ಕೃಷ್ಣನಿಗೆ ಆಂಡಾಳ್‌‍ ಭಕ್ತಿ ಸಮರ್ಪಣೆ

(ಮಾರ್ಗಶಿರ / ಮಾರ್ಗಳಿ / ಧನುರ್‌‍ ಮಾಸ)

ಡಿಸೆಂಬರ್‌‍-ಜನವರಿಯಲ್ಲಿ ಮಂದಿರಗಳಲ್ಲಿ ಮುಂಜಾನೆಯೇ ಪೂಜೆ. ಭಕ್ತಿಸೇವೆಗಳಿಗೆ ಈ ಮಾರ್ಗಶಿರ ಮಾಸ ಮೀಸಲು. ಏನಿದರ ಮಹತ್ವ?

ಭಗವದ್ಗೀತೆಯಲ್ಲಿ ಭಗವಾನ್‌‍ ಕೃಷ್ಣನು ಹೀಗೆ ಹೇಳಿದ್ದಾನೆ, “ಸಾಮವೇದದಲ್ಲಿನ ಸ್ತೋತ್ರಗಳಲ್ಲಿ ನಾನು ಬೃಹತ್‌‍ ಸಾಮ, ಕಾವ್ಯದಲ್ಲಿ ಗಾಯತ್ರಿ, ಮಾಸಗಳಲ್ಲಿ ನಾನು ಮಾರ್ಗಶಿರ ಮತ್ತು ಋತುಗಳಲ್ಲಿ ಕುಸುಮಾಕರವಾದ ವಸಂತ” ಎಂದು ಕೃಷ್ಣ ಹೇಳಿದ್ದಾನೆ.

ಹೀಗಾಗಿ ಋಷಿಗಳು ಈ ಮಾಸವನ್ನು ಸಂಪೂರ್ಣವಾಗಿ ಭಕ್ತಿ ಚಟುವಟಿಕೆಗಳಿಗೆ ಮೀಸಲಿಟ್ಟಿದ್ದಾರೆ. ಸಂಪ್ರದಾಯದ ಪ್ರಕಾರ, ಧನುರ್ಮಾಸದಲ್ಲಿ ದೇವತೆಗಳು ಬ್ರಾಹ್ಮೀ ಮುಹೂರ್ತದಲ್ಲಿ ಎದ್ದು ಶ್ರೀ ಮಹಾ ವಿಷ್ಣುವಿಗೆ ವಿಶೇಷ ಪ್ರಾರ್ಥನೆ ಸಲ್ಲಿಸುತ್ತಾರೆ. ಬ್ರಹ್ಮ ಮುಹೂರ್ತದ ಸಮಯದಲ್ಲಿ ಅಥವಾ ಮುಂಜಾನೆ ಸೂರ್ಯೋದಯಕ್ಕೆ ಮುಂಚಿತವಾಗಿ ದೇವರಿಗೆ ಸಲ್ಲಿಸುವ ಯಾವುದೇ ಪ್ರಾರ್ಥನೆಯು ಹೆಚ್ಚಿನ ಪುಣ್ಯವನ್ನು ನೀಡುತ್ತದೆ ಎನ್ನುವುದು ಹಿಂದೂ ಸಂಪ್ರದಾಯದ ನಂಬಿಕೆಯಾಗಿದೆ.

ಮಾರ್ಗಶಿರ ಶುದ್ಧ ಏಕಾದಶಿಯಿಂದ ಧನುರ್ಮಾಸ ಪ್ರಾರಂಭವಾಗುತ್ತದೆ. ಅಂದಹಾಗೆ, ಧನುರ್ಮಾಸ ಒಂದು ಪ್ರತ್ಯೇಕ ಮಾಸವಲ್ಲ. ಅದು ಮಾರ್ಗಶಿರ ಮಾಸದ ಮಧ್ಯಭಾಗದಲ್ಲಿ ಬರುತ್ತದೆ. ಧನುರ್ಮಾಸದಿಂದ ಸೂರ್ಯನು ಉತ್ತರ ದಿಕ್ಕಿನತ್ತ ತನ್ನ ಸಂಚಾರ ಪ್ರಾರಂಭಿಸುತ್ತಾನೆ.

ಸೂರ್ಯೋದಯಕ್ಕೂ ಮುನ್ನ ಶ್ರೀಮನ್‌‍ ನಾರಾಯಣನ ದರ್ಶನ, ಆರಾಧನೆಗೆ ವಿಶೇಷ ಮಹತ್ವ. ಶ್ರೀವೈಷ್ಣವ ಸಂಪ್ರದಾಯದಲ್ಲಿ ಧನುರ್ಮಾಸ ಆರಾಧನೆ, ತಿರುಪ್ಪಾವೈ ಪಾರಾಯಣ, ಪ್ರವಚನ, ಗೋಧಾ (ಆಂಡಾಳ್) ಕಲ್ಯಾಣ ಪ್ರಮುಖ, ಪವಿತ್ರ ಕಾರ್ಯಗಳಾಗಿವೆ. ಕೃಷ್ಣನ ಭಕ್ತೆಯಾದ ಗೋಧಾ ದೇವಿ ರಚಿಸಿದ ಭಕ್ತಿಗೀತೆಗಳ ಮಾಲೆಯೇ ತಿರುಪ್ಪಾವೈ.

ಈ ಸಂದರ್ಭದಲ್ಲಿ ಮನೆ, ಮಂದಿರಗಳಲ್ಲಿ ತಿರುಪ್ಪಾವೈ ಪಾರಾಯಣ ನಡೆಯುತ್ತದೆ. ಭಗವಂತನಿಗೆ ಪೊಂಗಲ್‌‍ ಅಥವಾ ಚುಕ್ಕುಬೆಲ್ಲವನ್ನು ನೈವೇದ್ಯವಾಗಿ ಇಡುತ್ತಾರೆ. ತಿರುಪ್ಪಾವೈ ಭಗವಂತನನ್ನು ಸ್ತುತಿಸುವ ಕೃತಿ. ಸಮಸ್ತ ವೇದಗಳ ಸಾರವೇ ಅದರಲ್ಲಿದೆ ಎನ್ನಲಾಗುತ್ತದೆ.

ತಿರುಪತಿ, ಶ್ರೀರಂಗಂ, ಕಾಂಚಿಪುರಂ ಸೇರಿದಂತೆ ಎಲ್ಲಾ ಶ್ರೀವೈಷ್ಣವ ದೇಗುಲಗಳಲ್ಲಿ ಭಗವಂತನಿಗೆ ಮೊದಲು ಚುಕ್ಕುಬೆಲ್ಲ (ಶುಂಠಿ ಬೆಲ್ಲ) ಪುಡಿ ಮಾಡಿ ನೈವೇದ್ಯ ಕೊಡಲಾಗುತ್ತದೆ. ಅವತ್ತವತ್ತಿನ ತಿರುಪ್ಪಾವೈ ಪಾಠಗಳನ್ನು ಹಾಡಲಾಗುವುದು. ಪ್ರತಿನಿತ್ಯ ಸಂಜೆ ಅಂದು ಬೆಳಗ್ಗೆ ಹಾಡಿದ ಪಾಠದ ಪ್ರವಚನ ನಡೆಯುತ್ತದೆ.

ತಿರುಪ್ಪಾವೈ ಪಾರಾಯಣದ ಮಹತ್ವವೇನು?

ಶ್ರೀವಲ್ಲಿಪುತ್ತೂರಿನ ಶ್ರೇಷ್ಠ ಭಕ್ತರಾದ ಪೆರಿಯಾಳ್ವಾರ್‌‍ ಅವರ ಸಾಕು ಮಗಳು ಆಂಡಾಳ್‌‍ (ಗೋಧೆ) ರಂಗನಾಥಸ್ವಾಮಿಯ ಪರಮಭಕ್ತೆ. ಭೂದೇವಿಯ ಅವತಾರ. ಆಳ್ಚಾರ್‌‍ಗಳಲ್ಲಿ ಒಬ್ಬರು. ಅವರು ತಿರುಪ್ಪಾವೈನ 30 ಪಾಶುರಗಳಲ್ಲಿ ವೇದ, ಉಪನಿಷತ್ತುಗಳ ಸಾರವನ್ನು ಸಂಗ್ರಹಿಸಿದ್ದಾರೆ. ಧನುರ್ಮಾಸದಲ್ಲಿ ನಿತ್ಯ ಒಂದೊಂದು ಪಾಶುರವನ್ನು ಹೇಳಲಾಗುತ್ತದೆ. ರಾಮಾನುಜಾಚಾರ್ಯರು ಶ್ರೀರಂಗಂನಲ್ಲಿ ಪ್ರತಿ ಮನೆಯ ಮುಂದೆ ನಿಂತು ತಿರುಪ್ಪಾವೈ ಪಾರಾಯಣ ಮಾಡುತ್ತಾ ಭಿಕ್ಷೆ ಬೇಡುತ್ತಿದ್ದರಂತೆ. ಪ್ರತಿನಿತ್ಯ ಶ್ರೀವೈಷ್ಣವ ಸಂಪ್ರದಾಯದ ವಿಷ್ಣು ದೇಗುಲಗಳಲ್ಲಿ ತಿರುಪ್ಪಾವೈ ಮಂಗಳಪಾಠದ ಅನುಸಂಧಾನವಾಗಬೇಕೆಂದು ಆದೇಶಿಸಿದ್ದಾರೆ. ಅಂತೆಯೇ ಎಲ್ಲ ಶ್ರೀವೈಷ್ಣವ ದೇಗುಲಗಳಲ್ಲಿ, ಮನೆಗಳಲ್ಲಿ ತಿರುಪ್ಪಾವೈನ ಎರಡು ಮಂಗಳ ಶ್ಲೋಕಗಳನ್ನು ಹೇಳಲಾಗುತ್ತದೆ.

ಕೃಷ್ಣನಿಗಾಗಿ ಮಾರ್ಗಳಿ ವ್ರತ

ಗೋಧಾ ಅಥವಾ ಆಂಡಾಳ್‌‍ ಮದುವೆ ವಯಸ್ಸಿಗೆ ಬಂದಾಗ, ಸಹಜವಾಗಿ ತಂದೆ ಪೆರಿಯಾಳ್ವಾರ್‌‍ಗೆ ಚಿಂತೆ ಶುರುವಾಯಿತು. ತಮ್ಮ ಜ್ಞಾನಿಯಾದ ಮಗಳಿಗೆ ಸೂಕ್ತ ವರನನ್ನು ಹುಡುಕುವುದು ಹೇಗೆಂದು ಯೋಚಿಸುತ್ತಿದ್ದರು. ಗೋಧೆಗೂ ತಿಳಿದಿತ್ತು, ತಾನು ಮದುವೆಯ ಹೊಸ್ತಿನಲ್ಲಿದ್ದೇನೆ ಎಂದು. ಅವಳು ಕೃಷ್ಣನಲ್ಲದೆ ಬೇರಾರನ್ನೂ ವಿವಾಹವಾಗುವುದಿಲ್ಲ ಎಂದು ನಿರ್ಧರಿಸಿಬಿಟ್ಟಿದ್ದಳು. ಪೆರಿಯಾಳ್ವಾರ್‌‍ಗೆ ದಿಕ್ಕು ತೋಚದಂತಾಗಿತ್ತು. ಅವರು ಮಗಳಿಗೆ ಪುರಾಣ ಕಥೆಗಳನ್ನು ಹೇಳುತ್ತಿದ್ದರು. 108 ದಿವ್ಯ ದೇಶಂಗಳನ್ನು ಕುರಿತು ವಿವರಿಸುತ್ತಿದ್ದರು. ಆಗ ಅವಳು ಶ್ರೀರಂಗಂನ ಶ್ರೀ ರಂಗನಾಥನಿಂದ ಆಕರ್ಷಿತಳಾದಳು. ತಾನು ಮಾನವ ಜೀವಿಯನ್ನು ವಿವಾಹವಾಗಲಾರೆ, ರಂಗನಾಥನೇ (ಕೃಷ್ಣ) ನನ್ನ ಪತಿ ಎಂದು ಘೋಷಿಸಿಬಿಟ್ಟಳು. ಒಂದು ಕಡೆ ಅವರಿಗೆ ತಮ್ಮ ಮಗಳ ಸೌಂದರ್ಯ, ಬುದ್ಧಿಯ ಬಗೆಗೆ ಅಪಾರ ಮೆಚ್ಚುಗೆ ಇತ್ತು. ಇನ್ನೊಂದು ಕಡೆ ಸಾಮಾಜಿಕ ಹೊಣೆಗಾರಿಕೆ.

ವೃಂದಾವನದಲ್ಲಿ ಕೃಷ್ಣನಿಗಾಗಿ ಗೋಪಿಯರು ಕಾತ್ಯಾಯಿನಿ ವ್ರತ ಮಾಡಿದಂತೆ ತಮ್ಮ ಮಗಳೂ ಕೈಗೊಳ್ಳಲಿ ಎಂದು ಯೋಚಿಸಿದರು. ಆದರೆ ಅವರು ಅದನ್ನು ಭಿನ್ನವಾಗಿ ರೂಪಿಸಿದರು. ಗೋಧೆ ಕೂಡ ಸಂಪ್ರದಾಯಸ್ಥಳು. ಒಂದು ರೀತಿಯಲ್ಲಿ “ಮಾನಸಿಕ ವ್ರತ” ಆಚರಿಸಿದಳು. ಅವಳು ಅದನ್ನು ಮಾರ್ಗಳಿ ಮಾಸದಲ್ಲಿ ನಡೆಸಿದಳು. ಇದು ಡಿಸೆಂಬರ್- ಜನವರಿ ತಿಂಗಳಿನಲ್ಲಿ. ದಿನವೊಂದಕ್ಕೆ ಒಂದೊಂದು ಪದ್ಯವನ್ನು (ಪಾಶುರ) ರಚಿಸಿ ಹಾಡುತ್ತಾ, ಮುಂಜಾನೆಯೇ ಗೆಳತಿಯರನ್ನು ಎಬ್ಬಿಸಿ ಜೊತೆಗೆ ಕರೆದೊಯ್ಯುತ್ತಾ ಕೃಷ್ಣನನ್ನು ಕುರಿತು ವ್ರತ ಆಚರಿಸಿದಳು. ಶ್ರೀವಿಲ್ಲಿಪುತ್ತೂರು ನಂದಗೋಕುಲವಾಯಿತು. ಗೆಳತಿಯರು ಗೋಪಿಯರಾದರು. ನಿಜ, ಕೃಷ್ಣ ಮಾತ್ರ ಅವನೇ! ಕನಸಿನಲ್ಲಿ ಅವನೇ ಪತಿ ಎಂದು ಭಾವಿಸಿಕೊಳ್ಳುತ್ತಿದ್ದ ಅವಳು ಎಚ್ಚರಗೊಂಡಿದ್ದಾಗ ಅವನನ್ನೇ ವಿವಾಹವಾಗುವ ಶ್ರದ್ಧೆಯನ್ನು ಬೆಳೆಸಿಕೊಂಡಳು! ಅದರ ಫಲವೇ 30 ಶ್ಲೋಕಗಳ ಭಕ್ತಿಮಾಲೆ. ಅದನ್ನೇ ತಿರುಪಾವೈ ಎನ್ನುತ್ತಾರೆ.

143 ಶ್ಲೋಕಗಳ ಅವರ ಕೃತಿ ನಾಚಿಯಾರ್‌‍ ತಿರುವಾಯ್‌‍ ಮೊಳಿ ಮತ್ತೊಂದು ಭಕ್ತಿಮಾಲೆ.
ಭಗವಂತನಲ್ಲಿ ಸೇರಲು ಕಾತರದಿಂದ ಇದ್ದ ಗೋಧೆಯು ತನ್ನನ್ನು ಶ್ರೀರಂಗಕ್ಕೆ, ಶ್ರೀ ರಂಗನಾಥನ ಸನ್ನಿಧಿಗೆ ಕರೆದುಕೊಂಡು ಹೋಗಬೇಕೆಂದು ಒತ್ತಾಯಿಸಿದಳು. ಸ್ಥಳೀಯ ರಾಜ ವಲ್ಲಭ ದೇವನಿಗೆ ಭಗವಂತನಿಂದ ಸೂಚನೆಯಾಗಿತ್ತು. ಅವನು ಗೋಧೆಯನ್ನು ಶ್ರೀರಂಗಂಗೆ ಕರೆದುಕೊಂಡು ಹೋಗಲು ಪಲ್ಲಕ್ಕಿಯನ್ನು ಕಳುಹಿಸಿದನು. ಶ್ರೀರಂಗಂನಲ್ಲಿ ಗೋಧೆ ಗರ್ಭಗುಡಿಯೊಳಗೆ ಹೋಗುತ್ತಿದಂತೆ ರಂಗನಾಥನ ದಿವ್ಯ ಪಾದಗಳನ್ನು ಸೇರಿಬಿಟ್ಟಳು!

ಆಳ್ವಾರರ ಅಳಲು

ತಂದೆಯು ಸುಮ್ಮನಾಗಲಿಲ್ಲ. ತಾನು ಪೂರ್ಣಪ್ರಮಾಣದ ವಿವಾಹ ಸಿದ್ಧತೆ ನಡೆಸುತ್ತಿದ್ದಾಗ ಅವಳನ್ನು ಅದು ಹೇಗೆ ಕರೆದುಕೊಂಡುಬಿಟ್ಟೆ ಎಂದು ಪೆರಿಯಾಳ್ವಾರ್‌‍ ಭಗವಂತನನ್ನೇ ಪ್ರಶ್ನಿಸಿದರಂತೆ! ಅದು ಭಕ್ತನ ಶಕ್ತಿ. ತಾನು ಅವಳನ್ನು ಬೆಳೆಸಿದ್ದೇನೆ ಎಂದೂ ಹೇಳಿದರು. ತಂದೆಯ ಅಳಲು ಭಗವಂತನಿಗೆ ಅರ್ಥವಾಯಿತು. ಅವರನ್ನು ಸಮಾಧಾನಪಡಿಸಲು, ತೃಪ್ತಗೊಳಿಸಲು ಗೋಧೆಯೊಡನೆ ಶ್ರೀ ವಿಲ್ಲಿಪುತ್ತೂರಿಗೆ ಅರ್ಚಾವಿಗ್ರಹದ ರೂಪದಲ್ಲಿ ಬಂದನು. ಆನಂದತುಂದಿಲರಾದ ಆಳ್ವಾರರು ಅವರಿಬ್ಬರನ್ನೂ ಪೂಜಿಸಿದರು.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi