ಲೀಲೆಗಳ ಒಡೆಯ

– ಕೃಷ್ಣದಾಸ

ಸಾಧಾರಣ ಜೀವಿಯನ್ನು ಕೃಷ್ಣನಿಗೆ ಹೋಲಿಸುವುದು ಸಾಧ್ಯವೇ ಇಲ್ಲದ ಮಾತು. ಸುಮಾರು 5,200 ವರ್ಷಗಳ ಹಿಂದೆ, ತನ್ನ ಲೀಲೆಯನ್ನು ಈ ಭೂಮಿಯಲ್ಲಿ ಆರಂಭಿಸಿದ ದಿನದಿಂದಲೂ ಅವನು ಪ್ರತಿಯೊಬ್ಬರ ಮೇಲೂ ತನ್ನ ಶ್ರೇಷ್ಠತೆಯ ಪ್ರಭಾವವನ್ನು ಬೀರುತ್ತಲೇ ಬಂದಿದ್ದಾನೆ.

ಒಮ್ಮೆ ಕೃಷ್ಣನು ತನ್ನ ತಾಯಿಯ ಮಡಿಲಲ್ಲಿ ನೆಮ್ಮದಿಯ ನಿದ್ರೆ ಮಾಡಿದ್ದಾಗ ದುಷ್ಟ ರಕ್ಕಸಿಯಾದ ಪೂತನಿಯು ಆತನನ್ನು ಕೊಲ್ಲುವ ಯೋಜನೆ ಹಾಕಿದಳು. ಹುಟ್ಟಿನಿಂದ ಕುರೂಪಿಯಾಗಿದ್ದರೂ ತನಗಿದ್ದ ಗೂಢ ಸಿದ್ಧಿಯಿಂದ ತನ್ನ ದೊಡ್ಡದಾದ ಕೊಳಕು ದೇಹವನ್ನು ಸುಂದರವಾಗಿಸಿಕೊಂಡು ಬಂದಳು.

ಅವಳದೆಷ್ಟು ಸು೦ದರಿಯಾಗಿ ಮಾರ್ಪಾಡಾಗಿದ್ದಳೆಂದರೆ, ಅವಳು ನೇರವಾಗಿ ಕೃಷ್ಣ ಮಲಗಿದ್ದ ಸ್ಥಳದತ್ತ ನಡೆದುಹೋದರೂ ಯಶೋದೆಗೆ ಅವಳನ್ನು ತಡೆಯಬೇಕೆಂದು ಅನಿಸಲೇ ಇಲ್ಲ! ಅವಳು ತೀರ ಅಮಾಯಕಳಾಗಿ, ಮಗುವನ್ನು ಲಾಲಿಸುವಂತೆ ನಡೆದುಹೋದಳು. ವಾಸ್ತವದಲ್ಲಿ ಅವಳು ತನ್ನ ಸ್ತನಗಳಿಗೆ ವಿಷವನ್ನು ಲೇಪಿಸಿಕೊಂಡಿದ್ದಳು.

ಕೃಷ್ಣನು ಅವಳ ಮೊಲೆಗೆ ಬಾಯಿಟ್ಟು ವಿಷವೇರಿ ಸಾಯುವನೆಂದು ಅವಳು ಬಗೆದಿದ್ದಳು. ಆದರೆ ಅವಳ ಯೋಜನೆ ಸಫಲವಾಗಲೇ ಇಲ್ಲ! ಬಾಲಕೃಷ್ಣನು ವಿಷಪೂರಿತ ಸ್ತನಗಳಿಂದ ಹಾಲನ್ನು ಹೀರುತ್ತ ಅವಳ ಪ್ರಾಣವಾಯುವನ್ನೂ ಹೀರಿಬಿಟ್ಟನು. ಆ ಕೂಡಲೇ ಅವಳು ಸತ್ತುಬಿದ್ದಳು.

ಭಗವಂತನು ಪವಾಡಗಳನ್ನು ನಡೆಸಿಯೇ ಭಗವ೦ತನಾಗಬೇಕಿಲ್ಲ. ಕೆಲವು ಮಿಥ್ಯ ಪರಮಾರ್ಥವಾದಿಗಳು ನಾವು ಪ್ರಸ್ತುತದಲ್ಲಿ ದೇವರಲ್ಲದಿದ್ದರೂ ಸತತವಾದ ಕೆಲವು ದೈಹಿಕ ಹಾಗೂ ಮಾನಸಿಕ ವ್ಯಾಯಾಮಗಳನ್ನು ಮಾಡುವ ಮೂಲಕ ದೇವರಾಗಬಹುದೆಂದು ಹೇಳುತ್ತಾರೆ. ಅವರು, ಕೆಲವು ಕಾಲದ ಅನಂತರ, ಸುಮಾರು ಆರು ತಿಂಗಳು ಅಥವಾ ಒಂದು ವರ್ಷದ ಅನಂತರ, ತಮಗೆ ತಾವು ಪರಮಾತ್ಮರೆಂಬ ಜ್ಞಾನೋದಯ ದೊರೆಯುವುದೆಂದು ಭಾವಿಸುತ್ತಾರೆ.

ಇದು ಶುದ್ಧ ಮೂರ್ಖತನ. ಯಾರೂ ಭಗವಂತನಿಗಿಂತ ಶ್ರೇಷ್ಠರಲ್ಲ. ಯಾರೂ ಕೂಡ ಆತನಿಗೆ ಸರಿಸಮವಾಗಲು ಸಾಧ್ಯವಿಲ್ಲ. ಭಗವಂತ ಎಂದಿಗೂ ಭಗವಂತನೇ. ಯಾರೂ ಸಹ ಕೋಟ್ಯಂತರ ವರ್ಷಕಾಲ ರಹಸ್ಯಯೋಗ ವಿದ್ಯೆಗಳನ್ನು ಅಭ್ಯಾಸ ಮಾಡಿದರೂ ಅವರು ಭಗವಂತನಾಗಲಾರರು. ಈಗ ಭಗವಂತನಲ್ಲದವನು ಎಂದಿಗೂ ಭಗವಂತನಾಗಲಾರ.

ಪೂತನಿಯು ಕೃಷ್ಣನ ಬಳಿಸಾರಿದಾಗ, ಆತನು ಪುಟ್ಟ ಅಸಹಾಯಕ ಶಿಶುವಿನಂತೆ ಹಾಸಿಗೆ ಮೇಲೆ ಮಲಗಿದ್ದ. ಅವನಿಗೆ ತನ್ನ ಸುತ್ತ ಏನು ನಡೆಯುತ್ತಿದೆ ಎಂಬ ಬಗ್ಗೆ ಸಂಪೂರ್ಣ ಅರಿವಿದ್ದು, ತನ್ನನ್ನು ಕೊಲ್ಲ ಬಯಸಿದ್ದ ರಕ್ಕಸಿಯನ್ನು ಎದುರಿಸಿ ಸಂಹರಿಸಲು ಸಂಪೂರ್ಣ ಸನ್ನದ್ಧನಾಗಿದ್ದ. ಆತನು ತನ್ನ ಶಕ್ತಿಯನ್ನು ಪಡೆಯಲು ಯಾವ ಬಗೆಯ ತಪಸ್ಸನ್ನೂ ಮಾಡಬೇಕಿರಲಿಲ್ಲ. ಅದು ಸದಾ ಆತನ ಪಾರಮಾರ್ಥಿಕ ಶರೀರದಲ್ಲಿ ಸಹಜವಾಗಿ ಇರುವಂಥದೇ ಆಗಿತ್ತು.

ಕೃಷ್ಣನ ಜನನ ವಿಚಾರವನ್ನು ಪರಿಗಣಿಸಿದರೂ ಸಾಕು ಸಾಮಾನ್ಯ ಜೀವಿಗೂ ಆತನಿಗೂ ಇರುವ ವ್ಯತ್ಯಾಸ ತಿಳಿದುಹೋಗುತ್ತದೆ. ಸಾಮಾನ್ಯ ಜೀವಿಯು ತಂದೆಯ ವೀರ್ಯವು ತಾಯಿಯ ಅಂಡಾಶಯದಲ್ಲಿ ಬಿಡುಗಡೆಗೊಳ್ಳುವ ಮೂಲಕ ಉದ್ಭವಿಸುತ್ತದೆ. ಅಂಡವು ತಾಯಿಯ ಗರ್ಭದಲ್ಲಿ ಬೆಳೆದು, ಆಕೆಯ ಹೊಕ್ಕುಳಿಗೆ ಬೆಸೆದುಕೊಂಡಿರುತ್ತದೆ. ವೈದ್ಯರು ಅದನ್ನು ಬೇರ್ಪಡಿಸಿದ ಅನಂತರ ಜೀವಿಯು ಅಳುತ್ತ ತನ್ನ ಜೀವನ ಪ್ರಾರ೦ಭಿಸುತ್ತದೆ.

ಆದರೆ ಕೃಷ್ಣನ ಜನನ ಹೀಗಾಗುವುದಿಲ್ಲ! ತನ್ನ ಜನನ ಸಮಯದಲ್ಲಿ ಆತನು ತನ್ನ ಚತುರ್ಭುಜಗಳ ನಾರಾಯಣ ಸ್ವರೂಪವನ್ನು ತಂದೆ ತಾಯಿಗಳಿಗೆ ತೋರಿಸುತ್ತಾನೆ. ಅವರೆದುರು ಆತನು ಹೊಳೆಯುವ ಕಪ್ಪು ಕೂದಲು, ಕೋರೈಸುವ ಕಿರೀಟ, ಕೌಸ್ತುಭಮಣಿಯ ಸುಂದರ ಮಾಲೆ, ಕಂಠೀಹಾರ, ಕಡಗ ಇತ್ಯಾದಿ ಆಭರಣಗಳಿಂದ ಕಂಗೊಳಿಸುತ್ತಾನೆ.

ಶಂಖ, ಚಕ್ರ, ಗದೆ, ಕಮಲಗಳನ್ನು ತನ್ನ ನಾಲ್ಕು ಕೈಗಳಲ್ಲಿ ಹಿಡಿದಿರುತ್ತಾನೆ. ಪೀತಾಂಬರಧಾರಿಯಾಗಿ ವಿವಿಧ ಆಭರಣಗಳಿಂದ ಅಲಂಕೃತನಾದ ಆತನು ಮಿರುಮಿರುಗುವ ಕಪ್ಪು ಮೋಡದಂತೆ ಹೊಳೆಯುತ್ತಾನೆ.

ಹೀಗಿರುವಾಗ, ಸಾಮಾನ್ಯ ಶಿಶುವಿನ ಜನನವನ್ನು ಕೃಷ್ಣನ ಜನನಕ್ಕೆ ಹೋಲಿಸುವುದು ಸಾಧ್ಯವಾದೀತೆ!? ವಾಸ್ತವವಾಗಿ ಆತನ ತಂದೆ ತಾಯಿಯರಾದ ವಸುದೇವ – ದೇವಕಿಯರಿಗೂ ಕೂಡ ಪರಮಾನಂದದಾಯಕವಾದ ಆತನ ಅದ್ಭುತ ಸೌಂದರ್ಯವನ್ನು ಕಂಡ ತಮ್ಮ ಕಣ್ಣುಗಳನ್ನು ತಾವೇ ನಂಬಲು ಸಾಧ್ಯವಾಗಲಿಲ್ಲ!

ನೂರ ಇಪ್ಪತ್ತೈದು ವರ್ಷಗಳಿಗೂ ಹೆಚ್ಚು ಕಾಲ ಭೂಮಿಯಲ್ಲಿ ನೆಲೆಸಿದ್ದ ಕೃಷ್ಣನ ಲೀಲೆಗಳುದ್ದಕ್ಕೂ ನಾವು ಅತೀತವಾದ ಕ್ರಿಯೆಗಳನ್ನೇ ಕಾಣುತ್ತೇವೆ.

ಉದಾಹರಣೆಗೆ, ಗೋವರ್ಧನಗಿರಿಧಾರಣೆ, ಕೃಷ್ಣನು ಮಳೆಯ ಅಧಿಪತಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಇಂದ್ರನಿಗೆ ಆತನ ಪ್ರೀತ್ಯರ್ಥವಾಗಿ ನಡೆಸುತ್ತಿದ್ದ ಹೋಮವನ್ನು ನಿಲ್ಲಿಸುವ ಮೂಲಕ ಕೋಪ ತರಿಸಿದ. ಕೃಷ್ಣನು ಇಂದ್ರನ ಗರ್ವವನ್ನು ಮುರಿಯಲು ಬಯಸಿದ್ದ. ಆದ್ದರಿಂದಲೇ ಆತನು ಕೆರಳುವಂತೆ ಮಾತನಾಡಿ, ಇಂದ್ರನು ವೃಂದಾವನವಾಸಿಗಳ ಮೇಲೆ ತನ್ನ ಕ್ರೋಧವನ್ನು ಪ್ರದರ್ಶಿಸುವಂತೆ ಮಾಡಿದ್ದ.

ಇ೦ದ್ರನ ಕೋಪ ಮಿತಿಮೀರಿ ಆತನು ಪ್ರಪ೦ಚದ ಅಂತಿಮ ಪ್ರಳಯವೋ ಎನ್ನುವಂತೆ ಮಿಂಚು ಗುಡುಗು, ಆಲಿಕಲ್ಲುಗಳ ಸಹಿತ ಮಳೆ ಸುರಿಸಲಾರಂಭಿಸಿದ. ಇದರಿಂದ ಗಾಬರಿಗೊಂಡ ವೃಂದಾವನದ ಗೋವುಗಳು, ಗೋಪಾಲಕರು, ಗೋಪಿಕೆಯರೆಲ್ಲರೂ ರಕ್ಷಣೆಗಾಗಿ ಕೃಷ್ಣನ ಮೊರೆ ಹೋದರು.

ಕೃಷ್ಣ ತನ್ನ ಅತೀಂದ್ರಿಯ ಶಕ್ತಿಯನ್ನು ಆವಾಹಿಸಿಕೊಂಡು ಅತ್ಯಂತ ಸಹಜವಾಗಿ ಗೋವರ್ಧನ ಗಿರಿಯನ್ನು ನೆಲದಿಂದ ಬೇರ್ಪಡಿಸಿ, ಅದರ ನಡುವಲ್ಲಿ ಅದನ್ನು ತನ್ನ ಎಡಗೈಯಿನ ಕಿರುಬೆರಳಿನಿಂದ ಹಿಡಿದುಕೊಂಡು ವೃಂದಾವನವಾಸಿಗಳಿಗೆ ಮಳೆಯಿಂದ ರಕ್ಷಣೆ ನೀಡುವ ಛತ್ರಿಯೋಪಾದಿಯಲ್ಲಿ ಏಳುದಿನಗಳ ಕಾಲ ನಿಂತಿದ್ದ. ಇಂದ್ರ ತನ್ನೆಲ್ಲ ರೋಷದಿಂದ ವೃಂದಾವನವನ್ನು ನಾಶಪಡಿಸಲು ಪ್ರಯತ್ನಿಸಿ, ಸೋತು ಸುಣ್ಣವಾದ.

ಪರ್ವತವನ್ನು ಎತ್ತಿಹಿಡಿಯಲು ಯಾರಿಂದ ಸಾಧ್ಯ? ಹೋಗಲಿ, ಒಂದು ಕಾಗದದ ತುಣುಕನ್ನಾದರೂ ಹಾಗೆ ಒಂದು ಗಂಟೆ ಕಾಲವಾದರೂ ಕೈ ಸೋಲದಂತೆ ಎತ್ತಿ ಹಿಡಿಯುವುದು ನಮ್ಮಿಂದ ಸಾಧ್ಯವೇ? ಇನ್ನು ಏಳು ದಿನಗಳ ಕಾಲ ಹಿಡಿಯುವ ಮಾತೇಕೆ? ಆದರೆ ಕೃಷ್ಣ ಇದನ್ನು ಚಿಕ್ಕದೊಂದು ಆಯಾಸದ ಸುಳಿವೂ ಇಲ್ಲದೆ ಮಾಡಿ ತೋರಿಸಿದ.

ದೇವೋತ್ತಮ ಪರಮಪುರುಷನೊಂದಿಗೆ ಯಾರನ್ನು ತಾನೆ ಹೋಲಿಸಲಾದೀತು? ಕೃಷ್ಣನು ಇಂತಹ ಮಹಾ ಮಹಿಮಾನ್ವಿತನಾಗಿದ್ದರೂ ಪ್ರಾಪಂಚಿಕವಾಗಿ ಬುದ್ಧಿವಂತರೆನಿಸಿಕೊಂಡಿರುವರು ಅವನನ್ನು ಸಾಮಾನ್ಯ ಐತಿಹಾಸಿಕ ವ್ಯಕ್ತಿತ್ವದ ಮಟ್ಟಕ್ಕಿಳಿಸಲು ಪ್ರಯತ್ನಿಸುತ್ತಾರೆ.

ಯಾವ ಐತಿಹಾಸಿಕ ವ್ಯಕ್ತಿ ತಾನೆ 16,108 ಅರಮನೆಗಳಲ್ಲಿ ನಿಂತು 16,108 ರಾಜಕುಮಾರಿಯರನ್ನು ವಿವಾಹವಾಗಿರಲು ಸಾಧ್ಯ? ಕೃಷ್ಣ ಇದನ್ನು ಮಾಡಿದ. ಪ್ರತಿಯೊಂದು ರೀತಿ ನೀತಿಗಳನ್ನು ಅನುಸರಿಸಿಯೇ ಮಾಡಿದ. ಸಾಮಾನ್ಯವಾಗಿ ನಮ್ಮಲ್ಲಿ ಯಾರಿಂದಲೂ ನಮ್ಮನ್ನು ಮತ್ತೊಂದು ದೇಹಕ್ಕೆ ವಿಸ್ತರಿಸಿಕೊಳ್ಳುವುದು ಸಾಧ್ಯವೇ ಇಲ್ಲ.

ನಾವೆಲ್ಲರೂ ಒಂದೊಂದು ದೇಹಕ್ಕೆ ಬದ್ಧರಾಗಿದ್ದೇವೆ. ಆದರೆ ಕೃಷ್ಣ ತನ್ನನ್ನು ತಾನು ಲೆಕ್ಕವಿಲ್ಲದಷ್ಟು ದೇಹಗಳಲ್ಲಿ ವಿಸ್ತರಿಸಿಕೊಳ್ಳಬಲ್ಲ. ಅಲ್ಲದೆ, ಒಂದೊಂದು ರೂಪದಲ್ಲಿ ಒಂದೊಂದು ಚಟುವಟಿಕೆಯಲ್ಲಿಯೂ ತೊಡಗಿಸಿಕೊಳ್ಳಬಲ್ಲ! ಇದು ಪರಮ ಪ್ರಭುವಿನ ರಹಸ್ಯ ವೈಭವ !!

ಒಮ್ಮೆ ತ್ರಿಲೋಕ ಸಂಚಾರಿಯಾಗಿರುವ ನಾರದ ಮುನಿ, ಕೃಷ್ಣನು ತನ್ನ 16,108 ಪತ್ನಿಯರೊಂದಿಗೆ ಏನು ಮಾಡುತ್ತಿರುವನೆಂದು ನೋಡಲು ಬಯಸಿದರು. ಮೊದಲ ಅರಮನೆಗೆ ಭೇಟಿ ಕೊಟ್ಟಾಗ, ಅಲ್ಲಿ ಆತನ ಪಟ್ಟದರಸಿ ರುಕ್ಮಿಣಿಯು ಆತನಿಗೆ ಗಾಳಿ ಬೀಸುತ್ತಿದ್ದುದನ್ನು ಕಂಡರು. ಅಲ್ಲಿಂದ ಹೊರಟು ಮುಂದಿನ ಅರಮನೆಗೆ ತೆರಳಿದಾಗ, ಅಲ್ಲಿ ಕೃಷ್ಣನು ಪ್ರೀತಿಪಾತ್ರ ತಂದೆಯಂತೆ ತನ್ನ ಮಕ್ಕಳೊಡನೆ ಆಡುತ್ತಿದ್ದುದನ್ನು ನೋಡಿದರು.

ಅದರ ಮುಂದಿನ ಅರಮನೆಯಲ್ಲಿ ಕೃಷ್ಣನು ಸ್ನಾನಕ್ಕೆ ತಯಾರಾಗುತ್ತಿದ್ದನು. ಹೀಗೆ ಅರಮನೆಯಿಂದ ಅರಮನೆಗೆ ಮುಂದುವರಿಯುತ್ತ ನಾರದರು, ಕೃಷ್ಣನು ತನ್ನ ಎಲ್ಲ 16,108 ಅರಮನೆಗಳಲ್ಲೂ ಭಿನ್ನ ಭಿನ್ನ ಕೆಲಸಗಳಲ್ಲಿ ನಿಯುಕ್ತನಾಗಿದ್ದುದನ್ನು ಕಂಡರು.

ಕೇವಲ ಪರಮಪ್ರಭುವಿನಿಂದ ಮಾತ್ರ ಹೀಗೆ ಏಕಕಾಲಕ್ಕೆ ವಿಭಿನ್ನ ಕಾರ್ಯಗಳಲ್ಲಿ ತೊಡಗಿಕೊಳ್ಳಲು ಸಾಧ್ಯ.

ಇದರ ನಿರ್ಣಯ ತೀರ ಸರಳವಾಗಿದೆ. ಕೃಷ್ಣನು ದೇವೋತ್ತಮ ಪರಮಪುರುಷನೇ ಆಗಿದ್ದಾನೆ, ಮತ್ತು ಭೂಮಿಯ ಮೇಲೆ ಅವತರಿಸಿದಾಗ ಅಪರಿಮಿತ ಮತ್ತು ಅಸಾಧಾರಣವಾದ ದಿವ್ಯಲೀಲೆಗಳನ್ನು ನಡೆಸುತ್ತಾನೆ. ಇನ್ನಿತರ ಕೆಲವರು ತಮ್ಮ ಅಭ್ಯರ್ಥಿಯನ್ನು ‘ದೇವರು’ ಎಂದು ಎದುರು ತಂದು ನಿಲ್ಲಿಸಬಹುದು.

ಆದರೆ ಅವರು ಕೃಷ್ಣನಿಗೆ ಸ್ವಲ್ಪವೂ ಕೂಡ ಸರಿಸಾಟಿಯಾಗುವುದಿಲ್ಲ. ಆದ್ದರಿಂದ ನಾವು ಪಾರಮಾರ್ಥಿಕ ಸತ್ಯವಾಗಿರುವ ಮತ್ತು ಅದ್ವಿತೀಯನಾಗಿರುವ ಭಗವಾನ್ ಶ್ರೀಕೃಷ್ಣನನ್ನು ಪೂಜಿಸಬೇಕು. ಮತ್ತು ಆತನ ಪವಿತ್ರನಾಮ ‘ಹರೇಕೃಷ್ಣ’ ಮಂತ್ರವನ್ನು ಜಪಿಸಿ ತೃಪ್ತರಾಗಬೇಕು.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi