ನಾವು ಜೊತೆಗೂಡೋಣ

ಶ್ರೀ ಶ್ರೀಮದ್‌ ಎ.ಸಿ.ಭಕ್ತಿವೇಂದಾತ ಸ್ವಾಮಿ ಪ್ರಭುಪಾದರು ಹಾಗೂ ಅತಿಥಿಗಳ ನಡುವೆ ನಡೆದ ಸಂವಾದ

ಸ್ಥಳ: ಇಂಗ್ಲೆಂಡ್, ದಿನಾಂಕ: ಆಗಸ್ಟ್ 14, 1971

– ಅನುವಾದ: ಚೇತನಾ ತೀರ್ಥಹಳ್ಳಿ

ಅತಿಥಿ: ನಾವು ಏಸುಕ್ರಿಸ್ತ ಎಂದು ಹೇಳುತ್ತೇವೆ.

ಶ್ರೀಲ ಪ್ರಭುಪಾದ: ಆದರೆ ಏಸುಕ್ರಿಸ್ತರು ಎಂದಿಗೂ ತಾವೇ ದೇವರೆಂದು ಹೇಳಿಲ್ಲ. ಅವರು ತಾವು ‘ದೇವರ ಮಗ” ನೆಂದು ಹೇಳಿರುವರು. ಏಸುಕ್ರಿಸ್ತರ ಪವಿತ್ರನಾಮ ಜಪಿಸಲು ನಮ್ಮದೇನೂ ತಕರಾರು ಇಲ್ಲ. ನಾವು “ಭಗವಂತನ ಪವಿತ್ರನಾಮ ಜಪ” ವನ್ನು ಬೋಧಿಸುತ್ತಿರುವೆವು. ನೀವು ಭಗವಂತನ ಯಾವುದೇ ಹೆಸರನ್ನು ಹೊಂದಿಲ್ಲವಾದರೆ, ಆಗಬೇಕಿದ್ದರೆ ನೀವು ಭಗವಂತನ ಕುರಿತು ನಮ್ಮ ಗ್ರಹಿಕೆಯಾದ ‘ಕೃಷ್ಣ’ನನ್ನು ಜಪಿಸಬಹುದು. ಆದರೆ ನಾವು ಕೇವಲ ಕೃಷ್ಣ ಎಂದು ಹೇಳುವುದಿಲ್ಲ.

ನಾಮ್ನಾಮ್ ಅಕಾರಿಬಹುಧಾ ನಿಜ ಸರ್ವ ಶಕ್ತಿಃ ತತ್ರಾರ್ಪಿತಾ ನಿಯಮಿತಃ ಸ್ಮರಣೇ ನಕಾಲಃ |

ಏತಾದೃಶೀ ತವ ಕೃಪಾ ಭಗವನ್ ಮಮಾಪಿ ದುರ್ದೈವಮ್ ಈ ದೃಶಮ್ ಇಹಾಜನಿ ನಾನುರಾಗಃ ||

ಭಗವಂತನಿಗೆ ಹಲವು ನಾಮಗಳಿವೆಯೆಂದೂ ಪ್ರತಿ ಹೆಸರಿನಲ್ಲಿಯೂ ಭಗವಂತನ ಪೂರ್ಣ ಶಕ್ತಿಯು ಇರುವುದೆಂದೂ ಶ್ರೀ ಚೈತನ್ಯ ಮಹಾಪ್ರಭುಗಳು ಹೇಳುತ್ತಾರೆ. ಭಗವಂತನ ಪವಿತ್ರ ನಾಮ ಜಪಿಸಲು ಯಾವುದೇ ಬಗೆಯ ಕಠಿಣತರ ನೀತಿ ನಿಯಮಗಳಿರುವುದಿಲ್ಲ. ಯಾರು ಬೇಕಿದ್ದರೂ, ಎಲ್ಲಾದರೂ, ಯಾವ ಸಮಯದಲ್ಲಾದರೂ, ಯಾವುದೇ ಸನ್ನಿವೇಶದಲ್ಲಿಯೂ ಜಪ ಮಾಡಬಹುದು.

ಶ್ರೀ ಚೈತನ್ಯರು ಹೇಳುತ್ತಾರೆ, “ನನ್ನ ದೇವರೇ, ನೀನು ಈ ಯುಗದಲ್ಲಿ – ಪ್ರತಿಯುಗದಲ್ಲೂ – ಯಾವಾಗಲೂ ನಿನ್ನ ಹೆಸರಿನಲ್ಲಿ ಸಂಪೂರ್ಣ ಶಕ್ತಿಯೊಂದಿಗೆ ಉಪಸ್ಥಿತನಿರುತ್ತೀಯೆ. ಮತ್ತು ನಾನು ಸರಳವಾಗಿ ನಿನ್ನ ಪವಿತ್ರ ನಾಮಜಪದ ಮೂಲಕ ನಿನ್ನ ಸಾಂಗತ್ಯದಲ್ಲಿರಬಲ್ಲೆ. ಆದರೆ ನಾನದೆಷ್ಟು ದುರದೃಷ್ಟಶಾಲಿಯೆಂದರೆ, ನನಗೆ ಅದರೆಡೆಗೆ ಆಕರ್ಷಣೆಯೇ ಇಲ್ಲವಾಗಿದೆ.”

ಈಗ ಜನರು ಹರೇಕೃಷ್ಣ ಹರೇಕೃಷ್ಣ ಕೃಷ್ಣಕೃಷ್ಣ ಹರೇಹರೇ/ಹರೇರಾಮ ಹರೇರಾಮ ರಾಮರಾಮ ಹರೇಹರೇ ಮಂತ್ರ ಜಪದ ಬೋಧನೆ ಪಡೆಯುತ್ತಿದ್ದಾರೆ. ನಷ್ಟವೆಲ್ಲಿದೆ? ನಾನು ಹರೇಕೃಷ್ಣ ಜಪಿಸಿದರೆ, ನಷ್ಟವೆಲ್ಲಿದೆ? ಸಮಯದ ಅಗತ್ಯವೆಲ್ಲಿದೆ?

ಅವರು (ನನ್ನ ಶಿಷ್ಯರು) ದಾರಿಯಲ್ಲಿ ನಡೆಯುತ್ತ ಹರೇಕೃಷ್ಣ ಹರೇಕೃಷ್ಣ ಕೃಷ್ಣಕೃಷ್ಣ ಹರೇಹರೇ/ ಹರೇರಾಮ ಹರೇರಾಮ ರಾಮರಾಮ ಹರೇಹರೇ ಜಪಿಸುವರು. ನಾನು ಇಲ್ಲಿ ಕುಳಿತು ನಿನ್ನೊಂದಿಗೆ ಮಾತನಾಡುತ್ತಿರುವೆನು. ನಾನು ಮಾತು ಮುಗಿಸಿದ ತತ್‌ ಕ್ಷಣದಿಂದಲೇ ನಾನು ಹರೇಕೃಷ್ಣ ಜಪಿಸಲುತೊಡಗುವೆನು.

ಹಾಗಾದರೆ ಕಷ್ಟವೆಲ್ಲಿದೆ? ಜನರಿಗೆ ಭಗವಂತನ ಪವಿತ್ರ ನಾಮ ಜಪಿಸಲು ಹೇಳಿದರೆ ಅವರು ಒಪ್ಪಿಕೊಳ್ಳುವುದಿಲ್ಲ. ದುರದೃಷ್ಟ. ಮತ್ತಿದು ಎಷ್ಟು ಸರಳ ವಿಧಾನ? ಅವರು ಚರ್ಚಿಗಾಗಲೀ ಮಂದಿರಕ್ಕಾಗಲೀ ಹೋಗಬೇಕಿಲ್ಲ. ಅವರು ಸ್ವರ್ಗದಲ್ಲಿರುವರೋ, ನರಕದಲ್ಲಿರುವರೋ ಎಂಬುದು ಕೂಡಾ ಸಂಗತಿಯಲ್ಲ.

ಯಾವುದೇ ಸನ್ನಿವೇಶದಲ್ಲಿಯೂ ಅವರು ಭಗವಂತನ ಪವಿತ್ರ ನಾಮ ಜಪಿಸಬಹುದು. ಆದರೆ ಅವರು ಅದೆಷ್ಟು ದುರದೃಷ್ಟವಂತರೆಂದರೆ, ಅವರು ಈ ಸಿದ್ಧಾಂತವನ್ನು ಒಪ್ಪುವುದಿಲ್ಲ. “ಏತಾದೃಶೀ ತವಕೃಪಾ” – ‘ಭಗವಂತನು ಅತ್ಯಂತ ಕರುಣಾಮಯಿ. ಆದರೆ ನಾನದೆಷ್ಟು ದುರದೃಷ್ಟಶಾಲಿಯೆಂದರೆ, ನಾನು ಅವನ ಪವಿತ್ರನಾಮವನ್ನು ಜಪಿಸಲಾಗುತ್ತಿಲ್ಲ.

ಅಲ್ಲಿ ಯಾವುದೇ ಬಗೆಯ ಮೊತ್ತ ನೀಡಬೇಕಿಲ್ಲ. ಹಣ ತೆರಬೇಕಿಲ್ಲ. ಅಲ್ಲಿ ನಷ್ಟವಿಲ್ಲ. ಅಲ್ಲಿ ಸ್ವಲ್ಪ ಲಾಭವಿರುವುದಾದರೆ, ಯಾಕೆ ಅದಕ್ಕಾಗಿ ಪ್ರಯತ್ನಿಸಬಾರದು? ಮತ್ತು ಅಲ್ಲಿ ಲಾಭವಿದೆ. ಅದನ್ನು ನೀವು ಸ್ಪಷ್ಟವಾಗಿ ನೋಡಬಹುದು. ಈ ಹುಡುಗರು ಯೂರೋಪ್, ಅಮೆರಿಕ ಮತ್ತಿತರ ಸ್ಥಳಗಳವರು. ಅವರ ಗುಣ ನಡತೆಯು … ನಾನದನ್ನು ಚರ್ಚಿಸಲು ಬಯಸುವುದಿಲ್ಲ (ನಗು). ಆದರೆ ಈಗ ಅವರನ್ನು ನೋಡಿ, ಹೌದು, ಅಲ್ಲಿ ಅಷ್ಟೊಂದು ಲಾಭವಿದೆ.

ಅತಿಥಿ: ನಾವದನ್ನು ನೋಡುತ್ತಿರುವೆವು.

ಶ್ರೀಲ ಪ್ರಭುಪಾದ: ಹಾಗಾದರೆ ನಿಮಗೆ ಹೆಚ್ಚಿನದೇನು ಬೇಕು? ಆದ್ದರಿಂದ ನಮಗೆ ಸಹಕರಿಸಲು ಬಿಡಿ. ಇದು ಕ್ರೈಸ್ತಧರ್ಮದ ವಿರುದ್ಧವೆಂದೋ, ಪಾಂಥೀಯವೆ೦ದೋ ತಿಳಿಯಬೇಡಿ. ನಾವು ಸಂಪೂರ್ಣ ಸಹಕಾರ ನೀಡಲು ಬಿಡಿ. ನಾವು ಒಟ್ಟಾಗಿಯೇ ಜಗದಾದ್ಯಂತ ಬೋಧನೆ ನಡೆಸಬಹುದು.

ಭಗವಂತನ ಭಕ್ತರ ನಿಜವಾದ ಧ್ಯೇಯ ಅದಾಗಿರಬೇಕು. ನೀವು ಹರೇಕೃಷ್ಣ ಜಪಿಸಲೇಬೇಕೆಂದು ನಾವು ಹೇಳುವುದಿಲ್ಲ. ನೀವು ಭಗವಂತನದೊಂದು ಹೆಸರನ್ನು ಹೊಂದಿದ್ದರೆ, ಅದನ್ನೇ ಜಪಿಸಿ. ನಾವು ಭಗವಂತನ ಪವಿತ್ರ ನಾಮ ಜಪವನ್ನು ಬೋಧಿಸುತ್ತಿರುವೆವು.

ಹೀಗಿರುವಾಗ ಇತರ ಪಂಥಗಳಿಂದ ಆಕ್ಷೇಪಣೆಗೊಳ್ಳುವಂತಹದಾದರೂ ಏನಿದೆ? ಆದರೆ ಅವರು ಮತ್ಸರ ಪೂರಿತರಾಗಿರುವರು. ಯುವ ಜನಾಂಗವು ಹರೇಕೃಷ್ಣ ಮಂತ್ರ ಜಪವನ್ನು ಪಡೆಯುತ್ತಿದ್ದಾರೆ, ಅದಕ್ಕೆ ಅವರು ಮತ್ಸರಪಡುತ್ತಿರುವರು.

ಅತಿಥಿ: ಜಪವು ನಿಮಗೆ ಹೃದ್ಗತವಾಗಿದೆಯೆಂದು ನಿಮಗೆ ತೋರುತ್ತದೆಯೇನು?

ಶ್ರೀಲ ಪ್ರಭುಪಾದ: ಯಾಕಿಲ್ಲ?

ಅತಿಥಿ: ಅದು ಆಳ – ಆಳಕ್ಕೆ ಹೋಗುತ್ತದೆಯೇ?

ಶ್ರೀಲ ಪ್ರಭುಪಾದ: ಹೌದು, ನಾವು ಕೇಳುವ ಪ್ರತಿಯೊಂದೂ ಹೃದಯಕ್ಕೆ ತಟ್ಟುತ್ತದೆ. ಯಾರಾದರೂ ನನಗೆ ಕೆಟ್ಟ ಹೆಸರಿನಿಂದ ಕರೆದರೆ ಅದು ನನ್ನ ಹೃದಯಕ್ಕೆ ನಾಟದೇನು? ”ನೀನು ಮೂರ್ಖ, ನೀನು ಮುಟ್ಠಾಳ.’ ಇದನ್ನು ನಾನು ಕೇಳಿದಾಗ, ಅದು ನನ್ನ ಹೃದಯಕ್ಕೆ ಹೋಗದೇನು? ಅದು ನನ್ನ ಹೃದಯಕ್ಕಿಳಿಯುವ ಹೊರತು ನಾನೇಕೆ ಕೋಪಗೊಳ್ಳಬೇಕು? ‘ಮೂರ್ಖ’, ‘ಮುಟ್ಠಾಳ’ ಮತ್ತಿತರ ಎಲ್ಲ ಕೆಟ್ಟ ಬಯ್ಗುಳಗಳೂ ನನ್ನ ಹೃದಯ ತಟ್ಟುತ್ತವೆ, ಭಗವಂತನ ಹೆಸರೇಕೆ ನನ್ನ ಹೃದಯವನ್ನು ಪ್ರವೇಶಿಸಲಾರದು?

ಅತಿಥಿ: ನಾನು ಕೆಲವೊಮ್ಮೆ ಚಿಕ್ಕ ಪ್ರಾರ್ಥನೆಯನ್ನೂ ಹೇಳುವೆ.

ಶ್ರೀಲ ಪ್ರಭುಪಾದ: ನೀವದನ್ನು ಪುನರಾವರ್ತಿತವಾಗಿ ಜಪಿಸತೊಡಗಿದರೆ ಅದು ಉಳಿದುಕೊಳ್ಳುತ್ತದೆ. ಅದು ಯಾವಾಗಲೂ ನಿಮ್ಮ ಹೃದಯದಲ್ಲಿರುತ್ತದೆ.

ಅತಿಥಿ: ಯಾವಾಗಲೂ ಸಾಗುತ್ತಿರುತ್ತದೆ.

ಶ್ರೀಲ ಪ್ರಭುಪಾದ: ಹೌದು, ತಪ್ಪಿಸಿಕೊಳ್ಳುವ ಅವಕಾಶವೇ ಇರದು. ನಿರಂತರವಾಗಿ ಹರೇಕೃಷ್ಣ ಹರೇಕೃಷ್ಣ ಕೃಷ್ಣಕೃಷ್ಣ ಹರೇಹರೇ ಹರೇರಾಮ ಹರೇರಾಮ ರಾಮರಾಮ ಹರೇಹರೇ ಜಪಿಸಿ. ಅದು ನಿಮ್ಮ ಹೃದಯದಲ್ಲಿ ಉಳಿಯುತ್ತದೆ.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi