– ಪ್ರೊ. ಅ.ರಾ. ಮಿತ್ರ
ಪುರಂದರರ ಕೀರ್ತನೆಗಳಲ್ಲಿ ಗಾದೆಗಳು, ಚಾಟೂಕ್ತಿಗಳು, ನಾಣ್ಣುಡಿಗಳು ಧಾರಾಳ. ಇವು ‘ಪದ’ ಗಳ ಸ್ವಾರಸ್ಯವನ್ನು ಇಮ್ಮಡಿಗೊಳಿಸಿ, ಕೇಳುಗರನ್ನು ನೇರವಾಗಿ ತಟ್ಟುತ್ತವೆ, ಪ್ರತಿಯೊಬ್ಬರಿಗೂ ಇದು ತನಗೇ’ ಎನಿಸುವಂತೆ ಮಾಡುತ್ತವೆ. ಮಕ್ಕಳು – ಮುದುಕರೆನ್ನದೆ ಎಲ್ಲರಿಗೂ ಪ್ರಿಯವೆನಿಸಿ, ಭಕ್ತಿ ರಸಾಯನವನ್ನು ಉಣಬಡಿಸುತ್ತವೆ.

ಜಾನಪದ ಸತ್ತ್ವದಿಂದ ಮೆರೆಯುವ ಪುರಂದರ ಕವಿತೆಗಳಲ್ಲಿ ಕಾವ್ಯದ ಶೋಭೆಯನ್ನು ಹೆಚ್ಚಿಸುವ ಗಾದೆಗಳ ಭಂಡಾರವೇ ಇದೆ. ಈ ಗಾದೆಗಳನ್ನೆಲ್ಲ ತಮ್ಮ ಕೀರ್ತನೆಯ ಭಾವವಿಕಾಸಕ್ಕೆ ಅವರು ತುಂಬ ಸಮರ್ಥವಾಗಿ ಬಳಸಿಕೊಂಡಿದ್ದಾರೆ. ಭಕ್ತನ ಒಳವೇದನೆಯನ್ನು ವಿವರಿಸಲು ಅವರು “ಗುದ್ದಿದವನೆ ಬಲ್ಲ ಗುದ್ದಿಸಿಕೊಂಡವನೆ ಬಲ್ಲ’ ಎಂಬ ಗಾದೆಯನ್ನು ಪ್ರಾಸಂಗಿಕವಾಗಿ ಬಳಸುತ್ತಾರೆ.
”ನಗುವವರಿಗೆ ನಾಲ್ಕು ನಾಲಗೆಯಾದರೆ ಏನು ಗತಿ?” ಎಂದು ಆಶ್ಚರ್ಯ ವ್ಯಕ್ತಪಡಿಸುತ್ತಾರೆ. ಭಕ್ತಿಯ ಗಾಳಿ ಬೀಸುತ್ತಿರುವಾಗ ಅದನ್ನು ಬಳಸಿಕೊಳ್ಳುವುದು ಎಲ್ಲರ ಜವಾಬ್ದಾರಿ ಎಂಬುದನ್ನು “ಗಾಳಿ ಬಂದ ಸಮಯದಲ್ಲಿ ತೂರಿಕೊಳ್ಳಿರೋ’ ಎಂಬ ಕೃಷಿಲೋಕದ ಗಾದೆಯಿಂದ ವಿವರಿಸುತ್ತಾರೆ.
ಜನರ ವಿನಯಶೀಲತೆ ಹೇಗಿರಬೇಕೆಂದು ವರ್ಣಿಸುವ ಸಂದರ್ಭದಲ್ಲಿ ‘ಬಿಲ್ಲಾಗಿ ಇರಬೇಕು ಬಲ್ಲವರ ಎದುರು” ಎಂಬ ಗಾದೆಯ ನೆರವನ್ನು ಪಡೆದುಕೊಳ್ಳುತ್ತಾರೆ. ಜನರ ಮೇಲು ಮಾತಿಗೂ ಒಳಮನಸ್ಸಿಗೂ ನಡುವೆ ದೊಡ್ಡ ಕಂದಕ ಇರುವುದನ್ನು “ತುದಿ ನಾಲಗೆ ಬೆಲ್ಲ, ಎದೆ ಕತ್ತರಿ” ”ಇಕ್ಕಲಾರೆ ಕೈ ಎ೦ಜಲು” “ಮರುಳುತನವು ಮಾತಿನಲ್ಲಿ, ಹೃದಯದಲ್ಲಿ ಘಂಟಿಕೆ” ಮೊದಲಾದ ಗಾದೆಗಳು ಸಮರ್ಥವಾಗಿ ಧ್ವನಿಸುತ್ತವೆ.
ಹಣದ ಬಗೆಗೆ ಪುರಂದರ ಚಿಂತನೆಗಳನ್ನು “ಸಾಲ ಮಾಡಬೇಡ, ಸಾಲದು ಎನಬೇಡ, ನಾಳೆಗೆ ಇಡಬೇಡ”, “ಬಿದ್ದು ಹೋಗೋ ರೊಕ್ಕವ ಸುಡು ನೀನಕ್ಕ”, “ರೊಕ್ಕ ಎರಡಕ್ಕು ದುಃಖ ಕಾಣಕ್ಕ” “ವೆಚ್ಚಕಿಲ್ಲದ ಹಣವು ವ್ಯರ್ಥವಾದರೇನು?” ಎಂಬ ಗಾದೆಗಳು ವಿವರಿಸುತ್ತವೆ. ವಿಷ್ಣುವನ್ನು ಬಿಟ್ಟು ಚಿಲ್ಲರೆ ದೈವಗಳನ್ನು ಹಿಂಬಾಲಿಸುವವರನ್ನು ಕಂಡು “ತುಳಸಿಯಿರಲು ತುರಚಿಯನ್ನು ತರುವಿರೋ?” ಎಂದು ಹಾಸ್ಯ ಮಾಡುತ್ತಾರೆ.
ನಿಶ್ಚಿತ ಗುರಿಯಿಲ್ಲದೆ ಬರಿದೆ ಮಾತನಾಡುವವರನ್ನು ಅಣಕಕ್ಕೆ ಗುರಿಮಾಡಿ “ಹೋಗದೂರಿನ ದಾರಿ ಕೇಳಿ ಮಾಡುವುದೇನು?” ಎಂಬ ಗಾದೆಯ ಸಹಾಯದಿಂದ ವಿವರಿಸುತ್ತಾರೆ. ಒಮ್ಮೆ ಮಾನ ಹೋದ ಮೇಲೆ ಸತ್ಕಾರ ಮಾಡಿದರೂ ಅದು ”ತೊಗಲ ಮೂಗ್ಹರಿದು ಚಿನ್ನದ ಮೂಗನಿತ್ತಂತೆ’! ಸಂಕಲ್ಪ ಸಾಧನೆಗೆ ಮನಸ್ಸಿನ ಗಟ್ಟಿತನವೂ ಅಗತ್ಯ ಎಂಬುದನ್ನು ವಿವರಿಸುವಾಗ ಆ ಸಾಮರ್ಥ್ಯ ಇಲ್ಲದಿದ್ದರೆ ”ಹಣ್ಣಾದ ಹೊತ್ತು ಬಾಯ್ ಹುಣ್ಣಾದ ತೆರನಂತೆ ” ಆಗುತ್ತದೆಂದು ಎಚ್ಚರಿಸುತ್ತಾರೆ.
”ನಾ ಡೊಂಕಾದರೆ ನಿನ್ನ ನಾಮ ಡೊಂಕೆ ವಿಟ್ಠಲ’” “ಪಾಪಿ ಬಲ್ಲನೆ ಪರರ ಸುಖದುಃಖವ’ ಮೊದಲಾದ ಕೀರ್ತನೆಗಳನ್ನು ಸಂಪೂರ್ಣವಾಗಿ ಗಾದೆಯ ರೂಪದ ಹೇಳಿಕೆಗಳಿಂದಲೇ ವಿವರಿಸುತ್ತ ಹೋಗಿದ್ದಾರೆ. ತಮ್ಮಂಥ ಸರಳ ಜೀವಿಗಳಿಗಿಂತಲೂ ದುಷ್ಟರೇ ದೇವರನ್ನು ಬೇಗ ಒಲಿಸಿಕೊಳ್ಳುತ್ತಾರೆಂಬುದನ್ನು ” ಕೊಂಕಣಿಗರ ಎಮ್ಮೆಗೆ ಕೊಡತಿಯೇ ಮದ್ದು” ಎಂಬ ಗಾದೆಯ ಮೂಲಕ ಚಿತ್ರಿಸುತ್ತಾರೆ.
ಶ್ಲೇಷೆಯ ಉಕ್ತಿಗಳು, ಚಮತ್ಕಾರೋಕ್ತಿಗಳು, ಬಳಸುಮಾತುಗಳು, ಅನ್ಯೋಕ್ತಿ ವ್ಯಂಗೊಕ್ತಿಗಳು ದಾಸರ ಪದಗಳಲ್ಲಿ ಅಸಂಖ್ಯ ಪ್ರಮಾಣದಲ್ಲಿ ವಿಜೃಂಭಿಸಿವೆ.
ರಾಗಿ ತಂದೀರಾ ಭಿಕ್ಷಕೆ
ರಾಗಿ ತಂದೀರಾ?
ಇಲ್ಲಿ ದಕ್ಷಿಣ ಕರ್ನಾಟಕದ ಮುಖ್ಯ ಆಹಾರಗಳಲ್ಲಿ ಒಂದಾದ ‘ರಾಗಿ’ ಯನ್ನು ಕುರಿತ ಪ್ರಶ್ನೆಯಿಂದ ಈ ಕವಿತೆ ಆರಂಭವಾಗುತ್ತದೆ. ನಾಮಪದವನ್ನು ಕ್ರಿಯಾರೂಪಕ್ಕೆ ತಿರುಗಿಸಿ ಹೆಚ್ಚಿನ ಅರ್ಥವಂತಿಕೆ ಕಾಣಿಸಿರುವುದು ಈ ಪದದ ವೈಶಿಷ್ಟ್ಯ . ರಾಗಿ ಎ೦ಬ ಶಬ್ದದ ಹಿಂದಾಗಲಿ ಅಥವಾ ಮುಂದಾಗಲಿ ಕೆಲವು ಶಬ್ದಗುಚ್ಛಗಳನ್ನಿರಿಸಿದರೆ ಅವು ಹೊಸಹುಟ್ಟು ಪಡೆಯುತ್ತವೆ.
ಆರು ಮಾರ್ಗವ ಅರಿತವರಾಗಿ
ಮೂರು ಮಾರ್ಗವ ತಿಳಿದವರಾಗಿ
ಭೂರಿತತ್ತ್ವವ ಬೆರೆದವರಾಗಿ
ಕ್ರೂರರ ಸಂಗವ ಬಿಟ್ಟವರಾಗಿ
ಕಾಮಕ್ರೋಧವ ಅಳಿದವರಾಗಿ
ನೇಮ ನಿತ್ಯವ ಮಾಡುವರಾಗಿ
ಆ ಮಹಾ ಪದವಿಯ ಸುಖಿಸುವರಾಗಿ
ಪ್ರೇಮದ ಕಾಣೆ ಕುಣಿದಾಡುವರಾಗಿ
“ಗಿಳಿಯು ಪಂಜರದೊಳಿಲ್ಲ’ ಎಂಬ ಕವಿತೆ ಶ್ಲೇಷೆ ಅನ್ಯೋಕ್ತಿ ಮೊದಲಾದ ಯಾವ ಅಲಂಕಾರಿಕ ಶಬ್ದಗಳನ್ನು ಒಲ್ಲದೆ, ಸಹಜವಾಗಿ ಎರಡು ಮೈಗಳನ್ನು ಒಡೆದುಕೊಳ್ಳುತ್ತಸಾಗುತ್ತದೆ. ” ಗಿಳಿಯು ಪಂಜರದೊಳಿಲ್ಲ” ಈ ಮಾತು ಅವರ ಮಗಳ ಸಾವಿನಿಂದ ವ್ಯಗ್ರಗೊಂಡ ಸಮಯದಲ್ಲಿ ದಾಸರು ರಚಿಸಿದ್ದೆಂದು ಕೆಲವರು ಅಭಿಪ್ರಾಯ ಪಟ್ಟಿದ್ದಾರೆ.
ಮಗಳ ಸಾವು, ಸಾಕಿದ ಮಗನ ಸಾವು, ಗೆಳೆಯರ, ಜನರ ಸಾವು ಯಾವುದೇ ಈ ಪ್ರಚೋದನೆ ನೀಡಿರಲು ಸಾಧ್ಯ. ಅಥವಾ ದೇಹದ ಗೂಡೊಳಗೆ ಸೇರುವ ಯಾವುದೇ ಆತ್ಮದ ಬಗೆಗೆ ಇವರು ಚಿಂತಿಸಿದ್ದಾರೆ ಎನ್ನಬಹುದು. ಅಥವಾ ಅಂತಃಪುರದ (ಶ್ರೀಮಂತ ಮನೆತನದ) ಸ್ತ್ರೀಯೊಬ್ಬಳು ನಡೆದ ಘಟನೆಯನ್ನೇ ಸಖಿಗೆ ವಿವರಿಸುತ್ತಾ ಕೊನೆಗೆ ಶ್ಲೇಷೆಯನ್ನಾಶ್ರಯಿಸಿರಬಹುದು.

ಇಲ್ಲಿ ಬರುವ ಗಿಳಿಯ ಪ್ರತಿಮೆ ತನ್ನ ಚೌಕಟ್ಟಿನ ಪರಿಭಾಷೆಯನ್ನೇ ಭದ್ರವಾಗಿ ಆಶ್ರಯಿಸುತ್ತ ಅತ್ಯಂತ ಗಂಭೀರವಾದ ವಿಷಯ ಚಿಂತನದ ಕಡೆ ನಮ್ಮನ್ನು ಎಳೆದೊಯ್ಯುತ್ತದೆ. ಭಾಷೆ ಬಲು ಸರಳವಾಗುತ್ತ ವರ್ಣಿತ ವಸ್ತುವನ್ನು ತುಂಬ ಜಟಿಲವಾಗಿಸುತ್ತ ಸಾಗಿರುವುದು ಈ ಕೀರ್ತನೆಯ ವೈಶಿಷ್ಟ್ಯ. ಮಕ್ಕಳ ಹಾಡಿನ ಪುಸ್ತಕಗಳಲ್ಲೂ ಸೇರುವಷ್ಟು ಸರಳವಾಗಿದೆ ಈ ಕೀರ್ತನೆ.
ಗಿಳಿಯು ಪಂಜರದೊಳಿಲ್ಲ
ಹರಿಹರಿಯೆ ಬರಿಯ ಪಂಜರವಾಯಿತಲ್ಲ
ತಾನಿಲ್ಲದಾಗ ಗಿಳಿ ಹಾರಿಹೋದ ಸುದ್ದಿ ಬಂದು ಈ ಕವಿತೆಯ ನಾಯಕಿ ಪಂಜರದ ಎಡೆಗೆ ಧಾವಿಸುತ್ತಾಳೆ. ಅದೀಗ ಗಿಳಿ ಇಲ್ಲದ ಪಂಜರ. ‘ಬರಿಯ’ ಪಂಜರ ಎಂಬ ಮಾತು ಚೈತನ್ಯದಾಯಕ ವಸ್ತು ಇಲ್ಲದ ಮೇಲೆ ಗೂಡಿಗೆ ಬೆಲೆಯಿಲ್ಲ ಎಂಬುದನ್ನು ಸ್ಪಷ್ಟ ಪಡಿಸುತ್ತದೆ. ಗಿಳಿ ಆತ್ಮವಾಗಿ ಪಂಜರ ಶರೀರವಾಗಿ ಸಹಜವಾಗಿ ಧ್ವನಿತವಾಗುತ್ತದೆ.
ನಾಯಕಿ ಒಬ್ಬಳು ಆಪ್ತಳಾದ ಸಖಿಗೆ ಇದನ್ನು ಹೇಳುತ್ತಿದ್ದಾಳೆ. ಇದು ಒಂದು ಸಾರ್ವತ್ರಿಕ ಸಂಬೋಧನೆಯ ಅಥವಾ ಆತ್ಮ ಸಂಬೋಧನೆಯ ಪದವೂ ಆಗುತ್ತದೆ. ಇಲ್ಲಿ ಗಿಳಿಯನ್ನು ಸಾಕುವುದು ಒಂದು ಜೀವವನ್ನು ಪೋಷಿಸಿದ ಸಂದರ್ಭವನ್ನು ನೆನಪಿಸುತ್ತದೆ. ತಾನು ಇಲ್ಲದಾಗ, ಎಲ್ಲೋ ಹೋಗಿದ್ದಾಗ ಯಮ ಎಂಬ ಬೆಕ್ಕು ತಟಕ್ಕನೆ ನುಗ್ಗಿ ಒಂದು ಪಂಜರದೊಳಗೆ ಬಾಯಿ ಹಾಕಿ ಗಿಳಿಯನ್ನು ಕಚ್ಚಿಕೊಂಡು ಓಡಿಹೋಗಿದೆ. ಸಾವು ಬಂದು ಅಪ್ಪಳಿಸುವ, ಕ್ರೌರ್ಯನಡೆಸುವ ಬಗೆಯನ್ನು ‘ಬೆಕ್ಕು’ ಎಂಬ ಶಬ್ದ ಸಮರ್ಥವಾಗಿ ಧ್ವನಿಸುತ್ತದೆ.
ದೇಹವನ್ನಾಶ್ರಯಿಸಿದ ಆತ್ಮಕ್ಕೆ ದೇಹದ ಮೂಲಕವೇ ನಾವು ಎಷ್ಟೆಲ್ಲ ಉಪಚಾರ ಮಾಡುತ್ತೇವೆ ಎಂಬುದು ಈ ಕೀರ್ತನೆಯಲ್ಲಿ ಚಿತ್ರಿತವಾಗಿದೆ.
ಈ ಗಿಳಿಯನ್ನು ನಾಯಕಿ ಅದ್ಭುತವಾಗಿ ಸಾಕಿರುವುದು ನಿಜ. ಅದು “ಅ೦ಗೈಲಿ ಹಾಡುವ ಗಿಣಿ’ಯಾಗಿ ‘ಮುಂಗೈಲೋದುವ ಗಿಣಿ’ ಅರ್ತಿ (ಪ್ರೀತಿ) ಯಿಂದ ಸಾಕಿದ ಗಿಣಿ. ‘ಹಸಿರು ಬಣ್ಣದ ಗಿಳಿ’ ಎಂಬ ಮಾತು ಅದರ ಚೈತನ್ಯ ಶೀಲತೆಯನ್ನು ‘ಕುಶಲಬುದ್ಧಿಯ ಗಿಳಿ’ ಎಂಬ ಮಾತು ಆ ಗಿಣಿಗೆ ನಾಯಕಿ ಒದಿಗಿಸಿದ್ದ ಶಿಕ್ಷಣ ಸಂಸ್ಕಾರವನ್ನೂ ಚಿತ್ರಿಸುತ್ತದೆ. “ಮುಪ್ಪಾಗದ ಬೆಣ್ಣೆ” ಎಂದರೆ ಅದಕ್ಕೆ ವಯಸ್ಸಾಗದಂತೆ ಮಾಡುತ್ತಿದ್ದ ತೈಲ ಸಂಸ್ಕಾರ ಎಂಬರ್ಥ.
‘ಮೂರು ಹಾಗದ’ ಅ೦ದರೆ ಮೂರು ಹಣ ಕೊಟ್ಟು ತರಿಸಿದ ಬೆಣ್ಣೆ ಎಂಬರ್ಥವೂ ಘನಿಸುತ್ತದೆ. ಈ ಕೋಮಲ ಕಾಯಕದ ಗಿಳಿಗೆ ಆಕೆ ‘ರಾಮ ರಾಮ’ ಎನ್ನುವ ಎರಡಕ್ಷರವನ್ನೂ ಉಚ್ಚರಿಸಲು ಕಲಿಸಿದ್ದಳು. ಆದುದರಿಂದ ಅದು ಬರಿ ಆಕೆಯ ಗಿಳಿಯಾಗಿ ಉಳಿದಿರಲಿಲ್ಲ. ಸಾಮಜ ಪೋಷಕ (ಸಾಮಜ – ಆನೆಯನ್ನು ಪೋಷಕ, ಕಾಪಾಡಿದವ, ʼಗಜೇಂದ್ರ ಮೋಕ್ಷ’ ಪ್ರಸಿದ್ಧಿಯ ವಿಷ್ಣು)ವಿಗೂ ಅದರ ಮೇಲೆ ಪ್ರೀತಿ ಇತ್ತು.
ಒಂಬತ್ತು ಬಾಗಿಲ ಮನೆಯು
ತುಂಬಿದ ಸಂದಣಿ ಇರಲು
ಕಂಬ ಮುರಿದು ಡಿಂಬ ಬಿದ್ದು
ಅಂಬರಕ್ಕೆ ಹರಿಹೋಯಿತು
ಇಲ್ಲಿ ಕವಲು ಸ್ಪಷ್ಟವಾಗುತ್ತದೆ. ಮನುಷ್ಯನ ಶರೀರ (ಪಂಜರ) ನವದ್ವಾರಗಳ ಒಂದು ಒಡಕು ಮನೆ. ‘ಕಂಬ ಮುರಿದು ಡಿಂಬ ಬೀಳುವುದು’ ಎಂದರೆ ಪಂಜರ ತೆರೆದು ಗಿಳಿ (ಆತ್ಮ) ಹಾರಿಹೋಗುವುದು, ಎಂಬ ಭಾವ. ಹೀಗೆ ಈ ಕವಿತೆ ಶ್ಲೇಷೆ, ಬೆಡಗುಗಳೆರಡರ ಸತ್ತ್ವದಿಂದಲೂ ಪುಷ್ಟಿಗೊಳ್ಳುತ್ತ ಸಾಗುತ್ತದೆ. ಕವಿತೆ ಆರಂಭಗೊಂಡಾಗ ಇದ್ದ ದುಃಖದ ತೀವ್ರತೆ ಕ್ರಮ ಕ್ರಮೇಣವಾಗಿ ಜೀವವು ಮುಕ್ತವಾಯಿತೆಂಬ ಧನ್ಯ ಭಾವದೊಂದಿಗೆ ಮುಗಿಯುತ್ತದೆ.
ಪುರಂದರದಾಸರ ರೂಪಕ ಜಗತ್ತು ತುಂಬ ರಮ್ಯವಾದುದು. ಅಪಾರವಾದ ಲೋಕಾನುಭವ, ಅದ್ಭುತ ಪುರಾಣ ಪ್ರಜ್ಞೆಗಳಿಂದ ಪುಷ್ಟಗೊಂಡ ಅವರ ಕೆಲವು ಕೀರ್ತನೆಗಳು ಕೆತ್ತುವ ದೃಶ್ಯ ಶಿಲ್ಪ ಮತ್ತು ಹಚ್ಚುವ ಬಣ್ಣದ ಲೇಪ ಮನೋಜ್ಞವಾಗಿವೆ. ಕೆಲವೇ ಸಹಜ ಮಾತುಗಳಲ್ಲಿ ಅವರು ದೊಡ್ಡ ಅರ್ಥಲೋಕಕ್ಕೆ ಸಲೀಲವಾಗಿ ಜಿಗಿದುಬಿಡುತ್ತಾರೆ. ಸೂಕ್ತ ಹೋಲಿಕೆ, ಶಬ್ದ ಚಿತ್ರ, ಸಂಕೇತ, ಪ್ರತಿಮಾ ರೂಪಗಳಿಂದ ಅವರ ಕೀರ್ತನೆಗಳು ಜನರ ಮನಸ್ಸಿನಲ್ಲಿ ಅಚ್ಚೊತ್ತಿ ನಿಲ್ಲುತ್ತವೆ.
“ಸಿರಿ ಸೊಡರಿಗೆ ಗುರುಹಿರಿಯಪಮಾನ ಬಿರುಗಾಳಿ” ಎಂಬ ಉಕ್ತಿಯನ್ನು ಪರಿಶೀಲಿಸಬಹುದು. ಶ್ರೀಮಂತಿಕೆಯ ಸೊಕ್ಕು ತಲೆಗೇರಬಾರದು ಎಂಬುದು ಅವರ ಹಿತವಾದ. ಅಪಾರವಾದ ಸಿರಿ (ಸಂಪತ್ತು) ಅವರ ಪಾಲಿಗೆ ಒಂದು ಸಣ್ಣ ಸೊಡರು ಅಷ್ಟೆ. ಇತರರನ್ನು ಅವಮಾನಿಸುವುದು ಎಂದರೆ ಬಿರುಗಾಳಿಯನ್ನು ಆಹ್ವಾನಿಸಿದಂತೆ ತನಗೇ ಕೇಡು ತರುವಂಥದು ಎಂಬ ಎಚ್ಚರಿಕೆಯ ಮಾತ್ರ ಇಲ್ಲಿದೆ.
“ಒಡೆಯ ಮೆಲ್ಲಡಿಯಿಡೆ ಛಡಿ ಬೆತ್ತದವ ನಾನು’

ಎಂದು ಅವರು ಒಂದು ಸುಳಾದಿಯಲ್ಲಿ ಹೇಳಿದ್ದಾರೆ. ಊಳಿಗ ಮಾನ್ಯ ಪದ್ಧತಿಯನ್ನು ಸಂತೋಷದಿಂದ ಒಪ್ಪಿಕೊಂಡು ಒಡೆಯನ ಸೇವೆಗೆ ನಿಲ್ಲುವ ಊಳಿಗದವನ ಸ್ಥಾನದಲ್ಲಿ ಪುರಂದರದಾಸರು ನಿಲ್ಲುತ್ತಾರೆ. ಭಗವಂತನೇ ಅವರ ಜಮೀನುದಾರ. ಯಜಮಾನರು ಬರುವುದನ್ನು ಸ್ವಾಮಿಗಳು, ಮಹಾರಾಜರು ಬರುವುದನ್ನು ಜನಕ್ಕೆ ಘೋಷಿಸುತ್ತ ಬೆಳ್ಳಿಕಟ್ಟಿನ ಕೋಲನ್ನು ಕೈಯಲ್ಲಿ ಹಿಡಿದು ದಾರಿ ಬಿಡಿಸುತ್ತ ಹೋಗುವುದಷ್ಟೆ ನನ್ನ ಕೆಲಸ ಎಂದು ಅವರು ಹೇಳಿಕೊಂಡಿದ್ದಾರೆ.
ಸಾಕು ಸಂಸಾರ ತೆರೆ ನೂಕಲಾರೆನು
ಗುಂಡೇಕಾರರ ಕೇರಿಗೆ ಸಿಕ್ಕಿ ಚೆಂಡಿಗಿಂತ ಹಗುರವಾದೆ
ಎಂದು ತಮ್ಮ ಬವಣೆಯನ್ನು ನಿರೂಪಿಸುತ್ತಾರೆ. ಗುಂಡೇಕಾರರ ಅಂದರೆ ಕಲ್ಲುಕುಟಿಗರ ಕೇರಿಯಲ್ಲಿ ಸಿಕ್ಕಿಕೊಂಡರೆ, ಕಲ್ಲೇ ಭಾರವಿಲ್ಲದ ಆ ಕೇರಿಯ ಜನರ ಕೈಗೆ ಸಿಕ್ಕಿದರೆ, ಚೆಂಡಿಗಿಂತ ಹಗುರವಾದ ವ್ಯಕ್ತಿಯಾಗಿ ನರಳಬೇಕಾಗುತ್ತದೆ. ಈ ಸ್ಥಿತಿಯನ್ನೇ ಮುಂದುವರಿಸುವ ರೀತಿಯಲ್ಲಿ ಅವರು ಇನ್ನೊಂದು ಕಡೆ :
“ಮರ್ಕಟನ ಕೈ ನೂಲು ಗುಕ್ಕರಿಯ ತೆರನಂತೆ
ಸಿಕ್ಕಿಕೊಂಡು ಕಾಮಕ್ರೋಧಾದಿಗಳು ಎನ್ನ
ಹಿಕ್ಕಿ ಹೀರುತಲಿವೆ’
ಎನ್ನುತ್ತಾರೆ, ಗುಕ್ಕರಿ ಎಂದರೆ ಕುಕ್ಕಡಿ. ನೇಯ್ಗೆಯವರು ಬಳಸುವ ಕದಿರಿಗೆ ಸಿಕ್ಕಿಸಿದ ದಾರದ ಉಂಡೆ, ಇದೇನಾದರೂ ಕಪಿಯ ಕೈಗೆ ಸಿಕ್ಕಿಬಿಟ್ಟರೆ ಹೇಗೆ ಗೋಜಲು ಗೋಜಲಾಗಿ ಕಲಸಿಕೊಂಡು ಮತ್ತೆ ಸರಿಪಡಿಸಲಾಗದ ಸ್ಥಿತಿಗೆ ತರುತ್ತದೋ ಹಾಗೆ ವ್ಯಕ್ತಿಯು ಕಾಮಕ್ರೋಧಾದಿಗಳ ಕೈಯಲ್ಲಿ ಸಿಕ್ಕಿಕೊಳ್ಳುವ ರೀತಿ ಇಲ್ಲಿ ಚಿತ್ರಣಗೊಂಡಿದೆ.
ಡಂಭಾಚಾರದ ಭಕ್ತಿಯು, ಕೃತಕ ಮೊಗವಾಡದ ಮನಸ್ಸು ನಮ್ಮ ಅಧಃಪತನವನ್ನು ಪಡೆಯಲಾರದು ಎಂಬ ಸಂಗತಿಯನ್ನು, ಗ್ರಾಮವನ್ನು ವಿಪತ್ತಿನಿಂದ ರಕ್ಷಿಸಲಾರದ “ಗೋಪುರದ ಗೊಂಬೆ” ಎಂಬ ಅರ್ಥಪೂರ್ಣ ಪ್ರತಿಮೆಯಿಂದ ವಿವರಿಸುತ್ತಾರೆ. ‘ವಿಷಯನುಂಡ ಬಾಯೊಳೊಮ್ಮೆ ಮುದ್ದು ತಾರೊ” – ಇದು ಸಾತ್ವಿಕ ತಾಮಸಗಳನ್ನು ದಾಸರು ಬೆರಸುವ ಬಗೆ.
”ಬಲಿಯ ಬೇಡಿದ ಚೆಲುವ ವಾಮನ – ಹಸನಾದ ಮೋಸ” ಎಂಬ ಮಾತು ವಾಮನವತಾರದ ಮೇಲೆ ಬರೆದ ಸೊಗಸಾದ ವ್ಯಾಖ್ಯಾನವಾಗಿದೆ. ಕೃಷ್ಣನ ಬಾಯನ್ನು ‘ಕರ್ಪೂರದ ಕರಡಿಗೆಯ ಬಾಯಿ’ ಎಂದು ಪ್ರಶಂಸಿಸುತ್ತಾರೆ. ಆರಾಧ್ಯ ದೈವವಾದ ವೇಣುಗೋಪಾಲ ಅವರ ಪಾಲಿಗೆ ಜಡ ಶಿಲಾಮೂರ್ತಿಯಲ್ಲ “ನವಿಲಂತೆ ಕುಣಿದು, ಹಂಸೆಯಂತೆ ನಲಿದು, ಎರಳೆಯಂತೆ ಜಿಗಿ ಜಿಗಿದಾಡಿ ಬೆಳದಿಂಗಳಂತೆ ಸುಳಿದಾಡುವ” ವ್ಯಕ್ತಿ ಎಂದು ವರ್ಣಿಸುತ್ತಾರೆ.
“ಕಿಟ್ಟಗಟ್ಟಿದ ಕಬ್ಬಿಣಕ್ಕೆ ಪುಟವ ಹಾಕಿಸೋ
ಬೆಟ್ಟಿಗುಂಗುರಮಾಡಿ ಎನ್ನ ಧರಿಸೋ”
ಎಂಬ ಸುಂದರ ರೂಪಕದಲ್ಲಿ ತಮ್ಮ – ದೈವದ ಆಪ್ತ ಸಂಬಂಧ ಹೇಗಿರಬೇಕೆಂಬುದನ್ನು ಸ್ಪಷ್ಟಪಡಿಸಿದ್ದಾರೆ.
ಸಿರಿ ಬಂದ ಕಾಲಕ್ಕೆ ಬಿರಿ ಬಿರಿ ಕಣ್ಣು
ಮೇಲೆ ನೋಡುವರು
ಸಿರಿ ಹೋದ ಮರುದಿನ ಬಡತನ ಬಂದರೆ
ಹುರುಕು ಕಜ್ಜಿಯ ತುರಿಸಿ ತಿರುಗುವರಲ್ಲ…
ಇಲ್ಲಿ ಸಿರಿತನ – ಬಡತನ ಎರಡನ್ನೂ ದೇಹದ ಒಂದೊಂದು ಅಂಗಚರ್ಯೆಯಿಂದ ಕಾಣಲು ಯತ್ನಿಸಿದ್ದಾರೆ. (‘ಬಿರಿ ಬಿರಿ ಕಣ್ಣು” ”ತುರಿಸುವ ಕಜ್ಜಿ!”) ‘ಇಹಲೋಕ ಸುಖವನ್ನು “ಅರಗಿನ ಪಾಯಸ” ಎಂಬ ವಿಶಿಷ್ಟ ಉಪಮೆಯಿಂದ ವರ್ಣಿಸುತ್ತಾರೆ. ‘ನೀರ ಮೇಲಣ ಗುಳ್ಳೆ’ “ನಾರಾಯಣನೆಂಬ ನಾಮದ ಬೀಜ” “ರಾಮ ನಾಮ ಪಾಯಸಕ್ಕೆ ಕೃಷ್ಣನಾಮ ಸಕ್ಕರೆ’ ಇಂಥ ಉಪಮೆಗಳು ಅವರ ಕೃತಿಗಳಲ್ಲಿ ತುಂಬಿಕೊಂಡಿವೆ.
ಹೀಗೆ ಸಾಹಿತ್ಯದ ಗುಣಗಳಿಂದ ಶೋಭಿಸುವ ಪುರಂದರ ಕೃತಿಗಳನ್ನು ಶುದ್ಧ ಸಾಹಿತ್ಯದ ದೃಷ್ಟಿಯಿಂದ ಪರಿಶೀಲಿಸಿದರೂ ಅದರ ಗಟ್ಟಿತನ ಎದ್ದು ಕಾಣುತ್ತದೆ.






Leave a Reply