– ಕೃಷ್ಣಾನಂದ ವೇದವ್ಯಾಸಾಚಾರ್
ತಪೋ ವಿದ್ಯಾ ವಿರಕ್ತ್ಯಾದಿ ಸುದ್ಗುಣ್ ಘಾಕರನಾನಂ ।
ವಾದಿರಾಜ ಗುರೂನ್ ವಂದೇ ಹಯಗ್ರೀವ ದಯಾಶ್ರಯಾನ್ ||

ಶ್ರೀವಾದಿರಾಜರು ಕರ್ನಾಟಕದ ಯತಿಪರಂಪರೆ ಹಾಗೂ ಹರಿದಾಸ ಪರಂಪರೆಯ ಉನ್ನತ ಸೇತು. ಭಾಗವತ ಶಿರೋಮಣಿ, ಪರಮವೈಷ್ಣವ ಕೀರ್ತನಕಾರರು. ಅತ್ಯುತ್ತಮ ಆಡಳಿತಗಾರರು ಹಾಗೂ ಎಲ್ಲಕ್ಕಿಂತ ಮಿಗಿಲಾಗಿ ಪರಮ ದಯಾವಂತರು ಸಮಾಜೋದ್ಧಾರಕರು ಹಾಗೂ ಭಕ್ತವರ್ಗದ ಕಣ್ಮಣಿ.
ಈ ಅವತಾರದಲ್ಲಿ ಮನುಷ್ಯ ಮಾನದಲ್ಲಿ 120 ವರ್ಷಗಳಷ್ಟು ದೀರ್ಘವಾದ ಭೌತಿಕ ಶರೀರವನ್ನು ಹರಿಧ್ಯಾನದಲ್ಲಿ, ಸಾಧನೆಯಲ್ಲಿ ತೊಡಗಿಸಿ ತದನಂತರವೂ ಸಹ ಸಶರೀರ ಬೃಂದಾವನ ಪ್ರವೇಶ ಮಾಡಿ, ಇಂದಿಗೂ ಶಿರಸಿಯ ಬಳಿಯ ಸೋದೆಯಲ್ಲಿ ಮಹಿಮಾಪೂರಿತವಾಗಿ ಭಕ್ತಜನರ ಉದ್ಧಾರ ಮಾಡುತ್ತಿರುವ ಮಹಾಮಹಿಮರು.
ಉಡುಪಿಯಲ್ಲಿ ಶ್ರೀ ಮಧ್ವಾಚಾರ್ಯರಿಂದ ಅನುಗ್ರಹಿತವಾದ ಅಷ್ಟಮಠಗಳಲ್ಲಿ ಒಂದಾದ ಸೋದೆ ಮಠದ ಪ್ರವರ್ತಕರಾಗಿ, ಉಡುಪಿಯಲ್ಲಿದ್ದ ಎರಡು ತಿಂಗಳ ಪರ್ಯಾಯ ಅವಧಿಯನ್ನು ಎರಡು ವರ್ಷಗಳಿಗೆ ನಿಗದಿ ಮಾಡಿ ಸುಸೂತ್ರ ಪೂಜಾ ವ್ಯವಸ್ಥೆಯನ್ನು ಏರ್ಪಡಿಸಿದ ದೂರದರ್ಶಿತ್ವ ರಾಜರದು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿನ ಕುಂಭಾಸಿ ಗ್ರಾಮದಲ್ಲಿಯ ಹೂವಿನ ಕೆರೆಯಲ್ಲಿ ಶ್ರೀರಾಮಭಟ್ಟ ಮತ್ತು ಶ್ರೀಮತಿ ಗೌರಿದೇವಿಯರ ಸುಪುತ್ರರಾಗಿ ಅವತರಿಸಿ, ಬಾಲ್ಯದಲ್ಲೇ ಭಗವದನುಗ್ರಹದಂತೆ ಸಂನ್ಯಾಸ ಸ್ವೀಕರಿಸಿ,
ಪೀಠಾಧಿಪತಿಯಾಗಿ ಅನೇಕ ಜನಹಿತ ಕಾರ್ಯಗಳನ್ನು ಸಮಾಜದ ಭಗವತ್ಸಾಧನೆಯನ್ನು ನೆರವೇರಿಸಿ ಭಾರತದಾದ್ಯಂತ ಸಂಚರಿಸಿ ‘ತೀರ್ಥ ಪ್ರಬಂಧ’ ಎಂಬ ಯಾತ್ರಾ ಕೈಪಿಡಿಯನ್ನು ರಚಿಸಿದ್ದಲ್ಲದೆ ವೈಷ್ಣವ ತತ್ತ್ವಶಾಸ್ತ್ರದಲ್ಲಿ ಹಿಂದಿನ ಅನೇಕ ಆಚಾರ್ಯರು ಅದರಲ್ಲೂ ವಿಶೇಷವಾಗಿ ಶ್ರೀಮಧ್ವಾಚಾರ್ಯರ ಅನೇಕ ಗ್ರಂಥಗಳಿಗೆ ಟೀಕಾ ಟಿಪ್ಪಣಿಯನ್ನು ಸುಮಾರು 15 ಗ್ರಂಥಗಳಲ್ಲಿ ರಚಿಸಿದ್ದಾರೆ.

ಬದರೀ ಯಾತ್ರೆಯಲ್ಲಿ ಶ್ರೀ ವೇದವ್ಯಾಸರನ್ನು ಸಂದರ್ಶಿಸಿ ಅವರಿಂದ ಅನುಗ್ರಹಿತರಾಗಿ ಅನೇಕ ಗ್ರಂಥಗಳನ್ನು ಭಕ್ತರಿಗೆ ಆಸ್ತಿ ಸ್ವರೂಪವಾಗಿ ಅನುಗ್ರಹಿಸಿದ್ದಾರೆ.
ಮಧ್ವಶಾಸ್ತ್ರದ ಪರಂಪರೆಯಂತೆ ಮುಂದಿನ ವಾಯಪದಕ್ಕೆ ನಿಯುಕ್ತರಾಗಿರುವ ಶ್ರೀ ವಾದಿರಾಜರು ‘ಭಾವೀ ಸಮೀರ’ ರೆಂದೇ ಭಕ್ತ ಸಮೂಹದಲ್ಲಿ ಪ್ರೀತಿಯಿಂದ ಮಾನ್ಯ ಮಾಡಲ್ಪಟ್ಟವರು.
ಇನ್ನೊಂದು ವಿಶೇಷವೆಂದರೆ ತಮ್ಮ ಹಿರಿಯ ಸಮಕಾಲೀನರಾದ ಶ್ರೀ ವ್ಯಾಸರಾಜರಂತೆ ಇವರೂ ಸಹ ಹರಿದಾಸ ಸಾಹಿತ್ಯಕ್ಕೆ ವಿಶೇಷ ಪ್ರೋತ್ಸಾಹವನ್ನು ನೀಡಿ ಸ್ವತಃ ಅನೇಕ ಉತ್ತಮ ಕೃತಿಗಳನ್ನು ಹಾಗೂ ಕನ್ನಡದಲ್ಲಿ ತತ್ತ್ವಶಾಸ್ತ್ರ ಗ್ರಂಥಗಳನ್ನು ರಚಿಸಿದ್ದಾರೆ.
ವಿಶಾಲ ಮತ್ತು ಅನುಗ್ರಹ ದೃಷ್ಟಿಕೋನವನ್ನು ಹೊಂದಿದ್ದ ಶ್ರೀ ವಾದಿರಾಜರು ಸ್ತ್ರೀಯರಿಗೆಂದೇ ಅನೇಕ ರಚನೆಗಳನ್ನು ಅನುಗ್ರಹಿಸಿದ್ದಾರೆ. ಅದರಲ್ಲಿ ಅನೇಕ ಭಾಗವತ ಸ್ತ್ರೀಯರು ಪ್ರೀತಿಯಿಂದ ಹಾಡುವ ‘ಲಕ್ಷ್ಮೀಶೋಭಾನೆ” ಯೂ ಸಹ ಒಂದು.
ಕರ್ನಾಟಕದ ಪ್ರಖ್ಯಾತ ತೀರ್ಥಕ್ಷೇತ್ರವಾದ ಧರ್ಮಸ್ಥಳದಲ್ಲಿ ವಾದಿರಾಜರು ಆಡಳಿತವನ್ನು ನೆಲೆಗೊಳಿಸಿದ್ದೇ ಅಲ್ಲದೆ, ಶೈವ ದೇವರಿಗೆ ವೈಷ್ಣವ ಪೂಜೆ ಹಾಗೂ ಜೈನರ ಆಡಳಿತವನ್ನು ನೇಮಿಸಿ ಸರ್ವಧರ್ಮ ಸಮದರ್ಶಿತ್ವವನ್ನು ಮರೆದು ‘ಪಂಡಿತಾಂ ಸಮದರ್ಶಿನಃ’ ಎಂಬ ಮಾತನ್ನು ಸಿದ್ಧಪಡಿಸಿದರು.
ಬೇಲೂರಿಗೆ ಭೇಟಿಯಿತ್ತ ಶ್ರೀವಾದಿರಾಜರು ಅಲ್ಲಿ ಅವತಾರಪುರುಷರಾದ ಶ್ರೀ ಬೇಲೂರು ವೈಕುಂಠದಾಸರೊಡನೆ ಸ್ನೇಹ ಪ್ರೀತಿಯಿಂದ ವರ್ತಿಸಿ ಅವರ ಮೂಲಕ ಶ್ರೀ ಚನ್ನಕೇಶವನ ವಿಶೇಷ ದರ್ಶನ ಪಡೆದ ಪ್ರಸಂಗ ಅವರ ವಿದ್ವಜ್ಜನ ಪ್ರೀತಿ ಹರಿದಾಸ ಗೌರವವನ್ನು ತೋರುತ್ತದೆ.

ದಶಾವತಾರ ಸ್ತೋತ್ರಗಳು, ಶ್ರೀಕೃಷ್ಣಾಷ್ಟಕ ಮತ್ತು ಕರ್ನಾಟಕ ಸಂಗೀತದಲ್ಲಿ ಮಂಗಳಾಚರಣೆಯಾಗಿ ಹಾಡುವ “ಆನಂದಮಯಗೆ ಚಿನ್ಮಯಗೆ” ಎಂಬ ಕೃತಿಗಳು ಅವರ ಅನೇಕ ಕೃತಿಗಳಲ್ಲಿ ಪ್ರಸಿದ್ಧವಾದ ಕೆಲವು “ಹಯವದನ” ಎಂಬ ಅಂಕಿತದಿಂದ ತಮ್ಮ ಆರಾಧ್ಯದೈವವಾದ ಶ್ವೇತಾಶ್ವ ಸ್ವರೂಪಿ ಶ್ರೀಮನ್ನಾರಾಯಣನನ್ನು ಅರ್ಚಿಸಿ ಮಾಧ್ವ ಸಮುದಾಯದ ವಿಶೇಷ ಪಾಕರುಚಿಯಾದ “ಹಯಗ್ರೀವ’ ಎಂಬ ತಿನಿಸನ್ನೂ ಸಹ ದಯಪಾಲಿಸಿದ ಮಹಾಗುರುಗಳು.
ಸ್ಥಳ ವಿಶೇಷದಿಂದಾಗಿ ಬೇರೆ ಬೆಳೆಗಳು ಬಾರದ ರೈತಸಮುದಾಯ ಅರ್ಪಿಸಿದ ಬದನೆಕಾಯನ್ನು ಮಾರ್ಪಾಟುಗೊಳಿಸಿ ಶ್ರೀವಾದಿರಾಜ ಗುಳ್ಳವೆಂಬ ಹೆಸರಿನಿಂದ ಅದನ್ನು ಭಗವಂತನಿಗೆ ನಿವೇದಿಸಿ ರೈತ ಸಮುದಾಯದ ಸಂತೋಷಕ್ಕೆ ಕಾರಣವಾದ ಮಹಾಮಹಿಮರು.
ಹೀಗೆ ಶ್ರೀವಾದಿರಾಜರು ಅನೇಕ ಧರ್ಮ ಪ್ರಚಾರದ, ಸಮಾಜೋದ್ಧಾರದ ಕಾರ್ಯಕ್ರಮಗಳನ್ನು ನೆರವೇರಿಸಿ ತಮ್ಮ ಮುಂದಿನ ಆತ್ಮ ಸಾಧನೆಯ ಸಲುವಾಗಿ ಕ್ರಿ.ಶ. 1600ರಲ್ಲಿ ಇಂದಿನ ಶಿರಸಿಯ ಬಳಿಯ ಸೋದೆ, ಸೋಂದಾ (ಸೋದೆ) ಎಂದು ಕರೆಯಲ್ಪಡುವ ಪುಣ್ಯಭೂಮಿಯಲ್ಲಿ ಸಶರೀರ ಬೃಂದಾವನ ಪ್ರವೇಶ ಮಾಡಿ ಪಂಚ ವೃಂದಾವನ ವಿಶೇಷದೊಂದಿಗೆ ಭಕ್ತ ಜನರನ್ನು ಪೊರೆಯುತ್ತಿದ್ದಾರೆ.
”ನಿನ್ವಶನಾದ ಜಗನ್ನಾಥ ವಿಠಲನ ಇನ್ನಾದರು ತೋರೆನ್ನ ಮನದಲಿ” ಎಂಬ ಶ್ರೀ ಜಗನ್ನಾಥದಾಸರು ಶ್ರೀ ವಾದಿರಾಜರನ್ನು ಕುರಿತು ಮಾಡಿದ ಸ್ತುತಿಯಂತೆ ನಾವೆಲ್ಲರೂ ಶ್ರೀ ವಾದಿರಾಜರ ಹಾಗೂ ತನ್ಮೂಲಕ ಶ್ರೀ ಮಹಾವಿಷ್ಣುವಿನ ದಿವ್ಯ ಅನುಗ್ರಹಕ್ಕೆ ಪ್ರಾರ್ಥಿಸೋಣ.
ಜನನ : ಕ್ರಿ.ಶ. 1480, ಬೃಂದಾವನ ಪ್ರವೇಶ : ಕ್ರಿ.ಶ. 1600, ಬೃಂದಾವನ ಸ್ಥಳ : ಸೋಂದಾ, ಶಿರಸಿ, ಉತ್ತರಕನ್ನಡ ಜಿಲ್ಲೆ, ಪ್ರಸಿದ್ಧ ಗ್ರಂಥಗಳು : ತೀರ್ಥ ಪ್ರಬಂಧ, ರುಕ್ಮಿಣೀಶ ವಿಜಯ, ಏಕಾದಶೀ ನಿರ್ಣಯ, ತಂತ್ರಸಾರ ಟೀಕಾ, ಭಗವದ್ಗೀತಾ ಟಿಪ್ಪಣಿ, ಕೃಷ್ಣಾಷ್ಟಕ, ಕನ್ನಡ ತಾತ್ಪರ್ಯ ನಿರ್ಣಯ, ಲಕ್ಷ್ಮೀಶೋಭಾನೆ, ವೈಕುಂಠ ವರ್ಣನೆ, ಭ್ರಮರಗೀತಾ, ಸ್ವಪ್ನಗದ್ಯ, ಸಾವಿರಾರು ದೇವರ ನಾಮಗಳು. ಅಂಕಿತ : ಹಯವದನ, ಆರಾಧ್ಯದೈವ : ಹಯವದನ (ಶ್ವೇತಾಶ್ವ ಸ್ವರೂಪಿ ನಾರಾಯಣ), ಅಷ್ಟಮಠಗಳಲ್ಲಿ: ಸೋದೆ ಮಠ






Leave a Reply