ತರಕಾರಿಗಳ ವಿಶೇಷ
– ಎಸ್.ವಿ. ಗಾಯತ್ರಿ ಶೆಣೈ
ಅವಿಯಲ್

ಬೇಕಾಗುವ ಪದಾರ್ಥ :
ಆಲೂಗೆಡ್ಡೆ – 100 ಗ್ರಾಂ
ದೊಣ್ಣೆ ಮೆಣಸಿನಕಾಯಿ – 100 ಗ್ರಾಂ
ಕ್ಯಾರೆಟ್ – 100 ಗ್ರಾಂ
ಹೀರೇಕಾಯಿ – 100 ಗ್ರಾಂ
ಬೀನ್ಸ್ – 100 ಗ್ರಾಂ
ನುಗ್ಗೆಕಾಯಿ – 2-3
ಮೇಲೆ ಹೇಳಿದ ತರಕಾರಿಗಳ ಬದಲಾಗಿ ನಿಮಗೆ
ಇಷ್ಟವಿರುವ ಯಾವುದೇ ತರಕಾರಿಯನ್ನು ಇದಕ್ಕೆ ಬಳಸಬಹುದು.
ತೆಂಗಿನಕಾಯಿ – 1
ಜೀರಿಗೆ – 2 ಟೀ ಚಮಚ
ಹಸಿಮೆಣಸಿನಕಾಯಿ – 5-6
ಕೊಬ್ಬರಿ ಎಣ್ಣೆ – 2 ದೊಡ್ಡ ಚಮಚ
ಒಣಮೆಣಸಿನಕಾಯಿ – 2-3
ಸಾಸಿವೆ – 2 ಚಿಕ್ಕ ಚಮಚ
ಅರಿಶಿನ ಪುಡಿ – 1 ಚಿಕ್ಕ ಚಮಚ
ಉಪ್ಪು – ರುಚಿಗೆ ತಕ್ಕಷ್ಟು
ಮಾಡುವ ವಿಧಾನ : ಮೊದಲು ಎಲ್ಲ ತರಕಾರಿಗಳನ್ನು ತೊಳೆದು ಶುಭ್ರಗೊಳಿಸಿ ಸುಮಾರು 1 1/2ಇಂಚು ಉದ್ದದ ತುಂಡುಗಳಾಗಿ ಕತ್ತರಿಸಿಕೊಳ್ಳಿ. ತರಕಾರಿ ಹೋಳುಗಳಿಗೆ ಅರಿಶಿನಪುಡಿ, ಬೇಕಾಗುವಷ್ಟು ಉಪ್ಪನ್ನು ಸೇರಿಸಿ ಕುಕ್ಕರಿನಲ್ಲಿ ಚೆನ್ನಾಗಿ ಬೇಯಿಸಿ, ತರಕಾರಿ ಬೇಯುವುದರೊಳಗೆ ತೆ೦ಗಿನತುರಿ, ಹಸಿಮೆಣಸಿನಕಾಯಿ ಮತ್ತು ಹಸಿಜೀರಿಗೆಯನ್ನು ಬೆರೆಸಿ ಮಸಾಲೆ ರುಬ್ಬಿಟ್ಟುಕೊಳ್ಳಿ.
ಆನಂತರ ಬೆಂದ ತರಕಾರಿಗೆ ರುಬ್ಬಿದ ಮಸಾಲೆ ಸೇರಿಸಿ ಅಗತ್ಯವಿದ್ದಲ್ಲಿ ಸ್ವಲ್ಪ ಉಪ್ಪು ಬೆರೆಸಿ 5-6 ನಿಮಿಷ ಕುದಿಸಿ.
ಅನಂತರ ಒಗ್ಗರಣೆ ಬಾಣಲೆಯಲ್ಲಿ ಕೊಬ್ಬರಿ ಎಣ್ಣೆ ಬಿಸಿಮಾಡಿ, ಅದಕ್ಕೆ ಸಾಸಿವೆ, ಕರಿಬೇವು ಹಾಕಿ ಒಗ್ಗರಣೆ ಮಾಡಿ. ಉರಿ ಆರಿಸಿದ ಅನಂತರ ಎಣ್ಣೆ ಬಿಸಿಯಿರುವಾಗಲೇ ಒಣಮೆಣಸಿನಕಾಯಿ ಚೂರುಗಳನ್ನು ಹಾಕಿ ಅದರಲ್ಲೇ ಬಾಡಿಸಿ. ಅವಿಯಲ್ಗೆ ಬೆರೆಸಿ, ಅವಿಯಲ್ ತಣ್ಣಗಾದ ಅನಂತರ, ಮೊಸರು ಸೇರಿಸಿ ಬಿಸಿಯಿರುವಾಗಲೇ, ಮೊಸರು ಬೆರೆಸಿದರೆ, ಅದು ಒಡೆದಂತಾಗಿ ರುಚಿಗೆಡುತ್ತದೆ. ತಣ್ಣಗಾದ ಅನಂತರ ಬೆರೆಸಿದರೆ ಉತ್ತಮ.
ಬಟಾಣಿ – ಬಟಾಟೆ ಗಸಿ

ಬೇಕಾಗುವ ಪದಾರ್ಥ :
ಆಲೂಗೆಡ್ಡೆ – 500 ಗ್ರಾಂ
ಹಸಿ ಬಟಾಣಿ – 200 ಗ್ರಾಂ
ತೆಂಗಿನಕಾಯಿ – 1
ಬ್ಯಾಡಗಿ ಒಣಮೆಣಸಿನಕಾಯಿ – 6-7
ಹುಣಸೆ ಹಣ್ಣು – 1/4 ಲಿಂಬೆಗಾತ್ರದಷ್ಟು
ಹಸಿ ಸಾಸಿವೆ – 1/2 ಚಿಕ್ಕ ಚಮಚ
ಕೊಬ್ಬರಿ ಎಣ್ಣೆ- 2 ದೊಡ್ಡ ಚಮಚ
ಉಪ್ಪು – ರುಚಿಗೆ ತಕ್ಕಷ್ಟು
ಇಂಗಿನ ಪುಡಿ – 3ಚಿಟಿಕೆ
ಅರಿಶಿನ ಪುಡಿ – 1/2 ಚಿಕ್ಕ ಚಮಚ
ಮಾಡುವ ವಿಧಾನ : ಮೊದಲು ಬಟಾಣಿ ಬಿಡಿಸಿಕೊಂಡು, ಆಲೂಗೆಡ್ಡೆ ಸಿಪ್ಪೆ ತೆಗೆದು ಬೇಕಾಗುವಷ್ಟು ನೀರು ಸೇರಿಸಿ ಅರಿಶಿನ ಪುಡಿಯೊಂದಿಗೆ ಕುಕ್ಕರಿನಲ್ಲಿ ಚೆನ್ನಾಗಿ ಬೇಯಿಸಿ. ಆರಿದ ಅನಂತರ ಆಲೂಗೆಡ್ಡೆಯನ್ನು ಚಿಕ್ಕ ಚಿಕ್ಕ ತುಂಡುಗಳಾಗಿ ಕತ್ತರಿಸಿ ಮತ್ತೆ ಉಪ್ಪು ಬೆರೆಸಿ ಸಣ್ಣ ಉರಿಯಲ್ಲಿ ಬೇಯಿಸಿ, ಈ ತರಕಾರಿಗೆ ಉಪ್ಪು ಚೆನ್ನಾಗಿ ಬೆರೆಯುವುದರೊಳಗೆ ತೆಂಗಿನತುರಿ, ಒಣಮೆಣಸಿನಕಾಯಿ, ಹುಣಸೆಹಣ್ಣು ಮತ್ತು ಹಸಿ ಸಾಸಿವೆ ಬೆರೆಸಿ ಮಸಾಲೆ ರುಬ್ಬಿಕೊಳ್ಳಿ.
ಈಗ ಚೆನ್ನಾಗಿ ಬೆಂದು ಕರಗಿದ ತರಕಾರಿಗೆ ಮಸಾಲೆ ಬೆರೆಸಿ 5-6 ನಿಮಿಷ ಕುದಿಸಿ. ಇಂಗಿನಪುಡಿಯನ್ನು ಸ್ವಲ್ಪ ನೀರಿನಲ್ಲಿ ಕದಡಿ ಗಸಿಗೆ ಬೆರೆಸಿ ಕುದಿಸಿ. ಬೇಕಾದಲ್ಲಿ ಕೊಬ್ಬರಿಎಣ್ಣೆಯನ್ನು ಬಿಸಿಮಾಡಿ, ಸಾಸಿವೆ, ಕರಿಬೇವು ಒಗ್ಗರಣೆ ಕೊಡಬಹುದು. ಇಲ್ಲದಿದ್ದಲ್ಲಿ ಬಿಸಿ ಕೊಬ್ಬರಿಎಣ್ಣೆಯನ್ನು ಮಾತ್ರ ಸೇರಿಸಿ.
ಹಸಿ ಬಟಾಣಿ ದೊರಕದಿದ್ದರೆ, ಒಣ ಬಟಾಣಿ ಬಳಸಬಹುದು. ಆದರೆ – ಒಣಬಟಾಣಿಯನ್ನು ಹಿಂದಿನ ದಿನ ರಾತ್ರಿ ನೀರಿನಲ್ಲಿ ನೆನಸಿಡಬೇಕು. ಆಗ ಮಾತ್ರ ಬಟಾಣಿ ಚೆನ್ನಾಗಿ ಬೇಯುತ್ತದೆ.
ತರಕಾರಿ ಚೌ ಚೌ

ಬೇಕಾಗುವ ಪದಾರ್ಥ:
ಕ್ಯಾರೆಟ್ – 200 ಗ್ರಾಂ
ಬೀನ್ಸ್ – 200 ಗ್ರಾಂ
ಆಲೂಗೆಡ್ಡೆ – 200 ಗ್ರಾಂ
ಹೂಕೋಸು – 1 (ಚಿಕ್ಕದು)
ಮೆಂತ್ಯ – 1/2 ಚಿಕ್ಕ ಚಮಚ
ಸಾಸಿವೆ – 1/4 ಚಿಕ್ಕ ಚಮಚ
ಅಚ್ಚಮೆಣಸಿನಕಾಯಿಪುಡಿ – ರುಚಿಗೆ ತಕ್ಕಷ್ಟು
ಅಡಿಗೆ ಎಣ್ಣೆ – 4-5 ದೊಡ್ಡ ಚಮಚ
ಲಿಂಬೆಹಣ್ಣು – 1/2 ಹೋಳು
ಉಪ್ಪು – ರುಚಿಗೆ ತಕ್ಕಷ್ಟು
ಅರಿಶಿನಪುಡಿ – 1/2 ಚಿಕ್ಕ ಚಮಚ
ಇಂಗಿನಪುಡಿ – 3-4 ಚಿಟಿಕ
ಮಾಡುವ ವಿಧಾನ : ಕ್ಯಾರೆಟ್ ಮತ್ತು ಆಲೂಗೆಡ್ಡೆ ಸಿಪ್ಪೆ ತೆಗೆಯಿರಿ, ಬೀನ್ಸ್ನ ನಾರು ತೆಗೆಯಿರಿ. ಅನಂತರ ನೀರಿನಲ್ಲಿ ತೊಳೆಯಿರಿ. ಎಲ್ಲ ತರಕಾರಿಗಳನ್ನು 2 ಇಂಚಿನಷ್ಟು ಉದ್ದುದ್ದ ಕತ್ತರಿಸಿ, ಹೂಕೋಸನ್ನು ಮತ್ತೊಮ್ಮೆ ಅರಿಶಿನ ಹಾಗೂ ಉಪ್ಪುನೀರಿನಲ್ಲಿ ಹಾಕಿ ತೊಳೆದರೆ ಉತ್ತಮ.
ಅನಂತರ ಒಂದು ದೊಡ್ಡ ಬಾಣಲೆಯಲ್ಲಿ ಅಡಿಗೆ ಎಣ್ಣೆ ಬಿಸಿಮಾಡಿ ಹೆಚ್ಚಿದ ತರಕಾರಿ ಹೋಳುಗಳನ್ನು ಹಾಕಿ ಚೆನ್ನಾಗಿ ಬಾಡಿಸಿ. ಬಾಡಿಸುವಾಗ ಅರಿಶಿನಪುಡಿ ಮತ್ತು ಅಗತ್ಯಕ್ಕೆ ತಕ್ಕಷ್ಟು ಉಪ್ಪು ಬೆರೆಸಿ ಅನಂತರ ಸ್ವಲ್ಪ ನೀರು ಚಿಮುಕಿಸಿ ಚೆನ್ನಾಗಿ ಬೇಯಿಸಿ.
ಅನಂತರ ಒಂದು ಚಿಕ್ಕ ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಬಿಸಿಮಾಡಿ ಅದರಲ್ಲಿ ಇಂಗಿನಪುಡಿಯನ್ನು ಹಾಕಿ, ಸಣ್ಣ ಉರಿಯಲ್ಲಿಟ್ಟು ಮೆಂತ್ಯ ಹಾಗೂ ಸಾಸಿವೆಯನ್ನು ಹುರಿಯಿರಿ. ಆರಿದ ಅನಂತರ ಅಚ್ಚಮೆಣಸಿನಕಾಯಿ ಪುಡಿ ಹಾಗೂ ಮಿಕ್ಕ ಮಸಾಲೆ ಪದಾರ್ಥಗಳನ್ನು ಪುಡಿಮಾಡಿಕೊಂಡು ಈ ಮಿಶ್ರಣವನ್ನು ಹದವಾಗಿ ಬೆಂದ ತರಕಾರಿಗೆ ಸೇರಿಸಿ ಚೆನ್ನಾಗಿ ಕಲೆಸಿ ಸುಮಾರು 5-6 ನಿಮಿಷ ಕುದಿಸಿ.
ಅನಂತರ ಲಿಂಬೆಹಣ್ಣಿನ ರಸ ಸೇರಿಸಿ 2-3 ನಿಮಿಷ ಮತ್ತೆ ಕುದಿಸಿ ಕೆಳಗಿಳಿಸಿ. ತರಕಾರಿ ಚೌಚೌ ಸಿದ್ಧ. ಲಿಂಬೆಹಣ್ಣಿನ ರಸಕ್ಕೆ ಬದಲಾಗಿ ಹುಣಸೇಹಣ್ಣಿನ ರಸಮಾಡಿಕೊಂಡು ಇದಕ್ಕೆ ಸೇರಿಸಲೂಬಹುದು.
ಈ ಎಲ್ಲ ಬಗೆಯ ಪದಾರ್ಥಗಳನ್ನು ಅನ್ನ, ಚಪಾತಿ ಅಥವಾ ಪೂರಿಯೊಂದಿಗೆ ಸ್ವೀಕರಿಸಬಹುದು. ಆದರೆ ಶ್ರೀ ರಾಧಾಕೃಷ್ಣರಿಗೆ ನೈವೇದ್ಯ ಮಾಡಿ ಸ್ವೀಕರಿಸುವುದನ್ನು ಮರೆಯದಿರಿ.






Leave a Reply