ತತ್ತ್ವದರ್ಶನ
– ಆಂಗ್ಲಮೂಲ: ಧನಂಜಯ ಪಂಡಿತ ದಾಸ, ಅನುವಾದ : ಗೀತಾ ಶ್ರೀನಾಥ್
ಅರ್ಥವಾಗದ ತತ್ತ್ವಶಾಸ್ತ್ರದ ಚರ್ಚೆಗೆ ವಾರಾಂತ್ಯವನ್ನು ಮೀಸಲಿಡಲು ನೀವು ಬಯಸದೇ ಇರಬಹುದು.
ಆದರೆ, ನೀವು ಜೀವನದ ಅತ್ಯಂತ ಮುಖ್ಯವಾದ ಪ್ರಶ್ನೆಗಳನ್ನು ಸಂಪೂರ್ಣ ಕಡೆಗಣಿಸುವಿರಾ?
ಕೃಷ್ಣನ ಕಾರ್ಯಕಲಾಪಗಳು, ಲಕ್ಷಣಗಳು, ಗುಣ, ರೂಪಗಳನ್ನು ವಿವರಿಸುವ ದೇವೋತ್ತಮ ಪುರುಷನ ಕುರಿತಾದ ಪುಸ್ತಕಗಳನ್ನು ನಾನು ಹಂಚುತ್ತಿದ್ದಾಗ, ನಾನು ಭೇಟಿಯಾದ ಜನರಿಂದ ಸಾಮಾನ್ಯವಾಗಿ ಬರುತ್ತಿದ್ದ ಪ್ರತಿಕ್ರಿಯೆ ನನಗೆ ಆಸಕ್ತಿ ಇಲ್ಲ’. ಕೃಷ್ಣನ ಬಗ್ಗೆ ಆಸಕ್ತಿ ಇಲ್ಲ ಎನ್ನುವುದನ್ನು ಕೇಳಿದಾಗ ಕೆಲವೊಮ್ಮೆ ಆಶ್ಚರ್ಯವಾದದ್ದು ಉಂಟು.

ಕೃಷ್ಣ ಎಲ್ಲೆಡೆಯೂ ಇದ್ದಾನೆ. ಪ್ರತಿಯೊಂದರ ಮೂಲ ಅವನು. ನಮ್ಮ ಎಲ್ಲ ಆಲೋಚನೆಗಳೂ ಸೇರಿದಂತೆ ಜೀವನದಲ್ಲಿ ಮಾಡಿದ ಪ್ರತಿಯೊಂದು ಕೆಲಸವೂ ಅವನಿಗೆ ಗೊತ್ತಿರುತ್ತದೆ. ಅವನು ಎಲ್ಲವನ್ನೂ ತಿಳಿದುಕೊಂಡಿರುತ್ತಾನೆ. ವಿಶ್ವದಲ್ಲಿರುವ ಪ್ರತಿಯೊಂದು ಪರಮಾಣು ಮತ್ತು ಎಲೆಕ್ಟ್ರಾನ್ ಗಳ ಕರಾರುವಾಕ್ಕು ಸ್ಥಿತಿ ಹಾಗೂ ವೇಗಗಳನ್ನು ಅವನು ತಿಳಿದಿದ್ದಾನೆ.
ಕೇವಲ ತಿಳಿದುಕೊಂಡಿರುವುದಷ್ಟೇ ಅಲ್ಲ ಅವನು ಸರ್ವಶಕ್ತ. ಇದರರ್ಥ ಅವನು ಏನನ್ನು ಬೇಕಾದರೂ ಮಾಡಬಹುದು. ಇಡೀ ಜಗತ್ತನ್ನು ಸೃಷ್ಟಿಸಿದವನು ಅವನು. ಅತ್ಯಂತ ಅದ್ಭುತವಾದ ಕಲಾಕೃತಿಗಳೆನಿಸಿರುವ ನಮ್ಮ ದೇಹ ಹಾಗೂ ಪ್ರಕೃತಿಯ ಸೊಬಗು ಅವನ ಸೃಷ್ಟಿ.
ಎಲ್ಲವನ್ನೂ ಸೃಷ್ಟಿಸಿರುವುದು ಕೃಷ್ಣನೇ ಆದ್ದರಿಂದ ಆ ಎಲ್ಲಕ್ಕೂ ಅವನೇ ಒಡೆಯ. ನೀವೇ ಎಲ್ಲದರ ಒಡೆಯ ಎನ್ನುವುದನ್ನು ಒಮ್ಮೆ ಊಹಿಸಿಕೊಳ್ಳಿ! ಹಾಗಾಗಿ, ಕೃಷ್ಣನೇ ಅಂತಿಮವಾಗಿ ಎಲ್ಲವನ್ನೂ ನಿಯಂತ್ರಿಸುತ್ತಾನೆ; ಪ್ರತಿಯೊಂದು ಕೂಡ ಅವನು ಹೇಳಿದಂತೆ ನಡೆಯಬೇಕು. ಅಂತಹ ವ್ಯಕ್ತಿಯ ಬಗ್ಗೆ ಜನರಲ್ಲಿ ಆಸಕ್ತಿ ಇಲ್ಲವೆಂದರೆ ಹೇಗೆ?
ನಾನು ವಿತರಿಸುವ ಪುಸ್ತಕಗಳಾದ – ಭಗವದ್ಗೀತೆ ಮತ್ತು ಶ್ರೀಮದ್ ಭಾಗವತಮ್ – ಕೃಷ್ಣನನ್ನು ವ್ಯಾಖ್ಯಾನಿಸುತ್ತವೆ. ಕೃಷ್ಣನ ಕುರಿತಾದ ವಿಷಯಗಳು ಮಾತ್ರ ಅಲ್ಲಿ ಇಲ್ಲ. ಸಕಾಲಿಕವಾದ ಮತ್ತು ಪ್ರಸ್ತುತವೂ ಆದ ಈ ವಿಚಾರಗಳು ಅದರಲ್ಲಿವೆ: ನಾವೇಕೆ ಸಾಯುತ್ತೇವೆ? ನಾವು ಸತ್ತನಂತರ ಏನಾಗುತ್ತೇವೆ?
ನಾವೇಕೆ ಕಷ್ಟಪಡಬೇಕು? ದೇವರು ಇದ್ದಾನೆಯೇ? ಅದನ್ನು ನಾವು ಖಚಿತವಾಗಿ ತಿಳಿಯುವುದು ಹೇಗೆ? ಜಗತ್ತಿನಲ್ಲಿ ಬದುಕುತ್ತಿರುವ ಪ್ರತಿಯೊಂದು ಜೀವಿಗೂ ಈ ವಿಷಯಗಳು ಅನ್ವಯವಾಗುತ್ತವೆ; ಅವು ಜಾಗತಿಕ ಆಸಕ್ತಿಯನ್ನು ಹೊಂದಿವೆ.
ಇಷ್ಟಾಗಿಯೂ ಕೂಡ, ತಾವು ಸತ್ತ ಬಳಿಕ ಏನಾಗುತ್ತೇವೆ ಎನ್ನುವುದನ್ನು ತಿಳಿಯುವ ಆಸಕ್ತಿ ಜನರಲ್ಲಿ ಇಲ್ಲ. ತಮಗೆ ಗೊತ್ತಿಲ್ಲದ ಸಾಮ್ರಾಜ್ಯವನ್ನು ಸೇರುತ್ತೇವೆ ಎನ್ನುವುದು ಅವರಿಗೆ ಗೊತ್ತು. ಆದರೆ ಆ ಕುರಿತು ಹೆಚ್ಚು ತಿಳಿಯುವ ಆಸಕ್ತಿ ಅವರಿಗಿಲ್ಲ. ಒಬ್ಬ ವ್ಯಕ್ತಿ ಸ್ವಾಭಾವಿಕವಾಗಿ ಈ ವಿಚಾರದಲ್ಲಿ ಆಸಕ್ತಿ ತೋರಿಸಿದರೆ, ಅವನು ನೋಡದೇ ಇರುವ ವಿದೇಶಕ್ಕೆ ಬೇರು ಸಹಿತ ಕಿತ್ತು ತಳ್ಳಿದಂತಾಗುತ್ತದೆಯೇ?
ಆ ಜಾಗ ಹೇಗೆ ಇದೆ, ಅಲ್ಲಿನ ಜನ ಹೇಗಿದ್ದಾರೆ. ತಾನು ಅಲ್ಲಿ ಏನು ಮಾಡಬೇಕು, ಅವನು ತನ್ನನ್ನು ಹೇಗೆ ಸ್ವಾಗತಿಸುತ್ತಾನೆ ಎನ್ನುವುದನ್ನು ಅವನು ತಿಳಿಯಬೇಡವೇ?
ಇಲ್ಲ, ಒಬ್ಬ ವ್ಯಕ್ತಿಯನ್ನು ಶಿಕ್ಷಿಸಿದ್ದೇ ಆದಲ್ಲಿ, ತನ್ನನ್ನು ಏಕೆ ಶಿಕ್ಷಿಸುತ್ತಿದ್ದಾರೆ ಎನ್ನುವುದನ್ನು ತಿಳಿಯುವ ಆಸಕ್ತಿ ಇರಬೇಡವೇ? ”ನಾನು ಮಾಡಿದ್ದಾದರೂ ಏನು? ನಾನೇಕೆ ಈ ನೋವು, ಸಂಕಟಗಳನ್ನು ಅನುಭವಿಸಬೇಕು?’ ಪ್ರತಿಯೊಬ್ಬ ಬುದ್ಧಿವಂತ ಜೀವಿಯೂ ಈ ಪ್ರಶ್ನೆಗಳನ್ನು ಕೇಳಿಕೊಳ್ಳಬೇಕು.
ಹಾಗಾಗಿ, ನಾವು ಸತ್ತ ಬಳಿಕ ನಮಗೆ ಏನಾಗುತ್ತದೆ ಎಂದು ತಿಳಿಯುವ ಆಸಕ್ತಿ ನಮ್ಮಲ್ಲಿಲ್ಲ ಎಂದರೆ ಅದಕ್ಕೆ ಕಾರಣವಿದೆ. ಅದು ನಮ್ಮ ಕಟ್ಟ ಶಿಕ್ಷಣ ಪದ್ಧತಿ.
ಆಧುನಿಕ ಶಿಕ್ಷಣವು ನಿರೀಶ್ವರವಾದ ಮತ್ತು ಅಜ್ಞೇಯತಾ ವಾದವನ್ನು ಉಂಟುಮಾಡುವ ಒಲವನ್ನು ಹೊಂದಿದೆ. ಆಧ್ಯಾತ್ಮಿಕವಾಗಿ ಪ್ರಶ್ನಿಸುವ ಸಾಮರ್ಥ್ಯವನ್ನು ನಾವು ಕಳೆದುಕೊಳ್ಳುತ್ತಿದ್ದೇವೆ. ಅದಕ್ಕೆ ಕಾರಣ ಲೌಕಿಕಕ್ಕೆ ಅತಿ ಹೆಚ್ಚಿನ ಮಹತ್ವ ಕೊಟ್ಟಿರುವುದು. ಸಾವಿನ ಅನಂತರ ಯಾವುದೇ ಜೀವನ ಇಲ್ಲ ಎನ್ನುವ ದೃಢವಾದ ನಂಬಿಕೆಯನ್ನು ಕಲಿಸಲಾಗುತ್ತಿದೆ.
ನೋವು, ಸಂಕಟಗಳು ಜೀವನದ ಅನಿವಾರ್ಯ ಸಂಗತಿಗಳು, ಜೀವರಾಗಲಿ, ಆತ್ಮವಾಗಲಿ ಆಧ್ಯಾತ್ಮಿಕ ಸತ್ಯವಾಗಲಿ ಇಲ್ಲ. ಇರುವುದೆಲ್ಲ ಕೇವಲ ಎಲೆಕ್ಟ್ರಾನ್ ಗಳು, ನ್ಯೂಟ್ರಾನ್ ಗಳು ಮತ್ತು ಪ್ರೋಟಾನ್ ಗಳು ಎಂದು ಕಲಿಸಲಾಗುತ್ತಿದೆ.

ಜೀವನದ ಬಹುಮುಖ್ಯವಾದ ಪ್ರಶ್ನೆಗಳನ್ನು ಕುರಿತು ಆಧುನಿಕ ಶಿಕ್ಷಣವು ಅಲ್ಪ ಪ್ರಮಾಣದ ತತ್ತ್ವಶಾಸ್ತ್ರ, ಸ್ವಲ್ಪ ಹೆಚ್ಚಿನ ಆಲೋಚನೆಯನ್ನು ಮಾತ್ರ ಪೂರೈಸುತ್ತಿದೆ. ನಮ್ಮ ಶೈಕ್ಷಣಿಕ ಸಂಸ್ಥೆಗಳಲ್ಲಿ ನಡೆಯುವ ತತ್ತ್ವಶಾಸ್ತ್ರ ತರಗತಿಗಳು ಕೂಡ ಶೈಕ್ಷಣಿಕ ಪ್ರಕ್ರಿಯೆಯಲ್ಲಿ ಅಸಮರ್ಪಕವಾದ ಪಾತ್ರವನ್ನು ವಹಿಸುತ್ತಿವೆ.
ಅಂತಹ ಶಿಕ್ಷಣದ ಅಗತ್ಯವಿಲ್ಲ. ಅಲ್ಲಿರುವ ಪಠ್ಯಗಳು ನಮ್ಮ ದಿನನಿತ್ಯದ ಬದುಕಿಗೆ ಅಪ್ರಸ್ತುತ ಹಾಗೂ ಅವುಗಳನ್ನು ಕಲಿಯಲು ಬಯಸುವವರೂ ವಿರಳ. ಭಾಷಾಶಾಸ್ತ್ರ ವಿಶ್ಲೇಷಣೆ ಮತ್ತು ಸಾಪೇಕ್ಷವಾದದ ನೀತಿತತ್ತ್ವಗಳಂತಹ ವಿಷಯಗಳು ಉಲ್ಲಾಸವನ್ನುಂಟು ಮಾಡುವುದಿಲ್ಲ ಹಾಗೂ ಅದಕ್ಕಾಗಿ ವಾರಾಂತ್ಯದ ರಾತ್ರಿಯನ್ನು ಚಿಂತಿಸುವುದಕ್ಕಾಗಿ ವ್ಯಯಿಸಲು ನೀವು ಬಯಸುವುದಿಲ್ಲ. ಆಧುನಿಕ ಸಮಾಜದ ಹೃದಯದ ಬಡಿತಕ್ಕೆ ಅವುಗಳಿಂದ ಏನು ಮಾಡಲೂ ಸಾಧ್ಯವಿಲ್ಲ.
ಕೈಗಾರಿಕಾ ಅಭಿವೃದ್ಧಿಯಲ್ಲಿ ಆಳವಾದ ಚಿಂತನೆ ಹಿನ್ನಡ ಸಾಧಿಸಿದೆ. ತಾಂತ್ರಿಕ ಕೆಲಸಗಾರರನ್ನು ತರಬೇತುಗೊಳಿಸುವಂತಹ ಕೈಗಾರಿಕೆಗಳಾಗಿ ವಿಶ್ವವಿದ್ಯಾಲಯಗಳು ಪರಿಣಮಿಸಿವೆ. ಹಾರ್ವರ್ಡ್ ಮತ್ತು ಯಾಲೆಯಂತಹ ಸಂಸ್ಥೆಗಳು ಸಾವಿರಾರು ಕಂಪ್ಯೂಟರ್ ಇಂಜನಿಯರುಗಳನ್ನು, ಮೆಕಾನಿಕಲ್ ಇಂಜನಿಯರುಗಳನ್ನು ಹಾಗೂ ವ್ಯಾಪಾರೋದ್ಯಮಿಗಳನ್ನು ತಯಾರಿಸುತ್ತಿವೆ.
ಅವರಿಗೆ ಅಂಕಿ ಸಂಖ್ಯೆಗಳ ಜ್ಞಾನ ಹಾಗೂ ಅವುಗಳನ್ನು ಜಾಣ್ಮೆಯಿಂದ ಬಳಸುವ ಬಗ್ಗೆ ಗೊತ್ತಿರಬಹುದು. ಆದರೆ ಬಹು ಮುಖ್ಯ ವಿಷಯಗಳಾದ ಪ್ರಜ್ಞೆ ಎಂದರೆ ಏನು? ನಾವು ಯಾರು? ಇವುಗಳ ಬಗ್ಗೆ ಸಂಪೂರ್ಣವಾದ ತಿಳಿವಳಿಕೆ ಹೊಂದಿರುವುದಿಲ್ಲ.
ಇಂದು ಜ್ಞಾನವನ್ನು ದೈಹಿಕ ಬೇಡಿಕೆಗಳ ತೃಪ್ತಿಗೆ ಬಳಸಲಾಗುತ್ತಿದೆ: ಆರೋಗ್ಯವಂತರಾಗುವುದು ಹೇಗೆ, ಉತ್ತಮ ಆಹಾರ ತಿನ್ನುವುದು ಹೇಗೆ, ಅತ್ಯುತ್ತಮವಾದ ಔಷಧವನ್ನು ತಯಾರಿಸುವುದು ಹೇಗೆ? ಇಂದ್ರಿಯಗಳನ್ನು ಗ್ರಹಿಸಬಹುದಾದ ಎಲ್ಲ ರೀತಿಯ ಮಾರ್ಗಗಳಲ್ಲಿ ಅದನ್ನು ಉತ್ತೇಜಿಸುವುದಕ್ಕೆ ಮತ್ತು ಉದ್ದೀಪಿಸುವುದಕ್ಕೆ ಜ್ಞಾನವನ್ನು ಬಳಸಲಾಗುತ್ತಿದೆ.
ಇನ್ನೊಂದು ರೀತಿಯಲ್ಲಿ ಹೇಳಬೇಕೆಂದರೆ, ವಿದ್ಯಾವಂತ ಪುರುಷರು ಹಾಗೂ ಮಹಿಳೆಯರು ಪ್ರಾಣಿಗಳಂತೆ ವರ್ತಿಸುತ್ತಿದ್ದಾರೆ. ಏಕೆ? ಏಕೆಂದರೆ ಅವರು ಹೊಂದಿರುವ ಜ್ಞಾನವು ಗುಣದಲ್ಲಿ ಪ್ರಾಣಿಗಳು ಹೊಂದಿರುವ ಜ್ಞಾನಕ್ಕಿಂತ ಭಿನ್ನವಾಗಿಲ್ಲ.
ಆ ಕುರಿತು ಯೋಚಿಸಿ, ಪ್ರಾಣಿಗಳು ಏನು ಮಾಡುತ್ತವೆ? ತಿನ್ನುತ್ತವೆ, ಮಲಗುತ್ತವೆ, ಲೈಂಗಿಕತೆಯನ್ನು ಅನುಭವಿಸುತ್ತವೆ ಹಾಗೂ ಹೊಡೆದಾಡುತ್ತವೆ. ಯಾವುದೇ ಪ್ರಾಣಿ ಮಾಡುವ ಕೆಲಸ ಈ ನಾಲ್ಕರಲ್ಲಿ ಒಂದಲ್ಲ ಒಂದಕ್ಕೆ ಸಂಬಂಧಿಸಿರುತ್ತದೆ. ಈ ಆಧುನಿಕ ಸಮಾಜದಲ್ಲಿ ಬದುಕುತ್ತಿರುವ ಅತ್ಯುನ್ನತ ಶಿಕ್ಷಣವನ್ನು ಪಡೆದ ಪುರುಷರು ಮತ್ತು ಮಹಿಳೆಯರು ಇನ್ನೇನು?
ಅವರು ಉನ್ನತ ತಂತ್ರಜ್ಞಾನ ಹೊಂದಿರುವ ಬಾಂಬ್‌ಗಳು ಇಲ್ಲವೇ ಔಷಧಗಳ ಜತೆ ಬಡಿದಾಡುತ್ತಾರೆ, ಇಲ್ಲ ಅವುಗಳನ್ನು ಸಮರ್ಥಿಸಿಕೊಳ್ಳುತ್ತಾರೆ. ಕೃಷಿಯನ್ನು ಹೆಚ್ಚು ಅಗ್ಗವಾಗಿ, ಪರಿಣಾಮಕಾರಿಯಾಗಿ ಅಭಿವೃದ್ಧಿ ಪಡಿಸುವುದರ ಜತೆಗೆ ಪೌಷ್ಟಿಕಾಂಶಗಳನ್ನು ಮತ್ತಿತರ ಅಂಶಗಳನ್ನು ಅದರಲ್ಲಿ ತುಂಬಿ ಮನಕ್ಕೊಪ್ಪುವಂತಹ ಬೆಳೆ ತೆಗೆಯಲು ಯತ್ನಿಸುತ್ತಾರೆ.
ಮಾನವರಿಗೆ ಲೈಂಗಿಕತೆಯೇ ಪ್ರಾಥಮಿಕವಾಗಿ ತೃಪ್ತಿಯನ್ನು ನೀಡುವಂತಹದ್ದು ಎನ್ನುವ ರೀತಿಯಲ್ಲಿ ಮನಃಶಾಸ್ತ್ರೀಯ ಸೂತ್ರಗಳು ಅದರ ಸುತ್ತಲೇ ಸುತ್ತುವಂತೆ ರೂಪಿಸುತ್ತಾರೆ. ಹೊಸ ಗರ್ಭನಿರೋಧಕಗಳನ್ನು ಕಂಡು ಹಿಡಿಯುವ ಮೂಲಕ ಯಾವುದೇ ಪರಿಣಾಮವಿಲ್ಲದಂತೆ ಎಣೆಯಿಲ್ಲದಂತೆ ಲೈಂಗಿಕ ಸುಖವನ್ನು ಅನುಭವಿಸಬಹುದು ಎಂದು ಹೇಳಲಾಗುತ್ತದೆ.
ಈ ದೇಹ ನನ್ನದು ಎನ್ನುವ ಗುರುತಿಸುವಿಕೆ, ಆತ್ಮಸಾಕ್ಷಾತ್ಕಾರ ಅಥವಾ ತನ್ನತನದ ವಾಸ್ತವಿಕತೆಯನ್ನು ತಿಳಿಯುವುದು ಎಂದರೆ ದೇಹವನ್ನು ಬೆಳೆಸುವುದು ಎಂದರ್ಥ. ಆದ್ದರಿಂದ ದೇಹದಾರ್ಢ್ಯ ಸ್ಥಳಗಳು ಹಾಗೂ ಆರೋಗ್ಯದ ಸಲೂನ್ ಗಳು ಬೆಳೆಯುತ್ತಿವೆ. ದೈಹಿಕ ಸುಖವನ್ನು ಬೆನ್ನಟ್ಟಿಕೊಂಡು ಹೋದಾಗ ಹಣ ಅತ್ಯಗತ್ಯ. ಹಾಗಾಗಿ ಹಣವನ್ನು ಹೇಗೆ ಸಂಪಾದಿಸಬೇಕು ಎನ್ನುವುದನ್ನು ಕಲಿಸುವುದೇ ಶಿಕ್ಷಣದ ಆದ್ಯತೆಯಾಗಿದೆ.
ಪ್ರಾಣಿಗಳ ಜೀವನದಂತೆ ಮನುಷ್ಯ ಜೀವನವು ದೇಹ ಕೇಂದ್ರಿತ ಬದುಕಾಗಬಾರದು. ಮನುಷ್ಯರನ್ನು ಪ್ರಾಣಿಗಳಿಂದ ಬೇರ್ಪಡಿಸುವಂತಹ ಗುಣ ಮಾನವರಲ್ಲಿದೆ: ತತ್ತ್ವಶಾಸ್ತ್ರೀಯ ಪ್ರಶ್ನೆಗಳ ಕುರಿತು ಅವರು ವಿಚಾರಿಸಬಹುದು. ಜೀವನದ ಅರ್ಥವನ್ನು ಕುರಿತು ಪುಸ್ತಕಗಳನ್ನು ಓದುವುದಾಗಲಿ, ಇಲ್ಲವೆ ಬರೆಯುವುದಾಗಲಿ ಅಥವಾ ಚರ್ಚ್‌ಗಳಿಗೆ ಪ್ರಾಣಿಗಳು ಹೋಗುವುದನ್ನು ನೀವು ಕಾಣಲು ಸಾಧ್ಯವಿಲ್ಲ.

ಅಂತಹ ವಿಷಯಗಳ ಬಗ್ಗೆ ಚಿಂತಿಸುವಷ್ಟು ಅವುಗಳ ಮೆದುಳು ಬೆಳೆದಿರುವುದಿಲ್ಲ. ಹಾಗಾಗಿ, ಮಾನವ ತನ್ನ ಮೆದುಳನ್ನು ತತ್ತ್ವಶಾಸ್ತ್ರಿಯ ಪ್ರಶ್ನೆಗಳಾದ ನಾನೇಕೆ ಇಲ್ಲಿದ್ದೇನೆ, ನಾವೇಕೆ ನೋವು ಕಷ್ಟಪಡಬೇಕು ಮತ್ತು ಸಾವಿನ ಅನಂತರ ಏನಾಗುತ್ತದೆ ಎನ್ನುವುದನ್ನು ವಿಚಾರಿಸಲು ಬಳಸದೆ ಇದ್ದಲ್ಲಿ ಅವನು ಪ್ರಾಣಿಗಿಂತ ಭಿನ್ನ ಹೇಗಾಗುತ್ತಾನೆ?
ಈಗಿನ ಕಾಲದ ಜನರು ಹೀಗೆಯೇ ಇರುತ್ತಾರೆ ಎನ್ನುವುದನ್ನು ಶ್ರೀಮದ್ ಭಾಗವತಮ್‌ನಲ್ಲಿ ದೃಢೀಕರಿಸಲಾಗಿದೆ. ಅವರು ಅಲ್ಪಾಯುಷಿಗಳು, ಜಗಳಗಂಟರು, ಸೋಮಾರಿಗಳು, ಆಧ್ಯಾತ್ಮಿಕಾಗಿ ಮೂಢರು, ಲೌಕಿಕವಾಗಿ ಮತ್ತು ಆಧ್ಯಾತ್ಮಿಕವಾಗಿ ತಪ್ಪುದಾರಿಗೆ ಎಳೆದವರಾಗಿರುತ್ತಾರೆ. ಅದೃಷ್ಟ ಹೀನರೂ ಸದಾ ವ್ಯಾಕುಲ ಪಡುವವರೂ ಆಗಿರುತ್ತಾರೆ. ಈ ಕಾಲದಲ್ಲಿ ಜನರು ಎಂದಿಗೂ ಶಾಂತಿಯಿಂದ ಇರುವುದಿಲ್ಲ.
ನಾನು ಭೇಟಿಯಾದ ಬಹುತೇಕ ಜನರಲ್ಲಿ ಈ ಲಕ್ಷಣಗಳನ್ನು ಗುರುತಿಸಿದ್ದೇನೆ ಎಂದು ಹೇಳಲು ದುಃಖವಾಗುತ್ತದೆ. ಆಧ್ಯಾತ್ಮಿಕ ಜೀವನದಲ್ಲಿ ಅವರಿಗೆ ಆಸಕ್ತಿ ಇಲ್ಲ. ಅವರಿಗೆ ಸಮಯವೇ ಇಲ್ಲ. ದಿನದಿಂದ ದಿನಕ್ಕೆ ಬೆಳೆಯುತ್ತಲೇ ಇರುವ ತೊಂದರೆಗಳನ್ನು ಬಗೆಹರಿಸಿಕೊಳ್ಳುವಲ್ಲಿ ಮಗ್ನರಾಗಿರುತ್ತಾರೆ. ಬೇಡಿಕೆಗಳನ್ನು ಈಡೇರಿಸಿಕೊಳ್ಳುವ ನಿಟ್ಟಿನಲ್ಲಿ ಹಣಸಂಪಾದನೆಯಲ್ಲಿ ಮುಳುಗಿರುತ್ತಾರೆ. ತೊಂದರೆ ಪಡುವುದು ಅವರಿಗೆ ಇಷ್ಟವಿಲ್ಲ. ಅವರು ಯಾವಾಗಲೂ ಗೊಂದಲದಲ್ಲಿರುತ್ತಾರೆ.
ನಿಜ, ನೆಮ್ಮದಿ ಇಲ್ಲದೆ ನಾವು ಈ ಕಾಲದಲ್ಲಿ ಹಲವು ರೀತಿಯಲ್ಲಿ ಕಷ್ಟಪಡುತ್ತೇವೆ. ನಮ್ಮ ಈ ವ್ಯಾಕುಲತೆಗೆ ಸರಿಯಾದ ಕಾರಣವಿದೆ ಎಂದು ನೀವು ಹೇಳಬಹುದು. ಸಾಲ ಕೊಟ್ಟವರಿಂದ, ಕಳ್ಳರಿಂದ, ಆಕ್ರಮಣಕಾರರಿಂದ, ನಿಂದಕರಿಂದ, ಹೊಟ್ಟೆ ಕಿಚ್ಚಿನ ನೆರೆಹೊರೆಯವರಿಂದ, ಸ್ನೇಹಿತರಿಂದ, ಬಂಧುಗಳಿಂದ ನಾವು ನೋವು ಅನುಭವಿಸುತ್ತೇವೆ.
ನಮ್ಮ ಮನಸ್ಸುಗಳಿಂದ ಹಾಗೂ ದೇಹಗಳಿಂದ ನಾವು ಯಾತನೆ ಅನುಭವಿಸುತ್ತೇವೆ. ಈ ದೇಹ ಮತ್ತು ಮನಸ್ಸುಗಳು ನಮ್ಮೊಳಗೇ ಇದ್ದುಕೊಂಡು ನಮ್ಮನ್ನು ಅವನತಿಯತ್ತ ತಳ್ಳುತ್ತಿರುತ್ತವೆ. ನಾವು ಮೂಲ ವಸ್ತುಗಳಾದ ಭೂಕಂಪ, ಅತಿಯಾದ ಉಷ್ಣ ಹಾಗೂ ಶೀತ, ಕ್ಷಾಮ, ಹಸಿವು, ಕಡುಬಡತನ ಹಾಗೂ ಆರ್ಥಿಕ ಮುಗ್ಗಟ್ಟಿನಿಂದ ನೋವು ಅನುಭವಿಸುತ್ತೇವೆ.
ಈ ರೀತಿ ಆಗಬೇಕೆ? ಈ ಯಾತನೆಗಳನ್ನು ನಾವು ಒಪ್ಪಿಕೊಳ್ಳಬೇಕೆ? ನಮ್ಮ ಶಿಕ್ಷಣ ಪದ್ಧತಿ ಇದಕ್ಕೆ ಯಾವ ಪರಿಹಾರವನ್ನೂ ನೀಡುವುದಿಲ್ಲ. ಇದನ್ನು ಒಪ್ಪಿಕೊಳ್ಳುವಂತೆ ಹೇಳಿಕೊಡಲಾಗುತ್ತಿದೆ: ‘ಜೀವನದ ನಿಜ ಸಂಗತಿ’ಗಳಾದ ವೃದ್ಧಾಪ್ಯ, ಅನಾರೋಗ್ಯ ಮತ್ತು ಸಾವಿನ ಬಗ್ಗೆ ನಾವು ಏನು ಮಾಡಲೂ ಸಾಧ್ಯವಿಲ್ಲ.
ಆದರೆ, ನೀವು ಮಾಡಬಹುದಾದದ್ದು ಇದೆ. ನೀವು ಚಿರಂತನ ಬದುಕನ್ನು ಪಡೆಯಬಹುದು: ನೀವು ಸಾಯಬೇಕಾಗಿಲ್ಲ. ನೀವು ಪರಿಪೂರ್ಣ ಜ್ಞಾನ ಹೊಂದಬಹುದು. ನಿಮ್ಮನ್ನು ಒಳಗೊಂಡಂತೆ ನೀವು ಎಲ್ಲವನ್ನೂ ಆರಿತುಕೊಳ್ಳಬಹುದು. ಹಾಗೆಯೇ ನೀವು ಅಪರಿಮಿತವಾದ ಆನ೦ದವನ್ನು ಹೊಂದಬಹುದು.
ಕಷ್ಟಗಳೂ ಇಲ್ಲ, ಯಾತನೆಯೂ ಇಲ್ಲ. ನೀವು ಈ ದೇಹದಲ್ಲಿದ್ದಾಗಲೇ ಈ ಜೀವಮಾನದಲ್ಲೇ ನೀವು ಎಲ್ಲ ಬಗೆಯ ಸಂಕಟಗಳಿಂದ ಬಿಡುಗಡೆ ಹೊಂದಬಹುದು. ಹೇಗೆ? ಆಧ್ಯಾತ್ಮಿಕ ಜೀವನದಲ್ಲಿ ಆಸಕ್ತಿಯನ್ನು ಹೊಂದುವ ಮೂಲಕ, ಶ್ರೀಮದ್ ಭಾಗವತಮ್ ಅಥವಾ ಭಗವದ್ಗೀತೆಯ ಪ್ರತಿಯೊಂದನ್ನು ತೆಗೆದುಕೊಳ್ಳಿ. ಈ ಪುಸ್ತಕಗಳು ಬಹುಮುಖ್ಯವಾದ ಪ್ರಶ್ನೆಗಳಿಗೆ ಉತ್ತರಗಳನ್ನು ನೀಡುತ್ತವೆ.
ಭಾಗವತಮ್‌ನಲ್ಲಿ ಚರ್ಚಿಸುತ್ತಿರುವ ವಿಷಯಗಳು ತೃಪ್ತಿಕರವಾಗಿವೆ ಎನ್ನುವುದನ್ನು ನೀವು ಕಂಡುಕೊಳ್ಳುವಿರಿ. ಅವು ತರ್ಕಶುದ್ಧವಾಗಿಯೂ ಮತ್ತು ಒಪ್ಪಿಕೊಳ್ಳಬಹುದಾಗಿಯೂ ಆಗಿವೆ. ಶ್ರೀಮದ್ ಭಾಗವತಮ್ ನಲ್ಲಿ ಆದೇಶಿಸಿರುವಂತೆ ನೀವು ಆಧ್ಯಾತ್ಮಿಕ ಜೀವನವನ್ನು ನಡೆಸಿದರೆ ನೀವು ಪರಮಾನಂದವನ್ನು ಪರಮ ಜ್ಞಾನವನ್ನು ಮತ್ತು ಸಾವಿನಿಂದ ಬಿಡುಗಡೆಯನ್ನು ಅನುಭವಿಸುತ್ತೀರಿ. ಶ್ರೀಮದ್ ಭಾಗವತಮ್ ನ ಸಾಮರ್ಥ್ಯಕ್ಕೆ ಇದು ರುಜುವಾತು.
ಭಗವದ್ಗೀತಾ ಮತ್ತು ಶ್ರೀಮದ್ ಭಾಗವತಮ್‌ನಲ್ಲಿ ನೀಡಿರುವ ಜ್ಞಾನವನ್ನು ರಾಜವಿದ್ಯಾ ಎನ್ನಲಾಗುತ್ತದೆ. ಅಂದರೆ ‘ಜ್ಞಾನದ ರಾಜ’ ಎಂದು ಅರ್ಥ. ‘ಈ ಜ್ಞಾನವು ಶಿಕ್ಷಣದ ರಾಜ, ಎಲ್ಲ ರಹಸ್ಯಗಳ ಪರಮ ರಹಸ್ಯ. ಇದು ಪರಿಶುದ್ಧವಾದ ಜ್ಞಾನ, ಏಕೆಂದರೆ ಸಾಕ್ಷಾತ್ಕಾರದ ಮೂಲಕ ಇದು ಆತ್ಮಕ್ಕೆ ನೇರ ಗ್ರಹಿಕೆಯನ್ನು ನೀಡುತ್ತದೆ. ಇದು ಧರ್ಮದ ಪರಿಪೂರ್ಣತೆ. ಇದು ಶಾಶ್ವತವಾದದ್ದು ಹಾಗೂ ಸಂತೋಷದಿಂದ ನೆರವೇರಿಸಿದ್ದು ಎಂದು ಭಗವದ್ಗೀತೆ (9.2) ವಿವರಿಸುತ್ತಿದೆ.
ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ, ಸಾಹಿತ್ಯ, ಇತಿಹಾಸ, ಮನಃಶಾಸ್ತ್ರ, ಕಲೆ ಅಥವಾ ಸಂಗೀತ ಮೊದಲಾದ ಯಾವುದೇ ಜ್ಞಾನವೂ ಸಾಕ್ಷಾತ್ಕಾರದ ಮೂಲಕ ತನ್ನತನ, ಆತ್ಮದ ಜ್ಞಾನವನ್ನು ನೀಡುವುದಿಲ್ಲ. ಜೀವನದ ಸಂತಸವನ್ನು ಸ್ಥಿರವಾಗಿ ಮತ್ತು ಗ್ರಾಹ್ಯವಾಗಿ ಹೆಚ್ಚಿಸುವ ಮತ್ತೊಂದು ಜ್ಞಾನವಿಲ್ಲ.






Leave a Reply