ವಿದುರ

ಭಾಗವತದ ಪಾತ್ರ ಪರಿಚಯ : ಭಕ್ತ ಮಹಾಶಯರು

(ಆಧಾರ – ಶ್ರೀ ಶ್ರೀಮದ್‌ ಎ.ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದರ ಭಾವಾರ್ಥಗಳು, ಭಾಗವತ ಪ್ರಥಮ ಸ್ಕಂಧ; 13ನೇ ಅಧ್ಯಾಯ)

ಮಹಾಭಾರತದ ಚರಿತ್ರೆಯ ಪ್ರಮುಖ ಪಾತ್ರಗಳಲ್ಲಿ ಒಬ್ಬ. ಅವನು ಮಹಾರಾಜ ಪಾಂಡುವಿನ ತಾಯಿಯಾದ ಅಂಬಿಕೆಯ ದಾಸಿಯ ಗರ್ಭದಲ್ಲಿ ವ್ಯಾಸಮಹರ್ಷಿಗಳಿಂದ ಜನ್ಮತಳೆದವನು. ಅವನು ಯಮರಾಜನ ಅವತಾರ. ಮಾಂಡವ್ಯ ಮುನಿಯ ಶಾಪದಿಂದಾಗಿ ಅವನು ಶೂದ್ರನಾಗಬೇಕಾಯಿತು. ಅದರ ಕಥಾ ವಿವರ ಹೀಗಿದೆ.

ಒಮ್ಮೆ ನಗರ ರಕ್ಷಕರು ಕೆಲವು ಕಳ್ಳರನ್ನು ಹಿಡಿದರು. ಆ ಕಳ್ಳರು ಮಾಂಡವ್ಯ ಮುನಿಯ ಆಶ್ರಮದಲ್ಲಿ ಅಡಗಿಕೊಂಡಿದ್ದರು. ಈ ಆರಕ್ಷಕ ಸಿಬ್ಬಂದಿ ಸಹಜವಾಗಿ ಕಳ್ಳರೊಂದಿಗೆ ಮಾಂಡವ್ಯ ಮುನಿಯನ್ನೂ ಬಂಧಿಸಿತು. ಆರಕ್ಷಕರು ಮುನಿಯನ್ನು ಈಟಿಯಿಂದ ತಿವಿದು ಸಾಯಿಸುವಂತೆ ವಿಶೇಷವಾದ ಶಿಕ್ಷೆ ವಿಧಿಸಿದರು.

ಇನ್ನೇನು, ಈಟಿಯಿಂದ ಇರಿಯಬೇಕೆಂದಿರುವಾಗ ರಾಜನಿಗೆ ಸುದ್ದಿ ತಲಪಿತು. ಅವನು ಮಹಾ ಮುನಿಯಾದ್ದರಿಂದ ಕರುಣೆಯಿಂದ ರಾಜನು ಆ ಕಾರ್ಯವನ್ನು ಕೂಡಲೆ ತಡೆದನು. ತನ್ನ ಜನ ಮಾಡಿದ ತಪ್ಪಿಗಾಗಿ ರಾಜನು ವೈಯಕ್ತಿಕವಾಗಿ ಮುನಿಯ ಕ್ಷಮೆ ಬೇಡಿದನು. ಕೂಡಲೆ ಆ ಮುನಿಯು ಯಮರಾಜನಲ್ಲಿಗೆ ಹೋದನು.

ಅವನೇ ತಾನೆ ಎಲ್ಲ ಜೀವಿಗಳ ಹಣೆಬರಹವನ್ನು ವಿಧಿಸುವವನು! ಮುನಿಯು ಈ ಕುರಿತು ಯಮನನ್ನು ಪ್ರಶ್ನೆ ಮಾಡಿದನು. ಮುನಿಯು ಬಾಲಕನಾಗಿದ್ದಾಗ ಚೂಪಾದ ದರ್ಭೆಯಿಂದ ಪಕ್ಷಿಯನ್ನು ಚುಚ್ಚಿದ್ದನ್ನು; ಆ ಕಾರಣದಿಂದ ಅವನು ಕಷ್ಟಕ್ಕೆ ಸಿಲುಕಿದನು ಎಂದು ಯಮರಾಜನು ಉತ್ತರವಿತ್ತನು.

ಬಾಲ್ಯ ಸಹಜ ಮುಗ್ಧತೆಗೆ ಶಿಕ್ಷೆ ಕೊಡುವುದು ಯಮನ ಅವಿವೇಕದ ವರ್ತನೆಯೆಂದು ಮುನಿಯು ಭಾವಿಸಿ, ಶೂದ್ರನಾಗೆಂದು ಯಮನಿಗೆ ಶಾಪವಿತ್ತನು. ಹೀಗೆ ಯಮನ ಅವತಾರವಾದ ಈ ಶೂದ್ರನೇ ವಿದುರ; ಧೃತರಾಷ್ಟ್ರ ಮತ್ತು ಮಹಾರಾಜ ಪಾಂಡುವಿನ ಶೂದ್ರ ಸಹೋದರ.

ಆದರೆ ಭೀಷ್ಮಾಚಾರ್ಯರು ತನ್ನ ಇತರ ಸೋದರ ಪುತ್ರರೊಂದಿಗೆ ಕುರುವಂಶದ ಈ ಶೂದ್ರ ಪುತ್ರನನ್ನು ಸಮನಾಗಿ ಪೋಷಿಸಿದರು. ಕಾಲಾಂತರದಲ್ಲಿ ಬ್ರಾಹ್ಮಣನಿಂದ ಶೂದ್ರಾಣಿಯ ಗರ್ಭದಲ್ಲಿ ಜನ್ಮತಳೆದ ಕನ್ಯೆಯನ್ನೆ ವಿದುರನು ಮದುವೆಯಾದನು.

ವಿದುರನು ವಂಶಪರಂಪರೆಯಿಂದ ಬಂದ ಸೊತ್ತನ್ನು ತನ್ನ ತಂದೆಯಿಂದ (ಭೀಷ್ಮಾಚಾರ್ಯರ ಸೋದರ) ಪಡೆಯದಿದ್ದರೂ, ವಿದುರನ ಹಿರಿಯಣ್ಣನಾದ ಧೃತರಾಷ್ಟ್ರನು ಅವನಿಗೆ ರಾಜ್ಯದ ಸ್ವತ್ತಿನಲ್ಲಿ ಸಾಕಷ್ಟು ಅವಕಾಶವಿತ್ತಿದ್ದನು.

ವಿದುರ ತನ್ನ ಹಿರಿಯಣ್ಣನಿಗೆ ತುಂಬ ಹತ್ತಿರದವನಾಗಿದ್ದ; ಅಲ್ಲದೆ ಅವನಿಗೆ ನ್ಯಾಯವಾದ ಮಾರ್ಗವನ್ನು ತೋರಲು ಉದ್ದಕ್ಕೂ ಪ್ರಯತ್ನಪಟ್ಟ.

ಭ್ರಾತೃವಧೆಯ ಕುರುಕ್ಷೇತ್ರ ಯುದ್ಧದಲ್ಲಿ ವಿದುರ ಪಾಂಡುಪುತ್ರರಿಗೆ ನ್ಯಾಯವೊದಗಿಸಿಕೊಡುವಂತೆ ಮತ್ತೆ ಮತ್ತೆ ತನ್ನ ಹಿರಿಯಣ್ಣನನ್ನು ಅಂಗಲಾಚಿದ; ಆದರೆ ದುರ್ಯೋಧನ ತನ್ನ ಚಿಕ್ಕಪ್ಪನ ಅಂತಹ ಮಧ್ಯಸ್ಥಿಕೆಯನ್ನು ಇಷ್ಟಪಡಲಿಲ್ಲ.

ವಿದುರನಿಗೆ ಕಾರ್ಯತಃ ಅವಮಾನವನ್ನೇ ಮಾಡಿದ. ಇದರ ಪರಿಣಾಮವಾಗಿ ವಿದುರ ಮನೆ ಬಿಟ್ಟು ತೀರ್ಥಯಾತ್ರೆ ಮಾಡುತ್ತ ಮೈತ್ರೇಯರಿಂದ ಉಪದೇಶ ಪಡೆದನು.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi