ಶ್ರೀ ಶ್ರೀಮದ್ ಎ.ಸಿ.ಭಕ್ತಿವೇದಾಂತ ಸ್ವಾಮಿ ಪ್ರಭುಪಾದರು ಹಾಗೂ ಇಬ್ಬರು ಪಾದ್ರಿಗಳು ಮತ್ತು ಇಬ್ಬರು ಕ್ರೈಸ್ತ ವಿದ್ವಾಂಸರ ನಡುವೆ ನಡೆದ ಸಂವಾದ
ಸ್ಥಳ: ಪ್ಯಾರಿಸ್, ದಿನಾಂಕ: ಜೂನ್ 15, 1974
– ಅನುವಾದ : ಚೇತನಾ ತೀರ್ಥಹಳ್ಳಿ
ಮೇಡಮ್ ಸಿಯೌಡ್: ನೀವು ಹೇಳಿದಂತೆ ಏಸುವು ದೇವಪುತ್ರ. ಅವನ ದೇಹವು ಆಧ್ಯಾತ್ಮಿಕ. ಆದರೆ ಏಸುವು ಭೂಮಿಯ ಮೇಲೆ ಮಾನವ ಜೀವನವನ್ನು ನಡೆಸಲು ಇಚ್ಛಿಸಿದ್ದರಿಂದ, ಆತನು ಭೌತಿಕ ಶರೀರವನ್ನು ಸ್ವೀಕರಿಸಿದ್ದನೆಂದು ನಾವು ತಿಳಿಯುತ್ತೇವೆ.

ಶ್ರೀಲ ಪ್ರಭುಪಾದ: ಏಸುವು ಭೌತಿಕ ಶರೀರವನ್ನು ಸ್ವೀಕರಿಸಿದ್ದನೆಂದು ನೀವೇಕೆ ಭ್ರಮಿಸುತ್ತೀರಿ?
ಮೇಡಮ್ ಸಿಯೌಡ್: ಏಸುವು ಯಾತನೆ ಹಾಗೂ ಮರಣಗಳಿಗೆ ಪಕ್ಕಾಗಿದ್ದನೆಂದು ಸಾರುವ ಪ್ರಾರ್ಥನೆಯನ್ನು ನಾವು ಪಠಿಸುತ್ತೇವೆ.
ಶ್ರೀಲ ಪ್ರಭುಪಾದ: ಆದರೆ ಅದು ಮರಣ ಎಂದು ಕರೆಯಲ್ಪಡುವ ಸಾವಷ್ಟೆ. ನಿಮ್ಮ ಮನಸ್ಸಿನಲ್ಲಿ ನೀವು ಯೋಚಿಸುತ್ತೀರಿ, ನೀವು ಭ್ರಮಿಸುತ್ತೀರಿ, ಅವನು ಮರಣಿಸಿರುವನೆಂದು. ಆದರೆ ಅವನು ಪುನರುಜ್ಜೀವನ ತಳೆದು ಬಂದನು.
ಮೇಡಮ್ ಸಿಯೌಡ್: ಆದರೆ ಗಾಸ್ಪೆಲ್ ನಲ್ಲಿ ಆತನು ಮರಣಿಸಿದನೆಂದು ಹೇಳಿದೆ.
ಶ್ರೀಲ ಪ್ರಭುಪಾದ: ಅದು ಸರಿ.
ಮೇಡಮ್ ಸಿಯೌಡ್: ಇದೀಗ ನೀವು ಸಮ್ಮತಿಸಿದಂತೆ ಒಟ್ಟಾರೆಯಾಗಿ ವೇದಗಳಲ್ಲಿ ಕಾಣಬರುವ ಮಾತನ್ನು ಒಪ್ಪಿಕೊಂಡಂತೆ ಸಂಪೂರ್ಣವಾಗಿ ಬೈಬಲ್ ನಲ್ಲಿ ಕಂಡಿದ್ದನ್ನು ನಾವು ಒಪ್ಪಿಕೊಳ್ಳುವೆವು.
ಶ್ರೀಲ ಪ್ರಭುಪಾದ: ಆದರೆ ಬೈಬಲ್ ನಲ್ಲಿ ಏಸುವು ‘ಮರಣಿಸಿದ್ದನ್ನು’ ಹೇಳುವಾಗ ಅದು ಮರಣವನ್ನು ಹೋಲುವ ಬೇರೇನೋ ಅರ್ಥವನ್ನು ಹೊಮ್ಮಿಸಿದೆ. ”ಜನ್ಮ ಕರ್ಮಚ ಮೇ ದಿವ್ಯಮ್” – ಭಗವದ್ಗೀತೆಯಲ್ಲಿ ಶ್ರೀಕೃಷ್ಣನು ತನ್ನ ಹಾಗೂ ತನ್ನೆಲ್ಲ ಶುದ್ಧ ಭಕ್ತರ ಜನನ, ಜೀವನ ಹಾಗೂ ಅಂತರ್ಧಾನಗಳೆಲ್ಲವೂ ಪಾರಮಾರ್ಥಿಕವೆಂದು ಹೇಳಿದ್ದಾನೆ.
ಉದಾಹರಣೆಗೆ: ಮೇರಿ ಮಾತೆಯ ಉದರದಿಂದ ಕ್ರಿಸ್ತನ “ಜನನ”, ಅದೊಂದು ಸಾಧಾರಣ ಭೌತಿಕ ಜನನದಂತೆ ಕಂಡುಬಂದರೂ ವಾಸ್ತವದಲ್ಲಿ ಹಾಗಿಲ್ಲ. ಅದು ಜನನದಂತೆ ತೋರುವ ಒಂದು ಪ್ರಕ್ರಿಯೆ. ವಾಸ್ತವದಲ್ಲಿ ಅದು ಪಾರಮಾರ್ಥಿಕವಾದುದು.
ಮೇಡಮ್ ಸಿಯೌಡ್: ಇಲ್ಲ. ಕ್ರಿಸ್ತನ ಮರಣವನ್ನು ನಿಜವಾದ ಮರಣವೆಂದು ನಾವು ಒಪ್ಪಿಕೊಳ್ಳುವುದು ಮಹತ್ವವಾದುದು. ನಮ್ಮ ತಾತ್ತ್ವಿಕತೆಯ ಕೇಂದ್ರ ಶ್ರದ್ಧೆಯು ಏಸುಕ್ರಿಸ್ತನು ವಾಸ್ತವದಲ್ಲಿ ಮರಣಿಸಿದನೆಂದು ತಿಳಿಯುವುದರಲ್ಲಿದೆ.
ಶ್ರೀಲ ಪ್ರಭುಪಾದ: ಇಲ್ಲ. ವೈದಿಕ ಸಾಹಿತ್ಯವು ಕನಿಷ್ಠ ಜೀವರಾಶಿಯು ಕೂಡ ಮರಣಿಸುವುದಿಲ್ಲವೆಂದು ಹೇಳುತ್ತದೆ. “ನ ಹನ್ಯತೇ ಹನ್ಯಮಾನೇ ಶರೀರೇ’. ನಿಮಗೆ ಸಂಸ್ಕೃತ ಅರ್ಥವಾಗುತ್ತದೆಯೇ?
ಮೇಡಮ್ ಸಿಯೌಡ್: ಕೇಳುವುದರಿಂದ ಇಲ್ಲ. ಓದಿ ಅರ್ಥೈಸಿಕೊಳ್ಳಬಲ್ಲೆ.
ಶ್ರೀಲ ಪ್ರಭುಪಾದ: ನ ಹನ್ಯತೇಃ “ಆತ್ಮವನ್ನು ಕೊಲ್ಲಲಾಗುವುದಿಲ್ಲ” ಮತ್ತು ಹನ್ಯ ಮಾನೇ ಶರೀರೇಃ “ದೇಹವು ಮರಣಿಸಿದ ಅನಂತರವೂ ಕೂಡ ಆತ್ಮಕ್ಕೆ ಸಾವಿರುವುದಿಲ್ಲ”.
ಫಾದರ್ ಕ್ಯಾನಿವೆಜ್: ಶ್ರೀಮಾನ್ಯರೇ, ಈ ಸಂಭಾಷಣೆಗೆ ಸಂಬಂಧಿಸಿದಂತೆ, ನಾವು ಪರಸ್ಪರ ಸ್ಥಾನಗಳನ್ನು ಗೌರವಿಸಬೇಕು. ನಾವಿಲ್ಲಿ ಮತ್ತೊಬ್ಬರನ್ನು ಮತಾಂತರಿಸಬೇಕೆಂದಲ್ಲ. ನಾವು ನಿಮ್ಮ ವೈದಿಕ ತತ್ತ್ವಜ್ಞಾನದಲ್ಲಿನ ಪರಮ ಶ್ರದ್ಧೆಯನ್ನು ಗೌರವಿಸುವಂತೆಯೇ, ನೀವು ಕೂಡ ಏಸುಕ್ರಿಸ್ತನ ಜೀವನ ಹಾಗೂ ಮರಣಗಳಿಗೆ ಸಂಬಂಧಿಸಿದ ಕ್ರೈಸ್ತ ವ್ಯಾಖ್ಯಾನಗಳನ್ನು ಗೌರವಿಸಬೇಕು.

ಶ್ರೀಲ ಪ್ರಭುಪಾದ: ಓಹ್! ನಾನು ನೀವು ಗೌರವಿಸುವುದಕ್ಕಿಂತಲೂ ಹೆಚ್ಚಾಗಿಯೇ ಏಸುಕ್ರಿಸ್ತನನ್ನು ಗೌರವಿಸುತ್ತೇನೆ. ನೀವು “ಏಸುವು ಮರಣಿಸಿದ” ಎಂದು ಹೇಳುತ್ತೀರಿ, ನಾನು, ‘ಏಸುವು ಸಾಯುವುದಿಲ್ಲ” ಎನ್ನುತ್ತೇನೆ. ಗೌರವದ ಕುರಿತು ಹೇಳುವುದಾದರೆ, ನಿಮಗಿಂತ ಹೆಚ್ಚಾಗಿ ನನಗೆ ಏಸುಕ್ರಿಸ್ತನ ಬಗ್ಗೆ ಗೌರವವಿದೆ. ನೀವು ಏಸುಕ್ರಿಸ್ತನು ಮರಣಿಸುವುದನ್ನು ನೋಡಲು ಬಯಸುತ್ತೀರಿ. ಆದರೆ ನಾನು ಆತನು ಮರಣಿಸುವುದನ್ನು ನೋಡಲಾರೆ.
ಮೇಡಮ್ ಸಿಯೌಡ್: ಏಸುವು ಮರಣಿಸುವನು, ಆದರೆ ಅನಂತರ, ಅವನ ಪುನರುತ್ಥಾನವಿರುವುದು.
ಶ್ರೀಲ ಪ್ರಭುಪಾದ: ಸಾಯುವುದಿಲ್ಲ. ಇತ್ತೀಚೆಗೆ ನಡೆದ ಭೂಗರ್ಭ ಉತ್ಖನನವು ಏಸುಕ್ರಿಸ್ತನು ಸತ್ತಿರಲಿಲ್ಲವೆಂದು ನಿರೂಪಿಸುತ್ತದೆ. ಶಿಲುಬೆಗೇರಿಸಿದ ಅನಂತರ ಆತನನ್ನು ಕಾಶ್ಮೀರಕ್ಕೆ ಕರೆದೊಯ್ಯಲಾಯಿತು.
ಮೇಡಮ್ ಸಿಯೌಡ್: ಒಳ್ಳೆಯದು, ನಾವು ಈ ಬಗೆಯ ಐತಿಹಾಸಿಕ ಸಂಗತಿಗಳನ್ನು ಚರ್ಚಿಸಲು ಇಚ್ಛಿಸುವುದಿಲ್ಲ.
ಶ್ರೀಲ ಪ್ರಭುಪಾದ: ಈ ಮಾಹಿತಿ ತಿಳಿದು ನನಗೆ ಬಹಳ ಸಂತೋಷವಾಯಿತು. ಏಕೆಂದರೆ, ಕ್ರಿಸ್ತನು ಶಿಲುಬೆಗೆ ಏರಿಸಲ್ಪಟ್ಟುದು ನನಗೆ ವೇದನೆಯುಂಟು ಮಾಡಿತ್ತು. ಈ ವೈಜ್ಞಾನಿಕ ಅನ್ವೇಷಣೆ ವರದಿಯನ್ನು ತಿಳಿದು ನನಗೆ ಬಹಳ ತೃಪ್ತಿಯಾಯಿತು.
ಫಾದರ್ ಕ್ಯಾನಿವೆಜ್: ಶ್ರೀಮಾನ್ಯರೇ, ಕಳೆದ ರಾತ್ರಿ ನಿಮ್ಮ ಗೋಷ್ಠಿಯಲ್ಲಿ ನಾನು ಹಾಜರಿದ್ದೆ. ನೀವು ಮಾನವ ಜೀವನವು ಭಗವಂತನನ್ನು ಅರಿಯುವುದಕ್ಕಾಗಿಯೇ ಇದೆ ಎಂದು ಘೋಷಿಸಿದ್ದನ್ನು ಕೇಳಿದೆ. ಹಾಗಾದರೆ, ಭಗವಂತನನ್ನು ತಿಳಿಯುವ ನಿಟ್ಟಿನಲ್ಲಿ ನಿಮ್ಮ ಪ್ರತಿಕ್ರಿಯೆ ಯಾವುದು?
ಶ್ರೀಲ ಪ್ರಭುಪಾದ: ಅದು ಬಹಳ ಸರಳ. ಉದಾಹರಣೆಗೆ, ನಿಮ್ಮ ದೇಹವನ್ನ ತೆಗೆದುಕೊಳ್ಳಿ. ನೀವು, ಆತ್ಮ ಇವು ಮುಖ್ಯ. ಸಕ್ರಿಯತತ್ತ್ವ. ಹಾಗೆಯೇ ಈ ದೈತ್ಯಾಕಾರದ ಬ್ರಹ್ಮಾಂಡದ ಅಭಿವ್ಯಕ್ತಿಯು ಕೂಡ ಒಂದು ಸಕ್ರಿಯ ತತ್ತ್ವವನ್ನು ಹೊಂದಿದೆ. ಅದೇ ದೇವರು. ಇಲ್ಲಿ ಭಗವಂತನನ್ನು ಅರಿಯುವಲ್ಲಿ ಇರುವ ಕಷ್ಟವೇನು?
ಫಾದರ್ ಕ್ಯಾನಿವೆಜ್: ಉದಾಹರಣೆಗೆ, ನಿಮ್ಮ ಪ್ರಾರ್ಥನೆಗಳಲ್ಲಿ ಹೇಗೆ ನೀವು …
ಶ್ರೀಲ ಪ್ರಭುಪಾದ: ಮೊಟ್ಟ ಮೊದಲು ನಾವು ದೇವರೆಂದರೆ ಏನೆಂದು ಅರಿತುಕೊಳ್ಳೋಣ, ಅನಂತರ ಪ್ರಾರ್ಥನೆ. ನಾವು ಭಗವಂತನನ್ನು ಅರಿಯದೆ ಹೋದರೆ, ಪ್ರಾರ್ಥನೆಯಲ್ಲಿ ತಾನೆ ಏನನ್ನು ಅರಿಯಬಹುದು? ಅಲ್ಲೊಂದು ಸಕ್ರಿಯ ತತ್ತ್ವವಿದೆಯೆಂದು ನೀವು ಅರಿತುಕೊಳ್ಳಲು ಸಾಧ್ಯವಾದರೆ, ಅನಂತರ ನೀವು ಪ್ರಾರ್ಥನೆಯನ್ನು ಅರಿಯಬಹುದು.
ನಾವೆಲ್ಲರೂ ಈಗಾಗಲೇ ಭಾಗವತದ ಆರಂಭದಲ್ಲಿ ನೋಡಿರುವ ಹಾಗೆ:ಜನ್ಮಾದ್ಯಸ್ಯಯತೋಽನ್ವಯಾದ್ ಇತರತಶ್ಚಾರ್ಥೇಶ್ವಭಿಜ್ಞಃ ಸ್ವರಾತ್ – “ಎಲ್ಲ ಸೃಷ್ಟಿಯ ಮೂಲ ಕಾರಣನಾದ ಪರಮಪ್ರಭು ವಾಸುದೇವನಲ್ಲಿ ನಾನು ಪ್ರಾರ್ಥಿಸುತ್ತೇನೆ” ಇದು ಸಕ್ರಿಯ ತತ್ತ್ವ.
ಯಾರು ಈ ಸೃಷ್ಟಿಯ ಮೂಲನಾಗಿರುವನೋ, ಯಾರಲ್ಲಿ ಪ್ರತಿಯೊಂದೂ ಸ್ಥಿತವಾಗಿರುವುದೋ ಮತ್ತು ಸುಲಭ ರೀತಿಯಲ್ಲಿ ಎಲ್ಲವೂ ನಡೆದುಕೊಂಡು ಹೋಗುತ್ತಿರುವುದೋ, ಪ್ರಳಯದ ಅನಂತರ ಯಾರೆಡೆಗೆ ಎಲ್ಲವೂ ಮರಳುವುದೋ ಅಂತಹ ಪರಮ ಸತ್ಯ – ಪರಬ್ರಹ್ಮನಿಗೆ ನಾನು ಶಿರಬಾಗಿ ನಮಿಸುತ್ತೇನೆ.
ನಾನು ತಿನ್ನುತ್ತೇನೆ. ಆದರೆ, ನನ್ನ ಆಹಾರವು ಹೇಗೆ ರಸವಾಗಿ, ಹೃದಯವನ್ನು ತಲಪುತ್ತದೆ, ಮುಂದೆ ಚಲಿಸುತ್ತದೆ. ಎಂಬುದರ ಬಗ್ಗೆ ಗೊತ್ತಿಲ್ಲ. ಕೆಲವು ಸ್ವಘೋಷಿತ ವಿಜ್ಞಾನಿಗಳೇನೋ ಇದರ ಬಗ್ಗೆ ಅಲ್ಪಸ್ವಲ್ಪ ತಿಳಿದುಕೊಂಡಿದ್ದಾರೆ, ಆದರೆ ಸಂಪೂರ್ಣವಾಗಿ ಅಲ್ಲ. ನನಗೆ ನನ್ನ ದೇಹದೊಳಗೆ ಏನು ನಡೆಯುತ್ತಿದೆ ಎಂಬುದು ಗೊತ್ತಿಲ್ಲ. ತಲೆ ಮೇಲೆ ಕೂದಲುಗಳು ಹೇಗೆ ಉಂಟಾದವೆಂದು ಗೊತ್ತಿಲ್ಲ. ಆದರೆ ಭಗವಂತನಿಗೆ ಎಲ್ಲವೂ ತಿಳಿದಿದೆ. ಇಡಿಯ ಬ್ರಹ್ಮಾಂಡದ ಪ್ರತಿ ಮೂಲೆಯ ಅರಿವಿದೆ.
ನಮ್ಮನ್ನು ನಾವು ಭಗವಂತನಿಗೆ ಹೋಲಿಸಿಕೊಳ್ಳಲು ಸಾಧ್ಯವಿಲ್ಲ. ಅದು ಶುದ್ಧ ಅಸಾಧ್ಯ. ಆದರೂ ಕೂಡ ನಾವು, ಇತರರಿಂದ ಜ್ಞಾನ ಪಡೆಯುವ ಅನಿವಾರ್ಯತೆ ನಮಗಿರುವುದರಿಂದ ಸಹಜವಾಗಿ ನಾವು, ”ಭಗವಂತನು ತನ್ನ ಜ್ಞಾನವನ್ನು ಯಾರಿಂದ ಪಡೆದನು?” ಎಂಬ ಪ್ರಶ್ನೆಯನ್ನು ಹಾಕುತ್ತೇವೆ.

ವೈದಿಕ ಸಾಹಿತ್ಯವು, ಭಗವಂತನನ್ನು ‘ಸ್ವರಾಟ್’ ಎಂದು ಘೋಷಿಸಿದೆ. ಅಂದರೆ, “ಭಗವಂತನು ಬೇರಾರಿಂದಲೋ ಜ್ಞಾನವನ್ನು ಪಡೆಯಬೇಕಿಲ್ಲ. ಅವನು ಸ್ವತಂತ್ರವಾಗಿ ಜ್ಞಾನಪೂರ್ಣನಾಗಿರುವನು.”
ಭಗವಂತನು ವಿಶ್ವದಲ್ಲಿ ಮೊತ್ತಮೊದಲು ಸೃಷ್ಟಿಗೊಂಡ ಜೀವಿಯಾದ ಬ್ರಹ್ಮನೊಂದಿಗೆ ಜ್ಞಾನವನ್ನು ಹಂಚಿಕೊಂಡನು. ಈ ಜ್ಞಾನವನ್ನು ವೈದಿಕ ಜ್ಞಾನವೆಂದು ಕರೆಯುವರು. ಸರಳವಾಗಿ ಹೇಳಬಹುದಾದರೆ, ವೈದಿಕ ಜ್ಞಾನವು ನೇರವಾಗಿ ಭಗವಂತನಿಂದಲೇ ಬಂದಿದೆ ಎನ್ನಬಹುದು. ಮುಂದೆ ಅದು ಬ್ರಹ್ಮನ ಮುಖಾಂತರ ವಿತರಿಸಲ್ಪಟ್ಟಿತು.
ಭಗವಂತನು ಅದೆಷ್ಟು ರಹಸ್ಯತಮನಾಗಿರುವನೆಂದರೆ, ನುರಿತ ವಿದ್ವಾಂಸರು ಕೂಡ ಆತನನ್ನು ಅರಿಯುವ ಯತ್ನದಲ್ಲಿ ಗೊಂದಲಕ್ಕೊಳಗಾಗುವರು. ಈ ಭೌತಿಕ ಜಗತ್ತು ತಾತ್ಕಾಲಿಕ ಕಟ್ಟುಕಥೆಯಂತೆ ಕಂಡು ಬಂದರೂ, ಅದು ಭಗವಂತನ ಶಕ್ತಿಯಾಗಿರುವ ಕಾರಣದಿಂದ, ವಾಸ್ತವವೇ ಆಗಿ ತೋರುತ್ತದೆ.
ಮೇಡಮ್ ಸಿಯೌಡ್: ಶ್ರೀಮಾನ್ಯರೇ, ವೈದಿಕ ಸಾಹಿತ್ಯವನ್ನು ಓದುವಾಗೊಮ್ಮೆ ನಾನು, ಭಗವಂತನು ‘ಅ೦ತರ್ಯಾಮಿ’ “ಹೃದಯದೊಳಗೆ ಸಾಕ್ಷೀಭೂತನಾಗಿರುವವನು” ಎಂದು ಓದಿದ ನೆನಪು. ಇದರರ್ಥ, ನಾವು ಶಾಸ್ತ್ರಗಳಲ್ಲಿ ವಿವರಿಸಿರುವ ಅನುಭವಕ್ಕೆ ಸೇರಿಕೆಯಾಗಿ, ಭಗವಂತನ ನೇರ ಅನುಭವವನ್ನು ಪಡೆಯಲು ಸಾಧ್ಯವೆಂದೇ?
ಶ್ರೀಲ ಪ್ರಭುಪಾದ: ಹೌದು ಯೋಗಾಭ್ಯಾಸವು ಭಗವಂತನ ನೇರ ಅನುಭವ ನೀಡುವುದು.
ಮೇಡಮ್ ಸಿಯೌಡ್: ನೀವು ಪ್ರಪತ್ತಿ ಮಾರ್ಗವನ್ನನುಸರಿಸಿದರೆ, ಅಥವಾ ಶರಣಾಗತರಾದರೆ, ಅದು ನೇರವಾಗಿ ಭಗವಂತನೆಡೆಗೆ ಕೊಂಡೊಯ್ಯುವುದೆಂದು ನಾನು ಊಹಿಸುತ್ತೇನೆ.
ಶ್ರೀಲ ಪ್ರಭುಪಾದ: ಹೌದು. ಅದುವೇ ನೈಜ ಮಾರ್ಗ.
ಮೇಡಮ್ ಸಿಯೌಡ್: ಆದರೆ, ಶರಣಾಗತಿಯ ಯೋಗಕ್ಕಿಂತ ಭಿನ್ನವಾದುದೇ?
ಶ್ರೀಲ ಪ್ರಭುಪಾದ: ಇಲ್ಲ, ಶರಣಾಗತಿಯು ಭಕ್ತಿಯೋಗವಾಗಿದೆ. ಅದು ಭಗವಂತನೆಡೆಗಿನ ಭಕ್ತಿ.
ಮೇಡಮ್ ಸಿಯೌಡ್: ಆದರೆ ನಾನು ಶರಣಾಗತಿಯು ಭಕ್ತಿಗಿಂತ ಭಿನ್ನವಾದುದೆಂದು ತಿಳಿದಿದ್ದೆ.
ಶ್ರೀಲ ಪ್ರಭುಪಾದ: ಶರಣಾಗತಿಯೇ ಭಕ್ತಿಯೋಗ.
ಮೇಡಮ್ ಸಿಯೌಡ್: ನೀವು ಶರಣಾಗತಿಯನ್ನೇ ಭಕ್ತಿ ಎನ್ನುವಿರೇನು?
ಶ್ರೀಲ ಪ್ರಭುಪಾದ: ಭಕ್ತಿ. ಹೌದು, ಶರಣಾಗತಿಯೆಂದರೆ ಭಕ್ತಿ. ಉದಾಹರಣೆಗೆ, ನಾನು ನಿನ್ನಲ್ಲಿ ಸಂಪೂರ್ಣ ಶ್ರದ್ಧೆ ಹಾಗೆ ನಿನ್ನೆಡೆಗೆ ಭಕ್ತಿ ಇದ್ದರೆ ಮಾತ್ರ ನಿನಗೆ ಶರಣಾಗುವೆ. ಇಲ್ಲವಾದರೆ ಖಂಡಿತವಾಗಿಯೂ ಇಲ್ಲ.
ಆದ್ದರಿಂದ ಭಕ್ತಿಯೋಗದ ಅವಶ್ಯಕತೆಯಿದೆ. ಸುಮ್ಮನೆ ನಾವು ನಮ್ಮನ್ನು ಭಗವಂತನಿಗೆ ಅರ್ಪಿಸಿಕೊಂಡರೆ ಸಾಕು. ಎಲ್ಲವೂ ಪೂರ್ಣಗೊಳ್ಳುವುದು. ಆದ್ದರಿಂದ, ಭಗವದ್ಗೀತೆಯಲ್ಲಿ ಶ್ರೀಕೃಷ್ಣನು ಪ್ರಪತ್ತಿ ಅಥವಾ ಶರಣಾಗತಿ ಮಾರ್ಗವನ್ನು ಸೂಚಿಸಿದ್ದಾನೆ. “ಬಹುನಾಮ್ ಜನ್ಮನಾಮ್ ಅನ್ತೇ ಜ್ಞಾನವಾನ್ ಮಾಮ್ ಪ್ರಪದ್ಯತೇ’ – ಭಗವಂತನನ್ನು ಅರಿಯುವ ಪ್ರಯತ್ನದಲ್ಲಿ ಮತ್ತೆ ಮತ್ತೆ ಜನ್ಮಗಳನ್ನೆತ್ತಿದ ಜ್ಞಾನಿಗಳು ಅಂತಿಮವಾಗಿ ನನಗೆ ಶರಣಾಗುತ್ತಾರೆ
‘ ಮುಂದಿನ ವಾಕ್ಯದಲ್ಲಿ ಕೃಷ್ಣನು ಹೇಳುತ್ತಾನೆ, “ವಾಸುದೇವಃ ಸರ್ವಮ್ ಇತಿ ಸ ಮಹಾತ್ಮಾ ಸುದುರ್ಲಭಃ” “ಯಾವಾಗ ವ್ಯಕ್ತಿಯು ವಾಸುದೇವ ಅಥವಾ ಕೃಷ್ಣನೇ ಎಲ್ಲವೂ ಆಗಿರುವನೆಂದು ಅರಿಯುತ್ತಾನೋ, ಆಗ ಅವನ ಜ್ಞಾನವು ಪರಿಪೂರ್ಣವಾಗುತ್ತದೆ. ಆದರೆ ಅಂತಹ ಮಹಾತ್ಮರು ಅತಿ ವಿರಳ.”






Leave a Reply