ಅಗಸ್ತ್ಯ ಮಹರ್ಷಿ: – 4

ಅಗಸ್ತ್ಯಮಹರ್ಷಿಣಾ ಸಮುದ್ರಶೋಷಣಂ ಕಾಲೇಯಾನಾಂ ವಿನಾಶಶ್ಚ

(ಅಗಸ್ತ್ಯ ಮಹರ್ಷಿಗಳಿಂದ ಸಮುದ್ರದ ಬತ್ತಿಸುವಿಕೆ ಮತ್ತು ಕಾಲೇಯರ ವಿನಾಶ)

ಕಾಲೇಯ ಎಂಬ ಹೆಸರಿನ ದೈತ್ಯರು ಸಮುದ್ರದ ಮಧ್ಯದಲ್ಲಿ ವಾಸಿಸುತ್ತಿದ್ದರು. ಅವರು ರಾತ್ರಿ ಸಮಯದಲ್ಲಿ ಋಷಿಗಳ ಪುಣ್ಯ ಆಶ್ರಮಗಳಿಗೆ ಹೋಗಿ ಆಶ್ರಮಗಳನ್ನು ಧ್ವಂಸ ಮಾಡುತ್ತಾ, ತಪಸ್ವಿಗಳನ್ನು ಹಿಂಸಿಸಿ ಸಮುದ್ರದೊಳಗೆ ಪ್ರವೇಶಿಸಿ ಅಲ್ಲಿ ಅಡಗಿಕೊಳ್ಳುತ್ತಿದ್ದರು.

ಬೆಳಗಿನ ಕಾಲದಲ್ಲಿ ಆಶ್ರಮದ ಅಂಗಳದಲ್ಲಿ ಹತರಾದ ಋಷಿಗಳ ಪಾರ್ಥಿವ ಶರೀರಗಳು ಕಂಡುಬರುತ್ತಿದ್ದವು. ಆದರೆ ಈ ಧ್ವಂಸಕೃತ್ಯಗಳನ್ನು ಯಾರು ಮಾಡುತ್ತಿದ್ದಾರೆ ಎಂಬುದು ಯಾರಿಗೂ ತಿಳಿಯುತ್ತಿರಲಿಲ್ಲ. ಈ ಕಾಲೇಯ ದೈತ್ಯರು ವಸಿಷ್ಠ, ಚ್ಯವನ, ಭರದ್ವಾಜ ಮುಂತಾದವರ ಋಷ್ಯಾಶ್ರಮಗಳನ್ನೂ ಧ್ವಂಸಗೊಳಿಸಿ ಅಲ್ಲಿದ್ದ ಕೆಲವು ತಪಸ್ವಿಗಳನ್ನು ಮತ್ತು ಆಶ್ರಮದ ಪರಿಚಾರಕ ಜನರನ್ನು ಕೊಂದರು. ವನವಾಸದಲ್ಲಿ ಸ್ಥಿತನಾಗಿದ್ದ ಧರ್ಮರಾಜನ ಆಶ್ರಮವನ್ನೂ ಭಗ್ನಗೊಳಿಸಿದರು.

ದೈತ್ಯರಾದ ಕಾಲೇಯರ ಹಿಂಸೆಯಿಂದ ವನಗಳಲ್ಲಿ ಸ್ಥಿತವಾಗಿದ್ದ ಋಷ್ಯಾಶ್ರಮಗಳಲ್ಲಿ ಯಜ್ಞ, ಯಾಗ, ಪೂಜೆ, ಪ್ರವಚನಾದಿ ಎಲ್ಲಾ ಕಾರ್ಯಗಳು ಸ್ಥಗಿತಗೊಂಡವು. ದೈತ್ಯರಿಂದ ಅನೇಕ ತಪಸ್ವಿಗಳು, ವಿಪ್ರರು ಹತರಾದರು. ವಿಪ್ರರ ಸಂಖ್ಯೆ ಕ್ಷೀಣವಾಯಿತು.

ಇದರಿಂದ ಅತೀವವಾಗಿ ಭೀತರಾದ ಇಂದ್ರಾದಿ ದೇವತೆಗಳು ಶ್ರೀಮಹಾವಿಷ್ಣುವಿನ ಸಮೀಪಕ್ಕೆ ಹೋಗಿ – “ಪ್ರಭು, ಇಂತಹ ಕುಕೃತ್ಯಗಳನ್ನು ಯಾರು ಮಾಡುತ್ತಿದ್ದಾರೆ ಎಂದು ನಮಗೆ ತಿಳಿಯುತ್ತಿಲ್ಲ. ಸಜ್ಜನರಾದ ತಪಸ್ವಿಗಳ ಸಂರಕ್ಷಣೆಯು ನಿನ್ನಿಂದ ಮಾಡಲ್ಪಡಬೇಕು ಎಂಬುದು ನಮ್ಮ ಪ್ರಾರ್ಥನೆ” ಎಂದು ನಾರಾಯಣನಲ್ಲಿ ಪ್ರಾರ್ಥಿಸಿದರು.

ಆಗ ವಿಷ್ಣುವು ದೇವತೆಗಳನ್ನು ಉದ್ದೇಶಿಸಿ – “ಎಲೈ ದೇವತೆಗಳೇ, ಕಾಲೇಯ ಎಂಬ ಹೆಸರಿನ ರಾಕ್ಷಸರು ಸಮುದ್ರದ ತಳದಲ್ಲಿ ವಾಸಿಸುತ್ತಿದ್ದಾರೆ. ಅವರು ರಾತ್ರಿ ಸಮುದ್ರದ ತಳದಿಂದ ಹೊರಬಂದು ಋಷ್ಯಾಶ್ರಮಗಳಿಗೆ ಹೋಗಿ ಅಲ್ಲಿನ ತಪಸ್ವಿಗಳನ್ನು ಕೊಲ್ಲುತ್ತಿದ್ದಾರೆ.

ಸಮುದ್ರವನ್ನು ಬತ್ತಿಸಲು ಅಗಸ್ತ್ಯ ಮಹರ್ಷಿಗಳು ಒಬ್ಬರೇ ಸಮರ್ಥರು. ಮುನಿ ಅಗಸ್ತ್ಯರು ಆ ಸಮುದ್ರದ ಸಮಸ್ತ ಜಲವನ್ನು ಒಂದೇ ಆಚಮನದಲ್ಲಿ ಕುಡಿಯಬಲ್ಲರು. ಅವರಲ್ಲದೆ ಅನ್ಯರು ಯಾರೂ ಈ ಮಹತ್ಕಾರ್ಯವನ್ನು ಮಾಡಲು ಸಮರ್ಥರಲ್ಲ. ಆದ್ದರಿಂದ ನೀವು ಅಗಸ್ತ್ಯರನ್ನು ಸಮುದ್ರವನ್ನು ಬತ್ತಿಸಲು ಪ್ರಾರ್ಥಿಸಿ. ಸಮುದ್ರವು ಬತ್ತಿಹೋದರೆ ಸಮುದ್ರದ ತಳದಲ್ಲಿ ವಾಸಿಸುತ್ತಿರುವ ಕಾಲೇಯರನ್ನು ಕೊಲ್ಲುವುದು ಸುಲಭವಾಗುತ್ತದೆ” ಎಂದು ಹೇಳಿದನು.

ಅದನ್ನು ಕೇಳಿ ದೇವತೆಗಳು ನಾರಾಯಣನಿಗೆ ನಮಸ್ಕರಿಸಿ, ಚತುರ್ಮುಖ ಬ್ರಹ್ಮನನ್ನು ಭೇಟಿ ಮಾಡಿ ವಿಷಯವನ್ನು ತಿಳಿಸಿ ಅವನ ಅನುಮತಿಯನ್ನು ಕೂಡ ಪಡೆದು, ಮಹರ್ಷಿಗಳಿಂದ ಆವೃತವಾಗಿದ್ದ ಅಗಸ್ತ್ಯ ಮುನಿಗಳ ಸಮೀಪಕ್ಕೆ ಬಂದು ಅವರನ್ನು ಬಹುವಾಗಿ ಸ್ತುತಿಸಿ ನಮಸ್ಕರಿಸಿದರು.

ಕುಶಲ ಪ್ರಶ್ನೆಗಳ ನಂತರ ವಿಷ್ಣುವು ಹೇಳಿದ ರಹಸ್ಯ ವಿಷಯವನ್ನು ನಿವೇದಿಸಿ ಸಮುದ್ರದ ನೀರನ್ನು ಕುಡಿಯಲು ಅಗಸ್ತ್ಯ ಮುನಿಗಳಲ್ಲಿ ಪ್ರಾರ್ಥಿಸಿದರು. ಆಗ ಅಗಸ್ತ್ಯ ಮಹರ್ಷಿಗಳು ದೇವತೆಗಳಿಗೆ ಅಭಯ ನೀಡಿ ವರುಣನ ಆವಾಸಸ್ಥಾನವಾದ ಸಮುದ್ರಕ್ಕೆ ಬಂದು ತಮ್ಮ ತಪೋಮಹಿಮೆಯಿಂದ ಸಮುದ್ರದ ನೀರನ್ನು ಪೂರ್ಣವಾಗಿ ಕುಡಿದರು.

ಶುಷ್ಕವಾದ ಸಮುದ್ರವು ಭೂಮಿಯಾಗಿ ಪರಿಣಮಿಸಿತು. ಈ ರೀತಿ ಬತ್ತಿಹೋದ ಸಮುದ್ರದಲ್ಲಿ ಅಡಗಿದ್ದ ಕಾಲೇಯರನ್ನು ದೇವತೆಗಳು ಕೊಂದರು. ಕೆಲವು ಕಾಲೇಯ ದೈತ್ಯರು ರಣರಂಗದಿಂದ ಓಡಿಹೋಗಿ ಭೂಮಿಯನ್ನು ಸೀಳಿ ದಾರಿಯನ್ನು ನಿರ್ಮಿಸಿಕೊಂಡು ಆ ಮಾರ್ಗದಿಂದ ಪಾತಾಳ ಲೋಕಕ್ಕೆ ಹೋಗಿ ಆತ್ಮರಕ್ಷಣೆ ಮಾಡಿಕೊಂಡರು.

ತದನಂತರ ದೇವತೆಗಳು ಅಗಸ್ತ್ಯ ಮಹರ್ಷಿಗಳ ಸಮೀಪಕ್ಕೆ ಬಂದು ಬಹುವಾಗಿ ಅವರನ್ನು ಸ್ತುತಿಸಿ ಅವರಿಗೆ ಕೃತಜ್ಞತೆಗಳನ್ನು ಸಮರ್ಪಿಸಿದರು. “ಬತ್ತಿಹೋದ ಸಮುದ್ರವನ್ನು ಪುನಃ ಜಲಪೂರ್ಣವನ್ನಾಗಿ ಮಾಡು” ಎಂದು ಅಗಸ್ತ್ಯ ಮುನಿಗಳಲ್ಲಿ ಆ ದೇವತೆಗಳು ಪ್ರಾರ್ಥಿಸಿದರು.

ಆಗ ಅಗಸ್ತ್ಯ ಮಹರ್ಷಿಗಳು – “ಎಲೈ ದೇವತೆಗಳೇ, ನಾನು ಕುಡಿದ ಸಮುದ್ರಜಲವು ಸಂಪೂರ್ಣವಾಗಿ ಜೀರ್ಣವಾಗಿ ಹೋಗಿದೆ. ಆದ್ದರಿಂದ ರೂಪಾಂತರದಿಂದ (ಬೇರೆ ರೂಪದಲ್ಲಿ) ಸಮುದ್ರದ ನೀರನ್ನು ತುಂಬಲು ನೀವು ಪ್ರಯತ್ನಿಸಿ” ಎಂದು ದೇವತೆಗಳಿಗೆ ಹೇಳಿದರು.

ಆಗ ಬ್ರಹ್ಮದೇವನ ಸಮೀಪಕ್ಕೆ ಹೋಗಿ ಶುಷ್ಕವಾದ ಸಮುದ್ರವನ್ನು ಪುನಃ ಜಲಪೂರ್ಣ ಮಾಡಲು ಉಪಾಯವನ್ನು ಪ್ರಾರ್ಥಿಸಿದರು. ಆಗ ಆ ಬ್ರಹ್ಮನು – “ಸಗರ ರಾಜನ ವಂಶದಲ್ಲಿ ಭಗೀರಥ ಎಂಬ ಮುನಿ (ರಾಜ) ಉದ್ಭವಿಸುತ್ತಾನೆ. ಅವನು ಈ ಕಾರ್ಯವನ್ನು ಮಾಡುತ್ತಾನೆ” ಎಂದು ಹೇಳಿದನು. ಆ ದೇವತೆಗಳು ಭಗೀರಥನ ಆಗಮನದ ಕಾಲವನ್ನು ನಿರೀಕ್ಷಿಸುತ್ತಿದ್ದರು.

ಸೂರ್ಯವಂಶದಲ್ಲಿ ಸಗರ ಎಂಬ ಚಕ್ರವರ್ತಿ ಇದ್ದನು. ಅವನಿಗೆ ಅರವತ್ತು ಸಾವಿರ ಪುತ್ರರಿದ್ದರು. ಅವರು ಕಪಿಲ ಮಹರ್ಷಿಗಳ ಕೋಪಾಗ್ನಿಯಿಂದ ಭಸ್ಮವಾದರು. ಕಾಲ ಕಳೆದಂತೆ ಸಗರನ ಸೂರ್ಯವಂಶದಲ್ಲಿ ಭಗೀರಥ ಎಂಬ ಚಕ್ರವರ್ತಿ ಉದ್ಭವಿಸಿದನು. ಅವನು ದಯಾಳು, ಸಜ್ಜನ, ಪ್ರಜಾಪ್ರಿಯ ರಾಜನಾಗಿದ್ದನು. ಅವನು ತನ್ನ ಪೂರ್ವಜರನ್ನು ಉದ್ಧರಿಸಲು ತಪಸ್ಸು ಮಾಡಿ ಸ್ವರ್ಗಂಗೆಯನ್ನು ಭೂಲೋಕಕ್ಕೆ ತಂದನು.

ಆ ಗಂಗೆಯು ಸ್ವರ್ಗದಿಂದ ಭೂಲೋಕಕ್ಕೆ ಬೀಳುವಾಗ ಶಿವನ ಶಿರಸ್ಸಿನ ಮೇಲೆ ಬಿದ್ದಳು, ಅವನ ಜಟೆಯಲ್ಲಿ ಬಂಧಿತಳಾದಳು. ಪುನಃ ಭಗೀರಥನು ಶಿವನನ್ನು ಉದ್ದೇಶಿಸಿ ತಪಸ್ಸು ಮಾಡಿದನು. ಶಿವನು ದಯೆಯಿಂದ ತನ್ನ ಜಟೆಯಿಂದ ಗಂಗೆಯನ್ನು ಹರಿಸಿದನು.

ಶಿವನ ಜಟೆಯಿಂದ ಪತನಗೊಂಡ ಆ ಗಂಗೆಯು ಪ್ರವಹಿಸುತ್ತಾ ಜಹ್ನು ಮಹರ್ಷಿಗಳ ಆಶ್ರಮವನ್ನು ಆವರಿಸಿತು. ಆಗ ಜಹ್ನು ಮುನಿಗಳು ಗಂಗೆಯನ್ನು ಪೂರ್ಣವಾಗಿ ಕುಡಿದರು. ಪುನಃ ಭಗೀರಥನು ಆ ಮುನಿಯನ್ನು ಪ್ರಾರ್ಥಿಸಿದನು. ಆಗ ಮುನಿಯು ತನ್ನ ಬಲಕಿವಿಯಿಂದ ಗಂಗೆಯನ್ನು ಹರಿಯಲು ಬಿಟ್ಟನು.

ಈ ರೀತಿ ನಿರ್ಗಮಿಸಿದ ಗಂಗೆಯು ತ್ರಿಪಥಗಾ ಎಂದು ಕರೆಸಿಕೊಂಡು ಭಗೀರಥನನ್ನು ಅನುಸರಿಸುತ್ತಾ ಹೋಗಿ ಸಗರನ ಅರವತ್ತು ಸಾವಿರ ಪುತ್ರರ ಭಸ್ಮದ ಮೇಲೆ ಹರಿದು ಅವರಿಗೆ ಸದ್ಗತಿಯನ್ನು ನೀಡಿದಳು ಮತ್ತು ಶುಷ್ಕವಾದ ಸಮುದ್ರವನ್ನು ತುಂಬಿಸಿದಳು. ಸಗರನ ಪುತ್ರರ ದೆಸೆಯಿಂದ ಸಮುದ್ರವು ಜಲಪೂರ್ಣಗೊಂಡಿದ್ದರಿಂದ ಸಮುದ್ರಕ್ಕೆ ‘ಸಾಗರ’ ಎಂಬ ಹೆಸರು ಬಂದಿತು. ಈ ರೀತಿ ಭಗೀರಥನ ಪ್ರಯತ್ನದಿಂದ ಸಮುದ್ರವು ಪುನಃ ತುಂಬಿತು.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi