಣವ ಆಧ್ಯಾತ್ಮಿಕ ಆಚಾರ್ಯರು ಈ ಗುಣಗಳನ್ನು ಸತ್ಸಂಗ ಮತ್ತು ನಿರ್ದೇಶನಗಳ ಮೂಲಕ ತಮ್ಮ ಶಿಷ್ಯರಲ್ಲಿ ಬಿತ್ತುತ್ತಾರೆ. ಹೀಗೆ ವೈಷ್ಣವ ಗುರುವೊಬ್ಬನ ಶಿಷ್ಯನು ದೈವೀ ಸಂಪತ್ತಿನ ಒಡೆತನ ಗಳಿಸುತ್ತಾನೆ ಮತ್ತು ಅದನ್ನು ತನ್ನ ಶಿಷ್ಯನಿಗೂ ಕರುಣಿಸಲು ಅರ್ಹನಾಗುತ್ತಾನೆ. ಇದನ್ನೇ ಗುರು – ಶಿಷ್ಯ ಪರಂಪರೆ ಎಂದು ಕರೆಯುವುದು.
ಇಂದಿನ ಕಲಿಯುಗದಲ್ಲಿ ಸಂತಶ್ರೇಷ್ಠರಾದ ವೈಷ್ಣವರ ಸಾಹಚರ್ಯ ಒದಗಲು ಸಾಧ್ಯವಿರುವುದು ನಾಲ್ಕು ಮಹೋನ್ನತ ಸಂಪ್ರದಾಯಗಳಲ್ಲಿ ಮಾತ್ರ. ಅವುಗಳಲ್ಲೊಂದಾದ ಬ್ರಹ್ಮಸಂಪ್ರದಾಯವನ್ನು ದಕ್ಷಿಣ ಭಾರತದಲ್ಲಿ ಪ್ರಚುರ ಪಡಿಸಿದವರು – ಶ್ರೀ ಮಧ್ವಾಚಾರ್ಯರು, ಶ್ರೀ ಚೈತನ್ಯ ಮಹಾಪ್ರಭುಗಳು ತಮ್ಮ ಗುರುಗಳಾದ ಶ್ರೀ ಈಶ್ವರ ಪುರಿಗಳಿಂದ “ಹರೇಕೃಷ್ಣ” ಮಹಾಮಂತ್ರವನ್ನು ಸ್ವೀಕರಿಸಿದಾಗ, ಈ ಸಂಪ್ರದಾಯವನ್ನು ಒಪ್ಪಿಕೊಂಡಿದ್ದರು.
ಮುಂದೆ, ಬಂಗಾಳ (ಗೌಡದೇಶ) ದಲ್ಲಿ ಭಗವಾನ್ ಚೈತನ್ಯರು ಸಾಮೂಹಿಕವಾಗಿ ಹರೇಕೃಷ್ಣ ಮಂತ್ರವನ್ನು ಜಪಿಸುವ ‘ಸಂಕೀರ್ತನ’ ಚಳವಳಿಯನ್ನು ಹುಟ್ಟು ಹಾಕಿದರು. ಭಗವಾನ್ ಶ್ರೀ ಚೈತನ್ಯರ ಸಂಕೀರ್ತನ ಚಳವಳಿಯನ್ನು ವಿಶ್ವಾದ್ಯಂತ ವಿಸ್ತರಿಸುತ್ತಿರುವ ಕೃಷ್ಣ ಪ್ರಜ್ಞಾಂದೋಲನ ಚಳವಳಿಯ (ಇಸ್ಕಾನ್ ) ಬ್ರಹ್ಮ- ಮಾಧ್ವ-ಗೌಡೀಯ ಸಂಪ್ರದಾಯಕ್ಕೆ ಸೇರಿದ್ದು ಎಂದು ಗುರುತಿಸಲ್ಪಡುತ್ತದೆ.
ತಮ್ಮನ್ನು ತಾವು ಚೈತನ್ಯ ಮಹಾಪ್ರಭುಗಳ ಚಳವಳಿಯ ಪ್ರತಿಪಾದಕರೆಂದು ಹೇಳಿಕೊಳ್ಳುವ, ಆದರೆ ಬ್ರಹ್ಮ-ಮಾಧ್ವ- ಗೌಡೀಯ ಸಂಪ್ರದಾಯದೊಡನೆ ಯಾವ ಸಂಬಂಧವೂ ಇರದ (3 ಅಪಸಂಪ್ರದಾಯಗಳನ್ನು ಶ್ರೀಲ ಭಕ್ತಿ ವಿನೋದ ಠಾಕುರರು ಗುರುತಿಸಿದ್ದಾರೆ.) ಅವುಗಳು ಹೀಗಿವೆ:
ಆವುಲ, ಬಾವುಲ, ಕರ್ತಾಭಾಜಾ, ನೇಡಾ, ಧರವೇಶ, ಸಾನೀ, ಸಹಜೀಯಾ, ಸಖೀಭೇಕೀ, ಸ್ಮಾರ್ತ, ಜಾತ-ಗೋಸಾಯಿ, ಅತಿವಾದಿ, ಚೂಡಧಾರಿ, ಮತ್ತು ಗೌರಾಂಗನಾಗರಿ. ಈ ಅಪಸಂಪ್ರದಾಯಗಳು (ಅಪ= ಕವಲೊಡೆದ) ವೈಷ್ಣವ ಗುಣಗಳನ್ನು ಹೊಂದಿರುವುದಿಲ್ಲವಾದ್ದರಿಂದ ಅವರ ಕಾರ್ಯಚರಣೆಯು ವಂಚನೆಯಿಂದ ಕೂಡಿದ್ದು, ಖಂಡನಾರ್ಹವೆನಿಸುತ್ತದೆ.
ತಮ್ಮ ‘ವೈಷ್ಣವ ಕೇ?’ ಕೃತಿಯಲ್ಲಿ ಶ್ರೀಲ ಭಕ್ತಿಸಿದ್ಧಾಂತ ಸರಸ್ವತಿ ಠಾಕುರರು ಹೇಳಿರುವಂತೆ – ಅಪ ಸಂಪ್ರದಾಯಗಳು ಕೇವಲ ಅಮಂಗಳಕರವಾದ ಗುಣಗಳನ್ನು ತೋರ್ಪಡಿಸುತ್ತವೆ. ಅವುಗಳಲ್ಲೊಂದು, ಅನಿತ್ಯ ವೈಭವ- ಭೌತಿಕ ಯಶಸ್ಸಿಗಾಗಿ ಹಾತೊರೆಯುವಿಕೆ, ಮತ್ತೊಂದು, ಕಾಮಿನೀರ ಕಾಮ’ – ಅಲೌಕಿಕವಲ್ಲದ ಅನೈತಿಕ ಕಾಮುಕ ಸಂಬಂಧಗಳು. ಕೊನೆಯದು, ‘ಮಾಯಾವಾದ’ – ವೈಷ್ಣವ ಸಂಪ್ರದಾಯದಲ್ಲಿ ಹೇಳಲಾಗಿರುವ ಭಗವಂತನ ವ್ಯಕ್ತರೂಪವನ್ನು ಅಲ್ಲಗಳೆಯುವ ತಾತ್ತ್ವಿಕ ದೃಷ್ಟಿಕೋನ.
ವೈಷ್ಣವ ಸಂಪ್ರದಾಯದಿಂದ ಕವಲೊಡೆದ ಅಪಸಂಪ್ರದಾಯಗಳ ಬಗ್ಗೆ ಈಗ ತಿಳಿಯೋಣ.

ಜಾತ ಗೋಸ್ವಾಮಿಗಳು
‘ಜಾತ’ ಎಂದರೆ – ಹುಟ್ಟಿನಿಂದ, ಮತ್ತು ‘ಗೋಸ್ವಾಮಿ’ ಎಂದರೆ – ತನ್ನ ಇಂದ್ರಿಯಗಳನ್ನು ನಿಯಂತ್ರಿಸಿಕೊಳ್ಳಬಲ್ಲವ. ಆದರೆ, ಇಲ್ಲಿ ʼಜಾತ ಗೋಸ್ವಾಮಿ’ ಎನ್ನುವ ಪದವನ್ನು ಟೀಕೆಗಾಗಿ ಬಳಸಲಾಗಿದೆ. ವಂಶಪಾರಂಪರ್ಯವಾಗಿ ಗುರುಪಟ್ಟ ಹೊಂದುವವರನ್ನು ಹೀಗೆ ಕರೆಯಲಾಗುತ್ತದೆ.
ಇಂಥವರಿಗೆ ಯಾವ ಆಧ್ಯಾತ್ಮಿಕ ಅರ್ಹತೆಗಳು ಇಲ್ಲದಿದ್ದರೂ ತಮ್ಮನ್ನು ತಾವು ‘ಗುರು’ ಎಂದು ಕರೆದುಕೊಳ್ಳುತ್ತಾರೆ. ಶ್ರೀ ಚೈತನ್ಯ ಮಹಾಪ್ರಭುಗಳ ಅನುಯಾಯಿಗಳೆಂದು ಹೇಳಿಕೊಳ್ಳುವುದಕ್ಕೆ ಸಾಂಸಾರಿಕ ಸಂಬಂಧಗಳು ಸಾಕಾಗುವುದಿಲ್ಲ. ಭಗವಂತನ ಶುದ್ಧ ಭಕ್ತರಿಗೆ ಮಾತ್ರ ಅರ್ಹತೆ ಇರುತ್ತದೆ.
ಗೌಡೀಯ ವೈಷ್ಣವ ಸಂಪ್ರದಾಯದ ಭಕ್ತರು ವೃಂದಾವನದ ಷಡ್ ಗೋಸ್ವಾಮಿಗಳನ್ನು ಅನುಸರಿಸುವಂಥವರಾಗಿರುತ್ತಾರೆ. ಈ ಆರು ಭಕ್ತರು ತ್ಯಾಗ ಜೀವನದಲ್ಲಿ ನಿರತರಾಗಿದ್ದು ಶ್ರೀ ಚೈತನ್ಯ ಮಹಾಪ್ರಭುಗಳ ಪರಮೋಚ್ಚ ಶಿಷ್ಯರಾಗಿದ್ದವರು. ಈ ಆರು ಗೋಸ್ವಾಮಿಗಳ ಬಗ್ಗೆ ಶ್ರೀನಿವಾಸ ಆಚಾರ್ಯರು ಹೀಗೆ ಬರೆದಿದ್ದಾರೆ:
ಷಡ್ ಗೋಸ್ವಾಮಿಗಳಾದ – ಶ್ರೀ ರೂಪ, ಶ್ರೀ ಸನಾತನ, ಶ್ರೀರಘುನಾಥಭಟ್ಟ, ಶ್ರೀರಘುನಾಥದಾಸ, ಶ್ರೀ ಜೀವ, ಮತ್ತು ಶ್ರೀ ಗೋಪಾಲಭಟ್ಟರು ಪೂಜನೀಯರು. ಏಕೆಂದರೆ ಅವರು ತಮ್ಮ ಸಿರಿವಂತಿಕೆಯ ಸಾಂಸಾರಿಕ ಜೀವನವನ್ನು ತ್ಯಜಿಸಿ, ಪತಿತಾತ್ಮಗಳಿಗೆ ಬೋಧನೆ ನೀಡಿ ಮುಕ್ತಿ ಕರುಣಿಸುವ ಸಲುವಾಗಿ ಪರಿವ್ರಾಜಕ ಜೀವನ ನಡೆಸಿದರು. ಅವರು ನಿತ್ಯ ಶ್ರೀಕೃಷ್ಣನೆಡೆಗಿನ ದಿವ್ಯ ಪ್ರೇಮದ ಅಲೆಯಲ್ಲಿ ಮುಳುಗೇಳುತ್ತಿದ್ದರು. ಹೀಗೆ ಷಡ್ ಗೋಸ್ವಾಮಿಗಳು ಪರಿಶುದ್ಧ ಭಕ್ತಿಸೇವೆಯ ಆದರ್ಶ ಉದಾಹರಣೆಯನ್ನು ರೂಪಿಸಿಕೊಟ್ಟರು.
ಈ ಆರು ಗೋಸ್ವಾಮಿಗಳ ಜಾಡನ್ನು ಅನುಸರಿಸ ಬಯಸುವವರು ಬಹು ಮುಖ್ಯವಾಗಿ, ಶ್ರೀಲ ರೂಪಗೋಸ್ವಾಮಿಯವರು ಭಕ್ತಿ ರಸಾಮೃತ ಸಿಂಧುವಿನಲ್ಲಿ ವಿವರಿಸಿರುವ ನೀತಿ-ನಿಯಮಾವಳಿಗಳನ್ನು ಅನುಸರಿಸಲೇಬೇಕು. ಕೆಲವೊಮ್ಮೆ, ಕೆಲವು ಜನರು ಈ ಭಕ್ತಿಸೇವೆಯ ನಿಯಮಗಳನ್ನು ಉಪೇಕ್ಷಿಸಿ, ತಮ್ಮನ್ನು ತಾವು ವಂಶಪಾರಂಪರ್ಯದ ಆಧಾರದ ಮೇಲೆ ‘ಗೋಸ್ವಾಮಿ’ ಗಳೆಂಬ ಹೆಸರನ್ನೇನೋ ಇಟ್ಟುಕೊಂಡಿರುತ್ತಾರೆ, ಆದರೆ ಗೋಸ್ವಾಮಿಗೆ ಇರಬೇಕಾದ ಪ್ರಜ್ಞೆಯನ್ನು ಹೊಂದಿರುವುದಿಲ್ಲ.
ಕ್ರಮಬದ್ಧ ಭಕ್ತಿಸೇವೆಯ ತರಬೇತಿಯಿಲ್ಲದ ಈ ಜಾತಗೋಸ್ವಾಮಿಗಳು ನಿಯಮಾವಳಿಗಳನ್ನು ಗಾಳಿಗೆ ತೂರಿ, ಭಕ್ತಿಸೇವೆಯನ್ನು ಕಡೆಗಣಿಸಿ ದೇವಾಲಯವನ್ನು ಸ್ವಂತದ ಸಾಂಸಾರಿಕ ಸವಲತ್ತುಗಳಿಗಾಗಿ ಬಳಸಿಕೊಳ್ಳುತ್ತಾರೆ.
ಶ್ರೀಲ ಭಕ್ತಿಸಿದ್ಧಾಂತ ಸರಸ್ವತೀಯವರು, ಇಂತಹ ಅರೆಬೆಂದ ಜನರನ್ನು ಕುರಿತು, ”ಇವರು ಭಗವಂತನ ಪೂಜಾರ್ಹ ರೂಪವನ್ನು ಚಿಪ್ಪು ಒಡೆಯುವ ಕಲ್ಲನ್ನಾಗಿ ಬಳಸುವಂಥವರು” ಎಂದು ಹೇಳುತ್ತಿದ್ದರು. (ಅಂದರೆ ಅದನ್ನು ಇಂದ್ರಿಯ ಸೌಕರ್ಯಕ್ಕೆ ಬಳಸುವಂಥವರು ಎಂದರ್ಥ)
ಇನ್ನೊಂದೆಡೆ ಭಾರತದಲ್ಲಿ, ಜ್ಞಾನಿಗಳಾದ ಮತ್ತು ಪರಂಪರೆಯನ್ನು ಅರಿತು ಸೂಕ್ತ ತರಬೇತಿ ಪಡೆದು ಪೂಜೆ ನಡೆಸುವಂಥ ಕುಟುಂಬಗಳು ಇಂದಿಗೂ ಸಾಕಷ್ಟಿವೆ. ಅವರು ನಿಯಮಿತ ರಿವಾಜುಗಳನ್ನು ಕಟ್ಟುನಿಟ್ಟಾಗಿ ಅನುಸರಿಸುವಂಥವರು. ಅವರು ಭಗವಂತನಿಗೆ ಅತ್ಯುತ್ತಮ ಸೇವೆಯನ್ನು ಸಲ್ಲಿಸುತ್ತಾರೆ, ಮತ್ತು ಕೃಷ್ಣಪ್ರಜ್ಞೆಯ ಭಕ್ತಿಸೇವೆಯನ್ನು ತಲೆಮಾರಿನಿಂದ ತಲೆಮಾರಿಗೆ ಪೋಷಿಸುತ್ತ ಹೋಗುತ್ತಾರೆ.
ಗೋಸ್ವಾಮಿಗಳ ವಂಶದಲ್ಲಿ ಜನಿಸುವವರು, ಭಗವಂತನಿಗೆ ಸೇವೆ ಸಲ್ಲಿಸುವ ಅದೃಷ್ಟದ ಅವಕಾಶವನ್ನು ಹೊಂದಿರುತ್ತಾರೆ. ಅವರಿಗೆ ಸೂಕ್ತ ತರಬೇತಿ ದೊರೆತಲ್ಲಿ ಅವರು ಕೂಡ ಶುದ್ಧ ಭಕ್ತರಾಗಬಲ್ಲರು. ಅನಂತರ ಅವರು ಕೇವಲ ಹೆಸರಿನಿಂದ ಮಾತ್ರವಲ್ಲದೆ, ನಿಜವಾಗಿಯೂ ಗೋಸ್ವಾಮಿಗಳೆಂದು ಕರೆಸಿಕೊಳ್ಳಬಲ್ಲರು.
ಇಲ್ಲಿ ಮುಖ್ಯವಾಗಿ ಪರಿಗಣಿಸಲ್ಪಡುವುದು ಶುದ್ಧ ಭಕ್ತಿಸೇವೆ. ಉನ್ನತ ಕುಟುಂಬದಲ್ಲಿ ಜನಿಸಿರಲಿ, ಅಥವಾ ಕೆಳವರ್ಗದಲ್ಲಿ ಜನಿಸಿರಲಿ, ಜಗತ್ತಿನ ಯಾವುದೇ ಭಾಗದ ಯಾವ ವ್ಯಕ್ತಿಯೇ ಆದರೂ ಭಗವಂತನ ಶುದ್ಧ ಭಕ್ತನಾಗಬಲ್ಲ. ಶ್ರೀ ಚೈತನ್ಯ ಮಹಾಪ್ರಭುಗಳು ಹೇಳಿರುವಂತೆ:
ಕಿಬಾ ವಿಪ್ರ, ಕಿಬಾ ನ್ಯಾಸೀ, ಶೂದ್ರ ತೇನೇ ನಯ
ಯೇ ಇ ಕೃಷ್ಣ ತತ್ತ್ವ ದೇತ್ತಾ, ಸೇ ಇ ‘ಗುರು’ ಹಯ

ಕೃಷ್ಣ ವಿಜ್ಞಾನವನ್ನು ಬಲ್ಲವನು ಮತ್ತದರ ನಿಯಮಗಳನ್ನು ಅನುಸರಿಸುವವನೇ ಪರಿಶುದ್ಧ ಭಕ್ತ. ಇಂತಹ ವ್ಯಕ್ತಿಯನ್ನು ಉತ್ತಮ ಆಧ್ಯಾತ್ಮಿಕ ಗುರುವೆಂದು ಪರಿಗಣಿಸಬಹುದು. ಆದ್ದರಿಂದ ಪರಿಶುದ್ಧ ಭಕ್ತಿಸೇವೆಯನ್ನು ಆಚರಿಸುವುದು ಅಥವಾ ಬೋಧಿಸುವುದು ನಿರ್ದಿಷ್ಟ ಜಾತಿ ಅಥವಾ ಪಂಗಡದ ವ್ಯಕ್ತಿಗಳಿಗೆ ಮಾತ್ರ ಸೀಮಿತ ಎನ್ನುವುದನ್ನು ಒಪ್ಪಲಾಗದು. ಇದು, ಭಗವಾನ್ ಚೈತನ್ಯರ ಬೋಧನೆಗಳಿಗೆ ವಿರುದ್ಧವಾಗಿದೆ.
ಇಂತಹಾ ಜಾತ ಗೋಸ್ವಾಮಿಗಳ ಪಂಗಡಕ್ಕೊಂದು ಉದಾಹರಣೆ. ನಿತ್ಯಾನಂದ ವಂಶವೆಂದು ಕರೆದುಕೊಳ್ಳುವ ಅಪಸಂಪ್ರದಾಯ. ಅವರು ತಮ್ಮನ್ನು ತಾವು ಭಗವಾನ್ ಶ್ರೀ ಚೈತನ್ಯರ ಅಂತರಂಗದ ಸಹಚರರಾದ ಭಗವಾನ್ ನಿತ್ಯಾನಂದರ ಮೂರನೇ ಪೀಳಿಗೆಯ ವಂಶಜರೆಂದು ಹೇಳಿಕೊಳ್ಳುತ್ತಾರೆ. ಈ ಕುಟುಂಬದ ಸದಸ್ಯರು ತಮ್ಮ ವಂಶದ ರಕ್ತದಲ್ಲಿ ಶ್ರೀ ನಿತ್ಯಾನಂದರ ದೈವೀ ಗುಣಗಳು ಹರಿದು ಬಂದಿದೆ ಎಂದು ಹೇಳಿಕೊಂಡು ತಿರುಗುತ್ತಾರೆ.
ಇಲ್ಲಿ ಎರಡು ಆಕ್ಷೇಪಗಳಿವೆ. ಮೊದಲನೆಯದಾಗಿ, ನಿತ್ಯಾನಂದ ವಂಶದ ಪೂರ್ವಜರು ವಾಸ್ತವವಾಗಿ ಅವರ ಪುತ್ರರಾಗಿರದೆ, ಅನುಯಾಯಿಗಳಾಗಿದ್ದರು. ನಿತ್ಯಾನಂದ ಪ್ರಭುಗಳಿಗೆ ಇದ್ದುದು ವೀರಭದ್ರ ಗೋಸ್ವಾಮಿ ಎಂಬ ಒಬ್ಬನೇ ಮಗ ಮತ್ತು ಅವರಿಗೆ ಪುತ್ರರೇ ಇರಲಿಲ್ಲ. ಎರಡನೆಯದಾಗಿ, ಒಬ್ಬವ್ಯಕ್ತಿಯು ನಿರ್ದಿಷ್ಟ ಕುಟುಂಬದಲ್ಲಿ ಜನಿಸುವುದರಿಂದ ವೈಷ್ಣವನಾಗಲಾರ.
ಅವನು ತನ್ನ ಗುಣ ನಡತೆಗಳಿಂದ ವೈಷ್ಣವನಾಗುತ್ತಾನೆ. ಈ ಶತಮಾನದ ಆರಂಭದವರೆಗೂ ಈ ನಿತ್ಯಾನಂದ ವಂಶದವರು ಸಾಮಾನ್ಯ ಜನರನ್ನು ತಪ್ಪು ಬೋಧನೆಗಳಿಂದ ತಮ್ಮ ಅಡಿಯಾಳಾಗಿರಿಸಿಕೊಂಡಿದ್ದರು.
ಆದರೆ 1800ರ ಆರಂಭ ಕಾಲದಲ್ಲಿ ಶ್ರೀಲ ಭಕ್ತಿವಿನೋದ ಠಾಕುರರು ಈ ನಿತ್ಯಾನಂದ ವಂಶಸ್ಥರಿಗೆ ತಮ್ಮ ಜನಪ್ರಿಯ ಬಂಗಾಳಿ ಕೃತಿಗಳಾದ ‘ಜೈವಧರ್ಮ, ‘ಹರಿನಾಮ ಚಿಂತಾಮಣಿ’ ಮೊದಲಾದವುಗಳ ಮೂಲಕ ಸವಾಲೆಸೆದರು. ಅವರು, ಆಧ್ಯಾತ್ಮಿಕ ಗುರುವನ್ನು ಕೇವಲ ಜಾತಿಯ ಆಧಾರದ ಮೇಲೆ ಒಪ್ಪಿಕೊಳ್ಳುವುದು ಸರಿಯಲ್ಲ ಎಂದು ಪ್ರತಿಪಾದಿಸಿದರು.
ದೀಕ್ಷೆ ಪಡೆಯುವ ಮುನ್ನ ದಿಕ್ಷಾರ್ಥಿಯು, ಗುರುವಾಗುವವನು ಶಾಸ್ತ್ರಗ್ರಂಥಗಳನ್ನು ಬಲ್ಲವನೇ ಮತ್ತು ತನ್ನ ಶಿಷ್ಯರನ್ನು ಮೌಢ್ಯದಿಂದ ಮೇಲೆತ್ತಬಲ್ಲನೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಗುರುವಾದವನು ಅಕಳಂಕ ಚರಿತನಾಗಿರಬೇಕು. ಆತನೇನಾದರೂ ಹಾಗೊಮ್ಮೆ ಪಾಪಕರ ಚಟುವಟಿಕೆಗಳಲ್ಲಿ ತೊಡಗಿಕೊಂಡನಾದರೆ, ಆ ಮೊದಲೇ ಅವನಿಂದ ದೀಕ್ಷೆ ಪಡೆದವರೂ ಗುರುವನ್ನು ತ್ಯಜಿಸಬೇಕು.
ಶ್ರೀಲ ಭಕ್ತಿವಿನೋದ ಠಾಕುರರ ಬರಹಗಳು ಬಂಗಾಳದಲ್ಲಿ ಸುಧಾರಣೆಯ ಭಾರೀ ಅಲೆಯನ್ನೇ ಎಬ್ಬಿಸಿದವು ಮತ್ತು ಜಾತ ಗೋಸ್ವಾಮಿಗಳನ್ನು ಅಪರಾಧಿಗಳ ಸ್ಥಾನಕ್ಕೆ ನೂಕಿದವು. ಆದರೆ ಈ ವಿರೋಧದ ಬಹಿರಂಗ ಸಮರಕ್ಕೆ ಚಾಲನೆ ದೊರಕಿದ್ದು, ಅವರ ಪುತ್ರ ಶ್ರೀಲ ಭಕ್ತಿಸಿದ್ಧಾಂತ ಸರಸ್ವತೀ ಠಾಕುರರು ಗೌಡೀಯ ಕಾರ್ಯಚರಣೆಯನ್ನು ಕೈಗೆತ್ತಿಕೊಂಡಾಗ ತಮ್ಮ ಮುಂದೆ, ಭಕ್ತಿಸೇವೆಯು ಕೇವಲ ತಮ್ಮ ಜಾತಿಯ ಸೊತ್ತು ಎಂಬ ವಾದ ಮಂಡಿಸಿದವರನ್ನು ಸಾರ್ವಜನಿಕವಾಗಿ ಖಂಡಿಸಿ, ಸೋಲಿಸಿದರು. ಇಂತಹ ಚಿಂತನೆಗಳನ್ನು ಅವರು ‘ಚರ್ಮರೋಗ’ ವೆಂದು ಕರೆದರು.
ಭೌತಿಕ ಜೀವನದ ಮೂಲ ತಪ್ಪು ತಿಳುವಳಿಕೆಯು, ‘ಈ ದೇಹವೇ ನಾನು’ ಎಂದು ತಿಳಿದುಕೊಳ್ಳುವುದಾಗಿದೆ. ಭ್ರಮೆಗೆ ಒಳಗಾದವನು, ತನ್ನನ್ನು ತಾನು ಭಾರತೀಯನೆಂದೋ, ಅಮೆರಿಕನ್ನನೆಂದೋ, ಆಂಗ್ಲನೆಂದೋ, ತರುಣ ಅಥವಾ ವೃದ್ಧ ಎಂದೋ ಕರಿಯನೆ೦ದೋ- ಬಿಳಿಯನೆ೦ದೋ ತಿಳಿದುಕೊಳ್ಳುತ್ತಾನೆ.
ಆದರೆ ಇವೆಲ್ಲವೂ ದೈಹಿಕ ಉಪಾಧಿಗಳಾಗಿದ್ದು ಕೇವಲ ಚರ್ಮದ ಹಣೆಪಟ್ಟಿಗಳಾಗಿವೆ. ಹಾಗೆಯೇ ಕುಟುಂಬ ಮತ್ತು ಜಾತಿಯ ಉಪಾಧಿಗಳೂ ಕೂಡ. ಉನ್ನತ ಕುಟುಂಬದಲ್ಲಿ ಜನಿಸಿದವರಿಗೆ ಕೃಷ್ಣಪ್ರಜ್ಞೆಯನ್ನು ಹೊಂದುವ ಅದೃಷ್ಟ ದೊರೆಯಬಹುದು. ಆದರೆ ಸ್ವತಃ ಜನನವೇ ನಿರೀಕ್ಷಿತವಾದುದಲ್ಲ.
ಕೀಳು ಕುಲದಲ್ಲಿ ಜನಿಸಿದವನು ಬಹಿಷ್ಕೃತನೇನೂ ಆಗುವುದಿಲ್ಲ. ಭಗವಂತನಿಗೆ ಪರಿಶುದ್ಧ ಭಕ್ತಿಸೇವೆ ಸಲ್ಲಿಸುವ ಯಾರೇ ಆಗಿರಲಿ, ಜಾತಿ ಅಥವಾ ಹುಟ್ಟಿನಿಂದ ಹೊರತಾಗಿ, ಭಗವಾನ್ ಶ್ರೀಕೃಷ್ಣನ ಅಲೌಕಿಕ ಕುಟುಂಬದ ಸದಸ್ಯನಾಗುತ್ತಾನೆ. ಇದುವೇ ಶ್ರೀ ಚೈತನ್ಯ ಮಹಾಪ್ರಭುಗಳ ಬೋಧನೆಯಾಗಿದೆ.
ಆಚಾರ್ಯ ಠಾಕುರರು ತಮ್ಮ ಪೂಜ್ಯ ಕೈಂಕರ್ಯಗಳಲ್ಲಿ ನಿರತರಾಗಿದ್ದು, ಶಿಷ್ಟರು ತಮ್ಮ ಭೇಟಿಗೆ ಹೊರಗಿನ ಅತಿಥಿಗಳು ಬಂದಿರುವರೆಂದು ತಿಳಿಸಿದಾಗ ಎದ್ದು ಬಂದು ಅವರನ್ನು ಎದುರುಗೊಂಡರು. ಅವರ ಅಲೌಕಿಕ ವ್ಯಕ್ತಿತ್ವವನ್ನು ದರ್ಶಿಸುತ್ತಲೇ ಅಪರಾಧಿಗಳಿಬ್ಬರೂ ಆಚಾರ್ಯರ ಚರಣಕಮಲಗಳಿಗೆ ಬಿದ್ದು ತಮ್ಮ ಪ್ರಣಾಮ ಅರ್ಪಿಸಿ ಪರಿಶುದ್ಧರಾದರು. ಅಂತಿಮವಾಗಿ ಠಾಕುರರು ಅವರಿಗೆ ರಾಧಾಕೃಷ್ಣ ಮಂತ್ರ ಉಪದೇಶಿಸಿದರು.
ತಮ್ಮ ಮುಖಂಡರು ವೈಷ್ಣವರಾದುದನ್ನು ಕಂಡ ಕೆಲವು ಅಲ್ಪರಾದ ಸ್ಮಾರ್ತರು ಬಾಹ್ಯವಾಗಿ ತಾವೂ ವೈಷ್ಣವ ವಿಧಿ ವಿಧಾನಗಳನ್ನು ಅನುಸರಿಸುವುದು ಒಳಿತೆಂದು ಚಿಂತಿಸಿ, ತೋರಿಕೆಗಾಗಿ ಅದನ್ನು ಅಳವಡಿಸಿಕೊಂಡರು. ಹೀಗೆ ಜಾತಬ್ರಾಹ್ಮಣರು ಸ್ಮಾರ್ತ ಸಂಪ್ರದಾಯ ಅಥವಾ ವೈಷ್ಣವತ್ವದೊಂದಿಗೆ ಹೊಂದಾಣಿಕೆ ಆರಂಭವಾಯಿತು.
1911 ರಲ್ಲಿ ಪಶ್ಚಿಮ ಬಂಗಾಳದ ವಲಿಘಾಯ್ ಉದ್ಧಾರಣಪುರ ಎಂಬಲ್ಲಿ ಶ್ರೀಲ ಭಕ್ತಿಸಿದ್ಧಾಂತ ಸರಸ್ವತೀ ಠಾಕುರರು ಸ್ಮಾರ್ತ ಸಂಪ್ರದಾಯವನ್ನು ಹೀನಾಯವಾಗಿ ಸೋಲಿಸಿದರು. ಈ ಸಂದರ್ಭದಲ್ಲಿ ಅವರು ಬ್ರಾಹ್ಮಣರಿಗಿಂತ ವೈಷ್ಣವರ ಔನ್ನತ್ಯ ಹೆಚ್ಚಿನದೆಂದು ಬಿಂಬಿಸುವ ಕೃತಿಯನ್ನು ಪ್ರದರ್ಶಿಸಿದರು. ನೆರೆದಿದ್ದ ಸಾವಿರಾರು ಪಂಡಿತರ ಸಮ್ಮುಖದಲ್ಲಿ ತಮ್ಮ ಪ್ರಬಂಧ ಮಂಡಿಸಿದ ಅವರು, ಅಲ್ಲಿದ್ದವರಲ್ಲೆಲ್ಲ ಅತಿ ಕಿರಿಯರಾಗಿದ್ದರೂ ನಿರ್ಣಾಯಕರಿಂದ ಅವರೇ ವಿಜಯಿಯೆಂಬ ಪ್ರಶಸ್ತಿ ಪಡೆದರು.






Leave a Reply