ಪ್ರಗತಿ ಸಾಧಿಸುವುದು

ಶ್ರೀ ಶ್ರೀಮದ್‌ ಎ.ಸಿ.ಭಕ್ತವೇದಾಂತ ಸ್ವಾಮಿ ಪ್ರಭುಪಾದರು 12 ನೇ ಜುಲೈ 1975 ರಂದು ಫಿಲಿಡೆಲ್ಫಿಯಾದಲ್ಲಿ ನೀಡಿದ ಪ್ರವಚನ.

– ಅನುವಾದ : ಡಾ. ಕೆ.ವೈ. ಬಾಲರಾಜ್

ಸ ಏವಂ ವರ್ತಮಾನೋಽಜ್ಞೋ ಮೃತ್ಯುಕಾಲ ಉಪಸ್ಥಿತೇ ।

ಮತಿಂ ಚಕಾರ ತನಯೇ ಬಾಲೆ ನಾರಾಯಣಾಹ್ವಯೇ ||

“ಮೂರ್ಖನಾದ ಅಜಾಮಿಳನಿಗೆ ಮೃತ್ಯುಕಾಲ ಸನ್ನಿಹಿತವಾದಾಗ, ಬೇರೆಲ್ಲವನ್ನೂ ಬಿಟ್ಟು ತನ್ನ ಮಗ ನಾರಾಯಣನನ್ನೇ ಕುರಿತು ಯೋಚಿಸಲು ಆರಂಭಿಸಿದ.’ (ಶ್ರೀಮದ್ ಭಾಗವತಮ್ 6-1-27)

ಈ ಭೌತಿಕ ಜಗತ್ತಿನಲ್ಲಿ ಎಲ್ಲರೂ ಕೆಲವು ಅಧೀನತೆಗಳಿಗೆ ಒಳಪಟ್ಟಿದ್ದಾರೆ. ಖಂಡಿತವಾಗಿಯು ನಾನು ಯಾವುದೋ ಪ್ರಜ್ಞೆಯಲ್ಲಿದ್ದೇನೆ, ನೀವು ಕೂಡ ಯಾವುದೋ ಒಂದು ಪ್ರಜ್ಞೆಯಲ್ಲಿದ್ದೀರಿ. ಪ್ರಕೃತಿಯ ಗುಣಗಳಿಗೆ ಅನುಸಾರವಾಗಿ ನಮಗೆ ಜೀವನದ ಬಗ್ಗೆ ವಿಭಿನ್ನ ಕಲ್ಪನೆಗಳಿವೆ ಮತ್ತು ವಿಭಿನ್ನ ರೀತಿಯ ಪ್ರಜ್ಞೆಗಳಿವೆ. ಅದುವೇ ಐಹಿಕ ಜೀವನ.

ಸಾಮಾನ್ಯವಾಗಿ ಐಹಿಕವಾದಿಗಳು ಇಂದ್ರಿಯ ತೃಪ್ತಿಗಾಗಿಯೇ ತಮ್ಮ ಜೀವನವಿದೆಯೆ೦ದು ತಿಳಿಯುತ್ತಾರೆ. ಎಲ್ಲರೂ, “ನಾನು ಈ ರೀತಿ ಬಾಳುತ್ತೇನೆ,” “ನಾನು ಹಣವನ್ನು ಈ ರೀತಿ ಗಳಿಸುತ್ತೇನೆ, ನಾನು ಈ ರೀತಿ ಸುಖವನ್ನು ಪಡೆಯುತ್ತೇನೆ” ಎಂದು ಯೋಜನೆ ಹಾಕುತ್ತಿರುತ್ತಾರೆ. ಎಲ್ಲರಲ್ಲಿಯೂ ಇಂದ್ರಿಯ ತೃಪ್ತಿಗಾಗಿಯೇ ಒಂದು ಯೋಜನೆ ಇದೆ.

ಅದೇ ರೀತಿಯಾಗಿ ಅಜಾಮಿಳನಿಗೂ ಒಂದು ಯೋಜನೆ ಇತ್ತು. ಅದು ಏನು? ಅವನ ಯೋಜನೆ ಏನಾಗಿತ್ತೆಂದರೆ ಅವನಿಗೆ ತನ್ನ ಕಿರಿಯ ಮಗನ ಮೇಲೆ ವಿಪರೀತ ಮಮಕಾರವಿತ್ತು. ಅವನ ಪೂರ್ಣ ಗಮನ ತನ್ನ ಮಗು ಹೇಗೆ ನಡೆಯುತ್ತಾನೆ, ಹೇಗೆ ಊಟ ಮಾಡುತ್ತಾನೆ, ಹೇಗೆ ಮಾತನಾಡುತ್ತಾನೆ ಎಂಬುದರ ಬಗ್ಗೆಯೇ ಇತ್ತು. ಅಜಾಮಿಳನ ಮನಸ್ಸು ಕೂಡ ತನ್ನ ಮಗನನ್ನು ಕರೆಯುವುದು, ಊಟಮಾಡುವುದು, ಇಂಥಹ ಐಹಿಕ ಚಟುವಟಿಕೆಗಳಲ್ಲಿಯೇ ಮುಳುಗುತ್ತಿತ್ತು.

ಕೇವಲ ಅಜಾಮಿಳ ಒಬ್ಬನೇ ಅಲ್ಲ, ಇಲ್ಲಿ ಎಲ್ಲರೂ ಕೆಲವು ರೀತಿಯ ತಮ್ಮ ತಮ್ಮ ಪ್ರಜ್ಞೆಯಲ್ಲಿ ಮುಳುಗಿರುತ್ತಾರೆ. ಅಂತಹ ಪ್ರಜ್ಞೆಗೆ ಕಾರಣವೇನು? ಅದು ಹೇಗೆ ಬೆಳೆಯುತ್ತದೆ? ಹಿಂದಿನ ಶ್ಲೋಕದಲ್ಲಿ ವಿವರಿಸಿದಂತೆ ಆಜಾಮಿಳನು ತನ್ನ ಗಾಢವಾದ ಮಮಕಾರದಿಂದ ತನ್ನ ಮಗನ ಚಟುವಟಿಕೆಗಳಲ್ಲಿಯೇ ಮುಳುಗಿ ಹೋಗಿದ್ದನು. ನಾವು ಯಾವುದೋ ಒಂದು ರೀತಿಯಲ್ಲಿ ಸುಖಪಡಲು ಯೋಚಿಸುತ್ತೇವೆ. ಪರಮಪ್ರಭು ಕೃಷ್ಣ ಅದಕ್ಕೆ ತಕ್ಕಂತಹ ದೇಹ ಅಥವಾ ಯಂತ್ರವನ್ನು ನಮಗೆ ಕೊಡುತ್ತಾನೆ.

ಉದಾಹರಣೆಗಾಗಿ, ಅಮೆರಿಕದಲ್ಲಿ ಕಾರುಗಳ ಬೇರೆ ಬೇರೆ ನಮೂನೆಗಳಿವೆ. ಕೆಲವರಿಗೆ ಬ್ಯೂಕ್ ಕಾರ್ ಬೇಕು. ಕೆಲವರಿಗೆ ಚೆವ್ರೋಲೆಟ್ ಕಾರ್ ಬೇಕು, ಮತ್ತೆ ಕೆಲವರಿಗೆ ಫೋರ್ಡ್ ಕಾರ್ ಬೇಕು. ಅದೇ ರೀತಿಯಾಗಿ ನಮ್ಮ ದೇಹ ಕೂಡ ಒಂದು ಮೋಟಾರ್ ಕಾರಿನಂತೆ ಇದೆ. ಕೆಲವರು ಫೋರ್ಡ್, ಕೆಲವರು ಚೆವ್ರೋಲೆಟ್, ಕೆಲವರು ಬ್ಯೂಕ್ ಆಗಿರುತ್ತಾರೆ.

ಕೃಷ್ಣನು ನಮಗೆ ಸುಖ, ಸಂತೋಷ ಪಡೆಯಲು ಅವಕಾಶ ನೀಡಿದ್ದಾನೆ. ಅವನು ಹೇಳುತ್ತಾನೆ – “ನಿಮಗೆ ಈ ರೀತಿಯ ಕಾರು’ ಅಥವಾ ‘ದೇಹ’ ಬೇಕಾ? ಕುಳಿತುಕೊಳ್ಳಿ ಮತ್ತು ಸಂತೋಷಪಡಿ,” ಇದು ನಮ್ಮ ಐಹಿಕ ಸ್ಥಿತಿ. ನಾವು ನಮ್ಮ ಈ ಐಹಿಕ ದೇಹ ಬದಲಾವಣೆಯಾದನಂತರ ಏನನ್ನು ಬಯಸಿದ್ದೆವು ಎಂಬುದನ್ನೇ ಮರೆಯುತ್ತಿದ್ದೇವೆ.

ನಾವು ಏಕೆ ಈ ಪ್ರಸ್ತುತ ದೇಹವನ್ನು ಪಡೆದಿದ್ದೇವೆ ಎಂಬುದನ್ನು ಕೂಡ ಮರೆಯುತ್ತೇವೆ. ಆದರೆ ಕೃಷ್ಣನು ನಮ್ಮ ಹೃದಯದಲ್ಲಿಯೇ ನೆಲೆಸುವುದರಿಂದ ಅದನ್ನು ಅವನು ಮರೆಯುವುದಿಲ್ಲ. ನಮಗೆ ಏನು ಬೇಕಾಗಿದೆಯೋ ಅದನ್ನೇ ಅವನು ಕೊಡುತ್ತಾನೆ.

ಕೃಷ್ಣ ಬಹಳ ಕರುಣಾಮಯಿ ಯಾರಿಗಾದರೂ ಎಲ್ಲ ರೀತಿಯ ಹೊಲಸನ್ನು ತಿನ್ನಬೇಕೆನಿಸುತ್ತದೆಯೋ ಕೃಷ್ಣನು ಅಂಥವರಿಗೆ ಹಂದಿಯ ದೇಹವನ್ನು ಕೊಡುತ್ತಾನೆ. ಆಗ ಅವನು ಮಲವನ್ನು ಕೂಡ ತಿನ್ನಬಹುದು. ಯಾರಿಗೆ ಕೃಷ್ಣನೊಂದಿಗೆ ನರ್ತಿಸುವ ದೇಹಬೇಕೋ ಅಂಥವನಿಗೆ ಅದೇ ರೀತಿಯ ದೇಹ ಸಿಗುತ್ತದೆ. ಕೃಷ್ಣನೊಂದಿಗೆ ನರ್ತಿಸುವ, ಮಾತನಾಡುವ, ಆಟವಾಡುವ ದೇಹಬೇಕೋ ಅಥವಾ ಮಲಮೂತ್ರವನ್ನು ತಿನ್ನುವ, ದೇಹ ಬೇಕೋ? ಆಯ್ಕೆ ನಿಮ್ಮದೇ, ಮಾನವ ಜೀವನದಲ್ಲಿಯೇ ಈ ಪ್ರಶ್ನೆಗೆ ಉತ್ತರವನ್ನು ನಾವು ಕೊಡಬೇಕು.

ನೀವು ಹೇಳಬಹುದು, “ನನಗೆ ಮುಂದಿನ ಜನ್ಮದಲ್ಲಿ ನಂಬಿಕೆಯಿಲ್ಲ”. ಆದರೆ ಪ್ರಕೃತಿಯ ನಿಯಮ ತನ್ನ ಕಾರ್ಯವನ್ನು ಮಾಡೇ ಮಾಡುತ್ತದೆ. ಕರ್ಮಣಾ ದೈವ ನೇತ್ರೇಣ – ಈ ಜನ್ಮದಲ್ಲಿ ನೀವು ಹೇಗೆ ಕಾರ್ಯ ಮಾಡುತ್ತೀರೋ ಮುಂದಿನ ಜನ್ಮಕ್ಕೆ ಬೇಕಾದ ದೇಹವನ್ನು ತಯಾರಿಸುತ್ತಿದ್ದೀರಿ ಎಂದರ್ಥ. ನಿಮಗೆ ಈ ದೇಹ ನಾಶವಾದ ಕೂಡಲೇ ನಿಮಗೆ ಇನ್ನೊಂದು ದೇಹ ಸಿಗುತ್ತದೆ.

ಅಜಾಮಿಳನು ತನ್ನ ಮಗನ ಆರೈಕೆ ಮಾಡುತ್ತಿದ್ದನು. ಅವನ ಪೂರ್ಣ ಮನಸ್ಸು ಅವನ ಮಗುವಿನ ಬಗ್ಗೆಯೇ ಮುಳುಗಿಹೋಗಿತ್ತು. ಆದ್ದರಿಂದ ಅವನನ್ನು ಮೂಢ ಎಂದು ವಿವರಿಸಲಾಗಿದೆ. ಅಜಾಮಿಳನಂತೆ ನಾವು ಕೂಡ ಮೃತ್ಯು ಕಾಲವನ್ನು ಮರೆಯುತ್ತಿದ್ದೇವೆ. ಇದೇ ನಮ್ಮ ಅಪರಿಪೂರ್ಣತೆ.

ಅಜಾಮಿಳನು ಮಮಕಾರದ ತಂದೆಯಾಗಿ ಎಷ್ಟು ಬಿಡುವಿಲ್ಲದವನಾಗಿದ್ದನೆಂದರೆ ತನ್ನನ್ನು ಸಮೀಪಿಸುತ್ತಿದ್ದ ಮರಣವನ್ನು ಕೂಡ ಮರೆತಿದ್ದ. ನಾವು ಕೂಡ ಅಜಾಮಿಳನಂತೆ ಆಗಿದ್ದೇವೆ. ನಮಗೆ ಅನೇಕ ರೀತಿಯ ಸಂಬಂಧಗಳಿವೆ. ವ್ಯಾಮೋಹಿಕ ಸ್ನೇಹಿತರಾಗಿರಬಹುದು ಅಥವಾ ಅಸೂಯಾಪರ ಶತ್ರುಗಳಿರಬಹುದು ಮತ್ತು ನಾವು ಈ ರೀತಿಯ ಸಂಬಂಧಗಳಲ್ಲಿ ಪೂರ್ಣವಾಗಿ ಮುಳುಗಿ, ಸಮೀಪಿಸುತ್ತಿರುವ ಮರಣವನ್ನು ಮರೆಯುತ್ತಿದ್ದೇವೆ.

ಆದ್ದರಿಂದ ಐಹಿಕತೆಯ ಜನರು ಮೂಢರೆಂದು ಕರೆಯಲ್ಪಡುತ್ತಾರೆ. ಮೂಢ ಎಂದರೆ ‘ಕತ್ತೆ’ ಎಂದರ್ಥ. ಯಾರಿಗೆ ತಮ್ಮ ನಿಜವಾದ ಆಸಕ್ತಿ ಏನೆಂದು ತಿಳಿದಿರುವುದಿಲ್ಲವೋ ಅಂಥವರು ಮೂಢರು. ಭಾರತದಲ್ಲಿ ನಾವು ಕತ್ತೆಯ ಮೇಲೆ ರಾಶಿ ಬಟ್ಟೆಯನ್ನು ಹೊರಿಸಿಕೊಂಡು ಹೋಗುತ್ತಿರುವ ಅಗಸನನ್ನು ನೋಡುತ್ತಿರುತ್ತೇವೆ.

ಕತ್ತೆಗೆ ನಡೆಯಲು ಕಷ್ಟವಾಗುತ್ತಿದ್ದರೂ ಅದು ಭಾರವನ್ನು ಹೊತ್ತಿರುತ್ತದೆ. ಆ ಕತ್ತೆ “ನಾನು ನನ್ನ ಬೆನ್ನ ಮೇಲೆ ಅಷ್ಟೊಂದು ಬಟ್ಟೆಗಳನ್ನು ಹೊತ್ತಿದ್ದೇನೆ. ಅದರಲ್ಲಿ ನನಗೇಕೆ ಆಸಕ್ತಿ ಇದೆ? ಅದರಲ್ಲಿರುವ ಒಂದು ತುಂಡು ಬಟ್ಟೆಯು ಕೂಡ ನನ್ನದಲ್ಲ’ ಎಂದು ಯೋಚಿಸುವುದಿಲ್ಲ. ಆದರೆ ಅದು ಇಷ್ಟೊಂದು ಬಟ್ಟೆಯನ್ನು ಹೊರುವುದು ನನ್ನ ಕರ್ತವ್ಯವೆಂದು ತಿಳಿಯುತ್ತದೆ.

ಏಕೆ ಇದು ಇದರ ಕರ್ತವ್ಯವಾಗಿದೆ? ಏಕೆಂದರೆ ಆ ಅಗಸ ಈ ಕತ್ತೆಗೆ ಹುಲ್ಲನ್ನು ಕೊಡುತ್ತಾನೆ, ಆ ಕತ್ತೆಗೆ ಹುಲ್ಲು ನನಗೆ ಎಲ್ಲ ಕಡೆ ಸಿಗುತ್ತದೆ, ನಾನೇಕೆ ಈ ಕರ್ತವ್ಯವನ್ನು ಮಾಡಬೇಕು?’ ಎಂದು ಯೋಚಿಸುವ ಜ್ಞಾನವಿರುವುದಿಲ್ಲ. ಇದು ಕತ್ತೆಯ ಪರಿಜ್ಞಾನ.

ಎಲ್ಲರಿಗೂ ತಮ್ಮ ಕರ್ತವ್ಯದ ಬಗ್ಗೆ ಕಾತರತೆಯಿದೆ. ಅವರೆಲ್ಲರೂ ಹುಸಿ ಕರ್ತವ್ಯವನ್ನು ತೆಗೆದುಕೊ೦ಡಿರುವುದರಿಂದ ಅದನ್ನು ನಿರ್ವಹಿಸುವುದಕ್ಕಾಗಿಯೇ ಕಷ್ಟಪಟ್ಟು ದುಡಿಯುತ್ತಿದ್ದಾರೆ. ಅವರೆಲ್ಲರೂ ಕತ್ತೆಗಳು, ಅವರು ತಮ್ಮ ನಿಜವಾದ ಕರ್ತವ್ಯವನ್ನು ಮರೆಯುತ್ತಿದ್ದಾರೆ.

ಮರಣವೆಂಬುದು ಬರುತ್ತದೆ, ಅದು ನಮ್ಮನ್ನು ಬಿಡುವುದಿಲ್ಲ ಎಂದು ನಾವು ಅರ್ಥಮಾಡಿಕೊಳ್ಳಬೇಕು. (‘ಮರಣವು ನಿಶ್ಚಿತ’ ಎಂಬ ಹೇಳಿಕೆಯೇ ಇದೆ. ನಿಶ್ಚಿತವಾಗಿ ನಡೆಯುವ ಸಂಗತಿಯನ್ನು ಹೇಳುವಾಗ ಈ ಹೇಳಿಕೆಯನ್ನು ಅರಹುದುಂಟು). ಆದ್ದರಿಂದ ಮರಣ ಬರುವುದಕ್ಕಿಂತ ಮುಂಚೆ ನಾವು ಗೋಲೋಕ ವೃಂದಾವನದಲ್ಲಿ ಕೃಷ್ಣನೊಂದಿಗೆ ಶಾಶ್ವತವಾಗಿ ನೆಲೆಸುವಂತಹ ಕೆಲಸವನ್ನು ಮಾಡಬೇಕು. ಇದು ನಮ್ಮ ನಿಜವಾದ ಕರ್ತವ್ಯ.

ಆದರೆ ಜನರಿಗೆ ತಿಳಿದಿಲ್ಲ – ನ ತೇ ವಿದುಃ ಸ್ವಾರ್ಥ ಗತಿಮ್ ಹಿ ವಿಷ್ಣುಮ್‌ – ನಾವು ಮೂಲಪುರುಷ ಕೃಷ್ಣನಿಂದ ಬೇರ್ಪಟ್ಟಿದ್ದರಿಂದ ಜೀವನದ ಈ ಬಂಧನದ ಸ್ಥಿತಿಯಲ್ಲಿದ್ದೇವೆ. ನಾವು ಕೃಷ್ಣನ ಅಂಶರಾಗಿದ್ದೇವೆ. ಆದರೆ ನಾವು ಅದನ್ನು ಮರೆತಿದ್ದೇವೆ. ನಾವು ಅಮೇರಿಕ ಅಥವಾ ಭಾರತದ ಅಂಶವಾಗಿದ್ದೇವೆಂದು ತಿಳಿದಿದ್ದೇವೆ. ಆದರೆ ಇದು ಭ್ರಮೆ.

ಕೆಲವರಿಗೆ ದೇಶದ ಬಗ್ಗೆ ಇನ್ನೂ ಕೆಲವರಿಗೆ ಸಮಾಜದ ಬಗ್ಗೆ, ಮತ್ತೆ ಕೆಲವರಿಗೆ ತಮ್ಮ ಕುಟುಂಬದಲ್ಲಿ ಆಸಕ್ತಿ ಇದೆ. ಮತ್ತು ಅದಕ್ಕಾಗಿಯೇ ನಾವು ಅನೇಕ ರೀತಿಯ ಕರ್ತವ್ಯಗಳನ್ನು ಸೃಷ್ಟಿಸಿದ್ದೇವೆ. ಆದ್ದರಿಂದಲೇ ಶಾಸ್ತ್ರಗಳು ಹೇಳುತ್ತವೆ – ಮೂಢರಿಗೆ ಸ್ವ ಆಸಕ್ತಿಯೆಂಬುದೇ ತಿಳಿದಿಲ್ಲ. ನ ತೇ ವಿದುಃ ಸ್ವಾರ್ಥ ಗತಿಮ್ ಹಿ ವಿಷ್ಣುಮ್‌ ಮತ್ತು ಅವರು ನಿಜವಾದ ಸ್ವ ಆಸಕ್ತಿಯ ಬಗ್ಗೆ ಅಜ್ಞಾನದಲ್ಲಿರುವುದರಿಂದ ಅವರು ದುರಾಶಯ ಆಗಿದ್ದಾರೆ.

ಯಾವುದು ಪೂರೈಸಲ್ಪಡುವುದಿಲ್ಲವೋ ಅದರಲ್ಲಿ ಅವರು ಭರವಸೆ ಇಟ್ಟುಕೊಂಡಿದ್ದಾರೆ, ಅವರು ಈ ಐಹಿಕ ಜಗತ್ತಿನಲ್ಲಿ ಎಲ್ಲವನ್ನು ಹೊಂದಿಕೆ ಮಾಡಿಕೊಂಡು ಸಂತೋಷವಾಗಿರಬೇಕೆಂದು ಪ್ರಯತ್ನಿಸುತ್ತಿದ್ದಾರೆ. ಆದರೆ ಅವರಿಗೆ ತಿಳಿದಿಲ್ಲ ಅವರು ಎಲ್ಲಿಯವರೆಗೆ ಈ ಐಹಿಕ ಜಗತ್ತಿನಲ್ಲಿ ಇರುವರೋ ಅಲ್ಲಿಯವರೆಗೂ ಸಂತೋಷವಿರುವುದಿಲ್ಲ ಎಂದು.

ಭಗವದ್ಗೀತೆಯಲ್ಲಿ ಕೃಷ್ಣನು ಹೇಳುತ್ತಾನೆ : ಈ ಸ್ಥಳವು ದುಃಖಾಲಯಂ, ಅಶಾಶ್ವತಂ “ಕ್ಲೇಶಗಳಿಂದ ತುಂಬಿರುವುದು, ಆಶಾಶ್ವತವಾದುದು.” ಈ ಐಹಿಕ ಜಗತ್ತಿನಲ್ಲಿ ಒಂದರನಂತರ ಮತ್ತೊಂದು ದೇಹ ಬದಲಾವಣೆಗೆ ಒಳಗಾಗುತ್ತಿರುತ್ತೇವೆ. ಇದು ದು ದುಃಖಕರ ಸ್ಥಿತಿ. ನಾನು ಶಾಶ್ವತನು (ನ ಹನ್ಯತೇ ಹನ್ಯಮಾನೇ ಶರೀರೇ) ಆದ್ದರಿಂದ ನಾನೇಕೆ ದೇಹವನ್ನು ಬದಲಾಯಿಸಬೇಕು? ಈ ಪ್ರಶ್ನೆಯನ್ನು ನಾವು ಕೇಳಬೇಕು.

ಈ ಪ್ರಶ್ನೆಗೆ ಉತ್ತರ ಪಡೆಯಲು ನಾವು ಪರಿಪೂರ್ಣ ಮೂಲದಿಂದ ಜ್ಞಾನವನ್ನು ಪಡೆಯಬೇಕು. ಪರಮ ಪರಿಪೂರ್ಣನಾದ ಕೃಷ್ಣನು ಭಗವದ್ಗೀತೆಯಲ್ಲಿ ಸ್ವತಃ ತಾನೇ ಜ್ಞಾನವನ್ನು ಕೊಡುತ್ತಿದ್ದಾನೆ. ಆದರೆ ನಾವು ಎಂತಹ ನತದೃಷ್ಟರೆಂದರೆ ಈ ಪರಿಪೂರ್ಣ ಜ್ಞಾನವನ್ನು ತೆಗೆದುಕೊಳ್ಳದೆಯೇ ವಂಚಿತರಾಗಿದ್ದೇವೆ.

ನಾವು ಕಲ್ಪಿಸಿ ಊಹೆ ಮಾಡಿ ನಮ್ಮದೇ ಆದ ಒಂದು ವಿಚಾರವನ್ನು ಸೃಷ್ಟಿಸಿದರೆ ಆವಾಗ ನಾವು ಹೊಂದಿದ್ದೇವೆ. ನಾವು ಸದಾ ಯೋಚಿಸುತ್ತಿರುತ್ತೇವೆ, “ನಾನು ಈ ರೀತಿಯಾಗಿ ಸುಖದಿಂದ ಇರುತ್ತೇನೆ, ನಾನು ಆ ರೀತಿಯಾಗಿ ಸುಖದಿಂದ ಇರುತ್ತೇನೆ” ಎಂದು. ಖಂಡಿತವಾಗಿಯೂ ಇಲ್ಲ, ನೀವು ಎಲ್ಲಿಯವರೆಗೆ ಭಗವದ್ಧಾಮಕ್ಕೆ ಮರಳುವುದಿಲ್ಲವೋ ಅಲ್ಲಿಯವರೆಗೆ ಸಂತೋಷವಾಗಿರುವುದಿಲ್ಲ. ಇದು ಪರಿಪೂರ್ಣ ಬೋಧನೆ.

ಉದಾಹರಣೆಗೆ ಒಬ್ಬ ಹುಚ್ಚು ಹಿಡಿದ ಹುಡುಗನಿದ್ದಾನೆ. ಅವನು ತನ್ನ ತಂದೆಯನ್ನು ಬಿಟ್ಟಿದ್ದಾನೆ. ಆ ತಂದೆ ಎಲ್ಲ ಸುಖವನ್ನು ಕೊಡಬಲ್ಲಂತಹ ಶ್ರೀಮಂತ. ಆದರೆ ಆ ಹುಡುಗ ಹಿಪ್ಪಿಯಾಗಿಬಿಟ್ಟಿದ್ದಾನೆ. ಈ ಐಹಿಕ ಜೀವನದಲ್ಲಿ ನಾವು ಅದೇ ರೀತಿಯಾಗಿದ್ದೇವೆ. ನಮ್ಮ ತಂದೆ ಕೃಷ್ಣ, ಮತ್ತು ನಾವು ಅವನ ಸಾಮ್ರಾಜ್ಯದಲ್ಲಿ ಸುಖಕರವಾಗಿ ಇರಬಹುದು.

ಹಣಗಳಿಸುವ ಪ್ರಯತ್ನ ಮತ್ತು ಬೇರೆ ಯಾವ ಚಿಂತೆಯಿಲ್ಲದೆ ಇರಬಹುದು. ಆದರೆ ನಾವು ಈ ಐಹಿಕ ಜಗತ್ತಿನಲ್ಲಿ ಇರುತ್ತೇವೆ ಎಂದು ಈಗಾಗಲೇ ನಿರ್ಧರಿಸಿಬಿಟ್ಟಿದ್ದೇವೆ. ಇದು ಕತ್ತೆಯ ಮನೋಭಾವ, ಮೂಢತೆ. ನಮಗೆ ಸ್ವ ಆಸಕ್ತಿಯೇನೆಂಬುದೇ ಗೊತ್ತಿಲ್ಲ. ಆದರೆ ದುರಾಶೆ ಬಿಸಿಲು ಕುದುರೆಯನ್ನು ನೆಚ್ಚಿಕೊಂಡಿದ್ದೇವೆ. “ನಾನು ಈ ರೀತಿಯಾಗಿ ಸಖವಾಗಿರುತ್ತೇನೆ, ಆ ರೀತಿಯಾಗಿ ಸುಖವಾಗಿರುತ್ತೇನೆ” ಎಂದು ಯೋಚಿಸುತ್ತೇವೆ.

ಕೆಲವು ಸಲ ಅಗಸ ಕತ್ತೆಯ ಬೆನ್ನ ಮೇಲೆ ಕುಳಿತುಕೊಂಡು ಒಂದು ಹಿಡಿಯಷ್ಟು ಹುಲ್ಲನ್ನು ಕತ್ತೆಯ ಮುಖದ ಮುಂದೆ ಹಿಡಿದುಕೊಂಡಿರುತ್ತಾನೆ. ಕತ್ತೆಗೆ ಆ ಹುಲ್ಲು ಬೇಕಾಗಿರುತ್ತದೆ. ಆದರೆ ಕತ್ತೆ ಹೇಗೆ ಮುಂದೆ ಮುಂದೆ ಹೋಗುತ್ತದೋ ಹಾಗೆಯೇ ಹುಲ್ಲು ಕೂಡ ಮುಂದೆ ಮುಂದೆ ಚಲಿಸುತ್ತಿರುತ್ತದೆ.

ಕತ್ತೆಯು ಯೋಚಿಸುತ್ತದೆ. “ಒಂದು ಹೆಚ್ಚೆ ನಾನು ಮುಂದಿಟ್ಟರೆ ನನಗೆ ಆ ಹುಲ್ಲು ಸಿಗುತ್ತದೆ,” ಅದು ಕತ್ತೆಯಾಗಿರುವುದರಿಂದ ಅದಕ್ಕೆ ಗೊತ್ತಿಲ್ಲ ಅದು ಮುಂದೆ ಲಕ್ಷಾಂತರ ವರ್ಷಗಳವರೆಗೂ ಇದೇ ರೀತಿ ಮುಂದುವರಿದರೂ ಆ ಹುಲ್ಲು ಆದಕ್ಕೆ ದಕ್ಕುವುದಿಲ್ಲ. ಆ ರೀತಿಯಾಗಿ ಕತ್ತೆಯ ಮುಂದೆ ಹುಲ್ಲು ಹಿಡಿದಿರಲ್ಪಟ್ಟಿರುತ್ತದೆ.

ಅದೇ ರೀತಿಯಾಗಿ ಭೌತಿಕವಾಗಿ ವ್ಯಕ್ತಿ “ಲಕ್ಷಾಂತರ – ಕೋಟ್ಯಂತರ ವರ್ಷಗಳಿಂದ ನಾನು ಈ ಐಹಿಕ ಜಗತ್ತಿನಲ್ಲಿ ಸುಖವಾಗಿರಲು ಪ್ರಯತ್ನಿಸುತ್ತಿದ್ದೇನೆ, ಆದರೂ ಕೂಡ ನಾನು ಸುಖಿಯಾಗಿಲ್ಲ ಎಂದು ತಿಳಿಯುವುದಿಲ್ಲ.” ಆದ್ದರಿಂದ ನೀವು ಗುರುವಿನಿಂದ ಜ್ಞಾನವನ್ನು ಪಡೆಯಬೇಕು. ಗುರುವು ವಸ್ತುಗಳನ್ನು ಯಥಾರ್ಥವಾಗಿ ಅರಿತಿರುತ್ತಾನೆ. ಗುರುವು ಈ ರೀತಿಯಾಗಿ ಪೂಜಿಸಲ್ಪಡುತ್ತಾರೆ.

ಅಜ್ಞಾನ ತಿಮಿರಾಂಧಸ್ಯ ಜ್ಞಾನಾಂಜನ ಶಲಾಕಯಾ |

ಚಕ್ಷುರುನ್ಮೀಲಿತಂ ಯೇನ ತಸ್ಮೈ ಶ್ರೀ ಗುರವೇ ನಮಃ ||

“ಅಜ್ಞಾನವೆಂಬ ಕತ್ತಲೆಯಿಂದ ಜ್ಞಾನವೆಂಬ ದೀಪಜ್ವಾಲೆಯಿಂದ ನನ್ನ ಕಣ್ಣನ್ನು ತೆರೆಸಿದ ಗುರುವಿಗೆ ನನ್ನ ಗೌರವಪೂರ್ಣ ನಮಸ್ಕಾರಗಳನ್ನು ಅರ್ಪಿಸುತ್ತಿದ್ದೇನೆ.”

ಕುರುಡನಾದ ಒಬ್ಬ ರಾಜಕಾರಣಿ ನಿಮ್ಮ ಸಂತೋಷಕ್ಕಾಗಿ ಈ ರೀತಿಯ ಭರವಸೆಯನ್ನು ಕೊಡುತ್ತಾನೆ. “ನೀವು ನನಗೆ ಓಟು ಕೊಟ್ಟು ಚುನಾಯಿಸಿ, ನಾನು ನಿಮಗೆ ಸ್ವರ್ಗವನ್ನೇ ತರುತ್ತೇನೆ, ನಾನು ರಾಷ್ಟ್ರಾಧ್ಯಕ್ಷನಾದ ಕೂಡಲೇ ನಿಮಗೆ ಇಂತಿಂತಹ ಲಾಭಗಳನ್ನು ಮಾಡಿಕೊಡುತ್ತೇನೆ.” ಆದ್ದರಿಂದ ನೀವು ನಿಕ್ಸನ್‌ ನಂತಹವರನ್ನು ಚುನಾಯಿಸುತ್ತೀರಿ, ಅನಂತರ ಹತಾಶರಾಗುತ್ತೀರಿ, ಆಗ ನೀವು ಹೇಳುತ್ತೀರಿ.

“ಮಿ|| ನಿಕ್ಸನ್‌ ತೊಲಗು,” ಮತ್ತೆ ನೀವು ಇನ್ನೊಬ್ಬ ಮೂಢನನ್ನು ಆರಿಸುತ್ತೀರಿ. ಇದು ಮುಂದುವರಿಯುತ್ತಲೇ ಇರುತ್ತದೆ. ಈ ರೀತಿಯಾಗಿ ನಿಮಗೆ ಹೇಗೆ ಸಂತೋಷವಾಗಿರಬೇಕೆಂಬ ಮಾಹಿತಿಯೇ ದೊರಕುವುದಿಲ್ಲ.

ಎಲ್ಲಿಂದ ನಮಗೆ ನಿಜವಾದ ಮಾಹಿತಿ ಸಿಗುತ್ತದೆ ? ವೇದಗಳು ಹೇಳುತ್ತವೆ. ತದ್ ವಿಜ್ಞಾನಾರ್ಥಮ್ ಸ ಗುರುಮ್ ಏವಾಭಿಗಚ್ಛೇತ್ – “ನೀವು ಗುರುವಿನ ಬಳಿ ಹೋದರೆ ನಿಮಗೆ ನಿಜವಾದ ಮಾಹಿತಿ ಸಿಗುತ್ತದೆ.” ಹಾಗಾದರೆ ಗುರು ಯಾರು ? ಚೈತನ್ಯ ಮಹಾಪ್ರಭುಗಳು ವಿವರಿಸುತ್ತಾರೆ, ಆಮಾರಾ ಆಜ್ಞಯಾ ಗುರು ಹಯ್ಯಾ “ನನ್ನ ಆಜ್ಞೆಯಂತೆ ಗುರುವಾಗು.” ಆದ್ದರಿಂದ ಗುರು ಯಾರೆಂದರೆ ಯಾರು ಕೃಷ್ಣನ ಆಜ್ಞೆಯನ್ನು ಪಾಲಿಸುತ್ತಾನೋ ಅವನೇ ಪರಮ ಪ್ರಭುವಿನ ಆಜ್ಞೆಯನ್ನು ಪಾಲನೆ ಮಾಡುವುದು ಮತ್ತು ಪರಮಪ್ರಭುವಿನ ಸೇವೆಯನ್ನು ಮಾಡುವ ತನಕ ಯಾರೂ ಗುರುವಾಗಲಾರ.

ದುರದೃಷ್ಟವಶಾತ್ ಜನರಿಗೆ ಇದು ಗೊತ್ತಿಲ್ಲ. ಆದ್ದರಿಂದ ಯಾರಾದರೂ ಬಂದು “ನಾನು ಗುರು ” ಎಂದು ಹೇಳಬಹುದು. ನೀವು ಹೇಗೆ ಗುರುವಾಗಿದ್ದೀರಿ? “ಓ, ನಾನು ಸ್ವ – ಪರಿಪೂರ್ಣತೆಯನ್ನು ಹೊಂದಿದ್ದೇನೆ. ನನಗೆ ಪುಸ್ತಕಗಳನ್ನು ಓದುವ ಅವಶ್ಯಕತೆಯಿಲ್ಲ, ನಾನು ನಿಮ್ಮನ್ನು ಆಶೀರ್ವದಿಸಲು ಬಂದಿದ್ದೇನೆ” (ನಗು).

ಕೃಷ್ಣನ ಪ್ರಮಾಣಿಕೃತವಾದ ಶಾಸ್ತ್ರಗಳನ್ನು ಎಲ್ಲಿಯವರೆಗೆ ಅನುಸರಿಸುವುದಿಲ್ಲವೋ ಅವರು ಗುರುಗಳಾಗುವುದಿಲ್ಲ ಎಂಬುದು ಈ ಮೂಢರಿಗೆ ಅರ್ಥವಾಗುವುದಿಲ್ಲ. ಆದ್ದರಿಂದ ಅವರು ಅನೇಕ ಢೋಂಗಿ ಗುರುಗಳನ್ನು ಸ್ವೀಕರಿಸುತ್ತಾರೆ. ಇದು ನಡೆಯುತ್ತಲೇ ಇದೆ.

ಪರಮಪ್ರಭುವಿನ ಆಜ್ಞೆಯನ್ನು ಪಾಲನೆ ಮಾಡುವವನೇ ಗುರು ಎಂದು ತಿಳಿಯಬೇಕು. ಇದು ಗುರುವಿನ ಸರಳ ವ್ಯಾಖ್ಯಾನ. ಯಾವುದೇ ಒಬ್ಬ ಮೂಢ ತನ್ನದೇ ಆದ ವಿಚಾರಗಳನ್ನು ರೂಢಿಸಿಕೊಂಡರೆ ಅವನು ಗುರುವಾಗುವುದಿಲ್ಲ. ಕೂಡಲೇ ಅವನನ್ನು ಒದ್ದು ಹೊರಹಾಕಿ, ಅವನು ಗುರುವಾಗುವುದಿಲ್ಲ.

ಅವನೊಬ್ಬ ಮೂಢ. ಚೈತನ್ಯ ಮಹಾಪ್ರಭುಗಳು ಹೇಳುವಂತೆ ಗುರುವು ಭಗವಂತನ ನಂಬಿಕಸ್ಥ ಸೇವಕ. ಆದ್ದರಿಂದ ಯಾವ ವ್ಯಕ್ತಿ ತನ್ನನ್ನು ತಾನು ಗುರುವೆಂದು ಹೇಳಿಕೊಳ್ಳುತ್ತಾನೋ ಅವನಿಗೆ ಮೊದಲು ಇದನ್ನು ಕೇಳಬೇಕು : “ನೀವು ಭಗವಂತನ ನಂಬಿಕಸ್ಥ ಸೇವಕರೇ?” ಒಂದು ವೇಳೆ ಅವನು ಇಲ್ಲ – “ನಾನು ಭಗವಂತ”, ಎಂದು ಹೇಳಿದರೆ ಕೂಡಲೇ ಅವನ ಮುಖದ ಮೇಲೆ ಒದ್ದು ಬಿಡಿ (ನಗು), “ಮೂಢನೇ ನೀನು ನಮಗೆ ವಂಚನೆ ಮಾಡುತ್ತೀಯಾ?’ ಎಂದು ಅವನನ್ನು ಕೂಡಲೇ ಒದ್ದು ಬಿಡಿ.

ವೈದಿಕ ಶಾಸ್ತ್ರ ಹೇಳುತ್ತದೆ – ತದ್ವಿ ವಿಜ್ಞಾನಾರ್ಥಮ್ ಸ ಗುರುಮ್ ಏವಾಭಿಗಚ್ಛೇತ್ – “ನಿಮಗೆ ಆಧ್ಯಾತ್ಮಿಕ ಬದುಕಿನ ವಿಜ್ಞಾನವನ್ನು ತಿಳಿದುಕೊಳ್ಳಬೇಕಾದರೆ ಗುರುವಿನ ಬಳಿ ಹೋಗಬೇಕು.” ಯಾರಾದರೂ ಗುರುವಿಲ್ಲದಂತಹವರಾಗಿ ತಮ್ಮ ಜೀವನವನ್ನು ರೂಪಿಸಿಕೊಂಡರೆ ಅವರನ್ನು ಮೂಢರನ್ನಬೇಕು.

ಇದು ಅಜಾಮಿಳನ ಸ್ಥಿತಿಯಾಗಿತ್ತು. ಅವನು ಈ ರೀತಿ ಯೋಚಿಸುತ್ತಿದ್ದ. “ನಾನೊಬ್ಬ ಆತ್ಮೀಯ ತಂದೆಯಾಗಿದ್ದೇನೆ, ನನ್ನ ಚಿಕ್ಕ ಮಗುವಿನ ಆರೈಕೆ ಮಾಡುತ್ತಿದ್ದೇನೆ, ಅವನಿಗೆ ಊಟ ಮಾಡಿಸುತ್ತಿದ್ದೇನೆ, ಮಲಗಿಸುತ್ತಿದ್ದೇನೆ, ನಾನು ತುಂಬ ನಂಬಿಕಸ್ಥ ಮತ್ತು ಪ್ರಾಮಾಣಿಕ, ನಿಷ್ಠಾವಂತ ತಂದೆ.

ಇಲ್ಲಿ ಶ್ರೀಮದ್ಭಾಗವತಮ್ ಹೇಳುತ್ತದೆ ಅಜಾಮಿಳನು ಮೂಢನಾಗಿದ್ದಾನೆ ಏಕೆ? ನ ವೇದಾಗತಮ್ ಅಂತಕಮ್, ಏಕೆಂದರೆ ಅವನಿಗೆ ಸಾವು ಬರುತ್ತದೆ ಎಂಬುದು ತಿಳಿದಿರಲಿಲ್ಲ, ಅವನು, “ನನ್ನ ಹಿಂದೆ ಸಾವು ಇದೆ ಅದು ನನ್ನನ್ನು ಕರೆದುಕೊಂಡು ಹೋಗಲು ಬರುತ್ತಿದೆ” ಎಂದು ಯೋಚಿಸಲು ಹೋಗಲಿಲ್ಲ. ಅಜಾಮಿಳನ ವ್ಯಾಮೋಹದ ಸಮಾಜವಾಗಲಿ, ಕುಟು೦ಬವಾಗಲಿ ಅವನನ್ನು ಮರಣದಿಂದ ಹೇಗೆ ಉಳಿಸುತ್ತದೆ. ಅದು ಅವನಿಂದ ಉತ್ತರಿಸಲಾಗಲಿಲ್ಲ.

ಸಾವಿಗೆ ತಯಾರಿ

ಆದುದರಿಂದ ನಾವು ಸಾವಿಗೆ ತಯಾರಿ ಮಾಡಿಕೊಳ್ಳಬೇಕು. ನಾವು ನಮ್ಮ ಬೆನ್ನ ಹಿಂದೆ ಸಾವೆಂಬುದು ಇದೆ, ಅದು ಯಾವ ಕ್ಷಣದಲ್ಲಾದರೂ ನಮ್ಮನ್ನು ಕುತ್ತಿಗೆ ಹಿಡಿದು ಎಳೆದೊಯ್ಯಬಹುದು ಎಂದು ತಿಳಿಯಬೇಕು. ನೀವು ನೂರು ವರ್ಷ ಬಾಳುತ್ತೀರಿ ಎಂದು ಯಾವ ಭರವಸೆಯಿದೆ ? ಇಲ್ಲ, ನೀವು ಒಂದು ವೇಳೆ ದಾರಿಯಲ್ಲಿ ಹೋಗುತ್ತಲೇ ಸಾವನ್ನಪ್ಪಬಹುದು. ಹೃದಯಾಘಾತವಾಗಬಹುದು, ಇನ್ನೂ ಎಷ್ಟೋ ರೀತಿಯ ಅವಗಢಗಳಿಂದ ಸಾವು ಸಂಭವಿಸಬಹುದು.

ವಾಸ್ತವಿಕವಾಗಿ ಬದುಕುವುದು ಬಹಳ ಅದ್ಭುತವಾದುದು. ಆದರೆ ಸಾವು ಅದ್ಭುತವಾದುದಲ್ಲ. ನೀವು ನಿಮ್ಮ ಜನನವಾದ ಕೂಡಲೇ ಸಾಯಲು ಆರಂಭಿಸುತ್ತೀರಿ, ಯಾರಾದರೂ ನಿಮನ್ನು ಕೇಳಬಹುದು, ”ಈ ಮಗು ಯಾವಾಗ ಜನಿಸಿದ್ದು” ಎಂದು, ಆಗ ನೀವು ಹೇಳಬಹುದು ಒಂದು ವಾರದ ಹಿಂದೆ” ಅಂದರೆ ಈ ಮಗು ಒಂದು ವಾರ ಸತ್ತಿದೆ.

ನಾವು ತಿಳಿದುಕೊಳ್ಳುತ್ತೇವೆ, ಅದು ಒಂದು ವಾರದಿಂದ ಬದುಕಿದೆ ಎಂದು, ಆದರೆ ನಿಜವಾಗಿಯೂ ಅದು ಒಂದು ವಾರ ಸತ್ತಿದೆ, ಸಾವು ಅದ್ಭುತವಾದುದಲ್ಲ. ಅದು ನಿಶ್ಚಿತವಾದುದು. ಅದು ವಾರದನಂತರ ಅಥವಾ ಒಂದು ನೂರು ವರ್ಷದನಂತರವೂ ಬರಬಹುದು. ನಾವು ಬದುಕಿನ ಈ ಸಾವು ಮತ್ತು ಜನನದ ನಿರಂತರ ಚಕ್ರದಲ್ಲಿ ಸಿಲುಕಿದ್ದೇವೆ. ನಾವು ಈಗಾಗಲೇ ಉಳಿದಿರುವ ನಮ್ಮ ಆಯಸ್ಸಿನಲ್ಲಿ ಈ ನಿಜವಾದ ಸಮಸ್ಯೆಗೆ ಪರಿಹಾರವನ್ನು ಹುಡುಕಿಕೊಳ್ಳಬೇಕು.

ಜನರು ಒಬ್ಬ ಸಮರ್ಪಕವಾದ ಗುರುವಿನ ಬಳಿ ಬರದೇ ಈ ಆಧ್ಯಾತ್ಮಿಕ ಜ್ಞಾನವನ್ನು ಹೇಗೆ ಪಡೆಯಬಲ್ಲರು? ಆದುದರಿಂದ ಶಾಸ್ತ್ರ ಹೇಳುತ್ತದೆ ತದ್‌ ವಿಜ್ಞಾನಾರ್ಥಮ್ ಸ ಗುರುಮ್ ಏವಾಭಿಗಚ್ಛೇತ್ – ನಿಮಗೆ ನಿಮ್ಮ ಜೀವನದ ನಿಜವಾದ ಸಮಸ್ಯೆ ತಿಳಿದುಕೊಳ್ಳಬೇಕೆಂದರೆ, ಕೃಷ್ಣಪ್ರಜ್ಞೆಯನ್ನು ಹೇಗೆ ತಿಳಿದುಕೊಂಡು ಕೃಷ್ಣ ಪ್ರಜ್ಞಾವಂತರಾಗಬೇಕೆಂದರೆ, ಹೇಗೆ ಶಾಶ್ವತರಾಗಬೇಕು ಮತ್ತು ಹೇಗೆ ಭಗವದ್ಧಾಮಕ್ಕೆ ಮರಳಬೇಕೆಂದು ಇದ್ದರೆ ನೀವು ಒಬ್ಬ ಸದ್ಗುರುವಿನ ಬಳಿ ಹೋಗಬೇಕು.

ಕೃಷ್ಣನ ಆಜ್ಞೆಯನ್ನು ಪಾಲಿಸುವವ ಮತ್ತು ಅವನ ಸೇವೆಯನ್ನು ಮಾಡುವವನೇ ನಿಜವಾದ ಸದ್ಗುರು. ನೈಜವಾದ ಗುರುವು ತನ್ನದೇ ಆದ ಹೊಸ ವಿಚಾರವನ್ನು ತಯಾರಿಸುವುದಿಲ್ಲ. “ಇದನ್ನು ಆಚರಿಸಿ, ನನಗೆ ಹಣಕೊಡಿ ಮತ್ತು ಸಂತೋಷವಾಗಿರಿ” ಎಂದು ನಿಜವಾದ ಗುರು ಕಲಿಸುವುದಿಲ್ಲ, ಇದು ಹಣವನ್ನು ಗಳಿಸುವ ಒಂದು ಪ್ರಕ್ರಿಯೆ.

ಅಜಾಮಿಳನಂತೆ ಎಲ್ಲರೂ ತಮ್ಮದೇ ಆದ ಹೊಸ ವಿಚಾರವನ್ನು ಉತ್ಪಾದಿಸುತ್ತಾ ಮೂರ್ಖರ ಸ್ವರ್ಗದಲ್ಲಿ ಇದ್ದಾರೆ, ಕೆಲವರೊ೦ದು ಕರ್ತವ್ಯವನ್ನು ತೆಗೆದುಕೊಂಡಿರುತ್ತಾರೆ ಮತ್ತೆ ಕೆಲವರು ಇನ್ನೂ ಬೇರೆಯಾದ ಕರ್ತವ್ಯಗಳನ್ನು ತೆಗೆದುಕೊಂಡಿದ್ದಾರೆ. ಆದರೆ ಅವರೆಲ್ಲರೂ ಮೂಢರು. ನೀವು ನಿಮ್ಮ ಗುರುವಿನಿಂದ ಮಾತ್ರ ನಿಜವಾದ ಕರ್ತವ್ಯವೇನೆಂದು ತಿಳಿದುಕೊಳ್ಳಬೇಕು.

(ಶ್ರೀಲ ಪ್ರಭುಪಾದರು ಶಿಷ್ಯರಿಗೆ ಸಂಬೋಧಿಸುತ್ತಾರೆ). ದಿನನಿತ್ಯ ನೀವು ಗುರು ಮುಖ ಪದ್ಮವಾಕ್ಯ, ಚಿತ್ತೇತೇ ಕೋರಿಯಾ ಐಕ್ಯ, ಆರ್ ನಾ ಕೋರಿಹೋ ಮನೇ ಆಶಾ ಇದನ್ನು ಹಾಡುತ್ತೀರಿ, ಇದುವೇ ಜೀವನ. ನೀವು ಸದ್ಗುರುವನ್ನು ಸ್ವೀಕರಿಸುತ್ತೀರಿ, ಅವರು ಏನೇ ಆಜ್ಞಾಪಿಸಿದರೂ ಪರಿಪಾಲಿಸುತ್ತೀರಿ.

ಆಗ ನಿಮ್ಮ ಜೀವನ ಸಫಲವಾಗುತ್ತದೆ. ಆರ್ ನಾ ಕೋರಿಹೋ ಮನೇ ಆಶಾ, ನೀವು ಏನನ್ನು ಬಯಸುವುದಿಲ್ಲ. ನೀವು ದಿನ ಹಾಡುತ್ತೀರಿ ಅಲ್ಲವೇ? ನಿಮಗೆ ಏನಾದರೂ ಅದು ಅರ್ಥವಾಗುತ್ತದೋ? ಅಥವಾ ಸುಮ್ಮನೆ ಹಾಡುತ್ತಿರೋ? ಅದರ ಅರ್ಥ ಏನು? ಯಾರು ಅದನ್ನು ವಿವರಿಸುತ್ತೀರಿ? ಭಕ್ತ “ನನ್ನ ಒಂದೇ ಆಸೆ ಏನೆಂದರೆ ನನ್ನ ಸದ್ಗುರುವಿನ ಕಮಲದಂತಹ ಬಾಯಿಂದ ಬರುತ್ತಿರುವ ಮಾತುಗಳಿಂದ ನನ್ನ ಮನಸ್ಸು ಪರಿಶುದ್ಧವಾಗಲಿ, ಇದನ್ನು ಬಿಟ್ಟು ನನಗೆ ಬೇರೆ ಆಸೆ ಏನೂ ಇಲ್ಲ.”

ಶ್ರೀಲ ಪ್ರಭುಪಾದ : ಹೌದು, ಗುರುಮುಖ ಪದ್ಮವಾಕ್ಯ, ಚಿತ್ತೇತೇ ಕೋರಿಯಾ ಐಕ್ಯ, ಚಿತ್ತ ಎಂದರೆ ಪ್ರಜ್ಞೆ ಅಥವಾ ಹೃದಯ. ಶಿಷ್ಯನಾದವನು, “ನಾನು ನನ್ನ ಸದ್ಗುರುವಿನ ಆಜ್ಞೆಯಂತೆ ನಡೆಯುತ್ತೇನೆ” ಎಂದು ಯೋಚಿಸಬೇಕು. ನನ್ನ ಗುರು ಮಹಾರಾಜರು (ಶ್ರೀಲ ಭಕ್ತಿ ಸಿದ್ಧಾಂತ ಸರಸ್ವತೀ) ನನಗೆ ಪಾಶ್ಚಾತ್ಯ ದೇಶಗಳಲ್ಲಿ ಕೃಷ್ಣಪ್ರಜ್ಞೆಯನ್ನು ಬೋಧಿಸಲು ಹೇಳಿದರು.

ಅದು ನನ್ನ ಅಹಂಕಾರವಲ್ಲ, ಆದರೆ ಅದನ್ನು ನಾನು ಮಾಡಿದ್ದೇನೆ. ಆದ್ದರಿಂದ ನೀವು ನನ್ನಲ್ಲಿ ಏನೇ ಸಫಲತೆ ಕಂಡಿದ್ದರೆ ಅದಕ್ಕೆ ಕಾರಣ ನಾನು ಅವರ ಆಜ್ಞೆಯನ್ನು ಪರಿಪಾಲಿಸಿದ್ದು, ನನ್ನದೊಂದು ಸ್ವತಂತ್ರವಾದ ಯೋಗ್ಯತೆ ಏನೂ ಇಲ್ಲ. ಆದರೂ ನಾನು ನನ್ನ ಗುರುವಿನ ಮಾತುಗಳನ್ನು ನನ್ನ ಜೀವ ಮತ್ತು ಚಿತ್ತವೆಂದು ತೆಗೆದುಕೊಂಡಿದ್ದೇನೆ. ಇದು ಸತ್ಯ.

ಆದ್ದರಿಂದ ಎಲ್ಲರೂ ಇದನ್ನು ಮಾಡಬೇಕು. ಆದರೆ ನೀವು ಏನಾದರೂ ಪ್ರತ್ಯೇಕವಾಗಿ ಸೇರಿಸಲು, ಬದಲಾಯಿಸಲು ಹೋದರೆ ನೀವು ನಿರ್ನಾಮವಾಗುತ್ತೀರಿ. ನಾವು ಕೃಷ್ಣನ ನಂಬಿಕಸ್ಥ ಸೇವಕನಾದಂತಹ ಗುರುವಿನ ಬಳಿ ಹೋಗಿ ಅವನಿಂದ ಭಗವಂತನ ಸೇವೆ ಹೇಗೆ ಮಾಡಬೇಕೆಂಬ ಬೋಧನೆಯನ್ನು ತೆಗೆದುಕೊಳ್ಳಬೇಕು.

ಆಗ ನೀವು ಸಫಲರಾಗುತ್ತೀರಿ. ಒಂದು ವೇಳೆ ನೀವು ‘ನಾನು ನನ್ನ ಗುರುವಿಗಿಂತಲೂ ಬುದ್ಧಿವಂತನಿದ್ದೇನೆ, ನಾನು ಏನು ಬೇಕಾದರೂ ಸೇರಿಸಿ, ಬದಲಾವಣೆಗಳನ್ನು ಮಾಡಬಹುದು” ಎಂದು ಕಲ್ಪಿಸಿಕೊಂಡರೆ ಆಗ ನೀವು ವಿನಾಶರಾಗುತ್ತೀರಿ.

ಮುಂದೆ ಹಾಡಿ,

ಭಕ್ತ : ಶ್ರೀ ಗುರು ಚರಣೇ ರತಿ ಯೈಸೇ ಉತ್ತಮ ಗತಿ.

ಶ್ರೀಲ ಪ್ರಭುಪಾದ : ನೀವು ಏನಾದರೂ ನಿಜವಾಗಿಯೂ ಪ್ರಗತಿ ಸಾಧಿಸಬೇಕೆಂದಿದ್ದರೆ ನಿಮ್ಮ ಗುರುವಿನ ಪಾದಕಮಲಗಳಲ್ಲಿ ಸಂಪೂರ್ಣ ಶ್ರದ್ಧೆಯುಳ್ಳವರಾಗಬೇಕು. ಆಮೇಲೆ ?

ಭಕ್ತ: ಯ ಪ್ರಸಾದೇ ಪೂರೇ ಸರ್ವ ಆಶಾ.

ಶ್ರೀಲ ಪ್ರಭುಪಾದ : ಗುರುವಿನ ಆದೇಶದಿಂದ ಎಲ್ಲ ಆಸೆಗಳು ಪೂರ್ಣಗೊಳ್ಳುತ್ತವೆ. ನೀವು ಈ ಬೋಧನೆಗಳನ್ನು ಎಲ್ಲ ವೈಷ್ಣವ ತತ್ವ ಶಾಸ್ತ್ರಗಳಲ್ಲಿ ಕಾಣುತ್ತೀರಿ. ಆದ್ದರಿಂದ ನೀವು ಎಲ್ಲಿಯವರೆಗೆ ಸದ್ಗುರುವಿನ ಸೇವೆಯಲ್ಲಿ ಮುಳುಗಿರುವುದಿಲ್ಲವೋ ನೀವು ಮೂಢರು, ಕತ್ತೆಗಳು.

ಈ ದಿನ ನಾವು ಅಜಾಮಿಳನ ಬಗ್ಗೆ ಒಂದು ಶ್ಲೋಕವನ್ನು ಓದಿದ್ದೇವೆ. ಇಲ್ಲಿ ವೇದವ್ಯಾಸರು ಹೇಳುತ್ತಾರೆ, ಆ ಮೂಢನು ತನ್ನ ಮಗ ನಾರಾಯಣನ ಸೇವೆಯಲ್ಲಿಯೇ ಮುಳುಗಿದ್ದ. ಅಜಾಮಿಳ, ದೇವೋತ್ತಮ ಪರಮ ಪುರುಷ ನಾರಾಯಣನನ್ನು ಕರೆಯುತ್ತಿರಲಿಲ್ಲ. ಅವನು ತನ್ನ ಮಗನನ್ನು, “ನಾರಾಯಣ ಇಲ್ಲಿ ಬಾರೋ ಇದನ್ನು ತೆಗೆದುಕೊಳ್ಳೋ” ಎಂದು ಕರೆಯುತ್ತಿದ್ದನು.

ಆದರೂ ಕೃಷ್ಣ ಎಷ್ಟು ಕರುಣಾಮಯಿಯಾಗಿದ್ದನೆಂದರೆ ಅಜಾಮಿಳನು ಮಗನ ಹೆಸರು ಹಿಡಿದು ಕೂಗಿದ್ದನ್ನು ಅವನು ತನ್ನನ್ನು ಕುರಿತು ಜಪಿಸುತ್ತಿದ್ದಾನೆ ಎಂದು ಪರಿಗಣಿಸಿದ. ಅಜಾಮಿಳ ತಾನು ಪ್ರಭು ನಾರಾಯಣನ ಬಳಿ ಹೋಗುತ್ತಿದ್ದೇನೆ ಎಂದು ತಿಳಿದುಕೊಳ್ಳಲಿಲ್ಲ. ಆದರೆ ಅಜಾಮಿಳನಿಗೆ ನಾರಾಯಣನ ಪವಿತ್ರ ನಾಮಜಪ ಮಾಡುವ ಅವಕಾಶವು ಸಿಕ್ಕಿತು. ಅದು ಅವನ ಒಳ್ಳೆಯ ಅದೃಷ್ಟ.

ಅಜಾಮಿಳನನ್ನು ಮೂಢ ಮತ್ತು ಅಜ್ಞ ಎಂದು ವಿವರಿಸಲಾಗಿದೆ. ಕೇವಲ ಅಜಾಮಿಳ ಒಬ್ಬನೇ ಅಲ್ಲ, ಈ ಐಹಿಕ ಜಗತ್ತಿನಲ್ಲಿರುವ ಎಲ್ಲ ವ್ಯಕ್ತಿಗಳೂ ಅಜ್ಞಾನಿ ಮೂಢರಾಗಿದ್ದಾರೆ. ಏಕೆಂದರೆ ತಮಗೆ ಸಾವು ಬರುತ್ತದೆ ಎಂಬ ಜಾಗೃತಿಯೇ ಅವರಲ್ಲಿ ಇಲ್ಲ. ತಮ್ಮ ಎಲ್ಲ ಯೋಜನೆಗಳು, ಸ್ವತ್ತುಗಳು ನಿರ್ನಾಮವಾಗುತ್ತವೆ ಎಂದು ಅವರಿಗೆ ಗೊತ್ತಿಲ್ಲ. ಒಂದು ವೇಳೆ ಅವರಿಗೆ ತಿಳಿದಿದ್ದರೂ ಕೂಡ ಅದರ ಬಗ್ಗೆ ತಲೆ ಕಡಿಸಿಕೊಳ್ಳುವುದಿಲ್ಲ. ಆದ್ದರಿಂದ ಎಲ್ಲರೂ ಮೂಢರು ಮತ್ತು ಅಜ್ಞಾನಿಗಳು.

ಅಜಾಮಿಳ ಸಾಯುವ ಸಮಯದಲ್ಲಿ ತನ್ನ ಮಗನ ಬಗ್ಗೆಯೇ ಯೋಚಿಸುತ್ತಿದ್ದ. ಅದೃಷ್ಟವಶಾತ್, ಅವನ ಮಗನ ಹೆಸರು “ನಾರಾಯಣ” ಆಗಿತ್ತು. ಆದ್ದರಿಂದಲೇ ಅಜಾಮಿಳನಿಗೆ ಮೋಕ್ಷ ಸಿಕ್ಕಿತು. ಆದರೆ ಒಂದು ವೇಳೆ ನಾನು ನನ್ನ ವ್ಯಾಮೋಹ, ಮಮತೆಯನ್ನು ಒಂದು ನಾಯಿಯಲ್ಲಿ ಇಟ್ಟುಕೊಂಡಿದ್ದರೆ ಆಗ ನನ್ನ ಸ್ಥಿತಿ ಏನಾಗುತ್ತಿತ್ತು?

ಸ್ವಾಭಾವಿಕವಾಗಿ ನಾನು ನನ್ನ ಮರಣ ಸಮಯದಲ್ಲಿ ನನ್ನ ನಾಯಿಯ ಬಗ್ಗೆ ಯೋಚಿಸುತ್ತೇನೆ ಮತ್ತು ನನಗೆ ಕೂಡಲೇ ನಾಯಿಯ ದೇಹ ಸಿಗುತ್ತದೆ. ಅದುವೇ ಪ್ರಕೃತಿಯ ನಿಯಮ : ಯಂ ಯಂ ವಾಪಿ ಸ್ಮರನ್‌ ಭಾವಮ್ ತ್ಯಜತಿ ಅಂತೇ ಕಲೇವರಮ್ ತಮ್ ತಮ್ ಏವೈತಿ – ”ನೀವು ಮರಣಸಮಯದಲ್ಲಿ ಏನನ್ನು ಯೋಚಿಸುತ್ತೀರಿ ಅದನ್ನೇ ಮುಂದಿನ ಜನ್ಮದಲ್ಲಿ ಪಡೆಯುತ್ತೀರಿ” ಅಜಾಮಿಳ ತನ್ನ ಮಗನಿಗೆ ಆತ್ಮೀಯನಾಗಿದ್ದ.

ಆದ್ದರಿಂದ ತನ್ನ ಮರಣಸಮಯದಲ್ಲಿ ಮಗನನ್ನೇ ನೆನಪು ಮಾಡಿಕೊಳ್ಳುತ್ತಿದ್ದ. ಒಂದು ವೇಳೆ ನೀವು ನಿಮ್ಮ ಮರಣ ಸಮಯದಲ್ಲಿ ನಿಮ್ಮ ನಾಯಿಯ ಬಗ್ಗೆ ಯೋಚಿಸುತ್ತಿದ್ದರೆ ಅದೇ ಆಗುತ್ತೀರಿ. ಆದ್ದರಿಂದ ನೀವು “ಹರೇ ಕೃಷ್ಣ” ನಾಮವನ್ನು ಜಪಿಸಿ. ನಿಮ್ಮ ಮರಣ ಸಮಯದಲ್ಲಿ ನೀವು ಕೃಷ್ಣನನ್ನು ಯೋಚಿಸಬಹುದು ಮತ್ತು ನಿಮ್ಮ ಜೀವನವನ್ನು ಯಶಸ್ವಿ ಮಾಡಿಕೊಳ್ಳಬಹುದು.

ಧನ್ಯವಾದಗಳು.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi