ಶ್ರೀ ಲಕ್ಷ್ಮೀ ಆವಿರ್ಭಾವ

ಕ್ಷೀರ ಸಾಗರದ ಮಥನದ ಕತೆಯನ್ನು ನೀವು ಕೇಳಿರಬಹುದು. ಆದರೆ ಈ ಸಮುದ್ರ ಮಥನದ ಸಂದರ್ಭದಲ್ಲಿಯೇ ಲಕ್ಷ್ಮಿದೇವಿಯು ಅವತರಿಸಿದಳು, ಶ್ರೀಮನ್ನಾರಯಣನನ್ನು ವರಿಸಿದಳು, ಅದೂ ಸ್ವಯಂವರದಲ್ಲಿ ಎನ್ನುವ ವಿಷಯ ಗೊತ್ತೆ? ಈ ಸಂದರ್ಭವನ್ನು ಶ್ರೀಮದ್‌ ಭಾಗವತದಲ್ಲಿ ತುಂಬ ಸ್ವಾರಸ್ಯವಾಗಿ ವರ್ಣಿಸಲಾಗಿದೆ.

ಸಮುದ್ರ ಮಥನವಾಗುತ್ತಿದ್ದಾಗ ಒಂದಾದರೊಂದು ವಸ್ತುಗಳು ಹೊರಬಂದವು. ಕೊನೆಗೆ ಸಾಗರದ ಗರ್ಭದಿಂದ ಬರುವ ಲಕ್ಷ್ಮಿಯು ಅಲ್ಲಿ ನೆರೆದಿದ್ದವರಿಗೆ ಕಾಣಿಸಿಕೊಳ್ಳುತ್ತಾಳೆ. ಅವಳ ಅನನ್ಯ ಸೌಂದರ್ಯ‌, ದೈಹಿಕ ಲಕ್ಷಣಗಳು, ಮೈಬಣ್ಣ ಮತ್ತು ಮಹಿಮೆಗಳನ್ನು ಕಂಡು ಅವರೆಲ್ಲ ದಿಗ್ಮೂಢರಾಗುತ್ತಾರೆ. ಅವಳು ಸಕಲ ಐಶ್ವರ್ಯಗಳ ಆಗರವಾಗಿದ್ದರಿಂದ ಎಲ್ಲರೂ ಅವಳಿಂದ ಆಕರ್ಷಿತರಾದರೂ, ಅವಳು ಯಾರನ್ನೂ ಲಕ್ಷಿಸುವುದಿಲ್ಲ.

ಐಶ್ವರ್ಯ‌ ದೇವತೆ ಲಕ್ಷ್ಮಿಯು ಕಾಣಿಸಿಕೊಂಡ ಕೂಡಲೇ  ದೇವತೆಗಳು, ಮಹರ್ಷಿಗಳು, ಗಂಧರ್ವರು‌ ಅವಳಿಗೆ ಗೌರವದಿಂದ ಪೂಜೆ ಸಲ್ಲಿಸಿದರು. ಇಂದ್ರನು ಭಾಗ್ಯದೇವತೆಗಾಗಿ ಸೂಕ್ತ ಆಸನವನ್ನು ತಂದನು. ಭೂಮಿಯು ಲಕ್ಷ್ಮಿಯ ಪ್ರತಿಷ್ಠಾಪನೆಗೆ ಸಕಲೌಷಧಿಗಳನ್ನು ಸಿದ್ಧಪಡಿಸಿದಳು. ಗೋವುಗಳು ಹಾಲು, ಮೊಸರು, ತುಪ್ಪ, ಗಂಜಳ, ಮತ್ತು ಗೋಮಯಗಳೆಂಬ ಪಂಚಗವ್ಯವನ್ನು ನೀಡಿದವು. ಮಹರ್ಷಿಗಳು ಶಾಸ್ತ್ರೋಕ್ತವಾಗಿ ಗಂಗೆ ಯಮುನೆಯರಂತಹ ಪವಿತ್ರ ನದಿಗಳ ಜಲದಿಂದ ಭಾಗ್ಯದೇವತೆಯ ಅಭಿಷೇಕವನ್ನು ನೆರವೇರಿಸಿದರು. ಗಂಧರ್ವರು  ಮಂಗಳಕರ ವೇದಮಂತ್ರಗಳನ್ನು ಪಠಿಸಿದರು. ನರ್ತಕಿಯರು ನರ್ತಿಸಿದರು‌ ಮತ್ತು ವೇದಗಳಲ್ಲಿನ ಗೀತೆಗಳನ್ನು ಹಾಡಿದರು. ವಿವಿಧ ವಾದ್ಯಗಳು ಮೊಳಗಿದವು.

ಹೀಗೆ ಅಭಿಷೇಕ ನಡೆಯುತ್ತಿದ್ದಾಗ, ಲಕ್ಷ್ಮಿಯು ತನ್ನ ಕೈಯಲ್ಲಿ ಕಮಲ ಪುಷ್ಪವನ್ನು ಹಿಡಿದು ತನ್ನ ಮೂಲ ನಿಲುವಿನಲ್ಲಿ ಕುಳಿತು ಅತ್ಯಂತ ಸುಂದರವಾಗಿ ಕಂಗೊಳಿಸುತ್ತಿದ್ದಳು. ಆಗ ಸಮುದ್ರ ರಾಜನು ಹಳದಿ ಬಣ್ಣದ ಸೀರೆ ಪೀತಾಂಬರವನ್ನು ನೀಡಿದನು. ವರುಣನು ಪುಷ್ಪಮಾಲೆಯನ್ನು ಅರ್ಪಿಸಿದನು. ವಿಶ್ವಕರ್ಮನು ನಾನಾ ರೀತಿಯ ಆಭರಣಗಳನ್ನು ನೀಡಿದರೆ ಸರಸ್ವತಿಯು ಕಂಠಹಾರವನ್ನು, ಬ್ರಹ್ಮನು ಕಮಲ ಪುಷ್ಪವನ್ನು, ನಾಗಲೋಕದ ನಿವಾಸಿಗಳು ಕರ್ಣಕುಂಡಲಗಳನ್ನು ನೀಡಿದರು.

ಲಕ್ಷ್ಮಿಯು ಕ್ಷೀರಸಾಗರದಿಂದ ಹುಟ್ಟಿ ಬಂದವಳಾದ್ದರಿಂದ ಅವಳು ಸಮುದ್ರ ಪುತ್ರಿಯಾಗಿದ್ದಳು. ಸ್ವಯಂವರದಲ್ಲಿ ತನ್ನ ಪತಿಯನ್ನು ಆಯ್ದುಕೊಳ್ಳುವ ಅವಕಾಶವಿತ್ತು. ಆದುದರಿಂದ ಅವಳು ಅಲ್ಲಿದ್ದವರತ್ತ ನೋಟ ಹರಿಸಿದಳು. ಪದ್ಮಪುಷ್ಪಗಳ ಮಾಲೆಯನ್ನು ಹಿಡಿದು ಅತ್ತಿತ್ತ ನಡೆದಾಡಿದಳು. ಅವಳು ನಡೆದಾಡುವಾಗ ಅವಳ ಕಾಲ್ಗೆಜ್ಜೆಗಳು ಕಿಂಕಿರಿಸಿದವು. ಅವಳು ಬಂಗಾರದ ಬಳ್ಳಿಯಂತೆ ತೋರಿದಳು. ಅಲ್ಲಿ ಗಂಧರ್ವರು, ಯಕ್ಷರು, ಅಸುರರು, ಸಿದ್ಧರು, ಚಾರಣರು, ಸ್ವರ್ಗ‌ ನಿವಾಸಿಗಳು ಇದ್ದರು.

ಲಕ್ಷ್ಮಿಯು ಸೂಕ್ಷ್ಮವಾಗಿ ಅವರೆಲ್ಲರನ್ನೂ ಪರೀಕ್ಷಿಸಿದಳು. ಆದರೆ ಸ್ವಭಾವತಃ ಎಲ್ಲ ಸದ್ಗುಣ ಸಂಪನ್ನರು ಯಾರೂ ಅವಳಿಗೆ ಕಂಡು ಬರಲಿಲ್ಲ. ಅಲ್ಲಿ ದೋಷರಹಿತರು ಇರಲಿಲ್ಲ. ಕೆಲವರು ತಪಸ್ಸನ್ನು ಆಚರಿಸಿದ್ದರೂ ಕೋಪವನ್ನು ಜಯಿಸಿರಲಿಲ್ಲ, ಕೆಲವರು ಜ್ಞಾನ ಗಳಿಸಿದ್ದರೂ ಭೌತಿಕ ಕಾಮನೆಗಳನ್ನು ಗೆದ್ದಿರಲಿಲ್ಲ. ‌ಹೀಗೆ, ಅವಳು ಯಾರಿಗೂ ವರಮಾಲೆ ಹಾಕಲಿಲ್ಲ.  ವಿಚಾರ ಮಾಡುತ್ತ ಅವಳು ಮುಂದೆ ಸಾಗಿದಳು.

ಆಗ ಅವಳು  ಸಕಲ ದಿವ್ಯಗುಣಗಳನ್ನು ಹೊಂದಿದ್ದ ನಾರಾಯಣನನ್ನು ನೋಡಿದಳು. ಲಕ್ಷ್ಮಿಯು ಅವನ ಬಳಿಗೆ ಹೋಗಿ ಅವನ ಕೊರಳಿಗೆ ಹಾರವನ್ನು ಹಾಕಿದಳು. ವಿಷ್ಣುವು ತನ್ನ ವಕ್ಷಸ್ಥಳದಲ್ಲಿ ಶಾಶ್ವತವಾಗಿ ನೆಲೆಸಲು ಅವಳಿಗೆ ಎಡೆ ಮಾಡಿದನು. ಈ ರೀತಿ ಲಕ್ಷ್ಮೀ ನಾರಾಯಣರು ಒಂದಾದಮೇಲೆ ಬ್ರಹ್ಮ, ಶಿವ, ಇತರ ದೇವತೆಗಳು ಹೂಮಳೆಗರೆದರು ಮತ್ತು  ಮಹಾಲಕ್ಷ್ಮಿ ಮತ್ತು ಪರಮ ಪ್ರಭುವಿನ ಮಹಿಮೆಯನ್ನು ಕೊಂಡಾಡುವ ಮಂತ್ರಗಳನ್ನು ಪಠಿಸಿದರು. ಅವರ ಆನಂದ ಎಲ್ಲೆ ಮೀರಿತ್ತು. ಆದರೆ ದಾನವರು ಖಿನ್ನರಾದರು! 

ವರಮಹಾಲಕ್ಷ್ಮೀ ವ್ರತವಲ್ಲದೆ, ದೀಪಾವಳಿ ಮತ್ತು ನವರಾತ್ರಿ ಸಮಯದಲ್ಲಿಯೂ ವಿಶೇಷ ಪೂಜೆಗಳನ್ನು ಲಕ್ಷ್ಮೀ ದೇವಿಗೆ ಸಮರ್ಪಿಸಲಾಗುತ್ತದೆ.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi