ಲೌಕಿಕ ಶಿಕ್ಷಣವು ನಿಮ್ಮನ್ನು ಮತ್ತೂ ದೊಡ್ಡ ಮೂರ್ಖರನ್ನಾಗಿಸುವುದು!

ಶ್ರೀ ಶ್ರೀಮದ್‌ ಎ.ಸಿ.ಭಕ್ತಿವೇದಾಂತ ಸ್ವಾಮಿ ಪ್ರಭುಪಾದರು ಹಾಗೂ ಶಿಷ್ಯರ ನಡುವಿನ ಸಂವಾದ

ಸ್ಥಳ : ದಕ್ಷಿಣ ಆಫ್ರಿಕಾದ ಜೋಹಾನ್ಸ್‌ ಬರ್ಗ್; ದಿನಾಂಕ: 18 ಅಕ್ಟೋಬರ್, 1975

ಶ್ರೀಲ ಪ್ರಭುಪಾದ: ಮಾಂಟ್ರಿಯಲ್ ನಲ್ಲಿ ಬ೦ಗಾಳಿ ಮಹನೀಯ‌ರೊಬ್ಬ‌ರು ವಿಚಾರಿಸಿದರು. ‘ಸ್ವಾಮೀಜಿ, ನೀವು ‘ಮೂರ್ಖರು ಮತ್ತು ಹುಚ್ಚರು’ ಎನ್ನುವ ಅತ್ಯಂತ ಗಟ್ಟಿಪದಗಳನ್ನು ಬಳಸುತ್ತೀರಲ್ಲ. ಅದನ್ನು ಬೇರೆ ಬಗೆಯಲ್ಲಿ ವಿವರಿಸಲು ಸಾಧ್ಯವಿಲ್ಲವೆ?’ ನಾನು ಉತ್ತರಿಸಿದೆ, ‘ಇಲ್ಲ ಅವು ಮಾತ್ರವೇ ಸೂಕ್ತ ಪದಗಳು – ನೀವೆಲ್ಲರೂ ಮೂರ್ಖರು ಮತ್ತು ಹುಚ್ಚರು ಎಂಬುದು” (ನಗುವರು)

ಶಿಷ್ಯ: ಶ್ರೀಲ ಪ್ರಭುಪಾದ, ಒಮ್ಮೆ ನೀವು ಹೇಳಿದ್ದೀರಿ, ”ಈ ಲೌಕಿಕ ಶರೀರದಲ್ಲಿರುವ ಯಾರೇ ಆದರೂ ಅವನು ಮೂರ್ಖ’ ಎಂದು.

ಶ್ರೀಲ ಪ್ರಭುಪಾದ: ಒಬ್ಬ ಮೂರ್ಖ, ಅಷ್ಟೇ. ಈ ಮೂರ್ಖರು ತಮ್ಮಿಂದ ಸಾಧ್ಯವಿಲ್ಲವೆಂದು ತಿಳಿದೂ ಕೂಡ ತಮ್ಮ ದೇಹವನ್ನು ಶಾಶ್ವತಗೊಳಿಸಿಕೊಳ್ಳಲು ಬಯಸುತ್ತಾರೆ, ಆದರೆ ನಿಮಗೆ ಅದನ್ನು ಕೆಲವು ದಶಕಗಳಿಗಿಂತ ಹೆಚ್ಚು ಕಾಲ ಇರಿಸಿಕೊಳ್ಳಲು ಅವಕಾಶ ನೀಡಲಾಗಿಲ್ಲ.

ಮುಂದೆ ಕೂಡ ನೀಡಲಾಗುವುದಿಲ್ಲ. ಆದರೂ ಪುನಃ ಪುನಶ್ಚರ್ವಿತಾ ಚರ್ವಣಾನಾಮ್ (ಮತ್ತೆ ಮತ್ತೆ ನೀವು ಈಗಾಗಲೇ ಅಗಿದಿರುವುದನ್ನೇ ಅಗಿಯುತ್ತಿದ್ದೀರಿ), ಪುನರಾವರ್ತಿತವಾಗಿ ಈ ಮೂರ್ಖರು ಅಸಾಧ್ಯವಾದುದನ್ನೇ ಪ್ರಯತ್ನಿಸುತ್ತಿದ್ದಾರೆ. ಯಾವುದು ಅಸಾಧ್ಯವೋ ಯಾವುದಕ್ಕೆ ಅವಕಾಶವಿಲ್ಲವೋ, ಅದಕ್ಕಾಗಿಯೇ ಅವರು ಯತ್ನಿಸುತ್ತಿದ್ದಾರೆ.

ಶಿಷ್ಯ: ಶರೀರವನ್ನು ಶಾಶ್ವತಗೊಳಿಸುವ ತಮ್ಮ ಪ್ರಯತ್ನಕ್ಕೆ ಸೋಲಾಗುವುದನ್ನು ಬಹುಶಃ ಈ ಜನರು ಒಪ್ಪಿಕೊಳ್ಳಲು ಸಿದ್ಧರಿಲ್ಲ.

ಶ್ರೀಲ ಪ್ರಭುಪಾದ: ಹೌದು, ಖಂಡಿತ. ಅವರು ನೋಡುತ್ತಿರುವರು, ಅವರು ಅನುಭವಿಸುತ್ತಿರುವರು. ತಮ್ಮ ಪ್ರಯತ್ನ ಮಣ್ಣಾಗುತ್ತಿರುವುದನ್ನು ಅರಿಯುತ್ತಿರುವರು. ಯಾವುದೇ ಮನುಷ್ಯ ಶಾಶ್ವತನಾಗಿರುವ ಐತಿಹ್ಯವೇ ಇಲ್ಲ. ಹಿರಣ್ಯಕಶಿಪುವಿನಂತಹ ಮಹಾದೈತ್ಯ ಕೂಡ ಶಾಶ್ವತನಿರಲು ಸಾಧ್ಯವಾಗಲಿಲ್ಲ. ಇನ್ನು ಸಾಧಾರಣ ಅಸುರರ ಮಾತೇನಿದೆ? ಅವರನ್ನು ಕೊಲ್ಲಲು ಒಂದು ಒದೆತ ಸಾಕು.

ಶಿಷ್ಯ: ಒಳ್ಳೆಯದು, ಶ್ರೀಲ ಪ್ರಭುಪಾದ, ಅಮೆರಿಕನ್ನರು ಮತ್ತು ಯುರೋಪಿಯನ್ನರು ಅದೇಕೆ ಮೂರ್ಖ ಚಿಂತನೆಗಳ, ಮೂರ್ಖ ಸಂಸ್ಕೃತಿಯಿಂದ ಆವರಿಸಲ್ಪಟ್ಟಿರುವರು?

ಶ್ರೀಲ ಪ್ರಭುಪಾದ: ಏಕೆಂದರೆ ಅವರು ರಾಕ್ಷಸರು, ಮಾಂಸ ಭಕ್ಷಕರು, ಅವರು ಮಾಂಸಾಹಾರ ಮಾಡುತ್ತಾರೆ ಮತ್ತು ಮದ್ಯಪಾನ ಮಾಡುತ್ತಾರೆ ಹಾಗೂ ಅನೈತಿಕ ಸಂಭೋಗ ನಡೆಸುತ್ತಾರೆ. ರಾಕ್ಷಸ ನಾಗರಿಕತೆ. ಹಿರಣ್ಯಕಶಿಪು ನಾಗರಿಕತೆ. ಹಿರಣ್ಯ ಎಂದರೆ ‘ಬಂಗಾರ’ ಹಾಗೂ ಕಶಿಪು ಎಂದರೆ ‘ಸುಪ್ಪತ್ತಿಗೆ.ʼ ಇವನ್ನೆಲ್ಲ ಹೊಂದಿಸಿಕೊಳ್ಳುವ ಬಗೆಯನ್ನು ಕಲಿಯುವುದಷ್ಟೆ – ಇದು ರಾಕ್ಷಸ ನಾಗರಿಕತೆ.

ಈ ಜನರು ಸುಮ್ಮನೆ ಸುಪ್ಪತ್ತಿಗೆ, ಚಿನ್ನ ಸಂಭೋಗ ಹಾಗೂ ಹಣದ ಶೋಧನೆಯಲ್ಲಿ ಮುಳುಗಿರುವರು, ಖಂಡಿತವಾಗಿಯೂ ಅವರ ಪ್ರಯತ್ನ ವ್ಯರ್ಥ. ಅದಕ್ಕೆ ಅವಕಾಶವಿಲ್ಲ. ಅವರು ಅದಕ್ಕಾಗಿ ಪ್ರಯತ್ನಿಸುತ್ತಿರುವರು. ಇಷ್ಟಕ್ಕೂ ಲೌಕಿಕ ಶರೀರ ಶಾಶ್ವತವಾಗಲು ಹೇಗೆ ಸಾಧ್ಯ? ಆದರೆ ಈ ಮೂರ್ಖರು ಹೇಳುವರು, ‘ಹೌದು.

ನಾವು ಯತ್ನಿಸುತ್ತಿದ್ದೇವೆ. ಕಾಯಿಲೆಗಳೀಗ ಕಡಮೆಯಾಗುವವು. ಈಗ ನಾವು ಹಲವು ಕಾಲದವರೆಗೆ ಬದುಕುವೆವು. ಇದೆಲ್ಲ ಹುಚ್ಚು ಮಾತುಗಳು. ಅವರೆಂದಿಗೂ, ”ಇಲ್ಲ. ಇದು ಅಸಾಧ್ಯ” ಎಂದು ಹೇಳುವುದಿಲ್ಲ. ಅದನ್ನೂ ಮೀರಿ ಅವರು ತಮ್ಮ ಮೂರ್ಖ ಪ್ರಯತ್ನಗಳನ್ನೂ ವೈಭವೀಕರಿಸುತ್ತಿರುವರು.

ಆಧುನಿಕ ವಿಜ್ಞಾನ – ಇದರಿಂದ ಏನು ತಾನೆ ಪ್ರಗತಿ ಸಾಧಿಸಿರುವರು? ನಾವು ಆ ವಿಷಯದ ಬಗ್ಗೆ ಮಾತಾಡುತ್ತಿರುವೆವು. ವಿಜ್ಞಾನಿಗಳೆನಿಸಿಕೊಂಡವರು ಹಾಗೂ ನೇತಾರರು ಸುಮ್ಮನೆ ಹಾದಿ ತಪ್ಪಿಸುತ್ತಿರುವರು.

ಈ ನಿಟ್ಟಿನಲ್ಲಿ ಶ್ರೀಲ ಭಕ್ತಿ ವಿನೋದ ಠಾಕುರರು ಸುಂದರವಾದ ಗೀತೆಯನ್ನು ರಚಿಸಿರುವರು. ಅವರು ಹೇಳುವರು, ಜಡ ವಿದ್ಯಾಜತೋ ಮಾಯಾರ ವೈಭವ – ಜಡ ವಿದ್ಯೆಯೆಂದರೆ ‘ಲೌಕಿಕ ಶಿಕ್ಷಣ.’ ಆದ್ದರಿಂದ ಜ್ಞಾನದ ಈ ವಿಸ್ತರಣೆಯು ಮಾಯೆಯ ವಿಸ್ತರಣೆಯಷ್ಟೆ.

ಇದರ ಫಲಿತಾಂಶ – ‘ತೋಮಾರ ಭಜನೇ ಬಾಧಾʼ – ಜನರು ಭಗವಂತನನ್ನು ಮರೆಯುತ್ತಿರುವರು. ಲೌಕಿಕ ವಿಜ್ಞಾನದ ಪ್ರಗತಿಯೊಂದಿಗೆ ಜನರು ಭಗವಂತನನ್ನು ಮರೆಯತೊಡಗಿರುವರು ಮುಂದಿನದು ಮೋಹ ಜನಮಿಯ ಅನಿತ್ಯ ಸಂಸಾರೇ – ನಾನು ಈಗಾಗಲೇ ಲೌಕಿಕ ಜಗತ್ತಿನಲ್ಲಿ – ನಾನು ಇರಲಾರದ ತಾತ್ಕಾಲಿಕ ನೆಲೆಯಲ್ಲಿ ಸಿಲುಕಿರುವೆನು.

ಆದರೆ ಲೌಕಿಕ ಜ್ಞಾನದ ಪ್ರಗತಿಯು ನನ್ನನ್ನು ಮತ್ತಷ್ಟು ಬಂಧಿಸುತ್ತಿರುವುದು ಮತ್ತು ನಾನು ಕೇವಲ ಒಂದು ಕತ್ತೆಯ ಹಾಗೆ ದುಡಿಯುತ್ತಿರುವೆನು ಅಷ್ಟೇ.

ಈಗ ಶ್ರೀಲ ಭಕ್ತಿ ವಿನೋದರ ಮಾತು ಸರಿಯೋ ತಪ್ಪೋ ಹೇಳಿ. ಅವರು ಲೌಕಿಕ ಶಿಕ್ಷಣದ ಪ್ರಗತಿಯೆಂದರೆ ಲೌಕಿಕ ಶಕ್ತಿಯ ಪ್ರಭಾವದ ಹೆಚ್ಚಳವೆಂದು ಹೇಳುತ್ತಿರುವರು. ನೀವು “ಇದರಿಂದ ತಪ್ಪೇನು?” ಎಂದು ಕೇಳಬಹುದು.

ತಪ್ಪೆಂದರೆ, “ನೀವು ಅದಾಗಲೇ ಮೂರ್ಖರು, ಮತ್ತು ಈ ಶಿಕ್ಷಣವು ನಿಮ್ಮನ್ನು ಮತ್ತಷ್ಟು ಮೂರ್ಖರಾಗಿಸುತ್ತಿದೆ. ಮೋಹ ಜನಮಿಯ ಅನಿತ್ಯ ಸಂಸಾರೇ – ‘ನಾನು ಅದಾಗಲೇ ಅನಿತ್ಯ ಲೌಕಿಕ ಜಗತ್ತಿನ ಸುಳಿಗೆ ಸಿಕ್ಕಿರುವೆನು ಮತ್ತು ಈ ವಸ್ತುಗಳು ನನ್ನನ್ನು ಇನ್ನೂ ಹೆಚ್ಚು, ಇನ್ನೂ ಬಿಗಿಯಾಗಿ ಬಂಧಿಸುತ್ತಿರುವವುʼ ಇದು ಭಕ್ತಿವಿನೋದ ಠಾಕೂರರ ತೀರ್ಮಾನ. ನಿಮಗೆ ಇದು ಇಷ್ಟವಾಗಲಿಲ್ಲವೆಂದರೆ ಅದರ ಕಾರಣ ತಿಳಿಸಿ.

ಲೌಕಿಕ ಶಿಕ್ಷಣವನ್ನು ಪರಿಗಣಿಸಿದರೆ, ನಾವೆಲ್ಲರೂ ಭೌತಿಕ ಪ್ರಕೃತಿಯ ಗುಣಗಳ ಕೆಳಗೆ ಬಂಧಿತರಾಗಿರುವೆವು. ನಾವು ಲೌಕಿಕ ವಿದ್ಯೆಯಲ್ಲಿ ಪ್ರಗತಿ ಸಾಧಿಸಿದಷ್ಟು ನಮ್ಮ ಬಂಧನ ಬಿಗಿಯಾಗುತ್ತ ಹೋಗುವುದು. ಇದು ಭಕ್ತಿ ವಿನೋದ ಠಾಕುರರ ಹೇಳಿಕೆ ನಿಮ್ಮ ಉತ್ತರವೇನು?

ಯಾರಾದರೂ ಭಕ್ತಿವಿನೋದರ ಮಾತನ್ನು ವಿರೋಧಿಸಿ ಅದು ತಪ್ಪೆಂದು ಸಾಧಿಸಿ ತೋರಬಲ್ಲಿರಾ?

ಶಿಷ್ಯ: ಒಳ್ಳೆಯದು, ಲೌಕಿಕ ಶಿಕ್ಷಣವಿಲ್ಲದಿದ್ದರೆ ನಮ್ಮಿಂದ ಭಕ್ತಿ ವಿನೋದರು ಬರೆದಿಟ್ಟಿರುವುದನ್ನು ಓದಲು ಸಾಧ್ಯವಾಗುತ್ತಿರಲಿಲ್ಲ ಎಂದು ನಾವು ಹೇಳಬಹುದು.

ಶ್ರೀಲ ಪ್ರಭುಪಾದ: ನಾವು ಓದು ಬರಹದ ಕಲಿಕೆಯ ವಿರುದ್ಧವೆಂದು ಯಾರು ಹೇಳುವರು? ನಾವು ಏನನ್ನು ಓದಬೇಕೆಂಬುದಷ್ಟೆ ಮುಖ್ಯ ಪ್ರಶ್ನೆ. ನೀವು ಭಕ್ತಿ ವಿನೋದ ಠಾಕುರರನ್ನು ಓದಲು ನಿಮ್ಮನ್ನು ತೊಡಗಿಸಿಕೊಂಡರೆ ಮಾತ್ರ ಅದು ನೈಜ ಶಿಕ್ಷಣ.

ನೀವು ಭಕ್ತಿವಿನೋದ ಠಾಕುರರಿಂದ, ವೇದವ್ಯಾಸರಿಂದ, ನಾರದರಿಂದ ಕಲಿಯಬೇಕು. ನೀವೇಕೆ ಡಾರ್ವಿನ್, ಫ್ರಾಯ್ಡ್ ಮತ್ತಿತರರಿಂದ ಶಿಕ್ಷಣ ಪಡೆಯಬೇಕು? ಶಿಕ್ಷಣವೆಂದರೆ, ಅಧಿಕೃತ ವ್ಯಕ್ತಿಯ ಮೂಲಕ ಕಲಿಕೆ. ಯಾರು ತಪ್ಪು ಮಾಡರೋ, ಭ್ರಮೆ ಇಲ್ಲದವರೋ, ವಂಚಕರಲ್ಲವೋ, ಅಂಥವರಿಂದ ಉದಾಹರಣೆಗೆ, ನಾವು ಕೃಷ್ಣನಿಂದ ಕಲಿಯುತ್ತಿದ್ದೇವೆ.

ಅದು ಶಿಕ್ಷಣ. ನೀವು ಹೇಗೆ ಮೂರ್ಖರಿಂದ ಹುಚ್ಚರಿಂದ ಕಲಿಯುವಿರಿ? ಹಾಗಾದರೆ ಶಿಕ್ಷಣವೆಂದರೇನು? ಶಿಕ್ಷಣ ಎಂದರೆ ಜ್ಞಾನಿಯಾದ ವ್ಯಕ್ತಿಯಿಂದ ಕಲಿಯುವುದು. ಶಿಕ್ಷಣವು ಅಗತ್ಯವಾಗಿ ಬೇಕು. ಆದರೆ ನಮಗೆ ನಿಜವಾದ ಶಿಕ್ಷಣ ಬೇಕು. ವಂಚನೆಯಿಲ್ಲದ್ದು. ಆಧುನಿಕ ಶಿಕ್ಷಣ ನಮ್ಮನ್ನು ವಂಚಿಸುತ್ತಿದೆ. ನಮಗೆ ನಾವಲ್ಲದ ಶರೀರಕ್ಕಾಗಿ ಕೆಲಸ ಮಾಡುವುದನ್ನಷ್ಟೆ ಬೋಧಿಸಲಾಗುತ್ತಿದೆ. ಇದು ಶಿಕ್ಷಣವೇ? ಅಥವಾ ವಂಚನೆಯೇ?

ನೀವು ಹೇಳಬಹುದು, “ನಾನು ನನ್ನ ವೈಯಕ್ತಿಕ ಆಸಕ್ತಿಯನ್ನು ನಿಭಾಯಿಸುತ್ತಿರುವೆನು. ಪ್ರತಿದಿನ ನಾನು ನೀರನ್ನು ಬಿಟ್ಟುಕೊಂಡು ಬಟ್ಟೆಗಳನ್ನು ಒಗೆಯುವೆನು”

ಆದರೆ ಅದು ಜ್ಞಾನವೇ? ಮತ್ತೆ ನಿಮ್ಮ ಬಗ್ಗೆ ಏನು ಸರ್? ನಿಮ್ಮ ಊಟದ ಗತಿಯೇನು?”

”ನನ್ನ ಊಟವೇ? ಅದರ ಪರಿವೆ ನನಗಿಲ್ಲ. ಪ್ರತಿದಿನ ನಾನು ಬಟ್ಟೆ ಒಗೆಯುವೆ.”

ಇದು ಶಿಕ್ಷಣವೇನು? ನಿಮ್ಮನ್ನು ನೀವು ಒದ್ದಾಡಲು ಬಿಟ್ಟುಕೊಂಡು ಬಟ್ಟೆಯನ್ನು ಸ್ವಚ್ಛವಾಗಿಟುಕೊಳ್ಳುವುದು? ಈಗ ನಡೆಯುತ್ತಿರುವುದು ಅದೇ ಆಗಿದೆ. ಆದ್ದರಿಂದಲೇ ಜನರು ಅಶಾಂತರಾಗಿದ್ದಾರೆ. ಅವರು ಹಸಿದಿದ್ದರೆ, ಅವರ ಕಾರು, ಮನೆಗಳು ಅವರಿಗೇನು ಕೊಡಬಲ್ಲವು? ಯಾಕೆ ಅವರು ಆತ್ಮಹತ್ಯೆಗೆ ಶರಣಾಗುತ್ತಿರುವರು? ಯಾಕೆಂದರೆ, ಅವರು ಸಂತೋಷದಿಂದಿಲ್ಲ. ಅವರ ಚೇತನಾತ್ಮಕ್ಕೆ ಆಹಾರ ದೊರೆಯುತ್ತಿಲ್ಲ. ಅದು ಶಿಕ್ಷಣವೇ?

ಅದು ಶಿಕ್ಷಣವಲ್ಲ. ಭಕ್ತಿ ವಿನೋದ ಠಾಕುರರು ಸರಿಯಾಗಿಯೇ ಹೇಳಿರುವರು; ಜೀವಕೇ ಕರಯೇ ಗಾಧಾ – ಲೌಕಿಕ ಶಿಕ್ಷಣವೆಂದರೆ ಪ್ರತಿಯೊಬ್ಬರನ್ನೂ ಅತಿದೊಡ್ಡ ಕತ್ತೆಗಳನ್ನಾಗಿಸುವುದು. ಎಲ್ಲರೂ ಅದಾಗಲೇ ಕತ್ತೆಯಾಗಿರುವರು. ಯಾಕೆಂದರೆ ಅವರು ಲೌಕಿಕ ಜಗತ್ತಲ್ಲಿರುವರು. ಲೌಕಿಕ ಶಿಕ್ಷಣವು ಅವರನ್ನು ಆ ಸ್ಥಿತಿಯಲ್ಲಿಯೇ ಹೆಚ್ಚು ಸುಭದ್ರವಾಗಿ ಇರಿಸುತ್ತಿರುವುದು.

ಶಿಷ್ಯ: ಹಾಗಾದರೆ, ಶ್ರೀಲ ಪ್ರಭುಪಾದ, ವ್ಯಕ್ತಿಯು ಈ ಲೌಕಿಕ ಶರೀರವನ್ನು ಬಿಟ್ಟನಂತರ ಮತ್ತೊಂದನ್ನು ಪಡೆಯುವನಲ್ಲ, ಆಗ ಇದೆಲ್ಲವೂ ಪುನರಾರಂಭವಾಗುವುದೇ?

ಶ್ರೀಲ ಪ್ರಭುಪಾದ: ಇಲ್ಲ, ಅವರು ತಾನು ಗಳಿಸಿದ ಹೊಸ ಶರೀರದ ಬಗೆಗೆ ತಕ್ಕಂತೆ ಪುನರಾರಂಭ ಮಾಡುವನು. ತಾನು ಯಾವ ಬಗೆಯ ಶರೀರ ಪಡೆದಿರುವನೋ ಅದರ ಸ್ಥಿತಿಗೆ ತಕ್ಕಂತೆ ಅವನು ಕೆಲಸ ಮಾಡಬೇಕಾಗುವುದು. ಅವನು ನಾಯಿಯ ಶರೀರ ಪಡೆದರೆ ನಾಯಿಯ ಹಾಗೆ ವರ್ತಿಸುವನು.

“ಹಿಂದೆ ನೀನು ನಾಚಿಕೆಯಿಲ್ಲದೆ ಬೆತ್ತಲೆಯಾಗಿರುತ್ತಿದ್ದೆ. ಈಗ ಐದು ಸಾವಿರ ವರ್ಷಗಳ ಕಾಲ ಮಳೆ ಛಳಿಗಳನ್ನು ಅನುಭವಿಸು. ನಿನ್ನ ದೇಹವನ್ನು ಕತ್ತರಿಸಿದರೂ, ನೀನು ಪ್ರತಿಭಟಿಸುವಂತೆ ಇಲ್ಲ.”

ಈ ನೈಸರ್ಗಿಕ ನಿಯಮಗಳನ್ನು ಅರ್ಥೈಸಿಕೊಳ್ಳಬೇಕು. ಆದರೆ ಆಧುನಿಕ ಶಿಕ್ಷಣ ತಜ್ಞರು ಈ ವಿಜ್ಞಾನದ ಬಗ್ಗೆ ಎಷ್ಟು ತಿಳಿದಿರುವರು? ಕೃಷ್ಣ ಹೇಳುವನು, ತಥಾ ದೇಹಾಂತರ ಪ್ರಾಪ್ತಿಃ “ನಿನ್ನ ಜೀವನದ ಅಂತ್ಯದ ಅನಂತರ ಬೇರೆ ದೇಹ ಹೊಂದುವೆ” ಅವನು ಯಾವ ಬಗೆಯ ಶರೀರವನ್ನು ಪಡೆಯಲಿರುವೆ ಎಂದು ನಿರ್ದಿಷ್ಟಪಡಿಸಿಲ್ಲ. ನಿನ್ನ ಕ್ರಿಯೆಗಳಿಂದ ನೀನದನ್ನು ಪಡೆಯುತ್ತಿರುವೆ.

ನೀವು ಇದನ್ನು ಪ್ರತ್ಯಕ್ಷವಾಗಿ ನೋಡಬಹುದು. ವಾಸ್ತವವಾಗಿ, ಒಟ್ಟು 84,00,000 ಬಗೆಯ ಜೀವ ಸ್ವರೂಪಗಳಿವೆ. ನೀವು ಅವುಗಳಲ್ಲಿ ಒಂದು ದೇಹವನ್ನು ಪ್ರವೇಶಿಸಬೇಕು. ನೀವೇನು ಮಾಡಬಲ್ಲಿರಿ? ಪ್ರಕೃತಿ ನಿಮ್ಮನ್ನು ಇದರ ಒಳಗೆ ಹೋಗು ಎಂದು ಬಲವಂತ ಪಡಿಸುವುದು.

ಅದು ಒಳ್ಳೆಯ ಶರೀರವಾಗಿರಬಹುದು ಅಥವಾ ಕೆಳಮಟ್ಟದ್ದು. ಆದರೆ ನೀವು ಮತ್ತೊಂದು ಶರೀರದ ಒಳಹೋಗಲೇಬೇಕು. ‘ನಾನು ಮರಣಾನಂತರ ಬೇರೆ ಶರೀರವನ್ನು ಪ್ರವೇಶಿಸಬೇಕಿದೆ. ಆದ್ದರಿಂದ ಯಾವ ಬಗೆಯ ಶರೀರ ಹೊಂದುವೆನೆ೦ಬ ಕಾಳಜಿ ನನಗಿರಬೇಕು” ಎಂದು ನೆನಪಿಸುವ ಶಿಕ್ಷಣ ಸಂಸ್ಥೆ ಯಾವುದಿದೆ? ಎಲ್ಲಿದೆ ಅಂತಹ ಶಿಕ್ಷಣ ಸಂಸ್ಥೆ? ಈ ಶಿಕ್ಷಣ ತಜ್ಞರೆನಿಸಿಕೊಂಡವರು ಕುರುಡರು ಅಷ್ಟೆ.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi