ಆಧಾರ: ಶ್ರೀ ಶ್ರೀಮದ್ ಭಕ್ತಿವೇದಾಂತ ಸ್ವಾಮಿ ಪ್ರಭುಪಾದರ ಉಪನ್ಯಾಸ
– ಸಂಗ್ರಹಾನುವಾದ: ಡಾ.ಕೆ.ವೈ.ಬಾಲರಾಜ್
ನಮ್ಮ ಬದುಕಿನಲ್ಲಿ ಉಂಟಾಗಿರುವ ಕಷ್ಟಗಳು, ದುಃಖಕರವಾದ ಪರಿಸ್ಥಿತಿಗಳು ನಮ್ಮ ಈ ಐಹಿಕ ದೇಹದಿಂದಲೇ ಉಂಟಾಗಿರುವಂತದ್ದು. ಆದುದರಿಂದ ಯಾರು ಇಂದ್ರಿಯಭೋಗದಲ್ಲಿ ಸದಾ ತೊಡಗುತ್ತಾರೋ ಅವರೇ ಕರ್ಮಿಗಳು. ಈ ಕರ್ಮಿಗಳು ಭವಿಷ್ಯದ ಬಗ್ಗೆ, ಪರಮಾತ್ಮನ ಬಗ್ಗೆ ಚಿಂತಿಸುವುದಿಲ್ಲ.

ಅವರಿಗೆ ತತ್‌ಕ್ಷಣದ ಸುಖ ಸಾಧನಗಳು ಬೇಕು. ಅದಕ್ಕಾಗಿ ಅವರು ಜೀವನವಿಡೀ ಏನು ಬೇಕಾದರೂ ಮಾಡಲು ಸಿದ್ಧರಿರುತ್ತಾರೆ. ಯಾವ ರೀತಿ ಒಂದು ಪುಟ್ಟ ಮಗು ನಾಳಿನ ಭವಿಷ್ಯದ ಬಗ್ಗೆ ಚಿಂತೆಯೇ ಮಾಡದೆ ಆಟ ಪಾಠಗಳಲ್ಲಿ ಮಗ್ನವಾಗಿರುತ್ತದೋ ಹಾಗೆಯೇ ಇಂದ್ರಿಯ ಭೋಗಿಗಳ ಪರಿಸ್ಥಿತಿಯಾಗಿರುತ್ತದೆ.
ಆದುದರಿಂದ ನಾವು ಯಾವುದಕ್ಕೆ ಜನನ, ಮರಣವಿಲ್ಲವೋ, ವೃದ್ಧಾಪ್ಯ, ರೋಗ- ರುಜಿನಗಳಿಲ್ಲವೋ ಅಂತಹ ಒಂದು ಉತ್ತಮವಾದ ಜೀವನವನ್ನು ಪಡೆಯಲು ಪ್ರಯತ್ನಿಸಬೇಕು. ಅದಕ್ಕಾಗಿ ನಾವು ಆಧ್ಯಾತ್ಮಿಕ ದೇಹವನ್ನು ಪಡೆಯಬೇಕು. ಎಂದರೆ ನಿತ್ಯವಾದ, ಆನಂದ ಮತ್ತು ಜ್ಞಾನದ ಶಾಶ್ವತವಾದ ದೇಹವನ್ನು ಪಡೆಯುವುದು ಎಂದರ್ಥ. ಈಗ ನಾವು ಪಡೆದುಕೊ೦ಡಿರುವ ಈ ಐಹಿಕ ದೇಹ ನಿತ್ಯವಾದುದಲ್ಲ ಮತ್ತು ಪೂರ್ಣಜ್ಞಾನವನ್ನು ಪಡೆದಿಲ್ಲ.
ನಮಗೆಲ್ಲ ತಿಳಿದಿರುವಂತೆ ಅಜ್ಞಾನವನ್ನು ತುಂಬಿಕೊಂಡಿರುವ ಈ ಐಹಿಕ ದೇಹವು ನಾಶಹೊಂದುತ್ತದೆ. ನಮಗಿರುವ ಇಂದ್ರಿಯಗಳು ಅಪೂರ್ಣವಾದುದು ಮತ್ತು ಸಂಕುಚಿತವಾದುದು. ಬೆಳಕು ಹೊರಟು ಹೋದ ಕೂಡಲೇ ನೋಡುವ ಶಕ್ತಿಯನ್ನು ಕೂಡ ಕಳೆದುಕೊಳ್ಳುತ್ತೇವೆ. ಇನ್ನು ದೇವರನ್ನು ಕಾಣಲು ಸಾಧ್ಯವೇ?
ಈ ಐಹಿಕ ಜಗತ್ತಿನಲ್ಲಿ ನಾವು ಏನೇ ಕೆಲಸ, ಸಾಧನೆ ಮಾಡಿ ಬ್ರಹ್ಮಲೋಕವನ್ನು ಪಡೆದರೂ ಪುನಃ ಈ ಐಹಿಕ ಜಗತ್ತಿಗೆ ವಾಪಾಸಾಗಲೇಬೇಕು. ನಾವು ಉನ್ನತ ಲೋಕವನ್ನು ಪಡೆಯಬೇಕೆಂದರೂ ಅದಕ್ಕೆ ತಕ್ಕ೦ತಹ ಕೆಲಸ, ಅಭ್ಯಾಸಗಳನ್ನು ಮಾಡಬೇಕಾಗುತ್ತದೆ. ನಾಯಿ ಬೆಕ್ಕುಗಳಂತಹ ಪ್ರಾಣಿ ಜೀವನವನ್ನು ಪಡೆದರೂ ಅದಕ್ಕೆ ತಕ್ಕಂತಹ ಕೆಲಸ ನಮ್ಮಿಂದ ನಡೆದಿರುತ್ತದೆ.

ಹಾಗೆಯೇ ಶಾಶ್ವತವಾದ ಆಧ್ಯಾತ್ಮಿಕ ಜಗತ್ತಾಗಿರುವ ಭಗವದ್ಧಾಮಕ್ಕೆ ಹೋಗಬೇಕಾದರೆ ಸತತವಾದ ಅಭ್ಯಾಸ, ಪ್ರಯತ್ನಶೀಲತೆಯೆಂಬುದು ಇರಲೇಬೇಕು. ಅಂತಹ ಭಗವದ್ಧಾಮಕ್ಕೆ ಹೋದರೆ ಪುನಃ ಐಹಿಕ ದೇಹವನ್ನು ಪಡೆದುಕೊಂಡು ಈ ಭೌತಿಕ ಜಗತ್ತಿಗೆ ಹಿಂತಿರುಗುವುದಿಲ್ಲ.
ಕೃಷ್ಣಪ್ರಜ್ಞಾ ಆಂದೋಲನವು ಮಾನವನ ಈ ಉದಾತ್ತ ಉದ್ದೇಶವನ್ನು ಪೂರ್ಣ- ಮಾಡುವುದಕ್ಕಾಗಿಯೇ ಇದೆ. ಮಾನವ ಜೀವನದ ಅವಶ್ಯಕತೆಗಳನ್ನು ಕೃಷ್ಣನೇ ಪೂರೈಸುತ್ತಾನೆ. ‘ಯಾವ ಭಕ್ತ ನನ್ನ ಸೇವೆಯಲ್ಲಿ ಸದಾ ತೊಡಗಿರುತ್ತಾನೋ ಅವನ ಜೀವನದ ಎಲ್ಲ ರೀತಿಯ ಅವಶ್ಯಕತೆಗಳನ್ನು ಮತ್ತು ಅವನ ಯೋಗಕ್ಷೇಮವನ್ನು ನಾನು ನೋಡಿಕೊಳ್ಳುತ್ತೇನೆ’ ಎಂದು ಭಗವದ್ಗೀತೆಯಲ್ಲಿ ಶ್ರೀ ಕೃಷ್ಣನೇ ಹೇಳಿದ್ದಾನೆ.
ಭಗವಂತನ ಅನುಗ್ರಹದಿಂದ ಪ್ರಾಣಿಗಳೇ ಚೆನ್ನಾಗಿ ಜೀವಿಸುತ್ತಿರುವಾಗ ಭಗವಂತನ ಭಕ್ತರಾದ ನಾವು ಅವನ ದಯೆಯಿಂದ ಇನ್ನೂ ಚೆನ್ನಾಗಿ ಜೀವಿಸಬಹುದಲ್ಲ. ಕೃಷ್ಣಪ್ರಜ್ಞೆ ಎಂಬುದು ಕೂಡ ಸುಖಕರವಾದ ಜೀವನವಲ್ಲ. ಅದು ಕೂಡ ಕಷ್ಟಕರವಾದುದೇ. ಹೇಗೆ ಚಳಿಗಾಲದಲ್ಲಿ ನೀರು ತಣ್ಣಗೆ ಕೊರೆಯುತ್ತದೆಯೋ ಹಾಗೆಯೇ ಬೇಸಿಗೆಯಲ್ಲಿ ಅದು ತಂಪೆನಿಸುತ್ತದೆ.
ಇಲ್ಲಿ ಸುಖ-ದುಃಖ ಎನ್ನುವ ಪ್ರಶ್ನೆಯೇ ಇಲ್ಲ. ಕಾಲಮಾನದ ಬದಲಾವಣೆಗಳಿಗೆ ತಕ್ಕಂತೆ ನಮ್ಮ ಚರ್ಮಕ್ಕೆ ಇದು ಸುಖ ದುಃಖವನ್ನು ಕೊಡುತ್ತದೆ. ಹಾಗೆಯೇ ಬದುಕಿನಲ್ಲಿ ಕಷ್ಟಗಳು-ಸುಖಗಳು ಬರುತ್ತವೆ ಹೋಗುತ್ತವೆ, ಅವು ಶಾಶ್ವತವಾದುವುಗಳಲ್ಲ. ಆದ್ದರಿಂದ ತಾಳ್ಮೆ, ಸಹನೆಯನ್ನು ವಹಿಸಿ ಯಾರು ಅಭ್ಯಾಸ ಮಾಡುತ್ತಾರೋ, ಅದು ಅವರ ಜೀವನವೇ ಆಗಿ ಹೋಗುತ್ತದೆ.

ಆದ್ದರಿಂದ ಪ್ರಯತ್ನಶೀಲತೆ, ಅಭ್ಯಾಸದಲ್ಲಿ ನಾವು ಸದಾ ತೊಡಗಿಸಿಕೊಳ್ಳಬೇಕು. ಮನೆಯಲ್ಲಿ ಬಹಳ ಸೆಖೆ ಇದೆ ಎಂದು ಬೆಂಕಿಯ ಮು೦ದೆ ಅಡಿಗೆ ಮಾಡುವುದನ್ನು ಯಾರೂ ಬಿಡುವುದಿಲ್ಲ. ಆಧ್ಯಾತ್ಮಿಕ ಪ್ರಗತಿಯನ್ನು ಸಾಧಿಸಬೇಕಾದರೆ ಅದಕ್ಕೆ ಕೆಲವು ನೀತಿ ನಿಯಮಗಳಿವೆ. ಅವು ನಮಗೆ ಕಷ್ಟಕರವಾಗುತ್ತವೆ ಎಂದುಕೊಂಡು ಅವುಗಳ ಆಚರಣೆಯನ್ನು ನಾವು ಬಿಡಬಾರದು.
ಸಹನೆ ಕಳೆದುಕೊಳ್ಳಬಾರದು. ನಮ್ಮ ಸಹನಾಶಕ್ತಿ ಹೇಗಿರಬೇಕೆಂದರೆ ನಾವು ವೃಕ್ಷಕ್ಕಿಂತಲೂ ಹೆಚ್ಚಿನ ಸಹನಶೀಲರಾಗಬೇಕು. ಕೆಲವರು ಮರದ ರೆಂಬೆ ಕೊಂಬೆಗಳನ್ನು ಕಡಿಯುತ್ತಾರೆ. ಮತ್ತೆ ಕೆಲವರು ಅದರ ಹೂವು ಹಣ್ಣುಗಳನ್ನು ಕೀಳುತ್ತಾರೆ. ಇನ್ನೂ ಕೆಲವರು ಇಡೀ ಮರವನ್ನೇ ಕಡಿದುಹಾಕುತ್ತಾರೆ.
ತನಗೆ ನೋವಾಗುತ್ತಿದೆಯೆಂದು ಅದು ಹೂವು, ಹಣ್ಣು, ನೆರಳು ಕೊಡುವುದನ್ನು ಮರೆಯುವುದಿಲ್ಲ. ನಮಗೆ ಸಹನೆಯೊಂದಿಗೆ ಬೇರೆಯವರ ಬಗ್ಗೆಯೂ ಗೌರವ ಆದರಗಳು ಇರಬೇಕು. ಈ ರೀತಿಯ ಸಾಧನೆಗಳನ್ನು ಅಭ್ಯಾಸ ಮಾಡಿದರೆ ನಾವು ಭಗವದ್ಧಾಮಕ್ಕೆ ಹೋಗುವ ಅರ್ಹತೆಯನ್ನು ಖಂಡಿತವಾಗಿಯೂ ಪಡೆಯುತ್ತೇವೆ.
ಆದುದರಿಂದ ಕೃಷ್ಣಪ್ರಜ್ಞೆಯ ಮಹತ್ವ ಅರಿಯಬೇಕು. ದಾರಿ ತಪ್ಪಬಾರದು. ಬದುಕಿನಲ್ಲಿ ಯಶಸ್ವಿಯಾಗಿ ಈ ದೇಹ ಅವಸಾನವಾದ ಮೇಲೆ ನಾವು ಇನ್ನೊಂದು ದೇಹವನ್ನು ಪಡೆಯುತ್ತೇವೆ. ಈ ದೇಹ ಪಶುಗಳಂತೆ ಲೌಕಿಕ ಭೋಗದ ದೇಹವಾಗದೇ ಆಧ್ಯಾತ್ಮಿಕ ದೇಹವನ್ನು ಪಡೆದು ನಾವು ಭಗವದ್ಧಾಮಕ್ಕೆ ಹಿಂತಿರುಗಬೇಕು.






Leave a Reply