ಇರುವುದೊಂದೇ ಧರ್ಮ

ಶ್ರೀ ಶ್ರೀಮದ್‌ ಎ.ಸಿ.ಭಕ್ತವೇದಾಂತ ಸ್ವಾಮಿ ಪ್ರಭುಪಾದರು, ಅರ್ಚಕರು ಹಾಗೂ ಕ್ರೈಸ್ತ ವಿದ್ವಾಂಸರ ನಡುವಿನ ಮಾತುಕಥೆಗಳು ಸ್ಥಳ: ಪ್ಯಾರಿಸ್, ದಿನಾಂಕ: ಜೂನ್ 15, 1974

ಮೇಡಮ್ ಸಿಯಾಡ್: ಶ್ರೀಮದ್‌ ಆಚಾರ್ಯರೇ, ಅಧ್ಯಯನ ಮಾಡದೆಯೇ ಆತ ಅಥವಾ ಆಕೆ ನೇರವಾಗಿ ಶರಣಾಗತರಾಗುವ ಮೂಲಕ ಭಗವಂತನ ಸಾಕ್ಷಾತ್ಕಾರ ಪಡೆಯಬಹುದೇ?

ಶ್ರೀಲ ಪ್ರಭುಪಾದ: ಖಂಡಿತಾ, ಇದಕ್ಕೆ ಹೆಚ್ಚಿನ ಶಿಕ್ಷಣವಾಗಲೀ, ಪಾಂಡಿತ್ಯವಾಗಲೀ ಮತ್ತೇನಾದರಾಗಲೀ ಬೇಕಿಲ್ಲ. ಯಾರಾದರೂ ಭಗವಂತನ ಚರಣ ಕಮಲಗಳಲ್ಲಿ ಶರಣಾಗಲು ಮುಂದಾದರೆ ಸಾಕು, ಅವರ ಜೀವನ ಪರಿಪೂರ್ಣವಾಗುವುದು. ಇದು ವೈದಿಕ ಸಾಹಿತ್ಯದಲ್ಲಿ ಹೇಳಲ್ಪಟ್ಟಿದೆ.

ಆರಾಧಿತೋ ಯದಿ ಹರಿಃ ಸ್ತಪಸಾ ತಥಾ ಕಿಮ್ – ‘ಶ್ರೀ ಹರಿಯ ಪಾದಪದ್ಮಗಳಲ್ಲಿ ಶರಣಾಗಿ ಅವನನ್ನು ಆರಾಧಿಸುವವರಿಗೆ ವ್ರತ-ತಪಸ್ಸುಗಳ ಅಗತ್ಯವಿರುವುದಿಲ್ಲ. ಹಾಗೆಯೇ, ನಾ ರಾಧಿತೋ ಯದಿ ಹರಿಃ ಸ್ತಪಸಾ ತಥಾ ಕಿಮ್ – ‘ವ್ಯಕ್ತಿಯು ಭಗವಂತನಿಗೆ ಶರಣಾಗಿ ಅವನನ್ನು ಆರಾಧಿಸುವುದನ್ನು ಕಲಿಯದೇ ಹೋದರೆ, ಅವನ ಕಠಿಣ ತಪಸ್ಸುಗಳೆಲ್ಲವೂ ವ್ಯರ್ಥ.’

ಮುಂದುವರಿದು, ಅಂತ‌ರ್‌ ಬಹಿರ್‌ಯದಿ ಹರಿಃ ಸ್ತಪಸಾ ತಥಾ ಕಿಮ್ – ‘ವ್ಯಕ್ತಿಯು ಒಳ-ಹೊರಗುಗಳಲ್ಲಿ ಭಗವಂತನನ್ನು ಕಾಣಬಲ್ಲನಾದರೆ ತಪಸ್ಸಿನ ಅಗತ್ಯವೆಲ್ಲಿಯದು?’ ಹಾಗೆಯೇ, ನಾಂತ‌ರ್‌ ಬಹಿರ್ ಯದಿ ಹರಿಃ ಸ್ತಪಸಾ ತಥಾ ಕಿಮ್ – ‘ಭಗವಂತನನ್ನು ಒಳ ಹೊರಗುಗಳಲ್ಲಿ ಕಾಣಲಾರದ ವ್ಯಕ್ತಿಯು ತಪಸ್ಸು ಮಾಡುವುದರಿಂದ ಪ್ರಯೋಜನವೇನು?” ಆದ್ದರಿಂದ, ಭಗವತ್ ಸಾಕ್ಷಾತ್ಕಾರವೊಂದೇ ಮಾನವ ಜೀವಿಯ ವ್ಯವಹಾರವಾಗಿರುವುದು.

ಮೇಡಮ್ ಸಿಯಾಡ್: ನೀವು ಹೇಳುತ್ತಿರುವುದನ್ನು ನಾವು ಸಂಪೂರ್ಣವಾಗಿ ಒಪ್ಪುತ್ತೇವೆ.

ಫಾದರ್ ಫ್ರಾನ್‌ಸಾಡ್: ಶ್ರೀಮದ್‌ ಆಚಾರ್ಯರೇ, ಇದೇ ವೇಳೆಗೆ ಇಲ್ಲೊಂದು ವಿಪರ್ಯಾಸವಿದೆ. ಕೆಲ ಹೊತ್ತಿಗೆ ಮುಂಚೆ ನೀವು ‘ಮೊದಲು ನಾವು ಭಗವಂತನ ಕುರಿತು ತಿಳಿದುಕೊಳ್ಳಬೇಕು. ಅನಂತರ ನಮಗೆ ಅವನನ್ನು ಪ್ರಾರ್ಥಿಸುವುದು ಹೇಗೆಂದು ತಿಳಿಯುತ್ತದೆ” ಎಂದು ಹೇಳಿದ್ದೀರಿ, ಆದರೀಗ ನೀವು ಭಗವಂತನಿಗೆ ಶರಣಾಗತರಾದರೆ ಸಾಕು, ಅವನನ್ನು ಮೊದಲಿಗೇ ಅರಿತಿರ- ಬೇಕೆಂದೇನೂ ಇಲ್ಲ” ಎಂದು ಹೇಳುತ್ತಿರುವಂತೆ ತೋರುತ್ತದೆ.

ಶ್ರೀಲ ಪ್ರಭುಪಾದ: ನಾವು ಹೇಳುವುದು, “ಧರ್ಮವೆಂದರೆ ದೇವರನ್ನು ಪ್ರೀತಿಸುವುದು ಮತ್ತು ನೀವು ದೇವರನ್ನು ಅರಿಯದೆ ಆತನನ್ನು ಪ್ರೀತಿಸಲಾರಿರಿ” ಎಂದು, ಅದರರ್ಥ. ನೀವು ದೇವರನ್ನು ಅರಿತುಕೊಳ್ಳಬೇಕು. ಅನಂತರ ಮಾತ್ರವೇ ಅಲ್ಲಿ ನಿಜವಾದ ಧರ್ಮವಿರುವುದು.

ಫಾದರ್ ಫ್ರಾನ್‌ಸಾಡ್: ಹಾಗಾದರೆ, ನಮ್ಮಲ್ಲಿ ಪಾಂಡಿತ್ಯವಿಲ್ಲದೆಯೂ ಕೂಡ ನಮಗೆ ಭಗವಂತನು ತನ್ನನ್ನು ನೇರವಾಗಿ ತೋರ್ಪಡಿಸಿಕೊಳ್ಳುವನೇನು?

ಶ್ರೀಲ ಪ್ರಭುಪಾದ: ಹೌದು, ಅದು ಸರಿ. ನೀವೊಬ್ಬ ನೈಜ ಭಕ್ತರಾಗಿದ್ದರೆ, ಭಗವಂತನು ತನ್ನನ್ನು ತೋರ್ಪಡಿಸಿಕೊಳ್ಳುವನು. ಇದು ವೈದಿಕ ಸಾಹಿತ್ಯದಲ್ಲಿ ಹೇಳಲ್ಪಟ್ಟಿದೆ. ಅತಃ ಶ್ರೀಕೃಷ್ಣನಾಮಾದಿ ನ ಭವೇದ್ ಗ್ರಾಹ್ಯಮ್ ಇಂದ್ರಿಯೈಃ ‘ನೀವು ಲೌಕಿಕ ಇಂದ್ರಿಯಗಳ ಮೂಲಕ ಭಗವಂತನ ರೂಪ, ನಾಮ, ಗುಣ, ಲೀಲೆಗಳನ್ನು ಅರಿಯಲಾರಿರಿ.

ಇವುಗಳಿಂದ ಭಗವಂತನ ಸಾಕ್ಷಾತ್ಕಾರವಾಗದು. ಹಾಗಾದರೆ ನೀವು ಹೇಗೆ ಭಗವಂತನನ್ನು ಅರಿಯುವಿರಿ? ಸೇವೋನ್ಮುಖೇ ಹಿ ಜೀಹ್ವಾದೌ – ‘ನೀವು ಅವನಿಗೆ ನಿಮ್ಮ ಜಿಹ್ವೆ (ನಾಲಗೆ)ಯ ಮೂಲಕ ಸೇವೆ ಸಲ್ಲಿಸಿ. ಅನಂತರ ಹಂತ ಹಂತವಾಗಿ ಭಗವತ್ಸಾಕ್ಷಾತ್ಕಾರ ಒದಗಿ ಬರುವುದು.

ಈಗ, ನೀವು ನಾಲಗೆಯ ಮೂಲಕ ಎರಡು ಕೆಲಸಗಳನ್ನು ಮಾಡಬಲ್ಲಿರಿ. ಮಾತನಾಡುವುದು ಮತ್ತು ತಿನ್ನುವುದು. ಅದೇ ನೀವು ನಿಮ್ಮ ನಾಲಗೆಯನ್ನು ಭಗವಂತನ ಸ್ತುತಿಯಲ್ಲಿ ನಿರತಗೊಳಿಸಿದರೆ, ಭಗವಂತನ ಪ್ರಸಾದವನ್ನು ಸೇವಿಸತೊಡಗಿದರೆ, ಆಗ ನಿಮಗೆ ಭಗವತ್ಸಾಕ್ಷಾತ್ಕಾರವಾಗುವುದು.

ಆದ್ದರಿಂದ ಈ ಅಮೆರಿಕ ಹಾಗೂ ಯೂರೋಪುಗಳ ಯುವ ಜನತೆಗೆ “ನಾಲಗೆಯನ್ನು ಕೃಷ್ಣನಿಗಾಗಿ ಬಳಸಿ, ಹರೇಕೃಷ್ಣ ಮಂತ್ರ ಜಪಿಸಿ. ಕೃಷ್ಣ ಪ್ರಸಾದವನ್ನು ಸೇವಿಸಿ” ಎಂದು ಬೋಧಿಸಲಾಗುತ್ತಿದೆ.

ಮತ್ತು ಇದರ ಫಲಿತಾಂಶವಾಗಿ, ಇವರೆಲ್ಲ ಇನ್ನೂ ಚಿಕ್ಕವರಾಗಿದ್ದರೂ, ಅವರು ಕೃಷ್ಣನನ್ನು ಅರಿತಿದ್ದಾರೆ. ಇತರರಿಗಿಂತ ಹೆಚ್ಚು ಪ್ರಗತಿಶೀಲರಾಗಿದ್ದಾರೆ. ಅವರು ಅನೈತಿಕ ಲೈಂಗಿಕತೆ, ಮಾಂಸಾಹಾರ, ಮಾದಕ ಸೇವನೆ, ಜೂಜು ಇತ್ಯಾದಿ ಲೌಕಿಕ ಸಂಗತಿಗಳನ್ನು ಮರೆತು ಬಿಟ್ಟಿದ್ದಾರೆ. ಸರಳವಾಗಿ ತಮ್ಮನ್ನು ತಾವು ಕೃಷ್ಣನ ಸೇವೆಗೆ ಅರ್ಪಿಸಿಕೊಂಡಿದ್ದಾರೆ.

ಅವರು ತಮ್ಮ ನಾಲಗೆಯನ್ನು ಹರೇಕೃಷ್ಣ ಮಹಾಮಂತ್ರ ಜಪಕ್ಕೆ ಮೀಸಲಿಟ್ಟಿರುವುದರಿಂದ, ಅವರು ಮಾಂಸಾಹಾರ, ಮದ್ಯಸೇವನೆಯೇ ಮೊದಲಾದ ಎಲ್ಲ ಬಗೆಯ ಮೂರ್ಖ ಕಾರ್ಯಗಳನ್ನು ಬಿಟ್ಟುಬಿಟ್ಟಿದ್ದಾರೆ.

ಅಮೆರಿಕ ಸರ್ಕಾರವು ಅವರ ಎಲ್‌ಎಸ್‌ ಡಿ ವ್ಯಸನವನ್ನು ನಿಲ್ಲಿಸಲು ಮಿಲಿಯಾಂತರ ಡಾಲರ್ ಗಳನ್ನು ವೆಚ್ಚ ಮಾಡಿತು. ಇದರಿಂದ ಒಬ್ಬನ ಚಟವನ್ನು ಕೂಡ ಬಿಡಿಸಲಾಗಲಿಲ್ಲ. ಆದರೆ ಯಾವಾಗ ಈ ಯುವ ಜನತೆ ಕೃಷ್ಣಪ್ರಜ್ಞಾವಂತರಾದರೂ, ಆ ಕೂಡಲೇ ಈ ಎಲ್ಲ ವ್ಯಸನಗಳನ್ನು ತ್ಯಜಿಸಿದರು.

ಮೇಡಮ್ ಸಿಯಾಡ್: ನಿಮ್ಮ ಯಶಸ್ಸನ್ನು ಕಂಡು ನಮಗೆಲ್ಲ ಸಂತೋಷವಾಗಿದೆ.

ಶ್ರೀಲ ಪ್ರಭುಪಾದ: ಧನ್ಯವಾದ. ನಾವೆಲ್ಲರೂ ಒಗ್ಗಟ್ಟಿನಿಂದ ಭಗವಂತನ ಸಂಕೀರ್ತನೆಯ ಈ ಚಳವಳಿಯನ್ನು ಮುಂದಕ್ಕೆ ತರಬೇಕು. ”ನೀವು ಕೃಷ್ಣನಾಮವನ್ನು ಒಪ್ಪಿಕೊಳ್ಳಬೇಕು” ಎಂದು ನಾನು ಹೇಳುವುದಿಲ್ಲ. ನಿಮ್ಮ ಬಳಿ ಬೇರೆ ಯಾವುದಾದರೂ ಹೆಸರಿದ್ದರೆ, ನೀವು ಅದನ್ನೇ ಜಪಿಸಬಹುದು.

ಫಾದರ್ ಫ್ರಾನ್‌ಸಾಡ್: ಹಾಗಾದರೆ, ನೀವು ಯಾವಾಗ ಭಗವಂತನನ್ನು ಸ್ತುತಿಸುತ್ತೀರೋ, ಆಗ ನೀವು ನಮ್ಮನ್ನು ನೆನೆಯುವಿರೆಂದು ತಿಳಿಯುತ್ತೇವೆ – ಮತ್ತು ನಾವು ಭಗವಂತನನ್ನು ಸ್ತುತಿಸುವಾಗ ನಿಮ್ಮನ್ನು ನೆನೆಯುವೆವು.

ಶ್ರೀಲ ಪ್ರಭುಪಾದ: ಬಹಳ ಧನ್ಯವಾದ.

ಫಾದರ್ ಕ್ಯಾನಿವೆಜ್: ಶ್ರೀಮದ್‌ ಆಚಾರ್ಯರೇ, ನಿನ್ನೆ ಗದ್ದಲ ಮಾಡುತ್ತಿದ್ದ ಯುವಕರಿಗೆ ನಿಮ್ಮ ಉಪನ್ಯಾಸವನ್ನು ಒಪ್ಪಿಕೊಳ್ಳಲು ಕಠಿಣವಾಗಿತ್ತೆಂದು ತೋರುತ್ತದೆ.

ಶ್ರೀಲ ಪ್ರಭುಪಾದ: ಯುವಜನತೆ ಕ್ರಮೇಣ ಪತಿತರಾಗುತ್ತಿರುವುದೇ ಇದಕ್ಕೆ ಕಾರಣ. ಅಧಿಕೃತತೆಯನ್ನು ಅವರು ಒಪ್ಪಲಾರರು. ಶಿಷ್ಯ: ಹೌದು ಶ್ರೀಲ ಪ್ರಭುಪಾದರೇ, ನೀವು ಅಧಿಕಾರವಾಣಿಯಿಂದ ಮಾತಾಡುತ್ತಿದ್ದುದನ್ನು ಕಂಡ ಅವರು ಅದನ್ನು ನಿರಾಕರಿಸತೊಡಗಿದರು. ಪ್ರತಿಕ್ರಿಯಿಸತೊಡಗಿದರು.

ಶ್ರೀಲ ಪ್ರಭುಪಾದ: ಅದು ಅವರ ಪತನದ ಕಾರಣದಿಂದಾಗಿ ಅವರು ಯಾವುದೇ ಅಧಿಕೃತತೆಯನ್ನು ಒಪ್ಪಲಾರರು. ಅಧಿಕೃತವಾದ್ದನ್ನು ಒಪ್ಪಿಕೊಳ್ಳದವರು ಜ್ಞಾನ ಪಡೆಯುವಲ್ಲಿ ಪ್ರಗತಿ ಹೊಂದಲಾರರು.

ಫಾದರ್ ಕ್ಯಾನಿವೆಜ್: ಖಂಡಿತ

ಶ್ರೀಲ ಪ್ರಭುಪಾದ: ಆದರೆ ಮತ್ತೊಂದು ವಿಷಯ ನಾನು ಕಂಡಂತೆ, ಅಧಿಕೃತತೆಯ ಬಗ್ಗೆ ಅವಿಧೇಯತೆ ಅವರ ತಂದೆಯರಿಂದ ಆರಂಭವಾಗಿದ್ದಾಗಿದೆ.

ಫಾದರ್ ಕ್ಯಾನಿವೆಜ್: ಯಾರಿಂದ?

ಶ್ರೀಲ ಪ್ರಭುಪಾದ: ಅವರ ತಂದೆಯರಿಂದ. ಹೌದು ಬೈಬಲ್‌ ನಲ್ಲಿ “ನೀನು ಕೊಲ್ಲಕೂಡದು” ಎಂದು ಹೇಳಿದೆ. ಆದರೆ ಈ ತಂದೆಯರು ಕೊಲ್ಲುವ ಕಾಯಕವನ್ನೇ ಮಾಡಿಕೊಂಡು ಬಂದಿದ್ದಾರೆ. ಸಹಜವಾಗಿ ಅವರ ಮುಂದಿನ ತಲೆಮಾರು ಪತಿತಗೊಂಡಿದೆ.

ಫಾದರ್ ಕ್ಯಾನಿವೆಜ್: ನಿನ್ನೆ ರಾತ್ರಿ ಸಭೆಯ ಆನಂತರ ಬಹಳ ಜನ ಉಳಿದುಕೊಂಡಿದ್ದರೇನು?

ಶಿಷ್ಯ: ಹೌದು. ಅವರು ಮಧ್ಯರಾತ್ರಿಯವರೆಗೂ ಇದ್ದರು. ನಿನ್ನೆಯ ಒಟ್ಟು ಹಾಜರಾತಿ ಸರಿಸುಮಾರು ಎರಡು ಸಾವಿರದಷ್ಟಿತ್ತು. ಹಾಗೂ ಕನಿಷ್ಠ ಒಂದು ಸಾವಿರ ಮಂದಿ ರಾತ್ರಿ ಹನ್ನೆರಡರವರೆಗೂ ಇದ್ದರು.

ಶ್ರೀಲ ಪ್ರಭುಪಾದ: ಹನ್ನೆರಡರವರೆಗೆ?

ಶಿಷ್ಯ: ಹೌದು ಶ್ರೀಲ ಪ್ರಭುಪಾದ. ನಿರ್ವಾಹಕನು ಅವರನ್ನು ಮನೆಗೆ ಹೋಗಲು ಹೇಳುವಂತೆ ನಮ್ಮನ್ನು ಅನುನಯಿಸುತ್ತಿದ್ದ. ಅವನಿಗೆ ತಾನು ಮನೆಗೆ ಹೋಗಬೇಕಿತ್ತು.

ಫಾದರ್ ಕ್ಯಾನಿವೆಜ್: ಅದು ಬಹಳ ಒಳ್ಳೆಯದು. ನಿಮ್ಮ ಅನುಯಾಯಿಗಳೊಂದಿಗೆ ಪ್ರಶ್ನಿಸಿ, ಚರ್ಚಿಸಲು, ಮಾಹಿತಿ ಪಡೆಯಲು ಅಷ್ಟು ಜನ ಉಳಿದುಕೊಂಡಿದ್ದು ಸಂತಸದ ಸಂಗತಿ.

ಶ್ರೀಲ ಪ್ರಭುಪಾದ: ಹೌದು, ಯಾವುದೇ ಒಬ್ಬ ಅರ್ಹ ಮನುಷ್ಯನಿಗೆ ಈ ವಿಷಯವು ಆಸಕ್ತಿಕರವಾಗಿ ತೋರುತ್ತದೆ. ಚೈತನ್ಯ ಚರಿತಾಮೃತದಲ್ಲಿ ಶ್ರೀಕೃಷ್ಣ ಚೈತನ್ಯ ದಯಾಕರಹ ವಿಚಾರ – ‘ಭಗವಾನ್ ಶ್ರೀ ಚೈತನ್ಯ ಮಹಾಪ್ರಭುಗಳ ಕರುಣೆಯನ್ನು ಮಥನ ಮಾಡಿ, ಅನಂತರವಷ್ಟೆ ನಿಮ್ಮ ತೀರ್ಪನ್ನು ನೀಡಿ’ ಎಂದಿದೆ.

ಸುಮ್ಮನೆ ಕುರುಡಾಗಿ ಅದನ್ನು ಸ್ವೀಕರಿಸುವಂತೆ ಎಂದಿಗೂ ಹೇಳಿಲ್ಲ. ಕರಹ ವಿಚಾರ – ‘ಎಲ್ಲ ಕಾರಣ ಹಾಗೂ ವಾದಗಳನ್ನು ಮಥನ ಮಾಡಿ, ಮತ್ತು ವಿಚಾರ ಕರಿಲೇ ಚಿತ್ತೇ ಪಾಬೇ ಚಮತ್ಕಾರ – ‘ವಿಚಾರ ನಡೆಸಿದ ಪರಿಣಾಮವಾಗಿ ನಿಮಗೆ ಚಮತ್ಕಾರ (ಫಲಿತಾಂಶ) ಗೋಚರಿಸುವುದು.’

ಶಿಷ್ಯ: ಶಾಸ್ತ್ರವನ್ನು ಅರ್ಥೈಸಿಕೊಳ್ಳಬೇಕೆಂದರೆ, ಅದು ಬೈಬಲ್ ಇರಲಿ ಅಥವಾ ಭಗವದ್ಗೀತೆ, ನಾವು ತರ್ಕ ವಿಚಾರದ ಮೊರೆ ಹೋಗಬೇಕೆ?

ಶ್ರೀಲ ಪ್ರಭುಪಾದ: ಹೌದು. ಉದಾಹರಣೆಗೆ, ಬೈಬಲ್ ನಲ್ಲಿ ”ಆರಂಭದಲ್ಲಿ ಶಬ್ದವಿತ್ತು” ಎಂದು ಹೇಳಿದೆ. ಆದ್ದರಿಂದ ಆರಂಭದಲ್ಲಿ ಕೇವಲ ಭಗವಂತನ ಶಬ್ದವಿತ್ತು ಎಂದು ಅದರ ಅರ್ಥ, ಈ ಶಬ್ದವು ಈ ಲೌಕಿಕ ಸೃಷ್ಟಿಯ ಶಬ್ದವಲ್ಲ ಎಂದು.

ಶಿಷ್ಯ: ಶ್ರೀಲ ಪ್ರಭುಪಾದ, ಇಂದಿನ ಬಹಳಷ್ಟು ಸ್ವಘೋಷಿತ ಆಧ್ಯಾತ್ಮಿಕ ಆಚಾರ್ಯರು ಹೇಳುತ್ತಾರೆ, ”ನೀವು ಕೃಷ್ಣ ಅಥವಾ ಯಾವುದೇ ದೇವರ ಹೆಸರನ್ನು ಹೇಳಿ ಉಪಯೋಗವಿಲ್ಲ, ಏಕೆಂದರೆ ಶಬ್ದ ಕೇವಲ ಲೌಕಿಕ ಶಬ್ದವಷ್ಟೆ’ ಎನ್ನುತ್ತಾರೆ.

ಶ್ರೀಲ ಪ್ರಭುಪಾದ: ಅದು ಹಾಗೇ. ಈ ಮೂರ್ಖರಿಗೆ ಶಬ್ದ ಎಂದರೆ ಏನೆಂದು ಗೊತ್ತಿಲ್ಲ. ಸೃಷ್ಟಿಗೆ ಮುನ್ನವೂ ಈ ಶಬ್ದವು ಭಗವಂತನ ದಿವ್ಯನಾಮವು ಅಸ್ತಿತ್ವದಲ್ಲಿತ್ತೆಂದು ಅವರಿಗೆ ತಿಳಿದಿಲ್ಲ.

ಮೇಡಮ್ ದೇವಿ: (ಹೊಸದಾಗಿ ಬಂದವರು) ಶ್ರೀಮದ್‌ ಆಚಾರ್ಯರೇ, ಮುಂದೆಂದಾದರೂ ಎಲ್ಲ ಧರ್ಮಗಳೂ ಒಟ್ಟಾಗಿ ಒಂದೇ ಗುಂಪಾಗುವುದು ಎಂದು ನಿಮಗನಿಸುತ್ತದೆಯೆ?

ಶ್ರೀಲ ಪ್ರಭುಪಾದ: ಇಲ್ಲಿ ಎಲ್ಲ ಧರ್ಮಗಳು’ ಎಂಬ ಮಾತೇ ಇಲ್ಲ. ಇರುವುದು ಒಂದೇ ಧರ್ಮ. ಯಾರು ಕವಲಲ್ಲಿ ನಡೆಯುತ್ತಾರೋ ಅವರು ಮತ್ತೊಂದು ಧರ್ಮ ಸೃಷ್ಟಿಸಿಕೊಳ್ಳುತ್ತಾರೆ. ಧರ್ಮವೆಂದರೆ, ಭಗವಂತನಿದ್ದಾನೆ ಎಂದು ಅರಿತು, ಅವನಿಗೆ ನಾವೆಲ್ಲರೂ ವಿಧೇಯರಾಗಿರಬೇಕೆಂದು ತಿಳಿಯುವುದು. ಅದು ಧರ್ಮ.

ಮೇಡಮ್ ದೇವಿ: ಹಾಗಾದರೆ ಯಾರಾದರೂ ವಿಶೇಷ ಪಥದಲ್ಲಿ ಸಾಗುವ ಅಗತ್ಯವಿಲ್ಲ ಎಂದಾಯ್ತು?

ಶ್ರೀಲ ಪ್ರಭುಪಾದ: ಇಲ್ಲ ‘ವಿಶೇಷ ಪಥ’ ಎಂಬುದೇ ಇಲ್ಲ. ಇರುವುದೊಂದೇ ದಾರಿ: ಭಗವಂತನಿರುವನು, ಭಗವಂತನು ಶ್ರೇಷ್ಠನು, ಮತ್ತು ನಾವೆಲ್ಲ ಭಗವಂತನ ಸೇವಕರು. ಅಷ್ಟೇ.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi