ನವದ್ವೀಪ ಪರಿಕ್ರಮ

ಮಧ್ಯ ದ್ವೀಪ

– ಡಾ.ಬಿ.ಆರ್. ಸುಹಾಸ್

ನವದ್ವೀಪ ಪರಿಕ್ರಮದಲ್ಲಿ ನಾಲ್ಕನೆಯ ದ್ವೀಪವು ಮಧ್ಯದ್ವೀಪ. ಇದು ಭಗವಂತನ ನವವಿಧ ಭಕ್ತಿಯಲ್ಲಿ ಸ್ಮರಣೆಯನ್ನು ಸಂಕೇತಿಸುತ್ತದೆ. ಇಲ್ಲಿ ಭಗವಂತನು ಮಧ್ಯಾಹ್ನದ ವೇಳೆಯಲ್ಲಿ ಪ್ರತ್ಯಕ್ಷನಾದುದರಿಂದ ಇದನ್ನು ಮಧ್ಯದ್ವೀಪವೆಂದು ಕರೆಯಲಾಗಿದೆ ಎಂದು ಹೇಳುತ್ತಾರೆ. ಗೋದ್ರುಮದ್ವೀಪದ ದಕ್ಷಿಣಕ್ಕಿರುವ ಈ ದ್ವೀಪದ ಸ್ಥಳೀಯ ಹೆಸರು, ಮಾಜಿದಾಗ್ರಾಮ. ಈ ಸುಂದರ ದ್ವೀಪದಲ್ಲಿರುವ ಪ್ರೇಕ್ಷಣೀಯ ಪವಿತ್ರ ಸ್ಥಳಗಳ ಪರಿಚಯ ಮಾಡಿಕೊಳ್ಳೋಣ.

ಸಪ್ತ ತಿಲ: ಇದನ್ನು ಸಪ್ತರ್ಷಿಭಜನ ಸ್ಥಲೀ ಎಂದೂ ಕರೆಯುತ್ತಾರೆ. ಇದು ಮಾಜಿದಾಗ್ರಾಮ ಎಂಬ ಹಳ್ಳಿಯಲ್ಲಿರುವ ಪವಿತ್ರಸ್ಥಳ. ಸಪ್ತ ಎಂದರೆ ಏಳು, ಹಾಗೂ ತಿಲ ಎ೦ದರೆ ಪರ್ವತ. ಹಿಂದೆ ಇಲ್ಲಿ ಏಳು ಪರ್ವತಗಳಿದ್ದವಂತೆ ಇವು ಈಗ ಕಾಣಬರುವುದಿಲ್ಲ. ಇವುಗಳಿಗೆ ಸಂಬಂಧಿಸಿದಂತೆ ಒಂದು ಕಥೆಯಿದೆ.

ಸತ್ಯ ಯುಗದಲ್ಲಿ ಒಮ್ಮೆ ಮರೀಚಿ, ಅತಿ, ವಸಿಷ್ಠ, ಪುಲಸ್ತ್ಯ, ಪುಲಹ, ಕ್ರತು, ಮತ್ತು ಆಂಗಿರಸ ಎಂಬ ಸಪ್ತರ್ಷಿಗಳು ತಮ್ಮ ತಂದೆ ಬ್ರಹ್ಮದೇವನ ಬಳಿ ಹೋಗಿ, ಮುಂದೆ ಶ್ರೀಚೈತನ್ಯ ಅಥವಾ ಗೌರಾಂಗ ಕಲಿಸುವ ಭಗವತ್ಪ್ರೇಮವನ್ನು ಪಡೆಯುವುದು ಹೇಗೆಂದು ಕೇಳಿದರು. ಅದಕ್ಕೆ ಬ್ರಹ್ಮದೇವನು ಅವರಿಗೆ ನವದ್ವೀಪಕ್ಕೆ ಹೋಗಿ ಗೌರಾಂಗನ ಕೀರ್ತನೆ ಮಾಡಬೇಕೆಂದು ಬೋಧಿಸಿದನು.

ಅದರಂತೆ ಅವರೆಲ್ಲರೂ ನವದ್ವೀಪಕ್ಕೆ ಬಂದು ಒಂದೊಂದು ಪರ್ವತದ ಮೇಲೆ ಕುಳಿತು ಶ್ರೀ ಗೌರಾಂಗನ ನಾಮಗಳನ್ನು ಭಜಿಸತೊಡಗಿದರು. ಊಟ, ನಿದ್ರೆಗಳನ್ನೂ ಬಿಟ್ಟು ಅವರು ಸತತವಾಗಿ ಗೌರಾಂಗನನ್ನು ಕೀರ್ತಿಸಿದರು. ಆಗೊಂದು ದಿನ, ಮಧ್ಯಾಹ್ನದ ವೇಳೆಯಲ್ಲಿ ಶ್ರೀಚೈತನ್ಯ ಮಹಾಪ್ರಭುಗಳು ಪ್ರತ್ಯಕ್ಷರಾದರು.

ಸುಂದರವಾದ ಪುಷ್ಪಮಾಲೆ ಹಾಗೂ ವಸ್ತ್ರಾಭರಣಗಳನ್ನು ಧರಿಸಿದ್ದ ಅವರು ಪಂಚತತ್ತ್ವದ ಇತರ ಭಕ್ತರೊಂದಿಗೆ ( ಶ್ರೀ ನಿತ್ಯಾನಂದ, ಶ್ರೀ ಅದ್ವೈತ, ಶ್ರೀಗದಾಧರ, ಶ್ರೀವಾಸ) ಪ್ರತ್ಯಕ್ಷರಾಗಿ ನೂರು ಸೂರ್ಯರ ತೇಜಸ್ಸಿನಿಂದ ದೇದೀಪ್ಯಮಾನವಾಗಿ ಪ್ರಕಾಶಿಸುತ್ತಿದ್ದರು.

ಸಂತೃಪ್ತರಾದ ಸಪ್ತರ್ಷಿಗಳಿಗೆ ಜ್ಞಾನ, ಕರ್ಮಗಳನ್ನು ಬಿಟ್ಟು ಸುಮ್ಮನೆ ಶ್ರೀಕೃಷ್ಣನ ದಿವ್ಯಲೀಲೆಗಳನ್ನು ಸ್ಮರಿಸುತ್ತಿರಬೇಕೆಂದೂ, ಈ ಸ್ಥಳದಲ್ಲಿ ಯಾವುದೇ ತಪಶ್ಚರ್ಯೆಯಂಥ ಕಠಿಣ ಶ್ರಮವಿಲ್ಲದೇ ಗೌರಪ್ರೇಮವನ್ನು ಪಡೆಯಬಹುದೆಂದು ಆದೇಶವಿತ್ತರು ಚೈತನ್ಯರು. ಮುಂದೆ ಬೇಗನೆ ತಾವು ನವದ್ವೀಪದಲ್ಲಿ ಅವತರಿಸಿ ಲೀಲೆಗಳನ್ನು ಮಾಡುವುದಾಗಿ ಭರವಸೆಯಿತ್ತರು.

ಹೀಗೆ ಭಗವಾನ್ ಚೈತನ್ಯರು ಮಧ್ಯಾಹ್ನದ ಹೊತ್ತಿನಲ್ಲಿ ಪ್ರತ್ಯಕ್ಷವಾದುದರಿಂದ ಈ ಸ್ಥಳವು ಮಧ್ಯದ್ವೀಪವೆಂದು ಹೆಸರಾಯಿತು. ಹಿಂದೆ, ಇಲ್ಲಿ ಋಷಿಗಳು ಕುಳಿತಿದ್ದ ಬೆಟ್ಟಗಳು ಅವರ ನಕ್ಷತ್ರಗಳು ಆಕಾಶದಲ್ಲಿದ್ದ ದಿಕ್ಕುಗಳ ವಿನ್ಯಾಸದಲ್ಲೇ ಇದ್ದುವಂತೆ! ಆದರೆ ಈಗ ಅವು ಕಾಣುವುದಿಲ್ಲ.

ಹಂಸವಾಹನ ಶಿವಾಲಯ: ಈ ದೇವಾಲಯವು ಭಕ್ತಿವಿನೋದ ಠಾಕೂರರ ಮನೆಯಿಂದ ದಕ್ಷಿಣಕ್ಕೆ ಎರಡು ಕಿ.ಮೀ.ದೂರದಲ್ಲಿದೆ. ಈ ದೇವಾಲಯಕ್ಕೆ ಹೋಗುವ ದಾರಿಯಲ್ಲಿ ಗೌಡೀಯ ಮಠವೊಂದಿದ್ದು ಅಲ್ಲಿ ಶ್ರೀ ಚೈತನ್ಯರ ಲೀಲೆಗಳ ಸುಂದರ ಚಿತ್ರಣವಿದೆ. ಹಂಸವಾಹನ ಶಿವಾಲಯವು ನೋಡಲು ಒಂದು ಪುಟ್ಟ ಗುಡಿಸಲಿನಂತೆ ಕಾಣುತ್ತದೆ.

ಹಳದಿ ಬಣ್ಣದ ಈ ಗುಡಿಗೆ ಹುಲ್ಲಿನ ಮೇಲ್ಛಾವಣಿಯಿದೆ. ದೇವಾಲಯದ ಮುಂದೆ ತೆರೆದ ಅಂಗಣವಿದ್ದು, ರಸ್ತೆಯ ಬಲಕ್ಕೆ ಒಂದು ದೊಡ್ಡ ಮರವಿದೆ. ಸ್ವಾರಸ್ಯವೆಂದರೆ, ಇಲ್ಲಿನ ಮೂರ್ತಿಯಾದ ಹಂಸವಾಹನ ಶಿವ ಇಲ್ಲಿ ಯಾವಾಗಲೂ ಇರುವುದಿಲ್ಲ. ವರ್ಷದಲ್ಲಿ ಮೂರು ಬಾರಿ ಮಾತ್ರ ಇಲ್ಲಿಗೆ ಭಗವಾನ್ ಶಿವನು ಆಗಮಿಸುತ್ತಾನೆ.

ಅದು, ಚೈತ್ರ ಮಾಸದ ಪೌರ್ಣಿಮೆಯ ದಿನಂದಂದು (ಮಾರ್ಚ್ – ಏಪ್ರಿಲ್ ಸಮಯ) ಶಿವನ ಮೂರ್ತಿಯನ್ನು ಇಲ್ಲಿಗೆ ತರಲಾಗುತ್ತದೆ. ಇದು ಗೌರಪೂರ್ಣಿಮೆಯ ಅನಂತರ ಎರಡು ಮೂರು ವಾರಗಳ ಬಳಿಕ ನಡೆಯುತ್ತದೆ. ವರ್ಷದ ಮಿಕ್ಕ ಅವಧಿಯ ಪೂರಾ, ಶಿವನ ಮೂರ್ತಿಯನ್ನು ಸನಿಹದ ಕೆರೆಯಾದ ಅಲಕನಂದಾ ಕುಂಡದ ಒಳಗೆ ಇಡಲಾಗಿರುತ್ತದೆ.

ಇದು ಶಿವನ ರೌದ್ರ ಕೋಪವನ್ನು ಶಾಂತಗೊಳಿಸಲು ಎಂದು ಇಲ್ಲಿನ ಭಕ್ತರು ಹೇಳುತ್ತಾರೆ. ವರ್ಷದ ಮೂರು ದಿನಗಳು ಶಿವಲಿಂಗವು ಇಲ್ಲಿರುವಾಗಲೂ, ಲಿಂಗದ ಮೇಲೆ ಸತತವಾಗಿ ನೀರಿನ ಅಭಿಷೇಕ ಮಾಡುತ್ತಿರುತ್ತಾರೆ. ಲಿಂಗವು ಬಿಸಿಯಾಗಬಾರದೆಂದು ಹೀಗೆ ಮಾಡುತ್ತಾರೆ.

ಈ ಸಮಯದಲ್ಲಿ ದೊಡ್ಡ ಉತ್ಸವವೇ ನಡೆಯುತ್ತದೆ. ಈ ಉತ್ಸವವನ್ನು ನೋಡಲು ಸುಮಾರು ಐವತ್ತು ಸಾವಿರ ಜನರು ಬರುತ್ತಾರೆ. ಇಲ್ಲಿನ ಶಿವಮೂರ್ತಿ, ಹಂಸವನ್ನೇರಿರುವ ಲಿಂಗವಾಗಿದೆ. ಇದಕ್ಕೆ ಸಂಬಂಧಿಸಿದ ಕಥೆ ಹೀಗಿದೆ: ಒಮ್ಮೆ ಸೂತಪುರಾಣಿಕರು ಶ್ರೀ ಚೈತನ್ಯರ ಲೀಲೆಗಳನ್ನು ಕುರಿತು ಮಾತನಾಡುವರೆಂದು ತಿಳಿದ ಭಗವಾನ್ ಶಿವನು ಕೂಡಲೇ ಇಲ್ಲಿಗೆ ಓಡಿ ಬ೦ದನ೦ತೆ.

ಆಗ ಅವನು ಯಾವುದೇ ವಿಷಯವನ್ನು ತಪ್ಪಿಸಬಾರದೆಂದು ಬೇಗನೆ ಬರಲು, ತನ್ನ ವಾಹನವಾದ ವೃಷಭವನ್ನು ಬಿಟ್ಟು ಬ್ರಹ್ಮದೇವನ ವಾಹನವಾದ ಹಂಸವನ್ನು ಏರಿ ಬಂದನಂತೆ. ಹೀಗೆ ಆತುರದಿಂದ, ತವಕದಿಂದ ಬಂದುದರಿಂದ ಶಿವನು ಬಹಳ ಬಿಸಿಯಾಗಿಬಿಟ್ಟನು.

ಹಾಗಾಗಿ, ಇಲ್ಲಿನ ಶಿವಲಿಂಗವು ಬಹಳ ಬಿಸಿಯಾಗಿರುವುದರಿಂದ ಅದನ್ನು ಸದಾಕಾಲವೂ ಈ ದೇವಾಲಯದಿಂದ ಒಂದು ಕಿ.ಮೀ. ದೂರದಲ್ಲಿರುವ ಅಲಕನಂದಾ ಸರೋವರದಲ್ಲಿ ಇರಿಸಿರುತ್ತಾರೆ. ವರ್ಷದಲ್ಲಿ ಮೂರು ದಿನಗಳು ಮಾತ್ರ ಶಿವಲಿಂಗವನ್ನು ದೇವಾಲಯದೊಳಗೆ ತಂದಿಟ್ಟು ಆಗಲೂ ಸತತವಾಗಿ ನೀರಿನ ಅಭಿಷೇಕ ಮಾಡುತ್ತಿರುತ್ತಾರೆ.

ನೈಮಿಷಾರಣ್ಯ: ಸಪ್ತತಿಲದ ದಕ್ಷಿಣಕ್ಕೆ, ಗೋಮತಿ ನದಿಯ ದಡದ ಮೇಲೆ ನೈಮಿಷಾರಣ್ಯ ಎಂಬ ಅರಣ್ಯವಿದೆ. ಕಲಿಯುಗದ ಆರಂಭದಲ್ಲಿ ಇದು ಹರಿಯುವ ಗೋಮತೀನದಿಯ ದಡದ ಮೇಲೆಯೇ ಕಾಣುತ್ತಿತ್ತಂತೆ; ಆದರೆ ಈಗ ಇದು ಕೆಲವು ಹೊಲಗಳ ಮಧ್ಯದಲ್ಲಿದೆ.

ಇದು, ಹಂಸವಾಹನ ಶಿವಾಲಯಕ್ಕೂ ಶಿವಲಿಂಗವನ್ನಿಟ್ಟಿರುವ ಅಲಕನಂದಾಕೆರೆಗೂ ಮಧ್ಯದ ಒಂದು ಪ್ರದೇಶದಲ್ಲಿದೆ. ಇದು ಈ ಶಿವಾಲಯದಿಂದ ಮುಕ್ಕಾಲು ಕಿ.ಮೀ. ದೂರದಲ್ಲಿದೆ. ಈ ಅರಣ್ಯದಲ್ಲಿ ಕಲಿಯುಗದ ಆರಂಭದಲ್ಲಿ ಶೌನಕಾದಿ ಋುಷಿಮುನಿಗಳು ಸೂತ ಪುರಾಣಿಕರಿ೦ದ ಗೌರಭಾಗವತವನ್ನು ಕೇಳಿದರು ಎಂದು ಹೇಳುತ್ತಾರೆ.

ಕಾರ್ತಿಕ ಮಾಸದಲ್ಲಿ ಇಲ್ಲಿ ಪುರಾಣಗಳನ್ನು ಓದುವವರು ಶ್ರೀಚೈತನ್ಯರ ಲೀಲೆಗಳಲ್ಲಿ ಮುಳುಗಿ ಸಂಕಟಗಳಿಂದ ದೂರಾಗಿ ವೃಂದಾವನವನ್ನು ಸುಲಭವಾಗಿ ಸೇರುತ್ತಾರೆ, ಎಂದು ಹೇಳುತ್ತಾರೆ.

ಉತ್ತರ ಪ್ರದೇಶದಲ್ಲಿರುವ ನೈಮಿಷಾರಣ್ಯದಲ್ಲಿ ಸೂತಪುರಾಣಿಕರು ಶೌನಕಾದಿ ಋಷಿಗಳಿಗೆ ಶ್ರೀಮದ್ಭಾಗವತವನ್ನೂ ಇತರ ಪುರಾಣಗಳನ್ನೂ ಶ್ರವಣ ಮಾಡಿಸಿದರು. ಇಲ್ಲಿ ಆ ಋಷಿಮುನಿಗಳೆಲ್ಲರೂ ಸೇರಿ ದೀರ್ಘವಾದ ಸತ್ರಯಾಗವನ್ನು ಮಾಡಿದರು ಎಂಬ ವಿವರಣೆ ಪುರಾಣಗಳಲ್ಲಿದೆ.

ಒಂದು ಪವಿತ್ರ ಕ್ಷೇತ್ರವನ್ನು ಸೂಚಿಸಲು ಬ್ರಹ್ಮನನ್ನು ಕೇಳಲು ಅವನು ಒಂದು ಚಕ್ರವನ್ನು ತಿರುಗಿಸಿ ಬಿಟ್ಟು ಅದರ ನೇಮಿಯು ಎಲ್ಲಿ ಸಿಕ್ಕಿಕೊಳ್ಳುವುದೋ ಅದೇ ಅತ್ಯಂತ ಪವಿತ್ರ ಕ್ಷೇತ್ರವೆಂದು ಹೇಳಿದನು. ಆ ಚಕ್ರದ ನೇಮಿಯು ಈ ಸ್ಥಳದಲ್ಲಿ ಸಿಕ್ಕಿಕೊಂಡಿದ್ದರಿಂದ ಇದಕ್ಕೆ ನೈಮಿಷಾರಣ್ಯವೆಂದು ಹೆಸರು ಬಂದಿತು.

ಈ ನೈಮಿಷಾರಣ್ಯದಲ್ಲಿ ಹದಿನಾರು ಕಿ.ಮೀ. ಗಳ ಪರಿಕ್ರಮ ಪಥವಿದ್ದು, ಇಲ್ಲಿ ಭಾರತದ ಎಲ್ಲ ತೀರ್ಥಕ್ಷೇತ್ರಗಳೂ ನೆಲೆಸಿವೆ ಎಂದು ನಂಬಲಾಗಿದೆ. ಇಲ್ಲಿಯೇ ದೇವತೆಗಳು ದಧೀಚಿ ಮಹರ್ಷಿಗಳನ್ನು ವೃತ್ರವಧೆಗಾಗಿ ಅವರ ಅಸ್ಥಿಗಳನ್ನು ಬೇಡಿದರೆಂದೂ ಇಲ್ಲಿಯೇ ಶ್ರೀರಾಮನು ರಾವಣನನ್ನು ಕೊಂದುದಕ್ಕಾಗಿ ಯಜ್ಞವನ್ನು ಆಚರಿಸಿದನೆಂದೂ ಹೇಳುತ್ತಾರೆ. ಈ ನೈಮಿಷಾರಣ್ಯದ ಪ್ರತಿರೂಪವೇ ನವದ್ವೀಪ ನೈಮಿಷಾರಣ್ಯ ಎನ್ನಬಹುದು.

(ಮುಂದುವರಿಯುವುದು)

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi