ಪೃಥಾ

ಭಾಗವತದ ಪಾತ್ರ ಪರಿಚಯ : ಮಾನಿನಿಯರು

(ಆಧಾರ – ಶ್ರೀ ಶ್ರೀಮದ್‌ ಎ.ಸಿ.ಭಕ್ತಿವೇದಾಂತ ಸ್ವಾಮಿ ಪ್ರಭುಪಾದರ ಭಾವಾರ್ಥಗಳು; ಭಾಗವತ ಪ್ರಥಮ ಸ್ಕಂಧ; 13ನೇ ಅಧ್ಯಾಯ)

ಮಹಾರಾಜ ಶೂರಸೇನನ ಮಗಳು ಮತ್ತು ಭಗವಾನ್ ಕೃಷ್ಣನ ತಂದೆಯಾದ ವಸುದೇವನ ಸೋದರಿ. ಆಮೇಲೆ ಅವಳನ್ನು ಮಹಾರಾಜ ಕುಂತೀಭೋಜನು ದತ್ತು ಸ್ವೀಕರಿಸಿದನು. ಆದ್ದರಿಂದ ಅವಳನ್ನು ಕುಂತಿ ಎಂದು ಕರೆಯಲಾಯಿತು. ಅವಳು ದೇವೋತ್ತಮಪುರುಷನ ವಿಜಯ ಶಕ್ತಿಯ ಅವತಾರ.

ಸ್ವರ್ಗನಿವಾಸಿಗಳು ಊರ್ಧ್ವ ಲೋಕದಿಂದ ಬಂದು ರಾಜನಾದ ಕುಂತೀಭೋಜನ ಅರಮನೆಗೆ ಭೇಟಿ ನೀಡುತ್ತಿದ್ದರು. ಕುಂತಿಯನ್ನು ಅವರ ಸ್ವಾಗತ- ಸತ್ಕಾರದಲ್ಲಿ ತೊಡಗಿಸಲಾಗಿತ್ತು. ಅವಳು ಮಹಾ ಹಠಯೋಗಿಯಾದ ದೂರ್ವಾಸರ ಸೇವೆಯನ್ನೂ ಮಾಡಿದಳು.

ಅವಳ ವಿಶ್ವಾಸಪೂರ್ಣ ಸೇವೆಯಿಂದ ಸಂತೃಪ್ತನಾದ ದುರ್ವಾಸ ಮುನಿ ಆಕೆಗೆ ಮಂತ್ರವನ್ನು ಕೊಟ್ಟನು. ಅದರಿಂದ ಅವಳು ಮೆಚ್ಚಿದ ಯಾವುದೇ ದೇವತೆಯನ್ನು ಕರೆಯುವುದು ಅವಳಿಗೆ ಸಾಧ್ಯವಾಗಿತ್ತು. ಅವಳು ಕೇವಲ ಕುತೂಹಲಕ್ಕಾಗಿ ಒಮ್ಮೆ ಸೂರ್ಯದೇವನನ್ನು ಕರೆದಳು.

ಸೂರ್ಯದೇವನು ಅವಳೊಡನೆ ಮೈಥುನವನ್ನು ಬಯಸಿದನು. ಆದರೆ ಅವಳು ನಿರಾಕರಿಸಿದಳು. ಅವಳ ಕನ್ಯಾವಸ್ಥೆಗೆ ಇದರಿಂದ ಭಂಗಬಾರದೆಂದು ಸೂರ್ಯದೇವ ಆಶ್ವಾಸನೆ ಇತ್ತಿದ್ದರಿಂದ ಅವಳು ಅವನ ಬೇಡಿಕೆಯನ್ನು ಮನ್ನಿಸಿದಳು. ಮೈಥುನದ ಫಲವಾಗಿ ಆಕೆ ಬಸುರಿಯಾದಳು.

ಆಕೆಯಿಂದ ಕರ್ಣ ಜನಿಸಿದ. ಸೂರ್ಯನ ಕೃಪೆಯಿಂದ ಆಕೆ ಕನ್ಯೆಯಾಗಿಯೇ ಉಳಿದಳು, ಆದರೆ ತನ್ನ ಪಾಲಕರಿಗೆ ಹೆದರಿ, ಆಗ ತಾನೆ ಜನಿಸಿದ ಮಗು ಕರ್ಣನನ್ನು ತೊರೆದಳು. ಆಮೇಲೆ ಸ್ವಯಂವರದಲ್ಲಿ ಅವಳು ಪಾಂಡುವನ್ನು ತನ್ನ ಪತಿಯಾಗಿ ವರಿಸಿದಳು.

ಕಾಲಾಂತರದಲ್ಲಿ ಪಾಂಡು ಮಹಾರಾಜ ಗೃಹಸ್ಥ ಜೀವನದಿಂದ ನಿವೃತ್ತನಾಗಬಯಸಿದ; ಸಂನ್ಯಾಸಾಶ್ರಮವನ್ನು ಸ್ವೀಕರಿಸಿದ. ತನ್ನ ಗಂಡನ ಆ ಆಶ್ರಮ ಸ್ವೀಕಾರವನ್ನು ಕುಂತಿ ನಿರಾಕರಿಸಿದಳು. ಆದರೆ ಅಂತಿಮವಾಗಿ ಪಾಂಡು ಮಹಾರಾಜನು, ಅನುರೂಪರಾದ ಪರಪುರುಷರನ್ನು ಆಹ್ವಾನಿಸಿ ಪುತ್ರವತಿಯಾಗಲು ಕುಂತಿಗೆ ಅನುಮತಿಯಿತ್ತನು.

ಈ ಪ್ರಸ್ತಾವವನ್ನು ಕುಂತಿ ಮೊದಲಿಗೆ ಒಪ್ಪಿಕೊಳ್ಳಲಿಲ್ಲ. ಆದರೆ ಪಾಂಡು ಪರಿಸ್ಫುಟವಾದ ನಿದರ್ಶನಗಳನ್ನು ಕೊಟ್ಟಾಗ ಆಕೆ ಒಪ್ಪಿದಳು. ಹೀಗೆ ಅವಳು, ದುರ್ವಾಸ ಮುನಿ ನೀಡಿದ ಮಂತ್ರದ ಪ್ರಭಾವದಿಂದ ಯಮಧರ್ಮರಾಜನನ್ನು ಆಹ್ವಾನಿಸಿದಳು. ಆಗ ಯುಧಿಷ್ಠಿರ ಹುಟ್ಟಿದ.

ವಾಯುದೇವನನ್ನು ಆಹ್ವಾನಿಸಿದಳು. ಆಗ ಭೀಮ ಜನಿಸಿದ. ಸ್ವರ್ಗಾಧಿಪತಿಯಾದ ಇಂದ್ರನನ್ನು ಆಹ್ವಾನಿಸಿದಳು. ಆಗ ಅರ್ಜುನ ಹುಟ್ಟಿದ. ಪಾಂಡುವು ಆಶ್ವಿನೀಕುಮಾರರ ಮೂಲಕ ಮಾದ್ರಿಯ ಬಸಿರಿನಿಂದ ನಕುಲ – ಸಹದೇವರೆಂಬ ಇನ್ನಿಬ್ಬರು ಮಕ್ಕಳನ್ನು ಪಡೆದನು.

ಕಾಲಾಂತರದಲ್ಲಿ ಪಾಂಡು ಮಹಾರಾಜ ಎಳೆಯ ವಯಸ್ಸಿನಲ್ಲೇ ಸತ್ತುಹೋದನು. ಅದರಿಂದ ಕುಂತಿ ತುಂಬ ದುಃಖಿತಳಾಗಿ ಮೂರ್ಛೆ ಹೋದಳು.

ಅಪ್ರಾಪ್ತವಯಸ್ಸಿನ ಈ ಪಂಚ ಪಾಂಡವರನ್ನು ಸಾಕಿ ಸಲಹಲು ಕುಂತಿ ಬದುಕಿರಬೇಕೆಂದೂ, ಕಿರಿಯಳಾದ ಮಾದ್ರಿ ಪತಿಯೊಂದಿಗೆ ತಾನೂ ಸತ್ತು ಸತಿ ಪದ್ಧತಿಯನ್ನು ಸ್ವೀಕಾರಮಾಡಬೇಕೆಂದೂ ಈ ಸವತಿಯರಾದ ಕುಂತಿ ಮಾದ್ರಿಯರು ನಿರ್ಧರಿಸಿದರು. ಆ ಸಂದರ್ಭದಲ್ಲಿ ಅಲ್ಲಿ ಉಪಸ್ಥಿತರಿದ್ದ ಶತಶೃಂಗಾದಿ ಮಹರ್ಷಿಗಳು ಈ ಒಪ್ಪಂದವನ್ನು ಅನುಮೋದಿಸಿದರು.

ಕೆಲವು ಕಾಲದ ಬಳಿಕ ದುರ್ಯೋಧನನು ಒಳಸಂಚು ಹೂಡಿ ಪಾಂಡವರನ್ನು ರಾಜ್ಯದಿಂದ ಹೊರಗಟ್ಟಿದನು. ಆಗ ಕುಂತಿ ತನ್ನ ಮಕ್ಕಳನ್ನು ಹಿಂಬಾಲಿಸಿದಳು; ಆ ದಿನಗಳಲ್ಲಿ ಎಲ್ಲ ಬಗೆಯ ಕಷ್ಟಕೋಟಲೆಗಳನ್ನು ತಾನೂ ಸಹಿಸಿದಳು. ವನವಾಸದ ಆ ದಿನಗಳಲ್ಲಿ ಹಿಡಿಂಬೆಯೆಂಬ ರಾಕ್ಷಸ ಕನ್ಯೆ, ಭೀಮನು ತನ್ನ ಗಂಡನಾಗಬೇಕೆಂದು ಬಯಸಿದಳು.

ಭೀಮ ನಿರಾಕರಿಸಿದ; ಆದರೆ ಆ ಹುಡುಗಿ ಕುಂತಿ ಮತ್ತು ಯುಧಿಷ್ಠಿರರನ್ನು ಸಂಪರ್ಕಿಸಿದಳು. ಅವಳ ಕೋರಿಕೆಯನ್ನು ಮನ್ನಿಸಿ ಅವಳಿಗೆ ಒಂದು ಮಗುವನ್ನು ಕರುಣಿಸಬೇಕೆಂದು, ಅವರು ಭೀಮನಿಗೆ ಆಜ್ಞಾಪಿಸಿದರು.

ಈ ಸಂಯೋಗದ ಫಲವಾಗಿ ಘಟೋತ್ಕಚ ಜನಿಸಿದ. ಆತ ಮುಂದೆ ಅತಿ ಶೂರತನದಿಂದ ತನ್ನ ತಂದೆಯೊಂದಿಗೆ ಕೌರವರಿಗೆದುರಾಗಿ ಹೋರಾಡಿದ. ವನವಾಸದ ದಿನಗಳಲ್ಲಿ ಪಾಂಡವರು ಬ್ರಾಹ್ಮಣ ಕುಟುಂಬವೊಂದರ ಜೊತೆ ವಾಸವಾಗಿದ್ದರು. ಬಕಾಸುರನೆಂಬ ರಾಕ್ಷಸನಿಂದಾಗಿ ಆ ಕುಟುಂಬ ಸಂಕಟಕ್ಕೆ ಸಿಲುಕಿತ್ತು.

ಆ ರಾಕ್ಷಸನ ಉಪಟಳದಿಂದ ಬ್ರಾಹ್ಮಣ ಕುಟುಂಬವನ್ನು ಪಾರು ಮಾಡಲು ಬಕಾಸುರನನ್ನು ಕೊಲ್ಲುವಂತೆ ಕುಂತಿಯು ಭೀಮನಿಗೆ ಅಪ್ಪಣೆ ಮಾಡಿದಳು. ಪಾಂಚಾಲ ದೇಶಕ್ಕೆ ಹೊರಡುವಂತೆ ಯುಧಿಷ್ಠಿರನಿಗೆ ಸಲಹೆಯಿತ್ತಳು.

ಪಾಂಚಾಲ ದೇಶದಲ್ಲಿ ಅರ್ಜುನನು ದ್ರೌಪದಿಯನ್ನು ಪಡೆದನು; ಆದರೆ ಕುಂತಿಯ ಆದೇಶದ ಮೇರೆಗೆ ಐದೂ ಜನ ಪಾಂಡವ ಸೋದರರು ಸಮನಾಗಿ ದ್ರೌಪದಿ ಅಥವಾ ಪಾಂಚಾಲಿಯ ಗಂಡಂದಿರಾದರು. ಪಂಚ ಪಾಂಡವರು ವ್ಯಾಸ ಮಹರ್ಷಿಗಳ ಸಾನ್ನಿಧ್ಯದಲ್ಲಿ ದ್ರೌಪದಿಯನ್ನು ಮದುವೆಯಾದರು.

ಕುಂತೀದೇವಿ ತನ್ನ ಮೊದಲ ಮಗು ಕರ್ಣನನ್ನು ಎಂದೂ ಮರೆಯಲಿಲ್ಲ. ಕುರುಕ್ಷೇತ್ರ ಯುದ್ಧದಲ್ಲಿ ಕರ್ಣ ಮಡಿದ ಬಳಿಕ ಆಕೆ ಬಹುವಾಗಿ ದುಃಖಿಸಿದಳು. ಅಲ್ಲದೆ, ಪಾಂಡು ಮಹಾರಾಜನನ್ನು ಮದುವೆಯಾಗುವುದಕ್ಕೆ ಮೊದಲೇ ಕರ್ಣ ಅವಳಿಗೆ ಹುಟ್ಟಿದ ಹಿರಿಯ ಮಗನೆಂದು, ಆಕೆ ತನ್ನ ಇತರ ಮಕ್ಕಳ ಮುಂದೆ ಒಪ್ಪಿಕೊಂಡಳು.

ಕುರುಕ್ಷೇತ್ರದ ಯುದ್ಧ ಮುಗಿದ ಬಳಿಕ ಭಗವಾನ್ ಕೃಷ್ಣನು ಮರಳಿ ಮನೆಗೆ ಹೊರಟಾಗ, ಆಕೆ ಭಗವಂತನಲ್ಲಿ ಮಾಡಿಕೊಂಡ ಪ್ರಾರ್ಥನೆ ಅತ್ಯುತ್ಕೃಷ್ಟವಾಗಿ ಪ್ರಕಟವಾಗಿದೆ. ಕೊನೆಗೆ ಅವಳು ಘೋರ ತಪಸ್ಸಿಗಾಗಿ ಗಾಂಧಾರಿಯೊಂದಿಗೆ ಕಾಡಿಗೆ ಹೋದಳು.

ಪ್ರತಿ ಮೂವತ್ತು ದಿನಗಳಿಗೊಮ್ಮೆ ಆಹಾರವನ್ನು ಸೇವಿಸುತ್ತಿದ್ದಳು. ಅವಳ ಅಂತ್ಯಕಾಲದಲ್ಲಿ ಆಕೆ ಆಳವಾದ ಧ್ಯಾನದಲ್ಲಿ ಮಗ್ನಳಾಗಿ ಕುಳಿತಿದ್ದಾಗ ಕಾಳ್ಗಿಚ್ಚಿನಲ್ಲಿ ಉರಿದು ಬೂದಿಯಾದಳು.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi