ಸಂವಾದ
ಸ್ಥಳ: ಹೊನೊಲುಲು, ದಿನಾಂಕ 15ನೇ ಮೇ, 1976
ಶೀಲ ಪ್ರಭುಪಾದರು ಮತ್ತು ಅವರ ಕೆಲವು ಶಿಷ್ಯರ ಬೆಳಗಿನ ಜಾವದ ಹವಾಸೇವನೆ ನಡಗೆಯಲ್ಲಿ ನಡೆದ ಸಂವಾದ ರೂಪ
– ಅನುವಾದ : ಡಾ|| ಕೆ. ವೈ. ಬಾಲರಾಜ್
ಶ್ರೀಲ ಪ್ರಭುಪಾದ : ಭಗವಂತನು ಪ್ರತಿಯೊಂದನ್ನೂ ಸೃಷ್ಟಿಸಿದ್ದಾನೆ. ಅವನು ಆತ್ಮ ಹಾಗೂ ಚೇತನಗಳೆರಡನ್ನೂ ಸೃಷ್ಟಿಸಿದ್ದಾನೆ.

ಶಿಷ್ಯ 1 : ವ್ಯಕ್ತಿಗತವಾದ ಆತ್ಮವನ್ನು.
ಶ್ರೀಲ ಪ್ರಭುಪಾದ : ಹೌದು.
ಶಿಷ್ಯ 1 : ಶ್ರೀಲ ಪ್ರಭುಪಾದರೆ, ಕೆಲವರು ಕೇಳಬಹುದು – “ಆತ್ಮವನ್ನು ಭಗವಂತನು ಸೃಷ್ಟಿಸಿದ್ದಾನೆ ಎಂದು ನೀವು ಹೇಳುತ್ತೀರಿ. ಆತ್ಮಕ್ಕೆ ಪ್ರಾರಂಭವಿದ್ದರೆ ಮತ್ತು ಅದು ಸೃಷ್ಟಿಸಲ್ಪಟ್ಟಿದೆಯೆಂದರೆ ಆತ್ಮವು ಹೇಗೆ ಶಾಶ್ವತವಾಗುತ್ತದೆ?”
ಶ್ರೀಲ ಪ್ರಭುಪಾದ : ಇಲ್ಲ ಆತ್ಮಕ್ಕೆ ಪ್ರಾರಂಭವಿಲ್ಲ. ಹೇಗೆ ಭಗವಂತನಿಗೆ ಆರಂಭವಿಲ್ಲವೋ, ಅದೇ ರೀತಿಯಾಗಿ ಆತ್ಮಕ್ಕೂ ಆರಂಭವಿಲ್ಲ.
ಶಿಷ್ಯ 1 : ಆರಂಭವಿಲ್ಲವೇ?
ಶ್ರೀಲ ಪ್ರಭುಪಾದ : ಕೃಷ್ಣನು ಭಗವದ್ಗೀತೆಯಲ್ಲಿ ಹೇಳಿದ್ದಾನೆ. ನ ಜಾಯತೇ ನ ಮ್ರಿಯತೇ ವಾ ”ಶಾಶ್ವತ ಆತ್ಮಕ್ಕೆ ಜನನ ಅಥವಾ ಮೃತ್ಯು ಇಲ್ಲ”, ಅದುವೇ ಜಡ ಮತ್ತು ಚೇತನಗಳ ಮಧ್ಯೆ ಇರುವ ವ್ಯತ್ಯಾಸ.
ಶಿಷ್ಯ 2 : ಕೆಲವರು ಹೇಳುತ್ತಾರೆ, ಭಗವಂತನು ಒಂದು ವೇಳೆ ಸರ್ವಶಕ್ತನಾದರೆ ಅವನು ಏನು ಬೇಕಾದರೂ ಮಾಡಬಹುದು. ಹಾಗಾದರೆ ಭಗವಂತನು ಯಾವುದೇ ಒಂದು ಸಮಯದಲ್ಲಿ ಆತ್ಮವನ್ನು ಸೃಷ್ಟಿಸಿದಾಗ ಅದೇ ಕ್ಷಣದಿಂದ ಆ ಆತ್ಮವು ಶಾಶ್ವತವಾಗುವುದೇ? ಬೈಬಲ್ ನ ಪ್ರಕಾರ ಕೆಲವರು ಹೇಳುತ್ತಾರೆ ಈ ಜಗತ್ತಿನಲ್ಲಿ ನಿಮಗೆ ಒಂದೇ ಸಲ ಜೀವನವೆಂಬುದು ಸಿಗುತ್ತದೆ ಎಂದು. ಹಾಗಾದರೆ ಕೆಲವರು ಧಾರ್ಮಿಕ ಸನ್ನಿವೇಶದಲ್ಲಿ ಮತ್ತು ಕೆಲವರು ಅಧಾರ್ಮಿಕ ಸನ್ನಿವೇಶದಲ್ಲಿ ಹುಟ್ಟುತ್ತಾರೆ ಎಂದು ಅವರಿಗೆ ತಿಳಿಸಲು ಆಗುವುದಿಲ್ಲ.
ಶ್ರೀಲ ಪ್ರಭುಪಾದ : ಅವರಿಗೆ ಕರ್ಮದ ನಿಯಮ ಗೊತ್ತಿಲ್ಲ. ಕರ್ಮಣಾ ದೈವ ನೇತ್ರೇಣ – ಪೂರ್ವದಲ್ಲಿ ಮಾಡಿರುವ ಧಾರ್ಮಿಕ ಅಥವಾ ಅಧಾರ್ಮಿಕ ಚಟುವಟಿಕೆಗಳಿಗೆ ಅನುಸಾರವಾಗಿ ಒಬ್ಬ ವ್ಯಕ್ತಿಗೆ ಮುಂದಿನ ಜನ್ಮಸಿಗುತ್ತದೆ. ಇದು ವಿವೇಕಯುಕ್ತವಾದುದು. ಆದರೆ ಜನರಿಗೆ ಕರ್ಮದಲ್ಲಿ ನಂಬಿಕೆಯಿಲ್ಲ.
ನಾನು ಸ್ಕಾಟಿಷ್ ಚರ್ಚ್ ಕಾಲೇಜಿನ ವಿದ್ಯಾರ್ಥಿಯಾಗಿದ್ದಾಗ ಅಲ್ಲಿ ಒಂದೂವರೆ ಘಂಟೆಯ ಬೈಬಲ್ ಕ್ಲಾಸಿಗೆ ಹೋಗುತ್ತಿದ್ದೆ. ಅಲ್ಲಿ ಡಾ|| ಉರ್ಖಹರ್ತ್ ಅವರು ”ಒಂದು ವೇಳೆ ಕರ್ಮ ಅಸ್ತಿತ್ವದಲ್ಲಿದೆ ಎಂದರೆ ಮತ್ತು ಕರ್ಮದಿಂದಲೇ ನಾನು ದುಃಖಪಡುತ್ತಿದ್ದೇನೆ ಎಂದರೆ, ಇದಕ್ಕೆ ಸಾಕ್ಷಿಯಾರು?” ಎಂದು ವಾದಿಸಿದರು.
ಭಗವಂತನೇ ಇದಕ್ಕೆ ಸಾಕ್ಷಿಯಾಗಿದ್ದನೆಂದು ಅವರಿಗೆ ಗೊತ್ತಿಲ್ಲ. ಪರಮ ಆತ್ಮನಾದ ಪರಮಾತ್ಮನೇ ಇದಕ್ಕೆ ಸಾಕ್ಷಿಯಾಗಿದ್ದಾನೆ. ಕ್ರೈಸ್ತರು ಹೇಳುತ್ತಾರೆ ”ಪವಿತ್ರಾತ್ಮ’ವು ನೀವು ಏನು ಮಾಡುತ್ತೀರಿ ಎಂದು ನೋಡುತ್ತಲೇ ಇರುತ್ತದೆ. ಪವಿತ್ರಾತ್ಮವು ನಿಮ್ಮ ಕರ್ಮಗಳಿಗೆ ಅನುಗುಣವಾಗಿ ನಿಮಗೆ ಮುಂದಿನ ಜನ್ಮವನ್ನು ಕೊಡುತ್ತದೆ.
ಆದರೆ ಭಗವಂತನು ಪ್ರತಿಯೊಬ್ಬರ ಹೃದಯದಲ್ಲಿಯೂ ಸ್ಥಿತನಾಗಿದ್ದಾನೆ ಮತ್ತು ಎಲ್ಲವನ್ನೂ ಗಮನಿಸುತ್ತಿರುತ್ತಾನೆ. ಬ್ರಾಹ್ಮಯಾನ್ ಸರ್ವ-ಭೂತಾನಿ ಯಂತ್ರಾ-ರೂಢಾನಿ ಮಾಯಯಾ. ”ಪರಮ ಪ್ರಭು ಎಲ್ಲರ ಹೃದಯದಲ್ಲಿಯೂ ಇದ್ದಾನೆ. ಭೌತಿಕ ಶಕ್ತಿಯಿಂದ ಮಾಡಲ್ಪಟ್ಟ ಯಂತ್ರದಲ್ಲಿ ಕುಳಿತಿರುವ ಜೀವಿಗಳನ್ನು ನಿರ್ದೇಶಿಸುತ್ತಿದ್ದಾನೆ.

ಶಿಷ್ಯ 2 : ಶ್ರೀಲ ಪ್ರಭುಪಾದರೆ, ಕೈಸ್ತರು ಹೇಳುತ್ತಾರೆ, ಒಬ್ಬ ವ್ಯಕ್ತಿ ಭಗವಂತನ ಬಗ್ಗೆ ಈ ಜೀವನದಲ್ಲಿ ಪೂರ್ಣವಾಗಿ ಅರಿತುಕೊಳ್ಳದಿದ್ದರೆ ಅವನಿಗೆ ಇನ್ನೊಂದು ಅವಕಾಶವಿಲ್ಲ.
ಶ್ರೀಲ ಪ್ರಭುವಾದ : ಹೇಗೆ ನೀವು ಒಂದೇ ಜೀವನ” ಎಂದು ಹೇಳುತ್ತೀರಿ? ಇದು ದೋಷಯುತವಾದ ಸಿದ್ಧಾಂತ. ಆದ್ದರಿಂದ ತತ್ತ್ವ ಶಾಸವು ಈ ಸಿದ್ಧಾಂತವನ್ನು ಒಪ್ಪಿಕೊಳ್ಳುವುದಿಲ್ಲ. ಯಾವುದೇ ದೋಷ ಪೂರ್ಣವಾಗಿರುವುದನ್ನು ಒಪ್ಪಿಕೊಳ್ಳಲಾಗುವುದಿಲ್ಲ.
ಶಿಷ್ಯ 2 : ಇದು ಕೇವಲ ಮತಾಂಧ ತತ್ತ್ವಸಿದ್ಧಾಂತ.
ಶ್ರೀಲ ಪ್ರಭುಪಾದ : ಹೌದು, ಬರೀ ಮತಾಂಧ ತತ್ತ್ವಸಿದ್ಧಾಂತವನ್ನು ತಿರಸ್ಕರಿಸಲಾಗುತ್ತದೆ. ಅದುವೇ ವೈದಿಕ ಪ್ರಕ್ರಿಯೆ.
ಶಿಷ್ಯ 1 : ನಿಜವಾಗಿಯೂ ಕ್ರಿಸ್ತನು ಅದನ್ನು ಹೇಳಿಲ್ಲ. ಅವನು ಒಂದೇ ಜೀವನ ಇದೆ ಎಂದು ಹೇಳಿಲ್ಲ.
ಶ್ರೀಲ ಪ್ರಭುಪಾದ : ಹಾಗಾದರೆ ಅದುವೇ ನಿಜವಾದ ತತ್ತ್ವಸಿದ್ಧಾಂತ.
ಶಿಷ್ಯ 1 : ಕೇವಲ ಒಂದೇ ಬಾರಿ ಜೀವನ ಇದೆ ಎನ್ನುವ ಯೋಚನೆ ಚರ್ಚಿನ ಧರ್ಮ ಗುರುಗಳಿಂದ ಬಂದಿದೆ. ಇದು ಬಹುಶಃ ಬಲಪ್ರಯೋಗದ ಮಾರ್ಗವೂ ಆಗಿರಬಹುದು. “ನಿಮಗೆ ಒಂದೇ ಬಾರಿ ಜೀವನ ಸಿಗುತ್ತದೆ. ಅದಕ್ಕೆ ನಮ್ಮ ಆದೇಶಗಳನ್ನು ಅನುಸರಿಸಿ ಎಂದು”.
ಶ್ರೀಲ ಪ್ರಭುಪಾದ : ಅದೆಲ್ಲ ದೋಷಪೂರ್ಣವಾದದ್ದು. ನೀತಿ ನಿಷ್ಠೆ ಇಲ್ಲದ್ದು.
ಶಿಷ್ಯ 3 : ಕೆಲವು ಜನರು “ನೀವುಗಳು ನಮ್ಮಂತೆ ಕ್ರಿಸ್ತನನ್ನು ಒಪ್ಪಿಕೊಳ್ಳದೇ ಹೋದರೆ ಸಫಲರಾಗಲಾರಿರಿ” ಎಂದು ಹೇಳುತ್ತಾರೆ.
ಶ್ರೀಲ ಪ್ರಭುಪಾದ : ನಾವು ಇದನ್ನು ಒಪ್ಪಿಕೊಳ್ಳುತ್ತೇವೆ. ಆದರೆ ನೀವುಗಳು ಕ್ರಿಸ್ತ ಹೇಳಿದ ”ನೀವು ಯಾರನ್ನೂ ಕೊಲ್ಲಬಾರದು” ಎಂಬುವುದನ್ನು ಒಪ್ಪಿಕೊಳ್ಳುವುದಿಲ್ಲ. ನಾವು ಅವನ ಮಾತುಗಳನ್ನು ಚಾಚೂ ತಪ್ಪದೇ ಪಾಲಿಸುತ್ತೇವೆ. ಆದರೆ ನೀವು ಪ್ರಾಣಿಗಳನ್ನು ಕೊಲ್ಲುತ್ತೀರಿ. ನೀವುಗಳು ಕ್ರೈಸ್ತರಲ್ಲ.
ಶಿಷ್ಯ 4 : ಅವರು ಹೇಳಬಹುದು ”ಹತ್ತು ಆಜ್ಞಾವಿಧಿಗಳು ಕೇವಲ ಆದರ್ಶಮಯವಾಗಿದೆ. ಅದನ್ನು ನೀವು ಪರಿಪೂರ್ಣವಾಗಿ ಅನುಸರಿಸುವ ಅವಶ್ಯಕತೆಯಿಲ್ಲ” ಎಂದು.

ಶ್ರೀಲ ಪ್ರಭುಪಾದ : ಇಲ್ಲ. ಅದು ನಿನ್ನ ವಿವರಣೆ. ನಿನ್ನ ಕಲ್ಪನೆ. ನೀವು ಯಾವಾಗ ಹತ್ತು ಆಜ್ಞಾವಿಧಿಗಳನ್ನು ಪಾಲಿಸುವುದಿಲ್ಲವೋ ಆಗ ನೀವು ಕ್ರೈಸ್ತರಲ್ಲ. ನೀವು ಧರ್ಮವಂತರಲ್ಲ ಅಧರ್ಮಿಗಳು. ಕೇವಲ ಧಾರ್ಮಿಕ ಶ್ರದ್ಧೆಯನ್ನೇ ನಾವು ಚರ್ಚೆ ಮಾಡಲು ಹೋಗಬಾರದು. ಪ್ರತಿಯೊಬ್ಬರಿಗೂ ತಮ್ಮದೇ ಆದ ಕಲ್ಪನೆಗಳು, ನಂಬಿಕೆಗಳು ಇವೆ. ಅವು ತತ್ತ್ವಸಿದ್ಧಾಂತ ಅಲ್ಲ. ನಂಬಿಕೆ ಬೇರೆ. ”ನಾನು ನಂಬಿದ್ದೇನೆ”, “ನೀನು ನಂಬಿದ್ದೀಯಾ”, ”ನಾನು ನಂಬುವುದಿಲ್ಲ” ಇವೆಲ್ಲವೂ ತತ್ತ್ವಸಿದ್ಧಾಂತಗಳಲ್ಲ.
ಭಗವದ್ಗೀತೆಯಲ್ಲಿ ಶ್ರೀಕೃಷ್ಣನು ಹೇಳುತ್ತಾನೆ. ದೇಹಿನೋಸ್ಮಿನ್ ಯಥಾ ದೇಹೇ, ‘ದೇಹಸ್ಥ ಆತ್ಮವು ಈ ದೇಹದಲ್ಲಿ ಬಾಲ್ಯದಿಂದ ಯೌವನಕ್ಕೆ ಮುಪ್ಪಿಗೆ ಒಂದೇ ಸಮನೆ ಸಾಗುವ ರೀತಿಯಲ್ಲಿ ಆತ್ಮವು ಸಾವಿನ ಅನಂತರ ಮತ್ತೊಂದು ದೇಹಕ್ಕೆ ಸಾಗುತ್ತದೆ. ಧೀರನಾದವನು ಇದರಿಂದ ಗೊಂದಲಕ್ಕೆ ಒಳಗಾಗುವುದಿಲ್ಲ”.
ವೇದಾಂತವಿಲ್ಲದ ಧರ್ಮವು ಕೇವಲ ಮನೋಭಾವನೆ ಮತ್ತು ಧರ್ಮವಿಲ್ಲದ ವೇದಾಂತವು ಕೇವಲ ಮಾನಸಿಕ ಕಲ್ಪನೆ. ಆದ್ದರಿಂದ ಧರ್ಮವನ್ನು ಆತ್ಮದ ತತ್ತ್ವಸಿದ್ಧಾಂತದೊಂದಿಗೆ ಸಂಯೋಜಿನೆಗೊಳಿಸಬೇಕು. ಆಗ ಅದು ಪರಿಪೂರ್ಣವಾಗುತ್ತದೆ.
ಶಿಷ್ಯ 3: ಶ್ರೀಲ ಪ್ರಭುಪಾದರೆ, ಕೆಲವು ಜನರು ವಾದಿಸುತ್ತಾರೆ, ಅತಿಯಾದ ವೇದಾಂತವು ಜೀವನ ಸುಖವನ್ನೇ ತೆಗೆದುಹಾಕುತ್ತದೆ ಎಂದು. ಅವರು ಹೇಳುತ್ತಾರೆ, ಭಗವಂತನು ಈ ಜಗತ್ತನ್ನು ನಮಗೆ ಸುಖ ಅನುಭವಿಸಲು ನಮ್ಮ ಮುಂದೆ ಇಟ್ಟಿದ್ದಾನೆ. ಆದ್ದರಿಂದ ಅದನ್ನು ಅನುಭವಿಸುವುದರ ಮೂಲಕ ಭಗವಂತನನ್ನು ತೃಪ್ತಗೊಳಿಸುತ್ತೇವೆ.
ಶ್ರೀಲ ಪ್ರಭುಪಾದ : ನೀನು ಬೆಳಗ್ಗೆ ನಾಲ್ಕು ಘಂಟೆಗೆ ಕೆಲಸಕ್ಕೆ ಹೋಗುತ್ತೀಯ ಮತ್ತು ರಾತ್ರಿ ಹತ್ತು ಘಂಟೆಗೆ ವಾಪಾಸು ಬರುತ್ತೀಯ ಇದರಲ್ಲಿ ಏನು ಸುಖ ಇದೆ?
ಶಿಷ್ಯ 3: ಆದರೆ ವಾರಾಂತ್ಯದಲ್ಲಿ ನಾವು ಸಮುದ್ರ ದಡಕ್ಕೆ ಹೋಗಬಹುದು ಮತ್ತು ನಮಗೇನು ಬೇಕು ಅದನ್ನು ನಾವು ತಿನ್ನಬಹುದು.
ಶ್ರೀಲ ಪ್ರಭುಪಾದ : ನೀವು ನರಕಕ್ಕೂ ಹೋಗಬಹುದು. ಜನ್ಮ-ಮೃತ್ಯು-ಜರಾ-ವ್ಯಾಧಿ- ದುಃಖದೋಷಾನುದರ್ಶನಮ್, ಜನನ, ಮೃತ್ಯು, ರೋಗ ಮತ್ತು ವೃದ್ಧಾಪ್ಯದ ಕ್ಲೇಶಗಳ ಬಗ್ಗೆ ಯೋಚಿಸಿ. ಇವೆಲ್ಲವೂ ಇದ್ದೇ ಇವೆ. ನೀವು ರೋಗದಿಂದ ನರಳುತ್ತಿದ್ದರೆ ನಿಮಗೆ ಸುಖವೆಲ್ಲಿದೆ? ಮಾನಸಿಕ ಅಸ್ವಾಸ್ಥ್ಯ, ದೈಹಿಕ ಅಸ್ವಾಸ್ಥ್ಯ ಮತ್ತು ನೆಮ್ಮದಿಗೋಸ್ಕರ ನೀನು ದಿನಕ್ಕೆ ಮೂರು ಮಾತ್ರೆಗಳನ್ನು ತೆಗೆದುಕೊಳ್ಳುತ್ತಿರುವೆ. ಇದು ಸುಖವೇ?
ಶಿಷ್ಯ 3 : ಅವರು ಹೇಳುತ್ತಾರೆ. ಒಳ್ಳೆಯದರೊಂದಿಗೆ ಕೆಟ್ಟದ್ದನ್ನು ತೆಗೆದುಕೊಳ್ಳಬೇಕೆಂದು.
ಶ್ರೀಲ ಪ್ರಭುಪಾದ : ಇದು ಮೂರ್ಖರ ಸುಖ. ಭ್ರಾಂತಿಯುತ ಸ್ವರ್ಗ. ಮನಸ್ಸನ್ನು ಶಾಂತವಾಗಿಡಲು ಮತ್ತು ನಿದ್ರೆಗಾಗಿ ಮಾತ್ರೆಗಳನ್ನು ಒಬ್ಬ ತೆಗೆದುಕೊಳ್ಳುತ್ತಿದ್ದರೆ, ಅದರಿಂದ ಅವನಿಗೆ ಸುಖ ಸಿಗುತ್ತದೆಯೇ?
ಶಿಷ್ಯ 3 : ದುಃಖ ಪಡುವುದರಿಂದಲೇ ನಿಮ್ಮ ಸುಖದ ಆಳವಾದ ಬೆಲೆ ಏನೆಂದು ಗೊತ್ತಾಗುತ್ತದೆ.
ಶ್ರೀಲ ಪ್ರಭುಪಾದ : ಹಾಗಾದರೆ ನಿಮ್ಮ ಸುಖವೆಂದರೇನು? ದುಃಖವೇ? ಹಾಗಾದರೆ ನಿಮ್ಮ ಸುಖಕ್ಕೆ ಏನೆಂದು ಕರೆಯುತ್ತೀರಿ?






Leave a Reply