ಭಗವಂತನು ಒಬ್ಬ ವ್ಯಕ್ತಿಯೆ?

ಭಗವಂತನೆಂದರೆ, ನಮ್ಮಿಂದ ದೂರವಿರುವ ತನ್ನ ಆಧ್ಯಾತ್ಮಿಕ ಪ್ರದೇಶದಲ್ಲಿ ವಾಸಿಸುತ್ತಿರುವ ವ್ಯಕ್ತಿಯೇ? ಅಥವಾ, ಅವನು ನಮಗೆ ಅತ್ಯಂತ ಹತ್ತಿರದಲ್ಲಿ ನಮ್ಮೆಲ್ಲರ ಹೃದಯಗಳಲ್ಲಿ ವಾಸಿಸುತ್ತಿರುವನೇ? ಅಥವಾ, ಸರಳವಾಗಿ ಅವನು ಎಲ್ಲವೂ ಆಗಿರುವನೇ?

ಈ ಪ್ರಶ್ನೆಗಳಿಗೆ ನೀವು ಏನೆಂದು ಉತ್ತರಿಸುವಿರಿ? ಅಥವಾ ಹೀಗೂ ಕೇಳಬಹುದು; ನೀವು ಭಗವಂತನನ್ನು ಕುರಿತು ಯೋಚಿಸುವಾಗ ಏನೆಂದು ಯೋಚಿಸುವಿರಿ?

ಸಾಮಾನ್ಯವಾಗಿ ಜನರು ಭಗವಂತನನ್ನು ಕುರಿತು ಯೋಚಿಸುವಾಗ ಆತನನ್ನು ಒಬ್ಬ ವ್ಯಕ್ತಿಯಾಗಿ ಚಿಂತಿಸಲು ಇಷ್ಟ ಪಡುವುದಿಲ್ಲ. ಹೀಗೆ ಮಾಡುವುದರಿಂದ ಭಗವಂತನನ್ನು ಸೀಮಿತಗೊಳಿಸಿದಂತಾಗುತ್ತದೆ ಎಂದು ಅವರು ಚಿಂತಿಸುತ್ತಾರೆ.

ಭಗವಂತನು ನಮ್ಮ – ನಿಮ್ಮ ಹಾಗೆ ಒಬ್ಬ ವ್ಯಕ್ತಿಯಾಗಿದ್ದರೆ ಈ ಅನಂತ ವಿಶ್ವಗಳನ್ನು ಸೃಷ್ಟಿಸುವುದು ಅವನಿಂದ ಹೇಗೆ ಸಾಧ್ಯವಾಗುತ್ತಿತ್ತು? ಹೀಗೆ ಯೋಚಿಸುವ ಅವರು ಭಗವಂತನು ರೂಪರಹಿತವಾದ ಶಕ್ತಿಯ ಗಣಿ ಎಂದು ತಿಳಿಯುತ್ತಾರೆ. ಆದರೆ ಭಗವಂತನು ವಾಸ್ತವವಾಗಿ ಒಬ್ಬ ವ್ಯಕ್ತಿಯೇ ಆಗಿದ್ದಾನೆ.

ನಿರಾಕಾರವಾದಿಗಳ ಹೇಳಿಕೆ

ನಿರಾಕಾರವಾದಿಗಳು ಸರ್ವಕಾರಣ ಕಾರಣನಾದ, ಸರ್ವಮೂಲನಾದ ಪರಮ ಪ್ರಭು ಕೂಡ ಒಬ್ಬ ವ್ಯಕ್ತಿಯೆನ್ನುವುದನ್ನು ಸಹಿಸುವುದಿಲ್ಲ. ನಾವು ಮಿತಿಯುಳ್ಳವರು ಮತ್ತು ಭಗವಂತನು ಅಮಿತನಾಗಿರುವನು. ಮಾಯಾವಾದಿಗಳು ತಮ್ಮ ಅತ್ಯಲ್ಪ ತಿಳುವಳಿಕೆಯಿಂದಾಗಿ ಭಗವಂತನನ್ನು ನಿರಾಕಾರನೆಂದೆಣಿಸುವರು, ಭೌತಿಕ ಸಾಮತಿಯೊಂದಿಗೆ ಅವರು ಇದನ್ನು ವಿವರಿಸಲು ಯತ್ನಿಸುವರು.

ಆಕಾಶವನ್ನು ಅನಂತವೆಂದು ತಿಳಿಯುವ ಅವರು, ಅದು ನಿರಾಕಾರವಾಗಿರುವಂತೆಯೇ ಅನಂತವಾದ ಭಗವಂತನು ಕೂಡ ನಿರಾಕಾರನಾಗಿರುವನೆಂದು ವಾದಿಸುವರು.

ಪ್ರತಿಯೊಂದೂ ಶೂನ್ಯವೇ ಅಥವಾ ನಿರಾಕಾರವೇ ಎನ್ನುವುದೊಂದು ಮೂಢ ಚಿಂತನೆ. ವಾಸ್ತವವಾಗಿ, ಯಾವ ವಸ್ತುವಿಗೂ ಆಕಾರವಿಲ್ಲದೆ ಇಲ್ಲ. ಪ್ರತಿಯೊಂದಕ್ಕೂ ತನ್ನದೇ ಆದ ರೂಪವಿರುತ್ತದೆ. ಯಾವುದು ಅವ್ಯಕ್ತವೆನಿಸಿಕೊಂಡಿದೆಯೋ ಅದಕ್ಕೂ ಕೂಡ. ಉದಾಹರಣೆಗೆ, ಅವ್ಯಕ್ತ ಆಕಾಶ, ಅದು ಕೂಡ ವೃತ್ತಾಕಾರವಾಗಿ ವಿಶ್ವವನ್ನು ಆವರಿಸಿಕೊಂಡಿದೆ. ಸಾಗರವು ಕೂಡ ದೊಡ್ಡ ವೃತ್ತದಂತೆ ಇರುವುದನ್ನು ನಾವು ಕಾಣಬಹುದು.

ಭಗವದ್ಗೀತೆಯಲ್ಲಿ, ನಿರಾಕಾರವಾದಿಗಳು ಭಗವಂತನನ್ನು ಕುರಿತು ಸ್ಪಷ್ಟ ಕಲ್ಪನೆಯಿಲ್ಲದೆ ಹೆಚ್ಚಿನ ಸಮಸ್ಯೆಯನ್ನು ಎದುರಿಸುವರೆಂದು ಹೇಳಲಾಗಿದೆ. ನಿಮಗೆ ಭಗವಂತನ ಸ್ವರೂಪದ ಬಗ್ಗೆ ತಿಳುವಳಿಕೆಯಿಲ್ಲವೆಂದಾದಲ್ಲಿ ಭಗವಂತನನ್ನು ಅರ್ಥೈಸಿಕೊಳ್ಳುವ ಪ್ರಕ್ರಿಯೆ ಕಠಿಣತರವಾಗಿ ತೋರುವುದು.

ವೈದಿಕ ದೃಷ್ಟಿಕೋನ

ವೇದಗಳು ಭಗವಂತನು ಒಬ್ಬ ವ್ಯಕ್ತಿಯೆಂದೂ, ಆತನ ವ್ಯಕ್ತಿತ್ವ ಅನಂತವಾದುದೆಂದೂ ಸಾರಿವೆ. ನಮ್ಮ ಪ್ರಜ್ಞೆಯು ನಮ್ಮ ದೇಹಕ್ಕೆ ಸೀಮಿತವಾಗಿರುವಂತೆ, ಆತನ ಪ್ರಜ್ಞೆಯಾದ ಪರಮ ಪ್ರಜ್ಞೆಯು ಪ್ರತಿಯೊಂದು ದೇಹದಲ್ಲಿ ಹರಡಿಕೊಂಡಿರುತ್ತದೆ. ನಾವೆಲ್ಲರೂ ಈ ನಿರ್ದಿಷ್ಟ ದೇಹಕ್ಕೆ ಸಂಬಂಧಿಸಿದ ಪ್ರತ್ಯೇಕ ಜೀವಿಗಳಾಗಿದ್ದೇವೆ. ಮತ್ತು ಭಗವಂತನು ಪ್ರತಿಯೊಬ್ಬರಲ್ಲೂ ವಾಸಿಸುತ್ತಿರುವ ಪರಮ ಪುರುಷನಾಗಿದ್ದಾನೆ.

ಭಗವದ್ಗೀತೆಯಲ್ಲಿ (2:12) ಶ್ರೀಕೃಷ್ಣನು ಅರ್ಜುನನನ್ನು ಕುರಿತು, ಭಗವಂತನ ವ್ಯಕ್ತಿತ್ವ ಮತ್ತು ಪ್ರತ್ಯೇಕ ಆತ್ಮಗಳ ವ್ಯಕ್ತಿತ್ವಗಳು ಪಾರಮಾರ್ಥಿಕ ಅಸ್ತಿತ್ವವನ್ನು ಹೊಂದಿವೆಯೆಂದು ಹೇಳಿದ್ದಾನೆ. ರಣರಂಗದ ನಡುವಿನಲ್ಲಿ ಅರ್ಜುನನಿಗೆ ಗೀತೆಯನ್ನು ಬೋಧಿಸಿದ ಶ್ರೀಕೃಷ್ಣನು, ‘ನಾನು ಅಸ್ತಿತ್ವದಲ್ಲಿಲ್ಲದ ಕಾಲವೊಂದು ಇರಲಿಲ್ಲ. ನೀನು ಇಲ್ಲದ ಕಾಲವೂ ಇರಲಿಲ್ಲ. ಈ ರಾಜರಿಲ್ಲದೂ ಇರಲಿಲ್ಲ. ಮುಂದೆಯೂ ಕೂಡ ನಾವು ಯಾರೂ ಇಲ್ಲವಾಗುವ ಕಾಲವು ಬರುವುದಿಲ್ಲ ಎಂದು ಹೇಳುತ್ತಾನೆ.

ಭಗವಂತ ಮತ್ತು ಜೀವಿಗಳಿಬ್ಬರೂ ಪಾರಮಾರ್ಥಿಕ ವ್ಯಕ್ತಿಗಳೇ ಆಗಿರುವರು. ಆದರೆ ಭಗವಂತನ ವ್ಯಕ್ತಿತ್ವವು ಅಸೀಮವಾಗಿರುವುದು ಮತ್ತು ಜೀವಿಯ ವ್ಯಕ್ತಿತ್ವವು ಸೀಮಿತವಾಗಿರುವುದು. ಭಗವಂತನು ಅನಿಯಮಿತ ಶಕ್ತಿ, ಸಂಪತ್ತು, ಕೀರ್ತಿ, ಜ್ಞಾನ, ಸೌಂದರ್ಯ ಮತ್ತು ಪರಿತ್ಯಾಗಗಳ ಗಣಿಯಾಗಿರುವನು.

ನಾವು ನಿಯಮಿತ ಪ್ರಮಾಣದ ಶಕ್ತಿ, ಜ್ಞಾನ, ಕೀರ್ತಿ ಮೊದಲಾದವುಗಳನ್ನು ಹೊಂದಿರುವೆವು. ಇದು ಈ ಎರಡು ವ್ಯಕ್ತಿತ್ವಗಳ ನಡುವಿನ ಅಂತರವಾಗಿದೆ. ಲೌಕಿಕವಾಗಿ ನಾವಿದನ್ನು ಅತ್ಯಂತ ಸರಳ ರೀತಿಯಿಂದ ಅರ್ಥೈಸಿಕೊಳ್ಳಬಹುದು. ಹೇಗೆಂದರೆ; ನಮ್ಮ ತಂದೆಯು ಒಬ್ಬವ್ಯಕ್ತಿಯಾಗಿರುವನು.

ಅವನ ತಂದೆಯೂ ಕೂಡ ವ್ಯಕ್ತಿಯೇ ಆಗಿದ್ದನು. ಅವನ ತಂದೆ, ತಂದೆಯ ತಂದೆ-ಹೀಗೆ ತಲೆಮಾರುಗಳ ಹಿಂದಿನವರೂ ವ್ಯಕ್ತಿಯೇ ಆಗಿದ್ದರು. ಹೀಗೆಯೇ ನೋಡುತ್ತ ಹೋದರೆ, “ಪರಮ ಪಿತ”ನೂ ಕೂಡ ವ್ಯಕ್ತಿಯಾಗಿರಲೇಬೇಕು. ಇದನ್ನು ಅರ್ಥ ಮಾಡಿಕೊಳ್ಳವುದೇನೂ ಕಷ್ಟವಲ್ಲ. ಇಲ್ಲಿ ನಾವು ಮತ್ತೊಂದು ಅಂಶ ಗಮನಿಸಬೇಕು.

ಭಗವಂತನನ್ನು ವೇದಗಳು ಮಾತ್ರವಲ್ಲ, ಬೈಬಲ್, ಕುರಾನ್ ಮತ್ತಿತರ ಶಾಸ್ತ್ರಗ್ರಂಥಗಳೂ “ಪರಮ ಪಿತ” ಎಂದು ಕರೆದಿವೆ. ವೇದಾಂತ ಸೂತ್ರವು ಪರಮ ಸತ್ಯವೇ ಎಲ್ಲ ಜೀವಿಗಳ, ವಸ್ತುಗಳ ಜನ್ಮದಾತ ಪಿತನೆಂದು ದೃಢಪಡಿಸಿದೆ. ಇದನ್ನು ವೇದಗಳು ಕೂಡ ದೃಢಪಡಿಸಿವೆ.

ನಿತ್ಯೋ ನಿತ್ಯಾನಾಮ್ ಚೇತನಾಶ್ಚೇತನಾನಾಮ್ |

ಏಕೋ ಬಹೂನಾಂ ಯೋ ವಿದಧಾತಿ ಕಾಮಾನ್ ||

ನಾವೆಲ್ಲರೂ ಜೀವಿಗಳು. ಭಗವಂತ ಶ್ರೀಕೃಷ್ಣನು ಕೂಡ ಜೀವಿಯೇ. ವ್ಯತ್ಯಾಸವೆಂದರೆ, ಆತನು ಪೂಜಿಸಲ್ಪಡುವವನು ಮತ್ತು ನಾವು ಪೂಜಕರು. ರಾಜ ಅಥವಾ ಅಧ್ಯಕ್ಷನು ಒಬ್ಬವ್ಯಕ್ತಿ. ಪ್ರಜೆಗಳು ಕೂಡ ವ್ಯಕ್ತಿಗಳೇ. ಆದರೆ ಅಧ್ಯಕ್ಷ ಅಥವಾ ರಾಜನು ಎಲ್ಲರ ಗೌರವಕ್ಕೆ ಭಾಜನನಾದ ಉನ್ನತ ವ್ಯಕ್ತಿಯಾಗಿರುತ್ತಾನೆ.

ಅಷ್ಟೊಂದು ಜನರು ಒಬ್ಬನೇ ವ್ಯಕ್ತಿಯನ್ನೇಕೆ ಪೂಜಿಸಬೇಕು? ಏಕೆಂದರೆ, ಆ ವ್ಯಕ್ತಿಯು ಇತರರಿಗೆ ನೀಡುವಂಥವನಾಗಿದ್ದಾನೆ. “ಏಕೋ ಬಹೂನಂ ಯೋ ವಿದಧಾತಿ ಕಾಮಾನ್” ಭಗವಂತನು ಒಬ್ಬನೇ. ನಾವು ಹಲವರಿದ್ದೇವೆ. ಆದರೆ ಅವನು ಪ್ರತಿಯೊಬ್ಬರಿಗೂ ‘ದಾತಾರ’ ನಾಗಿರುವುದರಿಂದ ಆತನು ಪೂಜಿಸಲ್ಪಡುತ್ತಾನೆ. ಜೀವಿಗಳಿಗೆ ಅಗತ್ಯವಿರುವ ಅನ್ನಾಹಾರಗಳನ್ನು ನೀಡುವವನು ಭಗವಂತನೇ.

ಅರ್ಥೈಸಿಕೊಳ್ಳುವಿಕೆಯ ವಿವಿಧ ಆಯಾಮಗಳು

ಪರಮ ಪ್ರಭುವು ಜೀವಿಗಳಿಂದ ಮೂರು ವಿವಿಧ ಆಯಾಮಗಳಲ್ಲಿ ಅರ್ಥೈಸಲ್ಪಡುತ್ತಾನೆ. ಆ ಆಯಾಮಗಳೆಂದರೆ: 1) ನಿರಾಕಾರ ಬ್ರಹ್ಮ  2) ಪರಮಾತ್ಮ  3) ದೇವೋತ್ತಮನಾದ ಭಗವಂತ. ದೂರದಿಂದ ಬೆಟ್ಟವು ಮೋಡದಂತೆ ತೋರುತ್ತದೆ. ಅದರ ಸ್ವರೂಪವನ್ನರಿಯದವನು ಬೆಟ್ಟವನ್ನು ಮೋಡವೆಂದೇ ಕಾಣುತ್ತಾನೆ.

ಆದರೆ ವಾಸ್ತವದಲ್ಲಿ ಅದು ಮೋಡವಾಗಿರದೆ, ದೊಡ್ಡದೊಂದು ಬೆಟ್ಟವಾಗಿರುತ್ತದೆ. ಮೋಡದಂತೆ ತೋರುತ್ತಿರುವುದು ಮೋಡವಲ್ಲದೆ, ಅದೊಂದು ಬೆಟ್ಟವಾಗಿದೆ ಎಂಬುದನ್ನು ಪ್ರಮಾಣಿಕೃತ ವ್ಯಕ್ತಿಗಳ ಮೂಲಕ ಅರಿತುಕೊಳ್ಳಬೇಕು. ಹೀಗೆ ಕೊಂಚ ಪ್ರಗತಿ ಸಾಧಿಸಿದ ವ್ಯಕ್ತಿಯು ಮುಂದುವರಿದಂತೆ, ಮೋಡದ ಬದಲಿಗೆ ಬೆಟ್ಟ ಮತ್ತು ಕೊಂಚ ಹಸಿರನ್ನು ಕಾಣುವನು. ಯಾರು ಧೀರವಾಗಿಯೂ ಬೆಟ್ಟವನ್ನು ತಲಪುವನೋ, ಅವನು ಅದರಲ್ಲಿನ ವೈವಿಧ್ಯಗಳನ್ನು, ಕಾಡನ್ನು, ಪ್ರಾಣಿಗಳನ್ನು ಮತ್ತು ಮನುಷ್ಯರನ್ನು ಕಾಣುವನು.

ಅದರಂತೆಯೇ, ಯಾರು ಪರಮ ಸತ್ಯವನ್ನು ದೂರದಿಂದಲೇ ಅರಿಯಲು ಯತ್ನಿಸುತ್ತಾರೋ ಅವರು ತಮಗೆ ತೋರುವಂತೆ ಅದನ್ನು ನಿರಾಕಾರ ಬ್ರಹ್ಮನೆಂದು ತಿಳಿದುಕೊಳ್ಳುತ್ತಾರೆ. ಈ ದಿಸೆಯಲ್ಲಿ ಅಲ್ಪ ಪ್ರಗತಿ ಸಾಧಿಸಿರುವ ಯೋಗಿಗಳು ತಮ್ಮ ಅರಿವಿನ ಮಟ್ಟಕ್ಕೆ ತಕ್ಕಂತೆ ಅದರ ಪರಮಾತ್ಮ ಗುಣಲಕ್ಷಣಗಳನ್ನು ತಿಳಿದುಕೊಳ್ಳುತ್ತಾರೆ. ಮತ್ತು ಶುದ್ಧ ಭಕ್ತರಾದವರು ದೇವೋತ್ತಮ ಪರಮ ಪುರುಷನಾದ ಶ್ರೀಕೃಷ್ಣನನ್ನು ಮುಖಾಮುಖಿಯಾಗಿ, ಒಬ್ಬ ವ್ಯಕ್ತಿ ಮತ್ತೊಬ್ಬ ವ್ಯಕ್ತಿಯನ್ನು ನೋಡುವಂತೆ ನೋಡಬಲ್ಲವರಾಗಿರುತ್ತಾರೆ.

ಪಾರಮಾರ್ಥಿಕ ಸ್ವರೂಪ

ವೈದಿಕ ಸಾಹಿತ್ಯಗಳ ಆಧಾರದಿಂದ ನಮಗೆ ಪರಮ ಪ್ರಭುವು ಪಾರಮಾರ್ಥಿಕ ಸ್ವರೂಪವೆಂದು ತಿಳಿದು ಬರುತ್ತದೆ. ನಾವು ಆತನ ತಲೆ, ಮುಖ, ಕೈ- ಕಾಲುಗಳನ್ನು ನೋಡಲು ಸಾಧ್ಯವಾಗದೆ ಹೋದರೂ, ಆತನಿಗೆ ಅವೆಲ್ಲವೂ ಇದೆ. ನಾವು ಕೂಡ ಪರಮಾರ್ಥದ ಹಂತಕ್ಕೆ ಭಕ್ತಿ ಹೊಂದಿದಾಗ ನಮಗೆ ಭಗವಂತನ ರೂಪವು ಗೋಚರವಾಗುತ್ತದೆ.

ಭಗವಂತನು ಸಚ್ಚಿದಾನಂದ ವಿಗ್ರಹವೆಂಬ ಸ್ವರೂಪವನ್ನು ಹೊಂದಿದ್ದಾನೆ. ಅವನು ಅತ್ಯಂತ ಮಂಗಳಶಾಲಿಯಾಗಿದ್ದಾನೆ. ಅವನು ಸಕಲ ಸಂಪತ್ತುಗಳ, ಎಲ್ಲ ಬಗೆಯ ಶಕ್ತಿಗಳ ಒಡೆಯನಾಗಿದ್ದಾನೆ. ಅವನು ಅತ್ಯಂತ ಬುದ್ಧಿಶಾಲಿಯೂ ಜ್ಞಾನ ಪರಿಪೂರ್ಣನೂ ಆಗಿದ್ದಾನೆ.

ಭಗವಂತನು ಒಬ್ಬವ್ಯಕ್ತಿ. ಅವನು ತನ್ನ ಸಹಚರರೊಂದಿಗೆ ತನ್ನ ನೆಲೆಯಲ್ಲಿ ವಾಸಿಸುತ್ತಾನೆ. ಅವನು ತನ್ನ ನೆಲೆಯಲ್ಲಿಯೇ ಇದ್ದಾಗ್ಯೂ ಕೂಡ ಎಲ್ಲ ಕಡೆಗಳಲ್ಲಿ ಉಪಸ್ಥಿತನಿದ್ದಾನೆ, ಪ್ರತಿಯೊಂದು ಅಣುವಿನಲ್ಲಿಯೂ ಇದ್ದಾನೆ.

ಭಗವಂತನು ಪ್ರತಿಯೊಂದನ್ನೂ ಸೃಷ್ಟಿಸಿರುವನೆಂದಾದರೆ, ಅವನೊಬ್ಬ ವ್ಯಕ್ತಿಯಾಗಿರಲೇಬೇಕು. ಸೃಷ್ಟಿಕಾರ್ಯ ಮಾಡಬಲ್ಲ ಭಗವಂತನು ನಡೆದಾಡಬಲ್ಲ, ಮಾತಾಡಬಲ್ಲ, ಮುಟ್ಟಬಲ್ಲ ಮತ್ತು ನೋಡಬಲ್ಲವನೂ ಆಗಿರುತ್ತಾನೆ.

ಭಗವಂತನು ಅಸ್ತಿತ್ವದಲ್ಲಿದ್ದಾನೆ ಮತ್ತು ಭಗವಂತನ ಶಕ್ತಿಯೂ ಅಸ್ತಿತ್ವದಲ್ಲಿದೆ. ನಾವು ಭಗವಂತನನ್ನು ಕಾಣಲಾರವೆಂದಾದರೆ, ಕೊನೆಯ ಪಕ್ಷ ಆತನ ಶಕ್ತಿಯನ್ನಾದರೂ ಕಾಣಬಹುದಾಗಿದೆ. ನಾವು ವಿದ್ಯುಚ್ಛಕ್ತಿ ಉತ್ಪಾದನಾ ಕೇಂದ್ರವನ್ನು ನೋಡದಿದ್ದರೂ ವಿವಿಧ ಬಗೆಯಲ್ಲಿ ವಿದ್ಯುತ್ತಿನ ಉಪಯೋಗ ಪಡೆಯುವುದಿಲ್ಲವೇ? ಹಾಗೆ.

ನಾವು ಬಳಸುವ ವಿದ್ಯುತ್ ಎಲ್ಲಿಂದ ಹರಿದು ಬರುತ್ತಿದೆ ಎಂದು ಆಲೋಚಿಸುವುದು ಬುದ್ಧಿವಂತಿಕೆ. ಹೀಗೆ ಅದನ್ನು ಅರಸುತ್ತ, ಹೋಗುವವನು ಖಚಿತವಾಗಿಯೂ ಉತ್ಪಾದನಾ ಕೇಂದ್ರವನ್ನು ಕಾಣುವನು. ಇನ್ನೂ ಮುಂದುವರಿದು, ಈ ವಿದ್ಯುತ್ ಉತ್ಪಾದನಾ ಕೇಂದ್ರವನ್ನು ನಡೆಸುತ್ತಿರುವವರು ಯಾರು ಎಂದು ಯೋಚಿಸುತ್ತ ಹೊರಟರೆ, ಖಂಡಿತವಾಗಿ ಒಬ್ಬ ಮಾನವನು ಕಂಡು ಬರುವನು.

ವಿದ್ಯುತ್ ನಿರಾಕಾರಾವಾಗಿದ್ದರೂ, ಉತ್ಪದನಾ ಕೇಂದ್ರಕ್ಕೆ ಆಕಾರವಿಲ್ಲದೆ ಹೋದರೂ, ಅವೆಲ್ಲದರ ಹಿಂದೆ ಇರುವ ಮಾನವನು ವ್ಯಕ್ತನೂ ಸಾಕಾರನೂ ಆಗಿರುವನು. ಹಾಗೆಯೇ ಭಗವಂತನೂ ಕೂಡ ಒಬ್ಬ ವ್ಯಕ್ತಿಯಾಗಿರುವನು. ಇದು ತಾರ್ಕಿಕವಾಗಿಯೂ ಸಮ್ಮತವಾಗಿದೆ. ಅವನು ನಿರಾಕಾರಿಯಾಗಿರಲು ಹೇಗೆ ಸಾಧ್ಯ?

ಭಗವಂತನು ಕೇವಲ ಸೀಮಿತ ಶಕ್ತಿಯಲ್ಲ. ಪ್ರತಿಯೊಂದರ ಮೊತ್ತವೂ ಅಲ್ಲ. ಅವನು ಮೋಡದಂತಹ ನಿರಾಕಾರ, ಸರ್ವಗಾಮಿಯಾಗಿದ್ದುಕೊಂಡು ಕೆಲಸ ಮಾಡುತ್ತಿರುವಂತಹ ಶಕ್ತಿಯೂ ಅಲ್ಲ. ಭಗವಂತನು ಜೀವಿಸುವ ಪ್ರೇಮಿಸುವ ಒಬ್ಬವ್ಯಕ್ತಿ. ಅವನು ಮಾತಾಡಬಲ್ಲ, ಕೇಳಬಲ್ಲ ಮತ್ತು ಹರಸಬಲ್ಲ. ಭಗವಂತನು ತನ್ನ ಅಸೀಮ ಬಲದಿಂದಾಗಿ ನಮ್ಮೊಂದಿಗೆ ಹೋಲಿಸಿಕೊಳ್ಳಲಾಗದ, ನಮ್ಮ ಜೀವನದಲ್ಲಿ ಒಂದಾಗಿರುವ ಅತ್ಯುನ್ನತ ವ್ಯಕ್ತಿಯಾಗಿರುವನು.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi