ದೇಹವನ್ನು ಪೋಷಿಸಲು ಆಹಾರ ಅತ್ಯಗತ್ಯ. ಬಗೆ ಬಗೆಯಾದ ಸಸ್ಯಹಾರಿ ಭಕ್ಷ್ಯಗಳನ್ನು ತಯಾರಿಸಿ ಭಗವಂತನಿಗೆ ನೈವೇದ್ಯ ಮಾಡಿ ಸೇವಿಸುವುದರಿಂದ ದೇಹದ ಪೋಷಣೆಯೂ ಆಗುತ್ತದೆ ಮತ್ತು ಕೃಷ್ಣನ ಹತ್ತಿರಕ್ಕೆ ನಾವು ಹೋಗುತ್ತೇವೆ. ಇದು ಭಕ್ತಿಯೋಗದ ವಿಶೇಷತೆ. ಸವೆನ್ ಕಪ್ಸ್, ಆಂಬೊಡೆ, ಅವಲಕ್ಕಿ ಬಿಸಿಬೇಳೆ ಬಾತು, ಅಲಸಂದೆ ರೊಟ್ಟಿ ತಯಾರಿಯ ವಿವರ ಇಲ್ಲಿದೆ.
ಸವೆನ್ ಕಪ್ಸ್
ಈ ಸಿಹಿತಿಂಡಿಯ ವಿಶೇಷ ಏನಪ್ಪಾ ಅಂದರೆ, ಕೊಬ್ಬಿನ ಅಂಶ ಹೆಚ್ಚಿರುವುದಿಲ್ಲ.
ಬೇಕಾಗುವ ಪದಾರ್ಥ:
ಒಂದು ಕಪ್ ಕಡ್ಲೆ ಹಿಟ್ಟು, ಒಂದು ಕಪ್ ತುಪ್ಪ, ಒಂದು ಕಪ್ ಗಟ್ಟಿ ಹಾಲು, ಒಂದು ಕಪ್ ಹಸಿ ತೆಂಗಿನಕಾಯಿ ತುರಿ, ಮೂರು ಕಪ್ ಸಕ್ಕರೆ.
ತಯಾರಿಸುವ ವಿಧಾನ:
ಮೇಲೆ ತಿಳಿಸಿದ ಎಲ್ಲ ಪದಾರ್ಥಗಳನ್ನೂ ಒಂದು ಕಡಾಯಿಯಲ್ಲಿ ಹಾಕಿ ಚೆನ್ನಾಗಿ ಕಲಸಿ ಒಲೆಯ ಮೇಲೆ ಸಣ್ಣ ಉರಿಯಲ್ಲಿಡಿ. ಮೊಗಚೆಕೈಯಿಂದ ನಿಧಾನವಾಗಿ ಕೈಯಾಡಿಸುತ್ತಲೇ ಇರಿ. 10-15 ನಿಮಿಷಗಳ ನಂತರ ಪಾತ್ರೆಯ ತಳದಿಂದ ಪಾಕ ಬಿಟ್ಟುಕೊಂಡು ಹೊರಬರುವುದನ್ನು ನೋಡುವಿರಿ.
ಪಾಕ ಹದಕ್ಕೆ ಬಂದನಂತರ ಘಂ ಅಂತ ಪರಿಮಳ ಮನೆಯೆಲ್ಲಾ ಹರಡುತ್ತದೆ. ಆಗ ಕಡಾಯಿಯನ್ನು ಇಳಿಸಿ. ಒಂದು ಅಗಲವಾದ, ಜಿಡ್ಡು ಸವರಿದ ಸಮತಟ್ಟಾದ ತಟ್ಟೆಗೆ ಸುರಿಯಿರಿ. ಈಗ ಚಾಕುಗೆ ಕೆಲಸ. ನಿಮಗೆ ಬೇಕಾದ ಆಕಾರಕ್ಕೆ ತಕ್ಕಂತೆ ಕತ್ತರಿಸಿಕೊಳ್ಳಿ.
ಈ ರುಚಿ ಶುಚಿ ಭಕ್ಷ್ಯವನ್ನು ಕೃಷ್ಣನಿಗೆ ಸಮರ್ಪಿಸಬಹುದು.
ಆಂಬೊಡೆ
ಬೇಕಾದ ಸಾಮಾಗ್ರಿಗಳು:-
ಕಡ್ಲೆಬೇಳೆ – 2 ಹಿಡಿ, ಕೆಂಪು ವೆಣಸು (ಒಣ) – 4, ಹಸಿರು ಮೆಣಸು(ಹಸಿ) – 2, ಒಂದು ಹಿಡಿ ಕೊತ್ತಂಬರಿ ಸೊಪ್ಪು, ಒಂದು ಹಿಡಿ ಕರಿ ಬೇವಿನಸೊಪ್ಪು, ಶುಂಠಿ ರಸ – 1/4 ಚಮಚ, ರುಚಿಗೆ ತಕ್ಕ ಉಪ್ಪು, ಅರ್ಧ ಬಾಣಲಿ ಕರಿಯುವ ಎಣ್ಣೆ.
ಮಾಡುವ ವಿಧಾನ :-
ಕಡ್ಲೆ ಬೇಳೆಯನ್ನು ಒಂದು ಗಂಟೆಯಷ್ಟು ಹೊತ್ತು ನೀರಿನಲ್ಲಿ ನೆನೆಸಿಡಿ. ಬಳಿಕ ಮೇಲೆ ಹೇಳಿದ ಎಲ್ಲಾ ಸಾಮಾಗ್ರಿಗಳನ್ನು (ಎಣ್ಣೆಯನ್ನು ಬಿಟ್ಟು) ಗಟ್ಟಿ ಹಾಗೂ ದಪ್ಪವಿರುವಂತೆ ರುಬ್ಬಿರಿ. ಈ ದಪ್ಪನಾದ ಹಿಟ್ಟನ್ನು ಕೈಯಲ್ಲಿ ಸಣ್ಣ ಬಿಲ್ಲೆಗಳಂತೆ ತಟ್ಟಿ ಕುದಿಯುವ ಎಣ್ಣೆಯಲ್ಲಿ ಬಿಡಿ. ಗರಿಗರಿಯಾಗಿ ಕರಿದಾಗ ತೆಗೆಯಿರಿ. ಈಗ ಆಂಬೊಡೆ ನೈವೇದ್ಯಕ್ಕೆ ಸಿದ್ಧ.
ಅವಲಕ್ಕಿ ಬಿಸಿಬೇಳೆ ಬಾತು

ಬೇಕಾಗುವ ಸಾಮಾನುಗಳು :-
ಗಟ್ಟಿ ಅವಲಕ್ಕಿ -250 ಗ್ರಾಂ, ಹೆಸರುಬೇಳೆ -250 ಗ್ರಾಂ, ಚಿಕ್ಕ ನಿಂಬೆ ಗಾತ್ರದ ಹುಣಸೆಹಣ್ಣು, ರುಚಿಗೆ ತಕ್ಕ ಉಪ್ಪು , ತರಕಾರಿಗಳು, ಸ್ವಲ್ಪ ಬೀನ್‌್ಸ, ಕ್ಯಾರೆಟ್ -(3-4), ಹಸಿ ಬಟಾಣಿ ಕಾಳು – 1- ಲೋಟ, ಆಲೂಗೆಡ್ಡೆ – 2, ಹೆಚ್ಚಿದ ಕ್ಯಾಬೇಜ್ – 1- ಲೋಟ, ದಪ್ಪ ವೆಣಸಿನಕಾಯಿ – 2 (ಕ್ಯಾಪ್ಸಿಕಾಂ), ಕರಿಬೆವಿನ ಎಲೆ -(8-10).
ಮಸಾಲೆಗೆ ಬೇಕಾಗುವ ಸಾಮಾಗ್ರಿಗಳು:-
ಕಡ್ಲೆ ಬೇಳೆ – 1-ಚಮಚ, ಉದ್ದಿನ ಬೇಳೆ – 1/2 ಚಮಚ, ಧನಿಯ ಪುಡಿ -3 ಚಿಕ್ಕ ಚಮಚ, ಮೆಣಸಿನಕಾಯಿ ಪುಡಿ – 2 ಚಿಕ್ಕ ಚಮಚ, ಜೀರಿಗೆ+ಮೆಂತೆ -1 ಚಿಕ್ಕ ಚಮಚ, ಸ್ವಲ್ಪ ಕೊಬ್ಬರಿ, ಒಂದು ಚಿಟಿಕೆ ಇಂಗು.
ಎಲ್ಲಾ ಮಸಾಲೆ ಸಾಮಾಗ್ರಿಗಳನ್ನು ಹುರಿದು ಪುಡಿ ಮಾಡಿ ಇಟ್ಟು ಕೊಳ್ಳಬೇಕು . ತರಕಾರಿಗಳನ್ನು ಹೆಚ್ಚಿ ಇಟ್ಟು ಕೊಳ್ಳ ಬೇಕು. ದಪ್ಪ ವೆಣಸಿನಕಾಯಿ ಹೊರತು ಪಡಿಸಿ ಮಿಕ್ಕ ತರಕಾರಿಗಳನ್ನು ಬೇಯಿಸಿಟ್ಟು ಕೊಳ್ಳಬೇಕು.
ಮಾಡುವ ವಿಧಾನ :-
ಅವಲಕ್ಕಿಯನ್ನು ಹತ್ತು ನಿಮಿಷ ನೆನೆಸಿಡಿ.
ಬಳಿಕ ಕುಕ್ಕರ್‌ನಲ್ಲಿ (3-4) ಲೋಟ ನೀರು ಹಾಕಿ ಹೆಸರುಬೇಳೆಯನ್ನು 1-ವಿಷಿಲ್‌ನಷ್ಟು ಬೇಯಿಸಿ ಆಮೇಲೆ ಅದಕ್ಕೆ ನೆನೆದಿರುವ ಅವಲಕ್ಕಿಯನ್ನು ನೀರಿನಿಂದ ಹಿಂಡಿ ತೆಗೆದು, ಮತ್ತು ಹಚ್ಚಿ ಇಟ್ಟುಕೊಂಡಿರುವ ತರಕಾರಿಗಳನ್ನು ಹಾಕಿ 5- ನಿಮಿಷ ಸಣ್ಣ ಉರಿಯಲ್ಲಿ ಬೇಯಿಸಿ.
ಎಲ್ಲ ಪದಾರ್ಥಗಳು ಚೆನ್ನಾಗಿ ಬೆಂದ ನಂತರ, ಮಸಾಲೆ ಪುಡಿ ಮತ್ತು ಹುಳಿ ಹಿಂಡಿ ಹಾಕಿ. ಆಮೇಲೆ ರುಚಿಗೆ ತಕ್ಕಷ್ಟು ಉಪ್ಪು ಹಾಕಿ. ನೀರು ಸ್ವಲ್ಪ ಜಾಸ್ತಿ ಹಾಕಿ , ಬಿಸಿಬೇಳೆ ಬಾತು ಸ್ವಲ್ಪ ನೀರಾಗಿದ್ದರೆ ಒಳ್ಳೆಯದು (ತೆಳ್ಳಗಿದ್ದರೆ).
ಆರಿದ ನಂತರ ಗಟ್ಟಿಯಾಗುತ್ತದೆ. ಆಮೇಲೆ ಕೆಳಗಿಳಿಸಿಕೊಳ್ಳಿ.
ಬಾಣಲೆಯಲ್ಲಿ ಒಂದು ಸೌಟು ಅಡಿಗೆ ಎಣ್ಣೆ ಸಾಸಿವೆ ಹಾಕಿ ಚಟಪಟ ಸಿಡಿದ ಮೇಲೆ, ಹೆಚ್ಚಿದ ದಪ್ಪ ಮೆಣಸಿನಕಾಯಿ, ಕರಿ ಬೇವಿನಎಲೆಗಳನ್ನು ಹಾಕಿ 3-4 ನಿಮಿಷ ಹುರಿದು ಅದನ್ನು ಬಿಸಿ ಬೇಳೆ ಬಾತಿಗೆ ಹಾಕಿ.
ಬಿಸಿಬಿಸಿ ಇರುವಾಗಲೇ ತುಪ್ಪ ಹಾಕಿ ನೈವೇದ್ಯ ಮಾಡಿ ಉಪಯೋಗಿಸಿ.
ಅಲಸಂದೆ ರೊಟ್ಟಿ

ಬೇಕಾಗುವ ಪದಾರ್ಥ :
3 ಕಪ್ ಅಲಸಂದೆ ಕಾಳು, ಸ್ವಲ್ಪ ಎಳ್ಳು, 1 ಕಪ್ ಕಡಲೆಹಿಟ್ಟು, 1 ಕಪ್ಪು ಗೋದಿಹಿಟ್ಟು, 4 -6 ಹಸಿ ಮೆಣಸಿನ ಕಾಯಿ, ಅರ್ಧ ಚಮಚದಷ್ಟು ಜೀರಿಗೆ, ರುಚಿಗೆ ತಕ್ಕಷ್ಟು ಉಪ್ಪು ಮತ್ತು ಒಂದೆರಡು ಎಸಳು ಕೊತ್ತಂಬರಿಸೊಪ್ಪು.
ಮಾಡುವ ವಿಧಾನ :
ಮೊದಲು ಅಲಸಂದೆ ಕಾಳನ್ನು ಕುಕ್ಕರ್‌ನಲ್ಲಿ ಬೇಯಿಸಿಕೊಂಡು ಅದು ಆರಿದ ಬಳಿಕ ನುಣ್ಣಗೆ ರುಬ್ಬಿಟ್ಟುಕೊಳ್ಳಿ. ಹಿಟ್ಟಿಗೆ ಸಣ್ಣಗೆ ಹೆಚ್ಚಿದ ಹಸಿ ಮೆಣಸಿನ ಕಾಯಿ, ಕೊತ್ತಂಬರಿಸೊಪ್ಪು, ಹುರಿದ ಎಳ್ಳು, ಜೀರಿಗೆ, ಕಡಲೆಹಿಟ್ಟು, ಗೋದಿಹಿಟ್ಟು ಹಾಗೂ ಉಪ್ಪು ಸೇರಿಸಿ ಚಪಾತಿ ಹಿಟ್ಟಿನ ರೀತಿ ಕಲೆಸಿ.
ಆನಂತರ ಸಣ್ಣ ಸಣ್ಣ ಉಂಡೆಗಳನ್ನು ಮಾಡಿಟ್ಟುಕೊಂಡು ಮಣೆಯ ಮೇಲೆ ಎಣ್ಣೆ ಹಾಕಿ, ಚಪಾತಿಯಂತೆ ಲಟ್ಟಿಸಿ (ಲಟ್ಟಿಸುವಾಗಲೂ ಹಿಟ್ಟಿನ ಮೇಲೆ ಎಣ್ಣೆ ಹಾಕಬೇಕು). ಆನಂತರ ಕಾದ ಕಾವಲಿಯ ಮೇಲೆ ಎರಡೂ ಬದಿ ಚೆನ್ನಾಗಿ ಬೇಯಿಸಿ. ಈಗ ರೊಟ್ಟಿ ಕೃಷ್ಣನಿಗೆ ಅರ್ಪಿಸಿ ಪ್ರಸಾದ ಸ್ವೀಕರಿಸಿ.






Leave a Reply