ಭಗೀರಥ ಪ್ರಯತ್ನ – ಗಂಗಾವತರಣ!

ನೈಮಿಷಾರಣ್ಯದ ಋಷಿಗಳು ಏಕೈಕ ಚಿತ್ತರಾಗಿ ಸೂತ ಮುನಿಗಳ ಶ್ರೀಮದ್ಭಾಗವತ ಕಥಾಶ್ರವಣದ ಸೌಭಾಗ್ಯವನ್ನು ಅನುಭವಿಸುತ್ತಿದ್ದರು. ಸೂತಮುನಿಗಳು ಕಥಾಭಾಗವನ್ನು ಹೇಳುತ್ತಿರುವಾಗ ಆ ಸಂತಸಚಿತ್ರ ಮುನಿಗಳ ಜೊತೆಯಲ್ಲಿ ಇಡೀ ನೈಮಿಷಾರಣ್ಯ ಮತ್ತು ಅಲ್ಲಿನ  ಎಲ್ಲ ಮೃಗ-ಪಕ್ಷಿ ಜೀವಿಗಳು ಅದರ ಪುಣ್ಯ ಪ್ರಭಾವಕ್ಕೆ ಒಳಗಾಗಿದ್ದುವೇನೋ ಎಂಬಂತೆ ಸುಂದರ ಶಾಂತಿಯೊಂದು ಅಲ್ಲಿ ನೆಲೆಸಿತ್ತು.

ಸೂತ ಮುನಿಗಳು ಮತ್ತೆ  ಪ್ರಾರಂಭಿಸಿದರು :

ಸಗರ ಚಕ್ರವರ್ತಿ ಅಪಾರ ನೋವಿನಿಂದಲೇ ವಾನಪ್ರಸ್ಥವನ್ನು ಸೇರಿದ. ಸಾವಿರಾರು ಮಕ್ಕಳ ಸಾವು ಮತ್ತು ಋಷಿ ಶ್ರೇಷ್ಠರಾದ ಕಪಿಲರಿಗೆ ತನ್ನ ಅನುಜರಿಂದ ಆದ ಅಪಮಾನ, ಇದ್ದ ಒಬ್ಬ ಮಗ ಅಸಮಂಜಸನ ಕಣ್ಮರೆ ಇವೆಲ್ಲ ಅವನನ್ನು ಹಣ್ಣು ಹಣ್ಣು ಮಾಡಿತ್ತು. ತಾತನ ಭಾವನೆಗಳಿಗೆ ಮಣಿದ ಮೊಮ್ಮಗ ಅಂಶುಮಾನ ಸಿಂಹಾಸನವನ್ನೇರಿದ್ದ.

ಸಿಂಹಾಸನಾರೋಹಣ, ಚಕ್ರವರ್ತಿ ಪದವಿಯ ವೈಭವ ಇವುಗಳು ಯಾವುವೂ ಅಂಶುಮಾನನನ್ನು ಮಾನಸಿಕವಾಗಿ ಮೆರೆಯುವಂತೆ ಮಾಡಲೇ ಇಲ್ಲ. ದೊಡ್ಡಪ್ಪಂದಿರ ಅಸಂಸ್ಕಾರ ಮರಣ ಉಳಿದೆಲ್ಲ ವಿಷಯಗಳಿಗಿಂತಲೂ ಹೆಚ್ಚಾಗಿ ಅವನನ್ನು ಕಾಡುತ್ತಿತ್ತು. ಈ ಮಹಾನ್‌ ವಂಶದ ಭಾಗ್ಯಶಾಲಿಯಾಗಿ ಜನಿಸಿ, ತನ್ನ ಪಿತೃಗಳಿಗೆ ಮೋಕ್ಷ ದೊರಕಿಸಿಕೊಡುವುದು ತನ್ನಿಂದಾಗಲಿಲ್ಲವಲ್ಲ ಎಂದು ಅವನ ಹೃದಯಾಂತರಾಳದಲ್ಲೊಂದು ಕೊರಗು ಉಳಿದುಕೊಂಡೇ ಇದ್ದಿತು.

ಋಷಿ ಶ್ರೇಷ್ಠರಾದ ಕಪಿಲರು ಹೇಳಿದ ಕೊನೆ ಮಾತು ಅವನ ಕಿವಿಗಳಲ್ಲಿ  ಪ್ರತಿನಿಧಿಸುತ್ತಲೇ ಇತ್ತು : ಪ್ರಿಯ ಮಗು ಅಂಶುಮಾನ್‌, ನಿನ್ನ ಪಿತೃಗಳು ತಮ್ಮ ನಾಶಕ್ಕೆ ತಾವೇ ನಿಮಿತ್ತರಾದರು. ಅವರನ್ನು ಅವರದೇ ಕೋಪಾಗ್ನಿ ದಹಿಸಿಬಿಟ್ಟಿತು. ನಿನ್ನ ಹಾಗೆ ಭಕ್ತಿ ಗೌರವಗಳಿಂದ ಬಂದಿದ್ದರೆ ಅವರು ಉಳಿಯುತ್ತಿದ್ದರು. ಮತ್ತವರ ತಂದೆಯ ಯಜ್ಞಾಶ್ವವೂ ಅನುಗ್ರಹದೊಂದಿಗೆ ಅವರ ಪಾಲಾಗುತ್ತಿತ್ತು. ಅವರಿಗೆ ಖಂಡಿತ ಸದ್ಗತಿ ದೊರೆಯುತ್ತದೆ. ನಿನ್ನ ವಂಶದವರೊಬ್ಬರು ಗಂಗಾ ಮಾತೆಯನ್ನು ಭೂಲೋಕಕ್ಕೆ ಕರೆದುಕೊಂಡು ಬಂದಾಗ ಆ ಪುಣ್ಯ ಜಲ ಈ ಬೂದಿಯೊಂದಿಗೆ ಬೆರೆತಾಗ ಇವರೆಲ್ಲರಿಗೂ ಸದ್ಗತಿ ಖಂಡಿತ ಆಗುತ್ತದೆ!

ಅಂಶುಮಾನ ದೇವಗಂಗೆಯನ್ನು ಭೂಗಂಗೆಯನ್ನಾಗಿ ಮಾಡುವುದು ಹೇಗೆಂದು ಯೋಚಿಸಿ, ಗುರು ಹಿರಿಯರ ಸಲಹೆ ಸೂಚನೆಗಳಂತೆ ಪ್ರಯತ್ನ ಮಾಡುತ್ತಲೇ ಇದ್ದ. ಅನಂತರ ಅವನ ಮಗ ದಿಲೀಪ ಈ ಪ್ರಯತ್ನ ಮುಂದುವರಿಸಿದ. ಇವರಿಬ್ಬರ ಯಾವ ತಪಸ್ಸುಗಳೂ ಫಲ ಕೊಡಲಿಲ್ಲ. ದಿಲೀಪನ ಮರಣಾನಂತರ ಅವನ ಮಗನಾದ ಭಗೀರಥ ಈ ಕೈಂಕರ್ಯವನ್ನು ಕೈಗೊಂಡ.

ಭಗೀರಥನ ಪ್ರಯತ್ನ ಅವನ ತಂದೆ-ತಾತನ ಪ್ರಯತ್ನಗಳಿಗಿಂತಲೂ ಕಠಿಣದ್ದಾಗಿ ಇದ್ದಿತು. ಅವನು ಛಲ ಬಿಡಲಿಲ್ಲ. ಗಂಗಾವತರಣ ಬಿಟ್ಟು ತನ್ನ ಜೀವನದಲ್ಲಿ ಬೇರೇನೂ ಇಲ್ಲ ಎಂಬಂತೆ ಅವನು ದೇವೋತ್ತಮ ಪರಮ ಪುರುಷನನ್ನು ಧ್ಯಾನಿಸುತ್ತ ಗಂಗಾಮಾತೆಯನ್ನು ದೀರ್ಘ ಕಾಲ ಕಠಿಣ ತಪಸ್ಸುಗಳ ಮೂಲಕ ಪ್ರಾರ್ಥಿಸಿದ.

ತಂದೆ-ತಾತನಿಗೆ ದೊರಕದ ಅನುಗ್ರಹ ಅವನಿಗೆ ದೊರಕಿತು. ಗಂಗಾಮಾತೆ ಪ್ರತ್ಯಕ್ಷಳಾದಳು. `ಮಗೂ ನಾನು ನಿನ್ನ ತಪಶ್ಚರ್ಯಗಳಿಂದ ಸಂತೃಪ್ತಳಾಗಿದ್ದೇನೆ. ನೀನು ಕೋರುವ ವರವನ್ನು ನಿನಗೆ ನೀಡಲು ಸಿದ್ಧಳಾಗಿದ್ದೇನೆ!’ – ಎಂದು ಹೇಳಿದಳು.

ಭಗೀರಥನಿಗೆ ತನ್ನ ತಪಸ್ಸು ಫಲ ನೀಡಿದ್ದನ್ನು ಕಂಡು ಅತೀವ ಸಂತೋಷವಾಗಿತ್ತು. ಸಾವಿರ ಕೋಟಿ ರತ್ನ ಪ್ರಭೆಯಲ್ಲಿ ಪ್ರಕಾಶಿಸುತ್ತ ತನ್ನೆದುರು ನಿಂತಿದ್ದ ಆ ಜೀವದಾತೆಯನ್ನು ಕಂಡು ಅವನಿಗಾದ ಮಾನಸಿಕ ತೃಪ್ತಿಯ ಮುಂದೆ ಬೇರೇನೂ ಬೇಕಾಗಲಿಲ್ಲ. ಆದರೆ, ಪಿತೃಗಳ ಬಗೆಗಿನ ಅವನ ನೆನಪು ಗಟ್ಟಿಯಾಗಿದ್ದುದರಿಂದ ಅದು ಮೊದಲು ತೇಲಿ ಬಂತು.

`ಜೀವದಾತೆ, ಭಾಗ್ಯದಾತೆ, ನಿನ್ನನ್ನು ನೋಡಿಯೇ ನನ್ನ ಜನ್ಮ ಸಾರ್ಥಕವಾಗಿ ಹೋಯಿತು. ಈ ಪರಿಪೂರ್ಣತೆಯಲ್ಲಿ ನನಗೆ ಇನ್ನೇನೂ ಬೇಕೆನಿಸುತ್ತಿಲ್ಲ. ಆದರೆ ನನ್ನ ಪಿತೃಗಳ ಅತಂತ್ರ ಸ್ಥಿತಿ ನನ್ನ ಹೃದಯದಿಂದ ದೂರವಾಗಿಲ್ಲ. ಅದಕ್ಕಾಗಿಯೇ ನಾನು ನಿನ್ನನ್ನು ಕುರಿತು ತಪಸ್ಸು ಮಾಡಿ ನಿನ್ನ ಅನುಗ್ರಹಕ್ಕಾಗಿ ನಿನ್ನ ಮುಂದೆ ನಿಂತಿದ್ದೇನೆ. ತಾಯಿ ಅನುಗ್ರಹಿಸು. ಭೂಲೋಕಕ್ಕೆ ಹರಿದು ಬಾ. ನನ್ನ ಪಿತೃಗಳಿಗೆ ಸದ್ಗತಿ ದಯಪಾಲಿಸು!’ ಎಂದೆಲ್ಲ ಹೇಳುವುದು ಅವನಿಂದ ಸಾಧ್ಯವಾಯಿತು.

ಗಂಗಾ ಮಾತೆ ಮುಗುಳು ನಕ್ಕಳು. ಒಂದು ಕ್ಷಣ ಅವಳ ಮುಖದಲ್ಲಿ ಕಾಠಿಣ್ಯ ತೋರಿತು. ಅವಳು ಹೇಳಿದಳು, `ಭಗೀರಥ ನಾನು ಆಕಾಶದಿಂದ ಭೂಮಿಯ ಮೇಲೆ ಬಿದ್ದಾಗ ಜಲಧಾರೆಯು ಖಂಡಿತವಾಗಿಯೂ ರಭಸವಾಗಿರುತ್ತದೆ. ಆ ರಭಸವನ್ನು ತಡೆಯುವವರಾರು.’

`ಭಗೀರಥ, ಭೂಲೋಕದಲ್ಲಿ ಎಲ್ಲರೂ ಪಾಪ ಮಾಡುವುದು ಜಾಸ್ತಿಯಾಗಿದೆ. ಪಾಪಿಷ್ಠರ ಸಂಖ್ಯೆ ಹೆಚ್ಚುತ್ತಿದೆ. ಅವರೆಲ್ಲರೂ ನರಕಕ್ಕೆ ಹೋಗಬೇಕಾದಂಥವರು ನನ್ನ ಸ್ವರ್ಗದಿಂದ ಪಾಪ ರಹಿತಗೊಳ್ಳುತ್ತಾರೆ. ಅವರ ಪಾಪದ ಪ್ರತಿಕ್ರಿಯೆಗಳು ನನ್ನಲ್ಲಿ ಶೇಖರಗೊಳ್ಳುತ್ತವೆ. ಆಗ ನಾನು ಹೇಗೆ ಪಾಪಗಳಿಂದ ಮುಕ್ತಳಾಗಬಹುದು. ಇದರ ಬಗ್ಗೆ ನೀನು ಕೂಲಂಕಷವಾಗಿ ಪರಿಶೀಲಿಸು. ಭೂಮಿಯ ಮೇಲೆ ಬರಲು (ಹರಿಯಲು) ನನಗೆ ಇಷ್ಟವಿಲ್ಲ.

ಭಗೀರಥ ಈ ಲೋಕಮಾತೆಯಿಂದ ಹೀಗೊಂದು ಮಾತನ್ನು ನಿರೀಕ್ಷಿಸಿರಲಿಲ್ಲ. ತಪಸ್ಸಿಗೆ ಮೆಚ್ಚಿ ಭೂಲೋಕಕ್ಕೆ ಹರಿದು ಬಂದು ತನ್ನ ಪಿತೃಗಳಿಗೆ ಸದ್ಗತಿ ಕಾಣಿಸುತ್ತಾಳೆ ಎಂದು ಮಾತ್ರ ಅವನು ಆಲೋಚಿಸಿದ್ದ. ಈಗ ಅವನ ಕಲ್ಪನೆಗೆ ಎಟುಕದ್ದನ್ನು ಗಂಗಾಮಾತೆ ಹೇಳಿದಾಗ ಅವನು ಕಂಗಾಲಾಗಿದ್ದ. ಏನುತ್ತರ ನೀಡಬೇಕೆಂದು ಅವನಿಗೊಂದು ಕ್ಷಣ ತೋಚಲಿಲ್ಲ. ದೇವೋತ್ತಮ ಪರಮ ಪುರುಷನನ್ನು ಒಂದು ಕ್ಷಣ ಪ್ರಾರ್ಥಿಸಿ ಬೆಳಕು ಕಂಡವನಂತೆ ಮಾತನಾಡಿದ : `ಮಾತಾ, ನಿನ್ನ ಮಾತು ನಿಜ. ಪಾಪಾತ್ಮರನ್ನು ಪಾವನಗೊಳಿಸಿದಾಗ ಅವರ ಪಾಪ ಶೇಷಗಳು ನಿನ್ನಲ್ಲಿ ಸೇರಿಹೋಗುವುದೇನೊ ನಿಜ. ಆದರೆ ತಾಯಿ, ಭೂಲೋಕದಲ್ಲಿ ಇರುವವರೆಲ್ಲರೂ ಬರೀ ಪಾಪಾತ್ಮರೇ ಅಲ್ಲ. ಭಕ್ತಿ ಸೇವೆಯ ಮೂಲಕ ಸಾಧು ಪುರುಷರಾಗಿ ಸಂನ್ಯಾಸಾಶ್ರಮದಲ್ಲಿರುವವರೂ, ಪ್ರಾಪಂಚಿಕ ಅಪೇಕ್ಷಾ ರಹಿತರೂ, ಶುದ್ಧ ಭಕ್ತರೂ, ವೇದೋಕ್ತವಾದ ನಿಯಂತ್ರಣ ತತ್ವಗಳ ಪಾಲನೆಯಲ್ಲಿ ತಜ್ಞರೂ, ಸದಾ ಮಹಿಮಾವಂತರೂ, ಸದ್ವರ್ತಿಗಳೂ ಇದ್ದಾರೆ. ಇವರೆಲ್ಲರೂ ಪತಿತರನ್ನು ಉದ್ಧರಿಸಲು ಯಾವಾಗಲೂ ಶಕ್ತರಿರುತ್ತಾರೆ, ಸಿದ್ಧರಿರುತ್ತಾರೆ. ಅಂತಹ ಶುದ್ಧ ಭಕ್ತರು ನಿನ್ನ ಜಲದಲ್ಲಿ ಸ್ನಾನ ಮಾಡಿದಾಗ ಇತರ ಪಾಪಾತ್ಮರಿಂದ ಸಂಚಯಿತವಾದ ಪಾಪ ಫಲಗಳು ನಿರೋಧಿತವಾಗುತ್ತವೆ. ಅಂತಹ ಭಕ್ತರು ತಮ್ಮ ಹೃದಯದಲ್ಲಿ ಸಕಲ ಪಾಪ ಕರ್ಮಹರನಾದ ದೇವೋತ್ತಮ ಪರಮ ಪುರುಷನನ್ನು ನೆಲೆಗೊಂಡಿಸಿಕೊಂಡಿರುತ್ತಾರೆ. ಆದ್ದರಿಂದ ತಾಯೆ, ಹರಿದು ಬಾ, ಇಳೆಗೆ ಇಳಿದು ಬಾ !’

ಗಂಗಾ ಮಾತೆ ಮತ್ತೆ ನಕ್ಕಳು. `ಭಗೀರಥ, ನಿನ್ನ ವಿವರಣೆಗೆ ಮೆಚ್ಚಿದೆ. ನಾನು ಭೂಲೋಕಕ್ಕಿಳಿಯಲು ಏನೂ ಅಡ್ಡಿಯಿಲ್ಲ. ಆದರೆ, ನಾನು ಆಕಾಶದಿಂದ ಭೂಮಿಯ ಮೇಲೆ ಬಿದ್ದಾಗ ಜಲಧಾರೆಯು ಖಂಡಿತವಾಗಿಯೂ ಬಹಳ ರಭಸದಿಂದ ಕೂಡಿರುತ್ತದೆ. ಆ ರಭಸವನ್ನು ತಡೆಯಬಲ್ಲವರಾರು? ನನ್ನನ್ನು ಯಾರೂ ತಡೆಯದಿದ್ದಲ್ಲಿ ನಾನು ಭೂಮಿಯನ್ನು ಭೇದಿಸಿಕೊಂಡು ಬ್ರಹ್ಮಾಂಡದ ಪಾತಾಳ ಭಾಗವಾದ ರಸಾತಳಕ್ಕೆ ಇಳಿದುಬಿಡುತ್ತೇನೆ!’

ಭಗೀರಥ ಹೇಳಿದ : `ಗಂಗಾ ಮಾತೆ, ಉದ್ದಗಲಕ್ಕೂ ನೂಲುಗಳಿಂದ ನೇಯ್ದ ವಸ್ತ್ರದಂತೆ ಈ ಇಡೀ ಜಗತ್ತು ತನ್ನೆಲ್ಲ ಉದ್ದಗಲ ಸಹಿತ ದೇವೋತ್ತಮ ಪರಮ ಪುರುಷನ ವಿವಿಧ ಶಕ್ತಿಗಳ ಅಧೀನದಲ್ಲಿ ಸನ್ನಿವಿಷ್ಟವಾಗಿದೆ. ಶಿವನು ಭಗವಂತನ ಅವತಾರ. ಹಾಗಾಗಿ ಅವನು ದೇಹಾಂತರ್ಗತವಾದ ಆತ್ಮದಲ್ಲಿನ ಪರಮಾತ್ಮನನ್ನು ಪ್ರತಿನಿಧಿಸುತ್ತಾನೆ. ಅವನು ನಿನ್ನ ರಭಸವಾದ ಅಲೆಗಳನ್ನು ತನ್ನ ಶಿರಸ್ಸಿನಲ್ಲಿ ಧಾರಣ ಮಾಡಬಲ್ಲನು !’

ಗಂಗಾ ತಾಯಿ ಒಪ್ಪಿದಳು. ಭಗೀರಥನು ತಪಶ್ಚರ್ಯೆಗಳನ್ನಾಚರಿಸಿ ಶಿವನನ್ನು ತೃಪ್ತಿಗೊಳಿಸಿದನು. ಶಿವ ಬಹು ಬೇಗ ಭಗೀರಥನಲ್ಲಿ ಸುಪ್ರೀತನಾದುದಲ್ಲದೆ ಆಕಾಶದಿಂದ ಅತಿರಭಸವಾಗಿ ಹರಿದು ಬರುವ ಗಂಗೆಯನ್ನು ತನ್ನ  ಶಿರಸ್ಸಿನಲ್ಲಿ ಧಾರಣ ಮಾಡಲು ಒಪ್ಪಿಕೊಂಡ. ಅನಂತರ ಎಚ್ಚರಿಕೆಯಿಂದ ಗಂಗೆಯನ್ನು ತನ್ನ ಶಿರಸ್ಸಿನಲ್ಲಿ ಧರಿಸಿದ. ಏಕೆಂದರೆ ಗಂಗಾಜಲ ವಿಷ್ಣುವಿನ ಪಾದಾಂಗುಷ್ಟದಿಂದ ಹೊಮ್ಮಿದ್ದು ಪಾವನವಾದುದಾಗಿದೆ.

ಗಂಗೆ ಹರಿದು ಬಂದಳು. ಭಗೀರಥನ ಪ್ರಾರ್ಥನೆಯಂತೆ ಅವನ ದೊಡ್ಡಪ್ಪಂದಿರ ಬೂದಿಗಳ ಮೇಲೆ ಹರಿದಳು. ಚಿತಾಭಸ್ಮಕ್ಕೆ ಗಂಗಾಜಲ ಪ್ರೋಕ್ಷಣೆಯಾಯಿತು. ಅವರೆಲ್ಲರೂ ಸ್ವರ್ಗಲೋಕ ಪ್ರವೇಶಕ್ಕೆ ಅರ್ಹರಾದರು.

ಸೂತ ಮುನಿಗಳು ಮಧ್ಯದಲ್ಲೊಂದು ವಿವರಣೆ ನೀಡಿದರು :

`ಭಗವದ್ಭಕ್ತನು ಭಗವಂತನಿಗೆ ತುಂಬ ಭಕ್ತಿಯಿಂದ ಪತ್ರಂ ಪುಷ್ಪಂ ಫಲಂ ತೋಯಮ್‌ ಎಂದು ಪತ್ರೆ, ಹೂವು ಹಣ್ಣು ಮತ್ತು ನೀರನ್ನು  ಸಮರ್ಪಿಸುತ್ತಾನೆ. ಆದರೆ ಪತ್ರೆ, ಹೂವು, ಹಣ್ಣು ಹಾಗೂ ನೀರು ಈ ಎಲ್ಲವೂ ಭಗವಂತನಿಗೇ ಸೇರಿದ್ದಾಗಿದೆ. ಭಕ್ತನು ತ್ಯಜಿಸುವಂತಹದಾಗಲಿ, ಸ್ವೀಕರಿಸುವಂತಹದಾಗಲಿ ಏನೊಂದೂ ಇಲ್ಲ. ವ್ಯಕ್ತಿಯು  ಭಕ್ತಿ ಪ್ರಕ್ರಿಯೆಯ ಪ್ರಯೋಜನವನ್ನು ಮಾತ್ರ ಪಡೆದುಕೊಳ್ಳಬೇಕು. ಭಕ್ತಿ ಪ್ರಕ್ರಿಯೆಯ ಅನುಸಾರವಾಗಿ ವರ್ತಿಸುವುದರಿಂದ ವ್ಯಕ್ತಿಯು ಕಳೆದುಕೊಳ್ಳುವುದೇನೂ ಇಲ್ಲ. ಆದರೆ ಪರಮ ಪುರುಷನ ಅನುಗ್ರಹವನ್ನು ಗಳಿಸುತ್ತಾನೆ.

`ಗಂಗಾಜಲವು ಪಿತೃಗಳ ದಗ್ಧ ದೇಹಗಳನ್ನು ಸ್ಪರ್ಶಿಸಿದ ಮಾತ್ರದಿಂದಲೇ ಸಗರ ಮಹಾರಾಜನ ಪುತ್ರರು ಸ್ವರ್ಗ ಲೋಕಕ್ಕೆ ಉನ್ನತಿ ಹೊಂದಿದರು. ಆದ್ದರಿಂದ ದೃಢವಾದ ವ್ರತ ಹಿಡಿದು ಶ್ರದ್ಧೆಯಿಂದ ಗಂಗಾಮಾತೆಯನ್ನು  ಪೂಜಿಸುವ ಭಕ್ತರನ್ನು ಕುರಿತು ಹೇಳುವುದೇನಿದೆ? ಅಂತಹ ಭಕ್ತನಿಗೆ ದೊರೆಯುವ ಪ್ರಯೋಜನವನ್ನು ಊಹಿಸಿಕೊಳ್ಳಬೇಕಷ್ಟೆ. ಗಂಗಾಮಾತೆಯು ದೇವೋತ್ತಮ ಪರಮ ಪುರುಷನಾದ ಅನಂತದೇವನ ಪಾದಾಂಗುಷ್ಠ ಕಮಲದಿಂದ ಹೊಮ್ಮುತ್ತಾಳಾಗಿ ವ್ಯಕ್ತಿಯನ್ನು ಐಹಿಕ ಬಂಧನಗಳಿಂದ ವಿಮೋಚನೆಗೊಳಿಸಲು ಶಕ್ತಳು. ಆದ್ದರಿಂದ ಆಕೆಯ ಬಗ್ಗೆ ಎಷ್ಟು ಭಕ್ತಿಪೂರ್ವಕ ಮಾತುಗಳನ್ನು ಹೇಳಿದರೂ ಆಶ್ಚರ್ಯವಿಲ್ಲ. ಐಹಿಕ ಕಾಮಾಪೇಕ್ಷೆಗಳಿಂದ ಸಂಪೂರ್ಣವಾಗಿ  ಮುಕ್ತರಾದ ಮಹಾಋಷಿಗಳು ತಮ್ಮ ಮನಸ್ಸನ್ನು  ಪೂರ್ಣವಾಗಿ ಭಗವತ್ಸೇವೆಗೆ ಸಮರ್ಪಿಸುತ್ತಾರೆ. ಇಂತಹವರು ಪ್ರಯಾಸವಿಲ್ಲದೆ ಐಹಿಕ ಬಂಧನಗಳಿಂದ ಮುಕ್ತಿ ಪಡೆದು ದಿವ್ಯತ್ವದಲ್ಲಿ ನೆಲೆಸಿ ಭಗವಂತನ ಆಧ್ಯಾತ್ಮಿಕ ಗುಣಗಳನ್ನು ಅರ್ಜಿಸುತ್ತಾರೆ. ಇದು ದೇವೋತ್ತಮ ಪರಮ ಪುರುಷನ ಮಹಿಮೆ – ಎಂದೆಲ್ಲ ಶ್ರೀ ವೇದವ್ಯಾಸರು ಹೇಳಿದ್ದಾರೆ!’

ವಿವರಣೆಯ ತರುವಾಯ ಕಥಾಭಾಗ ಮುಂದುವರಿಯಿತು;

ಗಂಗಾವತರಣ ಮಾಡಿಸಿದ ಭಗೀರಥನಿಗೆ ಶ್ರುತನೆಂಬ ಪುತ್ರನಿದ್ದನು.  ಅವನ ಮಗ ನಾಭ. ಇವನಿಗೆ ಸಿಂಧು ದ್ವೀಪನೆಂಬ ಮಗ ಹುಟ್ಟಿದ. ಇವನಿಂದ ಅಯುತಾಯು, ಇವನಿಂದ ಋತುಪರ್ಣ ಹುಟ್ಟಿದರು. ಈ ಋತುಪರ್ಣನೇ ನಳರಾಜನ ಸ್ನೇಹಿತನಾಗಿ ಅವನಿಗೆ ದ್ಯೂತ ವಿದ್ಯೆಯನ್ನು ಹೇಳಿಕೊಟ್ಟವನು. ಇದಕ್ಕೆ ಪ್ರತ್ಯುಪಕಾರವಾಗಿ ನಳಮಹಾರಾಜ ಋತುಪರ್ಣನಿಗೆ ಕುದುರೆಗಳನ್ನು ಸಾಕುವ ಮತ್ತು ನಿಯಂತ್ರಿಸುವ ಅಶ್ವವಿದ್ಯೆಯನ್ನು ಕಲಿಸಿದನು. ಋತುಪರ್ಣನ ಪುತ್ರ ಸರ್ವಕಾಮ. ಇವನಿಗೆ ಸುದಾಸನೆಂಬ ಮಗ. ಇವನಿಗೆ ಸೌದಾಸನೆಂಬ ಪುತ್ರ.

ಈ ಸೌದಾಸನ ಹೆಂಡತಿ ಮದಯಂತಿ. ಇವನ ಬದುಕಿನಲ್ಲಿ ಕೆಲವು ಅನಿರೀಕ್ಷಿತ ಘಟನೆಗಳು ನಡೆದು ಅವನು ವಸಿಷ್ಠರ ಶಾಪಕ್ಕೆ ಗುರಿಯಾಗಬೇಕಾಯಿತು. ರಾಕ್ಷಸ ರೂಪಧರಿಸಿ ಪತಿವ್ರತೆಯಾದ ಬ್ರಾಹ್ಮಣ ಪತ್ನಿಯೊಬ್ಬಳಿಂದ ಶಾಪಕ್ಕೆ ಗುರಿಯಾಗಬೇಕಾಯಿತು. ದೈವ ಭಕ್ತನಾಗಿ, ಮಹಾಪುರುಷನೊಬ್ಬನ ಯೋಗ್ಯತೆಗಳೆಲ್ಲವೂ ಇವನಲ್ಲಿದ್ದರೂ ಇವನು ಕರ್ಮಾಂತರ ಫಲಗಳನ್ನು ತಪ್ಪಿಸಿಕೊಳ್ಳಲಾಗಲಿಲ್ಲ.

ಒಮ್ಮೆ ಸೌದಾಸ ಕೆಲಕಾಲದ ಅರಣ್ಯವಾಸಕ್ಕೆಂದು ಹೋದನು. ವನಪ್ರದೇಶದಲ್ಲಿ ಹಾಯಾಗಿ ಸಂತೋಷದಿಂದ ಮುಕ್ತವಾಗಿ ಕಾಲ ಕಳೆಯುತ್ತಿದ್ದಾಗ ಅಲ್ಲೊಬ್ಬ ನರ ಭಕ್ಷಕ ಇವನ ಮೇಲೆರಗಿ ಬಂದ. ಸಾಹಸಿಯಾದ ಸೌದಾಸ ಆ ನರ ಭಕ್ಷಕ ರಾಕ್ಷಸನನ್ನು  ಕೊಂದು ಹಾಕಿದ. ಆದರೆ ಈ ಘಟನೆ ಅಲ್ಲಿಗೇ ಮುಗಿಯಲಿಲ್ಲ. ಈ ರಾಕ್ಷಸನ ತಮ್ಮನೊಬ್ಬ ಇದ್ದ. ತನ್ನ ಅಣ್ಣನ ಸಾವಿನ ಸೇಡನ್ನು ತೀರಿಸಿಕೊಳ್ಳುವುದಾಗಿ ಶಪಥ  ಮಾಡಿದ. ಪೂರ್ವ ಭಾವಿಯಾಗಿ ಸೌದಾಸನ ಅರಮನೆಯಲ್ಲಿ ಅಡುಗೆಯವನಾಗಿ ಕೆಲಸಕ್ಕೆ ಸೇರಿಕೊಂಡ.

ಹೀಗಿದ್ದಾಗ ಒಂದು ಸಲ ರಾಜ ಗುರುಗಳಾಗಿದ್ದ ವಸಿಷ್ಠರು ಅರಮನೆಗೆ ಬಂದರು. ಅವರಿಗಾಗಿ ರಾಜ ವಿಶೇಷ ಭೋಜನದ ವ್ಯವಸ್ಥೆ ಮಾಡಿದ. ಈ ಭೋಜನದ  ಸಂದರ್ಭವೇ ಆ ರಾಕ್ಷಸನಿಗೆ ಸೇಡು ತೀರಿಸಿಕೊಳ್ಳುವ ಸುಸಂದರ್ಭವಾಗಿ ಹೋಯಿತು. ಅಡುಗೆಯವನಾಗಿದ್ದ ಆ ರಾಕ್ಷಸ ನರಮಾಂಸದಲ್ಲಿ ಅಡುಗೆ ಮಾಡಿ ವಸಿಷ್ಠರಿಗೆ ಬಡಿಸಿದ. ಈ ವಿಷಯ ಸೌದಾಸ ಮಹಾರಾಜನಿಗೆ ಗೊತ್ತಿರಲಿಲ್ಲ. ಅವನು ಭಕ್ತಿ ಗೌರವಗಳಿಂದ ವಸಿಷ್ಠರ ಮುಂದೆ ನಿಂತು, `ಮಹರ್ಷಿಗಳಿಗಾಗಿ ಇವತ್ತು ವಿಶೇಷ ಭೋಜನ ತಯಾರಿಸಲಾಗಿದೆ. ಸ್ವೀಕರಿಸಿ ಅನುಗ್ರಹಿಸಬೇಕು!’ ಎಂದು ಕೈಜೋಡಿಸಿ ಪ್ರಾರ್ಥಿಸಿದ.

ಎಲೆಯಲ್ಲಿ  ಬಡಿಸಿದ್ದ ಅಡುಗೆಯನ್ನು ನೋಡಿದ ಕೂಡಲೇ ಅದು ನರಮಾಂಸ ಎಂಬುದು ವಸಿಷ್ಠರಿಗೆ ಗೊತ್ತಾಗಿ ಹೋಯಿತು. ಥಟ್ಟನೆ ಎದ್ದು ನಿಂತು ಕೂಗಿದರು : `ಯಾರೂ ಊಟ ಮಾಡಬೇಡಿ. ಇಂದು ದೇವರಿಗೆ ನೈವೇದ್ಯವಾದ ರಾಜ ಭೋಜನ ನಾವು ಭುಂಜಿಸಲು ಯೋಗ್ಯವಾಗಿಲ್ಲ. ಈ ದಿವಸ ಈ ಮಹಾರಾಜ ನಮಗೆ ನರಮಾಂಸದಲ್ಲಿ ಅಡುಗೆ ಮಾಡಿ ವಿಶೇಷ ಭೋಜನ ಎಂದು ಬಡಿಸಿದ್ದಾನೆ!’

ಇಡೀ ಊಟದ ತಾಣ ಅವರ ಕೂಗಿನಿಂದ ನಡುಗಿ ಹೋಯಿತು. ಸೌದಾಸ ಮತ್ತವನ ರಾಣಿಯರು ಭಯದಿಂದ ದಿಕ್ಕೆಟ್ಟು ಥರಥರನೆ ನಡುಗಲು ಆರಂಭಿಸಿದರು. `ಇಲ್ಲ ಮುನಿಗಳೆ, ಹೀಗೆಲ್ಲ ಆಗಿಲ್ಲ. ನರಮಾಂಸವನ್ನು ನಾವು ಎಂದಿಗೂ ಅಡುಗೆಗೆ ಉಪಯೋಗಿಸುವುದಿಲ್ಲ!’ ಎಂದ ರಾಜ.

ವಸಿಷ್ಠರು ಕ್ರೋಧಗೊಂಡು ಕೇಳಿದರು : `ಆದರೆ ಇಂದು ನಿನ್ನ ಭೋಜನದಲ್ಲಿ ನರಮಾಂಸ ಇದೆ. ಇದೇನು ನಿನ್ನ ಷಡ್ಯಂತ್ರ? ನಮ್ಮ  ತಪಸ್ಸು ಕೆಡಿಸಿ, ನಾವು ನರಕಕ್ಕೆ ಹೋಗಬೇಕೆಂದು ಮಾಡಿದ್ದೀಯಾ?’

ಸೌದಾಸ ಮಾತನಾಡುವ ಮೊದಲೇ ವಸಿಷ್ಠರು ಕೂಗಿದರು: `ರಾಜನ್‌ ನಿನ್ನ ಪಾಪಕ್ಕೆ ಪ್ರಾಯಶ್ಚಿತ್ತವೇ ಇಲ್ಲ. ಗುರುದ್ರೋಹದಂತಹ  ಪಾಪವನ್ನು ಎಸಗಿದ್ದೀಯ. ನಿನ್ನದು ರಾಕ್ಷಸೀ ಕೃತ್ಯ!’ – ಎಂದವರೆ ಕೈಲಿದ್ದ ಕಮಂಡಲದಿಂದ ನೀರು ತೆಗೆದುಕೊಂಡು, `ಇಂತಹ ಅಪರಾಧ ಮಾಡಿದ ನೀನು ನರಭಕ್ಷಕ ರಾಕ್ಷಸನಾಗಿ ಹೋಗು!’ ಎಂದು ಶಾಪದ ನೀರನ್ನು ಅವನ ಮೇಲೆಸೆದುಬಿಟ್ಟರು.

ಆಗಲೇ ದೊಡ್ಡದಾಗಿ ಗಹಗಹಿಸಿದ ಸದ್ದು ಇಡೀ ಆವರಣವನ್ನು ತಲ್ಲಣಗೊಳಿಸಿತು. `ಹ್ಹಹ್ಹಹ್ಹ…… ಸೌದಾಸ…… ನೀನು ವೃಥಾ ಕಾರಣ ನಮ್ಮಣ್ಣನನ್ನು ಕೊಂದುಬಿಟ್ಟೆ. ನಾನೀಗ ಅದರ ಸೇಡು ತೀರಿಸಿಕೊಂಡಿದ್ದೇನೆ. ಅಡುಗೆಯವನಾಗಿ ನಿನ್ನ ಪಾಕಶಾಲೆ ಪ್ರವೇಶಿಸಿ ವಸಿಷ್ಠರಿಗೆ ನರಮಾಂಸ ಬಡಿಸಿ ನೀನೂ ನರರಾಕ್ಷಸನಾಗುವಂತೆ ಮಾಡಿಬಿಟ್ಟಿದ್ದೇನೆ. ಬೇಗ ಬಾ, ನಾವಿಬ್ಬರೂ ಒಂದೇ ವರ್ಗದವರು, ನರ ಭಕ್ಷಕರು. ಕಾಡಿಗೆ ಹೋಗೋಣ. ನರಭಕ್ಷಣ ಮಾಡೋಣ!’ – ಹೀಗೆನ್ನುತ್ತ ಯಾವುದೊ ರೂಪದಲ್ಲಿ ಆ ರಾಕ್ಷಸ ಅರಮನೆಯಿಂದ ಹೊರಗೆ  ಹಾರಿಹೋದ.

ವಸಿಷ್ಠರ ಮುಖ ಬಾಡಿತು. ತಮ್ಮ ಅವಸರದ ಕೋಪದಿಂದ ತಪ್ಪಾಗಿ ಹೋಗಿದೆಯೆಂದು ಅವರಿಗೆ ಗೊತ್ತಾಯಿತು. ಕೂಡಲೇ ಸೌದಾಸನತ್ತ ತಿರುಗಿ ಹೇಳಿದರು : `ರಾಜನ್‌, ನನ್ನನ್ನು ಕ್ಷಮಿಸು, ವಿಷಯ ತಿಳಿಯದೆ, ನಿನ್ನಿಂದಲೇ ತಪ್ಪಾಗಿದೆ ಎಂದು ಶಪಿಸಿಬಿಟ್ಟೆ. ಕೊಟ್ಟ ಶಾಪವನ್ನು ಹಿಂತಿರುಗಿ ತೆಗೆದುಕೊಳ್ಳಲಾಗುವುದಿಲ್ಲ. ಆದರೆ, ನಾನು ದೀರ್ಘ ತಪಸ್ಸಿನಲ್ಲಿ ತೊಡಗಿ ಇದಕ್ಕೆ ಪ್ರಾಯಶ್ಚಿತ್ತ ಮಾಡಿಕೊಳ್ಳುತ್ತೇನೆ!’

ತನ್ನ ತಪ್ಪಲ್ಲದಿದ್ದರೂ ತನ್ನನ್ನು ಹೀಗೆ ಕ್ರೂರವಾಗಿ ಶಪಿಸಿದ್ದಕ್ಕಾಗಿ ಸೌದಾಸ ಮಹಾರಾಜನಿಗೂ ವಸಿಷ್ಠರ ಮೇಲೆ ದೊಡ್ಡದಾಗಿ ಕೋಪ ಬಂದು ಬಿಟ್ಟಿತು. ತತ್‌ಕ್ಷಣವೇ ತನ್ನ ಕೈಯಲ್ಲೂ ಜಲವನ್ನು ತುಂಬಿಕೊಂಡು ಶಾಪ ಮಂತ್ರವನ್ನು  ಜಪಿಸುತ್ತ ವಸಿಷ್ಠರನ್ನು  ಶಪಿಸಲು ಮುನ್ನುಗ್ಗಿದ. ಆದರೆ ಅಷ್ಟರಲ್ಲಿ ಅವನ ಹೆಂಡತಿ ಮದಯಂತಿ ಅವನನ್ನು ಕೈಹಿಡಿದು ತಡೆದಳು. `ಸ್ವಾಮಿನ್‌ ಬೇಡ ಬೇಡ. ನೀವೂ ದುಡುಕಬೇಡಿ. ಆಗಿದ್ದಾಗಿ ಹೋಯಿತು. ಗುರುಗಳು ನಮಗಿಂತಲೂ ದೊಡ್ಡವರು, ಮಹಾ ತಪಸ್ವಿಗಳು. ಅವರನ್ನು ನಮಗೆ ಸಮ ಸಮವಾಗಿ ಸವಾಲಿಗೆಳೆಯುವುದು ಸಲ್ಲದು. ಕೈಯಲ್ಲಿ ತೆಗೆದುಕೊಂಡ ಜಲವನ್ನು ಚೆಲ್ಲಿ ಬಿಡಿ!’ – ಎಂದು ಹೇಳಿದಳು. ಸೌದಾಸನಿಗೆ ತನ್ನ ತಪ್ಪಿನ ಅರಿವಾಗಿತ್ತು. `ಎಂತಹ ತಪ್ಪು ಮಾಡಿಬಿಡುತ್ತಿದ್ದೆ, ದೊಡ್ಡ  ಮಹರ್ಷಿಗಳ ಮೇಲೆ ನನ್ನ ಪ್ರತಾಪ ತೋರಿಸಲು ಹೊರಟೆನಲ್ಲ!’ – ಎಂದುಕೊಂಡವನೇ ಸೌದಾಸ ಮಹಾರಾಜ ಜಲವನ್ನು ತನ್ನ ಕೈಯಲ್ಲೆ ಉಳಿಸಿಕೊಂಡ. ಶಾಪ ಮಂತ್ರ ಜಪಿಸಿದ್ದ ಜಲವನ್ನೀಗ ಏನು ಮಾಡುವುದು? ಅಷ್ಟೊಂದು ಯೋಗ ಶಕ್ತಿ ಭೂಮಿಯ ಮೇಲೆ ಬಿದ್ದರೆ ಅನಾಹುತವಾಗಲಾರದೆ ಇರುತ್ತದೆಯೇ? ಸುತ್ತಮುತ್ತಲ ಜೀವಿಗಳಿಗೆಲ್ಲ ಶಾಪ ತಟ್ಟುತ್ತದೆ. ಏನು ಮಾಡುವುದೆಂದು ತೋರದೆ ಸೌದಾಸ ಆ ಮಂತ್ರಜಲವನ್ನು  ತನ್ನ ಪಾದಗಳ ಮೇಲೆ ಪ್ರೋಕ್ಷಿಸಿಕೊಂಡ. ಕೂಡಲೇ ಅವನ ಪಾದಗಳೆರಡೂ ಕಪ್ಪಗಾದವು. ಅವನು ಕಲ್ಮಾಷಪಾದನೆನೆಸಿಕೊಂಡ.

ವಸಿಷ್ಠರು ಹೇಳಿದರು : `ರಾಜನ್‌, ನನ್ನದೊಂದು ತಪ್ಪಿನಿಂದ ನಿನಗೆ ವಿಧವಿಧವಾಗಿ ತೊಂದರೆಯಾಯಿತು. ನಿನಗಾಗಿ ನಾನು ಪ್ರಾರ್ಥಿಸುತ್ತೇನೆ. ನನ್ನ ಹನ್ನೆರಡು ವರ್ಷಗಳ ತಪಸ್ಸಿನ ಅನಂತರ ನಿನಗೆ ನರರಾಕ್ಷಸರೂಪ ಹೋಗಿ ಮನುಷ್ಯರೂಪ ಬರುತ್ತದೆ!’

ವಸಿಷ್ಠರು  ಹೊರಟುಹೋದರು. ಸೌದಾಸ ಮಹಾರಾಜ ನರಭಕ್ಷಕ ರಾಕ್ಷಸನಾಗಿ ಹೋದ. ದಿಕ್ಕೆಟ್ಟವನ ಹಾಗೆ ಕಾಡು ಮೇಡುಗಳಲ್ಲಿ ಅಲೆಯತೊಡಗಿದ. ಹಸಿವಾದಾಗಲೆಲ್ಲ ಕಣ್ಣಿಗೆ ಕಂಡ ಮನುಷ್ಯರನ್ನು ನಿರ್ದಯಿಯಾಗಿ ತಿನ್ನತೊಡಗಿದ.

ಮಿತ್ರಸಹ ಎಂದೂ ಕರೆಸಿಕೊಳ್ಳುತ್ತಿದ್ದ  ಸೌದಾಸ ಅಂದಿನಿಂದ ಕಲ್ಮಾಷಪಾದ ಎಂದೂ ಕರೆಸಿಕೊಂಡ.

ಅರಣ್ಯದಲ್ಲಿ ಸೌದಾಸನ ರಾಕ್ಷಸ ಬದುಕು ಮುಂದುವರಿಯಿತು. ಅನೇಕ ವರ್ಷಗಳು ನರಭಕ್ಷಕನಾಗಿಯೇ ಅವನ ಜೀವನ ಸಾಗಿತು.

ಹೀಗೆಯೇ ಒಂದು ದಿವಸ –

ಸೌದಾಸ ನರಭಕ್ಷಕನಿಗೆ ಬಹಳ ಹಸಿವಾಯಿತು. ತಡೆದುಕೊಳ್ಳಲಾಗದಷ್ಟು ಹಸಿವು. ಹಿಡಿದು ತಿನ್ನಲು ಎದುರು ಯಾರೂ ಕಾಣಿಸಲಿಲ್ಲ. ಅವನ ಹಪಾಪಿತನ ಹೆಚ್ಚಾಯಿತು. ಅಸಹನೆ ಹೆಚ್ಚಿತು. ಎಲ್ಲೆಲ್ಲೂ ಸುತ್ತಾಡತೊಡಗಿದ. ಆಗಲೇ ಅವನಿಗೆ ಕಾಡಿನ ಪೊದೆಗಳ ಬದಿಯಲ್ಲಿ ಸುರತ ಕ್ರಿಯೆಯಲ್ಲಿ ತೊಡಗಿರುವ ಬ್ರಾಹ್ಮಣ ದಂಪತಿ ಕಂಡರು.

ಸೌದಾಸನಿಗೆ ಸಂತೋಷವಾಯಿತು. ಅವನ ರಾಕ್ಷಸ ಗುಣ ಕೆಲಸ ಮಾಡಿತು. ನಿರ್ದಾಕ್ಷಿಣ್ಯವಾಗಿ ನಿಷ್ಕರುಣೆಯಿಂದ ಮುನ್ನುಗ್ಗಿ ದಷ್ಟಪುಷ್ಟವಾಗಿದ್ದ ಆ ಬ್ರಾಹ್ಮಣನನ್ನು ಹಿಡಿದುಕೊಂಡ. ಕೂಡಲೇ ಆ ಬ್ರಾಹ್ಮಣ ಸ್ತ್ರೀ ಅಡ್ಡ ಬಂದಳು. ಈ ರಾಕ್ಷಸನನ್ನು ನೋಡಿದ ಕೂಡಲೇ ಅವನು ಶಾಪಗ್ರಸ್ತ ಸೌದಾಸ ಮಹಾರಾಜನೆಂದು ಆ ಪತಿವ್ರತಾ ಶಿರೋಮಣಿಗೆ ಗೊತ್ತಾಗಿ ಹೋಗಿತ್ತು.

ಕೈ ಅಡ್ಡ ನೀಡಿ ಆಕೆ ಹೇಳಿದಳು : `ಹೇ ವೀರನೇ ನೀನು ನಿಜವಾಗಿಯೂ ಒಬ್ಬ  ನರರಾಕ್ಷಸನಲ್ಲ. ನಿಜವಾಗಿ ಹೇಳಬೇಕಾದರೆ ನೀನು ಮಹಾರಾಜ ಇಕ್ಷ್ವಾಕು ವಂಶಜರಲ್ಲಿ ಒಬ್ಬ ಗೌರವಾನ್ವಿತ ವ್ಯಕ್ತಿ. ಮಹಾರಾಜ, ಮಹಾಯೋಧ, ನಿನ್ನ ಪತ್ನಿ ಮದಯಂತಿ, ಪುಣ್ಯವಂತೆ, ದಯಾಶೀಲೆ, ಧರ್ಮಭೀರು. ಇಂತಹ ಮಹಾನ್‌ ವಂಶದ ಮಹಾರಾಜನಾದ ನೀನು  ಶಾಪಗ್ರಸ್ತನಾಗಿ ಹೀಗಾಗಿದ್ದೀಯ. ಬಹುಬೇಗ ನಿನ್ನ ಶಾಪವಿಮೋಚನೆಯಾಗಲಿದೆ. ಇಂತಹ ಸಂದರ್ಭದಲ್ಲಿ ನೀನು ಹೀಗೆ ಅಧಾರ್ಮಿಕವಾಗಿ ವರ್ತಿಸಬಾರದು. ನಾನೀಗ ಪುತ್ರವತಿಯಾಗಲು ಬಯಸಿ ನನ್ನ ಗಂಡನೊಂದಿಗೆ ಸೇರುತ್ತಿದ್ದೇನೆ. ಇಂತಹ ಸಮಯದಲ್ಲಿ ನೀನು ನಮ್ಮಿಬ್ಬರನ್ನೂ ಬೇರೆ ಮಾಡಬಾರದು, ಗರ್ಭಧಾರಣೆ ಆಗುವಂತೆ ಬಿಡಬೇಕು!’ ಆದರೂ ಸೌದಾಸ ಗಂಡನನ್ನು ಬಿಡದಿದ್ದಾಗ ಆಕೆ ಮತ್ತೆ ಹೇಳಿದಳು : `ಹೇ, ರಾಜನೇ, ಹೇ, ಶೂರನೇ, ಈ ಮಾನವ ದೇಹವು – ಜಗತ್ತಿನ ಪ್ರಯೋಜನಕ್ಕೆಂದು ಉದ್ದೇಶಿತವಾಗಿದೆ. ನೀನು ಈ ದೇಹವನ್ನು  ಅಕಾಲಿಕವಾಗಿ ಕೊಲ್ಲುವೆಯಾದರೆ, ಮಾನವ ಜೀವನದ ಸಕಲ ಪ್ರಯೋಜನಗಳನ್ನೂ  ಕೊಲ್ಲುತ್ತಿರುವೆ ಎಂದೇ ಹೇಳಬೇಕಾಗುತ್ತದೆ! ರಾಜನೆ, ನನ್ನ  ಗಂಡ ಘನ ವಿದ್ವಾಂಸನೂ, ತಪೋನಿರತನೂ, ಸಕಲ ಜೀವಿಗಳ ಹೃದಯಾಂತರಾಳದಲ್ಲಿ ವಾಸಿಸುವ ಪರಮಾತ್ಮನನ್ನು ಪೂಜಿಸಲು ಕಾತರನೂ ಆಗಿರುವ ಬ್ರಾಹ್ಮಣನಾಗಿದ್ದಾನೆ! ಪ್ರಭುವೇ, ನೀನು ಧರ್ಮ ತತ್ವಗಳನ್ನು ಸಂಪೂರ್ಣವಾಗಿ ತಿಳಿದವನು. ಹೇಗೆ ಮಗನು ತಂದೆಯಿಂದ ಹತನಾಗಲು ಎಂದೂ ಅರ್ಹನಲ್ಲವೋ, ಹಾಗೆ ಈ ಬ್ರಾಹ್ಮಣನು ರಾಜನಾದ, ಪ್ರಜಾ ರಾಕ್ಷಸನಾದ ನಿನ್ನಿಂದ ರಕ್ಷಿತನಾಗಬೇಕೆ ವಿನಾ ನೀನವನನ್ನು ಕೊಲ್ಲಲಾಗದು. ನಿನ್ನಂತಹ ರಾಜರ್ಷಿಯಿಂದ ಹತನಾಗಲು ಈ  ಬ್ರಾಹ್ಮಣನು  ಹೇಗೆ ತಾನೆ ಅರ್ಹನಾಗುತ್ತಾನೆ? ವಿದ್ವಾಂಸರನ್ನು ಗೌರವಿಸುವ ನೀನು ವೇದಶಾಸ್ತ್ರ ಪಾರಂಗತನಾದ ಬ್ರಾಹ್ಮಣನನ್ನು ವಧಿಸಲು ಹೇಗೆ ತಾನೇ ಧೈರ್ಯ ಮಾಡುತ್ತಿದ್ದೀಯ. ಬ್ರಾಹ್ಮಣ ಹತ್ಯೆ, ಭ್ರೂಣ ಹತ್ಯೆ ಅಥವಾ ಗೋಹತ್ಯೆಗೆ ಸಮಾನ. ರಾಜನೆ, ನನ್ನ ಪತಿ ಇಲ್ಲದೆ ನಾನೊಂದು ಕ್ಷಣವೂ ಬದುಕಿರಲಾರೆ, ಪತಿಯಿಲ್ಲದೆ ನಾನು ಶವ ಸಮಾನಳು!’

ರಾಕ್ಷಸ ರೂಪಿ ಸೌದಾಸನಿಗೆ ಇದು ಯಾವುದೂ ಮನಸ್ಸಿಗೆ ತಾಗಲಿಲ್ಲ. ಆ ರಾಕ್ಷಸನ ಹಸಿವು ಅವನನ್ನು ರಾಕ್ಷಸನಾಗಿಯೇ ನಡೆದುಕೊಳ್ಳುವಂತೆ ಮಾಡಿತು. ಹಿಡಿದುಕೊಂಡ ಜೀವವನ್ನು ಬಿಡದೆ ಗಬಗಬನೆ ತಿಂದು ಹಾಕಿಬಿಟ್ಟ. ಬ್ರಾಹ್ಮಣ ಪತ್ನಿ ಎಷ್ಟು ಹೇಳಿದರೂ ಕೇಳಲಿಲ್ಲ.

ಸುಶೀಲೆಯಾದ ಆ ಬ್ರಾಹ್ಮಣ ಪತ್ನಿ ವಿಲಾಪಿಸಿದಳು. ಶೋಕ ತಪ್ತಳಾದಳು. ಇನ್ನೇನು ತನ್ನ ಪತಿಯಿಂದ ತನ್ನ ಗರ್ಭ ತುಂಬುತ್ತದೆ ಎಂದುಕೊಳ್ಳುವಾಗಲೇ ಗರ್ಭದಾನಿಯನ್ನೆ ನಾಶವಾಗಿಸಿದ್ದನ್ನು ಅವಳು ಸಹಿಸಿಕೊಳ್ಳಲಾಗಲಿಲ್ಲ. ಅವಳು ಎಂದೆಂದಿಗೂ ಸಂತಾನ ಹೀನಳೇ ಆಗಿ ಉಳಿಯುವಂತಾಯಿತು. ಆ ಪತಿವ್ರತೆಯ ಯೋಗಾಗ್ನಿ ಕಿಡಿಗೆದರಿತು. ರೋಷ ಒತ್ತರಿಸಿಕೊಂಡು ಬಂದಿತು. ಕೂಡಲೇ ಅವಳು ರಾಜನನ್ನು ಶಪಿಸಿದಳು.

`ಹೇ ಮೂರ್ಖನೇ, ಪಾಪಿಯೇ, ಸಂತಾನಾತುರಳಾಗಿದ್ದ ನಾನು ನನ್ನ ಪತಿದೇವರಿಂದ ಶುಕ್ರದಿಂದ ಮಗುವನ್ನು ಪಡೆಯಬೇಕೆಂದಿದ್ದಾಗಲೇ, ನೀನು  ನನ್ನ ಪತಿಯನ್ನು ತಿಂದು ಹಾಕಿದ್ದೀಯ. ಮುಂದೆ ನೀನೂ ಸಂತಾನಾಕಾಂಕ್ಷಿಯಾಗಿ ನಿನ್ನ ಹೆಂಡತಿಯನ್ನು ಸೇರಿದಾಗ ಆ ಆನಂದ ಮುಗಿಯುವ ಮೊದಲೇ ನೀನು ಸತ್ತು ಹೋಗುತ್ತೀಯ – ಇದು ನನ್ನ ಶಾಪ, ನಿನ್ನ ದುರ್ನಡತೆಯ ಫಲ!’

ಆ ಬ್ರಾಹ್ಮಣ ಪತ್ನಿ ಪತಿಯ ಶರೀರಕ್ಕೆ ಬೆಂಕಿ ಇಟ್ಟು ಆ ಚಿತೆಯನ್ನು ತಾನೂ ಪ್ರವೇಶಿಸಿದಳು. ಗಂಡ ಸೇರಿದ ಗುರಿಯನ್ನು ತಾನು ಕೂಡ ತಲುಪಿದಳು.

ನರಭಕ್ಷಕ ರಾಕ್ಷಸ ರೂಪದಲ್ಲಿದ್ದಾಗ ಅವನಿಗೆ ಏನೂ ಅನ್ನಿಸಲಿಲ್ಲ. ಆದರೆ, ಹನ್ನೆರಡು ವರ್ಷಗಳಾದ ಮೇಲೆ ರಾಕ್ಷಸ ರೂಪ ಕಳೆದ ಮೇಲೆ, ಆ ಶಾಪದ ಫಲ ಅವನನ್ನು ಕಾಡಿತು. ಹನ್ನೆರಡು ವರ್ಷಗಳಾದ ಮೇಲೆ ಹೆಂಡತಿಯನ್ನು ಕಂಡು ಆಸೆಯಿಂದ ಸೇರಲು ಬಯಸಿದಾಗ, ಅವನ ಹೆಂಡತಿ ಮದಯಂತಿ ಅವನಿಗೆ ಆ ಬ್ರಾಹ್ಮಣ ಪತ್ನಿಯ ಶಾಪವನ್ನು ನೆನಪಿಗೆ ತಂದು, ಸಮಾಗಮ ಸಾಧ್ಯವಿಲ್ಲ ಎಂದು ಹೇಳಿದಳು.

ಸೌದಾಸನಿಗೆ ಆ ಕ್ಷಣದಲ್ಲಿಯೇ ಎಲ್ಲವೂ ನಶ್ವರವೆನಿಸಿತು. ರಾಜವೈಭೋಗದ ಎಲ್ಲ ಸುಖಗಳನ್ನೂ ತ್ಯಜಿಸಿದ. ಆದರೆ, ಮುಂದೆ ಈ ಸಾಮ್ರಾಜ್ಯ ಆಳಲು ಒಬ್ಬ ವಾರಸುದಾರ ಬೇಕೇ ಬೇಕಲ್ಲವೇ? ತನ್ನ ಹೆಂಡತಿಗೆ ಗರ್ಭದಾನ ಮಾಡುವಂತೆ ವಸಿಷ್ಠರನ್ನು ಪ್ರಾರ್ಥಿಸಿಕೊಂಡ.

ಗರ್ಭ ತುಂಬಿದರೂ, ಏಳು ವರ್ಷಗಳಾದರೂ ಮದಯಂತಿ ಹೆರಲಿಲ್ಲ. ಅದನ್ನು ನೋಡಿ ವಸಿಷ್ಠರು ಅವಳ ಗರ್ಭವನ್ನು ಕಲ್ಲಿನಿಂದ ಜಜ್ಜಿದರು. ಮದಯಂತಿಗೆ ಹೆರಿಗೆಯಾಯಿತು. ಹುಟ್ಟಿದ ಮಗುವಿಗೆ ಅಶ್ಮಕ (ಕಲ್ಲಿನಿಂದ ಹುಟ್ಟಿದವನು) ಎಂದು ಕರೆದರು. ಹೀಗೆ ಈ ವಂಶ ಮುಂದುವರಿಯಿತು. ಅಶ್ಮಕನಿಗೆ ಬಾಲಿಕ ಜನಿಸಿದ. ಈ ಬಾಲಿಕನನ್ನು ಯಾವಾಗಲೂ ಸ್ತ್ರೀಯರು ಸುತ್ತುವರಿದಿರುತ್ತಿದ್ದರು. ಆ ಕಾಲದಲ್ಲಿ  ಪರಶುರಾಮ ಕ್ಷತ್ರಿಯರನ್ನೆಲ್ಲ ನಾಶ ಮಾಡಲು ಪಣ ತೊಟ್ಟಿದ್ದ. ಬಹುಪಾಲು ಕ್ಷತ್ರಿಯರು ಇಲ್ಲವಾದರು. ಆದರೆ ಸ್ತ್ರೀಯರಿಂದ ಆವರಿಸಲ್ಪಟ್ಟಿದ್ದರಿಂದ ಬಾಲಿಕ, ಪರಶುರಾಮನ ದೃಷ್ಟಿಗೆ ಬೀಳದೆ ಉಳಿದುಕೊಂಡ. ಈ ಕಾರಣದಿಂದಲೇ ಅವನು ನೀರೀಕವಚನೆಂದೂ ಹೆಸರು ಗಳಿಸಿದ್ದಲ್ಲದೆ, ಮುಂದಿನ ಕ್ಷತ್ರಿಯರ ಮೂಲ ಪುರುಷನೂ ಆದ. ಕ್ಷತ್ರಿಯರ  ಪೀಳಿಗೆಯ ಮೂಲ ಪುರುಷನಾದ್ದರಿಂದ ಅವನಿಗೆ ಮೂಲಕನೆಂದೂ ಹೆಸರಾಯಿತು.

ಬಾಲಿಕನಿಗೆ ದಶರಥ ಹುಟ್ಟಿದ, ದಶರಥನಿಗೆ ಐಡವಿಡಿ ಎನ್ನುವವನು ಹುಟ್ಟಿದ. ಐಡವಿಡಿಗೆ ವಿಶ್ವಸಹ, ವಿಶ್ವಸಹನಿಗೆ ಮುಂದೆ ಪ್ರಖ್ಯಾತನಾದ ಖಟ್ವಾಂಗ ಹುಟ್ಟಿದ.

ಖಟ್ವಾಂಗ ಯುದ್ಧದಲ್ಲಿ ಅಜೇಯನಾಗಿದ್ದ. ರಾಕ್ಷಸರೊಂದಿಗಿನ ಯುದ್ಧಗಳಲ್ಲಿ ದೇವತೆಗಳಿಗೆ ಸಹಾಯ ಮಾಡುತ್ತಿದ್ದ. ಸಂತೋಷಗೊಂಡ ದೇವತೆಗಳು ಏನಾದರೊಂದು ವರವನ್ನು ಕೊಡಲು ಬಯಸಿದಾಗ, ತನಗೆ ಆಯುಸ್ಸು ಎಷ್ಟು ಉಳಿದಿದೆ ಎಂದು ಕೇಳಿದ. ದೇವತೆಗಳು ಥಟ್ಟನೆ ಹೇಳಿದರು: `ರಾಜನ್‌, ನಿನಗೆ ಉಳಿದಿರುವುದು ಬರೀ ಇನ್ನೊಂದು ಕ್ಷಣ ಆಯುಸ್ಸು ಮಾತ್ರ!’

ಖಟ್ವಾಂಗನಿಗೆ ಬೇರೇನೂ ಬೇಕಾಗಲಿಲ್ಲ. ತನ್ನ ಉಳಿದ ಜೀವಿತವನ್ನು ದೇವೋತ್ತಮ ಪರಮ ಪುರುಷನ ಪಾದ ಪದ್ಮಗಳಲ್ಲಿ ತೊಡಗಿಸಿಕೊಂಡ. ಖಟ್ವಾಂಗನ ಮೈಮನಸ್ಸುಗಳೆಲ್ಲವೂ ಭಗವಂತನ ಭಕ್ತಿಸೇವೆಯಲ್ಲಿ ನೆಲೆಗೊಂಡವು.

ಆ ಅಂತಿಮ ಕ್ಷಣದಲ್ಲಿ ಖಟ್ವಾಂಗ ಹೀಗೆ ಯೋಚಿಸಿದನು –

`ನನ್ನ ವಂಶದವರು ಪೂಜಿಸುವ ಬ್ರಾಹ್ಮಣ ಸಂಸ್ಕೃತಿ ಮತ್ತು ಬ್ರಾಹ್ಮಣರು ನನಗೆ ನನ್ನ ಜೀವಕ್ಕಿಂತಲೂ ಹೆಚ್ಚು ಪ್ರಿಯರಾದವರು. ಬಾಲ್ಯದಲ್ಲಿ  ಕೂಡ ನಾನು ಕ್ಷುದ್ರ ವಿಷಯಗಳಿಂದಾಗಲಿ ಅಥವಾ ಅಧಾರ್ಮಿಕ ತತ್ವಗಳಿಂದಾಗಲಿ ಆಕರ್ಷಿತನಾದವನಲ್ಲ. ದೇವೋತ್ತಮ ಪರಮ ಪುರುಷನಿಗಿಂತಲೂ ಹೆಚ್ಚು ಗಣನೀಯವಾದುದು. ನನಗೇನೂ ಕಂಡು ಬರಲಿಲ್ಲ. ಸಕಲ ಐಹಿಕ ವರಗಳಿಗಿಂತಲೂ ದೇವೋತ್ತಮ ಪರಮ ಪುರುಷನ ಬಹಿರಂಗ ಶಕ್ತಿಯಿಂದ ಸೃಷ್ಟಿಯಾಗಿರುವ ವಸ್ತುಗಳಲ್ಲಿನ ಮೋಹವನ್ನು ನಾನೀಗ ಸಂಪೂರ್ಣ ತೊರೆದಿದ್ದೇನೆ. ಅವನ ಚಿಂತೆಯಲ್ಲಿ ಕರಗಿ ನಾನೀಗ ಅವನಿಗೆ ಸಂಪೂರ್ಣ ಶರಣಾಗತನಾಗಿದ್ದೇನೆ. ವ್ಯಕ್ತಿ ವ್ಯಾಮೋಹ ನನ್ನಿಂದ ಹೊರಟು ಹೋಗಿದೆ!’

ಕೊನೆಯ ಮಾತುಗಳು ಎಂಬಂತೆ ಸೂತ ಮುನಿಗಳು ಹೇಳಿದರು :

ನಿರ್ಬಂಧಃ ಕೃಷ್ಣ ಸಂಬಂಧೇ ಯುಕ್ತಂ ವೈರಾಗ್ಯಂ ಉಚ್ಯತೇ – ಎಂಬಂತೆ ಎಲ್ಲ  ಪ್ರಾಪಂಚಿಕವಾದ ವಸ್ತುಗಳನ್ನು ಪ್ರಭುವಿನ ಪ್ರೀತಿಯುತ ಸೇವಾ ಸಂಬಂಧದಲ್ಲಿ ತೊಡಗಿಸಿದರೆ ಅಂತಹವನು, ಯುಕ್ತ ವೈರಾಗ್ಯ, ಎಂದರೆ ನಿಜವಾದ ವಿರಕ್ತಿಯಲ್ಲಿ ನೆಲೆಗೊಳ್ಳುತ್ತಾನೆ. ಈ ಐಹಿಕ ಜಗತ್ತಿನಲ್ಲಿ ವ್ಯಕ್ತಿಯು ಯಾವುದನ್ನೂ ಇಂದ್ರಿಯ ತೃಪ್ತಿಗಾಗಿ ಸ್ವೀಕರಿಸಬಾರದು. ಎಲ್ಲವನ್ನೂ ಭಗವಂತನ ಸೇವೆಗೆಂದೇ ಸ್ವೀಕರಿಸಬೇಕು. ಇದು ಆಧ್ಯಾತ್ಮಿಕ ಜಗತ್ತಿನ ಮನೋಧರ್ಮವಾಗಿದೆ. ಪ್ರಿಯ ಮುನಿಗಳೇ, ಹೀಗೆ ಖಟ್ಟಾಂಗ ಮಹಾರಾಜನು ಭಗವಂತನ ಸೇವೆ ಸಲ್ಲಿಸುವುದರಿಂದ ಉಂಟಾದ ತನ್ನ ಉನ್ನತ ಬುದ್ಧಿಯಿಂದ ತಮೋಗುಣ ಪೂರ್ಣವಾದ ಈ ದೇಹದ ಜೊತೆಗಿನ ಮಿಥ್ಯಾ ಸಂಬಂಧವನ್ನು ತೊರೆದನು. ನಿರಂತರ ದಾಸನಾದ ತನ್ನ ಮೂಲ ಸ್ಥಾನದಲ್ಲಿ ನಿಂತು ಭಗವತ್ಸೇವಾ ಕಾರ್ಯದಲ್ಲಿ ಮಗ್ನನಾದನು.

`ವಾಸುದೇವನೂ ಕೃಷ್ಣನೂ ಆದ ದೇವೋತ್ತಮ ಪರಮ ಪುರುಷನು ನಿರಾಕಾರನಾಗಲಿ ಅಥವಾ ಶೂನ್ಯವಾಗಲಿ ಅಲ್ಲ. ಅವನು ನಿರಾಕಾರನು, ಶೂನ್ಯನು ಎಂದು ಭಾವಿಸುವ ಮಂದಮತಿಗಳಿಗೆ ಅವನನ್ನು ಅರಿಯುವುದು ಬಹು ಕಷ್ಟ. ಶುದ್ಧ ಭಕ್ತರು ಭಗವಂತನನ್ನು ಅರಿಯುತ್ತಾರೆ ಹಾಗೂ ಕೀರ್ತಿಸುತ್ತಾರೆ! ಮಹಾರಾಜ ಖಟ್ವಾಂಗನು ದೇವೋತ್ತಮ ಪರಮ ಪುರುಷನ ಆಶ್ರಯವನ್ನು ಸ್ವೀಕರಿಸಿ, ತನ್ನ  ಸಂಪೂರ್ಣ ಶರಣಾಗತಿಯ ಕಾರಣ ಪರಿಪೂರ್ಣತೆಯನ್ನು ಗಳಿಸಿದನು!’

ಸೂತ ಮುನಿಗಳು ಉಪನ್ಯಾಸ ಮುಗಿಸಿ ಕೆಲ ಕಾಲ ಮೌನವಾಗಿ ಕುಳಿತರು. ಅವರ ಭಾವನೆಗಳಲ್ಲಿ  ಖಟ್ವಾಂಗನ ಬದುಕಿನ ಅಂತಿಮ ದಿವ್ಯ ಕ್ಷಣಗಳು ಬೆರೆತು ಮೆಲುಕು ಹಾಕುತ್ತಿತ್ತು. ತಮ್ಮ ಮುಂದೆ ಕುಳಿತಿರುವ ನೈಮಿಷಾರಣ್ಯದ ತಪಸ್ವಿಗಳಿಗೂ ಹಾಗೆ ಆಗಿದ್ದಿರಬಹುದು ಅನ್ನಿಸಿತವರಿಗೆ. ಆ ವನವಾಸಿಗಳೆಲ್ಲ ಕಣ್ಣುಗಳನ್ನು  ಮುಚ್ಚಿಕೊಂಡು ದೇವೋತ್ತಮನಲ್ಲಿ ಲಯರಾದಂತಿತ್ತು.

ಸೂತ ಮುನಿಗಳು ಕೆಲ ನಿಮಿಷಗಳು ಕಳೆದು ಹೇಳಿದರು:

`ಇಂದು ನೈಮಿಷಾರಣ್ಯದ ತುಂಬಾ ದೈವಿಕತೆ ಪರಿಪೂರ್ಣ ಭಾವ ಹರಡಿಕೊಂಡಿರುತ್ತದೆ. ಖಟ್ಟಾಂಗನಂತಹ ಪರಿಶುದ್ಧನ ಕಥೆಯನ್ನು ಹೇಳಿದವರಿಗೆ, ಕೇಳಿದ ಪರಿಸರಕ್ಕೆ ಸಾರ್ಥಕತೆಯ ಭಾವವುಂಟಾಗುವುದು ಖಂಡಿತ. ಮುನಿಗಳೆ, ಮುಂದೆ ನೀವು  ದೇವೋತ್ತಮ ಪರಮ ಪುರುಷ ಶ್ರೀರಾಮಚಂದ್ರನ ಕಥೆಯನ್ನು ಕೇಳುತ್ತೀರಿ. ನಾನೂ ಅದನ್ನು ಹೇಳಿ ಕೃತಕೃತ್ಯನಾಗಲಿದ್ದೇನೆ!’

ಅವರು ಮಾತುಗಳನ್ನು ನಿಲ್ಲಿಸಿ ಎಲ್ಲೆಲ್ಲೂ ಮೌನ ಹರಡಿದ ಕೂಡಲೇ ಅಲ್ಲಲ್ಲಿಂದ ಕೆಲವು ಪಕ್ಷಿಗಳ ಕಲರವ ಹಿತವಾಗಿ ಎಲ್ಲ ಕಡೆಯೂ ಕೇಳತೊಡಗಿತು.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi