ದೇವಾಧಿರಾಜ ಪೆರುಮಾಳ್ ಮಂದಿರ

– ಆಂಗ್ಲಮೂಲ: ಸಂಪತ್ ಕುಮಾರ ರಾಮಾನುಜ ದಾಸನ್ (ಅಶ್ವಿನ್ ಎಸ್)

ತಮಿಳುನಾಡಿನ ಮೈಲಾದಿತುರೈಯ ದಕ್ಷಿಣಕ್ಕೆ 12 ಕಿ.ಮೀ. ದೂರದಲ್ಲಿರುವ ತೇರಳಂದೂರು ಗ್ರಾಮದಲ್ಲಿ ಭವ್ಯವಾದ ಗೋಸಖ ದೇವಾಧಿರಾಜ ಪೆರುಮಾಳ್‌ ಮಂದಿರವಿದೆ. ಇಲ್ಲಿ ಭಗವಂತನಿಗೆ ಗೋವುಗಳಿಗಿಂತ ಇನ್ಯಾವುದೂ ಅಮೂಲ್ಯವಲ್ಲ.

ಒಂದು ದಿನ ಶ್ರೀ ಕೃಷ್ಣ ಮತ್ತು ಅವನ ಮಿತ್ರರು ವಿಹಾರಕ್ಕೆಂದು ಯಮುನಾ ನದಿಯ ದಡಕ್ಕೆ ಬಂದರು. ಸದಾ ಕೋಗಿಲೆ ಮತ್ತು ನವಿಲಿನ ಸುಮಧುರ ಧ್ವನಿಯಿಂದ ಪ್ರತಿಧ್ವನಿಸುತ್ತಿರುವ ವೃಂದಾವನ ಅರಣ್ಯವು ವೈವಿಧ್ಯಮಯ ಫಲಗಳ ಮರಗಳಿಂದ ತುಂಬಿದೆ. ಆದುದರಿಂದ ತಮ್ಮ ಬುತ್ತಿಯನ್ನು ಬಿಚ್ಚಲು ಇದು ಪ್ರಶಸ್ತವಾದ ಸ್ಥಳ ಎಂದು ಭಗವಂತನು ಪರಿಗಣಿಸಿದನು.

ಕೃಷ್ಣನು ತನ್ನ ಗೋಪಾಲಕ ಮಿತ್ರರಿಗೆ ಹೇಳಿದ, “ನಮಗೆ ಈಗಾಗಲೇ ಹಸಿವಾಗಿರುವುದರಿಂದ ನಾವು ಇಲ್ಲಿ ಬುತ್ತಿಯನ್ನು ಬಿಚ್ಚಬಹುದು. ಕರುಗಳು ಇಲ್ಲಿನ ಹಸಿರು ಹುಲ್ಲು ಮತ್ತು ಯಮುನೆಯ ಜಲವನ್ನು ಆಸ್ವಾದಿಸಲಿ.” ಅವನ ಮಾತಿಗೆ ಒಪ್ಪಿದ ಗೋಪಾಲಕ ಬಾಲಕರು ತಮ್ಮ ತಮ್ಮ ಬುತ್ತಿಯನ್ನು ಬಿಚ್ಚಿದರು.

ವಿಹಾರದ ಭೋಜನಕೂಟದ ಇಡೀ ವ್ಯವಸ್ಥೆಯು ದಳಗಳಿಂದ ಸುತ್ತುವರಿದ ಕಮಲ ಪುಷ್ಪದ ಸುರುಳಿಯಂತಿತ್ತು. ಮಿತ್ರರಿಂದ ಸುತ್ತುವರಿಯಲ್ಪಟ್ಟ ಕೃಷ್ಣನು ಮಧ್ಯದಲ್ಲಿ ಕುಳಿತಿದ್ದನು. ಅವರೆಲ್ಲರೂ ಆನಂದೋಲ್ಲಾಸದಲ್ಲಿ ಇದ್ದರು. ಯಾವಾಗ ಮತ್ತು ಎಲ್ಲಿ ಕೃಷ್ಣನು ಮಧ್ಯದಲ್ಲಿರುವನೋ ಆಗ ಅಲ್ಲಿ ಹರ್ಷಾತಿರೇಕವೇ! ಬಾಲಕರು ತಮ್ಮ ತಿನಿಸುಗಳನ್ನು ಹಂಚಿಕೊಂಡರು. ಇತರ ಗೋಪಿಯರು ತಮ್ಮ ತಮ್ಮ ಮಕ್ಕಳಿಗೆ ಕಳುಹಿಸುವ ತಿನಿಸು ಕೃಷ್ಣನಿಗೆ ಯಾವಾಗಲೂ ಅಚ್ಚುಮೆಚ್ಚು.

ಈ ಮಧ್ಯೆ, ಹಸಿರು ಹುಲ್ಲಿನಿಂದ ಆಕರ್ಷಿತವಾದ ಕರುಗಳು ದಟ್ಟ ಅರಣ್ಯದೊಳಗೆ ಹೋದವು. ಗೋಪಾಲಕ ಬಾಲಕರು ಇದನ್ನು ಕೃಷ್ಣನಿಗೆ ತಿಳಿಸಿದರು. ಕೃಷ್ಣನು ಹೇಳಿದ, “ನಾವು ಊಟ ಮುಂದುವರಿಸೋಣ. ಕರುಗಳು ಸುರಕ್ಷಿತವಾಗಿರುತ್ತವೆ, ನಾನು ಭರವಸೆ ನೀಡುವೆ.” ಮಿತ್ರರ ಭಯ ನಿವಾರಣೆಯಾಯಿತು.

ಕೃಷ್ಣನ ವಿಹಾರದ ಭೋಜನವು ಎಷ್ಟು ಆಕರ್ಷಿತವಾಗಿತ್ತೆಂದರೆ, ಸ್ವರ್ಗವಾಸಿಗಳಾದ ದೇವತೆಗಳು ಕೃಷ್ಣನ ಬಗೆಗೆ ತಿಳಿದುಕೊಳ್ಳಲು ಕಾತರರಾದರು. ಪರಮ ಪುರುಷನು ಗೋಪಾಲಕ ಬಾಲಕನಾಗಿ ತನ್ನ ಮೂಲ ರೂಪದಲ್ಲಿ ಅವತರಿಸಿದ್ದಾನೆಂದು ಅವರೆಲ್ಲರೂ ಕೇಳಿದ್ದರು. ವಿಶ್ವದ ಸೃಷ್ಟಿಕರ್ತನೆಂದು ನೇಮಕಗೊಂಡಿದ್ದ ಚತುರ್ಮುಖ ಬ್ರಹ್ಮನು ಕೃಷ್ಣನನ್ನು ಗಮನಿಸುತ್ತಿದ್ದ ಮತ್ತು ಅವನ ಗುರುತಿನ ಬಗೆಗೆ ಸಂಶಯದಿಂದಿದ್ದ. ಆದುದರಿಂದ ತಾನೇ ಕಂಡು ಹಿಡಿಯಲು ನಿರ್ಧರಿಸಿದ.

ಬ್ರಹ್ಮನು ಕರುಗಳನ್ನು ಕರೆದುಕೊಂಡು ಹೋಗಿ ಯೋಗ ನಿದ್ರೆಗೆ, ಗಾಢ ನಿದ್ರೆಗೆ ಗುರಿಪಡಿಸಿದ. ಭೂತ, ವರ್ತಮಾನ ಮತ್ತು ಭವಿಷ್ಯ ಗೊತ್ತಿದ್ದ ಕೃಷ್ಣನಿಗೆ ಬ್ರಹ್ಮನ ಯೋಜನೆ ಅರ್ಥವಾಯಿತು. “ನೀವು ಭೋಜನ ಮುಂದುವರಿಸಿ, ನಾನು ಹೋಗಿ ಕರುಗಳನ್ನು ಕರೆತರುವೆ” ಎಂದು ಕೃಷ್ಣನು ತನ್ನ ಮಿತ್ರರಿಗೆ ತಿಳಿಸಿ ಅಲ್ಲಿಂದ ಹೊರಟನು.

ಅರಣ್ಯ, ಗುಹೆ ಮತ್ತು ಪೊದೆಗಳಲ್ಲಿ ಕರುಗಳಿಗಾಗಿ ಹುಡುಕಾಡಿದ. ಇತ್ತ ಗೋಪಾಲ ಬಾಲಕರು ಕೃಷ್ಣನ ರಕ್ಷಣೆ ಇಲ್ಲದೆ ಇರುವುದನ್ನು ಕಂಡ ಬ್ರಹ್ಮನು ಅವರನ್ನೂ ಯೋಗನಿದ್ರೆಗೆ ಒಳಪಡಿಸಿ ಕರೆದುಕೊಂಡು ಹೋದ.

ಒಳ್ಳೆಯ ಕಲಾವಿದನಂತೆ ಕೃಷ್ಣನು ಅರಣ್ಯದಲ್ಲಿ ಕರುಗಳಿಗಾಗಿ ಹುಡುಕುತ್ತಿರುವಂತೆ ನಟಿಸಿದ. ಬ್ರಹ್ಮನಂತಹ ದೇವತೆಗಳಿಗೂ ಕೃಷ್ಣನ ಮನಸ್ಸು ಅರ್ಥವಾಗುವುದಿಲ್ಲ.

ಗೋಪಾಲಬಾಲಕರು ಮತ್ತು ಕರುಗಳಿಲ್ಲದೆ ತಾನು ವೃ೦ದಾವನಕ್ಕೆ ಹಿ೦ದಿರುಗುವುದು ಸಾಧ್ಯವಿಲ್ಲ ಎಂಬುವುದು ಕೃಷ್ಣನಿಗೆ ತಿಳಿದಿತ್ತು. ಮಕ್ಕಳು ಬರದಿದ್ದರೆ ಗೋಪಿಯರು ಮತ್ತು ಹಸುಗಳು ವಿನಾಶವಾಗಿಬಿಡುತ್ತಾರೆ. ಆದರೆ ಬ್ರಹ್ಮನಿಗೆ ಪಾಠ ಕಲಿಸಿ ತನ್ನ ಗುರುತನ್ನು ಅವನಿಗೆ ತೋರಿಸುವ ಅಗತ್ಯ ಕೃಷ್ಣನಿಗಿತ್ತು.

ಆದುದರಿಂದ ಕೃಷ್ಣನು ಅನೇಕ ಕರುಗಳು ಮತ್ತು ಗೋಪಾಲಕ ಬಾಲಕರಾಗಿ ವಿಸ್ತರಿಸಿಕೊಂಡ. ಇದು ಬ್ರಹ್ಮನು ಅಪಹರಿಸಿದ್ದ ಕರು ಮತ್ತು ಬಾಲಕರ ತದ್ರೂಪವಾಗಿತ್ತು. ಈ ರೀತಿ ರೂಪ ತಳೆದ ಗೋಪಾಲಬಾಲಕರು ಮತ್ತು ಕರುಗಳು ಕೃಷ್ಣನೊಂದಿಗೆ ವೃಂದಾವನಕ್ಕೆ ಹಿಂದಿರುಗಿದರು.

ಸರ್ವಾಕರ್ಷಕನಾದ ಕೃಷ್ಣನಿಂದ ಅವರು ಭಿನ್ನರಲ್ಲದ ಕಾರಣ, ಹಸುಗಳು ಮತ್ತು ಗೋಪಿಯರು, ಗೋಪರು ತಮ್ಮ ಮಕ್ಕಳಿಗೆ ಇನ್ನಷ್ಟು ಆಕರ್ಷಿತರಾದರು. ಎಲ್ಲ ಮನೆ ಮತ್ತು ಕೊಟ್ಟಿಗೆಗಳಲ್ಲಿ ಅಪರೂಪದ ಪ್ರೀತಿಯ ಹೊಳೆ ಹರಿದಿತ್ತು! ಹಸುಗಳು ಹೆಚ್ಚು ಹಾಲು ನೀಡುತ್ತಿದ್ದರೆ ಪೋಷಕರು ತಮ್ಮ ತಮ್ಮ ಮಕ್ಕಳಿಗೆ ಹೆಚ್ಚು ಪ್ರೀತಿಪಾತ್ರರಾಗಿದ್ದರು.

ಕೃಷ್ಣನ ಈ ಅದ್ಭುತ ಲೀಲೆ ವಿಷಯವು ಕೃಷ್ಣ, ಬಲರಾಮರಿಗಲ್ಲದೆ ವೃಂದಾವನದಲ್ಲಿ ಬೇರಾರಿಗೂ ಗೊತ್ತಿರಲಿಲ್ಲ. ಭೂಮಿಯಲ್ಲಿ ಒಂದು ವರ್ಷ ಸರಿದಾಗ, ತನ್ನ ಕಾಲಚಕ್ರದಲ್ಲಿ ಒಂದು ಕ್ಷಣವಾದಾಗ ಬ್ರಹ್ಮನು ಬ೦ದನು. ತಾನು ಹೇಗೆ ಕೃಷ್ಣನನ್ನು ಭೀತಿಯಿಂದ ಗೊಂದಲಗೊಳಿಸಿದೆ ಎಂಬುವುದನ್ನು ನೋಡುವುದೇ ಬ್ರಹ್ಮನ ಉದ್ದೇಶವಾಗಿತ್ತು.

ಆದರೆ ಬ್ರಹ್ಮನಿಗೆ ಅಚ್ಚರಿ ಕಾದಿತ್ತು. ಕೃಷ್ಣನು ಮತ್ತು ಅವನ ಮಿತ್ರರು ವಿಹಾರ ಸ್ಥಳದಲ್ಲಿ ತಾನು ಕಂಡಿದ್ದಂತೆಯೇ ಇರುವುದನ್ನು ನೋಡಿ ಬ್ರಹ್ಮ ಚಕಿತನಾದ. ಅವನಿಗೆ ಮಾತೇ ಹೊರಡದಾಯಿತು. ಬ್ರಹ್ಮನಿಗೆ ತನ್ನ ನಿಜವಾದ ಗುರುತನ್ನು ತೋರಲು ಕೃಷ್ಣನು ಈ ಹಸು ಮತ್ತು ಗೋಪಾಲ ಬಾಲಕರು ತನ್ನದೇ ಚತುರ್ಭುಜ ನಾರಾಯಣನ ರೂಪವಲ್ಲದೆ ಬೇರಾರೂ ಅಲ್ಲವೆಂಬುವುದನ್ನು ಪ್ರದರ್ಶಿಸಿದನು.

ನಾರಾಯಣನ ಈ ಎಲ್ಲ ರೂಪಗಳೂ ನೀಲಿ ವರ್ಣದ್ದಾಗಿತ್ತು ಮತ್ತು ಶಂಖ, ಚಕ್ರ, ಗದೆ ಮತ್ತು ಕಮಲವನ್ನು ಹಿಡಿದಿದ್ದ ನಾಲ್ಕು ಕರಗಳನ್ನು ಹೊಂದಿತ್ತು. ಅವು ಹೊಳೆಯುವ ಆಭರಣಗಳನ್ನು ತೊಟ್ಟಿದ್ದವು. ಅವರ ಎದೆಯನ್ನು ಅಲಂಕರಿಸಿದ್ದ ಪವಿತ್ರ ದಾರದ ಮಧ್ಯೆ ಶ್ರೀವತ್ಸ ಮುದ್ರ ಕಾಣುತ್ತಿತ್ತು.

ನಾರಾಯಣನ ಈ ರೂಪಗಳನ್ನು ಅನೇಕ ಜೀವಿಗಳು ಪೂಜಿಸುತ್ತಿರುವುದನ್ನು ಬ್ರಹ್ಮನು ನೋಡಿದ. ನಾರಾಯಣರೂಪಗಳು ಪರಮಾನಂದದಲ್ಲಿರುವುದನ್ನು ಅವನು ಕಂಡ. ತನ್ನ ಮು೦ದೆ ಏನಾಗುತ್ತಿದೆ ಎಂಬುವುದನ್ನು ಅರ್ಥಮಾಡಿಕೊಳ್ಳಲು ಅವನಿಗೆ ಸ್ವಲ್ಪ ಸಮಯವೇ ಬೇಕಾಯಿತು.

ಅವನು ಜ್ಞಾನದೇವತೆಯ ಪತಿ ಮತ್ತು ಸ್ವತಃ ಲೌಕಿಕ ಜ್ಞಾನದ ದೇವನಾಗಿದ್ದರೂ ಅವನಿಗೆ ನಾರಾಯಣನ ಪರಮ ಶಕ್ತಿಯನ್ನು ಅರ್ಥಮಾಡಿಕೊಳ್ಳುವುದು ಸಾಧ್ಯವಾಗಲಿಲ್ಲ. ಕೃಷ್ಣನನ್ನು ಭಯಪಡಿಸಿ ಗೊಂದಲಗೊಳಿಸಬೇಕೆಂದಿದ್ದ ಬ್ರಹ್ಮನು ಸ್ವತಃ ದಿಗ್ಮೂಢನಾದ. ದೇವೋತ್ತಮ ಪರಮಪುರುಷನ ಶಕ್ತಿಯ ಮುಂದೆ ಬ್ರಹ್ಮನದು ನಗಣ್ಯವಾಯಿತು.

ಬ್ರಹ್ಮನ ಬಗೆಗೆ ಅನುಕಂಪ ತೋರಿದ ಕೃಷ್ಣನು ಗೋಪಾಲ ಬಾಲಕನ ರೂಪಕ್ಕೆ ಹಿಂದಿರುಗಿದ. ಸಾಮಾನ್ಯವಾಗಿ ದೇವತೆಗಳು ನೆಲವನ್ನು ಸ್ಪರ್ಶಿಸುವುದಿಲ್ಲ ಅಥವಾ ಭೂಮಿಯ ಮೇಲೆ ಪ್ರಣಾಮ ಸಲ್ಲಿಸುವುದಿಲ್ಲ. ಆದರೆ ಬ್ರಹ್ಮನು ಕೃಷ್ಣನಿಗೆ ದಂಡವತ್ ನಮಸ್ಕಾರ ಮಾಡಿ ಕ್ಷಮೆ ಕೋರಿದನು.

ಅವನ ಕಣ್ಣೀರು ಕೃಷ್ಣನ ಪಾದಗಳನ್ನು ತೋಯಿಸಿದವು. ಈ ಲೋಕದಲ್ಲಿ ತಾನೇ ಪರಮಶಕ್ತಿ ಎಂದು ಬ್ರಹ್ಮನು ಯೋಚಿಸುತ್ತಿದ್ದ. ಭಗವಂತನು ತನಗೆ ತಿಳಿಸದೆ ಅವತಾರ ಮಾಡುವುದಿಲ್ಲ ಎಂದು ಬ್ರಹ್ಮ ಭಾವಿಸಿದ್ದ. ಕೃಷ್ಣನ ಪರಮ ಶಕ್ತಿಯನ್ನು ಬ್ರಹ್ಮನಂತಹ ದೇವತೆಗಳಿಗೂ ಸುಲಭವಾಗಿ ಅರ್ಥಮಾಡಿಕೊಳ್ಳುವುದು ಸಾಧ್ಯವಿಲ್ಲ ಎಂಬುವುದನ್ನು ಈ ಘಟನೆ ದೃಢಪಡಿಸಿದೆ.

ಈಗ ಅವನ ಅಹಂಕಾರ ಪೂರ್ಣವಾಗಿ ಅಡಗಿತು. ಕೃಷ್ಣನ ಅಸಂಖ್ಯ ಸೃಷ್ಟಿಗಳಲ್ಲಿ ತಾನೂ ಒಬ್ಬನೆಂದು ಅವನು ಗುರುತಿಸಿಕೊಳ್ಳತೊಡಗಿದ. ತನ್ನ ಮಾಲೀಕನಾದ ದೇವೋತ್ತಮ ಪರಮಪುರುಷನ ಸೂತ್ರದ ಗೊಂಬೆ ತಾನೆಂದು ತನ್ನ ಸ್ಥಾನವನ್ನು ಸ್ಥಾಪಿಸಿಕೊ೦ಡ. ಕೃಷ್ಣನೊಬ್ಬನೇ ಮಾಲೀಕ ಮತ್ತು ಉಳಿದವರು ಅವನ ಅಧೀನ ಎಂಬುವುದನ್ನು ಅರ್ಥಮಾಡಿಕೊಂಡ ಮೇಲೆ ಬ್ರಹ್ಮನು ವಿನಯದಿಂದ ಕೃಷ್ಣನಿಗೆ ಪ್ರಾರ್ಥನೆ ಸಲ್ಲಿಸಿದ.

ಕೃಷ್ಣನು ತನ್ನ ದೈವೀ ನಗೆಯಿಂದ ಬ್ರಹ್ಮನನ್ನು ಅನುಗ್ರಹಿಸಿದ. ಮತ್ತು ತನ್ನ ವೃ೦ದಾವನ ಲೀಲೆಗಳನ್ನು ಮುಂದುವರಿಸಿದ. ಕರುಗಳನ್ನು ಅಪಹರಿಸುವ ಬ್ರಹ್ಮನ ಈ ಮುಖ್ಯ ಲೀಲೆಯನ್ನು ದೇವೋತ್ತಮ ಪರಮಪುರುಷನು ಈ ತೇರಳಂದೂರುವಿನಲ್ಲಿ ಪುನರ್ ರೂಪಿಸಿದನು. ದೇವಸ್ಥಾನದ ಮುಂದೆ ದೊಡ್ಡ ಕೊಳವೊಂದಿದೆ. ಇದು ಯಮುನಾ ನದಿಯನ್ನು ಪ್ರತಿನಿಧಿಸುತ್ತದೆ. ಶ್ರೀ ಕೃಷ್ಣನು ಎಂತಹ ಉದಾರ ಹೃದಯದವನೆಂದರೆ, ತನ್ನ ಭಕ್ತರ ಆನಂದಕ್ಕಾಗಿ ಅವನು ತನ್ನ ಲೀಲೆಗಳನ್ನು ಪುನಃ ತೋರಿಸುತ್ತಾನೆ.

ರಾಜ ಉಪರಿಚರವಸುವಿಗಾಗಿ ಈ ಲೀಲೆಯನ್ನು ಮರು ಪ್ರದರ್ಶಿಸಲಾಯಿತು. ಒಮ್ಮೆ ರಾಜನು ತನ್ನ ರಥದಲ್ಲಿ ಆಕಾಶಯಾನ ಮಾಡುತ್ತಿದ್ದ. ಅವನಿಗೆ ಬ್ರಹ್ಮನಿಂದ ಪಡೆದಿದ್ದ ವರವೊಂದಿತ್ತು. ಅವನ ರಥದ ನೆರಳು ಯಾವುದರ ಮೇಲೆ ಬೀಳುವುದೋ ಅದು ಭಸ್ಮವಾಗುತ್ತಿತ್ತು. ಅಂತಹ ಒಂದು ಸಂದರ್ಭದಲ್ಲಿ ರಥದ ನೆರಳು ಬಿದ್ದು ಹುಲ್ಲುಗಾವಲಿನಲ್ಲಿ ಮೇಯುತ್ತಿದ್ದ ಕೆಲವು ಹಸುಗಳ ಸ್ವಲ್ಪ ಚರ್ಮ ಸುಟ್ಟಿತು.

ಗೋವುಗಳ ವಿಷಯದಲ್ಲಿ ಯಾವುದೇ ಅಮಾನವೀಯ ಕೃತ್ಯ ಎಸಗಿದರೂ ಅದನ್ನು ಕೃಷ್ಣನು ಸಹಿಸುವುದಿಲ್ಲ. ಹಸುಗಳನ್ನು ನೋಯಿಸುವ ಯಾರನ್ನೂ ಕೂಡ ಅವನು ಬಿಡುವುದಿಲ್ಲ. ಗೋವಿಂದನು ದೊಡ್ಡ ದೊಡ್ಡ ಅಪರಾಧಗಳನ್ನು ಕ್ಷಮಿಸುವನು. ಆದರೆ ಗೋವುಗಳ ವಿಷಯದಲ್ಲಿ ತಪ್ಪು ಮಾಡಿದರೆ ಅವರನ್ನು ಎಂದಿಗೂ ಕ್ಷಮಿಸುವುದಿಲ್ಲ.

ತತ್‌ಕ್ಷಣ ಕೃಷ್ಣನು ರಥವನ್ನು ಕೆಳಗೆ ಎಳೆದನು. ತನ್ನ ನಿರ್ಲಕ್ಷ್ಯಕ್ಕೆ ರಾಜನು ತೀವ್ರ ಗಾಯಗಳ ಶಿಕ್ಷೆ ಪಡೆಯಬೇಕಾಯಿತು. ಅನಂತರ ರಾಜನು ತಪಸ್ಸು ಕೈಗೊಂಡಾಗ ಕೃಷ್ಣನು ಬ್ರಹ್ಮವಿಮೋಹನ ಲೀಲೆಯನ್ನು ಪುನರ್ ಪ್ರದರ್ಶಿಸಿದನು ಮತ್ತು ರಾಜನನ್ನು ಕ್ಷಮಿಸಿದನು. ರಾಜ ಉಪರಿಚರವಸುವಿನ ರಥವನ್ನು (ತಮಿಳಿನಲ್ಲಿ ತೇರ್) ಕೃಷ್ಣನು ಕೆಳಗೆ ಎಳೆದ ಸ್ಥಳವನ್ನು ತೇರಳಂದೂರು ಎಂದು ಕರೆಯಲಾಯಿತು.

ದೇವಸ್ಥಾನ

ತೇರಳಂದೂರು ಪಟ್ಟಣವನ್ನು ಪ್ರವೇಶಿಸುತ್ತಿದಂತೆಯೇ ನಾವು ಬೃಹತ್ ಕೊಳವನ್ನು ನೋಡಬಹುದು. ಇದರ ದಡದಲ್ಲಿಯೇ ಬೃಹತ್ ತೇರಳಂದೂರು ದೇವಸ್ಥಾನ ಇರುವುದು. ಮುಖ್ಯ ರಾಜಗೋಪುರದಲ್ಲಿ ತಮಿಳಿನಲ್ಲಿ ರಾಮಾಯಣ ಬರೆದ ಪ್ರಸಿದ್ಧ ಕವಿ ಕಂಬನ ಪೂಜಾ ಮಂದಿರವಿದೆ. ಅವನನ್ನು ಅವನ ಪತ್ನಿಯೊಂದಿಗೆ ನೋಡಬಹುದು. ದೇವಸ್ಥಾನದಲ್ಲಿ ಎರಡು ಪ್ರಾಕಾರಗಳಿವೆ.

ಬೃಹತ್‌ ಧ್ವಜ ಸ್ತಂಭ ಮತ್ತು ಬಲಿಪೀಠವನ್ನು ದಾಟಿದ ಮೇಲೆ ನಾವು ಮಂಟಪಗಳನ್ನು ಪ್ರವೇಶಿಸುತ್ತೇವೆ. ಅಲ್ಲಿಂದ ಗರ್ಭ ಗುಡಿಗೆ. ವಿಮಾನವನ್ನು ಗರುಡ ವಿಮಾನ ಎನ್ನುತ್ತಾರೆ. ತೇರಳಂದೂರುವಿನ ವೈಶಿಷ್ಟ್ಯವೆಂದರೆ ಗರ್ಭಗುಡಿಯಲ್ಲಿ ಭಗವಂತನೊಂದಿಗೆ ಗರುಡ ಮತ್ತು ಪ್ರಹ್ಲಾದ ಇರುವುದು.

    ಗರುಡನು ಮಂದಿರದ ವಿಮಾನ ಮತ್ತು ಗರ್ಭಗುಡಿಯನ್ನು ಭಗವಂತನಿಗೆ ಅರ್ಪಿಸಿದ್ದನು. ಇದರಿಂದ ಸಂಪ್ರೀತನಾದ ಭಗವಂತನು ಗರುಡನಿಗೆ ತನ್ನ ಪಕ್ಕದಲ್ಲಿಯೇ ಸ್ಥಳ ನೀಡಿದನು. ನರಸಿಂಹನ ರೂಪದಲ್ಲಿ ವಿಷ್ಣುವನ್ನು ನೋಡಿದ್ದ ಪ್ರಹ್ಲಾದನಿಗೆ ಭಗವಂತನ ಗೋಪಾಲಕ ರೂಪವನ್ನು ನೋಡುವ ಅಪೇಕ್ಷೆಯಾಗಿ ತಪಸ್ಸು ಮಾಡಿದನು. ಪ್ರಹ್ಲಾದನ ಇಚ್ಛೆಯಂತೆ ದರ್ಶನ ನೀಡಿದ ಭಗವಂತನು ಅವನಿಗೂ ತನ್ನ ಪಕ್ಕದಲ್ಲಿ ಸ್ಥಳ ನೀಡಿದನು.

    ದೇವೋತ್ತಮ ದೇವಾಧಿರಾಜನು ಬ್ರಹ್ಮನಿಗೆ ನೀಡಿದ ಚರ್ತುಭುಜ ರೂಪದ ದರ್ಶನವನ್ನು ನೀಡುತ್ತಾನೆ. ಶಂಖ, ಚಕ್ರ, ಗದೆ ಮತ್ತು ಕಮಲ ಪುಷ್ಪದೊಂದಿಗೆ ದರ್ಶನ ನೀಡುವ ಭಗವಂತನನ್ನು ವರ್ಣಿಸಲಸಾಧ್ಯ. ಉತ್ಸವ ಮೂರ್ತಿ ಶ್ರೀ ಗೋಸಖನನ್ನು ಮೂರು ಹಸುಗಳು ಸುತ್ತುವರಿದಿವೆ. ದೇವಿಯರಾದ ಲಕ್ಷ್ಮೀ, ಸರಸ್ವತಿ ಮತ್ತು ದುರ್ಗೆಯರು ಗೋಸಖನ ಸೇವೆಗಾಗಿ ಗೋವಿನ ರೂಪದಲ್ಲಿ ಬಂದರೆಂದು ಹೇಳಲಾಗುತ್ತದೆ.

    ಗರುಡ ಮತ್ತು ಪ್ರಹ್ಲಾದನೊ೦ದಿಗೆ, ಗೋವುಗಳು ಪ್ರಭುವಿನತ್ತ ನೋಟ ಬೀರುವ, ಚರ್ತುಭುಜ ಭಗವಂತನ ಇಡೀ ದರ್ಶನವು ಬ್ರಹ್ಮನೊಂದಿಗೆ ಭಗವಂತನ ವೃಂದಾವನ ಲೀಲೆಯನ್ನು ನೆನಪು ಮಾಡಿಕೊಡುತ್ತದೆ. ಪ್ರಭುವಿನ ದರ್ಶನ ಮಾಡಿದವರೆಲ್ಲರೂ ಕೂಡ ಬ್ರಹ್ಮ ಅನುಭವಿಸಿದ ಭಕ್ತಿ ಮತ್ತು ನಮ್ರ ಭಾವವನ್ನು ಅನುಭವಿಸುವರು.

    ದೇವಸ್ಥಾನದಲ್ಲಿ ಅನೇಕ ಉಪ ಪೂಜಾ ಸ್ಥಳಗಳಿವೆ. ಶ್ರೀ ಗೋಸಖನ ಪತ್ನಿಯನ್ನು ಸೆಂಗಮಲವಲ್ಲಿ ತಾಯಾರ್‌‌ ಎಂದು ಕರೆಯುತ್ತಾರೆ. ಚಿನ್ನದ ಕಮಲದ ಮೇಲೆ ಕುಳಿತಿರುವ ಭಂಗಿಯಲ್ಲಿರುವ ದೇವಿಯ ಕರಗಳಲ್ಲಿ ಕಮಲ ಪುಷ್ಪಗಳಿವೆ. ಮುಖ್ಯ ಗರ್ಭಗುಡಿಯ ಪಕ್ಕದಲ್ಲಿ ವಾಸುದೇವ ಪೂಜಾ ಗುಡಿಯಿದೆ.

    ಮುಖ್ಯ ಗರ್ಭಗುಡಿ ಮತ್ತು ವಾಸುದೇವ ಗುಡಿಯ ಮಧ್ಯೆ ನರಸಿಂಹ ದೇವರ ಗುಡಿಯಿದೆ. ಮುಖ್ಯ ಗರ್ಭಗುಡಿಯ ಉತ್ತರಕ್ಕೆ ಸೀತಾದೇವಿ ಮತ್ತು ಲಕ್ಷ್ಮಣ ಸಮೇತ ಶ್ರೀರಾಮಚಂದ್ರನ ಗುಡಿಯಿದೆ. ವಾಸುದೇವ ಗುಡಿಯ ಎದುರಿಗೆ ವೈಕುಂಠಾಧಿಪತಿಯ ಸೇನಾಪತಿ ವಿಶ್ವಕ್ಸೇನನ ಗುಡಿಯಿದೆ.

    ಸೆಂಗಮಲವಲ್ಲಿ ತಾಯಾರ್‌‌ ಮಂದಿರದ ಮುಂದೆ ಶ್ರೀ ವೈಷ್ಣವ ಆಚಾರ್ಯರ ಮಂದಿರವಿದೆ. ಧ್ವಜ ಸ್ತಂಭದ ಎದುರಿಗೆ ಹನುಮಾನ್ ಮಂದಿರವನ್ನು ನೋಡಬಹುದು. ಇಲ್ಲಿ ಹನಮಂತನಿಗೆ ಬೆಣ್ಣೆ ಸೇವೆ ನಡೆಯುತ್ತಲೇ ಇರುತ್ತದೆ.

    ದೇವಸ್ಥಾನದ ಎದುರಿಗೆ ದೇವೋತ್ತಮನ ಮತ್ತೊಂದು ಮಂದಿರವಿದೆ. ಇದು ಶ್ರೀ ರಂಗನಾಥ ಮತ್ತು ಶ್ರೀ ಗೋವಿಂದರಾಜ ದೇವಸ್ಥಾನ.

    ಉತ್ಸವಗಳು

    ಏಪ್ರಿಲ್‌ನಲ್ಲಿ ಶ್ರೀರಾಮನಿಗಾಗಿ 10 ದಿನಗಳ ಉತ್ಸವವಿದೆ. ಮೇ ತಿಂಗಳಿನಲ್ಲಿ ವಸಂತೋತ್ಸವವನ್ನು ಆಚರಿಸಲಾಗುವುದು.

    ಮೇ ಅಥವಾ ಜೂನ್ ತಿಂಗಳಿನಲ್ಲಿ 10 ದಿನಗಳ ವೈಭವಯುತ ಬ್ರಹ್ಮೋತ್ಸವ ನಡೆಯುತ್ತದೆ. ಈ ಉತ್ಸವದ ಸಂದರ್ಭದಲ್ಲಿ ಭಗವಂತನನ್ನು ಗರುಡ, ಹನುಮಂತ ಮುಂತಾದ ವಾಹನಗಳಲ್ಲಿ ಕೊಂಡೊಯ್ಯಲಾಗುವುದು.

    ಜುಲೈ ಮಾಹೆಯಲ್ಲಿ 10 ದಿನಗಳ ಕಾಲ ಪ್ರಭುವಿನ ಪತ್ನಿ ಆಂಡಾಳ್ ಉತ್ಸವ ನಡೆಯುತ್ತದೆ.

    ಈ ಮಂದಿರದಲ್ಲಿ ಜನ್ಮಾಷ್ಟಮಿಯನ್ನು ವೈಭವದಿಂದ ಆಚರಿಸಲಾಗುತ್ತದೆ.

    ನವೆಂಬರ್‌ನಲ್ಲಿ 10 ದಿನಗಳ ಪವಿತ್ರೋತ್ಸವ ನಡೆಯುತ್ತದೆ. ಆಗ ಭಗವಂತನನ್ನು ವಿವಿಧ ವರ್ಣಗಳ ರೇಷ್ಮೆ ಹಾರಗಳಿಂದ ಅಲಂಕರಿಸಲಾಗುತ್ತದೆ.

    ನವೆಂಬರ್‌ನಲ್ಲಿ ದೀಪೋತ್ಸವದ ಸಂಭ್ರಮ. ವೈಕುಂಠ ಏಕಾದಶಿಯ ಆಚರಣೆಯು 21 ದಿನಗಳು ನಡೆಯುತ್ತದೆ.

    ಏಪ್ರಿಲ್‌ನಲ್ಲಿ 10 ದಿನಗಳ ಕಾಲ ಸೆಂಗಮಲವಲ್ಲಿ ತಾಯಾರ್ ಉತ್ಸವವನ್ನು ಆಚರಿಸಲಾಗುವುದು. ಆಗ ಶ್ರೀ ಗೋಸಖ ಮತ್ತು ತಾಯಾರ್ ಅವರ ದಿವ್ಯ ಕಲ್ಯಾಣವನ್ನು ಪುನರ್‌ ದರ್ಶಿಸಲಾಗುವುದು.

    ಈ ಲೇಖನ ಶೇರ್ ಮಾಡಿ

    Leave a Reply

    Your email address will not be published. Required fields are marked *

    UPI ID : bvdsstseva@sbi