ಚಲಯಸಿ ವಿಕ್ರಮಣೇ ಬಲಿಮದ್ಭುತ ವಾಮನ |
ಪದನಖ ನೀರ ಜನಿತ ಜನ ಪಾವನ ।
ಕೇಶವ ಧೃತ ವಾಮನರೂಪ ಜಯ ಜಗದೀಶ ಹರೇ ||
ಕುಬ್ಬ ಬ್ರಾಹ್ಮಣ ವಟುವಿನ ರೂಪ ಧರಿಸಿ ಬಂದು ಬಲಿಯೆದುರು ಅದ್ಭುತ ಗಾತ್ರನಾಗಿ ಬೆಳೆದು ನಿಂತವನೇ, ಕಾಲುಗುರಿನ ಘಾತದಿಂದ ಪವಿತ್ರ ಜಲ (ಗಂಗೆ) ಚಿಮ್ಮಿಸಿದವನೇ, ವಾಮನ ರೂಪಿ ಕೇಶವ. ಜಗದೀಶನೇ ನಿನಗೆ ಜಯವಾಗಲಿ!

ದೇವೋತ್ತಮ ಪರಮ ಪುರುಷನ ಅದ್ಭುತ ಅವತಾರಗಳಲ್ಲಿ ವಾಮನಾವತಾರ ವಿಶಿಷ್ಟವಾದುದು. ದೈತ್ಯರಾಜ ಬಲಿಯ ಆಡಳಿತದಿಂದ ದೇವತೆಗಳನ್ನು ಮುಕ್ತಗೊಳಿಸಲು ಅದಿತಿ, ಕಶ್ಯಪರ ಮಗನಾಗಿ ಜನಿಸಿಬಂದನು. ಪುಟ್ಟ ಆಕಾರದ, ಚುರುಕು ನಡೆ ನುಡಿಯ ಆಕರ್ಷಕ ಬಾಲಕನಾಗಿ “ವಾಮನ” ಎಂಬ ಹೆಸರನ್ನು ಪಡೆದನು. ಆದರೆ ಬಲಿ ಮಹಾರಾಜನಿಂದ ಮೂರು ಹೆಜ್ಜೆ ಅಳತೆಯ ನೆಲ ಬೇಡಿ, ಅದನ್ನು ಅಳೆಯುವಾಗ ತನ್ನ ಗಾತ್ರವನ್ನು ಹಿಗ್ಗಿಸಿಕೊಂಡು ಭೂಮ್ಯಾಕಾಶವನ್ನು ಮೀರಿ ಬೆಳೆದು “ತ್ರಿವಿಕ್ರಮ”ನಾದನು.
ಬಲಿಮಹಾರಾಜನ ಚರಿತ್ರೆ ಮತ್ತು ವಾಮನ ದೇವನಿಗೆ ಅವನು ಮಾಡಿದ ದಾನವು ಶ್ರೀಮದ್ಭಾಗವತದ ಎಂಟನೆಯ ಸ್ಕಂಧದಲ್ಲಿ ವರ್ಣಿತವಾಗಿದೆ. ಬಲಿಮಹಾರಾಜನು ಬ್ರಹ್ಮಾಂಡದ ಎಲ್ಲ ಲೋಕಗಳನ್ನೂ ಹಕ್ಕಿನಿಂದ ತನ್ನ ವಶಕ್ಕೆ ತೆಗೆದುಕೊಂಡನು. ಒಬ್ಬ ರಾಜನು ತನ್ನ ಪರಾಕ್ರಮದಿಂದ ಬೇರೊಬ್ಬ ರಾಜನನ್ನು ಗೆಲ್ಲಬಹುದು ಮತ್ತು ಹಾಗೆ ಗಳಿಸಿದ್ದನ್ನು ನ್ಯಾಯಸಮ್ಮತವೆಂದು ಭಾವಿಸಲಾಗಿದೆ.
ಹೀಗೆ ಬಲಿಮಹಾರಾಜನು ಬ್ರಹ್ಮಾಂಡದ ಎಲ್ಲ ಪ್ರದೇಶಗಳನ್ನೂ ತನ್ನ ವಶಕ್ಕೆ ತೆಗೆದುಕೊಂಡನು. ಅವನು ಬ್ರಾಹ್ಮಣರಿಗೆ ದಾನ ಕೊಡುವುದರಲ್ಲಿ ಉದಾರನಾಗಿದ್ದನು. ಆದ್ದರಿಂದ ಭಗವಂತನು ಒಬ್ಬಯಾಚಕ ಬ್ರಾಹ್ಮಣನಂತೆ ವೇಷಧರಿಸಿ, ಬಲಿ ಮಹಾರಾಜನನ್ನು ಮೂರು ಹೆಜ್ಜೆ ಅಳತೆಯ ಭೂಮಿಯನ್ನು ಬೇಡಿದನು.
ಎಲ್ಲದರ ಪ್ರಭುವಾದ ಭಗವಂತನು ಬಲಿಮಹಾರಾಜನಿಂದ ಅವನ ವಶದಲ್ಲಿರುವ ಎಲ್ಲ ಭೂಮಿಯನ್ನೂ ಕಸಿದುಕೊಳ್ಳಬಹುದಿತ್ತು. ಆದರೆ ಅವೆಲ್ಲವೂ ರಾಜನು ತನ್ನ ಹಕ್ಕಿನಿಂದ ಗಳಿಸಿದ್ದಾದರಿಂದ ಹಾಗೆ ಮಾಡಲಿಲ್ಲ. ಭಗವಾನ್ ವಾಮನನು ಬಲಿಮಹಾರಾಜನನ್ನು ಅಂತಹ ಚಿಕ್ಕ ದಾನವನ್ನು ಬೇಡಿದಾಗ ಬಲಿಯ ಗುರುವಾದ ಶುಕ್ರಾಚಾರ್ಯನು, ವಾಮನ ದೇವನು ಯಾಚಕ ವೇಷದಲ್ಲಿರುವವನು ಸಾಕ್ಷಾತ್ ವಿಷ್ಣುವೇ ಎಂಬುದನ್ನು ತಿಳಿದಿದ್ದರಿಂದ ಈ ಪ್ರಸ್ತಾವವನ್ನು ಆಕ್ಷೇಪಿಸಿದನು.

ತನ್ನ ಬಳಿ ಯಾಚಿಸಲು ಬಂದಿರುವವನು ಸಾಕ್ಷಾತ್ ವಿಷ್ಣುವೇ ಎಂಬುದನ್ನು ತಿಳಿಯದ ಬಲಿಮಹಾರಾಜನು ತನ್ನ ಗುರುವಾದ ಶುಕ್ರಾಚಾರ್ಯರ ಆಜ್ಞೆಯನ್ನು ಪರಿಪಾಲಿಸಲು ಒಪ್ಪಲಿಲ್ಲ. ಅವನು ಕೂಡಲೇ ಬೇಡಿದ ಭೂಮಿಯನ್ನು ದಾನವಾಗಿ ಕೊಡಲು ಒಪ್ಪಿದನು. ಈ ಒಪ್ಪಂದದಂತೆ ಭಗವಾನ್ ವಾಮನನು ತನ್ನ ಮೊದಲ ಎರಡು ಹೆಜ್ಜೆಗಳಿಂದ ಬ್ರಹ್ಮಾಂಡದ ಎಲ್ಲ ಪ್ರದೇಶಗಳನ್ನು ಆವರಿಸಿದನು.
ಅನಂತರ ಬಲಿಮಹಾರಾಜನನ್ನು ತನ್ನ ಮೂರನೆಯ ಹೆಜ್ಜೆಯನ್ನು ಎಲ್ಲಿಡಲೆಂದು ಕೇಳಿದನು. ಬಲಿಮಹಾರಾಜನು ಭಗವಂತನ ಇನ್ನೊಂದು ಹೆಜ್ಜೆಯನ್ನು ತನ್ನ ತಲೆಯ ಮೇಲೆ ಧರಿಸಲು ಸಂತೋಷವಾಗಿ ಒಪ್ಪಿಕೊಂಡನು. ಹೀಗೆ ಬಲಿಮಹಾರಾಜನು, ತನ್ನ ಬಳಿಯಲ್ಲಿರುವ ಎಲ್ಲವನ್ನೂ ಕಳೆದುಕೊಳ್ಳುವ ಬದಲು, ಭಗವಂತನನ್ನು ಶಾಶ್ವತವಾಗಿ ತನ್ನ ಸಹಚರನನ್ನಾಗಿ ಮತ್ತು ದ್ವಾರಪಾಲಕನನ್ನಾಗಿ ಪಡೆಯಲು ಅದೃಷ್ಟ ಮಾಡಿದ್ದನು.
ಭಗವಂತನಿಗಾಗಿ ಒಬ್ಬನು ಎಲ್ಲವನ್ನೂ ಕೊಡುವುದರಿಂದ ಏನನ್ನೂ ಕಳೆದುಕೊಳ್ಳುವುದಿಲ್ಲ, ಅದರ ಬದಲಿಗೆ ಅವನು ಎಂದೆಂದಿಗೂ ನಿರೀಕ್ಷಿಸಲಾಗದಂತಹ ಎಲ್ಲವನ್ನೂ ಪಡೆದುಕೊಳ್ಳುತ್ತಾನೆ. (ಭಾಗವತ 2.7.17)
ವಾಮನ ತ್ರಿವಿಕ್ರಮ ದೇವಾಲಯಗಳು

ಭಗವಂತನ ಅವತಾರಗಳ ದೇವಾಲಯಗಳಲ್ಲಿ ಕೃಷ್ಣ ರಾಮ ಮಂದಿರಗಳಿಗೆ ಹೆಚ್ಚಿನ ಪ್ರಾಶಸ್ತ್ಯ. ಇವನ್ನು ಭಾರತದ ಉದ್ದಗಲಕ್ಕೂ ನೋಡಬಹುದು. ಇವೆರಡರ ಅನಂತರದ ಸ್ಥಾನ ನರಸಿಂಹ ದೇಗುಲಕ್ಕೆ. ದಕ್ಷಿಣ ಭಾರತದಲ್ಲಿಯಂತೂ ಸಾಕಷ್ಟು ಸಂಖ್ಯೆಯಲ್ಲಿ ನರಸಿಂಹ ಕ್ಷೇತ್ರಗಳಿವೆ.
ಇದರ ಅನಂತರ ವರಾಹಕ್ಷೇತ್ರಗಳನ್ನು ಹೆಸರಿಸಬಹುದಾದರೂ ಸಂಖ್ಯೆಯ ದೃಷ್ಟಿಯಿಂದ ಗಣನೀಯ ಪ್ರಮಾಣದಲ್ಲಿಲ್ಲವೆನ್ನಬಹುದು. ಇನ್ನು ವಾಮನ ದೇಗುಲಗಳಂತೂ ಅಪರೂಪವೇ ಸರಿ.
ಈ ಅಪರೂಪದ ದೇವಾಲಯಗಳಲ್ಲಿ ಪ್ರಖ್ಯಾತವಾದವೆಂದರೆ, ತಮಿಳುನಾಡಿನ ಕಂಚಿಪುರ ಬಳಿಯ ಉಳಗಳಂಡ ಪೆರುಮಾಳ್ ದೇವಾಲಯ, ಕೇರಳದ ಸುಮಾರು 13 ಶತಮಾನಗಳಷ್ಟು ಹಿಂದಿನ ತ್ರಿಕ್ಕಕಾರ ಅಥವಾ ತಿರುಕಲ್ಕರೈ ಹಾಗೂ ಮಧ್ಯಪ್ರದೇಶದ ಖಜುರಾಹೋದಲ್ಲಿನ 11ನೇ ಶತಮಾನದಲ್ಲಿ ನಿರ್ಮಿಸಲ್ಪಟ್ಟ ವಾಮನ ದೇವಾಲಯ.
ಉಳಗಳಂಡ ದೇವಾಲಯ
ಉಳಗಳಂಡ ಪೆರುಮಾಳ್ ದೇವಾಲಯವು ಪೆರಿಯ ಕಂಚೀಪುರದಲ್ಲಿದೆ. ಇದು ದಿವ್ಯದೇಶಗಳಲ್ಲೊಂದಾಗಿ ಪರಿಗಣಿತವಾಗಿದೆ. ಇಲ್ಲಿ ಭಗವಂತನು ತನ್ನ ತ್ರಿವಿಕ್ರಮ ರೂಪದಲ್ಲಿ ಮೂರ್ತೀಭವಿಸಿದ್ದಾನೆ. ತ್ರಿವಿಕ್ರಮನಾಗಿ ಆವಿರ್ಭವಿಸಿರುವ ಇತರ ದಿವ್ಯದೇಶಗಳು – ತಿರು ಊರಕಮ್ (ಕಂಚೀಪುರಮ್), ತಿರುಕೋವಿಲೂರ್, ಕಾಳಿಬೇರಾಮವಿನ್ನಹರಮ್ ಹಾಗೂ ತಿರುನೀರ್ಮಲೈ.
ಉಳಗಳ೦ಡ ದೇವಾಲಯದ ತ್ರಿವಿಕ್ರಮ ಮೂರ್ತಿಯು ಭವ್ಯ ಮನೋಹರವಾಗಿದ್ದು, ಸುಮಾರು 35 ಅಡಿ ಉದ್ದ ಹಾಗೂ 24 ಅಡಿ ಅಗಲವಿದೆ. ಪಶ್ಚಿಮಾಭಿಮುಖವಾಗಿ ನಿಂತ ತ್ರಿವಿಕ್ರಮನಿಲ್ಲಿ ಅಮೃತವಲ್ಲಿಯೊಂದಿಗೆ ಭಕ್ತರಿಗೆ ದರ್ಶನ ನೀಡುತ್ತಿದ್ದಾನೆ. ಭಗವಂತನು ಆಂಜನೇಯನಿಗೆ ತನ್ನ ವಾಮನ ಹಾಗೂ ತ್ರಿವಿಕ್ರಮ ರೂಪಗಳನ್ನು ಇಲ್ಲಿ ಪ್ರಕಟಗೊಳಿಸಿದನೆಂದು ಸ್ಥಳ ಪುರಾಣವು ಸಾರುತ್ತದೆ.
ಉಳಗಳಂಡ ದೇವಾಲಯದ ಆವರಣದ ಒಟ್ಟು ವಿಸ್ತೀರ್ಣವೇ ಸುಮಾರು 60 ಸಾವಿರ ಚದರ ಅಡಿಗಳಷ್ಟಿದೆ. ಎರಡು ಪ್ರಾಕಾರಗಳೂ ಮೂರು ಸುತ್ತಿನ ರಾಜಗೋಪುರವೂ ಇದ್ದು ವೈಭವದ ನಿರ್ಮಿತಿಯಿಂದ ಕೂಡಿದೆ. ತಿರುಮಂಗೈ ಆಳ್ವಾರರ ಪಾಶುರಗಳಲ್ಲಿ ವ್ಯಕ್ತವಾಗಿರುವಂತೆ, ನೀರಕಮ್, ಕಾರಕಮ್ ಹಾಗೂ ಕಾರ್ವಾಣಮ್ ದಿವ್ಯ ದೇಶಗಳು ಕೂಡ ಉಳಗಂಡ ಪೆರುಮಾಳ್ ದೇಗುಲ ( ಊರಕಮ್) ವ್ಯಾಪ್ತಿಯಲ್ಲಿವೆ.
ತ್ರಿಕ್ಕಕಾರ ದೇವಾಲಯ

ತ್ರಿಕ್ಕಕಾರ ದೇವಾಲಯ ಕೇರಳದ ಅತ್ಯಂತ ಪುರಾತನವಾದ ದೇವಾಲಯ. ತಮಿಳು ಶಂಗಮ್ ಕವಿಗಳು ಈ ದೇವಾಲಯದ ಓಣಮ್ ಆಚರಣೆಯ ವೈಭವವನ್ನು ಮೆಚ್ಚಿ ತಮ್ಮ ಕೃತಿಗಳಲ್ಲಿ ಶ್ಲಾಘಿಸಿದ್ದಾರೆ. ಇದು ‘ಮಲನಾಡು’ ಪ್ರಾಂತ್ಯದ 13 ದಿವ್ಯದೇಶಗಳಲ್ಲಿ ಒಂದಾಗಿದ್ದು, ನಮ್ಮಾಳ್ವಾರರಿಂದ ‘ತಿರುಕಲ್ಕರೈ’ ಎಂದು ಸುತ್ತಿಸಲ್ಪಟ್ಟಿದೆ.
ತ್ರಿಕ್ಕಕಾರದ ‘ವಾಮನ ಅಪ್ಪನ್’ ದೇಗುಲವು ವಿಶಾಲವಾಗಿದ್ದು, ಪ್ರಾಂಗಣದಲ್ಲಿ ಉಪದೇವತೆಗಳ ಸನ್ನಿಧಾನಗಳಿವೆ. ಈ ದೇವಾಲಯವು 9-10ನೇ ಶತಮಾನದಲ್ಲಿ ನಿರ್ಮಾಣಗೊಂಡಿರುವುದಾಗಿ ಕೆಲವು ದಾಖಲೆಗಳು ಸಾರುತ್ತವೆ. ಆದರೆ ಅನಂತರ ವೈಷ್ಣವ ದೇಗುಲಗಳ ಮೇಲೆ ನಡೆದ ನಿರಂತರ ಆಕ್ರಮಣಗಳಿಂದಾಗಿ ತ್ರಿಕ್ಕಕಾರ ದೇವಾಲಯದ ಅಧಿಷ್ಠಾನವೊಂದುಳಿದು ಉಳಿದೆಲ್ಲವೂ ನಾಶವಾಯಿತು.
ಮುಂದೆ ತ್ರಿವಾಂಕೂರಿನ ಮಹಾರಾಜರು ಅದನ್ನು ಪುನರ್ ನಿರ್ಮಿಸಿ ದೇವಾಲಯಕ್ಕೆ ಕಾಯಕಲ್ಪ ಒದಗಿಸಿದರು. ಇಂದು ನಾವು ನೋಡುವ ದೇಗುಲದ ವಾಸ್ತುಶಿಲ್ಪ ಇತ್ತೀಚಿನ ಶತಮಾನಗಳಿಗೆ ಸೇರಿದ್ದೆಂಬುದನ್ನು ಗಮನಿಸಬಹುದು.
ಕೇರಳಿಗರ ಸುಪ್ರಸಿದ್ಧ ಉತ್ಸವ ‘ಓಣಂ’ ಚಾಲನೆಗೊಂಡಿದ್ದು ತ್ರಿಕ್ಕಕಾರದಲ್ಲೇ. ಆತ್ಮನಿವೇದನ ಭಕ್ತಿಯ ಮಹಾಸಂಕೇತವಾಗಿರುವ ಬಲಿಚಕ್ರವರ್ತಿಯು ತನ್ನ ರಾಜ್ಯಕ್ಕೆ ಭೇಟಿ ನೀಡುವ ದಿನವೆಂದು ಇದನ್ನು ಆಚರಿಸಲಾಗುತ್ತದೆ.
ಮೊದಲು ತ್ರಿಕ್ಕಕಾರದ ವಾಮನ ದೇಗುಲದಲ್ಲಿ ವಿಜೃಂಭಣೆಯಿಂದ ನಡೆಯುತ್ತಿದ್ದ ಈ ಉತ್ಸವ ಮುಂದಿನ ದಿನಗಳಲ್ಲಿ ಪಂಥ, ಜಾತಿ, ವರ್ಗಗಳನ್ನು ಮೀರಿ ನಾಡ ಉತ್ಸವದಂತೆ ಪ್ರಚಲಿತವಾಯ್ತು. ಈ ನಿಟ್ಟಿನಲ್ಲಿ ಕೇರಳದ ಈ ಅಪರೂಪದ ವಾಮನ ದೇವಾಲಯವು ರಾಜ್ಯದ ಅಂತಃಸತ್ತ್ವದಂತೆಯೂ ಇದೆ.
ಖಜುರಾಹೋದ ವಾಮನ ದೇವಾಲಯ

ಮಧ್ಯಪ್ರದೇಶದ ಖಜರಾಹೋ ಗ್ರಾಮದ ಉತ್ತರ ಭಾಗದಲ್ಲಿ ಪಶ್ಚಿಮ ದೇಗುಲಗಳ ಸಮೂಹದಲ್ಲಿ ವಾಮನ ದೇವಾಲಯ ನಿರ್ಮಾಣಗೊಂಡಿದೆ. ಶಿಲಾಶಾಸನ ಹಾಗೂ ಭೂಗರ್ಭ ದಾಖಲೆಗಳು ಆಧಾರದಿಂದ ಈ ದೇವಾಲಯವು 10ನೇ ಶತಮಾನದಲ್ಲಿ ನಿರ್ಮಿಸಲಾಯಿತೆಂದು ಅಂದಾಜು ಮಾಡಲಾಗಿದೆ.
ಖಜುರಾಹೋದ ಇತರ ದೊಡ್ಡ ದೇಗುಲಗಳಂತೆ ವಾಮನ ದೇವಾಲಯ ಕೂಡ ಗರ್ಭಗುಡಿ, ಏಕಶಿಖರ ಹಾಗೂ ಮಹಾಮಂಟಪಗಳನ್ನೊಳಗೊಂಡಿದೆ. ಜಂಘ (ಗೋಡೆ) ದ ಮೂರನೆಯ ಸಾಲಿನಲ್ಲಿ ಕಟ್ಟುಗಳುಳ್ಳ ಗೂಡಿನಲ್ಲಿ ಶಿಲ್ಪಗಳ ಬದಲು ವಜ್ರಗಳನ್ನು ಹೊಂದಿರುವುದು ಈ ದೇಗುಲದ ಗಮನೀಯ ವೈಶಿಷ್ಟ್ಯ. ವಾಸ್ತು ವೈಭವದ ದೃಷ್ಟಿಯಿಂದ ಖಜುರಾಹೋದ ವಾಮನ ದೇಗುಲವು ಮಹತ್ತ್ವದ ಸ್ಥಾನ ಹೊಂದಿದೆ,






Leave a Reply