ಹಿಮವದ್ ಗೋಪಾಲಸ್ವಾಮಿ ಬೆಟ್ಟ

ಕರ್ನಾಟಕದ ವೃಂದಾವನ

ಮಕ್ಕಳೇ,

ಕೃಷ್ಣನ ಬಗೆಗೆ ಅನೇಕ ರೋಚಕಕಾರಿ ಕಥೆಗಳನ್ನು ಕೇಳುತ್ತಿದ್ದೀರಲ್ಲ. ಇಂದು ನೀವು ತಿಳಿಯುತ್ತಿರುವ ಸ್ಥಳದ ಕಥೆ ನಿಜಕ್ಕೂ ಕುತೂಹಲಕಾರಿಯಾಗಿದೆ. ಹಿಮವದ್ ಗೋಪಾಲಸ್ವಾಮಿಯ ದೇಗುಲದ ಗರ್ಭಗುಡಿಯಲ್ಲಿ ಭಗವಂತನ ಮೇಲೆ ಮಂಜು ಬೀಳುವುದೇ ಈ ಸ್ಥಳದ ವಿಶಿಷ್ಟತೆಯಾಗಿದೆ.

ಇಲ್ಲಿ ಒಂದೇ ಕಲ್ಲಿನ ಮಧ್ಯದಲ್ಲಿ ಕೃಷ್ಣ ಒಂದು ಪಕ್ಕದಲ್ಲಿ ಗೋಪ ಗೋಪಿಯರು, ಹಸುಕರುಗಳು, ಮತ್ತೊಂದು ಪಕ್ಕದಲ್ಲಿ ತಂದೆ ತಾಯಿಯರು, ಸ್ನೇಹಿತರಾದ ಸುದಾಮ, ಮಕರಂದ ಮತ್ತಿತರರು, ಹೊಂಗೆ ಮರದ ನೆರಳಿನಲ್ಲಿ ನಿಂತಿರುವಂತೆ ಕೆತ್ತಲಾಗಿದೆ. ಅಕ್ಕಪಕ್ಕಗಳಲ್ಲಿ ರುಕ್ಮಿಣಿ ಸತ್ಯಭಾಮೆಯರ ಪ್ರತ್ಯೇಕ ವಿಗ್ರಹಗಳಿವೆ.

ಇನ್ನು ಈ ವಿಗ್ರಹವನ್ನು ಇಲ್ಲಿ ಯಾರು ಪ್ರತಿಷ್ಠಾಪಿಸಿದರು, ಅದರ ಹಿಂದಿನ ಕಥೆಯೇನು ಎಂಬುದನ್ನು ತಿಳಿಯೋಣ.

ಅತ್ಯಂತ ಹಿಂದೆ, ಶಿವಪಾರ್ವತಿಯರ ವಿವಾಹವು, ನಿಶ್ಚಯವಾದಾಗ, ಬ್ರಹ್ಮ ನಾರದರು, ಸಕಲ ದೇವತಾಗಣಗಳು, ತಾವೂ ಅದರಲ್ಲಿ ಭಾಗವಹಿಸಬೇಕೆಂದು ಆಶಿಸುತ್ತಾರೆ.

ಆದರೆ ತಮ್ಮೆಲ್ಲರ ಭಾರಕ್ಕೆ ಭೂಮಿಯು ಸಮತೋಲನ ಕಳೆದುಕೊಳ್ಳುವುದೆಂಬ ಆತಂಕದಿಂದ ಅಗಸ್ತ್ಯಮುನಿಗಳನ್ನು ಪರಿಹಾರಕ್ಕಾಗಿ ಬೇಡುತ್ತಾರೆ. (ಅಗಸ್ತ್ಯರು ಅನೇಕ ಯೋಗಸಿದ್ಧಿಗಳನ್ನು ಪಡೆದು, ಅನಂತರ ಕೃಷ್ಣಭಕ್ತಿಗೆ ಹಾತೊರೆದವರು) ಆಗ ಅಗಸ್ತ್ಯರು ತಾವು ದಕ್ಷಿಣ ಭಾರತಕ್ಕೆ ಹೋಗಿ, ಅಲ್ಲೇ ನೆಲೆ ನಿಂತು, ಭೂಮಿ ಅಸಮತೋಲನವಾಗದಂತೆ ನೋಡಿಕೊಳ್ಳುವುದಾಗಿ ಭರವಸೆ ನೀಡುತ್ತಾರೆ.

ಆ ಸಮಯ ಹತ್ತಿರ ಬಂದಾಗ, ಅಗಸ್ತ್ಯರು ಉತ್ತರ ಭಾರತದ ಎಲ್ಲ ಪುಣ್ಯತೀರ್ಥಗಳನ್ನು ತರುತ್ತಾ, ಭಗವಂತನಾದ ಕೃಷ್ಣನನ್ನೂ ತಮ್ಮೊಡನೆ ಬರುವಂತೆ ಬೇಡುತ್ತಾರೆ. ದಕ್ಷಿಣ ಭಾರತದ ಸಹ್ಯಾದ್ರಿ ಸಾಲಿನ ಆಗ್ನೇಯದ ದಿಕ್ಕಿನಲ್ಲಿರುವ ಕಮಲಾಚಲದಲ್ಲಿ ನೆಲೆನಿಂತು, ಕೃಷ್ಣನಿಗಾಗಿ ದೀರ್ಘಕಾಲದ ತಪಸ್ಸನ್ನು ಆಚರಿಸುತ್ತಾರೆ. ಅವರ ತಪಸ್ಸಿಗೊಲಿದ ಕೃಷ್ಣನು, ತಾನು ಅಲ್ಲಿ ನೆಲೆಸಲು ಮೂರು ಷರತ್ತುಗಳನ್ನು ಹಾಕುತ್ತಾನೆ.

ಒಂದು, ಆ ಸ್ಥಳವು ಸದಾ ಹಿಮದಿಂದ ಕೂಡಿರಬೇಕು. ಎರಡು, ವ್ರಜಧಾಮದ ಎಲ್ಲ ನಿವಾಸಿಗಳೊಡನೆ ವಾಸಿಸುವಂತಿರಬೇಕು. ಹಾಗೂ ಮೂರನೆಯದು, ಸಪ್ತ ಋಷಿಗಳಿಂದ ಪೂಜಿಸಲ್ಪಡಬೇಕು.

ಈ ಎಲ್ಲ ಷರತ್ತುಗಳಿಗೆ ಒಪ್ಪಿದ ಅಗಸ್ತ್ಯರು ದಕ್ಷಿಣ ಗೋವರ್ಧನವೆಂದು ಕರೆಯುವ ಈ ಕಮಲಾಚಲದಲ್ಲಿ ಶ್ರೀಕೃಷ್ಣನನ್ನು ಅವನ ಪರಿವಾರಾದಿಯಾಗಿ ಪ್ರತಿಷ್ಠಾಪಿಸುತ್ತಾರೆ.

ಇಲ್ಲಿನ ಎಂಟೂ ಬೆಟ್ಟಗಳು ಅರಣ್ಯದಿಂದಾವೃತವಾಗಿವೆ. ಈ ಎಂಟು ಬೆಟ್ಟಗಳು, ಕಮಲದ ಅಷ್ಟದಳಗಳಂತೆ ವಿನ್ಯಾಸವಾಗಿವೆ. ಹಾಗೂ ಇಲ್ಲಿ ಪವಿತ್ರವಾದ ಅನೇಕ ತೀರ್ಥಗಳಿವೆ. ಅವುಗಳಲ್ಲಿ ಒಂದಾದ ʼಹಂಸತೀರ್ಥ’ದಲ್ಲಿ ಕಾಗೆಯೊಂದು ನೀರು ಕುಡಿದು, ಹಂಸಪಕ್ಷಿಯಾಗಿ ಮಾರ್ಪಟ್ಟು ಹಾರಿಹೋಯಿತೆಂದೂ, ಅಂದಿನಿಂದ ಇಂದಿನವರೆಗೆ ಆ ಪ್ರದೇಶದಲ್ಲಿ ಒಂದು ಕಾಗೆಯೂ ಕಾಣಸಿಗದು ಎಂಬುದು ಆಶ್ಚರ್ಯಕರವಾಗಿದೆ.

ಇನ್ನುಳಿದವು ಪದ್ಮತೀರ್ಥ, ಶಂಖತೀರ್ಥ, ಚಕ್ರತೀರ್ಥ, ಗದಾತೀರ್ಥ, ಶಾರ್ಙ್ಗತೀರ್ಥ, ವನಮಾಲಿಕ ತೀರ್ಥ, ತೊಟ್ಲು ತೀರ್ಥಗಳಂತೆ ಒಟ್ಟು ಎಪ್ಪತ್ತೇಳು ತೀರ್ಥಗಳಿವೆ. ಮಕ್ಕಳಿಲ್ಲದವರು, ಅಲ್ಲಿನ ಪುರೋಹಿತರ ನಿರ್ದೇಶನದಂತೆ ತೊಟ್ಲು ತೀರ್ಥದಲ್ಲಿ ಪೂಜಾದಿಗಳನ್ನು ಮಾಡಿಸಿದರೆ, ಮಕ್ಕಳಾಗುವುದೆಂಬ ನಂಬಿಕೆಯಿದೆ.

ಹಿಂದೆ ಈ ಪ್ರಾಂತ್ಯವನ್ನು ಆಳುತ್ತಿದ್ದ ಪೆರುಮಾಳ್ ಢಣಾಯಕನೆಂಬ ದುಷ್ಟ ರಾಜನೊಬ್ಬನು, ಇಲ್ಲಿ ಕೃಷ್ಣನ ಪೂಜೆಯಿಂದ ಸಂತಾನ ಪಡೆದು, ಭಕ್ತನಾಗಿ ಪರಿವರ್ತಿತನಾದನು. ಅವನೇ ಕ್ರಿ.ಶ. 1315ರಲ್ಲಿ ಈ ದೇಗುಲವನ್ನು ಅಭಿವೃದ್ಧಿಪಡಿಸಿದನು. ಅಂದಿನಿಂದ ಇಲ್ಲಿನ ಕೃಷ್ಣನನ್ನು ಸಂತಾನ ಗೋಪಾಲಸ್ವಾಮಿ ಎಂದೂ ಕರೆಯುತ್ತಾರೆ.

ಮಕ್ಕಳೇ, ಬಂಡೀಪುರ ಅರಣ್ಯ ಪ್ರದೇಶಕ್ಕೆ, ಮೈಸೂರಿನ ಮೂಲಕ ಸಾಗುವ ದಾರಿಯಲ್ಲಿ ಈ ಬೆಟ್ಟ ಸಿಗುತ್ತದೆ. ದೂರ ದೂರದ ಬೆಟ್ಟಗಳಲ್ಲಿ ಆನೆಗಳ ಗುಂಪನ್ನೂ ನೀವು ಕಾಣಬಹುದು.

ಇಲ್ಲಿ ಬೆಳಗ್ಗೆ ಸುಮಾರು ಹನ್ನೊಂದು ಗಂಟೆಯ ಸಮಯದಲ್ಲಿ ಬೆಟ್ಟದ ಕೆಳಭಾಗದಲ್ಲಿದ್ದರೆ ಗುಂಪು ಗುಂಪಾಗಿ ದನಕರುಗಳು, ಕುರಿಗಳು ಹುಲ್ಲುಗಾವಲಿಗೆ ಹೋಗುವ ದೃಶ್ಯಗಳನ್ನು ನೋಡಬಹುದು. ಈ ಪ್ರದೇಶವು ಅರಣ್ಯವ್ಯಾಪ್ತಿಯಲ್ಲಿರುವುದರಿಂದ ಸಂಜೆಯ ವೇಳೆ ದೇಗುಲದ ಬಾಗಿಲು ತೆರೆಯುವುದಿಲ್ಲ. ಮಧ್ಯಾಹ್ನದವರೆಗೆ ಮಾತ್ರ ದರ್ಶನಕ್ಕೆ ಅವಕಾಶ.

ಒಟ್ಟಿನಲ್ಲಿ ಇಲ್ಲಿನ ಅರಣ್ಯ ಸಂಪತ್ತು, ಸುಂದರ ಪರಿಸರವು ಮೂಲ ವೃಂದಾವನವನ್ನು ನೆನಪಿಸುತ್ತದೆ.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi