– ಡಾ.ಬಿ.ಆರ್. ಸುಹಾಸ್
ಭಾರತವನ್ನು ವರ್ಣಿಸುವಾಗ, ಆಸೇತುಹಿಮಾಚಲ ಎಂಬ ಪದವನ್ನು ಬಳಸಲಾಗುತ್ತದೆ. ಸೇತುವಿನಿಂದ ಹಿಮಾಚಲದವರೆಗೂ ಇರುವ ದೇಶ ಎಂದು ಇದರ ಅರ್ಥ. ಈ ಸೇತು, ಬಂಗಾಳಕೊಲ್ಲಿ ಮತ್ತು ಹಿಂದೂಮಹಾಸಾಗರಗಳ ಸಂಗಮ ಸ್ಥಾನ. ಇಲ್ಲಿಯೇ ಶ್ರೀರಾಮನು ಲಂಕೆಗೆ ಹೋಗಲು ಸೇತುವೆ ನಿರ್ಮಿಸಿದ್ದನು.

ರಾಮಸೇತು ಇರುವ, ಶ್ರೀರಾಮನು ಶಿವನನ್ನು ಪೂಜಿಸಿದ ಈ ಕ್ಷೇತ್ರವೇ ರಾಮೇಶ್ವರಂ. ಶ್ರೀರಾಮನ ಪಾದಸ್ಪರ್ಶದಿಂದ ಪುನೀತವಾಗಿರುವ ಈ ಕ್ಷೇತ್ರ, ಭಾರತದ ಚಾರ್ಧಾಮ್ ಅಥವಾ ನಾಲ್ಕು ಪವಿತ್ರ ಧಾಮಗಳಲ್ಲಿ ಒಂದಾಗಿದೆ. ಚಾರ್ಧಾಮ್ ಎಂದಾಗ ಎರಡು ಚಾರ್ಧಾಮ್ಗಳನ್ನು ಹೇಳಲಾಗುತ್ತದೆ.
ಒಂದು ಬದರೀನಾಥ, ಕೇದಾರನಾಥ, ಗಂಗೋತ್ರಿ, ಮತ್ತು ಯಮುನೋತ್ರಿ. ಈ ನಾಲ್ಕೂ ಉತ್ತರಾಖಂಡದಲ್ಲೇ ಇವೆ. ಇನ್ನೊಂದು ಚಾರ್ಧಾಮ್ ದೇಶದ ನಾಲ್ಕು ಮೂಲೆಗಳಲ್ಲಿರುವ ಕ್ಷೇತ್ರಗಳ ಕೂಟ. ಅವು, ಉತ್ತರದ ಬದರೀನಾಥ, ಪೂರ್ವದ ಪುರಿ ಜಗನ್ನಾಥ, ಪಶ್ಚಿಮದ ದ್ವಾರಕೆ, ಹಾಗೂ ದಕ್ಷಿಣದ ರಾಮೇಶ್ವರಂ.
ಭಗವಾನ್ ವಿಷ್ಣುವು ಪ್ರತಿದಿನವೂ ಈ ನಾಲ್ಕು ಧಾಮಗಳಿಗೆ ಭೇಟಿ ಕೊಡುತ್ತಾನೆ೦ದು ಹೇಳುತ್ತಾರೆ. ಮೊದಲಿಗೆ ಬದರಿನಾಥನ ಬಳಿಯ ಅಲಕನಂದಾ ನದಿಯಲ್ಲಿ ಸ್ನಾನಮಾಡಿ, ದ್ವಾರಕೆಯಲ್ಲಿ ವಸ್ತ್ರಭೂಷಿತನಾಗಿ, ಪುರಿಯಲ್ಲಿ ಛಪ್ಪನ್ ಭೋಗ ( ಐವತ್ತಾರು ತಿನಿಸುಗಳು) ಸೇವಿಸಿ, ಕೊನೆಗೆ ರಾಮೇಶ್ವರಂಗೆ ಬಂದು ವಿಶ್ರಾಂತಿ ಪಡೆಯುತ್ತಾನೆಂದು ಹೇಳುತ್ತಾರೆ.
ಶ್ರೀರಾಮನು ರಾವಣನನ್ನು ಕೊಂದ ಬಳಿಕ, ಬ್ರಹ್ಮಹತ್ಯಾದೋಷದ ನಿವಾರಣೆಗಾಗಿ ಶಿವನನ್ನು ಪೂಜಿಸಿ, ಶಿವಲಿಂಗವನ್ನು ಪ್ರತಿಷ್ಠಾಪಿಸಿದ ಸ್ಥಳವಾದುದರಿಂದ ಇದು ರಾಮೇಶ್ವರವೆಂದು ಪ್ರಖ್ಯಾತವಾಗಿದೆ. ಇದು ಒಂದು ದ್ವೀಪವಾಗಿದ್ದು, ಭಾರತದ ಮುಖ್ಯಭೂಮಿಯಿಂದ, ಅಂದರೆ ತಮಿಳನಾಡಿನ ಚೆನ್ನೈ, ಮಧುರೈ, ಮೊದಲಾದ ಸ್ಥಳಗಳಿಂದ ಇಲ್ಲಿಗೆ ಬಸ್ಸು ಇಲ್ಲವೇ ರೈಲಿನ ಮೂಲಕ ಹೋಗಲು ಪಾಂಬನ್ ಬ್ರಿಡ್ಜ್ ಎಂಬ ಸೇತುವೆ ನಿರ್ಮಾಣ ಮಾಡಲಾಗಿದೆ. ಸಮುದ್ರದ ಮೇಲೆ ಹೋಗುವ ಈ ಪ್ರವಾಸ ಬಹಳ ಉಲ್ಲಾಸದಾಯಕವಾಗಿರುತ್ತದೆ.
ಸ್ಥಳ ಪುರಾಣ
ಹೆಸರೇ ಹೇಳುವಂತೆ, ರಾಮೇಶ್ವರ, ಶ್ರೀರಾಮನು ಈಶ್ವರನನ್ನು ಪೂಜಿಸಿದ ಸ್ಥಳ. ಇದೊಂದು ದ್ವೀಪವಾಗಿದ್ದು ಶಂಖದ ರೂಪದಲ್ಲಿದೆ. ಲಂಕೆಗೆ ಹೋಗಲು ಶ್ರೀರಾಮನು ಇಲ್ಲಿಗೆ ತನ್ನ ವಾನರಸೇನೆಯೊಂದಿಗೆ ಬಂದು ಇಲ್ಲಿನ ಧನುಷ್ಕೋಟಿ ಎಂಬ ಸ್ಥಳದಲ್ಲಿ ಸಮುದ್ರಕ್ಕೆ ಸೇತುವೆ ಕಟ್ಟಿದ.
ಆ ಸೇತುವೆಯ ಮೇಲೆ ಅವನು ತನ್ನ ವಾನರ ಸೇನೆಯೊಂದಿಗೆ ಲಂಕೆಗೆ ಹೋಗಿ, ರಾವಣನನ್ನು ಕೊಂದು ಸೀತೆಯೊಂದಿಗೆ ಪುಷ್ಪಕವಿಮಾನದಲ್ಲಿ ರಾಮೇಶ್ವರಂಗೆ ಬಂದಾಗ, ಅಗಸ್ತ್ಯ ಮಹರ್ಷಿಗಳು ರಾಮನನ್ನು ಭೇಟಿಯಾಗಿ, ರಾವಣನು ದುಷ್ಟನಾಗಿದ್ದರಿಂದ ಅವನನ್ನು ಕೊಂದದ್ದು ಸರಿಯಾಯಿತಾದರೂ, ಬ್ರಹ್ಮನಿಂದ ನಾಲ್ಕನೆಯವನೂ, ವಿಶ್ರವಸು ಮಹರ್ಷಿಗಳ ಮಗನೂ, ಪುಲಸ್ತ್ಯ ಮಹರ್ಷಿಗಳ ಮೊಮ್ಮಗನೂ ಆಗಿದ್ದು ಬ್ರಾಹ್ಮಣನಾಗಿದ್ದರಿಂದ, ಅವನನ್ನು ಕೊಂದು ಉಂಟಾದ ಬ್ರಹ್ಮಹತ್ಯಾ ದೋಷದ ನಿವಾರಣೆಗಾಗಿ ಅಲ್ಲಿ ಶಿವಲಿಂಗವನ್ನು ಪ್ರತಿಷ್ಠಾಪಿಸಿ ಶಿವಪೂಜೆ ಮಾಡಬೇಕೆಂದು ಹೇಳಿದರು.
ಅದರಂತೆ, ಶ್ರೀರಾಮನು ಕೈಲಾಸದಿ೦ದ ಒ೦ದು ಶಿವಲಿಂಗ ತರಲು ತನ್ನ ಮೆಚ್ಚಿನ ಬಂಟ ಹನುಮಂತನನ್ನು ಕಳಿಸಿದನು. ಅಂತೆಯೇ ಕೈಲಾಸಕ್ಕೆ ಹೋದ ಹನುಮಂತನು ಬಹಳ ಹೊತ್ತಾದರೂ ಬರದಿರಲು ಮುಹೂರ್ತ ಮೀರುತ್ತಿದ್ದರಿಂದ ಸೀತೆಯು ಮರಳಿನಲ್ಲಿಯೇ ಒಂದು ಲಿಂಗ ಮಾಡಿದಳು.

ಅವಳ ದಿವ್ಯ ಹಸ್ತಸ್ಪರ್ಶದಿಂದ ಆ ಲಿಂಗ ಗಟ್ಟಿಯಾಯಿತು. ಶ್ರೀರಾಮನು ಆ ಲಿಂಗ ಪ್ರತಿಷ್ಠಾಪಿಸಿ ಪೂಜಿಸಿದನು. ಪೂಜೆ ಮುಗಿದಾಗ ಹನುಮಂತನು ಕೈಲಾಸದಿಂದ ಶಿವಲಿಂಗವನ್ನು ( ಎರಡು ಲಿಂಗಗಳು ಎಂದೂ ಹೇಳುತ್ತಾರೆ) ತಂದನು. ಆದರೆ ಪೂಜೆ ಮುಗಿದು ಹೋಗಿರಲು ಅವಗೆ ಬಹಳ ದುಃಖವಾಯಿತು, ಮತ್ತು ಕೋಪವೂ ಬಂದಿತು. ಆಗ ಶ್ರೀರಾಮನು ಸೈಕತಲಿಂಗ (ಮರಳಿನ ಲಿಂಗ) ವನ್ನು ತೆಗೆದು ಅವನು ತಂದ ಲಿಂಗ ಪ್ರತಿಷ್ಠಾಪಿಸಲು ಹೇಳಿದನು.
ಅಂತೆಯೇ ಹನುಮಂತನು ಸೈಕತಲಿಂಗಕ್ಕೆ ತನ್ನ ಬಾಲವನ್ನು ಕಟ್ಟಿ ಎಳೆದುಕೀಳಲು ಯತ್ನಿಸಿದನು. ಆದರೆ ಎಷ್ಟು ಎಳೆದರೂ ಅದನ್ನು ಕೀಳಲಾಗದಿರಲು ಹನುಮಂತನು ಶ್ರೀರಾಮನ ಮಹಿಮೆಯನ್ನರಿತು ಅವನ ಕಾಲಿಗೆ ಬಿದ್ದನು. ಆಗ ಶ್ರೀರಾಮನು, “ಹನುಮ, ದುಃಖಿಸಬೇಡ. ನೀನು ತಂದ ಲಿಂಗವನ್ನು ಉತ್ತರ ದಿಕ್ಕಿನಲ್ಲಿ ಪ್ರತಿಷ್ಠಾಪಿಸು.
ಮೊದಲು ನೀನು ಪ್ರತಿಷ್ಠಾಪಿಸಿದ ಲಿಂಗಕ್ಕೆ ಪೂಜೆಯಾದ ಅನಂತರವೇ ನಾನು ಪ್ರತಿಷ್ಠಾಪಿಸಿದ ಲಿಂಗಕ್ಕೆ ಪೂಜೆ ಮಾಡಲಾಗುತ್ತದೆ.” ಎಂದು ವರ ಕೊಟ್ಟನು. ಈಗಲೂ ಹಾಗೆಯೇ ಮಾಡಲಾಗುತ್ತಿದೆ. ರಾಮನ ಲಿಂಗಕ್ಕೆ ರಾಮಲಿಂಗವೆಂದೂ ಹನುಮಂತನ ಲಿಂಗಕ್ಕೆ ವಿಶ್ವಲಿಂಗವೆಂದೂ ಹೆಸರಾಯಿತು. ಈ ಸ್ಥಳ ರಾಮೇಶ್ವರವೆಂದು ಖ್ಯಾತವಾಯಿತು.
ರಾಮೇಶ್ವರಂ ಕ್ಷೇತ್ರ ರಾಮಾಯಣದಷ್ಟೇ ಪುರಾತನವಾದುದಾಗಿದೆ. ಶ್ರೀರಾಮನು ಪ್ರತಿಷ್ಠಾಪಿಸಿರುವ ಇಲ್ಲಿನ ಶಿವಲಿಂಗ, ದ್ವಾದಶ ಜ್ಯೋತಿರ್ಲಿಂಗಗಳಲ್ಲಿ ಒಂದಾಗಿದೆ. ಅತ್ಯಂತ ಮಹಿಮೆಯುಳ್ಳ ಈ ಕ್ಷೇತ್ರ ಶೈವರಿಗೂ, ವೈಷ್ಣವರಿಗೂ ಪ್ರಿಯವಾಗಿದೆ. ಇದರ ಮಹಿಮೆ ಕಾಶಿಯಷ್ಟೇ ಸಮವಾಗಿದ್ದು, ಕಾಶಿಯಾತ್ರೆಯು, ಧನುಷ್ಕೋಟಿಯಲ್ಲಿ ಸ್ನಾನ ಮಾಡಿ ರಾಮನಾಥ ಲಿಂಗವನ್ನು ಪೂಜಿಸಿದರಷ್ಟೇ ಸಂಪೂರ್ಣವಾಗುತ್ತದೆಂದು ಹೇಳಲಾಗಿದೆ.
ಮಹೋದ (ಬಂಗಾಳ ಕೊಲ್ಲಿ) ಮತ್ತು ರತ್ನಾಕರ ( ಹಿಂದೂ ಮಹಾಸಾಗರ ) ಸಮುದ್ರಗಳ ಸಂಗಮ ಸ್ಥಳ ಧನಷ್ಕೋಟಿ ಅಥವಾ ರಾಮ ಸೇತು. ರಾಮೇಶ್ವರ ಲಿಂಗದ ಪೂಜೆಯ ಬಳಿಕ, ರಾಮೇಶ್ವರದಿಂದ ಮರಳುವಾಗ ಪುನಃ ಸೇತುಸ್ನಾನ ಮಾಡುತ್ತಾರೆ. ಇಲ್ಲಿ ಪಿತೃಗಳ ಅಸ್ಥಿಗಳನ್ನು ಬಿಡುತ್ತಾರೆ. ಹಾಗೂ ಪಿಂಡಪ್ರದಾನ, ಶ್ರಾದ್ಧಗಳನ್ನು ಮಾಡುತ್ತಾರೆ.
ರಾಮೇಶ್ವರಂನ ಉಲ್ಲೇಖ ಅನೇಕ ಪುರಾಣಗಳು, ಮತ್ತು ಅಪ್ಪರ್ ಜ್ಞಾನ ಸಂಬಂಧರ್ ಮೊದಲಾದ ಕವಿಗಳ ತೇವರಂ ಪದ್ಯಗಳು, ಮೊದಲಾದ ತಮಿಳು ಕೃತಿಗಳಲ್ಲಿ ಕಂಡುಬರುತ್ತದೆ. ಸ್ಕಾಂದಪುರಾಣದಲ್ಲಿ “ಸೇತು ಮಹಾತ್ಮ್ಯ” ಎಂಬ ಅಧ್ಯಾಯವೇ ಇದೆ. ಭಾಗವತದಲ್ಲಿ ಬಲರಾಮನು ಇಲ್ಲಿಗೆ ತೀರ್ಥಯಾತ್ರೆ ಬಂದಿದ್ದರ ಉಲ್ಲೇಖವಿದೆ.
ದೇವಾಲಯ ದರ್ಶನ
ದೇವಾಲಯವು ದ್ರಾವಿಡ ಶೈಲಿಯಲ್ಲಿ ನಿರ್ಮಾಣವಾಗಿದ್ದು, ಬೃಹತ್ ಗೋಪುರಗಳನ್ನು ಹೊಂದಿದೆ. ಪಶ್ಚಿಮ ಗೋಪುರವು 26 ಮೀಟರ್ ಉದ್ದವಿದ್ದು ಐದು ಅಂತಸ್ತುಗಳುಳ್ಳದ್ದಾದರೆ, ಪೂರ್ವ ಗೋಪುರವು 42 ಮೀಟರ್ ಉದ್ದವಿದ್ದು ಒಂಬತ್ತು ಅಂತಸ್ತುಗಳದ್ದಾಗಿದೆ. ಗರ್ಭಗೃಹದ ಮೇಲೊಂದು ಶಿಬಿರವಿದೆ.

ಗರ್ಭಗೃಹವನ್ನು ಮೂರು ಪ್ರಾಕಾರಗಳು ಸತ್ತುವರಿದಿದ್ದು, ಅವುಗಳ ಪಡಸಾಲೆಗಳು ಬಹಳ ಉದ್ದವಾಗಿವೆ. ದಕ್ಷಿಣ ಭಾರತದ ದೇವಾಲಯಗಳಲ್ಲೆಲ್ಲಾ ಈ ಉದ್ದವಾದ ಪಡಸಾಲೆಗಳಿಂದ ರಾಮನಾಥಸ್ವಾಮಿ ದೇವಾಲಯ ಅತ್ಯಂತ ವಿಶಿಷ್ಟವಾಗಿದೆ. ಈ ಎಲ್ಲ ಪಡಸಾಲೆಗಳು ಸೊಗಸಾದ ಚಿತ್ತಾರಗಳಿರುವ ಮೇಲ್ಭಾವಣಿಗಳನ್ನೂ ಅಂಜಲೀಬದ್ಧರಾದ ದೇವಾಲಯ ಪೋಷಕರ ಮೂರ್ತಿಗಳುಳ್ಳ ದೊಡ್ಡ ದೊಡ್ಡ ಕಂಬಗಳನ್ನೂ ಹೊಂದಿವೆ.
ಅತ್ಯಂತ ಹೊರಗಿನದಾದ ಮೂರನೆಯ ಪ್ರಾಕಾರದ ಪಡಸಾಲೆ ವಿಶ್ವದಲ್ಲೇ ಅತ್ಯಂತ ಉದ್ದದ ಪಡಸಾಲೆಯಾಗಿದ್ದು, ಅದು 1240 ಮೀಟರ್ಗಳಷ್ಟು ಉದ್ದವಿದೆ, ಹಾಗೂ 1212 ಕಂಬಗಳಿಂದ ಕೂಡಿದೆ. ಈ ಪಡಸಾಲೆಗಳಲ್ಲಿ ನಡೆಯುವುದು ಆಶ್ಚರ್ಯಾನಂದಗಳನ್ನು ಉಂಟುಮಾಡುತ್ತದೆ.
ಅತ್ಯಂತ ಒಳಗಿನದಾದ ಮೊದಲನೆಯ ಪ್ರಾಕಾರದಲ್ಲಿ ರಾಮನಾಥಸ್ವಾಮಿಯ ಮಂದಿರವಿದೆ. ಇದಕ್ಕೆ ಗರ್ಭಗೃಹ, ಅಂತರಾಳ, ಮತ್ತು ಮಹಾಮಂಟಪಗಳಿದ್ದು, ಪೂಜೆಯ ಸಮಯದಲ್ಲಿ ಭಕ್ತರು ಮಹಾಮಂಟಪದಲ್ಲಿ ನೆರೆಯುತ್ತಾರೆ. ಗರ್ಭಗೃಹದಲ್ಲಿ ಎರಡು ಶಿವಲಿಂಗಗಳಿವೆ.
ಒಂದು ಸೀತೆಯು ನಿರ್ಮಿಸಿ ರಾಮನು ಪ್ರತಿಷ್ಠಾಪಿಸಿರುವ ಮರಳುಗಲ್ಲಿನ ರಾಮಲಿಂಗ, ಮತ್ತು ಇದರ ಬಲಕ್ಕಿರುವ, ಹನಮಂತನು ತಂದು ಪ್ರತಿಷ್ಠಾಪಿಸಿರುವ ಸ್ಫಟಿಕದ ವಿಶ್ವಲಿಂಗ. ಶ್ರೀರಾಮನು ವರಕೊಟ್ಟಂತೆ, ಸಾಂಪ್ರದಾಯಿಕವಾಗಿ ಮೊದಲು ಸ್ಫಟಿಕದ ವಿಶ್ವಲಿಂಗಕ್ಕೆ ಪೂಜೆಯಾಗುತ್ತದೆ.
ಗರ್ಭಗೃಹದ ಎದುರು ಒಂದು ಬೃಹತ್ ನಂದಿಯ ಮೂರ್ತಿಯಿದೆ. ಚಿನ್ನದ ಲೇಪವಿರುವ ಗರುಡಸ್ತಂಭ ನಂದಿಯ ವಿಗ್ರಹದ ಹಿಂದೆ ಇದೆ. ಗರ್ಭಗುಡಿಯ ಬಲಕ್ಕೆ ಪಾರ್ವತಿದೇವಿಯ ಗುಡಿಯಿದ್ದು ಇಲ್ಲಿ ಪಾರ್ವತಿಯ, ‘ಪರ್ವತವರ್ಧಿನಿ ಅಮ್ಮʼ ಎಂದು ಕರೆಯಲ್ಪಡುವ ನಿಂತಿರುವ ಭಂಗಿಯ ಮೂರ್ತಿಯಿದೆ.
ಈ ಅಮ್ಮನವರ ಗುಡಿಯ ಎದುರಿಗೆ ಶುಕ್ರವಾರ – ಮಂಟಪವೆಂಬ ಸೊಗಸಾದ ಮಂಟಪವಿದ್ದು ಇಲ್ಲಿ ದೇವತೆಗಳ ಮತ್ತು ಸೇತುಪತಿ ರಾಜರ ಮೂರ್ತಿಗಳಿರುವ ಕಂಬಗಳಿವೆ. ಪ್ರತಿ ಶುಕ್ರವಾರ ದೇವಿಯು ಭಕ್ತರಿಗೆ ಸಭೆ ನಡೆಸಿ ರಾಮನಾಥನನ್ನು ತನ್ನ ಚಿನ್ನದ ಪಲ್ಲಕ್ಕಿಯಲ್ಲಿ ಹೋಗಿ ನೋಡುವ ಒಂದು ಉತ್ಸವ ನಡೆಯತ್ತದೆ.
ಮಧ್ಯದ ಪ್ರಾಕಾರದಲ್ಲಿ ಸೇತುಮಾಧವ ಎಂಬ ವಿಷ್ಣುವಿನ ಮಂದಿರವೂ ಇದೆ. ಈ ಸೇತುಮಾಧವ ರಾಮಸೇತುವಿನ ಕ್ಷೇತ್ರಪಾಲನೆಂದು ಹೇಳುತ್ತಾರೆ. ಪ್ರವೇಶದ ಬಳಿ ವಲ್ಲಭ ವಿನಾಯಕರ್ (ಗಣೇಶ ) ಮತ್ತು ಸುಬ್ರಹ್ಮಣ್ಯರ ಮಂದಿರಗಳಿವೆ. ಹನುಮಂತನು ಕಾಶಿಯಿ೦ದ ತಂದನೆಂದು ಹೇಳಲಾಗುವ ಶಿವಲಿಂಗವಿರುವ ಕಾಶೀವಿಶ್ವನಾಥ ಮಂದಿರವೂ ವಿಶಾಲಾಕ್ಷಿದೇವಿಯ ಮಂದಿರವೂ ಇವೆ.
ಇವಲ್ಲದೇ, ಪ್ರಾಕಾರಗಳಲ್ಲಿ, ರಾಮ, ಹನಮಂತ, ಶಿವ, ಪಾರ್ವತಿಯರ ಅನೇಕ ಗುಡಿಗಳಿವೆ. ಎರಡನೆಯ ಪ್ರಾಕಾರದ ಒಂದು ಮಂಟಪದಲ್ಲಿ ಬೆಲೆಬಾಳುವ ಆಭರಣಗಳು, ಪಲ್ಲಕ್ಕಿ, ಮೊದಲಾಗಿ ದೇವಾಲಯಕ್ಕೆ ಸಂದ ಉಡುಗೊರೆಗಳಿವೆ. ಕಲ್ಯಾಣ ಮಂಟಪ ಮತ್ತು ನವರಾತ್ರಿ ಮಂಟಪಗಳೆಂಬ ಮಂಟಪಗಳಿದ್ದು ಸೊಗಸಾದ ಕೆತ್ತನೆಗಳಿಂದ ಕೂಡಿವೆ. ಅಂತೆಯೇ ಪ್ರಾಕಾರಗಳಲ್ಲಿ ಶಿವ, ವಿಷ್ಣು, ದೇವಿಯರ ಹಲವಾರು ಸುಂದರ ಕೆತ್ತನೆಗಳಿವೆ.

ರಾಮೇಶ್ವರ ದೇವಾಲಯದ ಅತ್ಯಂತ ಪ್ರಮುಖವಾದ ಒಂದು ವೈಶಿಷ್ಟ್ಯವೆಂದರೆ, ದೇವಾಲಯದ ಆವರಣದಲ್ಲಿ ಇಪ್ಪತ್ತೆರಡು ಬಾವಿ ತೀರ್ಥಗಳಿದ್ದು, ಇವುಗಳ ಸ್ನಾನದ ಬಳಿಕ ದೇವರ ದರ್ಶನ ಮಾಡುವುದು. ಅನೇಕರು ಈ ಕ್ರಮವನ್ನು ಪಾಲಿಸುತ್ತಾರೆ. ಈ ತೀರ್ಥಗಳ ನೀರು ಪವಿತ್ರವೂ ಪಾಪಹರವೂ ಆಗಿದ್ದು ಇವುಗಳ ಸ್ನಾನ ಒಂದು ದೈವಿಕ ಅನುಭವ ಕೊಡುತ್ತದೆ.
ಒಂದು ಸುತ್ತು ಹಾಕುತ್ತಾ ಪ್ರತಿ ಬಾವಿಯ ಬಳಿಯೂ ನಿಂತರೆ, ಒಂದೊಂದರ ಬಳಿಯೂ ನೀರು ಸೇದಿ ಹಾಕುವವರಿದ್ದು, ನೀರು ಸೇದಿ ನಮ್ಮ ಮೇಲೆ ಸುರಿಯುತ್ತಾರೆ. ಅಷ್ಟೊಂದು ಬಾವಿಗಳ ನೀರು ಸುರಿಸಿಕೊಂಡು ನೆಗಡಿ ಬರವುದೆಂದೇನೂ ಹೆದರಬೇಕಿಲ್ಲ. ಯಾವ ತೊಂದರೆಯೂ ಆಗದ ಈ ತೀರ್ಥಸ್ನಾನವನ್ನು ತಪ್ಪಿಸಲೇಬಾರದು.
ಈ ಇಪ್ಪತ್ತೆರಡು ತೀರ್ಥಗಳು ಹೀಗಿವೆ – ಮಹಾಲಕ್ಷ್ಮೀ ತೀರ್ಥ, ಸಾವಿತ್ರೀ ತೀರ್ಥ, ಗಾಯತ್ರೀ ತೀರ್ಥ, ಸರಸ್ವತೀ ತೀರ್ಥ, ಸೇತುಮಾಧವ ತೀರ್ಥ, ಗಂಧಮಾದನ ತೀರ್ಥ, ಕವಚ ತೀರ್ಥ, ಗವಯ ತೀರ್ಥ, ನಳ ತೀರ್ಥ, ನೀಲ ತೀರ್ಥ, ಶಂಕರ ತೀರ್ಥ, ಚಕ್ರತೀರ್ಥ, ಬ್ರಹ್ಮಹತ್ಯಾಪಾತಕ ವಿಮೋಚನಾ ತೀರ್ಥ, ಸೂರ್ಯ ತೀರ್ಥ, ಚಂದ್ರ ತೀರ್ಥ, ಗಂಗಾ ತೀರ್ಥ, ಯಮುನಾ ತೀರ್ಥ, ಗಯಾ ತೀರ್ಥ, ಸತ್ಯಾಮೃತ ತೀರ್ಥ, ಸರ್ವ ತೀರ್ಥ, ಮತ್ತು ಕೋಟಿ ತೀರ್ಥ.
ಇವುಗಳ ಸ್ನಾನಗಳಿಗೆ ವಿವಿಧ ಫಲಗಳನ್ನು ಹೇಳಲಾಗಿದೆ. ಇವುಗಳಲ್ಲಿ ಕೋಟಿತೀರ್ಥ ಅತ್ಯಂತ ಶ್ರೇಷ್ಠವಾಗಿದ್ದು ಇದು ನೀರನ್ನು ಅಭಿಷೇಕಕ್ಕೆ ಬಳಸಲಾಗುತ್ತದೆ. ಹಾಗಾಗಿ ಯಾತ್ರಿಕರು ಈ ನೀರನ್ನು ತೆಗೆದುಕೊಂಡು ಕಾಶಿ ಹಾಗೂ ಕೇದಾರಗಳಿಗೆ ಹೋಗಿ ಅರ್ಪಿಸುತ್ತಾರೆ. ಅಂತೆಯೇ ಅಲ್ಲಿಂದ ಗಂಗೆಯ ನೀರನ್ನು ಇಲ್ಲಿಗೆ ತಂದು ಅರ್ಪಿಸುತ್ತಾರೆ.
ಈ ತೀರ್ಥಸ್ನಾನಗಳ ಬಳಿಕ, ಬಟ್ಟೆಗಳನ್ನು ಬದಲಿಸಿ, ದರ್ಶನಕ್ಕೆ ಹೋಗಬೇಕು. ಬಟ್ಟೆ ಬದಲಿಸವುದಕ್ಕೆ ಕೋಣೆಗಳಿವೆ. ಈ ತೀರ್ಥಗಳ ಸ್ನಾನದಂತೆಯೇ, ದೇವಾಲಯದ ಎದುರಿಗಿರುವ ಸಮುದ್ರದ ಸ್ನಾನವೂ ಶ್ರೇಷ್ಠವೆನ್ನಲಾಗಿದೆ. ಅಗ್ನಿ ತೀರ್ಥವೆಂದು ಕರೆಯಲಾಗುವ ಈ ಸಮುದ್ರದಲ್ಲಿ ಅನೇಕ ಯಾತ್ರಿಕರು ಸ್ನಾನ ಮಾಡುತ್ತಾರೆ. ಈ ಸಮುದ್ರದ ನೀರನ್ನೂ ಪವಿತ್ರವೆಂದು ಕಾಶಿಗೆ ತೆಗೆದುಕೊಂಡು ಹೋಗಿ ಅರ್ಪಿಸವುದುಂಟು. ಸಮುದ್ರ ಸ್ನಾನವು ಆಹ್ಲಾದಕರವೂ ದೈವೀ ಅನುಭವ ಕೊಡವುದೂ ಆಗಿರುತ್ತದೆ.
ಧನುಷ್ಕೋಟಿ ಮತ್ತು ಶ್ರೀ ಕೋದಂಡರಾಮ ದೇವಾಲಯ
ವಿಭೀಷಣನ ಕೋರಿಕೆಯಂತೆ, ರಾಮನು ತನ್ನ ಧನುಸ್ಸಿನ ತುದಿಯಿಂದ ಇಲ್ಲಿನ ಭೂಮಿಯನ್ನು ಭೇದಿಸಿದನು. ಧನುಸ್ಸು ಎಂದರೆ ಬಿಲ್ಲು ಹಾಗೂ ಕೋಟಿ ಎಂದರೆ ತುದಿ. ಹಾಗಾಗಿ ಈ ಸ್ಥಳಕ್ಕೆ ಧನುಷ್ಕೋಟಿ ಎಂದು ಹೆಸರಾಯಿತು. ರಾಮನ ಬಿಲ್ಲಿನ ಗುರುತಿನಿಂದ ಇಲ್ಲಿನ ಸೇತುವೆ ಬಂಧಿಸಲ್ಪಟ್ಟಿದೆ. ಇಲ್ಲಿಂದ ಶ್ರೀಲಂಕ ಕೇವಲ ಹದಿನಾಲ್ಕು ಕಿ.ಮೀ. ದೂರದಲ್ಲಿದೆ ಎಂದು ಹೇಳುತ್ತಾರೆ. ಆದರೆ ಅಲ್ಲಿಗೆ ದೋಣಿಯಲ್ಲಿ ಹೋಗಲು ಅನುಮತಿಯಿಲ್ಲ.
ಇಲ್ಲಿ ನೋಡಬೇಕಾದ ಒಂದು ಪ್ರಮುಖ ದೇವಾಲಯವೆಂದರೆ ಶ್ರೀ ಕೋದಂಡರಾಮ ದೇವಾಲಯ. ಇದನ್ನು ಒಂದು ಪುಟ್ಟ ಬಂಡೆಯ ಮೇಲೆ ಕಟ್ಟಲಾಗಿದ್ದು ಒಳಗೆ ರಾಮ, ಸೀತೆ, ಲಕ್ಷ್ಮಣ ಮತ್ತು ವಿಭೀಷಣರ ವಿಗ್ರಹಗಳಿವೆ. ಗೋಡೆಗಳ ಮೇಲೆ ರಾಮೇಶ್ವರಂ ಕಥೆ ಹಾಗೂ ವಿಭೀಷಣನು ರಾಮನಿಗೆ ಶರಣಾಗುವ, ಅವನಿಗೆ ಪಟ್ಟಾಭಿಷೇಕ ಮಾಡುವ ಹಲವಾರು ಸುಂದರ ಚಿತ್ರಗಳಿವೆ.
ಅಂತೆಯೇ ಇಡೀ ಭಾರತದಲ್ಲಿ ಶ್ರೀರಾಮನು ಸಂಚರಿಸಿದ ಸ್ಥಳಗಳ ಒಂದು ಪಟ್ಟಿಯನ್ನು ಭೂಪಟದೊಂದಿಗೆ ಹಾಕಲಾಗಿದೆ. ಈ ದೇವಾಲಯವನ್ನು ನಿರ್ಮಿಸಿರುವ ಸ್ಥಳದಲ್ಲೇ ವಿಭೀಷಣನು ಶ್ರೀರಾಮನಿಗೆ ಶರಣಾಗತನಾದನೆಂದೂ, ಇಲ್ಲಿಯೇ ವಿಭೀಷಣನಿಗೆ ಲಕ್ಷ್ಮಣನು ತಾತ್ಕಾಲಿಕವಾಗಿ ಲಂಕೆಯ ಪಟ್ಟಾಭಿಷೇಕ ಮಾಡಿದನೆಂದೂ ಹೇಳಲಾಗಿದೆ.
ಇದನ್ನು ಸ್ಮರಿಸುವ ಸಲುವಾಗಿ, ಮೇ- ಜೂನ್ನಲ್ಲಿ ಒಂದು ಉತ್ಸವ ಮಾಡಿ, ಹಿಂದಿನ ದಿನ, ರಾಮೇಶ್ವರಂ ಪೇಟೆಯ ತಿಟ್ಟಕುಡಿಯಲ್ಲಿ ರಾವಣವಧೆಯ ಅನಂತರ, ಉತ್ಸವದ ದಿನ, ಶ್ರೀರಾಮನ ಉತ್ಸವ ಮೂರ್ತಿಯನ್ನು ಇಲ್ಲಿಗೆ ತಂದು ವಿಭೀಷಣನ ಪಟ್ಟಾಭಿಷೇಕ ಮಾಡಿ, ಮರುದಿನ, ರಾಮೇಶ್ವರಂನಲ್ಲಿ ರಾಮಲಿಂಗ ಪ್ರತಿಷ್ಠೆಯ ಉತ್ಸವವನ್ನು ಆಚರಿಸುತ್ತಾರೆ.






Leave a Reply