ಈ ಪ್ರಪಂಚ ಸಂಗತವಾಗಿ ಕಾಣುವ ಸೌಂದರ್ಯ ಎನ್ನುವುದು ಶ್ರೀಕೃಷ್ಣನ ಪರಿಪೂರ್ಣ
ಮೂರ್ತಿಯ ಸೌಂದರ್ಯದ ಮುಂದೆ ಕಾಂತಿಹೀನವಾಗಿ ಹೋಗುತ್ತದೆ.

ಈ ಪ್ರಪಂಚದ ಸೌಂದರ್ಯದ ಬಗ್ಗೆ ಜನ ಬಹಳವಾಗಿ ಮೋಹಗೊಂಡಿದ್ದಾರೆ. ಹೀಗಿದ್ದರೂ, ವೈದಿಕ ಸಾಹಿತ್ಯ ಐಹಿಕ ಸೌಂದರ್ಯದ ನಿಜವಾದ ಸ್ವರೂಪ ಲಕ್ಷಣದ ಬಗ್ಗೆ ಆಳವಾದ ಒಳನೋಟಗಳನ್ನು ನಮ್ಮ ಮುಂದಿರಿಸುತ್ತದೆ. ಜನ ಸಮಯಾವಕಾಶ ಮಾಡಿಕೊಂಡು ಈ ಪವಿತ್ರ ಮೂಲಗಳ ಮಾತುಗಳನ್ನು ಆಲಿಸುವುದಾದರೆ, ಈ ಪ್ರಪಂಚದಲ್ಲಿ ಯಾವುದನ್ನು ಸೌಂದರ್ಯ ಎಂದು ಒಪ್ಪಿಕೊಳ್ಳಲಾಗಿದೆಯೊ ಅದು, ದೇವೋತ್ತಮ ಪರಮ ಪುರುಷ ಶ್ರೀಕೃಷ್ಣನ ಪರಿಶುದ್ಧ ಆಧ್ಯಾತ್ಮಿಕ ಸೌಂದರ್ಯದ ಒಂದು ಕಾಂತಿಹೀನವಾದ, ಭ್ರಾಮಕ ಪ್ರತಿಫಲನೆ ಎಂದು ತಿಳಿದು ಅಚ್ಚರಿಗೊಳ್ಳಬಹುದು.
ಅನೇಕರು ಐಹಿಕ ಸೌಂದರ್ಯವೆನ್ನುವುದು ಸುಳ್ಳು, ಅಸತ್ಯ ಎನ್ನುವ ಮಾತನ್ನು ಒಪ್ಪಿಕೊಳ್ಳದಿರಬಹುದು. ತನ್ನ ಮನದನ್ನೆಯನ್ನು ಸೌಂದರ್ಯದ ಪರಮಾವಧಿ ಎಂದು ಮರುಳು ಯುವಕ ಭಾವಿಸುತ್ತಾನೆ, ಪಂಡಿತನೊಬ್ಬ ನಾಯಕಕೃತಿ ಕಾವ್ಯವೊಂದರ ಅದ್ಭುತ ಕಲ್ಪನೆಗಳನ್ನು ಕಂಡು ಮನಕರಗುತ್ತಾನೆ, ಮತ್ತು ಕಲಾವಿದನೊಬ್ಬ ಗ್ರಾಮೀಣ ಪ್ರಕೃತಿ ದೃಶ್ಯಗಳ ಚಿತ್ರಣವನ್ನು ದೇವತೆಗಳ ಕೈವಾಡ ಎಂದು ಭಾವಿಸುತ್ತಾನೆ. ಇಂತಹ ಒಂದೊಂದು ವಿಷಯದಲ್ಲಿಯೂ ಆಯಾ ವ್ಯಕ್ತಿ ತಾನೇನು ಕಾಣುತ್ತಾನೊ ಅಥವಾ ತಾನೇನಂದುಕೊಳ್ಳುತ್ತಾನೆ ಅದನ್ನೆ ನಿಜವಾದ ಸೌಂದರ್ಯ ಎಂದು ಮೆಚ್ಚಿಕೊಳ್ಳುತ್ತಾನೆ. ಹಾಗಾದರೆ, ಇದನ್ನೇಕೆ ಸುಳ್ಳು ಅನ್ನಬೇಕು?
ಭಗವದ್ಗೀತೆಯ ಎರಡನೆಯ ಅಧ್ಯಾಯದಲ್ಲಿ ಈ ಪ್ರಶ್ನೆಗೆ ಉತ್ತರ ಸಿಗುತ್ತದೆ. ಅಲ್ಲಿ ಶ್ರೀಕೃಷ್ಣ ಅರ್ಜುನನಿಗೆ ಹೇಳುತ್ತಾನೆ: “ಸತ್ಯದ ಪ್ರತಿಪಾದಕ ದಿವ್ಯಜ್ಞಾನಿಗಳು, ಅಸ್ತಿತ್ವವಿಲ್ಲದ್ದಕ್ಕೆ ಬಾಳಿಕೆಯಿಲ್ಲ ಮತ್ತು ಅಸ್ತಿತ್ವವಿರುವುದಕ್ಕೆ ಅವಸಾನವಿಲ್ಲ ಎಂದು ನಿರ್ಣಯಿಸಿದ್ದಾರೆ. ಎಲ್ಲ ಅಂಶಗಳನ್ನು ಪೂರ್ಣವಾಗಿ ಅಧ್ಯಯನ ಮಾಡಿದ ಮೇಲೆ ಈ ತತ್ತ್ವದರ್ಶಿಗಳು ಇಂತಹದೊಂದು ನಿರ್ಣಯಕ್ಕೆ ಬಂದಿದ್ದಾರೆ.”

ಪ್ರಾಪಂಚಿಕ ಸೌಂದರ್ಯವನ್ನು ಮಿಥ್ಯಾ ಎಂದು ಭಾವಿಸುವಂತಾಗುವುದು ಏಕೆಂದರೆ ಅದರ ಪ್ರಕಟಗೊಳ್ಳುವಿಕೆ ಅತಿ ಅಲ್ಪಾವಧಿಯದು. ಅದು ಮರೀಚಿಕೆಯ ಹಾಗೆ ಕ್ಷಣ ಮಾತ್ರದಲ್ಲಿ ಕಂಡು, ಕಾಣದಂತಾಗುತ್ತದೆ. ಅತಿ ಸುಂದರ ಯುವ ದೇಹವೊಂದು ವೃದ್ಧಾಪ್ಯ ತಲಪಿ ಸುಕ್ಕುಸುಕ್ಕಾಗುತ್ತದೆ; ಸಾಯುತ್ತದೆ, ಕೊಳೆಯುತ್ತದೆ, ಮತ್ತು ಕ್ರಿಮಿಕೀಟಗಳಿಗೆ ಆಹಾರವಾಗುತ್ತದೆ. ಹೀಗೆಯೇ ಕಾವ್ಯವೊಂದರ ಸೊಬಗು-ಸೌಂದರ್ಯವನ್ನು ಪುಸ್ತಕ ರೂಪದಲ್ಲಿ ಉಳಿಸಿಟ್ಟಿದ್ದರೂ ಯಾವುದೊ ಘಟ್ಟವೊಂದರಲ್ಲಿ ನಾಶಕಾಣುತ್ತದೆ, ಮತ್ತೆ ಗ್ರಾಮೀಣ ಪ್ರಕೃತಿ ಸೌಂದರ್ಯವೂ ಕಾಲಚಕ್ರದ ಕತ್ತಲಗರ್ಭದಲ್ಲಿ ಎಂದಾದರೊಮ್ಮೆ ಸೇರಿಹೋಗುವಂತಹದು.
ಪ್ರಾಪಂಚಿಕ ಸೌಂದರ್ಯವೆನ್ನುವುದನ್ನು ನಾವು ಅತಿ ಹತ್ತಿರದಿಂದ ಗಮನಿಸಿದಾಗ ಅಥವಾ ದೃಶ್ಯ ಸಮೀಚೀನ ದೃಷ್ಟಿ ಒಂದಿಷ್ಟು ಸರಿದಾಗ, ಯಾವುದೂ ಸತ್ಯವಲ್ಲ ಎನ್ನುವುದು ರುಜುವಾತಾಗುತ್ತದೆ. ಉದಾಹರಣೆಗೆ, ಯುವ ವ್ಯಕ್ತಿಯೊಬ್ಬ ತನ್ನ ಸುಂದರ ದೇಹದೊಂದು ಭಾಗದ ಮೇಲು ಚರ್ಮವನ್ನು ಸುಲಿದು ಗಮನಿಸಿದಾಗ, ಅವನ ಹೆಮ್ಮೆಯ, ಆಕರ್ಷಣೆಯ ವಿಷಯವಾಗಿದ್ದ ಅಂಗವೇ, ತತ್‌ಕ್ಷಣ ಅವನಲ್ಲಿ ಅಸಹ್ಯ ಭಾವನೆಗಳನ್ನೆಬ್ಬಿಸುತ್ತದೆ. ತನ್ನ ಈ ಪ್ರಾಪಂಚಿಕ ದೇಹ ಬರೀ ಮೇಲು ಪದರದ ಸೌಂದರ್ಯ ಎನ್ನುವುದು ಅವನಿಗೆ ಗೋಚರವಾಗುತ್ತದೆ. ಮತ್ತೆ ಆ ಕಾವ್ಯ ಅಥವಾ ಗ್ರಾಮೀಣ ಪ್ರಕೃತಿ ಸೌಂದರ್ಯ, ಒಂದು ಘಟ್ಟದಲ್ಲಿ ಅತ್ಯದ್ಭುತ ಸೌಂದರ್ಯದ ಖನಿ ಎನಿಸಿದ್ದು, ಬಹುಬೇಗ ತಾನೇ ಮೆಚ್ಚಿ ಹೊಗಳಿದ್ದ ಸೌಂದರ್ಯಗಳನ್ನೆ ಕಾಣಿಸದಿರುವುದು ವೇದ್ಯವಾಗಬಹುದು; ಅತಿ ಭಾವುಕತೆಯಿಂದ ಅವನ ಹೃದಯ ತಲಪಿದ್ದವುಗಳೆಲ್ಲ, ಈಗ ಬೇರೆ ರೀತಿಯೇ ಕಾಣುತ್ತ ಹೋಗಬಹುದು.
ಅಂತಿಮವಾಗಿ, ಪ್ರಾಪಂಚಿಕ ಸೌಂದರ್ಯವೆನ್ನುವುದು ಆತ್ಮವನ್ನು ಎಂದೆಂದಿಗೂ ಸಂಪೂರ್ಣವಾಗಿ ತೃಪ್ತಿಪಡಿಸದ ಒಂದು ಅಬದ್ಧ ಎನಿಸಬಹುದು, ಮತ್ತು ಕಾಲಾನುಕಾಲದಲ್ಲಿ ಯುವಕ ಇನ್ನೊಬ್ಬ ಪ್ರೇಮಿಯನ್ನು ಅರಸಬಹುದು, ವಿದ್ವಾಂಸ ಹೊಸ ಕವಿತೆಗಳ ಹೊಸ ಸಂಕಲನವೊಂದನ್ನು ಕೊಳ್ಳಬಹುದು, ಮತ್ತು ಕಲಾವಿದ ಬೇರೊಂದು ರೀತಿಯ ದೃಶ್ಯವನ್ನು ಪರಾಂಬರಿಸಬಹುದು – ಹೀಗೆ ಪ್ರತಿಯೊಬ್ಬರೂ ಕೊನೆಯುಸಿರು ಇರುವವರೆಗೂ, ನಿರಂತರವಾಗಿ ತನಗೆಟುಕದಿರುವ, ಪರಾತ್ಪರ ಪರಾಕಾಷ್ಠೆಯ ಈಡೇರಿಕೆಯನ್ನು ಅರಸುತ್ತಲೇ ಹೋಗಬಹುದು.
ಇವೆಲ್ಲ ಅಂಶಗಳನ್ನು ಹೀಗೆ ಮುಂದಿಡುತ್ತಿರುವುದು ಯಾರೊಬ್ಬರ ಹೃದಯದಲ್ಲಿ ವಿಷಣ್ಣತೆ ಮತ್ತು ಹತಾಶೆಯ ದುಗುಡವನ್ನು ಬಿತ್ತುವುದಕ್ಕಂತೂ ಖಂಡಿತ ಅಲ್ಲ; ಬದಲಾಗಿ ಸೌಂದರ್ಯೋಪಾಸನೆಯ ನಮ್ಮ ಪ್ರೀತಿ ಎನ್ನುವುದು ಅತ್ಯಂತ ಸಹಜವಾದ ಭಾವನೆ ಎಂದಾಗಿದ್ದರೂ ನಾವು ತಪ್ಪು ತಪ್ಪಾದ ದಿಕ್ಕುಗಳತ್ತ ದಿಟ್ಟಿಸುತ್ತಿದ್ದೇವೆ ಎನ್ನುವುದನ್ನು ಮನಗಾಣಿಸಲು ಮಾತ್ರ. ಗಣಿ ಕಾರ್ಮಿಕನೊಬ್ಬ ಆಳಕ್ಕಿಳಿಯುವ ಮೊದಲು, ತಾನು ಹೆಜ್ಜೆಯಿಡುವ ದಾರಿಗಳನ್ನು ಅತ್ಯಂತ ಎಚ್ಚರಿಕೆಯಿಂದ ಗಮನಿಸುವ ಹಾಗೆ, ನಾವೂ ಸಹ, ಅಮೂಲ್ಯ ನಿಧಿಯನ್ನು ತೋಡಿ ತೆಗೆಯಬೇಕೆಂದು ಬಯಸಿದರೆ, ನಿಜವಾದ ಸೌಂದರ್ಯದ ದಿಕ್ಕುದೆಸೆಗಳನ್ನು ನಿರ್ಧರಿಸಿಕೊಳ್ಳಬೇಕು.
ದೇವೋತ್ತಮ ಪರಮ ಪುರುಷ ಶ್ರೀಕೃಷ್ಣನೇ ಎಲ್ಲ ಸೌಂದರ್ಯಗಳ ಭಂಡಾರ ಎಂದೇ ವೈದಿಕ ಸಾಹಿತ್ಯಗಳು ಪ್ರತಿಪಾದಿಸುತ್ತವೆ. ಅವನೇ ಪರಮ ಸತ್ಯ, ಅಥವಾ ಸರ್ವಸ್ವಗಳ ಆದಿಮೂಲ, ಈ ಪ್ರಪಂಚಕ್ಕೆ ಸಂಬಂಧಿಸಿದ ಎಲ್ಲ ಸೌಂದರ್ಯಗಳ ಉತ್ಪತ್ತಿ ಅವನು. ಹೀಗಾಗಿ, ಪರಿಪೂರ್ಣ ಸೌಂದರ್ಯವನ್ನು ಕಾಣುವ ಗ್ರಹಿಸಿಕೊಳ್ಳುವ ನಮ್ಮ ಆಕಾಂಕ್ಷೆಯನ್ನು ಮನೋರಥಗೊಳಿಸಿಕೊಳ್ಳಬೇಕಾದರೆ, ನಾವು ಅಂತಿಮವಾಗಿ ಅವನತ್ತ ಮುಖ ಮಾಡಬೇಕು. ಬ್ರಹ್ಮ ಸಂಹಿತೆಯಲ್ಲಿ ಬ್ರಹ್ಮದೇವನು ಶ್ರೀಕೃಷ್ಣನ ದಿವ್ಯ ಸೌಂದರ್ಯವನ್ನು ವೈಭವದಿಂದ ಬಣ್ಣಿಸಿದ್ದಾನೆ:

ಯಾವಾತನ ಕೊಳಲು ಮಧುರ ನಿನಾದಗಳನ್ನು ಹೊರಹೊಮ್ಮಿಸುವುದರಲ್ಲಿ ನೈಪುಣ್ಯ ಕಾಣಿಸುತ್ತದೆಯೊ, ಯಾವಾತನ ಕಣ್ಣುಗಳು ಅರಳುತ್ತಿರುವ ತಾವರೆದಳಗಳಂತಿವೆಯೊ, ಯಾವಾತನ ಶರೀರ ಸೌಂದರ್ಯದಲ್ಲಿ ನೀಲಮೇಘಶ್ಯಾಮ ವರ್ಣವೈಭವ ಅದ್ಭುತ ಮೆರಗು ನೀಡುತ್ತಿದೆಯೊ, ಯಾವಾತನ ತಲೆಯ ಮೇಲೆ ಸುಂದರ ನವಿಲುಗರಿಗಳು ಸಿಂಗಾರಗೊಂಡಿವೆಯೊ ಮತ್ತು ಯಾವಾತನ ಅಸದೃಶ ಅಂದದ ಸೊಗಸು ಕೋಟ್ಯಂತರ ಅನಂಗರನ್ನೂ ಮೀರಿಸುವಂತೆ ಇದೆಯೊ, ಅಂತಹ ಆದಿಯುಗದ ದೇವರಾದ ಗೋವಿಂದನನ್ನು (ಶ್ರೀಕೃಷ್ಣನನ್ನು) ನಾನು ಆರಾಧಿಸುತ್ತೇನೆ.
ಹೀಗೊಂದು ವಾಸ್ತವಿಕ ಗುಣಕಥನದಲ್ಲಿ ಮೂಡಿ ಬಂದ ಶ್ರೀಕೃಷ್ಣನ ಆಧ್ಯಾತ್ಮಿಕ ಸೌಂದರ್ಯದ ಈ ವರ್ಣನೆ ಬ್ರಹ್ಮದೇವನ ವಿಚಿತ್ರ ಕಲ್ಪನೆಯ ಸೃಷ್ಟಿಯಲ್ಲ. ಬದಲಾಗಿ, ಆತ್ಮ ಸಾಕ್ಷಾತ್ಕಾರದ ಆನಂದಪರವಶತೆಯಲ್ಲಿ ಬ್ರಹ್ಮ ಹೇಳಿದ ಮಾತುಗಳು ಇವಾಗಿವೆ. ಇದರಲ್ಲಿ ಅವನು ತನ್ನೆದುರು ಮುಖಾಮುಖಿಯಾಗಿ ಪರಮಾತ್ಮ ನಿಂತಿರುವುದನ್ನು ಕಂಡಿದ್ದಾನೆ. ತನ್ನ ಮುಂದಿನ ಪದ್ಯದಲ್ಲಿ ಬ್ರಹ್ಮ ತನ್ನ ದರ್ಶನದ ವರ್ಣನೆಯನ್ನು, ಶ್ರೀಕೃಷ್ಣನ ಆಕೃತಿಯ ಅನಂತತೆಯನ್ನು ಕುರಿತು ತನ್ನ ಉದಾತ್ತ ಪರಾಮರ್ಶೆಯೊಂದಿಗೆ ಮುಂದುವರಿಸಿದ್ದಾನೆ:
ಯಾವಾತನ ಕೊರಳಿನಲ್ಲಿ ಯಾವಾಗಲೂ ವಜ್ರವೈಡೂರ್ಯಗಳ ಕಂಠೀಹಾರ ಕಂಗೊಳಿಸುತ್ತಿರುತ್ತದೆಯೊ, ಯಾವಾತನು ಯಾವಾಗಲೂ ಪ್ರೇಮ ಆಮೋದ ಪ್ರಮೋದಗಳಲ್ಲಿ ಸಂಭ್ರಮದಿಂದ ಇರುತ್ತಾನೊ, ಯಾವಾತನ ಚಿತ್ತಾಕರ್ಷಕ ಮುಮ್ಮಡಿ ವಿಸ್ತಾರ ಶ್ಯಾಮಸುಂದರಾಕೃತಿ ಅನಂತವಾಗಿ ವ್ಯಕ್ತವಾಗುತ್ತದೊ, ಆ ಆದಿದೇವನಾದ ಗೋವಿಂದನನ್ನು ನಾನು ಆರಾಧಿಸುತ್ತೇನೆ.

ಭಗವದ್ಗೀತೆಯ `ಅಂತ್ಯವಿಲ್ಲದಿರುವಿಕೆಯ’ಯ, ಮಿಥ್ಯೆಯಲ್ಲಿ ಅಡಗಿರುವ ಸತ್ಯದ ಪ್ರತಿಪಾದನೆಯನ್ನು ಸಫಲಗೊಳಿಸುವ ಹಾಗೆ, ಶ್ರೀಕೃಷ್ಣನ ಆಕೃತಿ ಹೇಗೆ `ಅನಂತ ವ್ಯಕ್ತ’ವಾಗುವಂತಹದೊ, ಹಾಗೆ ಅವನ ಆಕೃತಿಯ ಸೌಂದರ್ಯವೂ ಕೂಡ; ಶ್ರೀಕೃಷ್ಣನ ಸೌಂದರ್ಯ ಬರೀ ಶಾಶ್ವತವಾದದ್ದು ಮಾತ್ರವಲ್ಲ, ಅದು ಯಾವಾಗಲೂ ಹಚ್ಚ ಹಸಿರು – ಅಂತ್ಯವಿಲ್ಲದೆ ಅರಳುವ ವಸಂತ ಕಾಲದ ಪ್ರಕೃತಿಯ ಹಾಗೆ, ಭಕ್ತನೊಬ್ಬ ಈ ಆಧ್ಯಾತ್ಮಿಕ ಆಕೃತಿಯನ್ನು ಕಾಣುವುದರಲ್ಲಿ ಎಂದೆಂದಿಗೂ ದಣಿದಿಲ್ಲ. ಏಕೆಂದರೆ, ಸ್ವತಃ ಶ್ರೀಕೃಷ್ಣ ತಾನೇ ಈ ಆಕೃತಿಯನ್ನು ಅಂದಾಜು ಮಾಡಲಾಗದಂತಹದು; ಒಂದು ಕ್ಷಣದಲ್ಲಿ ಅವನದನ್ನು ಅಳೆಯುತ್ತಾನೆ, ಇನ್ನೊಂದು ಕ್ಷಣದಲ್ಲಿ ಅವನದನ್ನು ಅನಂತವಾಗಿ ವಿಸ್ತರಿಸುತ್ತಾನೆ, ತನ್ನ ಮಹಾನ್ ಶಕ್ತಿಯೂ ಅದನ್ನು ಅರಿಯಲಾಗದಂತಾಗಿಸುತ್ತಾನೆ.
ಶ್ರೀಕೃಷ್ಣನೇ ಪರಮಸತ್ಯ ಆಗಿರುವುದರಿಂದ ಅವನ ಸೌಂದರ್ಯವೂ ಸಹ ಪರಾತ್ಪರವೇ ಆಗಿರುತ್ತದೆ ಮತ್ತು ಅತಿ ಹತ್ತಿರದ ಪರೀಕ್ಷೆಯಿಂದಾಗಲೀ ಅಥವಾ ದೃಷ್ಟಿಕೋನದ ವ್ಯತ್ಯಾಸದಿಂದಾಗಲೀ ತೊಡೆದುಹೋದಂತೆಯೊ ಅಥವಾ ಕುಂದಾಗಿ ಹೋಗಿರುವಂತೆಯೊ ಅನ್ನಿಸುವುದಿಲ್ಲ. ಅವನ ಆಕಾರವೆನ್ನುವುದು ಮಹಾನ್ ಆಧ್ಯಾತ್ಮಿಕ ಶಕ್ತಿಯ ಗುಡಾಣ-ಶಾಶ್ವತತೆ, ಜ್ಞಾನ ಮತ್ತು ಆನಂದ ತುಂಬಿರುವಂತಹದು; ಹೀಗಾಗಿ ಮೊದಲಿನಿಂದ ಕೊನೆಯವರೆವಿಗೆ ಅತ್ಯಂತ ಸುಂದರವಾದದ್ದು. ಇದನ್ನು ಪ್ರಕಾಶಮಾನವಾದ ವೈಡೂರ್ಯಕ್ಕೆ ಹೋಲಿಸುತ್ತಾರೆ – ಈ ನವರತ್ನ ಬೆಳಕಿನಾಟದಲ್ಲಿ ವೈವಿಧ್ಯಮಯವಾಗಿ ಕಂಡರೂ, ಯಾವ ಕೋನದಿಂದ ಗಮನಿಸಿದರೂ ಅಸಾಮಾನ್ಯಸೊಬಗಿನಿಂದ ಕಾಣಿಸುತ್ತದೆ. ಅಂತೆಯೇ, ಅಸಂಖ್ಯಾತ ಪರವ್ಯೋಮದ ಶುದ್ಧಭಕ್ತರಿಂದ ಶ್ರೀಕೃಷ್ಣನ ಈ ಮಹಾನ್ ಸೌಂದರ್ಯವನ್ನು ಕೊಂಡಾಡಲಾಗುತ್ತಿದೆ. ಈ ಭಕ್ತರು ಆಗಾಗ ಈ ಐಹಿಕ ಲೋಕಕ್ಕೆ ಇಳಿದು ಬಂದು ನಮ್ಮಂತಹವರ ಗಮನವನ್ನು ಅವನತ್ತ ಸೆಳೆಯುತ್ತಾರೆ. ಶ್ರೀಕೃಷ್ಣನ ಪರಾತ್ಪರ ಪ್ರಕೃತಿ ಎಂತಹದೆಂದರೆ, ಅವನಿಗೆ ಸಂಬಂಧಿಸಿದ ಯಾವುದೇ ಆದರೂ, ಅವನ ಹೆಸರು, ಆಕಾರ, ಮಾತುಗಳು, ಲೀಲೆಗಳು ಅಥವಾ ಸಾಧನ ಸಾಮಗ್ರಿಗಳು ಮೊದಲಾದವೆಲ್ಲ ಅವನ ಪರಮೋತ್ಕೃಷ್ಟ ಸೌಂದರ್ಯವನ್ನು ಪ್ರದರ್ಶಿಸುತ್ತವೆ – ಶ್ರೀಲ ಪ್ರಭುಪಾದರ ಕೃಷ್ಣ ಎನ್ನುವ ಪುಸ್ತಕದಲ್ಲಿ, ಶ್ರೀಕೃಷ್ಣನ ವ್ಯಕ್ತಿತ್ವದ ಅತ್ಯದ್ಭುತ ವಿಶೇಷಗಳನ್ನು, ಭಕ್ತನೊಬ್ಬ ಹೇಳುವ ಮಾತುಗಳಲ್ಲಿ ಕೆಳಕಾಣಿಸಿದ ರೀತಿಯಲ್ಲಿ ಸ್ಪಷ್ಟಪಡಿಸಲಾಗಿದೆ. ಶ್ರೀಕೃಷ್ಣನ ಕೊಳಲುವಾದನದ ಅಂದಚಂದಗಳನ್ನು ಭಾವನಾತ್ಮಕವಾಗಿ ಹೊರಹೊಮ್ಮಿಸಲಾಗಿದೆ.

ನನ್ನ ಪ್ರೀತಿಯ ಸ್ನೇಹಿತರೆ, ಶ್ರೀಕೃಷ್ಣನ ಸೌಂದರ್ಯ ಎಷ್ಟು ಅದ್ಭುತವಾದದ್ದೆಂದರೆ, ಐಶ್ವರ್ಯ ದೇವತೆ ಯಾವಾಗಲೂ ಅವನ ಎದೆಯ ಮೇಲೆಯೇ ಉಪಸ್ಥಿತಳಿರುತ್ತಾಳೆ ಮತ್ತು ಅವನು ಯಾವಾಗಲೂ ಬಂಗಾರದ ಹಾರ ಧರಿಸಿ ಕಂಗೊಳಿಸುತ್ತಿರುತ್ತಾನೆ. ತನ್ನ ಅಸಂಖ್ಯಾತ ಭಕ್ತರ ಹೃದಯಗಳನ್ನು ಚೈತನ್ಯ ಭರಿತಗೊಳಿಸುವ ಹಾಗೆ ಈ ಸುಂದರ ಕೃಷ್ಣ ತನ್ನ ಕೊಳಲನ್ನು ನುಡಿಸುತ್ತಿರುತ್ತಾನೆ. ಸಂಕಷ್ಟದಲ್ಲಿರುವ ಜೀವಿಗಳ ಏಕಮಾತ್ರ ಮಿತ್ರ ಅವನು. ಅವನು ತನ್ನ ಕೊಳಲನ್ನು ನುಡಿಸಿದಾಗ, ವೃಂದಾವನದ ಎಲ್ಲ ಗೋವುಗಳೂ ಮತ್ತು ಪ್ರಾಣಿಗಳೂ, ಬಾಯಿಯ ತುಂಬಾ ಆಹಾರವನ್ನು ತುಂಬಿಕೊಂಡಿದ್ದರೂ, ಅಗಿಯುವುದನ್ನೇ ನಿಲ್ಲಿಸಿಬಿಡುತ್ತವೆ. ಅವುಗಳ ಕಿವಿಗಳು ನಿಮಿರುತ್ತವೆ. ದಿಗ್ಭ್ರಮೆಗೊಂಡಂತೆ ನಿಂತು ಬಿಡುತ್ತವೆ. ನಿರ್ಜೀವ ಕಲಾ ಚಿತ್ರಗಳ ಹಾಗೆ ಅವುಗಳು ನಿಶ್ಚಲವಾಗಿ ಉಳಿದುಬಿಡುತ್ತವೆ. ಶ್ರೀಕೃಷ್ಣನ ಕೊಳಲ ನಿನಾದದ ಆಕರ್ಷಣೆ ಎಂತಹದೆಂದರೆ, ಪ್ರಾಣಿಗಳೂ ಸಹ ಮೋಹ ಪರವಶತೆಗೊಳಗಾಗುತ್ತವೆ ಎಂದರೆ ನಮ್ಮಂತಹ ಮಾನವರ ಬಗ್ಗೆ ಹೇಳುವುದೇನಿದೆ?
ಇವೆಲ್ಲ ಅಂಶಗಳೂ ಒಟ್ಟಾಗಿ ಸೇರಿ ಶ್ರೀಕೃಷ್ಣನ ಸೌಂದರ್ಯವನ್ನು ಪರಿಪೂರ್ಣ ತೃಪ್ತಿ ಕಾಣಿಸುವಂತೆ ಮಾಡುತ್ತವೆ. ಐಹಿಕ ಸೌಂದರ್ಯ ಎನ್ನುವುದು ನಮ್ಮ ಇಂದ್ರಿಯಗಳಿಗೆ ಕ್ಷಣಿಕ ಸುಖವನ್ನು ನೀಡಿದರೂ, ಶ್ರೀಕೃಷ್ಣನ ಆಧ್ಯಾತ್ಮಿಕ ಸೌಂದರ್ಯ ಜೀವಿಗಳೆಲ್ಲರ ಹೃದಯಾಂತರಾಳ ತಲಪಿ ಆತ್ಮವನ್ನೇ ಸ್ಪಂದಿಸುತ್ತದೆ – ಜೀವಿಯ ಹೃದಯ ಆನಂದತಿರೇಕದಿಂದ ಕುಣಿದಾಡುವಂತೆ ಮಾಡಿ, ಒಮ್ಮೆ ಪಡೆದ ಈ ಆನಂದವನ್ನು ಮತ್ತೆಂದಿಗೂ ಬಿಡಲಾಗದಂತಾಗುತ್ತದೆ. ಶ್ರೀಲ ರೂಪಗೋಸ್ವಾಮಿ ಈ ಕಾರಣದಿಂದಲೇ ಹೀಗೊಂದು ಉಪದೇಶ ನೀಡಿದ್ದಾರೆ:
ನನ್ನ ಪ್ರೀತಿಯ ಮಿತ್ರ, ಇನ್ನೂ ನೀನು ನಿನ್ನ ಸ್ನೇಹಿತರೊಂದಿಗೆ ಈ ಐಹಿಕ ಪ್ರಪಂಚದ ವೈಭೋಗಗಳನ್ನು ಆನಂದಿಸಲು ಬಯಸಿದ್ದರೆ ಕೇಶೀಘಾಟಿಯ ದಡದ ಮೇಲೆ ನಿಂತಿರುವ ಶ್ರೀಕೃಷ್ಣನ ಆಕೃತಿಯ ಕಡೆಗೆ ನೋಡಬೇಕಾಗಿಲ್ಲ. ಅವನು ಗೋವಿಂದನೆಂದು ಸುಪ್ರಸಿದ್ಧನಾಗಿದ್ದಾನೆ. ಮತ್ತು ಅವನ ಕಣ್ಣುಗಳು ಮೋಹಕಗೊಳಿಸುವಂತಹದು. ಅವನು ತನ್ನ ಕೊಳಲನ್ನು ಸುಶ್ರಾವ್ಯವಾಗಿ ನುಡಿಸುತ್ತಿರುತ್ತಾನೆ, ಅವನ ತಲೆಯ ಮೇಲೆ ನವಿಲುಗರಿ ಗುಚ್ಛ ಕಂಗೊಳಿಸುತ್ತಿದೆ, ಅವನ ಇಡೀ ದೇಹ ಆಗಸದಿಂದ ಹೊರಹೊಮ್ಮುತ್ತಿರುವ ಬೆಳದಿಂಗಳ ಬೆಳಕಿನಲ್ಲಿ ಹೊಳೆಯುತ್ತಿದೆ.

ಭಕ್ತನೊಬ್ಬ ಶ್ರೀಕೃಷ್ಣನ ಸೌಂದರ್ಯವನ್ನು ಎಷ್ಟೆಷ್ಟು ಕೊಂಡಾಡುತ್ತಾನೊ, ಅಷ್ಟಷ್ಟು ಕಡಮೆಯಾಗಿ ಅವನು ಲೌಕಿಕ ಪ್ರಪಂಚದ ಅಲುಗಾಡುವ ಆಕರ್ಷಣೆಗೆ ಬೀಳುವುದಾಗುತ್ತದೆ. ಒಂದು ಸಲ, ಶ್ರೀಕೃಷ್ಣನ ಮಹಾನ್ ಭಕ್ತರಾದ ಹರಿದಾಸ ಠಾಕುರರು ತಮ್ಮಲ್ಲಿ ತಾವೇ ಹರೇಕೃಷ್ಣ ಮಂತ್ರವನ್ನು ಶ್ರೀಕೃಷ್ಣನ ಅತಿ ಸುಂದರ ಪವಿತ್ರ ನಾಮವನ್ನು ಧ್ಯಾನಿಸುತ್ತ ಪಠಿಸುತ್ತಿದ್ದರು. ಆಗಲೇ ತನ್ನತ್ತ ಸೆಳೆಯಲು ಪ್ರಯತ್ನಿಸುತ್ತಿದ್ದ ವೇಶ್ಯೆಯೊಬ್ಬಳು ಅವರ ಮುಂದೆ ಠಳಾಯಿಸುತ್ತ ಅವರ ದೈನಂದಿನ 300,000 ಸಲದ ಶ್ರೀಕೃಷ್ಣ ನಾಮ ಸ್ಮರಣೆ ಪಠಣೆಯಿಂದ ಅವರನ್ನು ದಾರಿ ತಪ್ಪಿಸಲು ಪ್ರಯತ್ನಿಸುತ್ತಿದ್ದಳು. ಹರಿದಾಸರ ಶ್ರೀಕೃಷ್ಣಸೌಂದರ್ಯದ ಆಕರ್ಷಣೆ ಎಷ್ಟು ಆಳವಾಗಿತ್ತೆಂದರೆ, ಅವರಿಗೆ ಆ ಹೆಂಗಸಿನ ಹಾವಭಾವ ವಿಲಾಸಗಳು ಯಾವ ಪರಿಣಾಮವನ್ನೂ ಉಂಟುಮಾಡಲಿಲ್ಲ. ಬದಲಾಗಿ, ಆಕೆಯನ್ನೇ ಅವರು ಒಬ್ಬ ಗುಣವಂತ ಭಕ್ತೆಯನ್ನಾಗಿ ಪರಿವರ್ತಿಸಿ, ಶ್ರೀಕೃಷ್ಣ ಸೌಂದರ್ಯದ ಪರಮ ಆರಾಧಕಳಾಗುವಂತೆ ಮಾಡಿದರು.
ಹೀಗೆ, ಶ್ರೀಕೃಷ್ಣ ಸೌಂದರ್ಯದ ವಿವರಣೆಗಳು ಒಂದು ರೀತಿ ಮರಳುಗೊಳಿಸುವಂತಿದ್ದರೂ, ಪ್ರಾಪಂಚಿಕ ಸೆಳೆತಗಳ ನಮ್ಮದೇ ಆದ ಆಕರ್ಷಣೆಗಳಿಂದ ನಾವು ಹೇಗೆ ತಪ್ಪಿಸಿಕೊಳ್ಳಬೇಕು ಮತ್ತು ಶ್ರೀಕೃಷ್ಣನ ಅಮೂಲ್ಯವಾದ ಆಧ್ಯಾತ್ಮಿಕ ಸೌಂದರ್ಯವನ್ನು ಹೇಗೆ ನಮ್ಮದಾಗಿಸಿಕೊಳ್ಳಬೇಕು ಎಂಬುದಕ್ಕಾಗಿ ಸರಿಯಾಗಿ ಚಿಂತಿಸಬೇಕು. ಈ ಪ್ರಪಂಚದ ಅತಿ ಸಣ್ಣ ಸೌಂದರ್ಯ ಕೂಡ ಶ್ರೀಕೃಷ್ಣ ಮೂಲದಿಂದ ಎದ್ದುಬರುವಂತಹದು ಎಂಬುದನ್ನು ನಾವು ಮೊದಲು ನೆನಪಿನಲ್ಲಿ ಇಟ್ಟುಕೊಳ್ಳಬೇಕು. ಸೂರ್ಯೋದಯ, ಪುಷ್ಪಸುವಾಸನೆ, ನೀರಿನ ರುಚಿ, ಅಥವಾ ಅಂತಹ ಯಾವುದಾದರೊಂದು ಅಮೂಲ್ಯವಾದದ್ದು ನಮ್ಮನ್ನೆಲ್ಲ ಶ್ರೀಕೃಷ್ಣನನ್ನು ನೆನಪಿಸಿಕೊಳ್ಳುವಂತೆ ಮಾಡಬಹುದು. ಮತ್ತು ನಮ್ಮ ಆಧ್ಯಾತ್ಮಿಕ ಜ್ಞಾನೋದಯಕ್ಕೊಂದು ಕೊಂಡಿಯಾಗಿ ಮುಖ್ಯ ಪಾತ್ರ ವಹಿಸಬಹುದು.

ಉಳಿದಂತೆ, ಭಕ್ತರ ಸಹಯೋಗದಲ್ಲಿ ಶ್ರೀಕೃಷ್ಣ ಕುರಿತು ಆಲಿಸುವುದು, ಪಠಿಸುವುದು ಮತ್ತು ದೇವಾಲಯದ ಅವನ ದೈವಿಕ ವಿಗ್ರಹಗಳನ್ನು ಆರಾಧಿಸುವುದರ ಮೂಲಕ ನಾವು ನಮ್ಮ ಆಧ್ಯಾತ್ಮಿಕ ಬೆಳವಣಿಗೆಗೊಂದು ವೇಗವನ್ನು ಕೊಡಬಹುದು, ಇಂತಹ ಆನಂದಗಳ ಭಕ್ತಿ ಸೇವೆಗಳು ಖಚಿತವಾಗಿ ಮತ್ತು ಪರಿಣಾಮಕಾರಿಯಾಗಿ ನಮ್ಮನ್ನು ಶ್ರೀಕೃಷ್ಣನ ಶುದ್ಧಪ್ರೇಮದತ್ತ ಒಯ್ಯುವುದರಲ್ಲಿ ಸಂದೇಹವಿಲ್ಲ. ಅವನನ್ನು ಮುಖಾಮುಖಿಯಾಗಿ ಕಾಣುವಂತೆ ಮಾಡಿ ಅವನ ಬೆಳದಿಂಗಳಿನಂತಹ ಸ್ನಿಗ್ಧ ಸೌಂದರ್ಯದ ಅಮೃತವನ್ನು ಸವಿಯುವಂತೆ ಮಾಡುತ್ತದೆ.