ಬಲಿ ಚಕ್ರವರ್ತಿಯ ಕಥೆ

ದೇವತೆಗಳಿಗೂ, ದೈತ್ಯರಿಗೂ ಆಗಾಗ ಘನಘೋರ ಯುದ್ಧ ನಡೆಯುತ್ತಿತ್ತು. ಆ ಯುದ್ಧದಲ್ಲಿ ದೈತ್ಯಕುಲ ಚಕ್ರವರ್ತಿಯಾಗಿದ್ದ ಬಲಿಯೇ ಪ್ರಧಾನ ಸೇನಾನಿಯಾಗಿದ್ದ. ಅವನಿಗೆ ತಾನು ತ್ರಿಲೋಕಾಧಿಪತಿಯಾಗಬೇಕು ಎಂಬ ಆಸೆಯಿತ್ತು.

ತನ್ನ ಪರಮ ವೈರಿಯಾದ ಇಂದ್ರನನ್ನು ಸೋಲಿಸಿ ಅವನು ಆಳುತ್ತಿದ್ದ ದೈವಲೋಕಕ್ಕೆ ತಾನು ಒಡೆಯನಾಗಬೇಕು ಎಂದು ಹಂಬಲಿಸುತ್ತಿದ್ದ. ಅದಕ್ಕಾಗಿ ತನ್ನ ಗುರು ಶುಕ್ರಾಚಾರ್ಯರ ಬಳಿ ಸಮಾಲೋಚನೆ ನಡೆಸಿದ. ಶುಕ್ರಾಚಾರ್ಯರು ಬಲಿಯ ಗುರುಭಕ್ತಿಯನ್ನು ಬಹಳವಾಗಿ ಮೆಚ್ಚಿಕೊಂಡಿದ್ದರು.

ಅವನ ಆಸೆ ಕೈಗೂಡುವಂತೆ ಮಾಡಲು ವಿಶ್ವಜಿತ್‌ ಎಂಬ ಮಹಾ ಯಜ್ಞವನ್ನೂ ಮಾಡಿಸಿದರು. ಇದರಿಂದ ಬಲಿಗೆ ಇಂದ್ರಾದಿ ದೇವತೆಗಳನ್ನೆಲ್ಲಾ ಸೋಲಿಸಿ ಸ್ವರ್ಗಲೋಕವನ್ನು ವಶಪಡಿಸಿಕೊಳ್ಳುವ ಸಾಮಾರ್ಥ್ಯವು ಬಂದುಬಿಟ್ಟಿತ್ತು.

ಅವನು ಒಂದು ದಿನ ತನ್ನ ಗುರು ಹಿರಿಯರಿಗೆಲ್ಲಾ ವಂದಿಸಿ, ಅವರ ಅನುಮತಿ ಆಶೀರ್ವಾದಗಳನ್ನು ಪಡೆದುಕೊಂಡ. ಬಳಿಕ ಸಾಗರದಷ್ಟು ವಿಶಾಲವಾದ ಅಪಾರ ಸೈನ್ಯದೊಂದಿಗೆ ದಿವ್ಯವಾದ ರಥದಲ್ಲಿ ಕುಳಿತು ಇಂದ್ರನ ಅಮರಾವತಿಗೆ ಹೊರಟೇಬಿಟ್ಟ.

ಬಲಿಯು ತನ್ನನ್ನು ಜಯಿಸಲು ವಿಶೇಷ ಶಕ್ತಿ ಸಾಮಾರ್ಥ್ಯಗಳನ್ನು ಪಡೆದು ಬಂದಿದ್ದಾನೆ ಎಂಬ ವಿಚಾರ ಇಂದ್ರನಿಗೆ ತಿಳಿಯಿತು. ತನ್ನ ಎಲ್ಲ ದೇವತೆಗಳನ್ನು ಕರೆದುಕೊಂಡು ದೇವ ಗುರುಗಳಾದ ಬೃಹಸ್ಪತಿಗಳು ಇದ್ದ ಸ್ಥಳಕ್ಕೆ ಓಡಿದ. ತನಗೆ ಬಲಿಯಿಂದ ಬಂದಿರುವ ಗಂಡಾಂತರವನ್ನು ವಿವರಿಸಿದ.

ಅವನಿಗೆ ಇಷ್ಟು ಶಕ್ತಿ ಸಾಮರ್ಥ್ಯಗಳು ಹೇಗೆ ಬಂದವು ಎಂತಲೂ ಕೇಳಿದ. ಆಗ ಸರ್ವಜ್ಞರಾದ ದೇವಗುರುಗಳು ಬಲಿ ಚಕ್ರವರ್ತಿಯು ಬ್ರಾಹ್ಮಣರ ಮಂತ್ರ ಶಕ್ತಿ ಹಾಗೂ ಬೆಂಬಲದಿಂದ ಈಗ ಅತಿ ಬಲಿಷ್ಠನಾಗಿದ್ದಾನೆ. ಈಗ ಅವನನ್ನು ಜಯಿಸುವ ಸಾಮರ್ಥ್ಯ ಭಗವಾನ್‌ ಶ್ರೀಹರಿಗಲ್ಲದೆ ಮತ್ತಾರಿಗೂ ಇಲ್ಲ ಎಂದುಬಿಟ್ಟರು.

ಇತ್ತ ಸುರಲೋಕವು ಬಲು ಸುಲಭವಾಗಿ ಬಲಿಚಕ್ರವರ್ತಿಯ ವಶವಾಯಿತು. ಅವನು ಇಂದ್ರನ ಪದವಿಯಲ್ಲಿ ಕುಳಿತು ಮೂರು ಲೋಕಗಳನ್ನು ಆಳತೊಡಗಿದ. ಈಗ ಅವನ ಮನದಾಸೆಗಳೆಲ್ಲಾ ಈಡೇರಿದಂತಾಗಿತ್ತು.

ಇಂದ್ರನು ತನ್ನ ಉನ್ನತ ಪದವಿಯನ್ನೂ, ಸುರಲೋಕದ ವೈಭವಗಳನ್ನೂ ಕಳೆದುಕೊಂಡಿದ್ದರಿಂದ ಅವನ ತಾಯಿಯಾದ ಅದಿತೀ ದೇವಿಗೆ ತುಂಬ ದುಃಖವಾಗಿತ್ತು. ಅವಳು ತನ್ನ ಪತಿಯಾದ ಕಶ್ಯಪ ಮುನಿಗಳ ಜೊತೆ ತಮ್ಮ ಮಕ್ಕಳಾದ ದೇವತೆಗಳಿಗೆ ದೈತ್ಯರಿಂದ ಆಗಿರುವ ಅನ್ಯಾಯದ ಬಗ್ಗೆ ಚರ್ಚಿಸಿದಳು.

ಪರಮ ಜ್ಞಾನಿಗಳಾದ ಕಶ್ಯಪರು “ಜಗದೀಶ್ವರನಾದ ಶ್ರೀಮನ್ನಾರಾಯಣನನ್ನು ಭಕ್ತಿ ಶ್ರದ್ಧೆಗಳಿಂದ ಆರಾಧಿಸಿ, ಆತನನ್ನು ಒಲಿಸಿಕೊಳ್ಳುವುದೇ ಇದಕ್ಕಿರುವ ಉಪಾಯ. ನಾನು ಹೇಳುವ ನಿಯಮಗಳನ್ನು ಶ್ರದ್ಧೆಯಿಂದ ಪಾಲಿಸುತ್ತಾ ಶ್ರೀ ಹರಿಯನ್ನು ಆರಾಧಿಸಿದರೆ ನಿನ್ನ ಮನೋರಥವು ಖಂಡಿತ ಈಡೇರುತ್ತದೆ,” ಎಂದು ಅದಿತಿಯನ್ನು ಸಂತೈಸಿದರು.

ಆಕೆಯು ತತ್‌ಕ್ಷಣವೇ ಆ ವ್ರತವನ್ನು ಆಚರಿಸಲು ಸಂಕಲ್ಪ ಮಾಡಿದಳು. ಹನ್ನೆರಡು ದಿನಗಳ ಕಾಲ ಉಪವಾಸವಿದ್ದು ಆಚರಿಸಬೇಕಾದ ಆ ವ್ರತದ ಹೆಸರು ಪಯೋವ್ರತ ಎಂದು. ದೇವಮಾತೆಯಾದ ಅದಿತಿದೇವಿಯು ಅದನ್ನು ಯಶಸ್ವಿಯಾಗಿ ಆಚರಿಸಿ ಶ್ರೀಹರಿಯನ್ನು ಒಲಿಸಿಕೊಂಡೇ ಬಿಟ್ಟಳು.

ಶ್ರೀ ಹರಿಯು ಕೊಟ್ಟ ಮಾತಿನಂತೆ ಕಶ್ಯಪ ಅದಿತಿಯರ ಮಗನಾಗಿ ಜನಿಸಿದ. ಅವರು ಮಗುವಿಗೆ ವಾಮನ ಎಂದು ನಾಮಕರಣ ಮಾಡಿದರು. ಭಗವಂತನು ಮಗುವಾಗಿ ಜನಿಸಿದ ಸ್ವಲ್ಪ ಹೊತ್ತಿಗೆ ಬಾಲಬ್ರಹ್ಮಚಾರಿಯಾಗಿ ರೂಪಗೊಂಡ.

ದಿವ್ಯ ತೇಜಸ್ಸಿನ ಮುದ್ದು ಬಾಲಕನಾದ ವಾಮನಮೂರ್ತಿಯು ಕೊರಳಲ್ಲಿ ತುಳಸೀಮಣಿಯ ಮಾಲೆಯನ್ನು ಧರಿಸಿದ್ದ. ಒಂದು ಕೈಯಲ್ಲಿ ಕಮಂಡಲವನ್ನೂ ಇನ್ನೊಂದು ಕೈಯಲ್ಲಿ ಛತ್ರಿಯನ್ನೂ ಹಿಡಿದಿದ್ದ. ಕೇವಲ ಕೌಪೀನಧಾರಿಯಾಗಿದ್ದ.

ಈ ರೂಪದಲ್ಲಿ ಕಾಣಿಸಿಕೊಂಡ ಶ್ರೀವಾಮನಮೂರ್ತಿಯು ಮಾತಾಪಿತರಿಗೂ, ಗುರುಹಿರಿಯರಿಗೂ ಪ್ರದಕ್ಷಿಣೆ ನಮಸ್ಕಾರಗಳನ್ನು ಹಾಕಿದ. ತುರುವಾಯ ಬಲಿಚಕ್ರವರ್ತಿ ಇದ್ದ ಸ್ಥಳಕ್ಕೆ ಹೊರಟು ಬಿಟ್ಟ. ಬಲಿ, ಕುಲಗುರು ಶುಕ್ರಾಚಾರ್ಯರ ಸಲಹೆಯಂತೆ ಒಂದು ಯಜ್ಞನದಲ್ಲಿ ತೊಡಗಿದ್ದ.

ಆಗ ವಾಮನಮೂರ್ತಿಯು ಅಲ್ಲಿಗೆ ದಯಮಾಡಿಸಿದ. ಅದ್ಭುತ ತೇಜಸ್ಸಿನ ಆ ಬಾಲಬ್ರಹ್ಮಚಾರಿಯನ್ನು ಕಂಡು ಅಲ್ಲಿದ್ದವರೆಲ್ಲಾ ಆಶ್ವರ್ಯಗೊಂಡರು, ಆನಂದಗೊಂಡರು. ಬಲಿಯಂತೂ ಆ ಬಂಗಾರದ ಮೈಬಣ್ಣದ ಸುಂದರ ಬಾಲಕನನ್ನು ನೋಡಿ ತುಂಬ ಆಕರ್ಷಿತನಾದ. ಅವನು ಆತನಿಗೆ ಸೂಕ್ತ ಆಸನವನ್ನು ಕೊಟ್ಟು ಸತ್ಕರಿಸಿದ.

ಬಳಿಕ ಅವನು, “ಹೇ ತೇಜಸ್ವೀ ಬ್ರಾಹ್ಮಣ ಪುತ್ರನೆ, ನೀನು ನನ್ನಿಂದ ಏನೋ ಬಯಸಿ ಬಂದಂತೆ ಕಾಣುತ್ತಿದೆ. ನೀನು ಏನು ಬಯಸಿ ಬೇಡಿದರೂ ನಾನು ಸಂತೋಷದಿಂದ ನೀಡುತ್ತೇನೆ, ಇದು ಸತ್ಯ,” ಎಂದು ಹೇಳಿದ. ಆಗ ವಾಮನಮೂರ್ತಿಯು “ನನಗೆ ಮೂರು ಹೆಜ್ಜೆಗಳನ್ನು ಇಡುವಷ್ಟು ಸ್ಥಳವನ್ನು ದಾನವಾಗಿ ನೀಡು, ನನಗೆ ಅಷ್ಟೇ ಸಾಕು,” ಎಂದು ಕೇಳಿದ.

ಅದಕ್ಕೆ ಬಲಿಯು ನಗುತ್ತಾ “ಎಲೈ ತೇಜಸ್ವೀ ಬಾಲಕನೆ, ಮೂರು ಲೋಕಗಳಿಗೂ ಚಕ್ರವರ್ತಿ ಸಾರ್ವಭೌಮನಾದ ನನ್ನಲ್ಲಿ ಇಷ್ಟು ಸಣ್ಣ ದಾನ ಕೇಳುವುದೇ? ಬೇಕಾದರೆ ಒಂದು ರಾಜ್ಯವನ್ನು ಕೇಳು, ಒಂದು ದ್ವೀಪವನ್ನು ಕೇಳು, ಹಣ, ಚಿನ್ನ, ಮುತ್ತು, ರತ್ನ, ವಜ್ರ, ವೈಡೂರ್ಯ ಏನು ಬೇಕಾದರೂ ಕೇಳಿಕೋ. ನಾನು ಸಂತೋಷವಾಗಿಯೇ ದಾನ ಮಾಡುತ್ತೇನೆ,” ಎಂದು ಹೇಳಿದ.

ಆಗ ಭಗವಾನ್‌ ವಾಮನ ದೇವನು “ಎಲೈ ರಾಜನೆ, ನನಗೆ ಅತಂಹ ಯಾವ ಮೋಹ ವ್ಯಾಮೋಹಗಳೂ ಇಲ್ಲ. ನಾನು ಬೇಡಿದ್ದನ್ನು ಕೊಟ್ಟರೆ ಸಾಕು, ಬೇರೆ ಯಾವುದರ ಅಗತ್ಯವೂ ನನಗಿಲ್ಲ” ಎಂದು ಹೇಳಿದ.

ವಾಮನದೇವನ ರಹಸ್ಯವನ್ನು ಊಹಿಸಿದ ಶುಕ್ರಾಚಾರ್ಯರು ಬಲಿಯನ್ನು ತಡೆಯುತ್ತಾ “ಹೇ ದೈತ್ಯ ಕುಲತಿಲಕನೆ, ಈ ದಾನವನ್ನು ಕೊಡಲು ಮುಂದಾಗಬೇಡ. ಇದರಲ್ಲಿ ಮೋಸವಿದೆ. ಈ ಬಾಲಕ ಸಾಮಾನ್ಯನಲ್ಲ. ವಿಷ್ಣುವೇ ಈ ರೂಪದಲ್ಲಿ ಬಂದು ನಿನ್ನನ್ನು ವಂಚಿಸುತ್ತಿದ್ದಾನೆ. ಇವನನ್ನು ನಂಬಬೇಡ, ನಂಬಿ ಕೆಡಬೇಡ,” ಎಂದೆಲ್ಲಾ ಹೇಳಿ ಅವನನ್ನು ಎಚ್ಚರಿಸಿದರು.

ಆದರೆ ಬಲಿಯು ತಾನು ಕೊಟ್ಟ ಮಾತಿಗೆ ತಪ್ಪಲು ಸಿದ್ಧನಾಗಿರಲಿಲ್ಲ. ತನ್ನ ಗುರುಗಳ ಕೋಪ ಶಾಪಗಳಿಗೆ ಮಣಿಯದೆ ತನ್ನ ನಿಶ್ಚಯಕ್ಕೆ ಅಂಟಿಕೊಂಡ. ಬಳಿಕ ಬಲಿಯು ಮಾತಿನಂತೆ ಮೂರು ಹೆಜ್ಜೆ ಭೂಮಿಯನ್ನು ವಾಮನಮೂರ್ತಿಗೆ ಶಾಸ್ತ್ರಸಮ್ಮತವಾದ ರೀತಿಯಲ್ಲಿ ದಾನ ಮಾಡಿಯೇ ಬಿಟ್ಟ.

ಆಗ ವಾಮನ ದೇವನು ತ್ರಿವಿಕ್ರಮನಾಗಿ ಆಕಾಶದೆತ್ತರಕ್ಕೆ ಬೆಳೆದು ನಿಂತ. ಒಂದು ಹೆಜ್ಜೆಯಿಂದ ಇಡೀ ಭೂಮಿಯನ್ನೂ, ಇನ್ನೊಂದು ಹೆಜ್ಜೆಯಿಂದ ಇಡೀ ಆಕಾಶವನ್ನೂ ಮುಚ್ಚಿಬಿಟ್ಟ. ಮೂರನೇ ಹೆಜ್ಜೆಯನ್ನು ಎಲ್ಲಿಡಲಿ, ಎಂದು ಕೇಳೀದಾಗ ಬಲಿಯು ತನ್ನ ತಲೆಯ ಮೇಲಿಡು ಎಂದು ಹೇಳಿದ.

ಅವನ ಆತ್ಮ ಸರ್ಮಪಣಾಭಾವಕ್ಕೆ ಭಗವಂತ ಸಂಪ್ರೀತನಾಗಿ ತನ್ನ ದರ್ಶನವನ್ನು ಕುರುಣಿಸಿದ. ವಿಶೇಷ ಅನುಗ್ರಹ ನೀಡಿದ. ಬಲಿಯ ಬೇಡಿಕೆಯಂತೆ ವರ್ಷಕೊಮ್ಮೆ, ಕಾರ್ತಿಕ ಮಾಸದಲ್ಲಿ ಭೂಮಿಗೆ ಭೇಟಿ ನೀಡುವ ಅನುಮತಿಯನ್ನೂ ನೀಡಿದ. ಭಕ್ತನಾದ ಬಲಿ ಮಹಾರಾಜ ಹೀಗೆ ಭೇಟಿ ನೀಡುವ ದಿನವನ್ನು “ದೀಪಾವಳಿ ಸಂದರ್ಭದಲ್ಲಿ “ಬಲಿಪಾಡ್ಯಮಿ” ಎಂದು ಆಚರಿಸಲಾಗುತ್ತದೆ.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi