ಅವಧೂತ ಗೀತಾ

 “ಶ್ರೀಕೃಷ್ಣ- ಉದ್ಧವರ ಬ್ರಹ್ಮವಿದ್ಯಾ ಸಂವಾದ” -2

– ಶ್ರೀಮತಿ ಶಶಿಕಲಾ ಶ್ರೀಧರ್

“ಭಾರತದ ಮಹಾಗ್ರಂಥ ಮಹಾಭಾರತದಲ್ಲಿ ಶ್ರೀಕೃಷ್ಣ ಪರಮಾತ್ಮನು ಇಡೀ ಜಗತ್ತಿನ ಕಲ್ಯಾಣಕ್ಕಾಗಿ ಮಿತ್ರಶ್ರೇಷ್ಠನೂ ಭಕ್ತ ಶ್ರೇಷ್ಠನೂ ಆದ ಅರ್ಜುನನನ್ನು ನೆಪವಾಗಿಟ್ಟುಕೊಂಡು

ಸಾರಥ್ಯಮರ್ಜುನ ಸ್ಯಾಜೌ ಕುರ್ವನ್ ಗೀತಾಮೃತಂ ದದೌ |

ಲೋಕತ್ರಯೋಪಕಾರಾಯ ತಸ್ಮೈ ಕೃಷ್ಣಾತ್ಮನೇ ನಮಃ ||

ಎಂಬಂತೆ ಶ್ರೀಗೀತಾಮೃತಸುಧೆಯನ್ನು ಲೋಕಕ್ಕೆ ಅನುಗ್ರಹಿಸಿದಂತೆಯೇ ಶ್ರೀಮದ್ಭಾಗವತ ಮಹಾಗ್ರಂಥದಲ್ಲೂ ಸಾಕ್ಷಾತ್ ಶ್ರೀಕೃಷ್ಣ ಪರಮಾತ್ಮನೇ ಭೃತ್ಯ ಶ್ರೇಷ್ಠನೂ ಮಿತ್ರ ಶ್ರೇಷ್ಠನೂ ಆದ ಉದ್ಧವನನ್ನು ವ್ಯಾಜವನ್ನಾಗಿಟ್ಟುಕೊಂಡು ಸರ್ವಲೋಕಗಳ ಕ್ಷೇಮಕ್ಕಾಗಿ ಆಧ್ಯಾತ್ಮಶಾಸ್ತ್ರವನ್ನು ಧರ್ಮವನ್ನು ಮನೋಜ್ಞವಾಗಿ ಉಪದೇಶಿಸಿದ್ದಾನೆ.

ಆತ್ಮಜ್ಞಾನದಿಂದ ಕೂಡಿದ ಸಂನ್ಯಾಸಾಶ್ರಮದ ಉತ್ಕರ್ಷವನ್ನು ಉದ್ಧವನಿಗೆ ಸಾರಿ ಹೇಳುತ್ತಾನೆ. ಇದೇ ‘ಉದ್ಧವಗೀತೆ.’ ಈ ಉದ್ಧವಗೀತೆಯ ಕಿರುಗೀತೆಯೇ ‘ಅವಧೂತ ಗೀತೆ.” ಲೇಖನದ ಮುಂದುವರಿದ ಭಾಗ ಇಲ್ಲಿದೆ…

ಗಜ : (ಆನೆ)

ಕಾಡಾನೆಯನ್ನು ಹಿಡಿಯಲು ಕಂದಕ ತೋಡಿ, ಅದರ ಮೇಲ್ಭಾಗವನ್ನು ಬಿದಿರಿನ ಮೆಳೆಗಳಿಂದ ಮುಚ್ಚಿ, ಮೇಲೆ ಹುಲ್ಲನ್ನು ಹರಡಿ ಅದರ ನಡುವೆ ಮರದಿಂದ ಮಾಡಿದ ಹೆಣ್ಣಾನೆಯನ್ನು ನಿಲ್ಲಿಸಿರುತ್ತಾರೆ. ಆ ಹೆಣ್ಣು ಆನೆಯಿಂದ ಆಕರ್ಷಿತವಾಗುವ ಗಂಡು ಆನೆಗಳು ಮರದ ಆನೆಯನ್ನು ನಿಜವಾದ ಆನೆಯೆಂದೇ ಭ್ರಮಿಸಿ ಬಂದು ಹಳ್ಳಕ್ಕೆ ಬೀಳುತ್ತವೆ.

ಆದ್ದರಿಂದ ಬುದ್ಧಿವಂತನಾದ ಸಂನ್ಯಾಸಿಯು ಮರದಿಂದ ಮಾಡಿರುವ ಹೆಣ್ಣಿನ ಗೊಂಬೆಯನ್ನು ಕೂಡ ಮುಟ್ಟಬಾರದು. ಸ್ತ್ರೀಯು ತನಗೆ ಮೃತ್ಯುರೂಪಳಾಗಬಹುದೆಂಬುದನ್ನು ಮನಗಾಣಬೇಕು. ಮರದಿಂದ ಮಾಡಿದ ಹೆಣ್ಣಾನೆಯ ಸಂಗವನ್ನು ಬಯಸಿ ಅತ್ಯಂತ ಬಲಶಾಲಿಯಾದ ಸಲಗವೂ ಹಳ್ಳದಲ್ಲಿ ಬೀಳುವಂತೆ, ಸಾಧಕನು ಸಂಸಾರ ಕಂದರದಲ್ಲಿ ಬಿದ್ದು ಬಂಧಿಸಲ್ಪಡುತ್ತಾನೆ.

ಮಧುಹಾರಿ : (ಜೇನುಗಳ್ಳ)

ಜೇನುಹುಳುಗಳು ಹಲವಾರು ಪುಷ್ಪಗಳಿಂದ ಪುಷ್ಪರಸವನ್ನು ಹೀರಿ ತಂದು ಕೂಡಿಟ್ಟು ಕಟ್ಟಿದ ಜೇನುಗೂಡನ್ನು, ಜೇನು ಬಿಡಿಸುವವನು ಕ್ಷಣ ಮಾತ್ರದಲ್ಲಿ ಜೇನುಹುಳುಗಳನ್ನು ಧ್ವಂಸಮಾಡಿ ಜೇನುತುಪ್ಪವನ್ನು ಅಪಹರಿಸಿಕೊಂಡು ಹೋಗುತ್ತಾನೆ. ಇದರಂತೆಯೇ ಪ್ರಪಂಚದಲ್ಲಿ ಲೋಭಿಗಳು ಬಹಳ ಕಷ್ಟಪಟ್ಟು ಹಣವನ್ನು ಸಂಪಾದಿಸಿ ತಾವೂ ಉಪಯೋಗಿಸದೆ ಇತರರಿಗೂ ದಾನವಾಗಿ ಕೊಡದೆ ಶೇಖರಿಸುತ್ತಾರೆ. ಆದರೆ ಕಡೆಗೆ ಈ ಎಲ್ಲ ಹಣವನ್ನು ಬೇರೆಯವರು ಉಪಭೋಗಿಸುತ್ತಾರೆ.

ಹರಿಣ : (ಜಿಂಕೆ)

ಸಾಧಕನು ಯಾವುದೇ ಕಾರಣದಿಂದಲೂ ಗ್ರಾಮ್ಯ ಗೀತೆಗಳಿಂದ ಆಕರ್ಷಿತನಾಗಬಾರದು. ಬೇಡನ ಗ್ರಾಮ್ಯಗೀತೆಗಳಿಗೆ ಆಕರ್ಷಿತವಾಗುವ ಜಿಂಕೆ ಅವನು ಬೀಸಿದ್ದ ಬಲೆಯಲ್ಲಿ ಸಿಕ್ಕಿಹಾಕಿಕೊಳ್ಳುತ್ತದೆ.

ಇಂದ್ರಿಯಗಳನ್ನು ಕೆರಳಿಸುವ ಕೆಟ್ಟ ಹಾಡುಗಳನ್ನು ಕೇಳುವ ಸಾಧಕನು ಬಲೆಯಲ್ಲಿ ಬೀಳುವ ಜಿಂಕೆಯಂತೆ ಭವದಲ್ಲಿ ಬಿದ್ದು ಬಳಲುತ್ತಾನೆ.

ಹೆಣ್ಣು ಜಿಂಕೆಯ ಮಗನಾದ ಋಷ್ಯಶೃಂಗನು ಕಾಡಿನಲ್ಲಿ ಗ್ರಾಮ್ಯ ಗೀತೆಗಳಿಗೆ ಕುಣಿಯುತ್ತಿದ್ದ ಸ್ತ್ರೀಯರನ್ನು ಕಂಡು ಅವರಿಗೆ ಸಂಪೂರ್ಣ ವಶನಾಗಿ ಅವರ ಆಟದ ಗೊಂಬೆಯೇ ಆಗಿಬಿಡುವ ಪ್ರಸಂಗವನ್ನು ಇಲ್ಲಿ ಸ್ಮರಿಸಬಹುದು.

ಮೀನ : (ಮೀನು)

ಮೀನು ಗಾಳದ ತುದಿಯಲ್ಲಿರುವ ಹುಳುವಿಗೋ ಅಥವಾ ಮಾಂಸದ ತುಂಡಿಗೋ ಆಸೆಪಟ್ಟು, ಜಿಹ್ವಾ ಚಾಪಲ್ಯದಿಂದ ಅದನ್ನು ತಿನ್ನಲು ಹೋಗಿ ಗಾಳದಲ್ಲಿ ಸಿಕ್ಕಿಹಾಕಿಕೊಂಡು ಸಾಯುತ್ತದೆ.

ಇದರಂತೆಯೇ ಮಾನವನಲ್ಲಿ ಜಿಹ್ವಾ ಚಾಪಲ್ಯ ಬಿಡಿಸಲಾಗದ ರೋಗ ಉಪವಾಸ ವ್ರತ ಮಾಡುವ ಮನನಶೀಲರಾದ ವಿದ್ವಾಂಸರೂ ಜಿಹ್ವೇಂದ್ರಿಯವನ್ನು ಬಿಟ್ಟು, ಉಳಿದೆಲ್ಲ ಇಂದ್ರಿಯಗಳನ್ನು ಶೀಘ್ರವಾಗಿ ಜಯಿಸಬಲ್ಲರು. ಉಪವಾಸವಿದ್ದಷ್ಟೂ ನಾಲಗೆಯ ಚಾಪಲ್ಯವು ಹೆಚ್ಚಾಗುತ್ತದೆ. ಆದ್ದರಿಂದ ಷಡ್ರಸಗಳಿಂದ ವಿಮೋಹಿತನಾದ ಮಾನವನು ಅತ್ಯಂತ ದುರ್ಜಯವಾದ ನಾಲಗೆಯ ಪ್ರಭಾವಕ್ಕೆ ಸಿಕ್ಕಿ, ಮೀನು ಗಾಳಕ್ಕೆ ಸಿಕ್ಕಿ ಸಾಯುವಂತೆ, ಮೃತ್ಯುವಶನಾಗುತ್ತಾನೆ.

ಶ್ರೀಕೃಷ್ಣನು ಗೀತೆಯಲ್ಲಿ ;

ವಿಷಯಾ ವಿನಿವರ್ತನ್ತೇ ನಿರಾಹಾರಸ್ಯ ದೇಹಿನಃ |

ರಸವರ್ಜ೦ ರಸೋಸSಪ್ಯಸ್ಯ ಪರಂ ದೃಷ್ಟ್ವಾ ನಿವರ್ತತೇ ||     (ಗೀತಾ 2.59)

ದೇಹಿಯು ನಿರಾಹಾರಿಯಾದರೆ ವಿಷಯಗಳು ಹಿಂದಿರುಗುತ್ತವೆ. ಆದರೆ ರಸವು ಮಾತ್ರ ಹೋಗುವುದಿಲ್ಲ. ಪರವಸ್ತುವನ್ನು ಕಂಡುಕೊಂಡರೆ ಆ ರಸವೂ ಹೋಗಿಬಿಡುತ್ತದೆ.

ಆದ್ದರಿಂದ ಯಾರು ಇತರ ಇಂದ್ರಿಯಗಳೊಡನೆ ಜಿಹೇಂದ್ರಿಯವನ್ನೂ ಗೆದ್ದಿರುತ್ತಾನೆಯೋ ಅವನು ಮಾತ್ರ ‘ಜಿತೇಂದ್ರಿಯ’ ಎನಿಸಿಕೊಳ್ಳುತ್ತಾನೆ.

ಪಿಂಗಳೆ : (ವೇಶ್ಯೆ)

ವಿದೇಹ ನಗರದಲ್ಲಿ ವಾಸಿಸುತ್ತಿದ್ದ ಅತ್ಯಂತ ರೂಪವತಿಯೂ, ಲಾವಣ್ಯವತಿಯೂ ಆಗಿದ್ದ ಒಬ್ಬವೇಶ್ಯೆ ಪಿಂಗಳೆ. ಅವಳಿಗೆ ಪುರುಷರ ಮೇಲಿನ ವ್ಯಾಮೋಹಕ್ಕಿಂತಲೂ ಧನದ ಮೇಲಿನ ವ್ಯಾಮೋಹ ಅತ್ಯಧಿಕವಾಗಿತ್ತು. ತನ್ನನ್ನು ತಾನು ಸುಂದರವಾಗಿ ಅಲಂಕರಿಸಿಕೊಂಡು ಅತಿ ಹೆಚ್ಚುಧನ ಕೊಡುವ ವಿಟ ಪುರುಷನಿಗಾಗಿ ಇಡೀ ರಾತ್ರಿ ಕಾಯುತ್ತಾ ಕುಳಿತುಕೊಳ್ಳುತ್ತಿದ್ದಳು.

ಇವಳ ಸೌಂದರ್ಯಕ್ಕೆ ಮನಸೋತು ಬರುತ್ತಿದ್ದವರೆಲ್ಲವೂ ಇವಳ ಅಪೇಕ್ಷಿತ ಹಣವನ್ನು ಕೊಡಲಾಗದೆ ಹಿಂದಿರುಗುತ್ತಿದ್ದರು. ತನ್ನ ಸೌಂದರ್ಯದ ಮೇಲೆ ಹೆಚ್ಚು ಅಭಿಮಾನವಿದ್ದ ಪಿಂಗಳೆಗೆ ತನ್ನ ಮೌಲ್ಯವನ್ನು ಕಡಮೆ ಮಾಡಿಕೊಳ್ಳುವ ಇಚ್ಛೆಯೂ ಬರಲಿಲ್ಲ. ನಡುರಾತ್ರಿಯವರೆಗೆ ಕಾದರೂ ಧನವಂತರಾರೂ ಬರದೆ ಇವಳಿಗೆ ಅತ್ಯಂತ ನಿರಾಶೆಯಾಯಿತು.

ಮುಖವು ಬಾಡಿ ದೀನಮನಸ್ಕಳಾದಳು. ತನ್ನ ಈ ಜೀವನದ ಬಗ್ಗೆ ಚಿಂತಿಸುತ್ತಾ ತನಗೇ ಅಸಹನೀಯವೆನಿಸತೊಡಗಿತು. ವೇಶ್ಯಾ ಜೀವನ ಅತಿನಿಂದನೀಯವೆನಿಸಿತು. ಅತ್ಯಂತ ನಶ್ವರವಾದ ಕಾಮೋಪಭೋಗಗಳನ್ನು ಒದಗಿಸುವ ಪುರುಷರೂ ಕಾಲದ ಪ್ರಭಾವದಿಂದ ನಷ್ಟರಾಗಿ ಹೋಗುತ್ತಾರೆ.

ಇನ್ನು ತಾನಾದರೋ ವಿಷಯ ಸುಖಗಳ ಅಭಿಲಾಷೆಯಿಂದ ಜ್ಞಾನದ ಕಣ್ಣುಗಳನ್ನು ಸಂಪೂರ್ಣವಾಗಿ ಕಳೆದುಕೊಂಡು ಸಂಸಾರವೆಂಬ ಕಗ್ಗತ್ತಲೆಯ ಕೂಪದಲ್ಲಿ ಬಿದ್ದು ಅಲ್ಲಿ ‘ಕಾಲ’ವೆಂಬ ಕಾಳಸರ್ಪದಿಂದ ದಿನದಿನವೂ ನುಂಗಲ್ಪಡುತ್ತಿರುವೆನು ಎಂಬುದಾಗಿ ಯೋಚಿಸುತ್ತಿದ್ದಂತೆಯೇ ಅವಳಲ್ಲಿ ತೀವ್ರ ವೈರಾಗ್ಯವುಂಟಾಯಿತು.

ಅತಿ ಸಮೀಪದಲ್ಲಿ ತನ್ನ ಹೃದಯದಲ್ಲೇ ಇರುವ, ಎಲ್ಲ ಇಂದ್ರಿಯ ಸುಖಗಳಿಗೆ ಮೀರಿದ ಸುಖ ನೀಡುವ, ಸಂಪತ್ತಿನ ಭಂಡಾರವೇ ಆಗಿರುವ, ನಿತ್ಯನಾದ ಹೃದಯೇಶ್ವರನನ್ನು ಬಿಟ್ಟು ಕ್ಷಣಿಕ ಸಂತೋಷವನ್ನುಂಟುಮಾಡುವ ಕಡುಲೋಭಿಗಳಾದ ಮನುಷ್ಯರನ್ನು ತಾನು ಅಪೇಕ್ಷಿಸುತ್ತಿರುವ ಬಗ್ಗೆ ಅವಳಿಗೇ ಜುಗುಪ್ಪೆಯಾಯಿತು. ಭಕ್ತರಿಗೆ ತನ್ನನ್ನೇ ಕೊಟ್ಟುಕೊಳ್ಳುವ ಅಚ್ಯುತನಿಂದ ಬೇಕಾದುದೆಲ್ಲವನ್ನು ಪಡೆದುಕೊಳ್ಳಲು ಪ್ರಯತ್ನಿಸದೆ ಇತರರನ್ನು ಆಶ್ರಯಿಸುತ್ತಿರುವ ತನ್ನ ಅಜ್ಞಾನದ ಬಗ್ಗೆ ಅವಳಿಗೆ ತಿರಸ್ಕಾರವುಂಟಾಯಿತು.

ಇಂತಹ ಒಂದು ವೈರಾಗ್ಯ ತನ್ನಲ್ಲಿ ಉಂಟಾದುದು ನಿಶ್ಚಯವಾಗಿಯೂ ಭಗವಾನ್ ವಿಷ್ಣುವಿನ ಕೃಪೆಯಲ್ಲದೆ ಬೇರಲ್ಲ, ಪರಮಾತ್ಮ ತನ್ನ ಬಗ್ಗೆ ಸುಪ್ರೀತನಾಗಿದ್ದಾನೆ ಎಂಬುದಾಗಿ ಚಿಂತಿಸಿದ ಪಿಂಗಳೆ, ಗೇಹ-ದೇಹಾದಿಗಳ ಮೇಲೆ ತನ್ನದೆಂಬ ಅಭಿಮಾನವನ್ನು ತೊರೆದು ಶಾಂತಿಯನ್ನು ಹೊಂದಿದಳು.

ಈ ಪಿಂಗಳೆಯ ವೃತ್ತಾಂತದಿಂದ ನಾವು ತಿಳಿಯಬೇಕಾದ ಅಂಶವೆಂದರೆ ಆಸೆಯೆಂಬುದು ಪರಮ ದುಃಖಕ್ಕೆ ಕಾರಣವಾಗುತ್ತದೆ. ವೈರಾಗ್ಯವು ಪರಮಸುಖಕ್ಕೆ ಕಾರಣವಾಗುತ್ತದೆ. ಜಗತ್ಪತಿಯಾದ ಪರಮಾತ್ಮನು ದಯಪಾಲಿಸುವ ಆತ್ಮಸುಖದ ಮುಂದೆ ಜಗತ್ತಿನ ಉಳಿದೆಲ್ಲ ಸುಖವು ಅತಿ ತುಚ್ಛವೆನಿಸುತ್ತದೆ. ಇದು ಪಿಂಗಳೆ ನನಗೆ ಕಲಿಸಿದ ಪಾಠ.

ಕುರರ : (ಕುರರ ಪಕ್ಷಿ)

ಕುರರ ಪಕ್ಷಿಯೊಂದು ಎಲ್ಲಿಂದಲೋ ಒಂದು ಮಾಂಸದ ತುಂಡನ್ನು ತನ್ನ ಕೊಕ್ಕಿನಲ್ಲಿ ಕಚ್ಚಿಕೊಂಡು ಬಂದು ಅದನ್ನು ಸೇವಿಸಲು ಸರಿಯಾದ ಸ್ಥಳವನ್ನು ಅರಸುತ್ತಾ ಹಾರುತ್ತಿತ್ತು. ಇದನ್ನು ಕಂಡ ಬಲಿಷ್ಠವಾದ ರಣಹದ್ದುಗಳು ಆ ಪುಟ್ಟ ಪಕ್ಷಿಯ ಕೊಕ್ಕಿನಿಂದ ಮಾಂಸವನ್ನು ಕಿತ್ತುಕೊಳ್ಳಲು ನಾಲ್ಕೂ ಕಡೆಗಳಿಂದ ಅದನ್ನು ಸುತ್ತುವರಿಯುತ್ತಾ ತೊಂದರೆಪಡಿಸುತ್ತಿದ್ದವು.

ಕುರರ ಪಕ್ಷಿಯು ಅವುಗಳ ಕಾಟದಿಂದ ತಪ್ಪಿಸಿಕೊಳ್ಳಲು ಬಹಳ ಕಷ್ಟಪಟ್ಟಿತು. ಕಡೆಗೆ ಅವುಗಳ ಉಪಟಳವನ್ನು ತಾಳಲಾರದೆ ಕುರರ ಪಕ್ಷಿ ತನ್ನ ಬಾಯಲ್ಲಿದ್ದ ಮಾಂಸವನ್ನು ಕೆಳಗೆ ಹಾಕಿಬಿಟ್ಟಿತು. ಆ ದುಷ್ಟ ಪಕ್ಷಿಗಳು ಕುರರವನ್ನು ಬಿಟ್ಟು ಮಾಂಸದ ತುಂಡಿನ ಕಡೆಗೆ ಹಾರಿದಾಗ ಅವುಗಳ ಉಪಟಳದಿಂದ ಬಿಡುಗಡೆಹೊಂದಿದ ಕುರರ ಪಕ್ಷಿ ನೆಮ್ಮದಿಯನ್ನು ಪಡೆಯಿತು.

ಇದರಂತೆಯೇ ಮಾನವನು ತನಗೆ ಅತಿ ಪ್ರಿಯವಾದ ವಸ್ತುಗಳನ್ನು ಪರಿಗ್ರಹಿಸುವುದು ಅತ್ಯಂತ ದುಃಖಕ್ಕೆ ಕಾರಣವಾಗುತ್ತದೆ. ಇದನ್ನರಿತವನು ಅವುಗಳ ಮೇಲಿನ ಸ್ವಾಮ್ಯ ಮತ್ತು ವ್ಯಾಮೋಹವನ್ನು ತ್ಯಜಿಸಿ ಅಪರಿಮಿತ ಸುಖವನ್ನು ನೆಮ್ಮದಿಯನ್ನು ಹೊಂದಬೇಕು.

ಅರ್ಭಕ: (ಬಾಲಕ)

ಮಾನಾಪಮಾನಗಳ ಅರಿವಿಲ್ಲದೆ, ದೇಹಾದಿ ಪೋಷಣೆಗಳ ಪ್ರಯತ್ನವಿಲ್ಲದೆ ಪ್ರಪಂಚದ ಚಿಂತೆಯಿಂದ ಮುಕ್ತನಾಗಿ, ನಿರ್ಭಯನಾಗಿ ಆನಂದವಾಗಿರಲು ಕೇವಲ ಮುಗ್ಧ ಬಾಲಕನಿಗೆ ಮಾತ್ರ ಸಾಧ್ಯ. ಉಳಿದವರೆಲ್ಲರೂ ಸಂಸಾರದ ಚಿಂತೆಯಲ್ಲಿ ಮುಳುಗಿದವರೇ ಆಗಿರುತ್ತಾರೆ.

ಜ್ಞಾನಿಯಾದವನೂ ಬಾಲಕನಂತೆಯೇ! ಅವನಿಗೆ ಮಾನಾಪಮಾನಗಳ ಪರಿವೆ ಇಲ್ಲ. ಮನೆ ಮಕ್ಕಳ ಚಿಂತೆಯಿಲ್ಲ. ಆತ್ಮನನ್ನು ಪ್ರೀತಿಸುತ್ತಾ, ಆತ್ಮನೊಡನೆಯೇ ಕ್ರೀಡಿಸುತ್ತಾ ಬಾಲಕನಂತೆ ನಿರ್ಭಯವಾಗಿ, ನಿರಾತಂಕವಾಗಿ ತಿರುಗಾಡಿಕೊಂಡಿರುತ್ತಾನೆ.

ಕುಮಾರೀ (ಕನ್ಯೆ)

ಒಬ್ಬ ಗೃಹಸ್ಥನ ಮನೆಗೆ ಕನ್ಯಾರ್ಥಿಯಾಗಿ ವರನ ಕಡೆಯವರು ಆಗಮಿಸಿದರು. ಆ ಸಮಯದಲ್ಲಿ ಆ ಮನೆಯಲ್ಲಿ ಕನ್ಯೆಯ ಹೊರತಾಗಿ ಬೇರೆ ಯಾರೂ ಇರಲಿಲ್ಲ. ಮನೆಗೆ ಬಂದ ಅತಿಥಿಗಳನ್ನು ಕನ್ಯೆಯೇ ಉಪಚರಿಸಬೇಕಾಯಿತು. ಮನೆಯಲ್ಲಿ ಅಕ್ಕಿ ಮುಗಿದು ಹೋಗಿದ್ದರಿಂದ ಭತ್ತಕುಟ್ಟಿ ಅಕ್ಕಿಯನ್ನು ಸಿದ್ಧಗೊಳಿಸಬೇಕಾಗಿತ್ತು.

ಬಂದವರಿಗೆ ಭೋಜನವನ್ನು ಸಿದ್ಧಗೊಳಿಸಲು ಅವಳು ಗುಟ್ಟಾಗಿ ಭತ್ತ ಕುಟ್ಟಲು ಪ್ರಾರಂಭಿಸಿದಳು. ಹಾಗೆ ಭತ್ತವನ್ನು ಕುಟ್ಟುವಾಗ ಅವಳ ಕೈಗಳಲ್ಲಿದ್ದ ಬಳೆಗಳು ಘಲ್‌ ಘಲ್ ಎಂದು ಗಟ್ಟಿಯಾಗಿ ಶಬ್ದ ಮಾಡತೊಡಗಿದವು. ಅತಿಥಿಗಳು ಬಂದಾಗ ಭತ್ತ ಕುಟ್ಟಲು ಪ್ರಾರಂಭಿಸಿದರೆ ಅದು ತಮ್ಮ ಬಡತನವನ್ನು ಹೊರಪಡಿಸುವುದೆಂಬ ಅಂಜಿಕೆಯಿಂದ ಆ ಚತುರೆ ಒಂದೊಂದಾಗಿ ತನ್ನ ಬಳೆಗಳನ್ನು ಕಳಚಿದಳು.

ಕಡೆಗೆ ಎರಡೆರಡು ಉಳಿದಾಗಲೂ ಶಬ್ದ ಮಾಡುತ್ತಿತ್ತು. ಕಡೆಗೆ ಒಂದೊಂದೇ ಬಳೆಗಳನ್ನು ಕೈಗಳಲ್ಲಿ ಉಳಿಸಿಕೊಂಡಳು. ಒಂದು ಬಳೆಯು ಯಾವ ಶಬ್ದವನ್ನು ಮಾಡಲಿಲ್ಲ. ಕನ್ಯೆ ತನ್ನ ಕೆಲಸವನ್ನು ನಿರಾತಂಕವಾಗಿ ಮುಗಿಸಿದಳು.

ಕುಮಾರಿಯ ಈ ವರ್ತನೆಯಿಂದ ನಾವು ತಿಳಿಯಬೇಕಾದ ಅಂಶ: ಬಹಳ ಜನರೊಡಗೂಡಿ ವಾಸಮಾಡುವುದರಿಂದ ಪ್ರತಿದಿನವೂ ಯಾವುದಾದರೂ ಕಲಹವಿದ್ದೇ ಇರುತ್ತದೆ. ಇಬ್ಬರೇ ಇದ್ದರೂ ವಿನೋದ ಅಥವಾ ನಿಷ್ಠುರ ಸಂಭಾಷಣೆ ನಡೆಯುತ್ತಲೇ ಇರುತ್ತದೆ. ಕುಮಾರಿಯ ಕೊನೆಯ ಬಳೆಯಂತೆ ಒಂಟಿಯಾಗಿದ್ದರೆ ಯಾವ ರೀತಿಯ ಕಲಹಕ್ಕಾಗಲೀ ಮಾತುಗಳಿಗಾಗಲೀ ಅವಕಾಶವಿರುವುದಿಲ್ಲ. ಆದ್ದರಿಂದ ಸಾಧಕನಾದವನು ಲೌಕಿಕ ಜನರ ಸಂಗ ತ್ಯಜಿಸಿ, ಸದ್ಭಕ್ತರ ಸಂಗವನ್ನು ಮಾಡಬೇಕು.

ಶರಕೃತ್ : (ವ್ಯಾಧನ ಲಕ್ಷ್ಯ)

ಲಕ್ಷ್ಯಕ್ಕೆ ಗುರಿಯಿಟ್ಟು ಬಾಣವನ್ನು ಬಿಡುವುದರಲ್ಲಿ ಏಕದೃಷ್ಟಿ ಇರುವ ಬಿಲ್ಗಾರನಿಗೆ ಪಕ್ಕದಲ್ಲಿ ಭೇರಿ, ನಗಾರಿ, ಕಹಳೆ ಮುಂತಾದ ವಾದ್ಯಗಳ ಸಮೇತ ಮಹಾರಾಜನೇ ಮೆರವಣಿಗೆಯಲ್ಲಿ ಹೋಗುತ್ತಿದ್ದರೂ ಅವನ ಗಮನ ಅತ್ತ ಹರಿಯುವುದಿಲ್ಲ.

ಅದೇ ರೀತಿ ಪರಮಾತ್ಮನಲ್ಲೇ ಏಕಾಗ್ರ ಚಿತ್ತವುಳ್ಳ ಸಾಧಕನಿಗೆ ಹೊರಗಿನದಾಗಲೀ ಒಳಗಿನದಾಗಲೀ ಕಾಣುವುದಿಲ್ಲ. ಪರಮಾತ್ಮನಲ್ಲಿ ಪರಿಪೂರ್ಣವಾಗಿ ಲೀನವಾದ ಮನಸ್ಸು ಆನಂದ ಸಾಗರದಲ್ಲಿ ಮುಳುಗಿರುತ್ತದೆ. ಬಿಲ್ಗಾರನ ಲಕ್ಷ್ಯದಂತೆ ಪರಮಾತ್ಮನಲ್ಲಿ ನಮ್ಮ ಮನಸ್ಸಿನ ಲಕ್ಷ್ಯವಿರಬೇಕೆಂದು ಈ ದೃಷ್ಟಾಂತದಿಂದ ನಾವು ಕಲಿಯಬೇಕು.

ಸರ್ಪ : (ಹಾವು)

ಸರ್ಪಗಳು ತಮ್ಮ ವಾಸಕ್ಕಾಗಿ ಮನೆಯನ್ನು ಕಟ್ಟಿಕೊಳ್ಳುವುದಿಲ್ಲ ಬದಲಾಗಿ ಗೆದ್ದಲ ಹುಳುಗಳಿಂದ ದೃಢವಾಗಿ ನಿರ್ಮಿಸಲ್ಪಟ್ಟ ಹುತ್ತಗಳಲ್ಲಿ ಸೇರಿಕೊಂಡು ಸುಖವಾಗಿಯೂ, ಸುರಕ್ಷಿತವಾಗಿಯೂ ಜೀವಿಸುತ್ತವೆ.

ನಾವು ಅಶಾಶ್ವತವಾದ ಈ ದೇಹದ ವಾಸಕ್ಕಾಗಿ ಮನೆಯನ್ನು ಕಟ್ಟಲು ಯತ್ನಿಸುವುದು ಅತಿ ದುಃಖಕ್ಕೆ ಕಾರಣವಾಗುತ್ತದೆ. ಮಾತ್ರವಲ್ಲ, ಅದು ನಿಷ್ಫಲವೂ ಆಗುತ್ತದೆ ಎಂಬುದನ್ನು ಈ ಸರ್ಪಗಳಿಂದ ಕಲಿಯಬಹುದಾಗಿದೆ.

ಊರ್ಣನಾಭ – (ಜೇಡರ ಹುಳು)

ಜೇಡರ ಹುಳುವು ತನ್ನೊಳಗಿನಿಂದ ಹೊರಬಂದ ನೂಲೆಳೆಯನ್ನು ಬಾಯಿಂದ ಹೊರಹಾಕಿ ಹರಡಿ, ಬಲೆಯನ್ನು ನಿರ್ಮಾಣ ಮಾಡಿ ಆ ಬಲೆಯಲ್ಲಿ ತಾನು ಸ್ಟೇಚ್ಛೆಯಿಂದ ವಿಹರಿಸುತ್ತಿರುತ್ತದೆ. ಅದು ಸಾಕೆನಿಸಿದಾಗ ತಾನು ಕಟ್ಟಿದ ಬಲೆಯನ್ನು ತಾನೇ ಪುನಃ ನುಂಗುತ್ತಾ ಬಂದು ತನ್ನೊಳಗೇ ಲಯಗೊಳಿಸಿಕೊಳ್ಳುತ್ತದೆ.

ಇದರಂತೆಯೇ ಪರಮಾತ್ಮನು ತನ್ನ ಪ್ರಭಾವರೂಪವಾದ ಕಾಲದಿಂದ ಸತ್ತ್ವಾದಿ ಗುಣರೂಪವಾದ ತನ್ನ ಮಾಯೆಯನ್ನು ಕಲಕುತ್ತಾ, ಈ ಜಗತ್ತೆಲ್ಲವನ್ನು ಹಾಸುಹೊಕ್ಕಾಗಿ ಹೆಣೆಯುತ್ತಾ ಕ್ರಿಯಾಶಕ್ತಿ ಪ್ರಧಾನವಾದ ಮಹತ್ ತತ್ತ್ವವನ್ನು ಸೃಷ್ಟಿಸುತ್ತಾನೆ. ಕಲ್ಪಾಂತರದಲ್ಲಿ ಅದೇ ಕ್ರಮದಿಂದಲೇ ತಾನು ಸೃಷ್ಟಿಸಿದ ಜಗತ್ತನ್ನು ತನ್ನೊಳಗೇ ಲಯಗೊಳಿಸಿಕೊಳ್ಳುತ್ತಾನೆ.

ಸುಪೇಶಕೃತ್ : (ಕಣಜದ ಹುಳು)

ಕಣಜದ ಹುಳುವು ತನ್ನ ಆಹಾರವಾಗಲೆಂದು ಬೇರೊಂದು ಹುಳುವನ್ನು ತಂದು ತನ್ನ ಗೂಡಿನಲ್ಲಿಟ್ಟಾಗ ಆ ಕೀಟವು ಭಯದಿಂದ ಆ ಕಣಜದ ಹುಳುವನ್ನೇ ಧ್ಯಾನಿಸುತ್ತಾ ಆ ನಿರಂತರ ಧ್ಯಾನದಿಂದ ಕಣಜದ ಸಾರೂಪ್ಯವನ್ನೇ ಹೊಂದಿಬಿಡುತ್ತದೆ.

ಇದರಂತೆಯೇ ಭಗವದ್ಧ್ಯಾನ ಪರಾಯಣರಾದವರು ಭಗವಂತನ ಸಾರೂಪ್ಯವನ್ನು ಪಡೆಯುವುದರಲ್ಲಿ ಆಶ್ಚರ್ಯವೇನೂ ಇಲ್ಲ ಎಂಬ ವಿಷಯವನ್ನು ಕಣಜದ ಹುಳುವಿನ ದೃಷ್ಟಾಂತದಿಂದ ತಿಳಿಯಬಹುದಾಗಿದೆ.

ಮನುಷ್ಯನು ಸ್ನೇಹದಿಂದಾಗಲೀ, ಭಯದಿಂದಾಗಲಿ, ದ್ವೇಷದಿಂದಾಗಲೀ ತನ್ನ ಸಂಪೂರ್ಣವಾದ ಮನಸ್ಸನ್ನು ಯಾವುದರಲ್ಲಿ ಕೇಂದ್ರೀಕರಿಸುವನೋ ಅವನು ಅದರ ಸ್ವರೂಪವನ್ನೇ ಹೊಂದಿಬಿಡುತ್ತಾನೆ.

”ಮಹಾರಾಜ, ಈ ಪ್ರಕಾರವಾಗಿ ಮೇಲೆ ವರ್ಣಿಸಿದ ನನ್ನ 24 ಗುರುಗಳಿಂದ ಬುದ್ಧಿಗೆ ಶಿಕ್ಷಣವನ್ನು ಕೊಡಿಸಿದ್ದೇನೆ. ಇದರ ಫಲವಾಗಿ ನಾನು ವೈರಾಗ್ಯವನ್ನು ಪಡೆದು, ವಿಶಿಷ್ಟವಾದ ಜ್ಞಾನದ ಬೆಳಕನ್ನು ಹೊಂದಿ ಆತ್ಮನಿಷ್ಠನಾಗಿ ಮುಕ್ತಸಂಗನಾಗಿ, ಅಹಂಕಾರ ರಹಿತನಾಗಿ ಈ ಭೂಮಿಯಲ್ಲಿ ಸಂಚರಿಸುತ್ತಿರುವೆನು.

ಆದ್ದರಿಂದ ಧೀರನಾದವನು ಅತ್ಯಂತ ದುರ್ಲಭವಾದ ಮಾನವ ಜನ್ಮವನ್ನು ಪಡೆದು ಮೃತ್ಯು ಧರ್ಮವುಳ್ಳ ಈ ಶರೀರವು ಬಿದ್ದು ಹೋಗುವುದರೊಳಗಾಗಿ ಮೋಕ್ಷ ಪ್ರಾಪ್ತಿಗಾಗಿ ಪ್ರಯತ್ನಿಸಬೇಕು. ವಿಷಯೋಪಭೋಗಗಳಿಗಾಗಿ ಹಾತೊರೆಯಬಾರದು.”

ಶ್ರೀಕೃಷ್ಣನು ಉದ್ಧವನಿಗೆ ಹೇಳುತ್ತಾನೆ:

”ಉದ್ಧವ, ಆಳವಾದ ಬುದ್ಧಿಯನ್ನು ಹೊಂದಿದ್ದ ಆ ಅವಧೂತ ಬ್ರಾಹ್ಮಣನು ನೀಡಿದ ಆಧ್ಯಾತ್ಮದ ಉಪದೇಶವನ್ನು ಶ್ರದ್ಧೆಯಿಂದ ಆಲಿಸಿದ ಯದುಮಹಾರಾಜನು, ಸಮಸ್ತನಾದ ಆಸಕ್ತಿಗಳಿಂದಲೂ ಮುಕ್ತನಾಗಿ ಸಮದರ್ಶಿಯಾದನು. ಅವನಂತೆಯೇ ನೀನೂ ಕೂಡ ಸಮಸ್ತವಾದ ಆಸಕ್ತಿಗಳನ್ನು ತೊರೆದು ಸಮದರ್ಶಿಯಾಗು.”

“ಅವಧೂತನು ಹೇಳುವ ಪೃಥಿವಿಯೇ ಮುಂತಾದ 24 ಗುರುಗಳ ಪರಿಚಯವು ಆಧ್ಯಾತ್ಮ ವಿವೇಕದ ಅದ್ಭುತ ದಾಖಲೆಯಾಗಿ ವಿವೇಕಿಯಾದವನಿಗೆ ಪ್ರಕೃತಿಯಲ್ಲಿ ಎಲ್ಲೆಲ್ಲೂ ಶಿಕ್ಷಣ ದೊರೆಯುತ್ತದೆ ಎಂಬ ನೀತಿಯನ್ನು ಅವಧೂತ ಗೀತೆಯು ಮನೋಜ್ಞವಾಗಿ ಸಾರುತ್ತದೆ.”

ಶ್ರೀಕೃಷ್ಣನಿಂದ ‘ಅವಧೂತ ಗೀತೆ’ಯ ಮೂಲಕ ಉಪದೇಶ ಪಡೆದ ಉದ್ಧವನು, ಗುರು ಸ್ವರೂಪವನ್ನು ಅರಿತವನಾದನು. ಶ್ರೀಕೃಷ್ಣನ ಆಜ್ಞೆಯ ಮೇರೆಗೆ ಬದರಿಕಾಶ್ರಮಕ್ಕೆ ಹೋಗಿ ಋಷಿ ಜೀವನವನ್ನು ನಡೆಸುತ್ತಾ ಆತ್ಮಾನಂದವನ್ನು ಹೊಂದಿದನು.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi