– ಆಂಗ್ಲಮೂಲ : ರೋಹಿಣಿಸುತ ದಾಸ
ಕೃಷ್ಣ ಪ್ರಜ್ಞಾಂದೋಲನದ ಆರಂಭದ ದಿನಗಳಲ್ಲಿ ಶ್ರೀಲ ಪ್ರಭುಪಾದರು ‘ಬ್ಯಾಕ್ ಟು ಗಾಡ್ ಹೆಡ್’ ಪತ್ರಿಕೆಯ ವಿತರಣೆಯತ್ತ ಹೆಚ್ಚು ಗಮನ ಹರಿಸಿದ್ದರು. ಭಕ್ತರು ಇತರ ದೊಡ್ಡ ಪುಸ್ತಕಗಳ ವಿತರಣೆಯಲ್ಲಿ ತೊಡಗಿದ ಅನಂತರ ಅವಕ್ಕೇ ಹೆಚ್ಚಿನ ಪ್ರಾಧಾನ್ಯ ದೊರೆಯಿತು. ಶ್ರೀಲ ಪ್ರಭುಪಾದರಿಗೆ ಒಬ್ಬ ಹಿತೈಷಿಗಳು ಪತ್ರಿಕೆಗಿಂತ ಪುಸ್ತಕಗಳನ್ನು ಹೆಚ್ಚು ಮುದ್ರಿಸುವಂತೆ ಸಲಹೆ ನೀಡಿದ್ದರು.
ಜನರು ಪುಸ್ತಕಗಳನ್ನು ಜೋಪಾನವಾಗಿರಿಸಿಕೊಳ್ಳುತ್ತಾರೆ, ಪತ್ರಿಕೆಗಳನ್ನಾದರೆ ಒಂದಷ್ಟು ದಿನ ಇಟ್ಟುಕೊಂಡು ಬೀಸಾಡುವ ಸಂಭವಗಳಿರುತ್ತವೆ ಎನ್ನುವುದು ಅವರ ಚಿಂತನೆ. ಒಂದು ವೇಳೆ ಜನರು ದೀರ್ಘಕಾಲಿಕ ಚಂದಾದಾರರಾದರೆ, ಅದು ಬೇರೆ ಮಾತು. ಅಂಥವರು ತಾವು ಆ ಪತ್ರಿಕೆಯನ್ನು ಇಷ್ಟಪಡುವ ಕಾರಣದಿಂದಲೇ ಚಂದಾ ಮಾಡಿಸಿರುತ್ತಾರೆ ಮತ್ತು ಅದನ್ನು ಕಾಪಾಡಿಕೊಂಡು ಹೋಗುತ್ತಾರೆ.

ಹೊಸದಾಗಿ ಸಂಕೀರ್ತನೆಗೆ ಸೇರಿಕೊಂಡವರು ಮೊದಲು ಪತ್ರಿಕೆಯನ್ನು ವಿತರಿಸಲು ಬಯಸುತ್ತಾರೆ. ಅದೇ ಅವರಿಗೆ ಹೆಚ್ಚು ಸುಲಭವಾಗಿ ತೋರುತ್ತದೆ. ಆದರೆ ಹಿರಿಯ ಭಕ್ತರು ಪುಸ್ತಕಗಳ ವಿತರಣೆಗೆ ಹೆಚ್ಚಿನ ಗಮನ ನೀಡಬೇಕು ಎಂಬುದು ಶ್ರೀಲಪ್ರಭುವಾದರ ಇಂಗಿತವಾಗಿತ್ತು.
ಇಷ್ಟಕ್ಕೂ ಪುಸ್ತಕ ವಿತರಣೆಯೇ ಜೀವನವಾಗಬೇಕೆಂದೇನೂ ಇಲ್ಲ. ತಮ್ಮ ದೈನಂದಿನ ಕೆಲಸಗಳಲ್ಲಿ ಅಥವಾ ಕಚೇರಿಯ ಉದ್ಯೋಗದಲ್ಲಿ ವ್ಯಸ್ತರಾಗಿರುವ ಭಕ್ತರು, ದೇವಾಲಯಕ್ಕೆ ಆಗಾಗ ಭೇಟಿ ನೀಡುವ ಕೃಷ್ಣಸ್ನೇಹಿತರು ಇದನ್ನೊಂದು ಅರೆಕಾಲಿಕ ಸೇವೆಯನ್ನಾಗಿ ಮಾಡಬಹುದು.
ತಮ್ಮ ದಿನದ ಕೆಲಸ ಮುಗಿಸಿ ಸಂಜೆಯ ವೇಳೆ ವಿಹಾರಕ್ಕೆ ಹೊರಡುವಾಗ ಒಂದೆರಡು ಪುಸ್ತಕಗಳನ್ನು ಹಿಡಿದು ಹೊರಟರೂ ಸಾಕು. ಆ ದಿನ ಅದನ್ನು ವಿತರಿಸುವಲ್ಲಿ ಸಫಲವಾದರೂ ಸರಿಯೇ, ಅದು ಕೂಡ ಸಂಕೀರ್ತನೆ ಎಂದೇ ಪರಿಗಣಿತವಾಗುತ್ತದೆ. ಆದ್ದರಿಂದ ಸಂಕೀರ್ತನ ಕೇವಲ ಭಕ್ತರ ಪಾಲಿನ ಕೆಲಸ ಎಂಬ ಚಿಂತನೆ ಸರಿಯಲ್ಲ. ದೇವೋತ್ತಮ ಪರಮಪುರುಷ ಶ್ರೀ ಕೃಷ್ಣನಿಗೆ ಭಕ್ತಿ ಸೇವೆ ಸಲ್ಲಿಸುವ ಅತ್ಯುತ್ಕೃಷ್ಟ ಧರ್ಮ ನಮ್ಮದಾಗಿದೆ. ಅದನ್ನು ವಿಸ್ತರಿಸುವಲ್ಲಿ ಈ ಅಲ್ಪ ಕಾರ್ಯವೂ ಮಹತ್ತರ ಸ್ಥಾನವನ್ನು ಪಡೆದುಕೊಳ್ಳುತ್ತದೆ.
ಬಿಡುವಿನ ಸಮಯದ ಸಂಕೀರ್ತನೆಯಿಂದಲೂ ಒಂದಷ್ಟು ಜನರನ್ನು ಕೃಷ್ಣನತ್ತ ಸೆಳೆಯಬಹುದಾದರೆ, ಸಂಕೀರ್ತನೆಯ ಮಹತ್ವವೆಷ್ಟು ಯೋಚಿಸಿ!?
”ನನಗೆ ಪುಸ್ತಕ ಸಂಕೀರ್ತನೆಯ ಫಲಿತಾಂಶ ಏನಾಗುತ್ತದೆ ಎಂದು ತಿಳಿಯದು. ನಾನು ಸುಮ್ಮನೆ ನನ್ನ ಗುರು ಮಹಾರಾಜರನ್ನು ಅನುಸರಿಸುತ್ತಿದ್ದೇನಷ್ಟೇ. ನನಗೆ ಅವರು ಆಪ್ತವಾಗಿ ಹೇಳಿದ್ದನ್ನು ನಾನು ಮಾಡುತ್ತಿದ್ದೇನೆ.”
– ಶ್ರೀಲ ಪ್ರಭುಪಾದರು, 1974ರ ಡಿಸೆಂಬರ್ 6ರಂದು ಶ್ರೀ ಗೋವಿಂದದಾಸರಿಗೆ ಬರೆದ ಪತ್ರದಲ್ಲಿ






Leave a Reply