ಆಯುರ್ವೇದ – ಮೂಲ ಮತ್ತು ಉದ್ದೇಶ

ಆಯುರ್ವೇದ ರೋಗಗಳನ್ನು ಗುಣಪಡಿಸುವ ವೈದ್ಯ ಪದ್ಧತಿ ಮಾತ್ರವಲ್ಲ. ಅದೊಂದು ಜೀವಶಾಸ್ತ್ರ, ಆಧ್ಯಾತ್ಮಿಕ ಸಾಧನೆಗೆ ದೇಹವನ್ನು ಸುಸ್ಥಿತಿಯಲ್ಲಿರಿಸುವ ಅಲೌಕಿಕ ಸಾಧನ. ಆಚಾರ್ಯ ಚರಕನ “ಚರಕಸೂತ್ರ”ದ ಶ್ಲೋಕಗಳು ಇದನ್ನು ದೃಢಪಡಿಸುತ್ತವೆ.

ಮನೋಜ್‌, ಸುಮ, ವಿದ್ಯಾರ್ಥಿಗಳು, ಗವರ್ನ್‌ಮೆಂಟ್‌ ಮೆಡಿಕಲ್‌ ಕಾಲೇಜು, ಬೆಂಗಳೂರು.

ಆಯುರ್ವೇದ!

ಈ ಪದ ಕೇಳಿದ ಕೂಡಲೇ ಬಹುತೇಕರಿಗೆ ಉದ್ದನೆಯ ಗಡ್ಡ-ಮೀಸೆಗಳ ವೃದ್ಧ, ಕುಟ್ಟಣಿಯಲ್ಲಿ ನಾರು-ಬೇರು ಅರೆಯುತ್ತಿರುವ ಚಿತ್ರ ಕಣ್ಣುಂದೆ ಹಾದು ಹೋಗುತ್ತದೆ.

‘ಆಯುರ್ವೇದ’ ಒಂದು ಪುರಾತನ ವೈದ್ಯ ಪದ್ಧತಿ. ಇದು ಭಾರತದಲ್ಲಿ ಪಾರಂಪರಿಕವಾಗಿ ನಡೆದುಬಂದಿದೆ. ಈ ಪದ್ಧತಿಯಲ್ಲಿ ನಾರು-ಬೇರುಗಳಿಂದ ಔಷಧಿ ತಯಾರಿಸುತ್ತಾರೆ. ಯಾವುದೇ ಅಡ್ಡ ಪರಿಣಾಮ ಬೀರದ ಇದು, ಅತಿ ನಿಧಾನವಾಗಿ ಪರಿಣಾಮ ಬೀರುವ ವೈದ್ಯ. ಇವೆಲ್ಲ ಆಯುರ್ವೇದದ ಬಗ್ಗೆ ಪ್ರಚಲಿತವಿರುವ ತಿಳುವಳಿಕೆಗಳು.

ಆದರೆ ಆಯುರ್ವೇದ ಎಂದರೆ ಇಷ್ಟು ಮಾತ್ರವೇ? ಆಯುರ್ವೇದದ ಬಗ್ಗೆ ಇರುವ ಕಲ್ಪನೆಗಳು ಅದೆಷ್ಟು ಸರಿ? ಇಷ್ಟಕ್ಕೂ ಆಯರ್ವೇದ ಎಂದರೆ ಏನು?

ಇಲ್ಲ, ಆಯುರ್ವೇದ ಅಂದರೆ ಅಷ್ಟು ಮಾತ್ರವಲ್ಲ, ಪ್ರಸ್ತುತ ನಾವು ತಿಳಿದಿರುವುದಕ್ಕಿಂತಲೂ ಅಸಾಧ್ಯವಾಗಿದೆ ಅದರ ವ್ಯಾಪ್ತಿ! ಸದ್ಯಕ್ಕೆ ಆಯುರ್ವೇದದ ಬಗ್ಗೆ ಒಂದಷ್ಟು ಸತ್ಯದ ತುಣುಕುಗಳನ್ನಷ್ಟೇ ನಾವೀಗ ನೋಡೋಣ.

‘ಆಯುರ್ವೇದ’, ಈ ಹೆಸರು ಆಯುಃ’ ಮತ್ತು ವೇದ’ ಪದಗಳಿಂದ ಬಂದಿದೆ.ಆಯುಃʼ ಅಂದರೆ-

ಶರೀರೇಂದ್ರಿಯ ಸತ್ತ್ವಮಾತ್ಮ

ಸಂಯೋಗೀಧಾರಿ ಜೀವಿತಮ್ |

ನಿತ್ಯಗತ್ಯಾನುಬಂಧಸ್ಯ

ಪರ್ಯಾಯೇಕಾಯುರುಚ್ಯತೇ || (ಚ.ಸೂ.2)

ಆಯುರ್ವೇದ ವೈದ್ಯ ಪದ್ಧತಿಯ ಶ್ರೇಷ್ಠ ಆಚಾರ್ಯ ಚರಕ ಹೇಳುವಂತೆ,ಆಯುಃ’ ಎನ್ನುವ ಪದವು, ಶರೀರ- ಆತ್ಮ-ಮನಸ್ಸು ಮತ್ತು ಇಂದ್ರಿಯಗಳ ಸಂಯೋಗದಿಂದ ಆಗಿದೆ. ಇವೆಲ್ಲವುಗಳ ಒಟ್ಟು ಮೊತ್ತವೇ ಜೀವ. ಹೀಗಾಗಿ ಆಯುಃ ಎನ್ನುವುದರ ಅರ್ಥ ‘ಜೀವ’ ಎಂದಾಗುತ್ತದೆ.

ವೇದ’ ಎಂದರೆ ‘ತಿಳುವಳಿಕೆ’ ಅಥವಾ ‘ಜ್ಞಾನ’. ಹೀಗಾಗಿ, ಆಯುರ್ವೇದವು ಕೇವಲ ಸಾಂಪ್ರದಾಯಿಕ ವೈದ್ಯ ಪದ್ಧತಿಯಾಗಿರದೆ, ‘ಜೀವವಿಜ್ಞಾನ’ವೂ ಆಗಿದೆ.

ವೈದಿಕ ವಿದ್ವಾಂಸರ ಪ್ರಕಾರ,

ತಸ್ಯಾಯುಷಃ ಪುಣ್ಯತಮಂ

ವೇದೋ ವೇದವಿದಾಂ ಮತಃ |

ವಕ್ಷ್ಯತೇ ಯನ್ಮನುಷ್ಯಾಣಾಂ

ಲೋಕಯೋರು ಭಯೋರ್ಹಿತಮ್ || (ಚ.ಸೂ.-1)

ಆಯುರ್ವೇದ ಬಹಳ ಪವಿತ್ರವಾದ ಶಾಸ್ತ್ರ. ಮಾನವರಿಗೆ ಇಂದಿನ ಮತ್ತು ಮುಂದಿನ ಜನ್ಮಗಳೆರಡರಲ್ಲೂ ಫಲ ನೀಡುವ ವಿಜ್ಞಾನ ಇದು.

ಪ್ರಮಾಣೀಕೃತ ವೈದಿಕ ದಾಖಲೆಗಳಿಂದ ನಮಗೆ, ಆಯುರ್ವೇದವು ಕೇವಲ ರೋಗಗಳನ್ನು ಗುಣಪಡಿಸಲು ಇರುವ ಪರ್ಯಾಯ ಮಾತ್ರವಲ್ಲ, ಅದು ಜೀವನ ಕುರಿತು ಮಾಹಿತಿ ನೀಡುವ ಆಕರವೂ ಆಗಿದೆ ಎಂದು ತಿಳಿದುಬರುತ್ತದೆ.

ಭಗವದ್ಗೀತೆಯಲ್ಲಿ ಶ್ರೀಕೃಷ್ಣ,

ದೇಹಿನೋ ಅಸ್ಮಿನ್‌ ಯಥಾ ದೇಹೇ

ಕೌಮಾರಮ್ ಯೌವನಮ್ ಜರಾ

ತಥಾ ದೇಹಾಂತರ ಪ್ರಾಪ್ತಿಃ

ಧೀರಸ್ತತ್ರ ಮುಹ್ಯತಿ (ಭ.ಗೀ.2.13)

ಎಂದಿದ್ದಾನೆ. ಇದರ ಅರ್ಥ –

“ದೇಹಸ್ಥ ಆತ್ಮವು ಈ ದೇಹದಲ್ಲಿ ಬಾಲ್ಯದಿಂದ ಯೌವನಕ್ಕೆ, ಮುಪ್ಪಿಗೆ ಒಂದೇ ಸಮನೆ ಸಾಗುವ ರೀತಿಯಲ್ಲೇ ಆತ್ಮವು ಸಾವಿನ ಅನಂತರ ಮತ್ತೊಂದು ದೇಹಕ್ಕೆ ಸಾಗುತ್ತದೆ. ಧೀರನಾದವನು ಇದರಿಂದ ಗೊಂದಲಕ್ಕೆ ಒಳಗಾಗುವುದಿಲ್ಲ.”

ಇದೇ ಮಾರ್ಗದಲ್ಲಿ ಸಾಗುವ ಆಯುರ್ವೇದ ಕೂಡ, ‘ಜೀವದ ಅಸ್ತಿತ್ವಕ್ಕೆ ಆತ್ಮವೇ ಮೂಲಧಾತು’ ಎಂದು ಹೇಳುತ್ತಾ, ಅದನ್ನು ಸಾಧಿಸಿಯೂ ತೋರಿಸುತ್ತದೆ.

ಈ ಹಿಂದೆ ಹೇಳಿದಂತೆ, ಜೀವವು ದೇಹ, ಮನಸ್ಸು, ಆತ್ಮ ಮತ್ತು ಇ೦ದ್ರಿಯಗಳ ಮೊತ್ತವಾಗಿದೆ. ಈ ಸೂತ್ರವನ್ನು ಪ್ರತಿಪಾದಿಸುತ್ತಾ ಆಚಾರ್ಯ ಚರಕನು – “ಮಣ್ಣು ಚಕ್ರ, ಕೋಲುಗಳು ಇದ್ದ ಮಾತ್ರಕ್ಕೆ ಮಡಕೆ ಆಗಿಬಿಡುವುದೇನು? ಅದನ್ನು ತಯಾರಿಸಲು ಕುಂಬಾರ ಬೇಡವೇ?

ಹಾಗಿದ್ದ ಮೇಲೆ, ಆತ್ಮವೇ ಇಲ್ಲದೆ ಕೇವಲ ಇಂದ್ರಿಯಗಳು ಮತ್ತು ಮನಸ್ಸುಗಳ ಇರುವಿಕೆಯಿಂದ ಜೀವವನ್ನು ಸೃಷ್ಟಿಸಲು ಹೇಗಾದೀತು? ಅವೆಲ್ಲ ತಿಳುವಳಿಕೆ ಇಲ್ಲದ, ಮಂಕುಬುದ್ಧಿಯ ಜನರು ನೀಡುವ ಹೇಳಿಕೆಗಳಷ್ಟೇ” ಎಂದು ಸಾಮತಿಯ ಮೂಲಕ ಸ್ಪಷ್ಟಪಡಿಸಿದ್ದಾನೆ.

ಆಯುರ್ವೇದ ಶಾಸ್ತ್ರದ ಪ್ರಸಿದ್ಧ ಆಚಾರ್ಯ ಚರಕನ ಈ ಮಾತುಗಳಿಂದಲೇ ಆಯುರ್ವೇದವು ಆತ್ಮದ ಪ್ರಾಮುಖ್ಯತೆ ಮತ್ತು ಆಧ್ಯಾತ್ಮಿಕ ಜೀವನದ ಮಹತ್ವವನ್ನು ಒತ್ತಿ ಹೇಳುತ್ತದೆ ಎನ್ನುವುದನ್ನು ಅರಿಯಬಹುದು. ಆಧ್ಯಾತ್ಮಿಕ ಜೀವನವನ್ನು ನಮ್ಮದಾಗಿಸಿಕೊಳ್ಳಲು ದೇಹ ಮತ್ತು ಆತ್ಮಗಳು ಜೊತೆಯಲ್ಲಿರುವುದು (ಸುಸ್ಥಿತಿಯಲ್ಲಿ) ಅತ್ಯವಶ್ಯಕ. ಇದೇ ಆಯುರ್ವೇದದ ಮೂಲ ಸೂತ್ರ.

ಚರಕನ ಮಾತುಗಳಲ್ಲಿ …

ಧರ್ಮಾರ್ಥಕಾಮ ಮೋಕ್ಷಾಣಾಂ

ಆರೋಗ್ಯಮ್ ಮೂಲ ಮುತ್ತಮಮ್ |

ರೋಗಸ್ತಸ್ಯಾಪಹರೋ ನಃ

ಶ್ರೇಯಸೋ ಜೀವಿತಸ್ಯ ಚ || (ಚ.ಸೂ.1)

“ಉತ್ತಮ ಆರೋಗ್ಯ – ಧರ್ಮ, ಅರ್ಥ, ಕಾಮ, ಮೋಕ್ಷಗಳೆಂಬ ನಾಲ್ಕು ಪುರುಷಾರ್ಥಗಳ ಸಾಧನೆಗೆ ಸಹಕಾರಿಯಾಗಿ ನಿಲ್ಲುತ್ತದೆ. ರೋಗಗಳು ಮಾನವನ ಆಧ್ಯಾತ್ಮಿಕ ಪ್ರಗತಿಗೆ ಅಡ್ಡವಾಗಿ ನಿಲ್ಲುತ್ತವೆ.”

ಆಯುರ್ವೇದವು ಪರಿಚಯಿಸಲ್ಪಟ್ಟಿದ್ದು ಈ ಕಾರಣದಿಂದಲೇ. ಇದೇ ಕಾರಣದಿಂದಾಗಿಯೇ ಆಚಾರ್ಯ ಸುಶ್ರುತನು ತನ್ನ ಸಂಗಾತಿಗಳೊಂದಿಗೆ ಧನ್ವಂತರೀ ದೇವತೆಯನ್ನು ಒಲಿಸಿಕೊಂಡು ಈ ರೀತಿ ಪ್ರಾರ್ಥಿಸಿದ್ದು –

”ಹೇ ದೇವ! ಭೂಲೋಕದ ಜೀವಿಗಳು ವಿವಿಧ ದೈಹಿಕ ಮತ್ತು ಮಾನಸಿಕ ಬಾಧೆಗಳಿಂದ ಗೋಳಾಡುತ್ತಿದ್ದಾರೆ. ಅವರು ತಮ್ಮನ್ನು ರಕ್ಷಿಸುವ ದೇವೋತ್ತಮನನ್ನೇ ಮರೆಯುತ್ತಿದ್ದಾರೆ. ಇದನ್ನು ನೋಡಿ ನಾವೆಲ್ಲ ವಿಪರೀತ ಸಂಕಟಗೊಂಡಿದ್ದೇವೆ. ಭಗವನ್! ಈ ಜೀವಿಗಳ ತೊಂದರೆಯನ್ನು ಹೋಗಲಾಡಿಸಿ ಅವರು ದೇವೋತ್ತಮನತ್ತ ತಮ್ಮ ಪ್ರಜ್ಞೆಯನ್ನು ಮರಳಿ ಪಡೆಯುವಂತೆ ಮಾಡಲು ನಾವು ಆಯುರ್ವೇದವನ್ನು ಕಲಿಯಲು ಅಪೇಕ್ಷೆಯುಳ್ಳವರಾಗಿದ್ದೇವೆ.”

ಆಯುರ್ವೇದ ಶಾಸ್ತ್ರ ಭೂಮಿಗೆ ಬಂದ ಉದ್ದೇಶವೇ ಅದು. ಆಧ್ಯಾತ್ಮಿಕ ಸಾಧನೆಗಾಗಿ ದೈಹಿಕ ಆರೋಗ್ಯವನ್ನು ಸುಸ್ಥಿತಿಯಲ್ಲಿರಿಸಿಕೊಳ್ಳುವುದು. ರೋಗರುಜಿನಗಳಿಂದ ಜೀವಿಗಳನ್ನು ಮೇಲಕ್ಕೆತ್ತಿ, ಲೌಕಿಕ ಪ್ರಜ್ಞೆಯತ್ತ – ಕೃಷ್ಣಪ್ರಜ್ಞೆಯತ್ತ ಕೊಂಡೊಯ್ಯುವುದು.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi