ದೇಶದಿಂದ ಕೇಶವನೆಡೆಗೆ

(ಶ್ರೀಲ ಪ್ರಭುಪಾದರ ಜೀವನದ ಒಂದು ಮಹತ್ತರ ಘಟನೆ)

– ಪದ್ಮಿನಿ ಬಾಲು

1922ನೇ ಇಸವಿ ಭಾರತದ ಸ್ವಾತಂತ್ರ್ಯಕ್ಕಾಗಿ ಪ್ರತಿಯೊಬ್ಬ ಭಾರತೀಯನ ಮನಸ್ಸೂ ಹಂಬಲಿಸುತ್ತಿತ್ತು. ತುಡಿತಕ್ಕೆ ತಕ್ಕಂತೆ ಆಂದೋಲನ ಪ್ರಾರ೦ಭವಾಗಿತ್ತು. ತರುಣರು ವಿದ್ಯಾಭ್ಯಾಸದಿಂದ ವಿಮುಖರಾಗಿ ಗಾಂಧೀಜಿಯ ಕರೆಗೆ ಓಗೊಟ್ಟು ಖಾದಿ ಧರಿಸಿ ರಸ್ತೆಗಿಳಿದಿದ್ದರು.

ಇಂತಹ ಖಾದಿಧಾರಿ ಯುವಕನೊಬ್ಬ ಒಂದು ಸಂಜೆ ಕಲ್ಕತ್ತಾದ ಮನೆಯೊಂದರ ಮುಂದೆ ನಿಂತಿರಲು ಅವನ ಸ್ನೇಹಿತ ಅವನನ್ನು ಸಮೀಪಿಸಿ ಕೇಳಿದ, ”ಮಿತ್ರಾ, ವಾಯು ಸಂಚಾರಕ್ಕೆ ಹೋಗೋಣ ಬರುವೆಯಾ?” ಇಬ್ಬರೂ ಲೋಕಾಭಿರಾಮವಾಗಿ ಮಾತನಾಡುತ್ತ ನಡೆದರು. ಸ್ವಲ್ಪ ದೂರ ಹೋದನಂತರ ಎರಡನೆಯ ತರುಣ ಹೇಳಿದ, “ಇಲ್ಲಿಯೇ ಹತ್ತಿರದಲ್ಲಿ ಗೌಡೀಯ ಮಠವಿದೆ, ಅಲ್ಲೊಬ್ಬ ಸಾಧುಗಳಿದ್ದಾರೆ. ಅವರ ದರ್ಶನ ಮಾಡಿ ಬರೋಣವೇ?”

ಖಾದಿಧಾರಿ : ನನ್ನ ತಂದೆಯ ಮನೆಯಲ್ಲಿ ನಾನು ಅನೇಕ ಸಾಧುಗಳನ್ನು ಕಂಡಿದ್ದೇನೆ. ಸಾಧುಗಳನ್ನು ಸತ್ಕರಿಸುವುದು ಅವರಿಗೆ ಬಹಳ ಪ್ರಿಯವಾದ ಕೆಲಸವಾಗಿತ್ತು. ಆದರೆ ನಾನು ಯಾವ ಸಾಧುವಿನಿಂದಲೂ ಸಹ ಪ್ರಭಾವಿತನಾಗಿಲ್ಲ.

ಮಿತ್ರ : ಹಾಗೆನ್ನಬೇಡ, ಈಗ ನಾವು ನೋಡುವ ಸಂನ್ಯಾಸಿಯು ಇತರರಂತಿಲ್ಲ. ಇವರು ಮಹಾಪಂಡಿತರು. ಧ್ಯೇಯ ಬದ್ಧರು. ಇವರಿಂದ ನೀನು ಖಂಡಿತ ಪ್ರಭಾವಿತನಾಗುವೆ.

ಖಾದಿಧಾರಿ : ಸರಿ ಬಿಡು, ನಿನ್ನ ಆಸೆಗೆ ನಾನೇಕೆ ಅಡ್ಡಿ ಬರಲಿ, ಹೋಗೋಣ, ಬಾ.

ತರುಣರಿಬ್ಬರೂ ಗೌಡೀಯ ಮಠದ ಪ್ರಾಂಗಣವನ್ನು ಪ್ರವೇಶಿಸಿದರು. ಮೆಟ್ಟಲುಗಳನ್ನೇರಿ ಪೀಠಾರೂಢರಾಗಿದ್ದ ತೇಜಸ್ವಿ ಸಂನ್ಯಾಸಿಗೆ ದೀರ್ಘದಂಡ ಪ್ರಣಾಮ ಮಾಡಿ ಕುಳಿತರು.

ಸಂನ್ಯಾಸಿ : ವಿದ್ಯಾವಂತನಾದ ನೀನು ಪ್ರಪಂಚದಾದ್ಯಂತ ಇಂಗ್ಲಿಷ್ ಭಾಷೆಯಲ್ಲಿ ಶ್ರೀ ಚೈತನ್ಯ ಮಹಾಪ್ರಭುಗಳ ಸಂದೇಶವನ್ನು ಹರಡುವ ಕಾರ್ಯದಲ್ಲೇಕೆ ತೊಡಗಬಾರದು?

ತನ್ನನ್ನು ಕಂಡೊಡನೆಯೇ ಸಂನ್ಯಾಸಿಯಾಡಿದ ಮೊದಲ ಮಾತನ್ನು ಕೇಳಿ ಖಾದಿಧಾರಿಯು ಬಹಳ ವಿಸ್ಮಯಗೊಂಡನಷ್ಟೇ ಅಲ್ಲದೆ ಅವನಿಗೆ ರೋಮಾಂಚನದ ಅನುಭವವಾಯಿತು. ಆದರೆ ಅವನ ವಯಸ್ಸು, ದೇಶದ ರಾಜಕೀಯ ಪರಿಸ್ಥಿತಿ, ಗಾಂಧೀಜಿಯ ತತ್ತ್ವಗಳೆಡೆಗೆ ವಾಲುತ್ತಿದ್ದ ಮನಸ್ಸು ಸಂನ್ಯಾಸಿಗೆ ವಿವೇಕದಿಂದ ಕೂಡಿದ ಪ್ರಶ್ನೆಗಳನ್ನೊಡ್ಡುವಂತೆ ಪ್ರೇರೇಪಿಸಿದವು.

ಖಾದಿಧಾರಿ : ನಮ್ಮ ಭಾರತವು ಸ್ವಾತಂತ್ರ್ಯವನ್ನು ಕಳೆದುಕೊಂಡು ಬ್ರಿಟಿಷರ ಅಧೀನವಾಗಿದೆ. ಇಂತಹ ಪಾರತಂತ್ರ ದೇಶದ ಸಂಸ್ಕೃತಿಯಲ್ಲಿ ಯಾರಿಗೆ ತಾನೆ ಆದರವಿದ್ದೀತು? ಪರಿಸ್ಥಿತಿ ಹೀಗಿರುವಾಗ ಶ್ರೀ ಚೈತನ್ಯರ ಸಂದೇಶವನ್ನು ಕೇಳುವುದರಲ್ಲಿ ಯಾರು ತಾನೆ ಆಸಕ್ತರಾಗಿರುತ್ತಾರೆ?

ಸಂನ್ಯಾಸಿ : ಇಂತಹ ಸಮಯದಲ್ಲಿಯೇ ಪ್ರಪಂಚಕ್ಕೆ ಕೃಷ್ಣಪಜ್ಞೆಯ ಅವಶ್ಯಕತೆಯಿರುವುದು ಇದು ಅತಿ ಮುಖ್ಯ. ಭಾರತದ ರಾಜಕೀಯದ ಬದಲಾವಣೆಗಾಗಿ ಕೃಷ್ಣಪ್ರಜ್ಞೆ ಕಾಯಬೇಕಾಗಿಲ್ಲ. ಆಳುತ್ತಿರುವ ರಾಜನಾರು ಎಂಬುದನ್ನು ಕೃಷ್ಣ ಪ್ರಜ್ಞೆ ಅವಲಂಬಿಸಿಲ್ಲ.

ಸಂನ್ಯಾಸಿಯ ಧೀರೋದಾತ್ತ ಚರ್ಯೆ ತರುಣನಿಗೆ ಹಿಡಿಸಿತು. “ಎಲ್ಲ ಸರ್ಕಾರಗಳೂ ಅಶಾಶ್ವತ, ಕೃಷ್ಣಪ್ರಜ್ಞೆಯೊಂದೇ ಅನಂತ ಸತ್ಯ, ದಿವ್ಯಾತ್ಮವೊಂದೇ ಶಾಶ್ವತವಾದ ಅಸ್ತಿತ್ವವನ್ನು ಹೊಂದಿರುವುದು. ಮಾನವ ನಿರ್ಮಿತ ರಾಜಕೀಯ ವ್ಯವಸ್ಥೆಗಳಾವುವೂ ಮಾನವ ಸಮಾಜವನ್ನು ಉದ್ಧರಿಸಲಾರದು.

ಇದೇ ಮಾತನ್ನು ವೇದಗಳು ಪ್ರತಿಪಾದಿಸಿವೆ ಮತ್ತು ಆಚಾರ್ಯ ಪುರುಷರೂ ಹೇಳಿದ್ದಾರೆ. ಅನಿತ್ಯವಾದುದನ್ನೆಲ್ಲ ಮೀರಿದ ನಿತ್ಯಸತ್ಯನಾದ ಪರಮ ದೇವೋತ್ತಮ ಪುರುಷನೆಡೆಗೆ ಲೋಕದ ಜನರ ಮನಸ್ಸನ್ನು ತಿರುಗಿಸುವ ದಿಕ್ಕಿನಲ್ಲಿ ಕಾರ್ಯಪ್ರವೃತ್ತರಾಗುವುದೇ ನಿಜವಾದ ಜನೋದ್ಧಾರ ಕಾರ್ಯ”ಎಂಬ ವಿಷಯಗಳ ಬಗ್ಗೆ ಸುಮಾರು ಎರಡು ಗಂಟೆಗಳ ಕಾಲ ಸಂನ್ಯಾಸಿಯು ನಿರರ್ಗಳವಾಗಿ ಉಪದೇಶಿಸಿದರು.

ಇವರು ಸಾಧಾರಣ ಸಂನ್ಯಾಸಿಯಲ್ಲವೆ೦ಬುದು ಯುವಕರಿಗೆ ಮನದಟ್ಟದಾಯಿತು. ಖಾದಿಧಾರಿ ಚರ್ಚೆಯಲ್ಲಿ ತಾನು ಸೋತೆನೆಂದುಕೊಂಡನು. ಆದರೆ ಈ ಸೋಲಿನಿಂದ ಅವನಿಗೆ ಅತೀವ ಆನ೦ದದ ಅನುಭವವುಂಟಾಯಿತು. ಬಿಸಿಲಿನ ಬೇಗೆಯಲ್ಲಿ ನಡೆದು ದಾಹದಿಂದ ಬಳಲಿದ ಪಥಿಕನು ಶುದ್ಧ ಗಂಗಾಜಲ ಪಾನದಿಂದ ತೃಪ್ತನಾಗುವಂತೆ ಅವನು ಸಾರ್ಥಕ ಭಾವದಿಂದ ಅಲ್ಲಿಂದ ಹಿಂದಿರುಗಿದನು.

ಖಾದಿಧಾರಿ : ಅದ್ಭುತ, ಚೈತನ್ಯ ಮಹಾಪ್ರಭುಗಳ ಸಂದೇಶವೆಂಬ ಅಸ್ತ್ರವು ಬಹಳ ನುರಿತ ಯೋಧನ ಕೈಯ್ಯಲ್ಲಿದೆ. ಅಧಿಕೃತವಾಗಿಯಲ್ಲವಾದರೂ ಮಾನಸಿಕವಾಗಿ ಈ ಮಹನೀಯರನ್ನು ನನ್ನ ಆಧ್ಯಾತ್ಮಿಕ ಗುರುವನ್ನಾಗಿ ಸ್ವೀಕರಿಸಿದ್ದೇನೆ. ಮಿತ್ರಾ, ನಿನಗೆ ನನ್ನ ವಂದನೆಗಳು.

ಖಾದಿಧಾರಿಯೇ ಮುಂದೆ ಅಂತಾರಾಷ್ಟ್ರೀಯ ಕೃಷ್ಣಪ್ರಜ್ಞಾಸಂಸ್ಥೆಯ ಸ್ಥಾಪನಾಚಾರ್ಯರಾಗಿ ಪ್ರಸಿದ್ದಿ ಪಡೆದ ಶ್ರೀಲ ಎ.ಸಿ. ಭಕ್ತಿವೇದಾಂತಸ್ವಾಮಿ ಪ್ರಭುಪಾದರು ಮತ್ತು ಸಂನ್ಯಾಸಿಯೇ ಅವರನ್ನು ಈ ಹಂತಕ್ಕೆ ತಲಪಿಸಲು ಮಾರ್ಗದರ್ಶನ ಮಾಡಿದ ಶ್ರೀಲ ಭಕ್ತಿಸಿದ್ಧಾಂತ ಸರಸ್ವತೀ ಪ್ರಭುಪಾದರು. ಶ್ರೀಲ ಪ್ರಭುಪಾದರ ಜೀವನದಲ್ಲಿ ಒಂದು ಸಂಜೆ ನಡೆದ ಈ ಘಟನೆಯು ಅವರ ಮನಸ್ಸನ್ನು ದೇಶದಿಂದ ಕೇಶವನ ಕಡೆಗೆ ತಿರುಗಿಸುವ ಸಾಧನವಾಯಿತು.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi