– ಪ್ರೊ.ಅ.ರಾ. ಮಿತ್ರ
ಪುರಂದರದಾಸರ ಸಾಹಿತ್ಯ, ಕೇವಲ ಭಕ್ತ್ಯಾವೇಶದಿಂದ ತುಂಬಿದ ಹಾಡಿನ ಮೋಡಿಯ ಪದಜೋಡಣೆಯಲ್ಲ. ಅದರ ಹಿಂದೆ ಗಂಭೀರ ಛಂದೋಬದ್ಧ ಲಕ್ಷಣಗಳು ಇವೆ. ವಿಶಿಷ್ಟ ಲಯವಿದೆ, ತಾಳಗತಿ ಇದೆ.
ದಾಸ ಸಾಹಿತ್ಯ, ಅದರಲ್ಲೂ ಪುರಂದರ ದಾಸರ ಕೃತಿಗಳ ಬಗ್ಗೆ ಪ್ರೊ|| ಅ.ರಾ. ಮಿತ್ರ ಅವರು ಸಾಕಷ್ಟು ಅಧ್ಯಯನ- ಸಂಶೋಧನೆಗಳನ್ನು ನಡೆಸಿದ್ದಾರೆ ಮತ್ತು ಕೃತಿಗಳನ್ನು ರಚಿಸಿದ್ದಾರೆ. ಅವರ ”ಪುರಂದರ ದರ್ಶನ” ಲೇಖನ, ಪುರಂದರದಾಸರ ಕೃತಿಗಳ ಸಾಹಿತ್ಯಕ ಅಂಶಗಳ ಮೇಲೆ ವ್ಯಾಪಕ ಒಳನೋಟ ಬೀರುತ್ತದೆ.

ದಾಸರ ರಚನೆಗಳ ವ್ಯಾಕರಣ ಭಾಗಗಳು, ಗೇಯತೆ, ಲಯ, ತತ್ತ್ವ ಅಂತರಾರ್ಥ, ವಿವರಣಶೀಲತೆ, ಚಾತುರ್ಯ, ಪ್ರತಿಮಾ ಪ್ರಯೋಗ ಇವೆಲ್ಲವನ್ನೂ ಲೇಖಕರು ಸರಳ ಸುಂದರವಾಗಿ, ಉದಾಹರಣೆ ಸಹಿತ ವಿವರಿಸಿದ್ದಾರೆ.
ಭಕ್ತಿರಸ ಭಾವ ಚಿಮ್ಮಿಸುವ ಕೀರ್ತನೆಗಳ ಹರಿಕಾರ ಪುರಂದರದಾಸರ ಕೃತಿಗಳ ಸಾಹಿತ್ಯ ದರ್ಶನವನ್ನು ಈ ಬಾರಿಯಿಂದ ನಿಮಗೆ ಮಾಡಿಸಲಿದ್ದೇವೆ.
ಕನ್ನಡ ಛಂದಸ್ಸು ಅಕ್ಷರವೃತ್ತ, ಕಂದ, ರಗಳೆಗಳಿಂದ ಕೂಡಿದ ಚಂಪೂ ಕಾವ್ಯ ಪದ್ಧತಿಯಲ್ಲಿ ಸ್ವಲ್ಪಕಾಲ ಮೆರೆಯಿತು. ಇವು ಶುದ್ಧಾಂಗವಾಗಿ ಸಂಸ್ಕೃತದ ಛ೦ದಸ್ಸಿನ ಪಡಿನೆರಳು. ಅನಂತರ ಮಾತ್ರಾ, ಛ೦ದಸ್ಸು ವ್ಯಾಪಕವಾಗಿ ಬಳಕೆಯಲ್ಲಿ ನಿಂತು ಹರಿಹರನ ರಗಳೆಗಳಲ್ಲಿ, ಎಲ್ಲ ಬಗೆಯ ಷಟ್ಪದಿಗಳಲ್ಲಿ ತನ್ನ ಅಸ್ತಿತ್ವವನ್ನು ತೋರಿಸಿಕೊಂಡಿತು.
ಆದರೆ ಈ ಅಕ್ಷರ ಛಂದಸ್ಸು ಮತ್ತು ಮಾತ್ರಾ ಛಂದಸ್ಸನ್ನು ಹೋಲದ ಶುದ್ಧ ದೇಶೀಯವೇ ಆದ ಅಚ್ಚ ಕನ್ನಡ ಅ೦ಶಿ ಛಂದಸ್ಸು ಒಂದಿದೆ ಎಂಬುದನ್ನು ಬಿ.ಎಂ.ಶ್ರೀ. ಗುರುತಿಸಿಕೊಟ್ಟರು. ಅಂಶ ಛಂದಸ್ಸು ಗೇಯರೂಪಗಳಿಗೆ ಹೇಳಿ ಮಾಡಿಸಿದಂಥ ರೂಪ ಮಾಧ್ಯಮ. ನಮ್ಮ ಹಳೆಯ ತ್ರಿಪದಿಗಳು ಮತ್ತು ಸಾಂಗತ್ಯ ಇತ್ಯಾದಿ ಛಂದೋ ರೂಪಗಳು ಅಂಶಗಣಘಟಿತವಾದವುಗಳೇ ಆಗಿವೆ.
”ಮಾರ್ಗ” ಸಾಹಿತ್ಯದ ಗಣಮಾನ ಪದ್ಧತಿಯಿಂದ ಭಿನ್ನವಾಗಿ ನಿಲ್ಲುವ ನಮ್ಮ “ಅಂಶಮಾನ” ಕೀರ್ತನೆಗಳಂತಹ ಗೇಯರೂಪಗಳಿಗೆ ತುಂಬ ಸಹಾಯಕವಾಗಿದೆ. ಅಕ್ಷರವೃತ್ತ, ಮಾತ್ರಾವೃತ್ತಗಳ ಖಚಿತತೆ, ನಿಯಮ ಪಾಲನೆಯ ನಿರ್ಬಂಧ, ಪ್ರಾಸದ ಅನಿವಾರ್ಯತೆ ಮೊದಲಾದ ಬಿಗಿಯಾದ ಕಟ್ಟುಗಳು ಅಂಶ ಛಂದಸ್ಸಿನಲ್ಲಿ ಅನಗತ್ಯ.
ಅಲ್ಲದೆ ವಿಶೇಷವಾಗಿ ಸಂಗೀತದ ಮಟ್ಟುಗಳನ್ನು ಅನುಸರಿಸಿದ ದಾಸರು ಮಾತ್ರ ಛಂದಸ್ಸು ಅಂಶ ಛಂದಸ್ಸು ಎರಡನ್ನೂ ತಮ್ಮ ರಚನೆಗೆ ಒಗ್ಗಿಸಿಕೊಂಡು ಸಡಿಲ ರೀತಿಯನ್ನನುಸರಿಸಿ ಕೀರ್ತನೆಗಳನ್ನು ರಚಿಸಿದರು. “ಕೀರ್ತನೆ” ಎಂದರೆ ಒಂದರ್ಥದಲ್ಲಿ ಕೆತ್ತನೆ ತಾನೆ? ಶಿಲ್ಪಿ ಕಲ್ಲಿನಲ್ಲಿ ಕೆತ್ತುವುದನ್ನು ಕವಿ ಶಬ್ದದಲ್ಲಿ ಕೆತ್ತುತ್ತಾನೆ.
ಈ ಕೆತ್ತನೆಯ ಕೆಲಸ ಆಯಾ ಶಿಲ್ಪಿಯ ಮನೋಧರ್ಮವನ್ನನುರಿಸಿ ಹೆಚ್ಚು ಶಾಸ್ತ್ರನಿಷ್ಠವಾಗದೆ ಜನಸಾಮಾನ್ಯವಾಗುವ ದಿಕ್ಕಿನಲ್ಲಿ ಬೆಳೆಯಿತು. ಉಗಾಭೋಗ ಸುಳಾದಿಗಳನ್ನು ಬಿಟ್ಟು ಉಳಿದ ಕೀರ್ತನ ಪದಗಳಿಗೆ ಪುರಂದರದಾಸರು ಅಂಶಲಯ ಮಾತ್ರಾಲಯಗಳನ್ನೇ ಬಳಸಿಕೊಂಡರು.
ಮುಖ್ಯವಾಗಿ ತ್ರಿಪದಿ ಸಾಂಗತ್ಯಗಳ ಪರಿಷ್ಕೃತ ರೂಪಗಳನ್ನೊಳಗೊಂಡ ಮುಕ್ತ ಅಂಶಲಯದಲ್ಲಿ ಮತ್ತು ಸ್ಥಿತಿಸ್ಥಾಪಕ ರೂಪದ ಮಾತ್ರಾಲಯದಲ್ಲಿ ಇವರು ಪದಗಳನ್ನು ನಿರ್ವಹಿಸಿದ್ದಾರೆ. ಆದಿಪ್ರಾಸ, ಅಂತ್ಯಪ್ರಾಸ, ವಡಿಗಳನ್ನು ಸಾಕಷ್ಟು ಮಟ್ಟಿಗೆ ತಮ್ಮ ರಚನೆಗಳಲ್ಲಿ ಕಾಣಿಸಿದ್ದಾರೆ.

ಕೆಲವು ನೃತ್ಯಗತಿಗೂ ಹೊಂದಿಸಬಹುದಾದ ಲಯ, ತಾಳಗಳನ್ನು ಹೊಂದಿದೆ. ಕೆಲವು ಉದಾಹಣೆಗಳನ್ನು ಗಮನಿಸಬಹುದು.
ಅಂಶಗಣ :
ನಾ ನಿನ್ನೊಳನ್ಯ ಬೇಡುವದಿಲ್ಲ ಎನ್ನ ಹೃದಯಕಮಲದೊಳು ನಿಂದಿರು ಹರಿಯೇ ಅಂಬಿಗ ನಾ ನಿನ್ನ ನಂಬಿದೆ ಜಗದಂಬಾರಮಣ ನಿನ್ನ ನಂಬಿದ
ಬೇವು ಬೆಲ್ಲದೊಳಿಡಲೇನು ಫಲ ಹಾವಿಗೆ ಹಾಲೆರೆದರೇನು ಫಲ
ಆಚಾರ ವಿಲ್ಲದ ನಾಲಗೆ ನಿನ್ನ ನೀಚ ಬುದ್ಧಿಯ ಬಿಡು ನಾಲಗೆ
ಸುಮ್ಮನೆ ಬರುವುದೆ ಮುಕ್ತಿ ನಮ್ಮ ಅಚ್ಯುತಾನಂತನ ನೆನೆಯದೆ ಭಕ್ತಿ
ಮಾತ್ರಾಗಣ
ನಂಬದಿರು ಈ ದೇಹ ನಿತ್ಯವಲ್ಲ ಹರಿನಾಮದರೆಗಿಣಿಯು ಹಾರುತಿದೆ ಜಗದಿ ಪರಮ ಭಾಗವತರು ಬಲೆಯ ಬೀಸಿದರು ಕಂಡೆ ಕರುಣ ನಿಧಿಯ
ಗಂಗೆಯ ಮ೦ಡೆಯೊಳಿಟ್ಟ ದೊರೆಯ ಕಲಿಯುಗದೊಳು ಹರಿ ನಾಮವ ನೆನೆದರೆ ಕುಲಕೋಟಿಗಳುದ್ಧರಿಸುವವೋ ರಂಗ ಯಾದವ ನೀ ಬಾ ಯದುಕುಲ ನಂದನ ಮಾಧವ ಮಧುಸೂದನ ಬಾರೊ
ಸುಳ್ಳನಾಡುವ ಕಳ್ಳನೊಡನೆ ಗೆಳೆತನವೇನು ಹಳ್ಳ ಹೊಳೆಯಿಲ್ಲದಿಹ ಪಾಳ್ಯವೇನು
ಎಳ್ಳು ನುರಿಯದವಂಗೆ ಗಾಣಿಗನೆಂಬ ಪೆಸರೇನು ಹಳ್ಳಯಿಲ್ಲದವಂಗೆ ಹೆಗ್ಗಳಿಕೆ ಯೇನು
ಎಲ್ಲಿರುವನೋ ರಂಗನೆಂಬ ಸಂಶಯಬೇಡ ಎಲ್ಲಿ ಭಕ್ತರು ಕರೆದರಲ್ಲಿ ಒದಗುವನು
ಮಾನಭಂಗವ ಮಾಡಿ ಮತ್ತೆ ಉಪಚಾರಗಳನೇನ ಮಾಡಿದರಲ್ಲಿ ಇರಬಾರದಯ್ಯ
ಮರೆಯಬೇಡ ಮನವೆ ನೀನು ಹರಿಯ ಚರಣ ಅರುಣ ಕಿರಣ ಚರಣ ಶರಣ ಪಾತಕ-ಪಾವನ
ವಡಿ ಎಂದರೆ ಆದ್ಯಕ್ಷರಗಳು ಯತಿಯ ಸ್ಥಾನದಲ್ಲಿ ಸುತ್ತಿಬರುವಿಕೆ. ಪಾದದ ಮೊದಲಕ್ಷರ ಮತ್ತು ಪಾದದ ಯತಿಯ ಮುಂದಿನ ಮೊದಲ ಅಕ್ಷರ ಸಮಾನ ಅಥವಾ ಸಜಾತೀಯವಾಗಿರುವಿಕೆ. ಒಂದು ಬಗೆಯ ಒಳಪ್ರಾಸ, ಗೇಯಲಯಗಳಿಗೆ ತುಂಬ ಹೊಂದಿಕೊಳ್ಳುವ ಈ ಬಗೆಯ ಯಮಕ ರೂಪದ ಅಕ್ಷರ-ಸಮೀಪಾಕ್ಷರ ಜೋಡಣೆಯಿಂದ ಶಬ್ದ ಮೈತ್ರಿಯನ್ನು ಸಾಧಿಸಿ ಕಾವ್ಯವನ್ನು ಮಧುರಗೊಳಿಸುವುದು ದೇಸಿ ಕಾವ್ಯವನ್ನು ಒಂದು ವೈಖರಿ.
ತ್ರಿಪದಿಯಲ್ಲಿ ಬಳಕೆಗೊಂಡ ಈ ರಚನೆಶಿಲ್ಪ ಕೀರ್ತನೆಗಳಲ್ಲೂ ತುಂಬ ಕ್ರಿಯಾಪೂರ್ಣವಾಗಿ ಕಾಣಿಸಿಕೊಳ್ಳುತ್ತದೆ. ಕನಕದಾಸರು ವಡಿಗಳಲ್ಲಿ ನಾನಾ ಬಗೆಯವನ್ನು ಸಮರ್ಥವಾಗಿ ಬಳಸಿದ್ದಾರೆ. ಪುರಂದರದಾಸರ ಕೀರ್ತನೆಗಳಲ್ಲೂ ಇವುಗಳನ್ನು ಸಮಯೋಚಿತವಾಗಿ ರೂಢಿಸಿಕೊಳ್ಳಲಾಗಿದೆ.
ಕೆಲವು ಉದಾಹರಣೆಗಳನ್ನು ಗಮನಿಸಬಹುದು.

ಬಿಡೆ ನಿನ್ನ ಪಾದವ ಬಿಂಕವಿದೇಕೊ (ಏಕಾಕ್ಷರವರ್ಣ ವಡಿ)
ಯಾದವ ನೀ ಬಾ ಯದುಕುಲನಂದನ (ಏಕಾಕ್ಷರವರ್ಣ ವಡಿ)
ಸಕಲಗ್ರಹಬಲ ನೀನೆ ಸರಸಿಜಾಕ್ಷಾ (ಏಕಾಕ್ಷರವರ್ಣ ವಡಿ)
ಹರಿನಾಮದರಗಿಣಿಯು ಹಾರುತಿದೆ ಜಗದಿ ( ಏಕಾಕ್ಷರವರ್ಣ ವಡಿ)
ಹೂವ ತರುವ ಮನೆಗೆ ಹುಲ್ಲ ತರುವ (ಏಕಾಕ್ಷರವರ್ಣ ವಡಿ)
ಕಾಯಲಾರೆನು ಕೃಷ್ಣ ಕ೦ಡವರ ಬಾಗಿಲನು (ಏಕಾಕ್ಷರವರ್ಣ ವಡಿ)
ಆರೇನು ಮಾಡುವರು ಆರಿಂದಲೇನಹುದು… (ಸ್ವರವಡಿ)
ಬದುಕಿದೆನು ಬದುಕಿದೆನು ಭವವೆನಗೆ ಹಿಂಗಿತು (ವರ್ಗವಡಿ)
ಕಂಡು ಕಂಡು ನೀ ಎನ್ನ ಕೈ ಬಿಡುವರೇ ಕೃಷ್ಣ (ವರ್ಗವಡಿ)
ದಾಸನಂತಾಗುವೆನು ಧರೆಯೊಳಗೆ ನಾನು (ವರ್ಗವಡಿ)
ಅಂತಕನ ದೂತರಿಗೆ ಕಿಂಚಿತ್ತು ದಯವಿಲ್ಲ (ವರ್ಗವಡಿ)
ಕಾಗದ ಬಂದಿದೆ ನಮ್ಮ ಕಮಲನಾಭನದು (ಏಕವರ್ಣವಡಿ)
ಆಡಿದನೋ ರಂಗ ಅದ್ಭುತದಿಂದಲಿ (ಏಕವರ್ಣವಡಿ)
ನಲಿದಾಡೆ ಎನ್ನ ನಾಲಗೆ ಮೇಲೆ (ಏಕವರ್ಣವಡಿ)
ನೃತ್ಯಗಳಿಗೆ ಹೊಂದುವ ಲಯತಾಳಗಳನ್ನು ಪುರಂದರದಾಸರ ಅನೇಕ ಕೀರ್ತನೆಗಳಲ್ಲಿ ಕಾಣಬಹುದಾಗಿದೆ. ಕೆಲವು ಉದಾಹರಣೆಗಳನ್ನು ಗಮನಿಸಬಹುದು:
ಆಡಿದನೋ ರಂಗ ಅದ್ಭುತದಿಂದಲಿ ಕಾಳಿಂಗನ ಫಣಿಯಲ್ಲಿ ಬೇಡಿರವರಿಗೆ ಬೇಡಿದ ವರಗಳ
ನೀಡುತಲಿ ದಯ ಮಾಡುತಲಿ ನಲಿ
ದಾಡುತಲಿ ಬೆಣ್ಣೆ ಬೇಡುತಲಿ ಕೃಷ್ಣ
***
ಕಂಡೆ ಕರುಣನಿಧಿಯ ಗಂಗೆಯ ಮಂಡೆಯೊಳಿಟ್ಟದೊರೆಯ ರುಂಡಮಾಲೆ ಸಿರಿಯ ನೊಸಲೊಳು ಕೆಂಡಗಣ್ಣಿನ ದೊರೆಯ
***
ಚಂದ್ರಚೂಡ ಶಿವಶಂಕರ ಪಾರ್ವತಿರಮಣಾ
ನಿನಗೆ ನಮೋ ನಮೋ
ಸುಂದರ ಮೃಗಧರ ಪಿನಾಕಧರ ಹರ
ಗಂಗಾಧರ ಗಜಚರ್ಮಾಂಬರಧರ…
***
ಹರಿಕುಣಿದ ನಮ್ಮ ಹರಿಕುಣಿದ
ಅಕಳಂಕಚರಿತ ಮಕರ ಕುಂಡಲಧರ
ಸಕಲರ ಪಾಲಿಪ ಹರಿ ಕುಣಿದ
ಅರಳೆಲೆ ಮಾಗಾಯಿ ಕೊರಳ ಮುತ್ತಿನ ಸರ
ತರಳೆಯರೊಡಗೂಡಿ ಹರಿ ಕುಣಿದ
ಜಾನಪದ ಮಟ್ಟುಗಳನ್ನು ಸುಲಲಿತವಾಗಿ ಬಳಸಬಲ್ಲ ಪುರಂದರದಾಸರು ಜಾನಪದ ಸಾಹಿತ್ಯ ರಚನೆಯ ಎಲ್ಲ ಸಿರಿಗಳನ್ನೂ ಸೂರೆ ಮಾಡಿದ್ದಾರೆ. ಮಾತಿನ ಅಬ್ಬರ ವರ್ಣಾವೃತ್ತಿಯ, ಯಮಕದ, ಒಳಪ್ರಾಸಗಳ ವರ್ಣಮಯತೆ. ಅಚ್ಚ ಕನ್ನಡ ಶಬ್ದಗಳ ಹೆಚ್ಚಳ, ಗಡಸಿನ ಮಾತುಗಾರಿಕೆಯ ಗತ್ತುಗಮಕಗಳು ಜಾನಪದ ವೈಶಿಷ್ಟ್ಯಗಳು.
ಏತರ ಕಟಪಟಿ ಒಂದಿನ ಹೋಗುತಿದೆ ಲಟಪಟಿ
ಬರುವಾಗ ಏನತ೦ದಿ ಎಲ್ಲಾನೂ ನನ್ನದೆಂದಿ
ಹಳೆಯ ವಸ್ತ್ರವ ಬೀಸಾಡಣ್ಣ
ಹೊಸ ವಸ್ತ್ರನಿಮಗೆ ದೇವರು ಕೊಟ್ಟಾನು
ಹಕ್ಕಿಯ ಅರಸ ಹೇಳಿದ ಮಾತು
ಉತ್ತಮ ಮಾರ್ಗವ ಹಿಡಿಯೋ ತಮ್ಮ
ಮಾರನೆಂಬುವ ಕಳ್ಳನೈದಾನೆ ಪುರಂ
ದರನಾದರು ಬಿಡುವೋನಲ್ಲ
ಕಿವಿಯೂ ಮೂಗೂ ನಾಲಗೆಯಪ್ಪ
ತುರಂಗ ಮಾತಂಗ ಪತಂಗ ಕೇಳು
ಇವು ಕೆಲವು ಉದಾಹರಣೆಗಳು.
(ಮುಂದುವರಿಯುವುದು)






Leave a Reply