ಶಾಲೆಗಳಲ್ಲಿ ಪ್ರಾರ್ಥನೆ

ಶ್ರೀ ಶ್ರೀಮದ್‌ ಎ.ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದರು ಮತ್ತು ಓರ್ವ ದೇವತಾಶಾಸ್ತ್ರ ವಿಭಾಗದ ವಿದ್ಯಾರ್ಥಿಯ ನಡುವೆ  1974ರ ಜನವರಿಯಲ್ಲಿ ಲಾಸ್‌ಏಂಜಲೀಸ್‌ನಲ್ಲಿ ನಡೆದ ಸಂವಾದ.

ವಿದ್ಯಾರ್ಥಿ: ಶಾಲೆಗಳಲ್ಲಿ ಕಲಿಕೆಯ ಮಟ್ಟ ಅಧೋಗತಿಗೆ ಇಳಿದಿದೆ; ಅನೇಕರು ಈ ಬಗ್ಗೆ ಧೃತಿಗೆಟ್ಟಿದ್ದಾರೆ… ವಿದ್ಯಾರ್ಥಿಗಳು ಓದಲು, ಬರೆಯಲೂ ಸಹ ಕಲಿಯುತ್ತಿಲ್ಲ. ಅನೇಕರು ಮಾದಕ ಪದಾರ್ಥಗಳ ವ್ಯಸನಿಯಾಗಿದ್ದಾರೆ. ಕಳ್ಳತನ, ಶಿಕ್ಷಕಿಯರ ಮಾನಭಂಗಕ್ಕೆ ತೊಡಗಿದ್ದಾರೆ.

ಶ್ರೀಲ ಪ್ರಭುಪಾದ: ಹೌದು, ಈ ಬಗೆಯ ಶಾಲೆಗಳಿಂದ ಪಡೆಯುವ ಶಿಕ್ಷಣದ ಪ್ರಯೋಜನವೇನು?

ವಿದ್ಯಾರ್ಥಿ: ಏನೇನೂ ಇಲ್ಲ .

ಶ್ರೀಲ ಪ್ರಭುಪಾದ: ಇದು ಮೋಸಗಾರಿಕೆ – ನೀವು ದೇವರನ್ನು ಬಿಟ್ಟಿದ್ದೀರಿ. ಅದು ಮೋಸದ ಪರಮಾವಧಿ. ಸಹಜವಾಗಿ ಉಳಿದ ಯಾವುದನ್ನು  ನೀವು ಶಾಲಾ ಶಿಕ್ಷಣವೆಂದು ತಿಳಿದಿದ್ದೀರೋ ಅದು ಮೋಸಗಾರಿಕೆ. ನೀವು ಒಂದು ಗಣಿತದ ಸಮಸ್ಯೆಯನ್ನು ಬಿಡಿಸುತ್ತಿದ್ದೀರಿ ಎಂದಿಟ್ಟುಕೊಳ್ಳೋಣ – “2+2=3” ಎಂದು ಲೆಕ್ಕ ಬಿಡಿಸುತ್ತೀರಿ. ಅನಂತರ ಅತ್ಯಾಧುನಿಕ ಗಣಿತ ತಂತ್ರಗಳನ್ನು ಸೂತ್ರಗಳನ್ನು ಬಳಸಿದರೂ, ನಿಮ್ಮ ಎಲ್ಲ ಲೆಕ್ಕಾಚಾರಗಳೂ ತಪ್ಪಾಗುತ್ತವೆ.

ವಿದ್ಯಾರ್ಥಿ: ಪರಿಸ್ಥಿತಿ ಎಷ್ಟರ ಮಟ್ಟಿಗೆ ಹದಗೆಟ್ಟಿದೆ ಎಂದರೆ ನಾವು ಪಬ್ಲಿಕ್‌ ಶಾಲೆಗಳಲ್ಲಿ ಪ್ರಾರ್ಥನೆಯನ್ನು ಕೂಡ ಮಾಡುವಂತಿಲ್ಲ. ನಾವು ಹಿಂದೆಲ್ಲ ಶಾಲಾದಿನಗಳಲ್ಲಿ ತರಗತಿ ಪ್ರಾರಂಭವಾಗುವ ಮುನ್ನ ಪ್ರಾರ್ಥನೆ ಮಾಡುತ್ತಿದ್ದೆವು. ಅನಂತರ ಒಬ್ಬ ನಾಸ್ತಿಕ ಮಹಿಳೆ, ವಾದವನ್ನು ಎಳೆದೊಯ್ದು  ನ್ಯಾಯಾಲಯದ ಕಟೆಕಟೆ ಹತ್ತಿಸಿಬಿಟ್ಟಳು. ಕೊನೆಗೆ ಸರ್ವೋಚ್ಚ ನ್ಯಾಯಾಲಯ ಅದು ಅಸಾಂವಿಧಾನಿಕ ಎಂದು ತೀರ್ಪು ಕೊಟ್ಟಂದಿನಿಂದ ಶಾಲೆಯಲ್ಲಿ ಪ್ರಾರ್ಥನೆ ನಿಷಿದ್ಧ.

ಶ್ರೀಲ ಪ್ರಭುಪಾದ: ಆದರೆ, ಪ್ರಾರ್ಥನೆಗೆ ಅನುಮತಿ ದೊರಕಿದರೂ, ಅದರಿಂದೇನೂ ಸಹಾಯವಾಗದು. ಚರ್ಚ್‌ಗಳಲ್ಲಿ ಈಗಲೂ ಪ್ರಾರ್ಥನೆ ನಡೆಯುತ್ತಲೇ ಇದೆ. ಯಾವ ಪುರುಷಾರ್ಥಕ್ಕೆ? ಜನರಿಗೆ ಆಸಕ್ತಿ ಕುಂದುತ್ತಿದೆ, ಇದು ಕೇವಲ ಒಂದು ಧಾರ್ಮಿಕ ವಿಧಿ ಎಂಬಂತೆ ನಡೆಯುತ್ತಿದೆ – “ಚರ್ಚಿಯಾನಿಟಿ”. ವಾಸ್ತವಿಕವಾಗಿ, ನೀವು ಭಗವತ್‌ ವಿಜ್ಞಾನದಲ್ಲಿ ಶಿಕ್ಷಣ ಪಡೆಯಬೇಕು. ನೀವು ದೇವರೊಡನೆ ನೇರ, ವೈಜ್ಞಾನಿಕ ಅನುಭವವನ್ನು ಪಡೆಯಬೇಕು. ಜನರಿಗೆ ಶುಷ್ಕ ಭಾಷಣ ಬೇಕಿಲ್ಲ.

ವಿದ್ಯಾರ್ಥಿ: ಅನೇಕರು ಭಗವಂತನ ಬಗ್ಗೆ ಸಂವೇದನಾಶೀಲರಾಗಿ, ದೈವಕ್ಕೆ  ಬದ್ಧರಾಗಿರುತ್ತಾರೆ. ಹಾಗಾಗಿ ಕಿಂಚಿತ್ತಾದರೂ, ಪ್ರಾರ್ಥನೆಯ ರೂಪದಲ್ಲಿ ಕೇಳಬೇಕೆಂದು ಬಯಸುತ್ತಾರೆ.

ಶ್ರೀಲ ಪ್ರಭುಪಾದ: ಇಲ್ಲ. ಏನಾದರೂ ಕಾರ್ಯತಃ ಸಾಧಿಸಿ. “ಪ್ರಾರ್ಥನೆ” ಎಂದರೆ ಭಗವಂತನ ಪುಣ್ಯನಾಮ ಸಂಕೀರ್ತನೆ. ನಿಮಗೆ ಭಗವಂತನ ದಿವ್ಯನಾಮ ಗೊತ್ತಿಲ್ಲದಿದ್ದರೆ ನಾವು ಅದನ್ನು ತಿಳಿಸಿಕೊಡುತ್ತೇವೆ. ನಿಮಗೆ ಇದಕ್ಕಾಗಿ ಖರ್ಚುವೆಚ್ಚವೇನೂ ತಗಲುವುದಿಲ್ಲ. ನಷ್ಟವೂ ಇಲ್ಲ. ನೀವು ಯಾಕೆ ಇದನ್ನು ಪ್ರಯೋಗಿಸಬಾರದು? `ಹರೇಕೃಷ್ಣ’ ಎಂಬ ನಾಮೋಚ್ಚಾರಣೆ ಮಾಡಿ. ನೀವು `ಹರೇಕೃಷ್ಣ’ ಎಂಬ ಹೆಸರನ್ನು ಉಚ್ಚರಿಸಿದರೆ ನಿಮಗೆ ಭಗವಂತನ ಸಾಕ್ಷಾತ್ಕಾರ ಕುರಿತ ವೈಜ್ಞಾನಿಕ ತಿಳಿವಳಿಕೆ ಸಿಗುತ್ತದೆ – ಮುಖಾಮುಖಿ; ನೇರವಾದ ಭಗವದನುಭವ. ಆಗ ಸಮಾಜದಲ್ಲಿ ಎಲ್ಲ ಪ್ರಯೋಜನಗಳೂ ಒಂದರ ಹಿಂದೆ ಮತ್ತೊಂದರಂತೆ ಬರುತ್ತವೆ.

ವಿದ್ಯಾರ್ಥಿ: ಹೌದು, ಆದರೆ ನೋಡಿ, ಈಗ `ಹರೇಕೃಷ್ಣ’ ನಾಮೋಚ್ಚಾರ ಶಾಲೆಗಳಲ್ಲಿ ಮಾಡಲಾಗದು. ಕಾನೂನು ಇನ್ನೂ ಜಾರಿಯಲ್ಲಿದೆ. ಯಾರಾದರೂ ಕಾನೂನನ್ನು  ಬದಲಿಸಬೇಕು. ಅಲ್ಲಿಯವರೆಗೂ ಉಚ್ಚರಿಸಲಾಗದು.

ಶ್ರೀಲ ಪ್ರಭುಪಾದ: ಹಾಗಿದ್ದರೆ ನಮ್ಮ ಶಿಷ್ಯರು ಮಾಡಬಲ್ಲರು.

ವಿದ್ಯಾರ್ಥಿ: ನೀವು ಕಾನೂನಿನ ವಿರುದ್ಧ ಹೋರಾಡುತ್ತೀರಾ?

ಶ್ರೀಲ ಪ್ರಭುಪಾದ: ಹೌದು. ಇತ್ತೀಚೆಗೆ ಸೆನೆಟರುಗಳು ಮತ್ತು ಕಾಂಗ್ರೆಸ್ಸಿಗರು ಒಂದು ವಿಶೇಷ ದಿನವನ್ನು ಸಾರ್ವಜನಿಕ ಪ್ರಾರ್ಥನೆಗೆಂದು ಮೀಸಲಿಟ್ಟಿದ್ದಾರೆ. ಕೇವಲ ಒಂದು ದಿನ; ಅಂದಮೇಲೆ ಅವರಿಗೆ ಇನ್ನೂ ಪ್ರಾರ್ಥನೆಯ ಅಗತ್ಯವಿದೆ ಎಂದಾಯಿತು. ಹಾಗಾಗಿ, ಅವರಿಗೆ ನಿಜವಾಗಿಯೂ ಪ್ರಾರ್ಥನೆ ಬೇಕಿದ್ದರೆ, ವರುಷದ ಮಿಕ್ಕ ದಿನಗಳಲ್ಲೇಕೆ ನಿಷಿದ್ಧಗೊಳಿಸಿದ್ದಾರೆ! ಈ ವಿರೋಧಾಭಾಸವನ್ನು ಗಮನಿಸಿ! ಅವರ ಅನುಭವದ ಕೊರತೆಯಿಂದಾಗಿ ಪ್ರಾರ್ಥನೆಯನ್ನು ನಿಷಿದ್ಧಗೊಳಿಸಿದ್ದಾರೆ; ಈಗ ಇದು ಅವರ ಅನುಭವಕ್ಕೆ ಬರುತ್ತಿದೆ. `ಇದು ನಮಗೆ ಸಹಕಾರಿಯಾಗದು’. ಹಾಗಿಲ್ಲದಿದ್ದರೆ, ಪ್ರಾರ್ಥನೆಯನ್ನು ಮತ್ತೆ ಜಾರಿಗೊಳಿಸುವುದರಿಂದ ಪ್ರಯೋಜನವೇನು? ಪ್ರಾರ್ಥನೆಯಿಲ್ಲದೆ, ಕೆಲಸಕಾರ್ಯಗಳು ವಿಫಲಗೊಂಡುದನ್ನು ಅವರು ಮನಗಂಡಿದ್ದಾರೆ. ಇದು ಸತ್ಯ.

ವಿದ್ಯಾರ್ಥಿ: ಶೇಕಡ ಐವತ್ತರಿಂದ ಅರವತ್ತರವರೆಗೆ ಸೆನೆಟರುಗಳು, ಕಾಂಗ್ರೆಸ್ಸಿಗರು ವಕೀಲರು.

ಶ್ರೀಲ ಪ್ರಭುಪಾದ: ಹೌದು; ಈಗಿನ ದಿನಗಳಲ್ಲಿ ವಕೀಲ ಎಂದರೆ ಮೋಸಗಾರ ಎಂದರ್ಥ. ಯಾವನು ಕಾನೂನನ್ನು ಜಾಣತನದಿಂದ ಮುರಿಯಬಲ್ಲನೋ ಆತನೆ ಒಳ್ಳೆಯ ಲಾಯರ್‌. ಕಾನೂನಿನಲ್ಲಿ ಲೋಪದೋಷಗಳನ್ನು ಹುಡುಕುತ್ತಾರೆ; ತನ್ಮೂಲಕ ಕಾನೂನಿನ ಹಿಂದಣ ಆಶಯವನ್ನು ಭಗ್ನಗೊಳಿಸುತ್ತಾರೆ.

ವಿದ್ಯಾರ್ಥಿ: ಶಾಲೆಗಳಲ್ಲಿ ಪ್ರಾರ್ಥನೆಯನ್ನು ನಿಷಿದ್ಧಗೊಳಿಸುವುದಕ್ಕೆ ಮೊದಲು ತಿದ್ದುಪಡಿಯ ಇಡೀ ಅಂಶವನ್ನು ಬದಿಗೊತ್ತಿದರು – “ಕಾಂಗ್ರೆಸ್‌, ಧಾರ್ಮಿಕ ಸ್ವಾತಂತ್ರ್ಯವನ್ನು ನಿಷಿದ್ಧಗೊಳಿಸುವ ಯಾವುದೇ ಕಾನೂನನ್ನು ಜಾರಿಗೆ ತರಬಾರದು”. ಒಬ್ಬ ನಾಸ್ತಿಕ ಪ್ರಾರ್ಥನೆ ಮಾಡದಿರಲು ಅವನಿಗಿರುವ ಹಕ್ಕನ್ನು, ಪ್ರಾರ್ಥನೆ ಕಸಿದುಕೊಳ್ಳುತ್ತದೆ ಎಂದು ವಿಪರೀತಾರ್ಥ ಕಲ್ಪಿಸಿದರು.

ಶ್ರೀಲ ಪ್ರಭುಪಾದ: ಹಾಗಾಗಿ, ಈಗ ಶಾಲೆಯಲ್ಲಿ ಮಕ್ಕಳು ಪ್ರಾರ್ಥನೆ ಮಾಡುವಂತಿಲ್ಲ. ಈ ಸರ್ಕಾರಿ ಅಧಿಕಾರಿಗಳಲ್ಲಿ ಬಹುತೇಕ ವಕೀಲರು ಮೋಸಗಾರರು ಇರುತ್ತಾರೆ. ನಿಕ್ಸನ್‌ನಂತೆ. ಈಗ ನಿಕ್ಸನ್‌ನ ಗತಿ ಏನು?

ವಿದ್ಯಾರ್ಥಿ: ಅವನು ಸಾಕಷ್ಟು ಅಪಖ್ಯಾತಿಗೆ ಗುರಿಯಾದ. ಈಗ ಪ್ರಸಿದ್ಧಿಗೆ ಬರುತ್ತಿದ್ದಾನೆ. ಜನರು ಮರೆತುಬಿಡುತ್ತಾರೆ.

ಶ್ರೀಲ ಪ್ರಭುಪಾದ: ಜನರೇ ಮೋಸಗಾರರಾಗುತ್ತಿದ್ದಾರೆ. ಹಾಗಾಗಿ, ಮೋಸಗಾರರನ್ನು ತಮ್ಮ ಪ್ರತಿನಿಧಿಯಾಗಿ ಆಯ್ಕೆ ಮಾಡುತ್ತಾರೆ. ನೀವು ಅಮೆರಿಕನ್ನರು ಎಷ್ಟೇ ಪ್ರಚಾರ ಮಾಡಲಿ ದೇವರ ಪ್ರಾರ್ಥನೆ ಇಲ್ಲದೆ ನೀವು ಸುಖವಾಗಿರಲಾರಿರಿ.

ವಿದ್ಯಾರ್ಥಿ: ಅದು ನಿಜ.

ಶ್ರೀಲ ಪ್ರಭುಪಾದ: ಪ್ರಾರಂಭಕ್ಕೆ ಭಗವನ್ನಿಯಮಕ್ಕೆ ಬದ್ಧರಾಗಿ; ಶುದ್ಧವಾದ ಜೀವನ ಸಾಗಿಸಿ. ಅನೈತಿಕ ಲೈಂಗಿಕ ಸಂಪರ್ಕವನ್ನು ನಿಷಿದ್ಧಗೊಳಿಸಿ, ಮಾಂಸಭಕ್ಷಣವನ್ನು ನಿಷಿದ್ಧಗೊಳಿಸಿ. ಮದ್ಯಪಾನ, ಜೂಜು ಎಲ್ಲವನ್ನು  ತಡೆಯಿರಿ. ನೀವು ಶಾಲೆಗಳಲ್ಲಿ ಮತ್ತೆ ಪ್ರಾರ್ಥನೆಯನ್ನು ಜಾರಿಗೆ ತಂದರೆ, ಕೆಡುಕೇನಿಲ್ಲ; ಆದರೆ ನೀವು ಶುದ್ಧರಾಗದಿದ್ದರೆ, ನಿಮ್ಮ ಪ್ರಾರ್ಥನೆ ನಿಷ್ಪಲ, ಪರಿಣಾಮಕಾರಿಯಾಗದು. ನೀವೇ, ನಿಮ್ಮೆಲ್ಲ ಅಶುದ್ಧ ವ್ಯವಹಾರಗಳನ್ನು ನೀಗಿಸಿಕೊಳ್ಳಬೇಕು. ಅನಂತರ ನಿಮ್ಮಲ್ಲಿಂದಲೆ ಒಬ್ಬ ಒಳ್ಳೆಯ ಮುಖಂಡನನ್ನು ಆಯ್ಕೆ ಮಾಡಬಹುದು. ನಿಮಗೆ ಒಳ್ಳೆಯ ನಾಯಕ ಸಿಗಬೇಕೆಂದಿದ್ದರೆ ಮೊದಲು ನೀವು ಒಳ್ಳೆಯವರಾಗಬೇಕು. ಭಗವಂತನಿಗೆ ಪ್ರಾರ್ಥನೆ ಸಲ್ಲಿಸುವುದರಿಂದ ನೀವು ಒಳ್ಳೆಯವರಾಗಬಹುದು.

ವಿದ್ಯಾರ್ಥಿ: ಕ್ಷಮಿಸಿ; ನೀವು ಹೇಳುವುದನ್ನು ಕೇಳಿದರೆ, ನಾವು ಒಂದು ವಿಷಚಕ್ರದಲ್ಲಿ ಸಿಕ್ಕಿಕೊಂಡಂತಿದೆ. ಕೆಲಹೊತ್ತಿಗೆ ಮುಂಚೆ, ನಾವು ಮೊದಲು ಶುದ್ಧರಾಗಬೇಕು, ಒಳ್ಳೆಯವರಾಗಬೇಕೆಂದು ಹೇಳಿದಿರಿ….. ಇಲ್ಲವಾದಲ್ಲಿ ನಿಮ್ಮ ಪ್ರಾರ್ಥನೆ ಪರಿಣಾಮಕಾರಿ- ಯಾಗುವುದಿಲ್ಲವೆಂದಿರಿ. ನಾವು ಪ್ರಾರ್ಥನೆಯಿಂದ ಒಳ್ಳೆಯವರಾಗುವುದು ಹೇಗೆ?

ಶ್ರೀಲ ಪ್ರಭುಪಾದ: ಯಾವುದೇ ಪ್ರಾರ್ಥನೆಯಲ್ಲ “ಪ್ರಾರ್ಥನೆ” ಎಂದರೆ, ಭಗವನ್ನಾಮ ಪಠಣ. ನೀವು ಕೇವಲ ಹರೇಕೃಷ್ಣ ಎಂದರಷ್ಟೆ ಸಾಕು – ಭಗವಂತನೊಡನೆ ಮುಖಾಮುಖಿಯಾಗುತ್ತೀರಿ. ಸರ್ವೋತ್ತಮನೊಡನೆ – ಅನಂತರ ವಸ್ತುಶಃ ನೀವು ಒಳ್ಳೆಯವರಾಗುತ್ತೀರಿ. ನೀವು ಯಾಕೆ ಪ್ರಯತ್ನಿಸಬಾರದು?

ವಿದ್ಯಾರ್ಥಿ: ನಾವು ಇನ್ನಷ್ಟು ಕಳೆದುಕೊಳ್ಳುತ್ತೇವೆ.

ಶ್ರೀಲ ಪ್ರಭುಪಾದ: ಆದರೆ ನೀವು `ಹರೇಕೃಷ್ಣ’ ನಾಮಪಠಣ ಮಾಡಿದರೆ, ನೀವು ಕಳೆದುಕೊಳ್ಳುವುದೇನೂ ಇಲ್ಲ ಗಳಿಸುತ್ತೀರಿ. ನಾಮೋಚ್ಚಾರ ಮಾಡಿ – ಫಲಿತಾಂಶ ನೋಡಿ.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi