ಶ್ರೀಲ ಲೋಚನದಾಸ ಠಾಕುರರು ಬಾಲ್ಯದಿಂದಲೇ ಶ್ರೀಗೌರಾಂಗರ ಭಕ್ತರ ಸಾಹಚರ್ಯದ ಭಾಗ್ಯ ಪಡೆದು ಬಂದವರು. ಅವರು ಶ್ರೀ ಚೈತನ್ಯ ಮಹಾಪ್ರಭುಗಳ ಶಿಷ್ಯೋತ್ತಮರಾಗಿದ್ದ ಶ್ರೀಲ ನರಹರಿ ಸರ್ಕಾರರ ಶಿಷ್ಯರು.
ಶ್ರೀ ಲೋಚನದಾಸರ ತಂದೆ ಶ್ರೀ ಕಮಲಾಕರದಾಸ, ತಾಯಿ ಶ್ರೀಮತಿ ಸದಾನಂದೀದೇವಿ. ಠಾಕುರರು 1445ರಲ್ಲಿ ನಾರಾಯಣ ಮಾಸದ ಶುಕ್ಲಪಕ್ಷ ಪ್ರತಿಪದೆಯಂದು ಜನಿಸಿದರು. ಅವರು ತಮ್ಮ ತಂದೆ ತಾಯಿಯರ ಏಕೈಕ ಪ್ರೀತಿಪಾತ್ರ ಪುತ್ರರಾಗಿದ್ದರು. ಬಹಳ ಚಿಕ್ಕ ವಯಸ್ಸಿನಲ್ಲಿಯೇ ಅವರ ವಿವಾಹವು ನಡೆದು ಹೋಗಿತ್ತು.

ಆದರೂ ಅವರು ಮಹಾಪ್ರಭುಗಳೆಡೆಗೆ ವಿಶೇಷ ಆಕರ್ಷಣೆಯನ್ನು ಬೆಳೆಸಿಕೊಂಡಿದ್ದರು. ಹಾಗೆಯೇ, ಭೌತಿಕ ಸುಖಾಭೋಗಾಪೇಕ್ಷೆಗಳೆಡೆಗೆ ಉಪೇಕ್ಷೆಯನ್ನೂ ಹೊಂದಿದ್ದರು. ತಮ್ಮ ಯೌವನದ ಆರಂಭದ ದಿನಗಳಲ್ಲೊಮ್ಮೆ ಶ್ರೀಖಂಡಕ್ಕೆ ಭೇಟಿ ನೀಡಿದ್ದಾಗ, ಅವರಿಗೆ ಶ್ರೀ ನರಹರಿ ಸರ್ಕಾರ ಠಾಕುರರ ಭೇಟಿಯಾಯಿತು.
ಲೋಚನದಾಸರು ಅವರನ್ನು ತಮ್ಮ ಗುರುಗಳಾಗುವಂತೆ ವಿನಮ್ರ-ದೀನರಾಗಿ ಕೇಳಿಕೊಂಡು, ಅವರ ಪದತಲದಲ್ಲಿಯೇ ಆಶ್ರಯ ಪಡೆದರು. ಕೆಲಕಾಲ ಅಲ್ಲಿಯೇ ನೆಲೆಸಿದ್ದು, ಕೀರ್ತನ ತರಬೇತಿ ಪಡೆದರು.
ಶ್ರೀ ಲೋಚನದಾಸರು ಶ್ರೀ ಚೈತನ್ಯ ಮಹಾಪ್ರಭುಗಳ ಜೀವನವನ್ನು ವರ್ಣಿಸುವ ‘ಚೈತನ್ಯ ಮಂಗಳ’ ಕೃತಿಯನ್ನು ಬಂಗಾಳಿಯಲ್ಲಿ ರಚಿಸಿದ್ದಾರೆ. ಅವರ ಈ ಕೃತಿಗೆ ಶ್ರೀ ಮುರಾರಿಗುಪ್ತರ ಚೈತನ್ಯ ಚರಿತಾಮೃತ ಸಂಸ್ಕೃತ ಗ್ರಂಥವೇ ಆಕರ.
ಲೋಚನ ದಾಸರ ಚೈತನ್ಯ ಮಂಗಳ ಕೃತಿಯು – ಸೂತ್ರಖಂಡ, ಆದಿಖಂಡ, ಮಧ್ಯಮಖಂಡ ಮತ್ತು ಶೇಷ ಖಂಡ ಎಂಬ ನಾಲ್ಕು ವಿಭಾಗಗಳಲ್ಲಿ ವಿನ್ಯಾಸ ಹೊಂದಿದೆ. ಈ ನಾಲ್ಕೂ ಖಂಡಗಳ ಒಟ್ಟು ಅಧ್ಯಾಯಗಳ ಸಂಖ್ಯೆ – 24.






Leave a Reply