ಆಧುನಿಕ ಯುಗದಲ್ಲಿ ಗೀತೆಯ ಅಗತ್ಯ

– ದರ್ಶನ್ ಕುಮಾರ್

ಆಧುನಿಕ ಯುಗದ ಮನುಷ್ಯ ತನ್ನ ಮಿತಿಗಳನ್ನು ಮೀರಿ, ಭೌತಿಕ ಜಗತ್ತಿನ ಪ್ರತಿಯೊಂದನ್ನೂ ಹುಡುಕಿ ಕಂಡುಕೊಳ್ಳುತ್ತಿದ್ದಾನೆ. ಸಮುದ್ರದ ತಳದಿಂದ ಹಿಡಿದು ಮಂಗಳಗ್ರಹದ ಮಣ್ಣಿನವರೆಗೂ ಆತನಿಗೆ ಎಲ್ಲವೂ ತಿಳಿದಿದೆ. ಇಷ್ಟೆಲ್ಲಾ ತಿಳಿದ ಆತನಿಗೆ ತನ್ನ ಅಂತರಂಗವೊಂದು ದೂರದ ಬೆಟ್ಟವಷ್ಟೇ.

ಇದು ನಮ್ಮೆಲ್ಲರ ದೈನಂದಿನ ಬದುಕಿನ ವಾಸ್ತವ. ನಾವು ನಮ್ಮ ಹೊರಗಿನ ಎಲ್ಲವನ್ನೂ ಅಚ್ಚುಕಟ್ಟಾಗಿ ಇಟ್ಟುಕೊಳ್ಳುವ ಭರದಲ್ಲಿ, ನಮ್ಮ ಅಂತರಂಗವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದೇವೆ.

ಭಗವದ್ಗೀತೆಯು, ಭೌತಿಕ ಜಗತ್ತಿನಲ್ಲಿ ಮನುಷ್ಯನ ಸ್ಥಿತಿ ಪಂಜರವನ್ನು ಸ್ವಚ್ಛ ಮಾಡುತ್ತಾ, ಒಳಗಿರುವ ಹಕ್ಕಿಗೆ ಆಹಾರ ನೀಡಲು ಮರೆತಂತಿದೆ ಎನ್ನುವ ಆಶಯವನ್ನು ನಮ್ಮ ಮುಂದಿಡುತ್ತದೆ. ಆಧುನಿಕ ಬದುಕು ನಿಖರವಾಗಿ ಇದೇ ಹಾದಿಯಲ್ಲಿದೆ. ಇಲ್ಲಿಗೊಂದು ಪ್ರಶ್ನೆ ಬರುತ್ತದೆ. ಹಾಗಾದರೆ ನಮ್ಮನ್ನು ನಾವು ಕಂಡುಕೊಳ್ಳುವುದು ಹೇಗೆ?

ಭಗವದ್ಗೀತೆ ಬರಿಯ, ಧಾರ್ಮಿಕ ಗ್ರಂಥವಲ್ಲ, ಅದು ಮನುಷ್ಯ ತನ್ನ ಅಂತರಂಗದ ಜೊತೆಗೆ ಎಲ್ಲವನ್ನೂ ಹೇಗೆ ಕಂಡುಕೊಳ್ಳಬೇಕು ಎಂದು ಹೇಳಿಕೊಡುವ ಒಂದು ನಿಖರವಾದ ಕೈಪಿಡಿ. ಬದುಕಿನ ಎಲ್ಲಾ ಮಗ್ಗಲುಗಳ ಪ್ರಶ್ನೆಗಳಿಗೂ, ನಮ್ಮ ದಿನನಿತ್ಯದ ತೊಳಲಾಟಗಳಿಗೂ ಅಲ್ಲಿ ನೇರ ಉತ್ತರವಿದೆ.

ಭಗವದ್ಗೀತೆ ಇಂದಿಗೂ ಪ್ರಸ್ತುತ ಎನ್ನುವುದು ಸೂರ್ಯ ಪೂರ್ವದಲ್ಲಿ ಉದಯಿಸಿದಷ್ಟೇ ಸತ್ಯ. ಇದು ನಿನ್ನೆ ಮೊನ್ನೆ ಹುಟ್ಟಿದ ತತ್ತ್ವವಲ್ಲ. ಸೂರ್ಯನಿಗೆ ಗೀತೆಯನ್ನು ಮೊದಲು ಬೋಧಿಸಲಾಯಿತು ಎಂದು ಕೃಷ್ಣನೇ ಹೇಳುತ್ತಾನೆ. ಆದರೂ, ಇಂದಿನ ಜನರು ನಾಳಿನ ಆಸೆಯ ಜಿದ್ದಿಗೆ, ಭೌತಿಕ ಸ್ಪರ್ಧೆಗೆ ಒಗ್ಗಿಕೊಳ್ಳಲು ಶುರುವಿಟ್ಟು,  ಸತ್ಯವನ್ನು ತಿಳಿದೂ ಒಪ್ಪಿಕೊಳ್ಳದಿರುವುದೇ ದೊಡ್ಡ ವಿಪರ್ಯಾಸ.

ನಾಳೆ ಚೆನ್ನಾಗಿರುತ್ತದೆ, ನಾಳೆ ನನಗೆ ನೆಮ್ಮದಿ ಸಿಗುತ್ತದೆ ಎಂಬ ಭ್ರಮೆಯಲ್ಲೇ ಇಂದಿನ ಅಸ್ತಿತ್ವವನ್ನು ಕಳೆದುಕೊಳ್ಳುತ್ತಿದ್ದೇವೆ.

ಇಂದಿನ ಜನರ ಮಾನಸಿಕ ತೊಳಲಾಟಗಳನ್ನು ಒಮ್ಮೆ ಗಮನಿಸಿ. ಯಾರಿಗೂ ನೆಮ್ಮದಿ ಇಲ್ಲ. ಎಲ್ಲರಲ್ಲೂ ಒಂದು ರೀತಿಯ ಅಸ್ಪಷ್ಟವಾದ ಆತಂಕ. ಈ ತೊಳಲಾಟಗಳಿಂದ ಮುಕ್ತರಾಗಿ ಎದ್ದು ಬರಲು ಇರುವ ಹೂ-ಮೆಟ್ಟಿಲುಗಳೇ ಕರ್ಮಯೋಗ ಮತ್ತು ಭಕ್ತಿಯೋಗಗಳು. ಮನುಷ್ಯ ತನ್ನ ಪ್ರಜ್ಞೆಯ ಮಟ್ಟಕ್ಕೆ ತಕ್ಕಂತೆ ಕರ್ಮಯೋಗದಿಂದ ಶುರುಮಾಡಿ ಭಕ್ತಿಯೋಗದವರೆಗೆ ಏರಬೇಕು.

ಇಲ್ಲಿಂದ ಇನ್ನಷ್ಟು ಸಾವಿರ ವರ್ಷಗಳು ಕಳೆದರೂ, ತಂತ್ರಜ್ಞಾನ ಎಷ್ಟೇ ಬೆಳೆದರೂ, ಮನುಷ್ಯನ ಮನಸ್ಸು ದಾಟಬೇಕಾದ ಹಂತಗಳು ಇವೇ. ಏಕೆಂದರೆ ಮನುಷ್ಯನ ಯಂತ್ರಗಳು ಬದಲಾಗಿರಬಹುದೇ ಹೊರತು, ಅವನ ಒಳಗಿನ ಕಾಮ, ಕ್ರೋಧ, ಲೋಭಗಳು ಬದಲಾಗಿಲ್ಲ.

ಜನನ ಮರಣಗಳ ಚಕ್ರಗಳಿಂದ ಮುಕ್ತಿ

ಬದುಕಿನಲ್ಲಿ ನಾವು ಎಲ್ಲಿಂದ ಹೊರಟರೂ, ಎಷ್ಟೇ ಸಾಧನೆ ಮಾಡಿದರೂ ‘ಸಾವು’ ಎನ್ನುವ ಬಿಕ್ಕಟ್ಟು ನಮ್ಮನ್ನು ಸದಾ ಕಾಡುತ್ತಲೇ ಇರುತ್ತದೆ. ನಾವು ಸಾವನ್ನು ಮರೆಯಲು ಎಷ್ಟೇ ಪ್ರಯತ್ನಿಸಿದರೂ ಅದು ಅನಿವಾರ್ಯ. ಜನನ-ಮರಣಗಳ ಚಕ್ರದಿಂದ ಮುಕ್ತಿ ಹೊಂದುವುದೇ ಮಾನವ-ಜನ್ಮದ ಮೂಲ ಉದ್ದೇಶ. ಆ ಬಗೆಯ ಭೌತಿಕ ಬಿಕ್ಕಟ್ಟಿನ ಪರಿಧಿಗೆ ಬೀಳುವುದನ್ನು ಭಗವದ್ಗೀತೆ ಅಕ್ಷರಶಃ ತಪ್ಪಿಸುತ್ತದೆ.

ನಮ್ಮ ಸುತ್ತಲಿನ ಸಮಾಜವನ್ನು ನೋಡಿ. ರೋಗಿಯೊಬ್ಬ ಆಸ್ಪತ್ರೆಯ ಹಾಸಿಗೆಯ ಮೇಲೆ ಬದುಕಲು ಒದ್ದಾಡಿದರೆ, ಇನ್ನೊಂದೆಡೆ ದೈಹಿಕವಾಗಿ ಆರೋಗ್ಯವಾಗಿರುವ, ಖಿನ್ನನಾದ ಸಿರಿವಂತನೊಬ್ಬ ತಾನಾಗಿಯೇ ದೇಹ ಬಿಡಲು ತಡಕಾಡುತ್ತಾನೆ. ಇಬ್ಬರ ಸಮಸ್ಯೆಯೂ ಒಂದೇ- ‘ನಾನು ಅಂದರೆ ಈ ದೇಹ’ ಎಂಬ ಭ್ರಮೆ. ದೇಹವನ್ನು ಉಳಿಸಿಕೊಳ್ಳುವುದರಲ್ಲೇ ಸುಖವಿದೆ ಎಂದು ರೋಗಿ ನಂಬಿದ್ದರೆ, ದೇಹವನ್ನು ನಾಶಮಾಡಿದರೆ ತನ್ನ ಒಳಗಿನ ನೋವು ನಿಲ್ಲುತ್ತದೆ ಎಂದು ಖಿನ್ನನಾದ ವ್ಯಕ್ತಿ ನಂಬಿದ್ದಾನೆ. 

ನಾವು ಕೇವಲ ಈ ದೇಹವಲ್ಲ, ಒಳಗಿರುವ ಚೇತನ. ರೋಗ, ಮುಪ್ಪು, ಸಾವು ದೇಹಕ್ಕೇ ಹೊರತು ನಮಗಲ್ಲ ಎಂಬ ಎಚ್ಚರ ಬಂದಾಗ, ಇವೆಲ್ಲವನ್ನೂ ಮೀರಿದ ಹಂತವಾದ ‘ಮುಕ್ತಿ’ ಅಥವಾ ಸಾಕ್ಷಾತ್ಕಾರದ ಕಡೆಗೆ ನಮ್ಮ ಪಯಣ ಶುರುವಾಗುತ್ತದೆ. ಮನುಷ್ಯನು ಹತಾಶೆಯ ಮಗ್ಗಲು ಬದಲಿಸಿ ಭಗವದ್ಗೀತೆಯನ್ನು ಕೈಗೆತ್ತಿಕೊಳ್ಳಬೇಕು. ಅದರ ಪ್ರತಿ ಪುಟದಲ್ಲಿಯೂ ಆತನಿಗೆ ತನ್ನದೇ ಪ್ರತಿಬಿಂಬ ಸಿಗುತ್ತದೆ.

ಭಗವದ್ಗೀತೆ ಹೇಗೆ ಕೆಲಸ ಮಾಡುತ್ತದೆ ಎಂಬುವುದಕ್ಕೆ ಸಣ್ಣ ಉದಾಹರಣೆ. ನಗುಮುಖದ ಕಿಸುಕಂದನೊಬ್ಬ ಆಟಿಕೆಯ ಅಂಗಡಿಗೆ ಹೋಗಿ, ಆಟಿಕೆ ಬೇಕೆಂದು ಹಠಮಾಡಿ ಪಡೆದುಕೊಳ್ಳುತ್ತಾನೆ. ಆದರೆ ಮನೆಗೆ ಬಂದ ಮೇಲೆ ಅದನ್ನು ಆಡಲು ಬಾರದೆ ಭ್ರಾಂತಿಗೊಳಪಡುತ್ತಾನೆ. ಅಳುತ್ತಾನೆ. ಆಗ ಆ ಆಟಿಕೆಯ ಜೊತೆಗೆ ಇರುವ, ‘ಇದನ್ನು ಹೇಗೆ ಬಳಸಬೇಕು’ ಎಂಬ ವಿಧಾನ-ಕಾಗದ  ಸಹಾಯಕ್ಕೆ ಬರುತ್ತದೆ.

ನಾವು ಭೌತಿಕ ಜಗತ್ತೆಂಬ ಆಟಿಕೆಯ ಅಂಗಡಿಗೆ ಬಂದು ಹಠಮಾಡಿ ಈ ದೇಹವನ್ನು, ಈ ಬದುಕನ್ನು ಪಡೆದುಕೊಂಡಿದ್ದೇವೆ. ಆದರೆ ಅದನ್ನು ಹೇಗೆ ಬಳಸಬೇಕು ಎಂಬ ಅರಿವಿಲ್ಲದೆ ಹತಾಶರಾಗುತ್ತಿದ್ದೇವೆ. ನವಯುಗಕ್ಕೆ ಆ ವಿಧಾನ-ಕಾಗದವೇ ಭಗವದ್ಗೀತೆ. ಕೃಷ್ಣನೇ ಕೊಟ್ಟಿರುವ ಅಧಿಕೃತ ಕೈಪಿಡಿ.

ಸೋಲಿನ ದುಗುಡ

ಇಂದಿನ ಯುವಜನತೆಯನ್ನು ಕಾಡುತ್ತಿರುವ ಅತಿದೊಡ್ಡ ಸಮಸ್ಯೆ ಎಂದರೆ ಸೋಲಿನ ದುಗುಡ. ಪರೀಕ್ಷೆಯಿರಲಿ, ಉದ್ಯೋಗವಿರಲಿ, ಫಲಿತಾಂಶದ ಬಗೆಗಿನ ಆತಂಕವೇ ನಮ್ಮ ನಿದ್ದೆ ಕಸಿದಿದೆ. “ನಿನ್ನ ಕರ್ಮದ ಮೇಲಷ್ಟೇ ನಿನಗೆ ಅಧಿಕಾರ, ಫಲದ ಮೇಲಲ್ಲ” ಎನ್ನುತ್ತದೆ ಗೀತೆ (ಕರ್ಮಣ್ಯೇವಾಧಿಕಾರಸ್ತೇ). ನಿನ್ನ ಕಾರ್ಯಗತಿ ಮತ್ತು ಅದರ ಮೇಲಿನ ನಿನ್ನ ಶ್ರದ್ಧೆಯನ್ನಷ್ಟೇ ನಿನ್ನ ಮನಸಿಗೆ ತೆಗೆದುಕೋ, ಫಲವನ್ನು ನನಗೆ ಕೊಡು ಎಂದು ಕೃಷ್ಣ ಹೇಳುತ್ತಾನೆ.

ಫಲದ ಮೇಲೆ ನಿನಗೆ ಹಕ್ಕಿಲ್ಲವೆಂದು ಗೀತೆ ಹೇಳಿದಾಗ, ನಾವು ನಿರಾಶರಾಗಬೇಕಿಲ್ಲ. ಬದಲಾಗಿ ನಿರಾಳರಾಗಬೇಕು. ಹಾಗಿದ್ದಮೇಲೆ ಸೋಲಿನ ಭಯವೇತಕೆ? ನೀನು ಮಾಡುವ ಕೆಲಸದ ಫಲಿತಾಂಶ ಕೇವಲ ನಿನ್ನ ಕೈಯಲ್ಲಿಲ್ಲ. ಕಾರ್ಯಸ್ಥಾನ, ಕರ್ತೃ, ಸಲಕರಣೆಗಳು ಮತ್ತು ಪ್ರಯತ್ನ.  ನಿನ್ನ ಪರಿಶ್ರಮ ಕೇವಲ ಒಂದು ಭಾಗವಷ್ಟೇ. ನಿನ್ನ ಸೋಲು ಗೆಲುವು ನೀ ಮಾಡಿದ ಹಿಂದಿನ ಕರ್ಮದ ಫಲವೂ ಆಗಿರುತ್ತದೆ.

ಎಲ್ಲವೂ ನಿನ್ನ ನಿಯಂತ್ರಣದಲ್ಲಿಲ್ಲ, ಪರಮಾತ್ಮನ ಒಪ್ಪಿಗೆಯೂ ಬೇಕು ಎಂದು ಅರ್ಥವಾದಾಗ ಸೋಲಿನ ಬಗ್ಗೆ ಖಿನ್ನತೆ ಕಾಡುವುದಿಲ್ಲ. ಬದುಕಿನ ಎಲ್ಲಾ ಹಂತಗಳನ್ನೂ ದಾಟಿ ನಿಂತಾಗ, ತಾನು ಅಂದುಕೊಂಡಂತೆ ಯಾವುದೂ ನಡೆಯುತ್ತಿಲ್ಲ ಎಂದು ಗೊತ್ತಾದಾಗ ಮನುಷ್ಯ ಹತಾಶನಾಗುತ್ತಾನೆ. ಅಸಹಾಯಕನಾಗುತ್ತಾನೆ.

ಆ ಸಂದಿಗ್ಧತೆಯಲ್ಲಿ ಎಲ್ಲಿ ಆಸರೆ ಹುಡುಕಬೇಕು ಎಂದು ತಿಳಿಯದೆ ನಿಲ್ಲುತ್ತಾನೆ. ಅರ್ಜುನನಿಗೆ ಇದೇ ಸ್ಥಿತಿ ಬಂದಿತ್ತಲ್ಲ? ಆತ ಸಾಮಾನ್ಯನಲ್ಲ, ಶ್ರೇಷ್ಠ ಬಿಲ್ಗಾರ. ಆದರೆ ಕುರುಕ್ಷೇತ್ರದಲ್ಲಿ ಆಪ್ತರನ್ನು ಎದುರುಬದುರು ನೋಡಿದಾಗ ಆತನ ಕೈಕಾಲುಗಳು ನಡುಗಿದವು.

ಅರ್ಜುನ ಆ ಬಗೆಯ ಹತಾಶೆಗೆ ಒಳಪಟ್ಟಾಗಲೇ ಕೃಷ್ಣ ಗೀತೆಯನ್ನು ಬೋಧಿಸಿದ್ದು. ನಮ್ಮ ಬದುಕಿನಲ್ಲೂ ಎದುರಾಗುವ ಇಂತಹ ದಿಗ್ಭ್ರಮೆಯ ಕ್ಷಣಗಳಲ್ಲಿ, ಭಗವದ್ಗೀತೆಯ ಒಂದು ಸಣ್ಣ ಸ್ಪರ್ಶವೂ ನಮ್ಮ ಕರ್ಮ ನಿವಾರಣೆಯ ಮೊದಲ ಹೆಜ್ಜೆಯನ್ನಿಡಲು ಸಹಾಯ ಮಾಡುತ್ತದೆ. ಕೃಷ್ಣನಿಗೆ ಶರಣಾಗುವುದು ದೌರ್ಬಲ್ಯವಲ್ಲ, ಅದು ಅರಿವಿನ ಆರಂಭ.

ಅರ್ಜುನನು ಗೀತೆಯನ್ನು ಆಲಿಸುವಾಗಲೂ ಅಲ್ಲಿ ಯುದ್ಧ ನಡೆಯುವ ಸಿದ್ಧತೆಯಲ್ಲಿತ್ತು. ಆ ಕ್ಷಣದಲ್ಲಿ ಆತ ದಿಗ್ಭ್ರಮೆಗೊಳಗಾಗುತ್ತಾನೆ. ಆಗ ನಡೆದ ಯುದ್ಧ ಒಂದು ಧರ್ಮಕ್ಷೇತ್ರದಲ್ಲಿ, ಧರ್ಮದ ಸ್ಥಾಪನೆಗಾಗಿ ನಡೆದಿತ್ತು. ಆದರೆ ಈಗಿನ ಕಾಲದಲ್ಲಿ ಯುದ್ಧಗಳು ಗಡಿವಿಸ್ತರಣೆಗಾಗಿ, ಸಂಪತ್ತಿಗಾಗಿ, ಕೇವಲ ಅಹಂಕಾರದ ತೃಪ್ತಿಗಾಗಿ ನಡೆಯುತ್ತಿವೆ. ಈ ಗೊಂದಲಗಳು ಬರುತ್ತವೆ ಎಂದು ಕೃಷ್ಣನಿಗೆ ಮೊದಲೇ ತಿಳಿದಿತ್ತು. ಈಗಿನ ಪ್ರಸ್ತುತತೆಯನ್ನು ಗೀತೆ ಆಗಲೇ ಬರೆಸಿಕೊಂಡಿತ್ತು.

ಮನುಷ್ಯನು ಎಲ್ಲವನ್ನೂ ಆಳಬೇಕೆಂಬ ಒತ್ತಾಸೆಯಲ್ಲಿ, ತಾನೇ ಈ ಜಗತ್ತಿನ ನಿಯಂತ್ರಕ ಎಂಬ ಭ್ರಮೆಯಲ್ಲಿ ಇರುವುದರಿಂದ ಯುದ್ಧಗಳು ನಡೆಯುತ್ತಿವೆ. ಅಣ್ಣತಮ್ಮಂದಿರ ನಡುವಿನ ಆಸ್ತಿ ಜಗಳದಿಂದ ಹಿಡಿದು, ರಾಷ್ಟ್ರಗಳ ನಡುವಿನ ಬಾಂಬ್ ದಾಳಿಯವರೆಗೆ ಎಲ್ಲದರ ಮೂಲವೂ ಈ ‘ನಾನು ಮತ್ತು ನನ್ನದು’ ಎಂಬ ಅಜ್ಞಾನವೆ ಆಗಿದೆ.

ಭಗವದ್ಗೀತೆಯಲ್ಲಿ ಕೃಷ್ಣ ಸ್ಪಷ್ಟಪಡಿಸುತ್ತಾನೆ.  ಈ ಎಲ್ಲಾ ಲೋಕಗಳ ಒಡೆಯ ನಾನು, ಎಲ್ಲವನ್ನೂ ಆನಂದಿಸುವವನೂ ನಾನೇ. ಸಕಲವೂ ಭಗವಂತ ಕೃಷ್ಣನದಾದ ಮೇಲೆ, ನಾವು ಕೇವಲ ನಿಮಿತ್ತ ಮಾತ್ರರಾದ ಮೇಲೆ, ಇಲ್ಲಿ ಯಾರು ಏನು ಗೆದ್ದರೇನು, ಬಿಟ್ಟರೇನು? ನಾವೇ ತಂದಿಲ್ಲದಿರುವಾಗ, ಯಾವುದನ್ನು ಕಳೆದುಕೊಳ್ಳುವ ಭಯ ನಮಗಿರಬೇಕು? ಈ ಸತ್ಯ ಅರ್ಥವಾದರೆ ವೈಯಕ್ತಿಕ ಬದುಕಿನ ಘರ್ಷಣೆಗಳಾಗಲೀ, ಜಾಗತಿಕ ಯುದ್ಧಗಳಾಗಲೀ ತಾವಾಗಿಯೇ ತಣ್ಣಗಾಗುತ್ತವೆ.

ಅಸಲು, ಆಧುನಿಕ ಯುಗವು ಭಗವದ್ಗೀತೆಯ ಸಾರವನ್ನು ಅರಿಯಲು ಅದೆಷ್ಟು ಕಾಲ ಬೇಕೋ ಯಾರಿಗೂ ಗೊತ್ತಿಲ್ಲ. ನಾವು ತಂತ್ರಜ್ಞಾನದಲ್ಲಿ ಮುಂದೆ ಹೋಗಬಹುದು, ಆದರೆ ಅಂತರಂಗದ ಪ್ರಯಾಣದಲ್ಲಿ ಇನ್ನೂ ಮೊದಲ ಹೆಜ್ಜೆಯಲ್ಲೇ ಇದ್ದೇವೆ. ಆದರೆ ನಿರಾಶೆಯಾಗಬೇಕಿಲ್ಲ. ಹದಿನೈದನೇ ಅಧ್ಯಾಯದಲ್ಲಿ ಕೃಷ್ಣ ಹೇಳಿದಂತೆ, ನಾನು ಎಲ್ಲರ ಹೃದಯದಲ್ಲೂ ನೆಲೆಸಿದ್ದೇನೆ.

ಗೀತೆ ಒಂದು ಪುಸ್ತಕವಾಗಿ ಹೊರಗಿಲ್ಲ, ಅದು ಈಗಾಗಲೇ ಪ್ರತಿಯೊಬ್ಬರ ಅಂತರಂಗದಲ್ಲೂ ಪರಮಾತ್ಮನ ರೂಪದಲ್ಲಿ ಇದೆ. ನಾವು ಮಾಡಬೇಕಿರುವುದು ಇಷ್ಟೇ: ಹೊರಗಿನ ಶಬ್ದಗಳನ್ನು ಸ್ವಲ್ಪ ಕಡಿಮೆ ಮಾಡಿ, ಹಾತೊರೆದು ಆ ಧ್ವನಿಯನ್ನು ಆಲಿಸಬೇಕು. ಆಲಿಸಲು ಶುರುಮಾಡಿದ ಮರುಕ್ಷಣವೇ ಕುರುಕ್ಷೇತ್ರದ ಗೊಂದಲ ತಗ್ಗಿ, ಒಳಗೊಂದು ಸ್ಪಷ್ಟವಾದ ದಾರಿ ತೆರೆದುಕೊಳ್ಳುತ್ತದೆ.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi