– ಆಂಗ್ಲಮೂಲ: ಶ್ರೀ ಯದುರಾಜ ದಾಸ, ಅನುವಾದ: ಸುರೇಶ್ ಮೂನ
“ಕೃಷ್ಣನೇ ತನ್ನ ಸಾವಿಗೆ ಕಾರಣನಾಗುತ್ತಾನೆ ಎಂದು ತಿಳಿದಿದ್ದ ಕಂಸ ಈ ರೀತಿಯ ಆಕ್ರಮಣಕ್ಕೆ ಸಿದ್ಧನಾಗಿದ್ದನು. ಅವನು ಕೂಡಲೇ ತನ್ನ ಒರೆಯಿಂದ ಕತ್ತಿಯನ್ನು ತೆಗೆದು ಝಳಪಿಸಿದನು. ಆದರೆ ಇದರಿಂದ ಪ್ರಯೋಜನವಾಗಲಿಲ್ಲ.
ಪರಮ ಬಲಶಾಲಿಯಾದ ಕೃಷ್ಣನು ಬಹಳ ಬಲವಾಗಿ ಅವನನ್ನು ಹಿಡಿದುಕೊಂಡನು. ಅನಂತರ ಅವನ ಕೈಯಿಂದ ಕತ್ತಿಯನ್ನು ಬೀಳಿಸಿ ತಲೆಯಿಂದ ಶರೀರವನ್ನು ನೆಲಕ್ಕೆ ಉರುಳಿಸಿದನು. ಅನಂತರ ಅವನ ಎದೆಯ ಮೇಲೆ ಕುಳಿತು ಮತ್ತೆ ಮತ್ತೆ ಗುದ್ದಿದನು. ಕೃಷ್ಣನ ಈ ಮುಷ್ಟಿ ಪ್ರಹಾರದಿಂದಲೇ ಕಂಸನ ಪ್ರಾಣಶಕ್ತಿಯು ಹೊರಟು ಹೋಯಿತು.”

ಕುಸ್ತಿಯ ಕಣವನ್ನು ಸೊಗಸಾಗಿ ಸ್ವಚ್ಛಗೊಳಿಸಿ ಹಸಿರು ತೋರಣ ಮತ್ತು ಹೂವುಗಳಿಂದ ಅಲಂಕರಿಸಲಾಗಿತ್ತು. ನಗಾರಿಯ ನಾದದಿಂದ ಪಂದ್ಯದ ಪ್ರಾರಂಭವನ್ನು ಘೋಷಿಸಲಾಯಿತು. ಉದ್ದನೆಯ ಚೂಪು ಬಾವುಟಗಳಿಂದಾಗಿ ಮತ್ತು ಧ್ವಜಗಳಿಂದಾಗಿ ವೇದಿಕೆಯು ಬಹಳ ಸುಂದರವಾಗಿ ಕ೦ಡಿತು.
ಅರಸು, ಬ್ರಾಹ್ಮಣ ಮತ್ತು ಕ್ಷತ್ರಿಯರಂತಹ ಗೌರವಾನ್ವಿತರಿಗೆ ಬೇರೆ ಬೇರೆ ಪೀಠಗಳ ಶ್ರೇಣಿಗಳ ವ್ಯವಸ್ಥೆಯಾಗಿತ್ತು. ಬೇರೆ ಬೇರೆ ರಾಜರಿಗೆ ಸಿಂಹಾಸನಗಳಿದ್ದವು. ಕಡೆಗೆ ಕಂಸನು ತನ್ನ ಹಲವಾರು ಮಂತ್ರಿಗಳೊಂದಿಗೆ ವೈಭವದಿಂದ ಅಲ್ಲಿಗೆ ಬಂದನು.
ತನಗಾಗಿ ನಿರ್ಮಿಸಿದ್ದ ಎತ್ತರವಾದ ವಿಶೇಷ ವೇದಿಕೆಯ ಮೇಲೆ ಕಂಸನು ಕುಳಿತನು. ಅವನು ಅಷ್ಟು ಮಂದಿ ರಾಜರ ನಡುವೆ ಕುಳಿತಿದ್ದರೂ ಮರಣ ಭಯದಿಂದ ಅವನ ಹೃದಯವು ಹೊಡೆದುಕೊಳ್ಳುತ್ತಿತ್ತು.
ನ೦ದನ ನಾಯಕತ್ವದಲ್ಲಿ ವೃಂದಾವನದಿಂದ ಬಂದ ಗಣ್ಯ ಗೋಪಾಲಕರನ್ನೆಲ್ಲಾ ಕಂಸನು ಸ್ವಾಗತಿಸಿದನು. ತಾವು ತಂದಿದ್ದ ಹಾಲಿನ ಉತ್ಪನ್ನಗಳನ್ನೆಲ್ಲಾ ಕಂಸನಿಗೆ ಅರ್ಪಿಸಿ ಅವರು ಅರಸರ ಬಳಿ ತಮಗಾಗಿ ನಿರ್ಮಿಸಿದ್ದ ವೇದಿಕೆಯ ಮೇಲೆ ಕುಳಿತರು.
ಎಲ್ಲವೂ ಸಿದ್ಧವಾಗುತ್ತಿದ್ದಂತೆ ಕುಸ್ತಿ ಪಟುಗಳು ಕುಸ್ತಿ ಕಣವನ್ನು ಪ್ರವೇಶಿಸಿದರು. ಅಲ್ಲಿದ್ದ ಪ್ರಸಿದ್ಧ ಮಲ್ಲರೆಂದರೆ ಚಾಣೂರ, ಮುಷ್ಟಿಕ, ಶಲ ಮತ್ತು ತೋಶಲ. ಅವರು ಕಣಕ್ಕಿಳಿದಾಗ ಅವರ ಮಾಂಸ ಖಂಡಗಳು ಕುಣಿಯುತ್ತಿದ್ದವು. ಅವರು ಕೃಷ್ಣ ಬಲರಾಮರನ್ನು ಕೊಲ್ಲಲೆಂದೇ ಸಿದ್ಧರಾಗಿ ಬಂದಿದ್ದರು.
ಬೆಳಗಿನ ವಿಧಿಗಳನ್ನು ಮುಗಿಸಿ ಸ್ನಾನ ಮಾಡಿದ ಕೃಷ್ಣ ಬಲರಾಮರಿಗೆ ಮಲ್ಲರಂಗದಲ್ಲಿ ನಗಾರಿ ಬಾರಿಸುವುದು ಕೇಳಿಸಿತು. ತಮಾಷೆಯನ್ನು ನೋಡಲು ಅಲ್ಲಿಗೆ ಹೋಗೋಣವೆಂದು ಅವರು ಹೊರಡಲು ಸಿದ್ಧರಾದರು. ಇಬ್ಬರೂ ಹೊರಟು ಮಲ್ಲ ಶಿಬಿರದ ಹೆಬ್ಬಾಲಿಗೆ ಬಂದಾಗ ಮಾವುತನೊಬ್ಬ ಕುವಲಯಾಪೀಡ ಎಂಬ ದೊಡ್ಡ ಆನೆಯನ್ನು ನೋಡಿಕೊಳ್ಳುತ್ತಿದ್ದುದನ್ನು ಕಂಡರು.
ಮಾವುತನು ಉದ್ದೇಶ ಪೂರ್ವಕವಾಗಿಯೇ ಅನೆಯನ್ನು ಹೆಬ್ಬಾಗಿಲಿನ ಮುಂದೆ ನಿಲ್ಲಿಸಿ ಅವರ ದಾರಿಗೆ ಅಡ್ಡ ಹಾಕಿದನು. ಕೃಷ್ಣನಿಗೆ ಮಾವುತನ ಉದ್ದೇಶ ಅರ್ಥವಾಯಿತು. ಆನೆಯೊಡನೆ ಹೋರಾಡಲು ಉಡುಪನ್ನು ಸರಿಪಡಿಸಿಕೊ೦ಡು ಸಿದ್ಧನಾದನು. ಮೇಘನಾದದಂತಹ ಧ್ವನಿಯಲ್ಲಿ ಬಹು ಗಂಭೀರವಾಗಿ ಮಾವುತನಿಗೆ ಹೀಗೆ ಹೇಳಿದನು. ”ನೀಚ ಮಾವುತನೇ, ದಾರಿಯನ್ನು ಬಿಟ್ಟು ನಾನು ಬಾಗಿಲಲ್ಲಿ ಹೋಗಲು ಅವಕಾಶ ಮಾಡಿಕೊಡು. ನನ್ನ ದಾರಿಗೆ ಅಡ್ಡ ಬಂದರೆ ನಿನ್ನನ್ನೂ ನಿನ್ನ ಆನೆಯನ್ನು ಯಮಪುರಿಗೆ ಕಳುಹಿಸುತ್ತೇನೆ.”
ಕೃಷ್ಣನಿಂದ ಈ ಮಾತುಗಳನ್ನು ಕೇಳಿದ ಮಾವುತನಿಗೆ ಕೋಪ ಬಂದಿತು. ಪೂರ್ವಯೋಜನೆಯಂತೆ ಅವನು ಕೃಷ್ಣನ ಮೇಲೆ ಆಕ್ರಮಣ ಮಾಡಲು ಆನೆಯನ್ನು ಪ್ರಚೋದಿಸಿದನು. ಆನೆಯು ತಪ್ಪಿಸಿಕೊಳ್ಳಲಾಗದಂತಹ ಸಾವಿನಂತೆ ಕೃಷ್ಣನತ್ತ ಎರಗಿತು. ವೇಗವಾಗಿ ಬಂದು ತನ್ನ ಸೊಂಡಿಲಿನಲ್ಲಿ ಅವನನ್ನು ಹಿಡಿಯಲು ಪ್ರಯತ್ನಿಸಿತು.
ಆದರೆ ಕೃಷ್ಣನು ಬಹಳ ಕೌಶಲದಿಂದ ಆನೆಯ ಹಿಂದಕ್ಕೆ ಹೋದನು. ತನ್ನ ಸೊಂಡಿಲಿನವರೆಗೆ ಮಾತ್ರ ನೋಡಲು ಸಾಧ್ಯವಿದ್ದ ಆನೆಗೆ ಹಿಂದೆ ನಿಂತ ಕೃಷ್ಣನು ಕಾಣಿಸಲಿಲ್ಲ. ಆದರೂ ತನ್ನ ಸೊಂಡಿಲನ್ನು ಚಾಚಿ ಅವನನ್ನು ಹಿಡಿಯಲು ಯತ್ನಿಸಿತು. ಕೃಷ್ಣನು ಆನೆಯ ಬಾಲವನ್ನು ಹಿಡಿದು ಎಳೆಯಲು ಪ್ರಾರಂಭಿಸಿದ.
ತನ್ನ ಅಸಾಧಾರಣ ಬಲದಿಂದ ಅದನ್ನು ಸುಮಾರು ಇಪ್ಪತ್ತೈದು ಗಜಗಳಷ್ಟು ದೂರವಾದರೂ ಎಳೆದುಕೊಂಡು ಹೋದ. ಅನಂತರ ತಾನು ಬಾಲ್ಯದಲ್ಲಿ ಕರುಗಳ ಬಾಲವನ್ನು ಹಿಡಿದು ಆಡುತ್ತಿದ್ದಂತೆ ಆನೆಯ ಬಾಲವನ್ನು ಹಿಡಿದು ಅತ್ತಿಂದಿತ್ತ ಜಗ್ಗಿದ. ಇದಾದನಂತರ ಕೃಷ್ಣನು ಆನೆಯ ಮುಂಭಾಗಕ್ಕೆ ಬಂದು ಅದರ ಮುಖಕ್ಕೆ ಬಲವಾಗಿ ಪೆಟ್ಟುಕೊಟ್ಟನು. ಮತ್ತೆ ಅದರ ದೃಷ್ಟಿಯಿಂದ ಮರೆಯಾಗಿ ಹಿಂದಕ್ಕೆ ಹೋದನು. ಅನಂತರ ಅದರ ಎರಡು ಕಾಲುಗಳ ನಡುವೆ ಮಲಗಿ ಅದು ಮುಗ್ಗರಿಸುವಂತೆ ಮಾಡಿದನು.

ಕೃಷ್ಣನು ಕೂಡಲೇ ಎದ್ದು ಬಿಟ್ಟನು. ಅವನು ಇನ್ನೂ ನೆಲದ ಮೇಲೆ ಮಲಗಿದ್ದಾನೆ ಎಂದು ಭಾವಿಸಿ ಆನೆಯು ಒಂದು ದಂತವನ್ನು ನೆಲಕ್ಕೆ ಚುಚ್ಚಿ ಅವನ ದೇಹದೊಳಗೆ ಚುಚ್ಚಲು ಪ್ರಯತ್ನಿಸಿತು. ಆನೆಗೆ ಕಿರುಕುಳವಾಗಿ ಕೋಪಬಂದಿದ್ದರೂ ಅದರ ಮೇಲೆ ಕುಳಿತಿದ್ದ ಮಾವುತನು ಅದನ್ನು ಇನ್ನೂ ರೊಚ್ಚೆಬ್ಬಿಸಲು ಪ್ರಯತ್ನಿಸಿದನು.
ಆನೆಯು ಹುಚ್ಚಾಗಿ ಕೃಷ್ಣನತ್ತ ಓಡಿ ಬಂತು. ಅದು ತನ್ನ ಹತ್ತಿರ ಬರುತ್ತಲೇ ಕೃಷ್ಣನು ಆನೆಯ ಸೊಂಡಿಲನ್ನು ಹಿಡಿದು ಕಳಕ್ಕೆ ಜಗ್ಗಿದನು. ಆನೆಯು, ಮಾವುತನು ಕೆಳಕ್ಕೆ ಬಿದ್ದಾಗ ಕೃಷ್ಣನು ಆನೆಯ ಬೆನ್ನಿನ ಮೇಲೆ ಹಾರಿ ಅದರ ಒಂದು ದಂತವನ್ನು ಮುರಿದನು. ಅದರಿಂದಲೇ ಮಾವುತನನ್ನೂ ಕೊಂದನು.
ಅನಂತರ ಒಂದು ದಂತವನ್ನು ಭುಜದ ಮೇಲಿಟ್ಟುಕೊಂಡನು. ಬೆವರು ಹನಿಗಳಿಂದ ಅಲಂಕೃತನಾಗಿ ಆನೆಯ ರಕ್ತವನ್ನು ಅವನ ಮೇಲೆ ಚಿಮುಕಿಸಿದಂತೆ ಕಾಣುತ್ತಿದ್ದ ಕೃಷ್ಣನಿಗೆ ಬಹು ಆನಂದವಾಯಿತು. ಬಲರಾಮನು ಆನೆಯ ಇನ್ನೊಂದು ದಂತವನ್ನು ಭುಜದ ಮೇಲಿಟ್ಟುಕೊಂಡನು. ಅನಂತರ ತಮ್ಮ ಗೋಪಬಾಲಕ ಸ್ನೇಹಿತರೊಂದಿಗೆ ಕುಸ್ತಿಯು ನಡೆಯುತ್ತಿದ್ದ ಸ್ಥಳವನ್ನು ಪ್ರವೇಶಿಸಿದರು.
ಬಲರಾಮ ಮತ್ತು ಸ್ನೇಹಿತರೊಂದಿಗೆ ಕೃಷ್ಣನು ಕಣವನ್ನು ಪ್ರವೇಶಿಸಿದಾಗ ಅವನು ಅಲ್ಲಿದ್ದವರಿಗೆ ಅವರವರ ರಸಕ್ಕೆ ಅನುಗುಣವಾಗಿ ಬೇರೆ ಬೇರೆ ರೀತಿಯಲ್ಲಿ ಕಂಡು ಬಂದನು. ಮಲ್ಲರುಗಳಿಗೆ ಅವನು ಸಿಡಿಲಿನಂತೆ ಕಂಡನು. ಜನಸಾಮಾನ್ಯರಿಗೆ ಅತ್ಯಂತ ಸುರದ್ರೂಪಿ ವ್ಯಕ್ತಿಯಾಗಿ ಕಂಡನು.
ಸ್ತ್ರೀಯರಿಗೆ ಮನ್ಮಥನೇ ಬಂದಂತೆ ಅತ್ಯಂತ ಸುಂದರನಾಗಿ ಕಂಡು ಬಂದನು. ಅಲ್ಲಿನ ಗೋಪಾಲಕರಿಗೆ ತಮ್ಮ ಗ್ರಾಮದಿಂದ ಬಂದ ನಂಟನಾಗಿ ಕಂಡನು. ಅಲ್ಲಿದ್ದ ಕ್ಷತ್ರಿಯ ರಾಜರಿಗೆ ಅತ್ಯಂತ ಬಲಶಾಲಿಯಾದ ನಾಯಕನಾಗಿ ಕಾಣಿಸಿದನು. ತಂದೆ ತಾಯಿಯರಾದ ಯಶೋದೆ ಮತ್ತು ನಂದರಿಗೆ ಅತ್ಯಂತ ಪ್ರೀತಿಯ ಮಗುವಾಗಿ ತೋರಿದನು.
ಭೋಜವಂಶದ ಕಂಸನಿಗಂತೂ ಸಾವೇ ರೂಪತಾಳಿಬಂದಂತೆ ಗೋಚರಿಸಿದನು. ಹೀಗೆ ಅವರವರ ಭಾವಕ್ಕೆ ತಕ್ಕಂತೆ ಕಂಡು ಬರುತ್ತಾ ಬಲರಾಮ ಮತ್ತು ಗೆಳೆಯರೊಡನೆ ಕೃಷ್ಣನು ಕಣದ ಒಳಗೇ ಬಂದನು. ಕೃಷ್ಣನು ಆಗಲೇ ತನ್ನ ಬಲಿಷ್ಠ ಆನೆ ಕುವಲಯಾಪೀಡನನ್ನು ಕೊಂದಿರುವ ಸುದ್ದಿ ಕಂಸನನ್ನು ತಲಪಿತ್ತು.
ಹೀಗಾಗಿ ಕಣಕ್ಕೆ ಬಂದ ಕೃಷ್ಣ ಬಲರಾಮರನ್ನು ಕಂಡು ಕಂಸನಿಗೆ ಹೆದರಿಕೆ ಜಾಸ್ತಿಯಾಯಿತು. ಕಣದ ಬಳಿಗೆ ಬಂದ ಕೃಷ್ಣ ಬಲರಾಮರನ್ನು ಕಂಡು ಅವರನ್ನು ಕುಸ್ತಿಯಾಡಲು ಬರುವಂತೆ ಮಾಡಲು ಪ್ರಸಿದ್ಧ ಮಲ್ಲನಾದ ಚಾಣೂರನು ಕೃಷ್ಣ ಬಲರಾಮರನ್ನು ಉದ್ದೇಶಿಸಿ ಹೀಗೆ ಹೇಳಿದನು.
“ನನ್ನ ಪ್ರಿಯ ಕೃಷ್ಣ ಬಲರಾಮರೇ, ನಿಮ್ಮ ಈ ವರೆಗಿನ ಚಟುವಟಿಕೆಗಳ ವಿಷಯವನ್ನು ನಾವು ಕೇಳಿದ್ದೇವೆ. ನೀವು ಮಹಾವೀರರು. ಆದ್ದರಿಂದಲೇ ನಮ್ಮ ಅರಸನು ನಿಮ್ಮನ್ನು ಕರೆಸಿರುವುದು. ನಿಮ್ಮದು ಅಸಾಧಾರಣ ಬಾಹುಬಲ ಎಂದು ಕೇಳಿದ್ದೇವೆ. ಇಲ್ಲಿನೆರೆದಿರುವವರೆಲ್ಲರೂ, ನಮ್ಮ ಮಹಾರಾಜರೂ ನಿಮ್ಮ ಮಲ್ಲ ಪಟುತ್ವವನ್ನು ನೋಡಬಯಸುತ್ತಾರೆ.”
ಕೃಷ್ಣನು ಕೂಡಲೆ ಚಾಣೂರನ ಮಾತುಗಳನ್ನು ಅರ್ಥಮಾಡಿಕೊಂಡು ಅವನೊಡನೆ ಕುಸ್ತಿ ಮಾಡಲು ಸಿದ್ಧನಾದನು. ಆದರೂ ಕಾಲ ಮತ್ತು ಸಂದರ್ಭಗಳಿಗೆ ಅನುಗುಣವಾಗಿ ಹೀಗೆಂದನು : “ನಾವು ಇನ್ನೂ ಹುಡುಗರು. ವೃಂದಾವನದ ಕಾಡಿನಲ್ಲಿ ಕೆಲವೊಮ್ಮೆ ನಮ್ಮ ವಯಸ್ಸಿನ ಹುಡುಗರೊಂದಿಗೆ ಆಡುತ್ತೇವೆ ಅಷ್ಟೆ .
ಸಮವಯಸ್ಸಿನ ಮತ್ತು ಸಮಬಲರ ಜೊತೆಗೆ ಸೆಣೆಸುವುದು ನಮಗೆ ಒಳ್ಳೆಯದು ಎಂದು ಭಾವಿಸುತ್ತೇವೆ. ಆದರೆ ನಿಮ್ಮಂತಹ ಮಹಾ ಮಲ್ಲರ ಜೊತೆ ಕುಸ್ತಿ ಮಾಡುವುದು ಪ್ರೇಕ್ಷಕರಿಗೆ ಹಿತವಾಗಿ ತೋರುವುದಿಲ್ಲ. ಅದು ಧಾರ್ಮಿಕ ತತ್ತ್ವಗಳಿಗೆ ವಿರುದ್ಧವಾಗುತ್ತದೆ.” ಇದಕ್ಕೆ ಉತ್ತರವಾಗಿ ಚಾಣೂರನು, “ನನ್ನ ಪ್ರಿಯ ಕೃಷ್ಣ, ನೀನು ಮಗುವೂ ಅಲ್ಲ, ತರುಣನೂ ಅಲ್ಲ ಎಂದು ನಮಗೆ ಅರ್ಥವಾಗುತ್ತದೆ.

ನೀನು ನಿನ್ನ ಅಣ್ಣ ಬಲರಾಮ ಎಲ್ಲರನ್ನೂ ಮೀರಿಸಿದವರು. ಇತರ ಆನೆಗಳನ್ನು ಕೊಲ್ಲುವಷ್ಟು. ಬಲವಿದ್ದ ಕುವಲಯಾ ಪೀಡನನ್ನು ನೀನು ಆಗಲೇ ಕೊಂದಿದ್ದೀಯ. ನಿನಗೆ ಹೀಗೆ ಅಸಾಧಾರಣ ಬಲವಿರುವ ಕಾರಣ ನಮ್ಮಲ್ಲಿ ಹೆಚ್ಚು ಬಲಶಾಲಿಗಳೊಂದಿಗೆ ಕುಸ್ತಿಯಾಡಲು ಬಯಸುತ್ತೇನೆ. ನಿನ್ನ ಅಣ್ಣ ಬಲರಾಮನು ಮುಷ್ಟಿಕನೊಡನೆ ಕುಸ್ತಿಯಾಡುವನು.”
ಕಂಸನ ಮಲ್ಲರು ತಮ್ಮ ದೃಢ ನಿಶ್ಚಯವನ್ನು ಹೇಳಿದ ಮೇಲೆ ದೇವೋತ್ತಮ ಪರಮ ಪುರುಷನು ಚಾಣೂರನೊ೦ದಿಗೂ, ಬಲರಾಮ ಮುಷ್ಟಿಕನೊಂದಿಗೂ ಕುಸ್ತಿಮಾಡಲು ಸಿದ್ಧರಾದರು. ಕೃಷ್ಣ ಚಾಣೂರರನ್ನು ಮತ್ತು ಮುಷ್ಟಿಕ ಬಲರಾಮರು ಕೈಯಲ್ಲಿ ಕೈಯನ್ನು ಕಾಲಲ್ಲಿ ಕಾಲನ್ನು ಹೆಣೆದುಕೊಂಡು ಜಯಗಳಿಸಬೇಕೆಂದು ಒಬ್ಬರು ಇನ್ನೊಬ್ಬರನ್ನು ಒತ್ತಿ ಹಿಡಿದರು. ಎದೆಗೆ ಎದೆಯೇರಿಸಿ ಒಬ್ಬರಿನ್ನೊಬ್ಬರಿಗೆ ಪೆಟ್ಟು ಕೊಡಲಾರಂಭಿಸಿದರು.
ಹೀಗೆ ಅವರ ನಡುವೆ ಬಲವಾದ ಸೆಣಸಾಟ ಪ್ರಾರಂಭವಾಯಿತು. ಒಬ್ಬನು ಇನ್ನೊಬ್ಬನನ್ನು ನೆಲಕ್ಕೆ ಒಗೆದ. ಮತ್ತೊಬ್ಬನು ತನ್ನ ಎದುರಾಳಿಯ ಹಿಂದಿನಿಂದ ಮುಂಭಾಗಕ್ಕೆ ಧಾವಿಸಿ ಅವನನ್ನು ಒಂದೇ ಪೆಟ್ಟಿನಿಂದ ಸೋಲಿಸಲು ಪ್ರಯತ್ನಿಸಿದ. ಬರುಬರುತ್ತಾ ಸೆಣಸಾಟವು ಕಷ್ಟವಾಯಿತು. ಮೇಲೆಕ್ಕೇಳುವುದು, ಎಳೆಯುವುದು ನೂಕುವುದೂ ಎಲ್ಲ ಆದವು. ಅನಂತರ ಕಾಲು ಕೈಗಳು ಹೆಣೆದುಕೊಂಡವು. ಒಬ್ಬರು ಇನ್ನೊಬ್ಬರನ್ನು ಆದಷ್ಟು ಸೋಲಿಸಲು ಪ್ರಯತ್ನಿಸುತ್ತಾ ಮಲ್ಲ ಯುದ್ಧದ ಕಲೆಗಳನ್ನೆಲ್ಲಾ ಪ್ರದರ್ಶಿಸಿದರು.
ಆದರೆ ಕುಸ್ತಿ ಪಂದ್ಯವನ್ನು ನೋಡುತ್ತಿದ್ದವರಿಗೆ ಇದರಿಂದ ತೃಪ್ತಿಯಾಗಲಿಲ್ಲ. ಏಕೆಂದರೆ ಕುಸ್ತಿ ಮಾಡುತ್ತಿದ್ದವರು ಸಮಬಲರಾಗಿರಲಿಲ್ಲ. ದೈತ್ಯಾಕಾರದ ಮತ್ತು ಬಂಡೆಗಳಂತೆ ಒರಟಾದ ಮಲ್ಲ ಪಟುಗಳಾದ ಚಾಣೂರ ಮತ್ತು ಮುಷ್ಟಿಕರ ಮುಂದೆ ಕೃಷ್ಣ ಮತ್ತು ಬಲರಾಮರು ಅವರಿಗೆ ಮಕ್ಕಳೆಂದೇ ತೋರಿದರು. ಈ ಇಬ್ಬರು ಸಹೋದರರ ಪರವಾಗಿ ಅಲ್ಲಿದ್ದ ಅನೇಕರು ಹೀಗೆ ಮಾತನಾಡಲಾರಂಭಿಸಿದರು. “ಸ್ನೇಹಿತರೆ, ಇಲ್ಲಿ ಅಪಾಯವಿದೆ. ದೊರೆಯ ಎದುರಿನಲ್ಲೇ ಈ ಅಸಮಬಲರ ಕುಸ್ತಿಯಾಗುತ್ತಿದೆ.”
ಎಲ್ಲ ಜೀವಿಗಳ ಪರಮಾತ್ಮನಾದ ಶ್ರೀಕೃಷ್ಣನು ಸಭೆಯಲ್ಲಿದ್ದ ಸ್ತ್ರೀಯರು ತನ್ನ ಬಗ್ಗೆ ಆತಂಕಗೊಂಡಿದ್ದಾರೆ ಎಂದು ತಿಳಿದಾಗ ಕುಸ್ತಿಯನ್ನು ಹೀಗೆ ಮುಂದುವರಿಸದೆ ಮಲ್ಲರನ್ನು ಕೂಡಲೆ ಕೊಲ್ಲಲು ನಿರ್ಧರಿಸಿದನು. ತಮ್ಮ ಮಕ್ಕಳ ಅಪರಿಮಿತ ಬಲವನ್ನು ಅರಿಯದ ನಂದ ಮಹಾರಾಜ, ಯಶೋದೆ, ವಸುದೇವ ದೇವಕಿಯರೂ ಬಹಳ ಆತಂಕಗೊಂಡಿದ್ದರು.
ಕೃಷ್ಣನು ಕುಸ್ತಿಯನ್ನು ಕೊನೆಗೊಳಿಸಲು ತನ್ನ ಮುಷ್ಟಿಯಿಂದ ಚಾಣೂರನಿಗೆ ಮೂರು ಬಾರಿ ಗುದ್ದಿದನು. ಆಗ ಆ ಮಹಾ ಮಲ್ಲನಿಗೆ ಹೆದರಿಕೆಯಾದುದನ್ನು ಕಂಡು ಸಭಿಕರಿಗೆ ಬಹಳ ಆಶ್ಚರ್ಯವಾಯಿತು. ಚಾಣೂರನು ತನ್ನ ಕಟ್ಟ ಕಡೆಯ ಪ್ರಯತ್ನವೆಂದು ಒಂದು ಹದ್ದು ಇನ್ನೊಂದರ ಮೇಲೆ ಎರಗುವಂತೆ ಕೃಷ್ಣನ ಮೇಲೆ ಆಕ್ರಮಣ ಮಾಡಿದನು. ತನ್ನ ಎರಡೂ ಕೈಗಳನ್ನು ಜೋಡಿಸಿ ಕೃಷ್ಣನ ಎದೆಗೆ ಗುದ್ದಲು ಪ್ರಾರಂಭಿಸಿದನು.
ಆದರೆ ಪುಷ್ಪಮಾಲೆಯು ತಾಗಿದ ಆನೆಯಂತೆ ಕೃಷ್ಣನು ಇದರಿಂದ ಸ್ವಲ್ಪವೂ ವಿಚಲಿತನಾಗಲಿಲ್ಲ. ಬದಲಾಗಿ ಕೃಷ್ಣನು ಚಾಣೂರನ ಎರಡೂ ಕೈಗಳನ್ನು ಹಿಡಿದುಕೊಂಡು ಗಿರನೆ ತಿರುಗಿಸಲು ಪ್ರಾರಂಭಿಸಿದನು. ಈ ಪರಿಭ್ರಮಣದಿಂದಲೇ ಚಾಣೂರನು ಸತ್ತು ಹೋದನು. ಅನಂತರ ಕೃಷ್ಣನು ಅವನನ್ನು ನೆಲಕ್ಕೆ ಎತ್ತಿ ಒಗೆದನು. ಚಾಣೂರನ ಸುಂದರ ಆಭರಣಗಳೆಲ್ಲಾ ಚೆಲ್ಲಾಪಿಲ್ಲಿಯಾಗಿ ಬಿದ್ದವು.
ಇತ್ತ ಮುಷ್ಟಿಕನು ಬಲರಾಮನಿಗೆ ಹೊಡೆದನು. ಬಲರಾಮನು ತಿರುಗಿಸಿ ಬಲವಾದ ಪೆಟ್ಟನ್ನು ಕೊಟ್ಟನು. ಇದರಿಂದ ಮುಷ್ಟಿಕನು ಗಡಗಡನೆ ನಡುಗಲು ಪ್ರಾರಂಭಿಸಿದನು. ಅವನ ಬಾಯಿಂದ ರಕ್ತ ವಾಂತಿಯಾಯಿತು. ಯಾತನೆಯಿಂದ ಅವನು ಪ್ರಾಣಶಕ್ತಿಯನ್ನು ಕಳೆದುಕೊಂಡನು ಮತ್ತು ಬಿರುಗಾಳಿಯಲ್ಲಿ ಉರುಳುವ ಮರದಂತ ಕೆಳಕ್ಕೆ ಬಿದ್ದನು.
ಹೀಗೆ ಇಬ್ಬರು ಪ್ರಸಿದ್ಧ ಮಲ್ಲರು ಸತ್ತನಂತರ ಕೂಟ ಎಂಬ ಜಟ್ಟಿಯು ಮುಂದೆ ಬಂದನು. ಬಲರಾಮನು ಕೂಡಲೆ ಅವನನ್ನು ಎಡಗೈಯಲ್ಲಿ ಹಿಡಿದೆಳೆದು ನಿರ್ಲಕ್ಷ್ಯದಿಂದ ಕೊಂದು ಹಾಕಿದನು. ಅನಂತರ ಶಲನೆಂಬ ಜಟ್ಟಿಯು ಕಣಕ್ಕಿಳಿದನು. ಕೃಷ್ಣನು ಅವನಿಗೆ ಕೊಟ್ಟ ಒಂದೇ ಒಡೆತದಿಂದ ಅವನ ತಲೆ ಸೀಳಿತು.
ಅನಂತರ ಬಂದ ತೋಶಲ ಎಂಬ ಜಟ್ಟಿಗೂ ಇದೇ ಗತಿಯಾಯಿತು. ಹೀಗೆ ಕೃಷ್ಣ ಬಲರಾಮರು ಮಹಾಮಲ್ಲರನ್ನೆಲ್ಲಾ ಕೊಂದಾಗ ಉಳಿದವರು ಪ್ರಾಣಭಯದಿಂದ ಸಭೆಯನ್ನು ಬಿಟ್ಟು ಓಡಿದರು. ಕೃಷ್ಣ ಮತ್ತು ಬಲರಾಮರ ಗೋಪಬಾಲಕ ಸ್ನೇಹಿತರೆಲ್ಲ ಅವರ ಬಳಿಗೆ ಹೋಗಿ ಅಭಿನಂದಿಸಿದರು ಈ ವಿಜಯೋತ್ಸವವನ್ನು ಆಚರಿಸಲು ನಗಾರಿಗಳು ಬಾರಿಸುತ್ತಿರುವಾಗ ಅದಕ್ಕೆ ತಕ್ಕಂತೆ ಎಂಬಂತೆ ಕೃಷ್ಣ ಮತ್ತು ಬಲರಾಮರ ಕಾಲೆಜ್ಜೆಗಳು ಝಣ ಝಣ ಶಬ್ದ ಮಾಡಿದವು.
ಈ ಪ್ರಸಂಗದಿಂದ ಕಂಸ ಮಾತ್ರ ಬಹಳವಾಗಿ ಖೇದಗೊಂಡಿದ್ದನು. ಕೃಷ್ಣನ ವಿಜಯವನ್ನು ಸಾರಲು ನಗಾರಿಗಳನ್ನು ಬಾರಿಸಿದುದಕ್ಕೆ ಅವನಿಗೆ ಅಸಮಾಧಾನವಾಯಿತು. ಅಲ್ಲದೆ ತನ್ನ ಉತ್ತಮ ಮಲ್ಲರು ಸತ್ತು ಉಳಿದವರು ಓಡಿ ಹೋದುದನ್ನು ಕಂಡು ಅವನಿಗೆ ದುಃಖವಾಯಿತು. ಕೂಡಲೇ ನಗಾರಿ ಶಬ್ದವನ್ನು ನಿಲ್ಲಿಸುವಂತೆ ಅಪ್ಪಣೆ ಮಾಡಿದನು.

ಅನಂತರ ತನ್ನ ಆಪ್ತನಿಗೆ ಹೀಗೆ ಹೇಳಿದನು. “ವಸುದೇವನ ಈ ಇಬ್ಬರು ಮಕ್ಕಳನ್ನು ಕೂಡಲೆ ಮಥುರೆಯಿಂದ ಓಡಿಸಬೇಕೆಂದು ನನ್ನ ಆಜ್ಞೆ. ಅವನೊಡನೆ ಬಂದ ಗೋಪಬಾಲಕರನ್ನು ಲೂಟಿ ಮಾಡಿ ಅವರ ಸ್ವತ್ತನ್ನೆಲ್ಲಾ ವಶಪಡಿಸಿಕೊಳ್ಳಬೇಕು. ನಂದ ಮಹಾರಾಜನ ಯುಕ್ತಿಯ ನಡತೆಗಾಗಿ ಅವನನ್ನು ಕೂಡಲೆ ಬಂಧಿಸಿ ಕೊಲ್ಲಬೇಕು ಮತ್ತು ವಂಚಕ ವಸುದೇವನನ್ನು ತಡಮಾಡದೆ ಕೊಲ್ಲಬೇಕು. ನನ್ನ ಇಚ್ಛೆಗೆ ವಿರುದ್ಧವಾಗಿ ಸದಾ ನನ್ನ ಶತ್ರುಗಳಿಗೆ ಬೆಂಬಲ ಕೊಡುವ ನನ್ನ ತಂದೆ ಉಗ್ರಸೇನನನ್ನು ಕೊಲ್ಲಬೇಕು.”
ಕಂಸನ ಈ ಆಜ್ಞೆಯನ್ನು ಕೇಳಿ ಕೃಷ್ಣನಿಗೆ ಬಹಳ ಸಿಟ್ಟು ಬಂದಿತು. ಅವನ ಅಂಗ ರಕ್ಷಕರು ಚಲಿಸುವ ಮೊದಲೇ ಕೃಷ್ಣನು ಕಂಸನು ಕುಳಿತಿದ್ದ ಎತ್ತರದ ವೇದಿಕೆಯ ಮೇಲೆ ಜಿಗಿದನು. ಕೃಷ್ಣನೇ ತನ್ನ ಸಾವಿಗೆ ಕಾರಣನಾಗುತ್ತಾನೆ ಎಂದು ತಿಳಿದಿದ್ದ ಕಂಸ ಈ ರೀತಿಯ ಆಕ್ರಮಣಕ್ಕೆ ಸಿದ್ಧನಾಗಿದ್ದನು. ಅವನು ಕೂಡಲೇ ತನ್ನ ಒರೆಯಿಂದ ಕತ್ತಿಯನ್ನು ತೆಗೆದು ಝಳಪಿಸಿದನು. ಆದರೆ ಇದರಿಂದ ಪ್ರಯೋಜನವಾಗಲಿಲ್ಲ.
ಪರಮ ಬಲಶಾಲಿಯಾದ ಕೃಷ್ಣನು ಬಹಳ ಬಲವಾಗಿ ಅವನನ್ನು ಹಿಡಿದುಕೊಂಡನು. ಅನಂತರ ಅವನ ಕೈಯಿಂದ ಕತ್ತಿಯನ್ನು ಬೀಳಿಸಿ ತಲೆಯಿಂದ ಶರೀರವನ್ನು ನೆಲಕ್ಕೆ ಉರುಳಿಸಿದನು. ಅವನ ತಲೆಯ ಉದ್ದವಾದ ಕೂದಲನ್ನು ಹಿಡಿದು ಸಿಂಹಾಸನದಿಂದ ಕೆಳಕ್ಕೆ ಎಳೆದು ಕುಸ್ತಿಯ ಕಣಕ್ಕೆ ದರದರನೆ ಎಳೆದು ತಂದನು.
ಅಲ್ಲಿ ಕಣದೊಳಕ್ಕೆ ಅವನನ್ನು ಎಸೆದನು. ಅನಂತರ ಅವನ ಎದೆಯ ಮೇಲೆ ಕುಳಿತು ಮತ್ತೆ ಮತ್ತೆ ಗುದ್ದಿದನು. ಕೃಷ್ಣನ ಈ ಮುಷ್ಟಿ ಪ್ರಹಾರದಿಂದಲೇ ಕಂಸನ ಪ್ರಾಣಶಕ್ತಿಯು ಹೊರಟು ಹೋಯಿತು. ಕಂಸನು ಸತ್ತನೆಂದು ತನ್ನ ತಂದೆ ತಾಯಿಯರಿಗೆ ಧೈರ್ಯ ಕೊಡಲು ಕೃಷ್ಣನು ಸಿಂಹವು ಆನೆಯನ್ನು ಕೊಂದು ಅವನ್ನು ಎಳೆಯುವಂತೆ ಕಂಸನನ್ನು ಎಳೆದು ಹಾಕಿದನು. ಈ ದೃಶ್ಯವನ್ನು ಕಾಣುತ್ತಲೇ ಎಲ್ಲ ಕಡೆಯಿಂದ ಗಟ್ಟಿಯಾಗಿ ಶಬ್ದವು ಕೇಳಿಬಂದಿತು. ಪ್ರೇಕ್ಷಕರಲ್ಲಿ ಕೆಲವರು ಸಂತೋಷವನ್ನು ವ್ಯಕ್ತಪಡಿಸಿದರೆ ಇನ್ನೂ ಕೆಲವರು ದುಃಖದಿಂದ ಅತ್ತರು.
ದೇವಕಿಯ ಎಂಟನೇ ಪುತ್ರನು ತನ್ನನ್ನು ಕೊಲ್ಲುವನೆಂದು ಆಕಾಶವಾಣಿಯು ತಿಳಿಸಿದಂದಿನಿಂದ ಕಂಸನು ಪ್ರತಿದಿನವೂ ದಿನವೀಡಿ ಕೃಷ್ಣನ ಬಗ್ಗೆಯೇ ಯೋಚಿಸುತ್ತಿದ್ದನು. ಅವನು ಯಾವ ಕಾರ್ಯದಲ್ಲೇ ಇರಲಿ ಮನದ ಒ೦ದು ಕಡೆ ಕೃಷ್ಣನ ನೆನಪು ಉಳಿದೇ ಇರುತ್ತಿತ್ತು.
ಹೀಗೆ ಕೃಷ್ಣನ ಶತ್ರುವೇ ಆದರೂ ಸದಾ ಕೃಷ್ಣನನ್ನು ನೆನೆಯುತ್ತಿದ್ದುದರಿಂದ ಕೃಷ್ಣನ ಕೈಯಿಂದಲೇ ಹತನಾಗುವ ಭಾಗ್ಯವನ್ನು ಅನಂತರ ಈ ಭೌತಿಕ ಜಗತ್ತಿನಿಂದ ಮುಕ್ತಿಯನ್ನು ಪಡೆದನು. ಭಗವದ್ಗೀತೆಯಲ್ಲಿ ಸದಾ ತದ್ಭಾವ ಭಾವಿತಃ ಎಂದು ಹೇಳಿದೆ ಅಂದರೆ ಮನುಷ್ಯನ ಮನಸ್ಸು ಯಾವುದರಲ್ಲಿ ತನ್ಮಯವಾಗಿರುತ್ತದೋ ಅದಕ್ಕೆ ಅನುಗುಣವಾಗಿ ಅವನ ಮುಂದಿನ ಜನ್ಮವು ಬರುತ್ತದೆ.
ಕಂಸನು ಕೃಷ್ಣನ ಇನ್ನೊಂದು ರೂಪವಾದ ಸುದರ್ಶನ ಚಕ್ರವನ್ನು ಹಿಡಿದ ನಾರಾಯಣನ ಸ್ವರೂಪದ ಬಗ್ಗೆ ಚಿಂತಿಸುತ್ತಿದ್ದನಾದ್ದರಿಂದ ಅವನು ಸತ್ತನಂತರ ನಾರಾಯಣನ ರೂಪವನ್ನು ಪಡೆಯುವ ಸಾರೂಪ್ಯ ಮುಕ್ತಿದೊರೆಯಿತು.
ಕಂಸನಿಗೆ ಎಂಟು ಮಂದಿ ತಮ್ಮಂದಿರು. ಅವರಲ್ಲಿ ಕಂಕ ಎಂಬುವನೇ ದೊಡ್ಡವನು. ತಮ್ಮ ಅಣ್ಣನ ವಧೆಯಾಯಿತೆಂದು ತಿಳಿದ ಅವರು ಒಟ್ಟಾಗಿ ಸೇರಿ ಬಹು ಕೋಪದಿಂದ ಕೃಷ್ಣನನ್ನು ಕೊಲ್ಲಲು ಅವನ ಮೇಲೆರಗಿದರು. ಕೃಷ್ಣನು ಕಂಸನನ್ನು ವಧಿಸುವುದರ ಮೂಲಕ ತನ್ನ ಸೋದರ ಮಾವನನ್ನೇ ಕೊಂದಿದ್ದ ಕೃಷ್ಣನಿಂದ ಅಂತಹ ವಧೆ ಮತ್ತೆ ಆಗದಿರಲಿ ಎಂದು ಬಲರಾಮನೇ ಕಂಸನ ಎಂಟು ಜನ ಸೋದರರನ್ನು ಎದುರಿಸಿದ.
ಸಿಂಹವು ಜಿಂಕೆಯನ್ನು ಕೊಲ್ಲುವ ರೀತಿಯಲ್ಲಿ ಬಲರಾಮನು ಆಯುಧವೊಂದನ್ನು ತೆಗೆದುಕೊಂಡು ಅವರೆಲ್ಲರನ್ನು ಕೊಂದುಹಾಕಿದ. ಹೀಗೆ ಕೃಷ್ಣ ಬಲರಾಮರು ದೇವೋತ್ತಮ ಪರಮ ಪುರುಷನು ದುಷ್ಟರ ಶಿಕ್ಷೆಗಾಗಿ ಹಾಗೂ ಶಿಷ್ಟರ ರಕ್ಷಣೆಗಾಗಿ ಬರುತ್ತಾನೆಂಬ ಮಾತನ್ನು ಸತ್ಯ ಮಾಡಿ ತೋರಿಸಿದ್ದರು.
ಕಂಸನ ವಧೆಯಾದ ಕೂಡಲೇ ದೇವಲೋಕದಿಂದ ದೇವತೆಗಳು ಹೂ ಮಳೆಗರೆದು ಕೃಷ್ಣ ಮತ್ತು ಬಲರಾಮರನ್ನು ಅಭಿನಂದಿಸಿದರು. ಇತ್ತ ಕಂಸ ಮತ್ತು ಅವನ ಎಂಟು ಮಂದಿ ಸೋದರರ ಪತ್ನಿಯರು ತಮ್ಮ ಗಂಡಂದಿರ ಅನಿರೀಕ್ಷಿತ ಸಾವಿನಿಂದ ದುಃಖತಪ್ತರಾಗಿದ್ದರು. ಅವರು ತಮಗೊದಗಿದ ಸ್ಥಿತಿಗಾಗಿ ಹಣೆಗಳನ್ನು ಚಚ್ಚಿಕೊಂಡು ಕಣ್ಣೀರಿನ ಪ್ರವಾಹವನ್ನೇ ಹರಿಸಿದರು. ಗಟ್ಟಿಯಾಗಿ ರೋದಿಸುತ್ತಾ ತಮ್ಮ ಗಂಡಂದಿರ ಶವಗಳನ್ನು ತಬ್ಬಿಕೊಂಡು ಕಂಸನ ಹಾಗೂ ಅವನ ತಮ್ಮಂದಿರ ಪತ್ನಿಯರು ಹೀಗೆ ನುಡಿದರು.

”ಪ್ರೀತಿಯ ಗಂಡಂದಿರೇ, ನೀವಿಲ್ಲದೆ ನಮಗೆ ಬೆಲೆಯೇ ಇಲ್ಲ. ಕೃಷ್ಣನು ದೇವೋತ್ತಮ ಪರಮ ಪುರುಷನೆಂದು ನಮಗೆ ಗೊತ್ತು. ಅವನು ಎಲ್ಲದರ ಪರಮ ಪ್ರಭು ಮತ್ತು ಎಲ್ಲವನ್ನೂ ಅನುಭವಿಸುವವನು. ಅವನ ಅಧಿಕಾರವನ್ನು ಅಲಕ್ಷ್ಯ ಮಾಡಿದವರು ಸುಖವಾಗಿರಲು ಸಾಧ್ಯವೇ ಇಲ್ಲ. ಹಾಗೆ ಮಾಡಿದಾಗ ಕಟ್ಟ ಕಡೆಗೆ ನಿಮ್ಮಂತೆ ಸಾಯುವರು.”
ಕೃಷ್ಣನಿಗೆ ತನ್ನ ಸೋದರತ್ತೆಯರ ವಿಷಯದಲ್ಲಿ ದಯ ಮತ್ತು ಪ್ರೀತಿಗಳಿದ್ದುದರಿಂದ ಸಾಧ್ಯವಾದಷ್ಟು ಮಟ್ಟಿಗೆ ಅವರನ್ನು ಸಮಾಧಾನ ಪಡಿಸಲು ಪ್ರಯತ್ನಿಸಿದನು. ಕೃಷ್ಣನೇ ತೀರಿಕೊಂಡವರೆಲ್ಲರ ಸೋದರ ಅಳಿಯನಾಗಿದ್ದುದರಿಂದ ಅವರೆಲ್ಲರ ಅಂತ್ಯ ಸಂಸ್ಕಾರಗಳು ಅವನ ಮೇಲ್ವಿಚಾರಣೆಯಲ್ಲೇ ನಡೆದವು.
ಅನಂತರ ಕೃಷ್ಣ ಬಲರಾಮರು ತಮ್ಮ ಮಾತಾ ಪಿತೃಗಳಾದ ವಸುದೇವ ದೇವಕಿಯರನ್ನೂ ಕಂಸನ ಕಾರಾಗೃಹದಿಂದ ಬಿಡಿಸಿದರು. ಅನಂತರ ಅವರಿಬ್ಬರೂ ತಂದೆ ತಾಯಿಯರ ಕಾಲಿಗೆರಗಿ ನಮಸ್ಕರಿಸಿದರು. ಕೃಷ್ಣನು ತಮ್ಮ ಮಗನಾಗಿಯೇ ಜನಿಸಿದ್ದರೂ ವಸುದೇವ ದೇವಕಿಯರಿಗೆ ಪ್ರಭುವಿನ ಉನ್ನತ ಸ್ಥಾನದ ಅರಿವಿತ್ತು.
ಅವರು ಭಕ್ತಿಯಿಂದ ನಿಂತೇ ಇದ್ದುದನ್ನು ಕಂಡ ಕೃಷ್ಣನು ತನ್ನನ್ನು ಬಲರಾಮನನ್ನು ಅವರು ಮಕ್ಕಳಂತೆ ಕಾಣುವುದು ಸಾಧ್ಯವಾಗುವಂತೆ ತನ್ನ ಯೋಗ ಮಾಯೆಯನ್ನು ವಿಸ್ತರಿಸಿದನು. ಅನಂತರ ಕೃಷ್ಣನು ತನ್ನ ತಂದೆ ತಾಯಿಯರನ್ನು ಕುರಿತು ಹೀಗೆಂದನು : “ನನ್ನ ಪ್ರೀತಿಯ ಮಾತಾಪಿತೃಗಳೇ ಈ ಮಾನವ ಜನ್ಮವನ್ನು ಕೊಡುವ ತಂದೆ ತಾಯಿಯರ ಋಣವನ್ನು ಮಾತ್ರ ಯಾರೂ ತೀರಿಸಲಾರರು.
ಈ ಮನುಷ್ಯ ಜನ್ಮವೇ ಭೌತಿಕ ಜಗತ್ತಿನಿಂದ ಮುಕ್ತಿಯನ್ನು ದೊರಕಿಸುವ ಸಾಧನ. ಮನುಷ್ಯನು ತನ್ನ ತಂದೆ ತಾಯಿಯರು, ಮಕ್ಕಳು, ಗುರು, ಬ್ರಾಹ್ಮಣರು ಮತ್ತು ಇತರ ಆಶ್ರಿತರಿಗೆ ಲಕ್ಷ್ಯ ಕೊಡಲು ಅಥವಾ ರಕ್ಷಿಸಲು ಸಾಧ್ಯವಿದ್ದೂ ಅವನು ಹಾಗೆ ಮಾಡದೆ ಹೋದರೆ ಅವನು ಉಸಿರಾಡುತ್ತಿದ್ದರೂ ಸತ್ತವನೆ೦ದೇ ಭಾವಿಸುತ್ತಾರೆ.
ಪ್ರಿಯ ತಂದೆ-ತಾಯಿಯರೆ, ನಮಗೆ ನಿಮ್ಮ ರಕ್ಷಣೆಯ ವಿಷಯದಲ್ಲಿ ಸದಾ ಆತಂಕವಿತ್ತು. ಆದರೆ ದುರದೃಷ್ಟದಿಂದ ನಾವು ನಿಮಗೆ ಯಾವ ಸೇವೆಯನ್ನೂ ಮಾಡಲಾಗಲಿಲ್ಲ. ಈವರೆಗಿನ ನಮ್ಮ ಕಾಲವೂ ವ್ಯರ್ಥವಾಗಿ ಹೋಯಿತು. ನಮ್ಮ ಹತೋಟಿಗೆ ಮೀರಿದ ಕಾರಣಗಳಿಂದಾಗಿ ನಾವು ನಿಮಗೆ ಸೇವೆ ಮಾಡಲು ಸಾಧ್ಯವಾಗಲಿಲ್ಲ. ತಂದೆ-ತಾಯಿಯರೆ ಈ ನಮ್ಮ ಪಾಪಕರ್ಮವನ್ನು ಕ್ಷಮಿಸಿ” ಎಂದು ಹೇಳಿದನು.
ದೇವೋತ್ತಮ ಪರಮ ಪುರುಷನು ಮುಗ್ಧ ಬಾಲಕನಂತೆ ಮಧುರ ಮಾತುಗಳನ್ನಾಡುತ್ತಿದ್ದಾಗ ವಸುದೇವ ದೇವಕಿಯರು ಮಾತೃವಾತ್ಸಲ್ಯದಿಂದ ಮೋಹಗೊಂಡು ಅವನನ್ನು ಸಂತೋಷದಿಂದ ಅಪ್ಪಿಕೊಂಡರು. ಅದೇ ರೀತಿ ಬಲರಾಮನನ್ನು ಆಲಿಂಗಿಸಿದರು. ಅವರಿಗೆ ಏನೂ ಹೇಳಲಾಗಲಿಲ್ಲ. ಆದರೆ ಕಣ್ಣಿನಿಂದ ಧಾರಾಕಾರವಾಗಿ ನೀರು ಹರಿಯುತ್ತಿತ್ತು.
ವಸುದೇವ ದೇವಕಿಯರು ಕಂಸನಿಂದ ನಾನಾ ಹಿಂಸೆಗೊಳಗಾಗಿದ್ದುದು ಕೃಷ್ಣನು ಅವರ ಮಗ ಎಂಬ ಒಂದೇ ಕಾರಣಕ್ಕಾಗಿ. ಆದರೆ ಈಗ ಅವರು ಅದೆಲ್ಲದರಿಂದ ಮುಕ್ತರಾಗಿ ತಮ್ಮ ನೆಚ್ಚಿನ – ಮಕ್ಕಳನ್ನು ಮತ್ತೆ ಪಡೆದಿದ್ದರು. ತನ್ನ ತಂದೆ ತಾಯಿಯರನ್ನು ಸಮಾಧಾನ ಪಡಿಸಿದ ಕೃಷ್ಣನು ತನ್ನ ಅಜ್ಜ ಉಗ್ರಸೇನನ ಕಡೆ ತಿರುಗಿದನು.
ಕಂಸನು ತನ್ನ ಸ್ವಂತ ತಂದೆಯನ್ನೇ ಬಂಧಿಸಿಟ್ಟಿದ್ದನು. ಕೃಷ್ಣನು ಅವನ ಬಳಿಗೆ ಹೋಗಿ ಉಗ್ರಸೇನನು ಈಗ ಯದುವಂಶದ ಅರಸನೆಂದು ಘೋಷಿಸಿದನು. ಆನಂತರ, ‘ನನ್ನ ಪ್ರಿಯ ತಾತ, ನನ್ನ ಸೋದರ ಮಾವನಾದ ಕಂಸನ ಭಯದಿಂದ ಯದುವಂಶ, ವೃಷ್ಣಿ ವಂಶ, ಅಂಧಕ ವಂಶ, ಮಧುವಂಶ, ದಸಾಹ್ಯ ವಂಶ ಹಾಗು ಕುಕುರವಂಶದ ರಾಜರೆಲ್ಲಾ ಆತಂಕಗೊಂಡಿದ್ದರು.
ನೀನು ಈಗ ಅವರನ್ನು ಸಮಾಧಾನ ಮಾಡಿ ಅವರಿಗೆ ಭದ್ರತೆಯ ಭರವಸೆಯನ್ನು ಕೊಡಬಹುದು. ನಿನ್ನ ಆಳ್ವಿಕೆಯಲ್ಲಿ ಇಡೀ ರಾಜ್ಯವು ಶಾಂತವಾಗಿರುವುದು.”
ಹೀಗೆ ಎಲ್ಲವೂ ಶುಭವಾಗಿ ಮಥುರಾದ ಪ್ರಜೆಗಳು ಶಾಂತಿ ಸಮಾಧಾನದಿ೦ದ ಜೀವಿಸುವಂತಾಯಿತು.






Leave a Reply