ಶ್ರೀಲ ಉದ್ಧರಣದತ್ತ ಠಾಕುರರು ಶ್ರೀ ನಿತ್ಯಾನಂದ ಪ್ರಭುಗಳ ಪರಮಭಕ್ತರು. ಸಪ್ತಗ್ರಾಮದಲ್ಲಿ ನೆಲೆಸಿದ್ದ ವಣಿಕ ಕುಟುಂಬವೊಂದರಲ್ಲಿ ಅವರು ಜನಿಸಿದರು. ಉದ್ಧರಣದತ್ತರ ತಂದೆ – ಶ್ರೀಕರದತ್ತ ಮತ್ತು ತಾಯಿ ಭದ್ರಾವತೀದೇವಿ ಸಪ್ತಗ್ರಾಮ ಬಹಳ ಪುಣ್ಯಕರವಾದ ಸ್ಥಳ. ಅದನ್ನು ಸಪ್ತರ್ಷಿಗಳ ನೆಲೆ ಎಂದು ಹೇಳಲಾಗುತ್ತದೆ. ಅಷ್ಟೇ ಅಲ್ಲದೆ, ಅದು ಗಂಗಾ-ಯಮುನಾ-ಸರಸ್ವತಿಯರು ಸೇರುವ ತ್ರಿವೇಣಿ ಸಂಗಮದ ತೀರ್ಥಕ್ಷೇತ್ರ.
ಶ್ರೀ ನಿತ್ಯಾನಂದ ಪ್ರಭುಗಳು ತಮ್ಮ ಸಹಚರರೊಂದಿಗೆ ಸಪ್ತಗ್ರಾಮಕ್ಕೆ ಭೇಟಿ ನೀಡಿದಾಗ ಶ್ರೀಲ ಉದ್ಧರಣದತ್ತರು ನಿಷ್ಕಲ್ಮಷವಾದ ಶುದ್ಧ ಭಕ್ತಿ- ಪ್ರೇಮಗಳಿಂದ ಸೇವೆ ಅರ್ಪಿಸುತ್ತಾರೆ.
ವಾಸ್ತವವಾಗಿ ಉದ್ಧರಣದತ್ತರು ಪರಮನಿಯಂತ್ರಕರಾದ ನಿತ್ಯಾನಂದ ಪ್ರಭುಗಳ ಪ್ರತಿಯೊಂದು ಲೀಲೆಯಲ್ಲೂ ಜನ್ಮವೆತ್ತಿ ಬಂದು ಅವರ ಚರಣಸೇವೆ ಸಲ್ಲಿಸುವ ಭಾಗ್ಯವನ್ನು ಪಡೆದು ಬಂದವರು. ಗೌರಘನೋದ್ದೇಶ ದೀಪಿಕಾದಲ್ಲಿ ಉಲ್ಲೇಖಿಸಿರುವಂತೆ, ವ್ರಜಲೀಲೆಯಲ್ಲಿ ಅವರು ಬಲರಾಮನ ಆಪ್ತ ಸಖ ‘ಸುಬಾಹು’ ಎಂಬ ಗೊಲ್ಲ ಬಾಲಕನಾಗಿ ಜನಿಸಿದ್ದರು.

ಉದ್ಧರಣದತ್ತ ಠಾಕುರರು ನಿತ್ಯಪೂಜೆ ಸಲ್ಲಿಸುತ್ತಿದ್ದ ಷಡ್ಭುಜ ಮೂರ್ತಿ (ಶ್ರೀ ಚೈತನ್ಯ ಮಹಾಪ್ರಭುಗಳ ಆರುಬಾಹು – ರಾಮ, ಕೃಷ್ಣ ಚೈತನ್ಯ) ಯನ್ನು ನಾವು ಇಂದಿಗೂ ಸಪ್ತಗ್ರಾಮದಲ್ಲಿ ಕಾಣಬಹುದು. ಈ ಮೂರ್ತಿಯ ಬಲಪಾರ್ಶ್ವದಲ್ಲಿ ಶ್ರೀ ನಿತ್ಯಾನಂದ ಪ್ರಭುಗಳ ಮತ್ತು ಎಡ ಪಾರ್ಶ್ವದಲ್ಲಿ ಶ್ರೀ ಗದಾಧರ ಪಂಡಿತರ ಆರ್ಚವಿಗ್ರಹಗಳನ್ನೂ ಪ್ರತಿಷ್ಠಾಪಿಸಲಾಗಿದೆ.
ಉದ್ಧರಣದತ್ತ ಠಾಕುರರು ನೈಹಾಟಿ ಗ್ರಾಮದ ಆಡಳಿತಗಾರನ ಬೊಕ್ಕಸದ ಅಧಿಕಾರಿಯಾಗಿದ್ದರು. ಠಾಕುರರು ನೆಲೆಸಿದ್ದ ಮತ್ತು ಆಡಳಿತಕಾರ್ಯಗಳನ್ನು ನಿಭಾಯಿಸುತ್ತಿದ್ದ ಸ್ಥಳವು ಇಂದಿಗೂ ‘ಉದ್ಧರಣ ಪುರ’ ಎಂದೇ ಕರೆಯಲ್ಪಡುತ್ತದೆ.
ಉದ್ಧರಣದತ್ತ ಠಾಕುರರ ಭಕ್ತಿಸೇವೆಯಿಂದ ಸಂಪ್ರೀತರಾದ ಶ್ರೀನಿತ್ಯಾನಂದ ಪ್ರಭುಗಳು ಆನಂದೋನ್ಮಾದದಿಂದ ಸಪ್ತಗ್ರಾಮದ ಪ್ರತಿ ಮನೆಯ ದಾರಂದದಲ್ಲಿ ನಿಂತು ಸಂಕೀರ್ತನೆ ನಡೆಸಿ, ಸಣ್ಣಬುದ್ಧಿಯ ವಣಿಕ ಜನರನ್ನು (ಅವರೆಲ್ಲರೂ ಉದ್ಧರಣದತ್ತರ ಸಂಬಂಧಿಕರು – ಕುಲ ಬಾಂಧವರು) ಉದ್ಧರಿಸಿದರೆಂದು ಹೇಳಲಾಗುತ್ತದೆ.
ಭಕ್ತಿರತ್ನಾಕರದಲ್ಲಿ (11:775) ಶ್ರೀನಿತ್ಯಾನಂದ ಪ್ರಭುಗಳ ಶಕ್ತಿ ಜಾಹ್ನವ ಮಾತಾ, ಉದ್ಧರಣ ದತ್ತರ ಮನೆಗೆ ಭೇಟಿ ನೀಡಿದ ಉಲ್ಲೇಖವಿದೆ. ಆದರೆ ಆ ವೇಳೆಗೆ ಠಾಕುರರು ಭಗವದ್ಧಾಮಕ್ಕೆ ತೆರಳಿದ್ದರೆಂದೂ ಅದರಲ್ಲಿ ಹೇಳಲಾಗಿದೆ. ಶ್ರೀಲ ಉದ್ಧರಣದತ್ತ ಠಾಕುರರು ಪೌಷಮಾಸದ ಕೃಷ್ಣಪಕ್ಷ ತ್ರಯೋದಶಿಯಂದು ತಮ್ಮ ಅವತಾರ ಕಾರ್ಯ ಮುಗಿಸಿ ಇಹಲೋಕ ತ್ಯಜಿಸಿದರು.






Leave a Reply