ಶ್ರೀ ನಿತ್ಯಾನಂದ ಪ್ರಭುಗಳ ಜೀವನ ಚಿತ್ರಣಗಳು

ವ್ರಜಮಂಡಲದ ಬಲರಾಮದೇವನೇ ಶ್ರೀ ನಿತ್ಯಾನಂದ ಪ್ರಭುಗಳಾಗಿ ಚೈತನ್ಯಲೀಲೆಯಲ್ಲಿ ಅವತರಿಸಿದರೆನ್ನುವುದಕ್ಕೆ ಸಾಕಷ್ಟು ಪ್ರಮಾಣಗಳಿವೆ. ಅವುಗಳಲ್ಲಿ ಕೆಲವನ್ನು ಈಗಾಗಲೇ ನೋಡಿದ್ದೇವೆ.

ಇನ್ನು ಭಕ್ತಶ್ರೇಷ್ಠರಾದ ಶ್ರೀ ನರೋತ್ತಮದಾಸರು “ಬಲರಾಮ ಹೈಲ ನಿತಾಯ್” (ಬಲರಾಮನೇ ನಿತಾಯ್ ಆಗಿರುವನು) ಎಂದಿದ್ದಾರೆ. ಸನಾತನ ಗೋಸ್ವಾಮಿಯಂಥವರು ಕೂಡ ಈ ಮಾತನ್ನು ಪುಷ್ಟೀಕರಿಸಿದ್ದಾರೆಂದ ಮೇಲೆ ಬೇರೆ ಸಾಕ್ಷ್ಯಗಳು ಬೇಕಾಗಲಾರವು.

ನಿತ್ಯಾನಂದ ಪ್ರಭುಗಳು ಜನಿಸಿದ್ದು ಕಾಟ್ವಾದ ಪಶ್ಚಿಮ ಭಾಗದಲ್ಲಿರುವ ‘ವೀರಭೂಮಿ’ ಯಲ್ಲಿ. ಇದರ ಸುತ್ತಮುತ್ತಲಿನ ಪ್ರದೇಶಗಳಾದ ಏಕಚಕ್ರನಗರ, ಗರ್ಭಾವಾಸ ಮೊದಲಾದೆಡೆಗಳಲ್ಲಿ ಶ್ರೀ ನಿತ್ಯಾನಂದ ಪ್ರಭುಗಳ ಲೀಲೆಗಳು ದಾಖಲಾಗಿವೆ.

ನಿನ್ನ ಮಗನನ್ನು ಕೊಡು !

ನಿತ್ಯಾನಂದ ಪ್ರಭುಗಳ ತಾಯಿ ಪದ್ಮಾವತೀದೇವಿ ಅವರ ತಂದೆಯ ಹೆಸರು ಹದಾಯ್ ಪಂಡಿತ. ನಿತ್ಯಾನಂದ ಪ್ರಭುಗಳು 12 ವರ್ಷದ ಬಾಲಕರಾಗಿದ್ದಾಗ ವೃದ್ಧ ಸಂನ್ಯಾಸಿಯೊಬ್ಬರು ಬಂದು ಹದಾಯ್ ಪಂಡಿತರನ್ನುದ್ದೇಶಿಸಿ “ನಿನ್ನ ಮಗ ನನಗೆ ಬೇಕು” ಎಂದು ಕೇಳಿದರು.

ಎಲ್ಲಿಂದಲೋ ಬಂದ ಸಂನ್ಯಾಸಿ ಮನೆಯೆದುರು ನಿಂತು ಮಗ ಬೇಕೆಂದು ಬೇಡುತ್ತಿದ್ದಾರೆ. ಒಬ್ಬನೇ ಒಬ್ಬ ಮಗನನ್ನು ಅದರಲ್ಲೂ ನಿತಾಯ್ ನಂಥ ಮುದ್ದಾದ, ತೀಕ್ಷ್ಣ ಮತಿಯ ಮಗನನ್ನು ಅವರು ಕೇಳುತ್ತಿದ್ದಾರೆ. ಮನೆಬಾಗಿಲಿಗೆ ಬಂದಿರುವ ಸಂನ್ಯಾಸಿ ಕೇಳಿದರು, “ನಿನ್ನ ಮಗನನ್ನು ಭಿಕ್ಷೆಯಾಗಿ ಕೊಡು” ಎಂದು! ಮಾಡುವುದೇನು?

ಅನುಮಾನಕ್ಕೆ ಅವಕಾಶವೇ ಇರಲಿಲ್ಲ. ಹದಾಯ್ ದಂಪತಿಗಳು ತಮ್ಮ ಏಕಮಾತ್ರ ಪುತ್ರರತ್ನವನ್ನು ಭಕ್ತಿಯಿಂದಲೇ ಸಂನ್ಯಾಸಿಗೆ ಸಮರ್ಪಿಸಿದರು. ಮನೆಯ ಕಣ್ಮಣಿಯಾಗಿದ್ದ ಬಾಲಕನನ್ನು ಕಳುಹಿಸಿಕೊಟ್ಟರು. ಅವರಿಂದ ಸಂನ್ಯಾಸಿಯ ಬೇಡಿಕೆಯನ್ನು ತಿರಸ್ಕರಿಸುವುದಾಗಲೇ ಇಲ್ಲ. ಹಾಗೆ ನಿರಾಕರಿಸುವುದು ಅವರಿಂದ ಸಾಧ್ಯವಾಗುತ್ತಲೂ ಇರಲಿಲ್ಲ. ಏಕೆಂದರೆ, ಹಾಗೆ ಮಗನನ್ನು ಭಿಕ್ಷೆಯಾಗಿ ಕೇಳಿದವರು ಇನ್ನಾರು ಅಲ್ಲ ಆಚಾರ್ಯಶ್ರೇಷ್ಠ ಶ್ರೀ ಮಾಧವೇಂದ್ರ ಪುರಿಗಳು!

ಶ್ರೀ ಮಾಧವೇಂದ್ರ ಪುರಿಗಳು ಶ್ರೀ ಈಶ್ವರಪುರಿ, ಆದೈತ ಆಚಾರ್ಯ, ಪುಂಡರೀಕ ವಿದ್ಯಾನಿಧಿಗಳಂತಹ ಶಿಷ್ಯರತ್ನರಿಗೆ ಗುರುಗಳಾಗಿದ್ದರು. ಅವರು ಹನ್ನೆರಡು ವರ್ಷದ ಪುಟ್ಟ ನಿತಾಯ್‌ನನ್ನು ತಮ್ಮೊಂದಿಗೆ ಕರೆದೊಯ್ದರು.

ನಿತಾಯ್, ಗುರುಗಳೊಂದಿಗೆ ಭಾರತದುದ್ದಕ್ಕೂ ಸಂಚರಿಸಿ, ಪುಣ್ಯ ಕ್ಷೇತ್ರಗಳ ದರ್ಶನ ಪಡೆದ. ಶ್ರೀ ಮಾಧವೇಂದ್ರ ಪುರಿಗಳು ಭಗವದ್ಧಾಮಕ್ಕೆ ತೆರಳಿದ ಅನಂತರವೂ ತೀರ್ಥಯಾತ್ರೆ ಮಾಡುತ್ತಲೇ ಉಳಿದ. ಸರಿ ಸುಮಾರು ಇದೇ ಸಮಯಕ್ಕೆ ಗಯೆಯಿಂದ ಮರಳಿದ ಮಹಾಪ್ರಭುಗಳು ನವದ್ವೀಪದಲ್ಲಿ ಸಂಕೀರ್ತನಲೀಲೆ ಆರಂಭಿಸಿದ್ದರು.

ಪರಸ್ಪರ ಹುಡುಕಾಟದಲ್ಲಿ…

ನಿತ್ಯಾನಂದ ಪ್ರಭುಗಳು ಶ್ರೀಮಾಧವೇಂದ್ರ ಪುರಿಗಳು ಅಂತರ್ಧಾನರಾದ ಬಳಿಕ ಅತ್ತಿತ್ತ ಸಂಚರಿಸುತ್ತ, ಅಂತಿಮವಾಗಿ ವೃಂದಾವನಕ್ಕೆ ಬಂದರು. ಈ ವೇಳೆಗೆ ಅವರಿಗೆ ಅರಿವಿಲ್ಲದಂತೆ, ಅವರ ಹೃದಯದಲ್ಲೊಂದು ಹುಡುಕಾಟ ಆರಂಭವಾಗಿತ್ತು. ನಿತ್ಯಾನಂದ ಪ್ರಭುಗಳು ಸ್ವತಃ ಬಲದೇವರೇ ಆಗಿದ್ದರು. ಶ್ರೀಕೃಷ್ಣನಿಂದ ಬಲರಾಮ ಅಗಲಿ ಇರಲು ಸಾಧ್ಯವೇ? ಪ್ರಭುಗಳ ಹುಡುಕಾಟ, ಕೃಷ್ಣನಿಗಾಗಿಯೇ ಇದ್ದಿತು.

ವೃಂದಾವನದಲ್ಲಿ ಅಲೆಯುವಾಗ ಅವರಿಗೆ, “ಕೃಷ್ಣ ನವದ್ವೀಪದಲ್ಲಿರುವನು. ಅಲ್ಲಿಗೆ ಹೋಗಬೇಕು” ಎಂದು ಪ್ರೇರಣೆಯಾಯಿತು. ಅದರಂತೆ, ಪ್ರಭು ನಿತ್ಯಾನಂದರು ನವದ್ವೀಪ ಧಾಮಕ್ಕೆ ತೆರಳಿದರು. ಅತ್ತ ಶ್ರೀ ಚೈತನ್ಯ ಮಹಾಪ್ರಭುಗಳಿಗೆ ಒಂದು ರಾತ್ರಿ, ತಾಳೆಮರದ ಚಿಹ್ನೆಯುಳ್ಳ ಕೇತನ ಹೊಂದಿರುವ ರಥದಲ್ಲಿ ಒಬ್ಬವ್ಯಕ್ತಿಯು ಬಂದು, “ನಿಮಾಯ್ ಪಂಡಿತರ ಮನೆ ಎಲ್ಲಿ? ಎಲ್ಲಿರುವನು ನಿಮಾಯಿ ಪಂಡಿತ್?” ಎಂದು ವಿಚಾರಿಸುತ್ತಿರುವಂತೆ ಕನಸಾಯಿತು.

ಮರುದಿನ ನಿಮಾಯ್‌ ಪಂಡಿತರು ಶ್ರೀವಾಸ ಪಂಡಿತ ಮತ್ತಿತರಿಗೆ, ”ನಿನ್ನೆ ರಾತ್ರಿ ನವದ್ವೀಪಧಾಮಕ್ಕೆ ಒಬ್ಬ ಮಹಾಪುರುಷರು ಬಂದಿರುವರು. ಅವರು ಎಲ್ಲಿರುವರೆಂಬುದನ್ನು ಪತ್ತೆಮಾಡಿ” ಎಂದು ಹೇಳಿದರು. ಅದರಂತೆ ಆ ಭಕ್ತರು ಪಟ್ಟಣದ ಕೋಣೆ ಕೋಣೆ ಅರಸಿದರೂ ಯಾರೊಬ್ಬ ಅಪರಿಚಿತ ಆಗಂತುಕರ ಪತ್ತೆಯಾಗಲಿಲ್ಲ. ಅಂತಿಮವಾಗಿ ಮಹಾಪ್ರಭುಗಳೇ ಅವರನ್ನು ಪತ್ತೆ ಮಾಡಲು ಹೊರಟರು.

ಕನಸಿನಲ್ಲಿ ಕಂಡ ಮಹಾಪುರುಷರನ್ನು ಹುಡುಕಲು ಹೊರಟ ಶ್ರೀ ಚೈತನ್ಯರು ನೇರವಾಗಿ ಬಂದು ನಿಂತದ್ದು ನಂದನ ಆಚಾರ್ಯರ ಭವನದ ಮುಂದೆ. ಭವನದ ಮುಂದಿನ ಕೋಣೆಯಲ್ಲಿ ದಿವ್ಯ ಬೆಳಕನ್ನು ಸೂಸುತ್ತ ಕುಳಿತಿದ್ದ ದೃಢಕಾಯದ ಅಜಾನುಬಾಹು ವ್ಯಕ್ತಿಯನ್ನು ಕಂಡ ಅವರಿಗೆ, ತಾವು ಅರಸುತ್ತಿದ್ದ ವ್ಯಕ್ತಿ ಇವರೇ ಎಂದು ತಿಳಿಯಿತು. ಲೋಕಕಲ್ಯಾಣಕ್ಕಾಗಿ ನಿಮಾಯ್-ನಿತಾಯ್ ಮಿಲನವಾಯಿತು.

ಶ್ರೀ ಚೈತನ್ಯ ಮಹಾಪ್ರಭುಗಳು ಹರಿದಾಸ ಠಾಕುರ ಮತ್ತು ಶ್ರೀ ನಿತ್ಯಾನಂದರಿಗೆ ”ಪ್ರತಿ ಮನೆಯ ಬಾಗಿಲಿಗೂ ಹೋಗಿ, ಜನರಿಗೆ ಕೃಷ್ಣನಾಮವನ್ನು ಭಜಿಸುವಂತೆ ಕರೆ ನೀಡಿ, ಇತರೆಲ್ಲ ವಿಧಾನಗಳನ್ನೂ ತ್ಯಜಿಸಿ ಕೇವಲ ಕೃಷ್ಣನಾಮವನ್ನು ಸ್ವೀಕರಿಸುವಂತೆ ಮನವೊಲಿಸಿ” ಎಂದು ಆದೇಶ ನೀಡಿದರು.

ಜಗಾಯ್‌ ಮಾಧಾಯ್ ಪ್ರಕರಣ

ನಿತ್ಯಾನಂದ ಪ್ರಭುಗಳು ಅಸೀಮ ಬಲಶಾಲಿಗಳಾಗಿದ್ದರು. ಶಕ್ತಿಯ ಸಾಕಾರ ರೂಪದಂತಿದ್ದರು. ಅವರ ವೇಗಕ್ಕೆ ಹೊಂದಿಕೊಳ್ಳಲು ಶ್ರೀ ಹರಿದಾಸಠಾಕುರರಿಗೆ ಸಾಧ್ಯವಾಗುತ್ತಲೇ ಇರಲಿಲ್ಲ.

ಮಹಾಪ್ರಭುಗಳ ಆಜ್ಞೆಯನ್ನು ಈಡೇರಿಸುವ ಸಲುವಾಗಿ ನಿತ್ಯಾನಂದ ಪ್ರಭುಗಳು ಹರಿದಾಸ ಠಾಕುರರೊಡಗೂಡಿ ಮನೆಮನೆಗೂ ಕೃಷ್ಣನಾಮದ ಉಪದೇಶ ತಲಪಿಸತೊಡಗಿದರು. ಇದನ್ನು ಸಹಿಸದ ಕೆಲವು ದುಷ್ಟಪ್ರವೃತ್ತಿಯ ಪುಂಡರ ಗುಂಪು, ಅವರ ಮೇಲೆ ಮುಗಿಬೀಳುವ ಧಾಟಿಯಲ್ಲಿ ಅವರನ್ನು ಪ್ರಶ್ನಿಸಿತು. “ನೀವು ನಮಗೇಕೆ ಧರ್ಮಬೋಧನೆ ಮಾಡಲು ಬಂದಿರುವಿರಿ?

ನಮಗೆ ತೊಂದರೆ ನೀಡುವ ಹಕ್ಕನ್ನು ಕೊಟ್ಟವರು ಯಾರು? ಇನ್ನೊಮ್ಮೆ ಧರ್ಮದ ಹೆಸರಿನಲ್ಲಿ ಇಲ್ಲಿಗೆ ಬರುವಿರಾದರೆ ಜೋಕೆ!” ಇತ್ಯಾದಿಯಾಗಿ ಬೆದರಿಕೆ ಹಾಕಿತು. ಈ ಪುಂಡರ ಗುಂಪಿನ ಮುಖಂಡರು ಜಗಾಯ್ ಮತ್ತು ಮಾಧಾಯ್ ಎಂಬ ಸಹೋದರರು. ಅಷ್ಟಾದರೂ ಅವರು ಹಿಂಜರಿಯುವಂತಿರಲಿಲ್ಲ. “ನೀವು ಮುಂದುವರಿಯಲೇಬೇಕು” ಇದು ಮಹಾಪ್ರಭುಗಳ ಆಜ್ಞೆ!

ಈ ಜಗಾಯ್ ಮತ್ತು ಮಾಧಾಯ್ ಎಂಬ ಖಳರು ಹುಟ್ಟಿನಿಂದ ಬ್ರಾಹ್ಮಣರಾಗಿದ್ದವರು. ಅವರ ಹೆಸರು ಕ್ರಮವಾಗಿ ಜಗದಾನಂದ ಮತ್ತು ಮಾಧವಾನಂದ. ಆದರೆ ಅವರಿಗೆ ಧರ್ಮದ ಬಗ್ಗೆ ಕನಿಷ್ಠ ಗೌರವವೂ ಇರಲಿಲ್ಲ. ಬೀದಿಗಳಲ್ಲಿ ಸುತ್ತುತ್ತ ಸಜ್ಜನರನ್ನು ಗದರಿಸುತ್ತ, ತಮಗೆ ಬೇಕಾದುದನ್ನು ದೋಚುತ್ತ ಕಾಲಹರಣ ಮಾಡುತ್ತಿದ್ದರು. ನಾಮಾಮೃತ ಹಂಚಲು ಬಂದ ನಿತ್ಯಾನಂದ ಪ್ರಭುಗಳನ್ನು ಕಂಡಲ್ಲೆಲ್ಲ ಬೆದರಿಸಿ ತಡೆಯೊಡ್ಡುತ್ತಿದ್ದರು.

ನಾವು ಬಲಪ್ರಯೋಗ ಮಾಡುವಂತಿಲ್ಲ!

ಮತ್ತೊಂದು ದಿನವೂ ಹಾಗೆಯೇ ಆಯಿತು. ಎಂದಿನಂತೆ ಆ ಸಹೋದರರು ಪ್ರಭುಗಳನ್ನು ತಡೆದರು. ಪ್ರತಿನಿತ್ಯ ಅಂದಿನ ವಿಷಯಗಳನ್ನು ಮಹಾಪ್ರಭುಗಳಿಗೆ ವರದಿ ಮಾಡುವ ಪರಿಪಾಠ ನಿತ್ಯಾನಂದರದಾಗಿತ್ತು.

”ಮಹಾಪ್ರಭು, ಇಂದು ಆ ದುಷ್ಟರಿಂದ ಅದು ಹೇಗೋ ನಮ್ಮ ಜೀವ ಉಳಿಯಿತು.

ನೀವು ಮನಸ್ಸು ಮಾಡಿದರೆ ಆ ಸಹೋದರರನ್ನು ಪರಿವರ್ತಿಸಬಹುದು. ನೀವು ಅವರನ್ನು ಉದ್ಧರಿಸಿದರೆ ನಿಮ್ಮಲ್ಲಿ ವಿಶೇಷ ಶಕ್ತಿಯಿದೆಯೆಂಬುದು ನಮಗೆಲ್ಲರಿಗೂ ವೇದ್ಯವಾಗುತ್ತದೆ.” ಎಂದು ಪ್ರಭುಗಳು ಶ್ರೀ ಚೈತನ್ಯರಲ್ಲಿ ಅರಿಕೆ ಮಾಡಿಕೊಂಡರು. ಅದಕ್ಕೆ ಸಮ್ಮತಿಸಿದ ಮಹಾಪ್ರಭುಗಳು “ಶ್ರೀಕೃಷ್ಣನ ಇಚ್ಛೆಯಿದ್ದರೆ ಯಾವುದು ತಾನೆ ಅಸಾಧ್ಯ?” ಎನ್ನುತ್ತ ಅವರಿಗೆ ಅಭಯ ನೀಡಿದರು.

ನಿತ್ಯಾನಂದ ಪ್ರಭುಗಳು ಮತ್ತೆ ಪ್ರಚಾರಕ್ಕೆ ಹೊರಟರು. ಈ ಬಾರಿ ದುಷ್ಟ ಸಹೋದರರ ವರ್ತನೆ ಅತಿರೇಕಕ್ಕೆ ಹೋಯಿತು. ಅವರು ಹಾದಿಬದಿಯಲ್ಲಿ ಬಿದ್ದಿದ್ದ ಮಡಕೆಯನ್ನೆತ್ತಿಕೊಂಡು ಪ್ರಭುಗಳ ಹಣೆಗೆ ಜೋರಾಗಿ ಬೀಸಿದರು. ಅದು ಪ್ರಭುಗಳ ಹಣೆಯನ್ನು ತಾಕಿ, ಗಾಯವಾಗಿ ರಕ್ತ ಹರಿಯಲಾರಂಭಿಸಿತು.

ಮಹಾಪ್ರಭುಗಳಿಗೆ ಸುದ್ದಿ ಹೋಯಿತು. ರೋಷಾವಿಷ್ಟರಾದ ಮಹಾಪ್ರಭುಗಳು ಅಲ್ಲಿಗೆ ತೆರಳಿ, ನಿತ್ಯಾನಂದರ ಸ್ಥಿತಿಗೆ ಕಾರಣವಾದವರನ್ನು ನಾಶಮಾಡುವುದಾಗಿ ಅಬ್ಬರಿಸಿದರು. ಕೈಯಲ್ಲಿ ಚಕ್ರ ಹಿಡಿದು ವಿಷ್ಣುವಿನಂತೆ ಪ್ರಕಟಗೊಂಡರು.

ಅಷ್ಟರಲ್ಲಿ ಮಹಾಪ್ರಭುಗಳನ್ನು ಸಂತೈಸುತ್ತ ನಿತ್ಯಾನಂದರು ನುಡಿದರು. “ಇಲ್ಲ ಇಲ್ಲ ಪ್ರಭೂ, ಈ ಅವತಾರದಲ್ಲಿ ನಾವು ಯಾರ ಮೇಲೂ ಬಲ ಪ್ರಯೋಗ ಮಾಡುವಂತಿಲ್ಲ. ಇದು ನೆನಪಿರಲಿ!”

ಮನಃ ಪರಿವರ್ತನೆ

ನಿತ್ಯಾನಂದ ಪ್ರಭುಗಳು ಚೈತನ್ಯ ಮಹಾಪ್ರಭುಗಳನ್ನೇನೋ ತಡೆದರು. ಆದರೆ ಜಗಾಯ್-ಮಾಧಾಯ್‌ರಲ್ಲಿನ್ನೂ ಪಶ್ಚಾತ್ತಾಪ ಮೂಡಿರಲಿಲ್ಲ. ಮಾಧಾಯ್‌ ಮತ್ತೊಮ್ಮೆ ಪ್ರಭುಗಳ ಮೇಲೆ ಹಲ್ಲೆ ನಡೆಸಲು ಮುಂದಾದ.

ಆಶ್ವರ್ಯ! ಈಗ ಮಾಧಾಯ್‌ ಗೆದುರಾಗಿ ನಿಂತು ನಿತ್ಯಾನಂದರನ್ನು ರಕ್ಷಿಸಿದವನು ಸ್ವತಃ ಜಗಾಯ್! ಮಹಾಪ್ರಭುಗಳು ಅತ್ಯಂತ ಸಂತೋಷದಿಂದ ಅವನನ್ನು ಬಿಗಿದಪ್ಪಿದರು. ಕೂಡಲೇ ಜಗಾಯ್‌ ವಿನಮ್ರಭಾವದಿಂದ ಅವರ ಕಾಲಿಗೆ ನಮಸ್ಕರಿಸಿದ. ಅವನಲ್ಲಾಗಲೇ ಪರಿವರ್ತನೆ ನಡೆದು, ಮಹಾಪ್ರಭುಗಳ ಕರುಣೆ ಗಳಿಸಿದ್ದ.

ಪ್ರೇಮರೂಪಿಯಾದ ನಿತ್ಯಾನಂದ ಪ್ರಭುಗಳು ಮಾಧಾಯ್‌ ಕೂಡ ಪರಿವರ್ತಿತವಾಗಿ ಮಹಾಪ್ರಭುಗಳ ಆಶ್ರಯ ಪಡೆಯಲೆಂದು ಬಯಸಿದರು. ಅದರಂತೆ ಮಹಾಪ್ರಭುಗಳು ಮಾಧಾಯ್‌ನ ತಲೆ ನೇವರಿಸಿದರು. ಅವರ ಸ್ಪರ್ಶ ಮಾತ್ರದಿಂದ ದಿವ್ಯಾನುಭವ ಪಡೆದು ಧನ್ಯನಾದ ಮಾಧಾಯ್ ಕೂಡ ಮಹಾಪ್ರಭುಗಳಿಗೆ ಶರಣಾದ ಭಕ್ತನಾಗಿ ಬದಲಾದ ಹೀಗೆ ಪ್ರಭು ನಿತ್ಯಾನಂದರ ಕರುಣೆಯಿಂದ ಇಬ್ಬರು ಪಾಪಾತ್ಮರು ಮಹಾಪ್ರಭುಗಳ ಭಕ್ತರಾಗಿ ಮುಕ್ತಿ ಮಾರ್ಗ ಕಾಣುವಂತಾಯಿತು.

ನಿತ್ಯಾನಂದ ಪ್ರಭುಗಳ ಅಕಾರಣ ಕರುಣೆ

ನಿತ್ಯಾನಂದ ಪ್ರಭುಗಳು ಶ್ರೀ ಚೈತನ್ಯ ಮಹಾಪ್ರಭುಗಳ ಛಾಯೆಯಂತೆ ಬಾಳಿದರು. ಮನೆ ಮನೆಯ ಅಂಗಳದಲ್ಲಿ ಹೊರಳಾಡುತ್ತ “ಗೌರಾಂಗನನ್ನು ಆಶ್ರಯಿಸಿ! ಅವರನ್ನು ಸ್ಮರಿಸಿ, ಹೀಗೆ ಮಾಡುವುದರಿಂದ ನಿಮಗೆ ದೊರೆಯಲಿರುವ ಪ್ರತಿಫಲವನ್ನು ನಾನು ಹೇಗೆ ವರ್ಣಿಸಲಿ? ಗೃಹಸ್ಥರೇ! ನೀವು ಇದನ್ನು ಮಾಡಲೇಬೇಕು” ಎಂದು ಉನ್ಮತ್ತರಾಗಿ ಬೋಧಿಸುತ್ತಿದ್ದರು.

ನೆಲದ ಧೂಳಿನಲ್ಲಿ ಹೊರಳಿ ಮಲಿನವಾದರೂ, ಎಷ್ಟೇ ಅಡ್ಡಿಗಳು ಎದುರಾದರೂ ಅವರು ಬೋಧಿಸುತ್ತಲೇ ನಡೆದರು. ಶ್ರೀ ನಿತ್ಯಾನಂದ ಪ್ರಭುಗಳ ಅವತಾರಕಾರಣ ಇದೇ ಶ್ರೀ ಚೈತನ್ಯ ಮಹಾಪ್ರಭುಗಳತ್ತ ಜನರನ್ನು ಕರೆದೊಯ್ಯುವುದು!

ನಿತ್ಯಾನಂದ ಪ್ರಭುಗಳ ಪಾದಪದ್ಮಗಳಲ್ಲಿ ಆಶ್ರಯ ಪಡೆದವನು ಖ೦ಡಿತವಾಗಿಯೂ ನಿಶ್ಚಿಂತ. ಗೌರಾಂಗರು ನಿತ್ಯಾನಂದರ ಪ್ರಭಾವವನ್ನು ಮನ್ನಿಸುವರು. ಶ್ರೀ ಗೌರಾಂಗರನ್ನು ಒಲಿಸಿಕೊಳ್ಳಲು ಸುಲಭಮಾರ್ಗವೆಂದರೆ ಶ್ರೀ ನಿತ್ಯಾನಂದರನ್ನು ಆಶ್ರಯಿಸುವುದೇ ಆಗಿದೆ. ಶ್ರೀ ನಿತ್ಯಾನಂದ ಪ್ರಭುಗಳು ಶ್ರೀ ಚೈತನ್ಯ ಮಹಾಪ್ರಭುಗಳ ಸ್ವಾಂಶ ವಿಸ್ತರಣೆಯಾಗಿದ್ದಾರೆ.

ಮಹಾಪ್ರಭುಗಳು ಸಾಕ್ಷಾತ್ ದೇವೋತ್ತಮ ಪರಮಪುರುಷನ ಅವತಾರವೆಂಬುದನ್ನು ನಾವು ಬಲ್ಲೆವು. ಶ್ರೀ ನಿತ್ಯಾನಂದ ಪ್ರಭುಗಳ ಕರುಣೆ ಪಡೆದರೆ, ಪರಮ ಪ್ರಭುವಿನ ಕೃಪಾಶ್ರಯ ದೊರೆಯುವುದರಲ್ಲಿ ಯಾವ ಸಂದೇಹವೂ ಇಲ್ಲ.

ಜೈ ನಿತ್ಯಾನಂದ!

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi