ಪುರಾಣ ಯುಗದಲ್ಲಿ ಉಜ್ವಲವಾಗಿ ಬೆಳಗಿದ ರಾಜವಂಶಗಳಿಗೆ ಲೆಕ್ಕವಿಲ್ಲ. ಅವುಗಳಲ್ಲಿ ಇಕ್ಷ್ವಾಕು ಎಂಬ ರಾಜವಂಶವೂ ಒಂದು. ಈ ಇಕ್ಷ್ವಾಕು ರಾಜನ ಮಗನೇ ನಿಮಿ.

ನಿಮಿರಾಜನು ಪರಮ ಧಾರ್ಮಿಕನೂ, ಜ್ಞಾನಿಯೂ ಆಗಿದ್ದ. ಅವನು ಆಗಾಗ ಯಾಗ- ಯಜ್ಞಗಳನ್ನು ಮಾಡುತ್ತಿದ್ದ. ಅವನು ಮಾಡುವ ಯಜ್ಞದಲ್ಲಿ ಋಷಿ-ಮಹರ್ಷಿಗಳು ಹಾಗೂ ದೇವತೆಗಳೂ ಬಂದು ಪಾಲ್ಗೊಳ್ಳುತ್ತಿದ್ದರು. ನಿಮಿಯು ಆತ್ಮವಿದ್ಯೆಯಲ್ಲೂ ಪಾರಂಗತನಾಗಿದ್ದ.
ಒಮ್ಮೆ ನಿಮಿರಾಜ ಒಂದು ಯಜ್ಞಮಾಡಲು ನಿರ್ಧರಿಸಿದ. ಆ ಯಜ್ಞಕ್ಕೆ ಮಹಾತ್ಮರಾದ ವಸಿಷ್ಠ ಮುನಿಗಳನ್ನೇ ಋತ್ವಿಜರನ್ನಾಗಿ ಆಯ್ಕೆ ಮಾಡಿಕೊಂಡ. ಇದಕ್ಕೆ ಆ ಮುನಿಗಳು ಒಪ್ಪಿಗೆ ನೀಡಿದ್ದರು. ಆದರೆ ಅವರು ನಿಮಿರಾಜನಿಗೆ – “ಹೇ ರಾಜೇಂದ್ರ ನಿನ್ನ ಯಜ್ಞಕ್ಕೆ ಋತ್ವಿಜನಾಗಿ ಬರಲು ನಾನು ಸಿದ್ಧನಾಗಿದ್ದೇನೆ.
ಆದರೆ ದೇವಲೋಕದಲ್ಲಿ ದೇವೇಂದ್ರನೂ ಒಂದು ಯಜ್ಞವನ್ನು ಹಮ್ಮಿಕೊಂಡಿದ್ದಾನೆ. ಅದಕ್ಕೆ ನನ್ನನ್ನೇ ಋತ್ವಿಜನನ್ನಾಗಿ ಮಾಡಿಕೊಂಡಿದ್ದಾನೆ. ಆದುದರಿಂದ ನಾನು ಮೊದಲು ಅಲ್ಲಿಗೆ ಹೋಗಿ ದೇವೇಂದ್ರನ ಯಜ್ಞ ಕಾರ್ಯವನ್ನು ಮುಗಿಸಿ, ಆ ಬಳಿಕ ಇಲ್ಲಿಗೆ ಬರುತ್ತೇನೆ. ನೀನು ನನ್ನ ದಾರಿ ನೋಡುತ್ತಿರು, ” ಎಂದರು.
ನಿಮಿರಾಜನಿಗೆ ವಸಿಷ್ಠರ ಉತ್ತರದಿಂದ ಸಮಾಧಾನವಾದಂತೆ ಕಾಣಲಿಲ್ಲ. ಆದುದರಿಂದ ಅವರ ಮಾತಿಗೆ ಏನೂ ಹೇಳದೆ ಸುಮ್ಮನೆ ಇದ್ದುಬಿಟ್ಟ. ವಸಿಷ್ಠರು ಯಜ್ಞ ಮಾಡಿಸಲು ದೇವಲೋಕಕ್ಕೆ ಹೊರಟೇಬಿಟ್ಟರು.
ನಿಮಿಮಹಾರಾಜನು ಯಜ್ಞಕ್ಕೆ ಎಲ್ಲಾ ವ್ಯವಸ್ಥೆಗಳನ್ನು ಮಾಡಿಸಿದ, ಬರಬೇಕಾದವರೆಲ್ಲಾ ಸಕಾಲಕ್ಕೆ ಬಂದು ಯಜ್ಞಶಾಲೆಯಲ್ಲಿ ನೆರೆದಿದ್ದರು. ಆದರೆ ವಸಿಷ್ಠರ ಆಗಮನ ಮಾತ್ರ ಇನ್ನೂ ಆಗಿರಲಿಲ್ಲ. ಅವರಿಗಾಗಿ ಕಾಯುವುದು ನಿಮಿಗೆ ಸರಿ ಎನಿಸಲಿಲ್ಲ. ಈಗ ಇದ್ದವನು ಇನ್ನು ಸ್ವಲ್ಪ ಹೊತ್ತಿಗೆ ಇರುವನೋ ಇಲ್ಲವೋ ತಿಳಿಯದು.
ಈ ನಶ್ವರವಾದ ಪ್ರಪಂಚದಲ್ಲಿ ಮನುಷ್ಯನ ಜೀವನ ಯಾವಾಗ ಬೇಕಾದರೂ ಒಡೆದು ಹೋಗುವ ನೀರಿನ ಗುಳ್ಳೆ ಇದ್ದಂತೆ. ಆದುದರಿಂದ ಯಜ್ಞದಂತಹ ಪುಣ್ಯ ಕಾರ್ಯಕ್ಕೆ ಯಾರೋ ಒಬ್ಬ ವ್ಯಕ್ತಿಗಾಗಿ ಕಾಯುವುದು ಉಚಿತವಲ್ಲ. ಹೀಗೆ ಕಾಯುತ್ತಿರುವಾಗಲೇ ನನಗೆ ಸಾವು ಬಂದರೆ ಯಜ್ಞ ಮಾಡುವ ಅವಕಾಶ ಹಾಗೂ ಯಜ್ಞದ ಪುಣ್ಯ ಎರಡೂ ತಪ್ಪಿ ಬಿಡಬಹುದು.
ಆದಕಾರಣ ಮನುಷ್ಯನು ಒಳ್ಳೆಯ ಕಾರ್ಯಗಳನ್ನು ಮಾಡಲು ಅವಕಾಶ ಸಿಕ್ಕಾಗ ಅದನ್ನು ಮುಂದಕ್ಕೆ ಹಾಕುತ್ತಾ ಕುಳಿತುಕೊಳ್ಳುವ ಬದಲು ಆ ಕೂಡಲೇ ಅದನ್ನು ಮಾಡಿ ಮುಗಿಸಿ ಬಿಡಬೇಕು, ಎಂದು ಯೋಚಿಸಿದ.
ಯೋಚಿಸಿದಂತೆ ಮಾಡಲು ಅವನು ಬೇರೆ ಋತ್ವಿಜರನ್ನು ಒಪ್ಪಿಸಿ ಯಜ್ಞವನ್ನು ಪ್ರಾರಂಭಿಸಿಯೇ ಬಿಟ್ಟ. ಸ್ವಲ್ಪ ಹೊತ್ತಿಗೆ ದೇವಲೋಕದ ಯಜ್ಞ ಕಾರ್ಯವನ್ನು ಮುಗಿಸಿಕೊಂಡು ವಸಿಷ್ಠರು ಅಲ್ಲಿಗೆ ಬಂದರು. ತಾವು ಬರುವ ಮೊದಲೇ ನಿಮಿಯು ಯಜ್ಞವನ್ನು ಪ್ರಾರಂಭಿಸಿರುವುದನ್ನು ಕಂಡು ಅವರಿಗೆ ಮಹಾಕೋಪವೇ ಬಂದಿತು.
ಅವರು ನಿಮಿರಾಜನನ್ನು ಕುರಿತು “ಎಲವೋ ಮೂರ್ಖ, ನಿನಗೆ ಇಷ್ಟು ಅಹಂಕಾರವೇ? ನೀನೇನು ಎಲ್ಲವನ್ನೂ ತಿಳಿದ ಸರ್ವಜ್ಞನೇ? ನನ್ನನ್ನು ಋತ್ವಿಜನಾಗಿ ಬರಲು ಆಹ್ವಾನಿಸಿ, ನಾವು ಬರುವ ಮೊದಲೇ ಯಜ್ಞವನ್ನು ಆರಂಭಿಸಿ ನನಗೆ ಅಪಮಾನ ಮಾಡಿದೆಯಲ್ಲವೇ? ಅಹಂಕಾರಿಯಾದ ನಿನ್ನ ದೇಹವು ಈ ಕೂಡಲೇ ಬಿದ್ದು ಹೋಗಲಿ?” ಎಂದು ಶಪಿಸಿಬಿಟ್ಟರು.
ಆಗ ನಿಮಿರಾಜನೂ ಆವೇಶಭರಿತನಾಗಿ “ಹೇ ಮುನಿಗಳೇ, ನೀವು ಧರ್ಮಕೆ ವಿರುದ್ಧವಾಗಿ ಶಪಿಸಿದ್ದರಿಂದ ನಿಮ್ಮ ದೇಹವೂ ಬಿದ್ದು ಹೋಗಲಿ!” ಎಂದು ಗುಡುಗುತ್ತಾ ವಸಿಷ್ಠರಿಗೂ ಶಾಪ ಹಾಕಿದ.

ಹೀಗೆ ಇಬ್ಬರೂ ಪರಸ್ಪರರನ್ನು ಶಪಿಸಿದ್ದರಿಂದ ಇಬ್ಬರೂ ಆ ಕ್ಷಣದಲ್ಲೇ ತಮ್ಮ ತಮ್ಮ ದೇಹವನ್ನು ತ್ಯಾಗಮಾಡಬೇಕಾಯಿತು.
ಈ ಅಪ್ರಿಯ ಘಟನೆಯಿಂದ ಅಲ್ಲಿ ನೆರೆದವರಿಗೆಲ್ಲಾ ತುಂಬಾ ದುಃಖವಾಯಿತು. ಆಗ ಅಲ್ಲಿ ಸೇರಿದ್ದ ಋಷಿ – ಮಹರ್ಷಿಗಳು ದೇವತೆಗಳನ್ನು ಕುರಿತು – “ಹೇ ದಿವ್ಯಾತ್ಮರಾದ ದೇವಪುರುಷರೇ, ನಿಮಿರಾಜನು ಒಬ್ಬ ಪುಣ್ಯಪುರುಷ. ಅವನು ಈ ಯಜ್ಞವನ್ನು ತುಂಬಾ ಶ್ರದ್ಧಾ ಭಕ್ತಿಗಳಿಂದ ಮಾಡುತ್ತಿದ್ದ.
ಇಂತಹ ಧರ್ಮ ಪುರುಷನನ್ನು ತಾವು ಮತ್ತೆ ಬದುಕಿಸಿದರೆ ತುಂಬಾ ಉಪಕಾರ ಮಾಡಿದಂತಾಗುತ್ತದೆ,” ಎಂದು ಕೇಳಿಕೊಂಡರು. ಭಕ್ತಿಸಂಪನ್ನನೂ, ಧರ್ಮಸಂಪನ್ನನೂ ಆದ ನಿಮಿಯನ್ನು ಮತ್ತೆ ಬದುಕಿಸಲು ಸಂತೋಷದಿಂದಲೇ ಒಪ್ಪಿದರು. ಅವನ ಶರೀರವನ್ನು ಜೀವಂತಗೊಳಿಸುವ ಪ್ರಯತ್ನವನ್ನೂ ಮಾಡಿದರು.
ಆದರೆ ನಿಮಿಯೇ ಇದಕ್ಕೆ ಒಪ್ಪಲಿಲ್ಲ. ಮತ್ತೆ ಮತ್ತೆ ಹುಟ್ಟಿ ಸಾಯಬೇಕಾದ ಈ ನರಜನ್ಮವು ನನಗೆ ಬೇಡ. ಆಸೆಗೂ, ದುಃಖಕ್ಕೂ ಕಾರಣವಾದ ಈ ದೇಹವು ಒಂದು ದಿನ ಬಿದ್ದು ಹೋಗುತ್ತದೆ. ಇಂತಹ ಶಾಶ್ವತವಲ್ಲದ ಶರೀರಕ್ಕಿಂತ ಮುಕ್ತಿಯೇ ಲೇಸು,” ಎಂದು ಹೇಳಿದ.
ಅವನ ಈ ಅಭಿಪ್ರಾಯವನ್ನು ತಿಳಿದ ದೇವತೆಗಳು – “ಹೇ ಋಷಿ – ಮುನಿಗಳೇ, ನಿಮ್ಮ ಕೋರಿಕೆಯಂತೆ ನಾವೇನೋ ನಿಮಿರಾಜನನ್ನು ಬದುಕಿಸಲು ಪ್ರಯತ್ನಿಸಿದೆವು. ಆದರೆ ಅವನಿಗೆ ಮತ್ತೆ ದೇಹ ಧಾರಣೆ ಮಾಡಲು ಇಷ್ಟವಿಲ್ಲ. ಆದುದರಿಂದ ಅವನು ದೇಹಧಾರಣೆ ಮಾಡದ ಪ್ರಾಣಿಗಳ ಕಣ್ಣುಗಳಲ್ಲಿ ವಾಸಿಸುವಂತೆ ನಾವು ಅನುಗ್ರಹ ಮಾಡುತ್ತೇವೆ.
ಅಲ್ಲಿದ್ದುಕೊಂಡೇ ಅವನು ತನಗೆ ಪ್ರಿಯವಾದ ಭಗವಂತನ ಸ್ಮರಣೆ ಮಾಡುತ್ತಿರಲಿ. ಇದರಿಂದ ನಿಮ್ಮ ಕೋರಿಕೆಯಂತೆ ಅವನು ಬದುಕಿದಂತೆಯೂ ಆಗುತ್ತದೆ, ಅವನ ಅಪೇಕ್ಷೆಯಂತೆ ದೇಹ ಧಾರಣೆ ತಪ್ಪಿದಂತೆಯೂ ಆಗುತ್ತದೆ,” ಎಂದು ಹೇಳಿದರು. ಬಳಿಕ ಅವರು ಹೇಳಿದಂತೆಯೇ ಅನುಗ್ರಹಿಸಿ ಅದೃಶ್ಯರಾದರು.
ಆಗ ಋಷಿ ಮುನಿಗಳೆಲ್ಲಾ ಸೇರಿ ಆ ರಾಜ್ಯದ ಹಿತ ಹಾಗೂ ಪ್ರಜೆಗಳ ಕ್ಷೇಮದ ಬಗ್ಗೆ ಗಂಭೀರವಾಗಿ ಯೋಚಿಸಿದರು. ಕಡೆಗೆ ಅವರು ರಾಜನಿಲ್ಲದಿದ್ದರೆ ಪ್ರಜೆಗಳಿಗೆ ಕೆಟ್ಟ ಧೈರ್ಯ ಬರುತ್ತದೆ. ಆಗ ಅವರು ರಾಜಶಾಸನವನ್ನು ಉಲ್ಲಂಘಿಸುತ್ತಾರೆ. ಇದರಿಂದ ಅರಾಜಕತೆ ಹೆಚ್ಚುತ್ತದೆ. ಆದುದರಿಂದ ಈ ರಾಜ್ಯಕ್ಕೆ ಒಬ್ಬ ರಾಜನು ಇರಲೇಬೇಕು ಎಂದು ನಿರ್ಧರಿಸಿದರು.
ಬಳಿಕ ಅವರು ಅಲ್ಲಿಯೇ ಇದ್ದ ನಿಮಿರಾಜನ ದೇಹವನ್ನೇ ಮಥಿಸಿಬಿಟ್ಟರು. ಆಗ ಅದರಿಂದ ಸುಂದರನೂ, ಸಮರ್ಥನೂ ಆದ ಒಬ್ಬ ರಾಜಕುಮಾರ ಹುಟ್ಟಿ ಬಂದ. ಅವನು ವಿಚಿತ್ರ ರೀತಿಯಲ್ಲಿ ಹುಟ್ಟಿದ್ದರಂದ ಅವನನ್ನು ಜನಕ ಎಂದು ಕರೆದರು. ಜೀವವಿಲ್ಲದ ದೇಹದಿಂದ ಹುಟ್ಟಿದ್ದರಿಂದ ವಿದೇಹ ಎಂತಲೂ ಕರೆದರು. ಅಲ್ಲದೆ ಆ ಕುಮಾರನು ರಾಜನ ದೇಹವನ್ನು ಮಥನ ಮಾಡಿದ್ದರಿಂದಲೇ ಹುಟ್ಟಿದ್ದರಿಂದ ಅವನಿಗೆ ಮಿಥಿಲನೆಂಬ ಹೆಸರೂ ಬಂದಿತು.
ನಿಮಿರಾಜನಿಗೆ ಪುನಃ ದೇಹಧಾರಣೆ ಮಾಡಲು ಇಷ್ಟ ಇಲ್ಲದ್ದನ್ನು ತಿಳಿದ ದೇವತೆಗಳು, ಅವನು ಶರೀರ ರಹಿತನಾಗಿ ಪ್ರಾಣಿಗಳ ಕಣ್ಣುಗಳಲ್ಲಿ ಇರುವಂತೆ ಅನುಗ್ರಹ ಮಾಡಿದರು. ಕಣ್ಣುಗಳಲ್ಲಿ ಇದ್ದುಕೊಂಡೆ ಅವನು ದೇವರ ಧ್ಯಾನ ಮಾಡತೊಡಗಿದನು.






Leave a Reply