ಭಗವಾನ್ ಕೃಷ್ಣನ ಸೇವೆಯಲ್ಲಿ ಮುಕ್ತಿ

ಶ್ರೀ ಶ್ರೀಮದ್‌ ಎ.ಸಿ. ಭಕ್ತಿವೇದಾಂತ  ಸ್ವಾಮಿ ಪ್ರಭುಪಾದರು 2ನೇ ನವೆಂಬರ್, 1972ರಂದು ವೃಂದಾವನದಲ್ಲಿ ನೀಡಿದ ಉಪನ್ಯಾಸ.

– ಅನುವಾದ : ಡಾ. ಕೆ.ವೈ. ಬಾಲರಾಜ್

ಅತೋ, ವೈ ಕವಯೋ ನಿತ್ಯಂ ಭಕ್ತಿಂ ಪರಮಯಾ ಮುದಾ

ವಾಸುದೇವೇ ಭಗವತಿ ಕುರ್ವಂತ್ಯಾತ್ಮ ಪ್ರಸಾದನೀಮ್ ||

”ವಾಸ್ತವವಾಗಿ ಅನಾದಿಕಾಲದಿಂದಲೂ ಎಲ್ಲ ದಿವ್ಯವಾದಿಗಳು ಪರಮ ಪುರುಷ ಭಗವಾನ್ ಕೃಷ್ಣನಿಗೆ ಆನಂದಭರಿತರಾಗಿ ಭಕ್ತಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಏಕೆಂದರೆ ಅಂತಹ ಭಕ್ತಿಸೇವೆ ಆತ್ಮಕ್ಕೆ ಚೈತನ್ಯವನ್ನು ಕೊಡುತ್ತದೆ.”

(ಭಾಗವತ 1.2.22)

ಆತ್ಮ ಎಂದರೆ ಮನಸ್ಸು ಅಥವಾ ದೇಹ. ನಾವು ಮೂರು ಹಂತಗಳಲ್ಲಿ ಬದುಕುತ್ತಿದ್ದೇವೆ: ದೈಹಿಕ ಕಲ್ಪನೆಯ ಜೀವನ, ಮಾನಸಿಕ ಕಲ್ಪನೆಯ ಜೀವನ ಮತ್ತು ಆಧ್ಯಾತ್ಮಿಕ ಕಲ್ಪನೆಯ ಜೀವನ. ಯಾರು ಅಜ್ಞಾನದಲ್ಲಿರುತ್ತಾರೋ ಅವರು ದೈಹಿಕ ಕಲ್ಪನೆಯ ಜೀವನದ ಬಗ್ಗೆ ಯೋಚಿಸುತ್ತಾರೆ. ಯಾರು ಸ್ವಲ್ಪ ಪ್ರಗತಿಯನ್ನು ಹೊಂದಿದ್ದಾರೋ ಅವರು ಮಾನಸಿಕ ಅಥವಾ ಮನಃಶಾಸ್ತ್ರೀಯ ಕಲ್ಪನೆಯ ಜೀವನದ ಬಗ್ಗೆ ಯೋಚಿಸುತ್ತಾರೆ. ಮತ್ತೆ ಯಾರು ಇನ್ನೂ ಜಾಸ್ತಿ ಪ್ರಗತಿಯನ್ನು ಹೊಂದಿರುತ್ತಾರೋ ಅವರು ಆಧ್ಯಾತ್ಮಿಕ ಕಲ್ಪನೆಯ ಜೀವನದ ಬಗ್ಗೆ ಯೋಚಿಸುತ್ತಾರೆ.

ಆಧ್ಯಾತ್ಮಿಕ ಕಲ್ಪನೆಯ ಜೀವನದ ಬಗ್ಗೆ ಹಿಂದಿನ ಶ್ಲೋಕದಲ್ಲಿ ವಿವರಿಸಲಾಗಿದೆ. ವದಂತಿ ತತ್ ತತ್ತ್ವ-ವಿದಸ್ತತ್ತ್ವಂ, ತತ್ತ್ವ ಎಂದರೆ ಸತ್ಯ. ಚೇತನ ಸತ್ಯವಾಗಿದೆ ಜಡವಲ್ಲ. ಜಡವೂ ಸತ್ಯವಾಗಿದೆ ಆದರೆ ಅದು ಚೇತನಕ್ಕೆ ಅಧೀನವಾಗಿ ಮಾತ್ರ. ಹೇಗೆ ನಮ್ಮ ಆಧ್ಯಾತ್ಮಿಕ ಅಸ್ತಿತ್ವದ ಮೇಲೆ ದೇಹ ಬೆಳೆಯುತ್ತದೆಯೋ ಹಾಗೆಯೇ ಚೇತನದ ಆಧಾರದ ಮೇಲೆ ಜಡ ಬೆಳೆಯುತ್ತದೆ.

ಆದ್ದರಿಂದ ನಮ್ಮ ಜೀವನದ ಅಂತಿಮ ಗುರಿ, ಆಧ್ಯಾತ್ಮಿಕ ಸಾಕ್ಷಾತ್ಕಾರವಾಗಿದೆ. ಜೀವಸ್ಯ ತತ್ತ್ವ ಜಿಜ್ಞಾಸಾ ನಾರ್ಥೋ ಯಶ್ಚೇಹ ಕರ್ಮಭಿಃ, ಸತ್ಯದ ಬಗ್ಗೆ ವಿಚಾರಣೆ ಮಾಡುವುದೇ ಜೀವಿಯ ಮುಖ್ಯ ಕರ್ತವ್ಯವಾಗಿದೆ. ಆದರೆ ಮಾನವ ಜೀವಿಗಳಿಗಿಂತ ಕೀಳುಜೀವಿಗಳಾದ ಪ್ರಾಣಿಗಳು, ಪಕ್ಷಿಗಳು, ಮರಗಳು, ಜಲಚರಗಳು ಮತ್ತು ಕೀಟಗಳಿಗೆ ಈ ಸುಯೋಗವಿಲ್ಲ. ಮಾನವ ರೂಪದ ಜೀವಿಗಳಿಗೆ ಮಾತ್ರ ಪರಮಸತ್ಯನನ್ನು ವಿಚಾರಣೆ ಮಾಡಲು ಸಾಧ್ಯ.

ಯಾವಾಗ ಒಬ್ಬ ವ್ಯಕ್ತಿ ಪರಮಸತ್ಯನ ಬಗ್ಗೆ ವಿಚಾರಣಾಶೀಲನಾಗುತ್ತಾನೋ ಆಗ ಅವನಿಗೆ ಮೂರು ಪಾರಮಾರ್ಥಿಕ ವಿಷಯಗಳಾದ ಬ್ರಹ್ಮನ್, ಪರಮಾತ್ಮ ಮತ್ತು ಭಗವಾನ್ ಬಗ್ಗೆ ಸಾಕ್ಷಾತ್ಕಾರವಾಗುತ್ತದೆ. ಬ್ರಹ್ಮೇತಿ ಪರಮಾತ್ಮೇತಿ ಭಗವಾನ್ ಇತಿ ಶಬ್ದ್ಯತೇ. ಸರ್ವವ್ಯಾಪಿಯಾದ ಬ್ರಹ್ಮನ್, ಕೇಂದ್ರೀಕೃತನಾಗಿರುವ ಪರಮಾತ್ಮ ಮತ್ತು ದೇವೋತ್ತಮ ಪರಮಪುರುಷ ಭಗವಾನ್, ಪ್ರತಿಯೊಬ್ಬರೂ ಅಂತಿಮವಾಗಿ ಭಗವಾನ್ ವಾಸುದೇವನ ಹಂತ ತಲಪುವುದಾಗಿದೆ.

”ವಾಸುದೇವ ಸರ್ವಂ ಇತಿ ಮಹಾತ್ಮಾ ಸುದುರ್ಲಭಃ.” ಯಾರು ವಾಸುದೇವ ಕೃಷ್ಣನನ್ನು ಅರ್ಥಮಾಡಿಕೊಳ್ಳುತ್ತಾರೋ ಅವರೇ ಪರಿಪೂರ್ಣರಾದ ಮಹಾತ್ಮರು.

ಬೇರೆಯವರು ಪಾರಮಾರ್ಥಿಗಳಾಗಿರಬಹುದು (ಕೋವಿದಃ, ಜ್ಞಾನವುಳ್ಳ ಮನುಷ್ಯ) ಆದರೆ ಯಾರು ದೇವೋತ್ತಮ ಪರಮಪುರುಷ ವಾಸುದೇವನನ್ನು ಅರ್ಥಮಾಡಿಕೊಳ್ಳುವ ಸ್ಥಿತಿಗೆ ತಲಪುತ್ತಾನೋ ಆಗ ಅವನನ್ನು ಮಹಾತ್ಮನೆಂದು ಕರೆಯಲಾಗುತ್ತದೆ. ಭಾರತದಲ್ಲಿ ಮಹಾತ್ಮನೆಂಬುವುದು ಬಹಳ ಸಾಮಾನ್ಯ ಪದ. ಯಾವುದೇ ಸಂತನನ್ನು ಮಹಾತ್ಮನೆಂದು ಕರೆಯಲಾಗುತ್ತದೆ. ಆದರೆ ವೈದಿಕ ವಿವರಣೆಯ ಪ್ರಕಾರ ಯಾರು ವಾಸುದೇವನನ್ನು ಅರ್ಥಮಾಡಿಕೊಳ್ಳುವ ಹಂತ ತಲಪುತ್ತಾರೋ ಅವರೇ ಮಹಾತ್ಮರು.

ಇನ್ನೊಂದು ಕಡೆ ಮಹತ್‌ ಸೇವಾಮ್‌ ದ್ವಾರಮಾಹುರ್‌‌ ವಿಮುಕ್ತೇಸ್ತಮೋದ್ವಾರಂ ಯೋಷಿತಾಮ್ ಸಂಗಿ ಸಂಗಮ್ ಎಂದು ಹೇಳಲಾಗಿದೆ. ಜೀವನದ ಎರಡು ಮಾರ್ಗಗಳಿವೆ. ಒಂದು ಮುಕ್ತಿ, ಇನ್ನೊಂದು ಬಂಧನ. ಉದಾಹರಣೆಗೆ ದಾರದ ಉರುಳೆ ಒಂದು ಕಡೆಗೆ ತಿರುಗಿಸಿದರೆ ದಾರವನ್ನು ಎಳೆದುಕೊಳ್ಳುತ್ತದೆ, ಇನ್ನೊಂದು ಕಡೆ ತಿರುಗಿಸಿದರೆ ಅದು ದಾರವನ್ನು ಬಿಡುತ್ತದೆ. ಅದೇ ರೀತಿ ನಾವು ನಮ್ಮ ಜೀವನವನ್ನು ಮುಕ್ತಿ ಅಥವಾ ಬಂಧನದ ಅಂಧಕಾರದಲ್ಲಿ ನಡೆಸುತ್ತೇವೆ.

ವಿಕಾಸವಾದದ ಪ್ರಕ್ರಿಯೆಯಿಂದ ನಮಗೆ ಮಾನವ ರೂಪದ ಜೀವನ ದೊರೆತಿದೆ. ಈಗ ನಾವು ಅದನ್ನು ಮುಕ್ತಿ ಅಥವಾ ಬಂಧನದ ಕಡೆಗೆ ತಿರುಗಿಸಬಹುದು.

ಆಧುನಿಕ ಶಿಕ್ಷಣದಲ್ಲಿ ಬಂಧನ ಮತ್ತು ಮುಕ್ತಿಯ ಬಗ್ಗೆ ಮಾಹಿತಿ ಇಲ್ಲ. ವಿದ್ಯಾರ್ಥಿಗಳಿಗೆ ಭಗವಂತನ ಬಗ್ಗೆ ಮತ್ತು ಭಗವಾನ್ ವಿಷ್ಣುವಿನೊಂದಿಗೆ ತಮ್ಮ ಸ೦ಬಂಧವನ್ನು ತಿಳಿಯಪಡಿಸುವಂತಹ ಯಾವುದೇ ಶಿಕ್ಷಣವಿಲ್ಲ. ಇವೆಲ್ಲ ಆಧುನಿಕ ಶಿಕ್ಷಣಾಧಿಕಾರಿಗಳಿಗೆ ಗೊತ್ತಿಲ್ಲ.

ಆದ್ದರಿಂದ ವೈದಿಕ ಸಾಹಿತ್ಯ ಹೇಳುತ್ತದೆ, ಅಂಧಃ ಯಥಾಂಧೈರ್‌ ಉಪನೀಯಮಾನಾಸ್ತೇಽಪೀಶತಂತ್ರ್ಯಾಮ್ ಉರು ದಾಮ್ನಿ ಬದ್ಧಾಃ – ಉರು ಎಂದರೆ ‘ಗಟ್ಟಿ’. ದಾಮ್ನಿ ಎಂದರೆ ‘ಹಗ್ಗ’ – ಒಂದು ವೇಳೆ ನಿಮ್ಮ ಕೈ ಕಾಲುಗಳು ಗಟ್ಟಿಯಾಗಿ ಬಂಧಿಸಲ್ಪಟ್ಟಿದ್ದರೆ ನಿಮಗೆ ಚಲಿಸಲು ಕಷ್ಟವಾಗುತ್ತದೆ. ಅದೇ ರೀತಿಯಾಗಿ ಪ್ರತಿಯೊಂದು ಜೀವಿಗಳು ಈ ಪ್ರಕೃತಿಯ ನಿಯಮಗಳಿಂದ ಗಟ್ಟಿಯಾಗಿ ಬಂಧಿಸಲ್ಪಟ್ಟಿವೆ. ಈಶ ತಂತ್ರ್ಯಾ’ ಭಗವಂತನ ನಿಯಮಗಳಿಂದ ನಾವು ಬಂಧಿಸಲ್ಪಟ್ಟಿದ್ದೇವೆ. ಆ ಮಾರ್ಗ ಬಿಟ್ಟು ಹೋಗಲು ನಮಗೆ ಆಗುವುದಿಲ್ಲ.

ಯಾರಿಗೂ ಪ್ರಕೃತಿಯ ನಿಯಮಗಳನ್ನು ಉಲ್ಲಂಘಿಸಲು ಸಾಧ್ಯವಿಲ್ಲ. ಪ್ರತಿಯೊಬ್ಬರಿಗೂ ಇದು ಅನುಭವವಾಗಿಯೇ ತೀರುತ್ತದೆ. ಪ್ರಕೃತಿಯ ನಿಯಮಗಳಿಂದ ಸ್ವಲ್ಪ ಉಲ್ಲಂಘನೆ ಮಾಡುವುದರಿಂದ ಅಥವಾ ಸ್ವಲ್ಪ ದಾರಿ ತಪ್ಪುವುದರಿಂದ ನಾವು ನರಳಬೇಕಾಗುತ್ತದೆ. ಉದಾಹರಣೆಗೆ, ಪ್ರಕೃತಿಯ ನಿಯಮದ ಪ್ರಕಾರ ನಮಗೆಷ್ಟು ಪಚನವಾಗುತ್ತದೊ ನಾವು ಅಷ್ಟೇ ತಿನ್ನಬೇಕಾಗುತ್ತದೆ.

ನಾವೇನಾದರೂ ಪ್ರಕೃತಿ ನಿಯಮದ ವಿರುದ್ಧವಾಗಿ ಅತಿ ಹೆಚ್ಚು ತಿಂದರೆ ಅಜೀರ್ಣತೆಯಿಂದ ನರಳಬೇಕಾಗುತ್ತದೆ. ಯಾತನೆಯಿಲ್ಲದೆ ಪ್ರಕೃತಿ ನಿಯಮಗಳ ಉಲ್ಲಂಘನೆ ಸಾಧ್ಯವಿಲ್ಲ. ದೈವೀ ಹ್ಯೇಶಾ ಗುಣಮಯೀ ಮಮ ಮಾಯಾ ದುರತ್ಯಯಾ – ಯಾರೇ ಆಗಲಿ ಪ್ರಕೃತಿಯ ನಿಯಮಗಳನ್ನು ಉಲ್ಲಂಘಿಸಲಾರರು.

ಪ್ರಕೃತಿಯ ನಿಯಮಗಳಿಂದ ಹೇಗೆ ಹೊರಬರಬಹುದು ಎಂದು ನಾವು ಈಗಾಗಲೇ ವಿಚಾರಿಸಿದ್ದೇವೆ. ಮುಕ್ತಸಂಗಸ್ಯ ಜಾಯತೇ – ಮುಕ್ತಸಂಗ ವೆಂದರೆ ಭೌತಿಕ ಪ್ರಕೃತಿಯ ತ್ರಿಗುಣಗಳಿಂದ ಮುಕ್ತರಾಗುವುದು. ತ್ರಿಗುಣಗಳಿಂದ ಮುಕ್ತರಾದ ಅನಂತರ ವಾಸುದೇವ ಭಕ್ತಿ ಬಗ್ಗೆ ಮಾತನಾಡಬಹುದು.

ಇನ್ನೊಂದು ದೃಷ್ಟಿಕೋನದಿಂದ ವಾಸುದೇವನಿಗೆ ಭಕ್ತಿಸೇವೆ ಸಲ್ಲಿಸುವುದರಿಂದಲೂ ಭೌತಿಕ ಪ್ರಕೃತಿಯ ಬಂಧನದಿಂದ ನಾವು ಮುಕ್ತಿ ಪಡೆಯಬಹುದು. ಅದನ್ನು ಭಾಗವತದ ಎರಡನೆಯ ಅಧ್ಯಾಯದ ಪ್ರಾರಂಭದಲ್ಲಿಯೇ ಹೇಳಲಾಗಿದೆ –

ವಾಸುದೇವೇ ಭಗವತಿ ಭಕ್ತಿಯೋಗಃ ಪ್ರಯೋಜಿತಃ

ಜನಯತ್ಯಾಶು ವೈರಾಗ್ಯಂ ಜ್ಞಾನಂ ಯದಹೈತುಕಮ್

ಪರಮ ಪುರುಷನಾದ ಶ್ರೀಕೃಷ್ಣನಿಗೆ ಭಕ್ತಿಸೇವೆ ಸಲ್ಲಿಸುವುದರಿಂದ ಜೀವಿಗಳು ಶೀಘ್ರವಾಗಿ ಕಾರಣ ರಹಿತ ಜ್ಞಾನವನ್ನೂ, ಈ ಸಂಸಾರದಲ್ಲಿ ವಿರಕ್ತಿಯನ್ನೂ ಪಡೆಯುವರು. ಒಬ್ಬವ್ಯಕ್ತಿ ವಾಸುದೇವ ಕೃಷ್ಣನಿಗೆ ಹೇಗೆ ಭಕ್ತಿ ಸಲ್ಲಿಸುವುದು ಎಂದು ಕಲಿತುಕೊಂಡರೆ ಅವನು ಬಹು ಬೇಗನೆ ಭೌತಿಕ ಬಂಧನದಿಂದ ಮುಕ್ತನಾಗುತ್ತಾನೆ.

ಆಗ ಆ ವ್ಯಕ್ತಿಗೆ ನಿಜವಾದ ಜ್ಞಾನ ಸಿಗುತ್ತದೆ. ಭೌತಿಕ ಜ್ಞಾನವು ಬಂಧನಕ್ಕೆ ಕಾರಣವಾಗಿದೆ. ಭಕ್ತಿವಿನೋದ ಠಾಕುರರು ಹೇಳುತ್ತಾರೆ. ಭೌತಿಕ ಜ್ಞಾನದ ಪ್ರಗತಿಯೆಂದರೆ ಹೆಚ್ಚು ಹೆಚ್ಚು ಬಂಧನ ಮತ್ತು ಆಧ್ಯಾತ್ಮಿಕ ಜ್ಞಾನದ ಪ್ರಗತಿಯೆಂದರೆ ಹೆಚ್ಚು ಹೆಚ್ಚು ಮೋಕ್ಷ. ಆದ್ದರಿಂದ ಈ ಭೌತಿಕ ಬಂಧನದಿಂದ ಹೇಗೆ ಮುಕ್ತರಾಗುವುದು ಎಂಬುವುದೇ ನಿಜವಾದ ಸಮಸ್ಯೆಯಾಗಿದೆ.

ನಾವೆಲ್ಲವರೂ ಬಂಧಿತರಾಗಿದ್ದೇವೆ. ನಾವೆಲ್ಲರೂ ಈ ಭೌತಿಕ ಬಂಧನದಲ್ಲಿ ಹಾಕಲ್ಪಟ್ಟಿದ್ದೇವೆ. ಭೌತಿಕ ಬಂಧನದಲ್ಲಿರುವುದರಿಂದ ನಮಗೆ ಸ್ವಾತಂತ್ರ್ಯ ಇಲ್ಲ. ಜನರಿಗೆ ಇದು ಅರ್ಥವಾಗುವುದಿಲ್ಲ.

ಚೇತನಾತ್ಮವನ್ನು ಸರ್ವಗ ಎಂದು ವಿವರಿಸಲಾಗಿದೆ. ಸರ್ವಗ ಎಂದರೆ ಎಲ್ಲಿ ಬೇಕಾದರೂ ಚಲಿಸಬಹುದಾದ ಆತ್ಮ. ಆದರೆ ಈ ಐಹಿಕ ಬಂಧನದಿಂದ ಮತ್ತು ನಮಗೆ ಈ ಭೌತಿಕ ದೇಹವಿರುವುದರಿಂದ ನಾವು ತಡೆಯಲ್ಪಡುತ್ತೇವೆ. ನಾವು ಬೇರೆ ಗ್ರಹಗಳಿಗೂ ಹೋಗಲಾಗುವುದಿಲ್ಲ.

ಯೋಗಿಗಳು ಯೋಗ ಪ್ರಕ್ರಿಯೆಯಿಂದ ಸ್ವಲ್ಪ ಮಟ್ಟಿಗೆ ಈ ಭೌತಿಕ ದೇಹದಿಂದ ಬಿಡುಗಡೆ ಹೊಂದಬಹುದು. ಯೋಗಿಗಳು ಭೌತಿಕ ನೆಲೆಯಲ್ಲಿ ಇದ್ದರೂ ಕೂಡ ಅವರು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಶೀಘ್ರವಾಗಿ ಹೋಗಬಲ್ಲರು. ಅವರು ಈ ಭೂಗ್ರಹದ ಮೇಲೆ ಶೀಘ್ರವಾಗಿ ಓಡಾಡಬಲ್ಲರು.

ಭಾರತದಲ್ಲಿ ಈಗಲೂ ಕೂಡ ಅನೇಕ ಯೋಗಿಗಳಿದ್ದಾರೆ, ಅವರು ಪ್ರತಿದಿನ ಬೇರೆ ಬೇರೆ ನಾಲ್ಕು ಪ್ರಮುಖ ಸ್ಥಳಗಳಲ್ಲಿ ಸ್ನಾನ ಮಾಡುತ್ತಾರೆ. ಅವರು ಜಗನ್ನಾಥ ಪುರಿ, ರಾಮೇಶ್ವರಮ್, ಹರಿದ್ವಾರ ಮತ್ತು ದ್ವಾರಕಾದಲ್ಲಿ ಸ್ನಾನ ಮಾಡುತ್ತಾರೆ. ನಾವು ಕೆಲವು ಯೋಗಿಗಳನ್ನು ಭೇಟಿಯಾದಾಗ ಅವರು ಹೇಗೆ ಶೀಘ್ರವಾಗಿ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಹೋಗಬಲ್ಲರು ಎಂದು ತಿಳಿಯಿತು.

ನಮ್ಮ ಅನುಭವದಿಂದಲೇ ಇದನ್ನು ಅರ್ಥಮಾಡಿಕೊಳ್ಳಬಹುದು. ಉದಾಹರಣೆಗೆ – ಮನಸ್ಸು ಅದು ಅತ್ಯಂತ ವೇಗವಾಗಿ ಕೆಲವೇ ಕ್ಷಣಗಳಲ್ಲಿ ಲಕ್ಷಾಂತರ ಮೈಲಿ ಚಲಿಸಬಹುದು. ಚೇತನಾತ್ಮವು ತುಂಬಾ ಸೂಕ್ಷ್ಮವಾಗಿರುವುದರಿಂದ ಅದರ ವೇಗವೂ ಕೂಡ ಬಹಳ ಇದೆ. ಭಗವದ್ಗೀತೆಯಲ್ಲಿ ಕೃಷ್ಣ ಹೇಳುತ್ತಾನೆ, ತ್ಯಕ್ತ್ವಾ ದೇಹಂ ಪುನರ್ಜನ್ಮ ನೈತಿ ಮಾಮ್ ಏತಿ ಸೋಽರ್ಜುನಃ ”ಈ ದೇಹವನ್ನು ತ್ಯಜಿಸಿದ ಅನಂತರ ವ್ಯಕ್ತಿಯು ಕೂಡಲೇ ನನ್ನ ಬಳಿಗೆ, ಆಧ್ಯಾತ್ಮಿಕ ಜಗತ್ತಿಗೆ ಬರಬಹುದು.” ಇದು ವೈದಿಕ ಉಲ್ಲೇಖ.

ಆಧುನಿಕ ಶಿಕ್ಷಣವು ಬಂಧನ ಮತ್ತು ಮುಕ್ತಿಯ ಕುರಿತು ಏನನ್ನೂ ಹೇಳುವುದಿಲ್ಲ. ಭಗವಂತನನ್ನು ಅರಿಯುವ ತಮ್ಮನ್ನು ತಾವು ಅರ್ಥೈಸಿಕೊಳ್ಳುವ ಹಾಗೂ ತಮ್ಮ ಮತ್ತು ಭಗವಂತನ ನಡುವಿನ ಸಂಬಂಧವನ್ನು ತಿಳಿದುಕೊಳ್ಳಲು ಸಹಾಯಕವಾಗುವಂತಹ ಶಿಕ್ಷಣ ಇಂದಿನ ವಿದ್ಯಾರ್ಥಿಗಳಿಗೆ ಲಭ್ಯವಿಲ್ಲ.

ಇದನ್ನು ಅರ್ಥಮಾಡಿಕೊಳ್ಳಿ. ತ್ಯಕ್ತ್ವಾ ದೇಹಂ ಪುನರ್ಜನ್ಮ ನೈತಿ – ಸಾವಿನ ನಂತರ ನಾವು ಕೂಡಲೇ ಇನ್ನೊಂದು ದೇಹವನ್ನು ಸ್ವೀಕರಿಸುತ್ತೇವೆ. ನಾವು ನಡೆಯುವಾಗ ನಮ್ಮ ಮೊದಲನೆಯ ಹೆಜ್ಜೆ ಗಟ್ಟಿ ಇದ್ದಾಗ ಎರಡನೆಯ ಹೆಜ್ಜೆ ಇಡುತ್ತೇವೆ. ಅದೇ ರೀತಿಯಾಗಿ ನಮ್ಮ ಮುಂದಿನ ದೇಹದ ಶ್ರೇಷ್ಠತೆಯ ಯೋಜನೆಯಾದಾಗ ನಾವು ಈ ಪ್ರಸ್ತುತ ದೇಹವನ್ನು ತ್ಯಜಿಸಿ ಇನ್ನೊಂದು ದೇಹವನ್ನು ಪ್ರವೇಶಿಸುತ್ತೇವೆ. ಇದು ನಿಯಮ.

ಆದ್ದರಿಂದ ಕೃಷ್ಣ ಹೇಳುತ್ತಾನೆ, ತ್ಯಕ್ತಾ ದೇಹಂ ಪುನರ್ಜನ್ಮ ನೈತಿ – ಒಂದು ವೇಳೆ ಜೀವಿಯು ಇನ್ನೊಂದು ದೇಹ ಪ್ರವೇಶಿಸದಿದ್ದರೆ ಅದು ಎಲ್ಲಿಗೆ ಹೋಗುತ್ತದೆ? ಕೃಷ್ಣ ಹೇಳುತ್ತಾನ ಮಾಮ್ ಏತಿ  “ಅವನು ನನ್ನ ಬಳಿಗೆ ಬರುತ್ತಾನೆ”, ಈಗ ಆ ಚೇತನಾತ್ಮದ ವೇಗವನ್ನು ಕಲ್ಪಿಸಿಕೊಳ್ಳಿ. ಮರಣದ ಅನಂತರ ಕೂಡಲೇ ಅವನು ಗೋಲೋಕ ವೃಂದಾವನ ಅಥವಾ ಕೃಷ್ಣ ಇರುವಲ್ಲಿ ಅವನ ನಿತ್ಯ ಲೀಲೆಗಳಲ್ಲಿ ಬಂದು ಸೇರಿಕೊಳ್ಳುತ್ತಾನೆ.

ಕೃಷ್ಣನ ಲೀಲೆಗಳು ಹೇಗೆ ನಡೆಯುತ್ತಲೇ ಇವೆ ಎಂದು ಚೈತನ್ಯ ಚರಿತಾಮೃತದಲ್ಲಿ ವಿವರಿಸಲಾಗಿದೆ. ಕೃಷ್ಣನು ಯಾವುದಾದರೂ ವಿಶ್ವ ಒಂದರಲ್ಲಿ ಭೌಮಲೀಲಾ ಅಂದರೆ ಭೌತಿಕ ಜಗತ್ತಿನ ಲೀಲೆಗಳಲ್ಲಿ ಸದಾ ಇರುತ್ತಾನೆ. ಚೈತನ್ಯ ಮಹಾಪ್ರಭುಗಳು ಸೂರ್ಯನ ಚಲನದ ಉದಾಹರಣೆಯನ್ನು ನೀಡಿದ್ದಾರೆ.

ಸೂರ್ಯನ ಚಲನೆಯಿಂದ ದಿನವನ್ನು 24 ಘಂಟೆಗಳು, 60 ನಿಮಿಷಗಳು, 60 ಸೆಕೆಂಡುಗಳಾಗಿ ವಿಭಜಿಸಲಾಗಿದೆ. ಆದರೂ ದಿನದ ಪ್ರತಿಯೊಂದೂ ಸಮಯವು ಸದಾ ಅಸ್ತಿತ್ವದಲ್ಲಿರುತ್ತದೆ. ಉದಾಹರಣೆಗೆ ಈ ದಿನದ ಸೂರ್ಯೋದಯ 6.30ಕ್ಕೆ ಇದೆ. ಆದರೆ ಈಗ ಆ ಸಮಯ ಕಳೆದರೂ ಬೇರೆ ಎಲ್ಲಿಯೋ 6.30 ಆಗಿರುತ್ತದೆ. ಅದೇ ರೀತಿಯಾಗಿ ಕೃಷ್ಣನು ಒಂದು ವಿಶ್ವದಿಂದ ಇನ್ನೊಂದಕ್ಕೆ ಚಲಿಸುತ್ತಲೇ ಇದ್ದಾನೆ. ಯಾವಾಗ ಈ ವಿಶ್ವದಲ್ಲಿ ಕಾಣಿಸುತ್ತಾನೋ ಆಗ ಅವನ ಅವತಾರವಾಗುತ್ತದೆ.

ಶ್ರೀಲ ಸನಾತನ ಗೋಸ್ವಾಮಿಯವರು ಹೇಳುತ್ತಾರೆ, ಯಾವಾಗ ಆತ್ಮವು ಕೃಷ್ಣನೊಂದಿಗೆ ಸಂಗ ಬೆಳೆಸಲು ಯೋಗ್ಯವಾಗುತ್ತದೋ, ಆಗ ಅದು ಮೊದಲು ಕೃಷ್ಣನು ಭೌಮಾಲೀಲಾದಲ್ಲಿರುವ ಲೋಕಕ್ಕೆ ಹೋಗುತ್ತದೆ.

ಹೇಗೆ ನಿಷ್ಠೆಯಿಂದ ಕೆಲಸ ಮಾಡುವ ಒಬ್ಬ ವ್ಯಕ್ತಿಗೆ ತರಬೇತಿ ಕೊಟ್ಟು ಒಂದು ಒಳ್ಳೆಯ ಹುದ್ದೆ ಕೊಡಲಾಗುತ್ತದೋ ಅದೇ ರೀತಿಯಾಗಿ ಕೃಷ್ಣಪ್ರಜ್ಞೆಯಿಂದ ಅರ್ಹನಾದ ಜೀವಿಗೆ ಅವನು ದೇಹ ತ್ಯಜಿಸಿದ ಅನಂತರ ಅವನನ್ನು ಕೃಷ್ಣನಿರುವ ಲೋಕಕ್ಕೆ ವರ್ಗಾಯಿಸಲಾಗುತ್ತದೆ. ಸರಿಯಾಗಿ ತರಬೇತಿ ಪಡೆದ ಆನಂತರ ಆ ವ್ಯಕ್ತಿಗೆ ನಿಜವಾದ ಕೃಷ್ಣಲೋಕ, ಗೋಲೋಕ ವೃಂದಾವನಕ್ಕೆ ವರ್ಗಾಯಿಸಲಾಗುತ್ತದೆ.

ಚೇತನಾತ್ಮ ಎಷ್ಟು ವೇಗವಾಗಿದೆಯೆಂದರೆ ಅದು ಕೆಲವೇ ಕ್ಷಣಗಳಲ್ಲಿ ಕೃಷ್ಣನ ಬಳಿ ಅಥವಾ ಯಾವುದಾದರೊಂದು ವಿಶ್ವಕ್ಕೆ ಹೋಗುತ್ತದೆ. ಲಕ್ಷಾಂತರ ಕೋಟ್ಯಂತರ ವಿಶ್ವಗಳಿವೆ. ನಮಗೆ ಗೊತ್ತಿರುವುದು ನಮ್ಮ ವಿಶ್ವದ ಬಗ್ಗೆ. ಆದರೆ ವೈದಿಕ ಸಾಹಿತ್ಯದ ಪ್ರಕಾರ ಈ ತರಹದ ಲಕ್ಷಾಂತರ ವಿಶ್ವಗಳ ಬಗ್ಗೆ ನಮಗೆ ಮಾಹಿತಿ ಸಿಗುತ್ತದೆ.

ಬ್ರಹ್ಮ ಸಂಹಿತೆಯ ಪ್ರಕಾರ ನಮಗೆ ಈ ಮಾಹಿತಿ ಸಿಗುತ್ತದೆ. ಯಸ್ಯ ಪ್ರಭಾ ಪ್ರಭವತೇ ಜಗದಂಡ ಕೋಟಿ. ಜಗದಂಡ ಎಂದರೆ ಒಂದು ವಿಶ್ವ, ಕೋಟಿ ಎಂದರೆ ಕೋಟ್ಯಂತರ ವಿಶ್ವಗಳು. ಆದ್ದರಿಂದ ಕೋಟ್ಯಂತರ ವಿಶ್ವಗಳಿವೆ. ಮತ್ತು ಆ ಪ್ರತಿಯೊಂದು ವಿಶ್ವಗಳಲ್ಲಿ ಲಕ್ಷಾಂತರ ವಿಭಿನ್ನ ಗ್ರಹಗಳಿವೆ. ಇದು ಸೃಷ್ಟಿ.

ಭಗವಂತನ ಸೃಷ್ಟಿ ಎಷ್ಟು ವಿಶಾಲವಾಗಿದೆ, ಅವನು ಹೇಗೆ ನಿರಂತರವಾಗಿ ಪ್ರತಿಯೊಂದು ವಿಶ್ವದಲ್ಲಿಯೂ ಪ್ರವೇಶಿಸುತ್ತಾನೆ, ಮತ್ತು ಹೇಗೆ ಅವನ ಲೀಲೆಗಳು ನಡೆಯುತ್ತಿವೆ ಎಂಬುದನ್ನು ಕಲ್ಪಿಸಿಕೊಳ್ಳಿ. ಕೃಷ್ಣನ ಜನ್ಮ ಒಂದು ವಿಶ್ವದಲ್ಲಿ ಮುಗಿದನಂತರ ಕೂಡಲೇ ಅವನು ಇನ್ನೊಂದು ವಿಶ್ವದಲ್ಲಿ ಜನಿಸುತ್ತಾನೆ.

ಇದನ್ನು ನಿತ್ಯ ಲೀಲಾ ಎನ್ನುತ್ತಾರೆ. ಆತ್ಮವೆಂಬುದು ಕೃಷ್ಣನ ಒಂದು ಭಾಗವಾಗಿದೆ ಅಷ್ಟೇ. ಆದರೂ ಅದಕ್ಕೆ ಅಷ್ಟೊಂದು ಶಕ್ತಿಯಿದೆ. ಅಂದಮೇಲೆ ಕೃಷ್ಣನ ಶಕ್ತಿ ಎಷ್ಟಿದೆ ಎಂಬುದನ್ನು ಕಲ್ಪಿಸಿಕೊಳ್ಳಿ. ಜೀವಿಗಳಿಗೆ ಎಷ್ಟೊಂದು ಶಕ್ತಿಗಳಿರುತ್ತವೆ ಅಂದ ಮೇಲೆ ಆಧ್ಯಾತ್ಮಿಕ ಶಕ್ತಿಯಿಂದ ಪೂರ್ಣನಾದ ಕೃಷ್ಣನ ಶಕ್ತಿ ಎಷ್ಟಿರಬಹುದು?

ಕೃಷ್ಣನ ವಿಭಿನ್ನಾಂಶರಾದ ನಾವು ನಿಜವಾಗಿಯೂ ಸಂತೋಷದಿಂದ ಇರಬೇಕಾದರೆ ನಾವು ಅವನನ್ನು ಸೇರಬೇಕು. ಆಗ ಮಾತ್ರ ನಮಗೆ ಮೌಲ್ಯ ಇರುತ್ತದೆ. ಅನೇಕ ಸಲ ನಾನು ನಿಮಗೆ ಉದಾಹರಣೆಗೆ ಕೊಟ್ಟಿದ್ದೇನೆ, ಯಂತ್ರಕ್ಕೆ ಅಂಟಿಕೊಂಡಿರುವ ಒಂದು ಸಣ್ಣ ಸ್ಕ್ರೂಗೂ ಕೂಡ ಬೆಲೆ ಇರುತ್ತದೆ.

ಆದರೆ ಯಾವಾಗ ಅದನ್ನು ಯಂತ್ರದಿಂದ ಬೇರ್ಪಡಿಸಲಾಗುತ್ತದೆ. ಆಗ ಅದಕ್ಕೆ ಬೆಲೆ ಇರುವುದಿಲ್ಲ. ಕಿಂಚಿತ್ ಕೂಡಾ ಇಲ್ಲ, ಅದೇ ರೀತಿಯಾಗಿ ನಾವು ವಾಸುದೇವ ಕೃಷ್ಣನ ವಿಭಿನ್ನಾಂಶಗಳಾಗಿದ್ದೇವೆ. ಯಾವಾಗ ಕೃಷ್ಣನನ್ನು ಸೇರುತ್ತೇವೆಯೋ ಮತ್ತು ಕೃಷ್ಣಪ್ರಜ್ಞೆಯಲ್ಲಿ ನಮ್ಮ ಕಾರ್ಯಗಳನ್ನು ಮಾಡುತ್ತೇವೆಯೋ ಆಗ ನಮಗೆ ಬೆಲೆ ಇರುತ್ತದೆ. ಇಲ್ಲದಿದ್ದರೆ ನಮ್ಮ ಪ್ರಗತಿ ಕೇವಲ ಭ್ರಮೆ ಅಷ್ಟೆ.

ಆದ್ದರಿಂದ ನಿಮಗೆ ನಿಜವಾಗಿಯೂ ಸಂತೋಷಬೇಕಿದ್ದರೆ ನೀವು ನಿಮ್ಮ ಕಾರ್ಯಗಳನ್ನು ಕೃಷ್ಣನಲ್ಲಿ ಒಂದಾಗಿಸಿ. ಇದು ನಿಮ್ಮ ಒಳ್ಳೆಯದಕ್ಕಾಗಿಯೇ ಹೊರತು ಕೃಷ್ಣನ ಒಳ್ಳೆಯದಕ್ಕಾಗಿಯಲ್ಲ. ಕೃಷ್ಣನು ನಿಮ್ಮಂತಹ ಲಕ್ಷಾಂತರ ಜೀವಿಗಳನ್ನು ಸೃಷ್ಟಿಸಬಹುದು. ಅವನಿಗೆ ನಿಮ್ಮ ಸೇವೆ ಬೇಕಾಗಿಲ್ಲ. ಅವನು ಪೂರ್ಣನಾಗಿದ್ದಾನೆ. ಆದರೆ ನಿಮಗೆ ತೃಪ್ತಿ ಬೇಕಾದರೆ ನೀವು ಕೃಷ್ಣನ ಭಕ್ತಿಸೇವೆ ಮಾಡಬೇಕು. ಅದುವೇ ಬುದ್ಧಿವಂತಿಕೆ. ಇಲ್ಲದಿದ್ದರೆ ಅದು ನಿಮ್ಮ ಮೂರ್ಖತನ, ಅಜ್ಞಾನ, ಭ್ರಮೆ ಅಷ್ಟೆ.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi