ಭಕ್ತ ಸುಧನ್ವ

– ಶ್ರೀಮತಿ ಎಂ. ಅಹಲ್ಯಾ

ಮಹಾಭಾರತದ ಯುದ್ಧದಲ್ಲಿ ಯಾಗದ ಕುದುರೆಗಾಗಿ ಅತಿರಥ ಮಹಾರಥರೆಲ್ಲ ಸೋತ ಮೇಲೆ ಶ್ರೀಕೃಷ್ಣನು ಅರ್ಜುನನಿದ್ದ ರಥವನ್ನು ಮುನ್ನಡೆಸಿಕೊಂಡು ಬಂದ. ಸುಧನ್ವನನು ‘ಶ್ರೀಕೃಷ್ಣನ’ ಮಹಾಭಕ್ತ.

ಅರ್ಜುನನಿಗೂ ಸುಧನ್ವನಿಗೂ ಕಾಳಗ ಶುರುವಾಯಿತು ಆದರೆ ಸುಧನ್ವನನ್ನು ಎದುರಿಸಲು ಅರ್ಜುನನಿಗೆ ಸಾಧ್ಯವಾಗಲಿಲ್ಲ.

ಆದ್ದರಿಂದ ಅರ್ಜುನನಿಗೆ ಕೋಪಬಂದು ಸೈರಣೆ ಕಳೆದುಕೊಂಡು ”ಇನ್ನು ಮೂರು ಬಾಣಗಳಲ್ಲಿ ನಿನ್ನನ್ನು ಕೊಲ್ಲದಿದ್ದರೆ ನನಗೆ ನರಕ ಪ್ರಾಪ್ತವಾಗಲಿ” ” ಎಂದು ಪ್ರತಿಜ್ಞೆ ಮಾಡಿಬಿಟ್ಟ.

ಇದನ್ನು ಕೇಳಿದ ಸುಧನ್ವನನೂ ಸಹ ಅರ್ಜುನನು ಕೋಪಗೊಳ್ಳುವಂತೆ “ಅರ್ಜುನ, ನಿನ್ನ ಆ ಮೂರು ಬಾಣಗಳನ್ನು ನಾನು ಕತ್ತರಿಸಿ ಹಾಕದಿದ್ದರೆ ಪಾಪಿಗೆ ದೊರೆಯುವಂಥಾ ಶಿಕ್ಷೆ ನನಗಾಗಲಿ” ಎಂದು ಶಪಥ ಮಾಡಿಬಿಟ್ಟ.

ಶ್ರೀಕೃಷ್ಣನು ಕೋಪದಿಂದ, “ಸುಧನ್ವನನು ಎಂಥಾ ಸಾಹಸ ವೀರನೆಂದು ತಿಳಿದು ಹುಂಬತನ ಮಾಡುತ್ತಿದ್ದೀಯಲ್ಲಾ? ಅರ್ಜುನ ನಿನ್ನ ಅವಿವೇಕಕ್ಕೆ ನಾನೇನು ಹೇಳಲಿ?

ಅವನೇ ಅನೇಕ ಸಲ ಗೆದ್ದು ನಮ್ಮ ರಥವನ್ನು ಹಿಂದಕ್ಕೆ ತಳ್ಳಿದ ಇಂಥವನನ್ನು ಮೂರು ಬಾಣಗಳಲ್ಲಿ ಕೊಲ್ಲುವೆನೆಂದು ನನಗೆ ತಿಳಿಸದೆ ಪ್ರತಿಜ್ಞೆ ಮಾಡಿಬಿಟ್ಟೆಯಲ್ಲಾ! ಇದರಿಂದ ನನಗೆ ವಿಷಾದವಾಗುತ್ತಿದೆ.”

ಅರ್ಜುನನು ತಪ್ಪಿತಸ್ಥ ಭಾವದಿಂದ ವಾಸುದೇವನೆದುರು ತಲೆ ಬಗ್ಗಿಸಿ “ನಾನು ಉದ್ದೇಶ ಪೂರ್ವಕವಾಗಿ ಮಾಡಲಿಲ್ಲ ಅದು ತಾನಾಗೇ ಬಂದು ಬಿಟ್ಟಿತು.”

“ನಿನ್ನ ಪ್ರೇರಣೆಯೂ ಕಾರಣವಾಗಿರಬಹುದು, ನೀನು ನೋಡುತ್ತಿರು ನಾನು ಬಾಣಗಳನ್ನು ಪ್ರಯೋಗಿಸುತ್ತೇನೆ” ಎಂದ.

ಅರ್ಜುನನು ಮಹಾ ಅಸ್ತ್ರವೊಂದನ್ನು ಧ್ಯಾನಿಸಿ ಅದನ್ನು ಬಿಲ್ಲಿಗೆ ಹೂಡಿದ ಆಗ ಶ್ರೀಕೃಷ್ಣನು ಸುಧನ್ವನಿಗೆ ಕೇಳುವಂತೆ, ಆ ಬಾಣವನ್ನು ಮುಟ್ಟಿ, ಗೋವರ್ಧನ ಗಿರಿ ಎತ್ತಿ ಗೋವುಗಳನ್ನು ಗೋಪಾಲಕರನ್ನು ಕಾಪಾಡಿದ ಪುಣ್ಯವನ್ನೆಲ್ಲಾ ಧಾರೆಯೆರೆದಿದ್ದೇನೆಂದು ಘೋಷಿಸಿದ.

ಇದನ್ನು ಕೇಳಿ ಸುಧನ್ವನನು ಶ್ರೀಕೃಷ್ಣನಿಗೆ ಕೈಮುಗಿದು ವಾಸುದೇವ ನೀನು ಪಾಂಡವರನ್ನು ಗೆಲ್ಲಿಸುತ್ತೀಯೆಂದು ತಿಳಿದಿದ್ದೇನೆ, ಆದರೆ ನಾನೂ ಸಹ ನಿನ್ನ ಭಕ್ತನೆ, ಅರ್ಜುನನು ಗೆಲ್ಲುವುದಾದರೆ ನನ್ನನ್ನು ಅನುಗ್ರಹಿಸುವುದು ನಿನಗೆ ಸೇರಿದೆ ಎಂದು ನುಡಿದು ತಾನೂ ಮಂತ್ರಾಸ್ತ್ರವನ್ನು ಹೂಡಿದ.

ಎರಡೂ ಕಡೆಯಿಂದ ಬಾಣಗಳು ಬಿಲ್ಲಿನಿಂದ ಸಿಡಿದು ಬಂದವು. ಸುಧನ್ವನ ಬಾಣ ಅರ್ಜುನನ ಬಾಣವನ್ನು ಮಧ್ಯದಲ್ಲಿಯೇ ಕತ್ತರಿಸಿ ದೂರಕ್ಕೆಸೆದು ಬಿಟ್ಟಿತು.

ಅರ್ಜುನನು ಮತ್ತೊಂದು ಅಮೂಲ್ಯವಾದ ಬಾಣವನ್ನು ಧ್ಯಾನಿಸಿ ಬಿಡುತ್ತೇನೆ ಎಂಬಂತೆ ವಾಸುದೇವನ ಕಡೆ ನೋಡಿದ, ‘ತಾಳು ಅದಕ್ಕೆ ಶಕ್ತಿ ಸಾಲದು’ ಎಂದ.

ಸುಧನ್ವನ ಕಡೆ ನೋಡುತ್ತ “ಈ ಬಾಣಕ್ಕೆ ಕೃಷ್ಣಾವತಾರದಲ್ಲಿ ಪೃಥ್ವಿಯನ್ನು ಕಾಪಾಡಿದ ಪುಣ್ಯವನ್ನೆಲ್ಲಾ ಧಾರೆ ಎರೆದಿದ್ದೇನೆಂದು ಆ ಬಾಣವನ್ನು ಮುಟ್ಟಿದ’ ಸುಧನ್ವ ಅದನ್ನು ಕತ್ತರಿಸಿ ಹಾಕಿದ.

ಇದರಿಂದ ಅರ್ಜುನನು ತತ್ತರಿಸಿ, “ವಾಸುದೇವಾ ಎಷ್ಟೋ ಸಲ ನೀನು ನನ್ನ ಗೆಲುವಿಗೆ ಕಾರಣವಾಗಿರುವೆ. ಈ ಸಲವೂ ಸಹ ನನ್ನ ಗೆಲುವು ನಿನ್ನದೇ ಆಗಿದೆ’ ಎಂದು ಕೈ ಮುಗಿದ.

ವಾಸುದೇವನು ಸುಧನ್ವನ ಕಡೆಗೆ ತಿರುಗಿ “ಈ ಬಾಣದ ಮೊದಲಲ್ಲಿ ಬ್ರಹ್ಮನ ಆವಾಹನೆಯಾಗಿದೆ, ತುದಿಯಲ್ಲಿ ರುದ್ರ ನೆಲೆಸಿದ್ದಾನೆ.

ಈ ಬಾಣಕ್ಕೆ ರಾಮಾವತಾರದ ಪುಣ್ಯವನ್ನೆಲ್ಲಾ ಧಾರೆಯೆರೆದಿದ್ದೇನೆಂದು ಘೋಷಿಸಿದ, “ಬಾಣಬಿಡು” ಎಂದು ಅರ್ಜುನನನ್ನು ಹುರಿದುಂಬಿಸಿದ.

ಆ ಕಡೆ ಸುಧನ್ವ ಶ್ರೀಕೃಷ್ಣನಿಗೆ ಕೈ ಮುಗಿದು ನಾನು ನಿನ್ನ ಪರಮ ಭಕ್ತ ನನ್ನ ಶಪಥ ನೆರವೇರುವಂತೆ ಮಾಡುವುದು ನಿನ್ನದೇ ಹೊಣೆ. “ಈ ಮೂರನೆಯ ಬಾಣ ಸಹ ಅರ್ಜುನನ ಬಾಣವನ್ನು ಕತ್ತರಿಸುವಂತೆ ಅನುಗ್ರಹಿಸು” ಎಂದು ಸುಧನ್ವನು ಬಾಣ ಪ್ರಯೋಗಿಸಿದ.”

ಸುಧನ್ವನ ಬಾಣವು ಅರ್ಜುನನ ಬಾಣವನ್ನು ಮಧ್ಯದಲ್ಲಿ ಸೀಳಿ ಹಾಕಿತು. ಬಾಣದ ಕೆಳಭಾಗ ಕೆಳಗೆ ಬಿದ್ದು ಮೇಲು ಭಾಗ ವೇಗವಾಗಿ ಚಲಿಸಿ ಸುಧನ್ವನ ಕುತ್ತಿಗೆಯನ್ನು ಕತ್ತರಿಸಿ ಹಾಕಿತು. ಈ ರೀತಿಯಾಗಿ ಸುಧನ್ವನು ಮೋಕ್ಷವನ್ನು ಹೊಂದಿ ಶ್ರೀಕೃಷ್ಣನನ್ನು ಸೇರಿದನು.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi