ಗರಿಗರಿಯಾದ ವಡೆಗಳು

ದಕ್ಷಿಣ ಭಾರತದ ಸಾಂಪ್ರದಾಯಿಕ ಹಾಗೂ ರುಚಿಕರ ತಿನಿಸುಗಳಲ್ಲಿ ವಡೆಯೂ ಒಂದು. ವಡೆ ತಯಾರಿಸಲು ಹೆಚ್ಚು ಸಾಮಗ್ರಿಗಳೇನು ಬೇಕಿಲ್ಲ, ಆದರೆ ಸ್ವಲ್ಪ ಮಟ್ಟಿನ ಶ್ರಮ ಹಾಗೂ ಸಮಯ ಬೇಕು. ಹೀಗೆ ಅನೇಕ ಬಗೆಯ ವಡೆಗಳನ್ನು ತಯಾರಿಸಿ ಸವಿಯಬಹುದು. ಈ ಎಲ್ಲವನ್ನು ಶ್ರದ್ಧೆಯಿಂದ ತಯಾರಿಸಿ ಶ್ರೀರಾಧಾಕೃಷ್ಣರಿಗೆ ಅರ್ಪಿಸಿ ಮನೆಯವರೊಂದಿಗೆ ಸೇವಿಸಿ.

ಮೆಂತೆ ಸೊಪ್ಪಿನ ವಡೆ

ಬೇಕಾಗುವ ಪದಾರ್ಥಗಳು :

ಮೆಂತೆ ಸೊಪ್ಪು – 2 ಕಟ್ಟು

ಕಡಲೆ ಹಿಟ್ಟು – 1 ಕಪ್‌

ಆಲೂಗಡ್ಡೆ – 2

ಹಸಿಮೆಣಸಿನಕಾಯಿ – 5

ಕೊತ್ತಂಬರಿ ಸೊಪ್ಪು – ಸ್ವಲ್ಪ

ಜೀರಿಗೆ ಪುಡಿ -1/2 ಚಮಚ

ಅಚ್ಚ ಖಾರದ ಪುಡಿ – 1 ಚಮಚ

ಕರಿಬೇವು – 2 ಎಸಳು

ಇಂಗು – 2 ಚಿಟಿಕೆ

ಅಡಿಗೆ ಸೋಡಾ – 2 ಚಿಟಿಕೆ

ಉಪ್ಪು – ರುಚಿಗೆ ತಕ್ಕಷ್ಟು

ಎಣ್ಣೆ – ಕರಿಯಲು

ಮಾಡುವ ವಿಧಾನ: ಮೆಂತೆ ಸೊಪ್ಪು ಮತ್ತು ಆಲೂಗಡ್ಡೆಯನ್ನು ತೊಳೆದು ಸಣ್ಣಗೆ ಹೆಚ್ಚಿ ಪಾತ್ರೆಯಲ್ಲಿ ಒಂದು ಕಪ್‌ ನೀರು ಸ್ವಲ್ಪ ಉಪ್ಪು ಹಾಕಿ ಸಣ್ಣ ಉರಿಯಲ್ಲಿ ಒಲೆಯ ಮೇಲೆ ಇಟ್ಟು ಐದು ನಿಮಿಷ ಬೇಯಿಸಿ. ಅನಂತರ ಹಸಿಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು, ಕರಿಬೇವನ್ನು ಸಣ್ಣದಾಗಿ ಹೆಚ್ಚಿಕೊಂಡು ಅದಕ್ಕೆ ಕಡಲೆ ಹಿಟ್ಟು, ಇಂಗು, ಜೀರಿಗೆ ಪುಡಿ, ಬೇಯಿಸಿದ ಮೆಂತೆಸೊಪ್ಪು, ಆಲೂಗಡ್ಡೆ, ಅಚ್ಚ ಖಾರದ ಪುಡಿ, ಅಡಿಗೆ ಸೋಡಾ ಮತ್ತು ಸ್ವಲ್ಪ ನೀರು ಸೇರಿಸಿ ಚೆನ್ನಾಗಿ ಕಲಸಿ. ಇದನ್ನು ಸಣ್ಣ ಸಣ್ಣ ಉಂಡೆಗಳಾಗಿ ಮಾಡಿ ಅನಂತರ ಅಗಲವಾಗಿ ತಟ್ಟಿ ಕಾದ ಎಣ್ಣೆಯಲ್ಲಿ ಕರಿದರೆ ಬಿಸಿ ಬಿಸಿಯಾದ ಮೆಂತೆಸೊಪ್ಪಿನ ವಡೆ ಸವಿಯಲು ಸಿದ್ಧ.

ಮದ್ದೂರು ವಡೆ

ಬೇಕಾಗುವ ಪದಾರ್ಥಗಳು :

ಚಿರೋಟಿ ರವೆ – 2 ಕಪ್‌

ಅಕ್ಕಿ ಹಿಟ್ಟು – 1/2 ಕಪ್‌

ಮೈದಾ – 1/2 ಕಪ್‌

ತೆಂಗಿನ ತುರಿ – 1/2 ಕಪ್‌

ಹಸಿಮೆಣಸಿನಕಾಯಿ – 6

ಶುಂಠಿ – ಸ್ವಲ್ಪ

ಕರಿಬೇವು – 2 ಎಸಳು

ಕೊತ್ತಂಬರಿ ಸೊಪ್ಪು – ಸ್ವಲ್ಪ

ತುಪ್ಪ – 3 ಚಮಚ

ಉಪ್ಪು – ರುಚಿಗೆ ತಕ್ಕಷ್ಟು

ಎಣ್ಣೆ – ಕರಿಯಲು

ಮಾಡುವ ವಿಧಾನ : ಮೊದಲು ಚಿರೋಟಿ ರವೆಯನ್ನು ಸ್ವಲ್ಪ ಪರಿಮಳ ಬರುವವರೆಗೂ ಹುರಿಯಿರಿ. ಆರಿದ ಅನಂತರ ಇದಕ್ಕೆ ಮೈದಾ, ಅಕ್ಕಿಹಿಟ್ಟು, ತುಪ್ಪ, ಉಪ್ಪು, ಸಣ್ಣದಾಗಿ ಕತ್ತರಿಸಿದ ಶುಂಠಿ, ಕೊತ್ತಂಬರಿ ಸೊಪ್ಪು, ಕರಿಬೇವು, ಹಸಿಮೆಣಸಿನಕಾಯಿ, ತೆಂಗಿನ ತುರಿ ಹಾಕಿ ಸ್ವಲ್ಪ ನೀರನ್ನು ಸೇರಿಸಿ ಗಟ್ಟಿಯಾಗಿ ಕಲಸಿಕೊಳ್ಳಿ. ಇದನ್ನು ಅಗಲವಾಗಿ ತಟ್ಟಿ ಕಾದ ಎಣ್ಣೆಯಲ್ಲಿ ಸ್ವಲ್ಪ ಕೆಂಪಗಾಗುವ ತನಕ ಕರಿದರೆ ಮದ್ದೂರು ವಡೆ ಸವಿಯಲು ಸಿದ್ಧ. ಇದು ತೆಂಗಿನಕಾಯಿ ಚಟ್ನಿಯೊಂದಿಗೆ ತಿನ್ನಲು ತುಂಬ ರುಚಿಯಾಗಿರುತ್ತದೆ.

ಹಿದುಕಿದ ಅವರೆಕಾಳು ವಡೆ

ಬೇಕಾಗುವ ಪದಾರ್ಥಗಳು :

ಹಿದುಕಿದ ಅವರೆಕಾಳು – 2 ಕಪ್‌

ಕಡ್ಲೆ  ಹಿಟ್ಟು – 4 ಚಮಚ

ತೆಂಗಿನ ತುರಿ – 1/2 ಕಪ್‌

ಹಸಿ ಮೆಣಸಿನಕಾಯಿ – 6

ಕೊತ್ತಂಬರಿ ಸೊಪ್ಪು – ಸ್ವಲ್ಪ

ಹಿಂಗು – 1 ಚಿಟಿಕೆ

ಉಪ್ಪು – ರುಚಿಗೆ ತಕ್ಕಷ್ಟು

ಎಣ್ಣೆ – ಕರಿಯಲು

ಮಾಡುವ ವಿಧಾನ : ಹಿದುಕಿದ ಅವರೆಕಾಳನ್ನು ಮಿಕ್ಸಿಯಲ್ಲಿ ತರಿ ತರಿಯಾಗಿ ರುಬ್ಬಿಕೊಳ್ಳಿ. ಇದಕ್ಕೆ ಕಡ್ಲೆ ಹಿಟ್ಟು, ತೆಂಗಿನತುರಿ, ಸಣ್ಣಗೆ ಹೆಚ್ಚಿದ ಹಸಿಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು, ಹಿಂಗು, ಉಪ್ಪು ಎಲ್ಲವನ್ನು ಸೇರಿಸಿ ಸ್ವಲ್ಪ ನೀರು ಹಾಕಿ ಕಲಸಿ. ಇದನ್ನು ವಡೆಯಾಕಾರದಲ್ಲಿ ತಟ್ಟಿ ಕಾದ ಎಣ್ಣೆಯಲ್ಲಿ ಕರಿದರೆ ರುಚಿಯಾದ ಹಿದುಕಿದ ಅವರೆಕಾಳು ವಡೆ ತಿನ್ನಲು ಸಿದ್ಧ.

ಮಸಾಲೆ ವಡೆ

ಬೇಕಾಗುವ ಪದಾರ್ಥಗಳು :

ಕಡ್ಲೆಬೇಳೆ – 3 ಕಪ್‌

ಹಸಿಮೆಣಸಿನಕಾಯಿ – 8

ಹಸಿ ತೆಂಗಿನ ತುರಿ – 1 ಕಪ್‌

ಕೊತ್ತಂಬರಿ ಸೊಪ್ಪು – 1/4 ಕಟ್ಟು

ಪುದೀನಾ – 1/4 ಕಟ್ಟು

ಕರಿಬೇವು – 2 ಎಸಳು

ಶುಂಠಿ – 1/2 ಇಂಚು

ಉಪ್ಪು – ರುಚಿಗೆ ತಕ್ಕಷ್ಟು

ಎಣ್ಣೆ – ಕರಿಯಲು

ಮಾಡುವ ವಿಧಾನ: ಮೊದಲು ಕಡ್ಲೆಬೇಳೆಯನ್ನು ನೀರಿನಲ್ಲಿ ಚೆನ್ನಾಗಿ ತೊಳೆದು ನಾಲ್ಕು ಗಂಟೆಗಳ ಕಾಲ ನೆನೆಸಿ. ಚೆನ್ನಾಗಿ ನೆಂದ ಬಳಿಕ ಇದಕ್ಕೆ ಹಸಿಮೆಣಸಿನಕಾಯಿ, ತೆಂಗಿನತುರಿ, ಶುಂಠಿ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ತರಿ ತರಿಯಾಗಿ ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ. ರುಬ್ಬಿದ ಮಿಶ್ರಣಕ್ಕೆ ಸಣ್ಣಗೆ ಕತ್ತರಿಸಿದ ಕೊತ್ತಂಬರಿ ಸೊಪ್ಪು, ಪುದೀನ, ಕರಿಬೇವು ಹಾಕಿ ಚೆನ್ನಾಗಿ ಮಿಕ್ಸ್‌ ಮಾಡಿ, ಕಾದ ಎಣ್ಣೆಯಲ್ಲಿ ಹಾಕಿ ಕರಿದರೆ ಬಿಸಿ ಬಿಸಿಯಾದ ಕಡ್ಲೆಬೇಳೆ ವಡೆ ತಿನ್ನಲು ಸಿದ್ಧ.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi