ಶ್ರೀಕೃಷ್ಣ ಪಾಕಶಾಲೆ
– ಶ್ರೀಮತಿ ಎಂ.ಅಹಲ್ಯ
ಸಿಹಿ ಅಮೃತ ಫಲ

ಬೇಕಾಗುವ ಪದಾರ್ಥಗಳು :
ಅಕ್ಕಿ – 250 ಗ್ರಾಂ
ಬೆಲ್ಲ – 250 ಗ್ರಾಂ
ತೆಂಗಿನಕಾಯಿತುರಿ – 1/2 ಭಾಗ
ಏಲಕ್ಕಿ – 2 (ಪುಡಿಮಾಡಿದ್ದು)
ತುಪ್ಪ – 5 ಅಥವಾ 6 ಟೀ ಸ್ಪೂನ್
ಮಾಡುವ ವಿಧಾನ : ಅಕ್ಕಿಯನ್ನು 3 ಗಂಟೆಗಳ ಕಾಲ ನೆನೆಸಬೇಕು. ಅನಂತರ ಅಕ್ಕಿ ಕಾಯಿತುರಿಯನ್ನು ರುಬ್ಬಬೇಕು. ನುಣ್ಣಗೆ ಆದ ಅನಂತರ ಬೆಲ್ಲದ ಪುಡಿ ಮತ್ತು ಏಲಕ್ಕಿ ಪುಡಿಯನ್ನು ಹಾಕಿ, ಹಿಟ್ಟನ್ನು ಸ್ವಲ್ಪ ತೆಳ್ಳಗೆ ಮಾಡಿಕೊಂಡು ದಪ್ಪ ತಳದ ಪಾತ್ರೆಯಲ್ಲಿ ಸಣ್ಣ ಉರಿಯಲ್ಲಿ ಕಲೆಸುತ್ತಿರಬೇಕು. ಕೈಗೆ ಅಂಟದಿದ್ದಾಗ ತುಪ್ಪ ಹಾಕಿ ಕಲೆಸಿ. ಅನಂತರ ತಟ್ಟೆಗೆ ತುಪ್ಪ ಸವರಿ ಹಿಟ್ಟನ್ನು ಹಾಕಿ ತಟ್ಟಬೇಕು. ಅನಂತರ ಬೇಕಾದ ಆಕಾರಕ್ಕೆ ಕತ್ತರಿಸಬಹುದು.
ಖಾರದ ಅಮೃತ ಫಲಗಳು

ಬೇಕಾಗುವ ಪದಾರ್ಥಗಳು :
ಅಕ್ಕಿ – 250 ಗ್ರಾಂ
ಕೆಂಪು ಮೆಣಸಿನಕಾಯಿ – 10-12
ತೆಂಗಿನಕಾಯಿ ತುರಿ – 3/4 ಭಾಗ
ಸಾಸಿವೆ – 1/4 ಚಿಕ್ಕ ಚಮಚ
ಕರಿಬೇವಿನ ಸೊಪ್ಪು- ಸ್ವಲ್ಪ
ಹಸಿಕಡ್ಲೆಕಾಯಿ ಬೀಜ – 1/2 ಹಿಡಿ
ಉಪ್ಪು – 1 ಟೀ ಚಮಚ
ಎಣ್ಣೆ – 6 ಟೀ ಚಮಚ
ಹುಣಸೇ ಹಣ್ಣು – 1 ಸಣ್ಣನಿಂಬೆ ಹಣ್ಣಿನ ಗಾತ್ರ
ಬೆಲ್ಲ – ಒಂದು ಸಣ್ಣ ಗೋಲಿಯ ಗಾತ್ರದಷ್ಟು
ಮಾಡುವ ವಿಧಾನ: ಅಕ್ಕಿಯನ್ನು 3 ಗಂಟೆಗಳ ಕಾಲ ನೆನೆಸಬೇಕು. ಅನಂತರ ಅಕ್ಕಿ, ಮೆಣಸಿನಕಾಯಿ, ಕಾಯಿತುರಿ, ಉಪ್ಪು, ಹುಣಸೇಹಣ್ಣನ್ನು ಸೇರಿಸಿ ನುಣ್ಣಗೆ ರುಬ್ಬಬೇಕು.
ರುಬ್ಬಿರುವುದಕ್ಕೆ ನೀರನ್ನು ಹಾಕಿ ತೆಳ್ಳಗೆ ಮಾಡಿಕೊಂಡು ದಪ್ಪ ತಳದ ಪಾತ್ರೆಯಲ್ಲಿ ಎಣ್ಣೆ, ಸಾಸಿವೆ, ಕರಿಬೇವಿನ ಸೊಪ್ಪು ಮತ್ತು ಕಡ್ಲೆಬೀಜವನ್ನು ಹಾಕಿ ಒಗ್ಗರಣೆ ಮಾಡಿದ ಅನಂತರ ಹಿಟ್ಟನ್ನು ಹಾಕಿ ಸಣ್ಣ ಉರಿಯಲ್ಲಿ ಕೈಬಿಡದೆ ಕಲೆಸುತ್ತಿರಬೇಕು. ಗಟ್ಟಿಯಾದಾಗ ಕೈಗೆ ಅಂಟದಿದ್ದಾಗ ತಟ್ಟೆಗೆತುಪ್ಪ ಸವರಿ ಹಿಟ್ಟನ್ನು ಹಾಕಿ ತಟ್ಟಬೇಕು. ಅನಂತರ ಬೇಕಾದ ಆಕಾರಕ್ಕೆ ಕತ್ತರಿಸಬಹುದು.
ವಿಧಾನ 2.
ಬೇಕಾಗುವ ಪದಾರ್ಥಗಳು :
ಅಕ್ಕಿ – 250 ಗ್ರಾಂ
ಹುಳಿ ಮಜ್ಜಿಗೆ -1 ದೊಡ್ಡ ಬಟ್ಟಲು
ಹಸಿಮೆಣಸಿನಕಾಯಿ – 10
ಉಪ್ಪು – 1 ಟೀ ಚಮಚ
ತೆಂಗಿನ ತುರಿ – 1/2 ಭಾಗ
ಎಣ್ಣೆ – 6 ಟೀ ಚಮಚ
ಸಾಸಿವೆ – 1/4 ಟೀ ಚಮಚ
ಕರಿಬೇವಿನ ಸೊಪ್ಪು- ಸ್ವಲ್ಪ
ಮಾಡುವ ವಿಧಾನ : ಅಕ್ಕಿಯನ್ನು 3 ಗಂಟೆಗಳ ಕಾಲ ನೆನೆಸಬೇಕು. ನೆನೆಸಿದ ಅಕ್ಕಿಗೆ ಕಾಯಿತುರಿ, ಹಸಿಮೆಣಸಿನಕಾಯಿ ಮತ್ತು ಉಪ್ಪನ್ನು ಹಾಕಿ ನುಣ್ಣಗೆ ರುಬ್ಬಬೇಕು. ಸ್ವಲ್ಪ ನೀರಾಗಿ ಹಿಟ್ಟನ್ನು ಕಲೆಸಿ, ದಪ್ಪತಳದ ಪಾತ್ರೆಗೆ ಎಣ್ಣೆ ಸಾಸಿವೆ,ಕರಿಬೇವಿನ ಸೊಪ್ಪನ್ನು ಹಾಕಿ ಒಗ್ಗರಣೆ ಮಾಡಿ. ತಯಾರಾದ ಹಿಟ್ಟನ್ನು ಹಾಕಿ ಸಣ್ಣ ಉರಿಯಲ್ಲಿ ಕೈ ಬಿಡದೆ ಕಲೆಸುತ್ತಿರಬೇಕು. ಕೈಗೆ ಅಂಟದಿದ್ದಾಗ ತಟ್ಟೆಗೆ ಹಾಕಿ ತುಪ್ಪ ಸವರಿ ಮತ್ತು ಬೇಕಾದಆಕೃತಿಗೆ ಕತ್ತರಿಸಿಕೊಳ್ಳಬಹುದು.
ಅಕ್ಕಿ ಹಿಟ್ಟಿನ ಖಾರದ ಅಮೃತ ಫಲ

ಬೇಕಾಗುವ ಪದಾರ್ಥಗಳು :
ಅಕ್ಕಿಹಿಟ್ಟು – 250 ಗ್ರಾಂ
ಹುಳಿಮಜ್ಜಿಗೆ – 3/4 ಲೋಟ
ಸಾಸಿವೆ – 1/4 ಚಿಕ್ಕ ಚಮಚ
ಕರಿಬೇವಿನ ಸೊಪ್ಪು- ಸ್ವಲ್ಪ
ಉಪ್ಪು – 1 ಟೀ ಚಮಚ
ಎಣ್ಣೆ- 6 ಟೀ ಚಮಚ
ಕಡ್ಲೆಕಾಯಿ ಬೀಜ – 1/2 ಹಿಡಿ
ಕಾಯಿತುರಿ – 4 ಚಮಚ
ಉದ್ದಕ್ಕೆ ಹೆಚ್ಚಿರುವ – 10 ಹಸಿಮೆಣಸಿನ ಕಾಯಿ
ಮಾಡುವ ವಿಧಾನ : ಅಕ್ಕಿ ಹಿಟ್ಟಿಗೆ ಮಜ್ಜಿಗೆ, ಉಪ್ಪು ಮತ್ತು ಕಾಯಿತುರಿಯನ್ನು ಸೇರಿಸಿ ತೆಳ್ಳಗೆ ನೀರನ್ನು ಹಾಕಿ ಬೆರೆಸಿ. ದಪ್ಪತಳದ ಪಾತ್ರೆಗೆ ಎಣ್ಣೆ ಸಾಸಿವೆ, ಕರಿಬೇವಿನ ಸೊಪ್ಪು, ಕಡ್ಲೆಬೀಜ, ಹೆಚ್ಚಿರುವ ಹಸಿಮೆಣಸಿನಕಾಯಿಯನ್ನು ಹಾಕಿ ಒಗ್ಗರಣೆ ಮಾಡಿ, ಅನಂತರ ಹಿಟ್ಟನ್ನು ಹಾಕಿ ಸಣ್ಣ ಉರಿಯಲ್ಲಿ ಕೈ ಬಿಡದೆ ಕಲೆಸುತ್ತಿರಬೇಕು. ಕೈಗೆ ಅಂಟದಿದ್ದಾಗ ತಟ್ಟೆಗೆ ತುಪ್ಪ ಸವರಿ ಹಿಟ್ಟನ್ನು ಹಾಕಿ ತಟ್ಟಬೇಕು. ಎಲ್ಲ ತಿನಿಸುಗಳನ್ನು ರಾಧಾಕೃಷ್ಣರಿಗೆ ಅರ್ಪಿಸಿ ಎಲ್ಲರೂ ಸೇವಿಸಿರಿ.






Leave a Reply