ದೇವಕಿಯ ಉನ್ನತ ಜ್ಞಾನ

– ಆಕರ : ಶ್ರೀ ಚಂಚಲಾಪತಿದಾಸರ ಉಪನ್ಯಾಸ ಉಪಾಧ್ಯಕ್ಷರು, ಇಸ್ಕಾನ್‌, ಬೆಂಗಳೂರು, ಅನುವಾದ: ಚೇತನಾ ತೀರ್ಥಹಳ್ಳಿ

ಬಹವೋ ಹಿಂಸಿತಾ ಭ್ರಾತಃ ಶಿಶವಃ ಪಾವಕೋಪಮಾಃ

ತ್ವಯಾ ದೈವನಿಸೃಷ್ಟೇನ ಪುತ್ರಿಕೈಕಾ ಪ್ರದೀಯತಾಮ್ ||

(ಭಾಗವತ 10.4.5)

ನನ್ನ ಪ್ರೀತಿಯ ಅಣ್ಣನೇ, ಪ್ರಾರಬ್ಧವಶಾತ್ ನೀನು ಅನೇಕ ಹಸುಗೂಸುಗಳನ್ನು ಕೊಂದಿರುವೆ; ಅವುಗಳಲ್ಲಿ ಒಂದೊಂದು ಅಗ್ನಿಯಂತೆ ತೇಜಸ್ವಿಯೂ ಸುಂದರವೂ ಆಗಿತ್ತು. ಆದರೆ ಈ ಮಗಳನ್ನು ದಯವಿಟ್ಟು ಉಳಿಸಿಕೊಡು. ಅವಳನ್ನು ನಿನ್ನ ಕೊಡುಗೆಯಾಗಿ ನನಗೆ ಕೊಡು.

ಭಗವಾನ್ ಶ್ರೀಕೃಷ್ಣನು ದೇವಕಿಯ ಒಡಲಿಂದ ಜನ್ಮವೆತ್ತುತ್ತಾನೆ. ಮತ್ತೀಗ ಅವಳ ಮಡಿಲಲ್ಲಿ ಕೃಷ್ಣನ ಬದಲಿಗೆ ನಂದನ ಪುತ್ರಿಯಿದ್ದಾಳೆ. ದೇವಕಿಗೆ ಕಂಸನ ಭಯ. ಅದಾಗಲೇ ಒಂದರ ಮೇಲೊಂದರಂತೆ ತನ್ನ ಮಕ್ಕಳನ್ನು ಹತ್ಯೆ ಮಾಡಿದ್ದ ದುಷ್ಟ ಕ೦ಸ ಈ ಮಗುವನ್ನೂ ಕೊಂದು ಹಾಕಿದರೆ? ಹೀಗೆಂದು ಯೋಚಿಸಿದ ಆಕೆ ಶಿಶುವನ್ನು ರಕ್ಷಿಸುವ ಬಗ್ಗೆ ಚಿಂತಿಸತೊಡಗುತ್ತಾಳೆ.

ಇದನ್ನು ಪ್ರಭುಪಾದರು ಬಹಳ ವಿಸ್ತೃತವಾಗಿ ಚರ್ಚಿಸಿದ್ದಾರೆ. ಕ್ಷತ್ರಿಯ ಕುಟುಂಬದಿಂದ ಬಂದ ದೇವಕಿ ಹೀಗೆ ಯೋಚಿಸುವುದು ಸಹಜ. ಪ್ರಭುಪಾದರು ವೈದಿಕ ಕಾಲದ ವರ್ಣಾಶ್ರಮ ಧರ್ಮದ ಬಗ್ಗೆ ಬಹಳ ವಿವರವಾಗಿ ಬರೆದಿದ್ದಾರೆ. ರಾಜ್ಯದಲ್ಲಿ ಯಾರಾದರೊಬ್ಬ ಪ್ರಜೆಯು ರಾಜನ ವಿರುದ್ಧ ಬಂಡಾಯ ಏಳುವುದು ಅಥವಾ ಸಮಾಜದಲ್ಲಿ ಅಶಾಂತಿ ಹರಡುವುದು ಏನಾದರೊಂದನ್ನು ಮಾಡ ತೊಡಗಿದಾಗ ರಾಜನು ಅವನನ್ನೂ ಮಟ್ಟ ಹಾಕಲು ಬಗೆ ಬಗೆಯ ಕ್ರಮ ಕೈಗೊಳ್ಳುತ್ತಾನೆ.

ವ್ಯಕ್ತಿಯನ್ನು ತಿದ್ದಲು ನಾಲ್ಕು ಬಗೆಯ ಕ್ರಮಗಳಿವೆ. ಅವುಗಳಲ್ಲಿ ಮೊದಲನೆಯದು ಸಾಮ. ‘ಸಾಮ’ ಎಂದರೆ ಆ ವ್ಯಕ್ತಿಯನ್ನು ಸವಿಯಾದ ಮಾತುಗಳಿಂದ ಸಮಾಧಾನಪಡಿಸುವುದು. ಅವನ ಮನಸ್ಸನ್ನು ಗೆಲ್ಲುವುದು. ಆಗ ಆ ತಪ್ಪಿತಸ್ಥ ವ್ಯಕ್ತಿಯು, “ಓಹೋ! ರಾಜನು ನನ್ನನ್ನು ಕರೆದು ಒಳ್ಳೆಯ ಮಾತುಗಳನ್ನಾಡಿದನು.

ನಾನು ನನ್ನ ಪಿತೂರಿಯನ್ನು ನಿಲ್ಲಿಸುತ್ತೇನೆ” ಎಂದು ಚಿಂತಿಸುತ್ತಾನೆ. ಆದರೆ ಕೆಲವರಿಗೆ ಇಷ್ಟು ಸಾಕಾಗುವುದಿಲ್ಲ. ಆಗ ರಾಜನು ಬಂಗಾರದ ನಾಣ್ಯಗಳನ್ನೂ, ಭೂಮಿಯನ್ನೋ ಕೊಟ್ಟು ಆತನನ್ನು ಸಮಾಧಾನಪಡಿಸುತ್ತಾನೆ. ಈ ಬಗೆಯನ್ನು ‘ದಾನ’ ಎನ್ನುವರು. ಮೊದಲನೆಯದು ಸಾಮ, ಎರಡನೆಯದು ದಾನ.

ವಿವಾದಾಸ್ಪದ ವ್ಯಕ್ತಿಯು ಇವೆರಡಕ್ಕೂ ಬಗ್ಗದೆ ಹೋದಾಗ, ಮತ್ತೆ ತನ್ನ ಹಳೆಯ ಪಿತೂರಿಯನ್ನೇ ಮುಂದುವರಿಸಿದಾಗ ರಾಜನು ಮುಂದಿನ ಕ್ರಮಕ್ಕೆ ಸಜ್ಜಾಗುತ್ತಾನೆ. ಸಾಮಾನ್ಯವಾಗಿ ಪಿತೂರಿ ನಡೆಸುವ ವ್ಯಕ್ತಿಗೆ ತನ್ನದೇ ಆದ ಒಂದು ಬೆಂಬಲಿಗರ ಪಡೆ ಇರುತ್ತದೆ. ರಾಜನು ತನ್ನ ಗೂಢಾಚಾರರನ್ನು ಅಲ್ಲಿಗೆ ಕಳುಹಿಸಿ, ಆತನ ಗುಂಪಿನಲ್ಲಿ ಒಡಕುಂಟಾಗುವಂತೆ ಮಾಡುತ್ತಾನೆ.

ಆಗ ಪಿತೂರಿಕೋರನ ಗುಂಪು ಎರಡಾಗುತ್ತದೆ. ಇದರಿಂದ ಆತನ ಬಲ ತಗ್ಗುತ್ತದೆ. ಈ ಉಪಾಯವನ್ನು ‘ಭೇದ’ ಎನ್ನುತ್ತಾರೆ. ಹೀಗೆ ಅನುಕ್ರಮವಾಗಿ ಸಾಮ, ದಾನ, ಭೇದಗಳನ್ನು ಪ್ರಯೋಗಿಸಲಾಗುತ್ತದೆ. ಆದರೂ ಪಿತೂರಿ ನಿಲ್ಲದಿದ್ದಾಗ ರಾಜನು ಅಂತಿಮ ಉಪಾಯ ಕೈಗೆತ್ತಿಕೊಳ್ಳುತ್ತಾನೆ.

ತನ್ನ ಸೈನಿಕರನ್ನು ಕಳುಹಿಸಿ ಪಿತೂರಿಗಾರರನ್ನು ಬಂಧಿಸಿ ತರುತ್ತಾನೆ. ಅವರಿಗೆ ಶಿಕ್ಷೆ ವಿಧಿಸುತ್ತಾನೆ. ಈ ಕೊನೆಯ ಮಾರ್ಗೋಪಾಯವೇ ‘ದಂಡ’. ದಂಡ ಎಂದರೆ ಕೋಲು. ಇದು ಶಿಕ್ಷೆಯನ್ನು ಸೂಚಿಸುವಂಥದ್ದು, ಸರಳ ಉಪಾಯಗಳೊಂದೂ ಕೈಗೂಡದೆ ಹೋದಾಗ ಈ ಕೊನೆಯದನ್ನು ಆಶ್ರಯಿಸುವುದು ಅಗತ್ಯವಾಗುತ್ತದೆ. ಇವು ಆಡಳಿತದ ನಿಯಮಗಳು. ಪ್ರತಿಯೊಬ್ಬ ರಾಜನೂ, ಪ್ರತಿಯೊಬ್ಬ ಆಡಳಿತಗಾರನೂ ಈ ಬಗೆಯ ಸ೦ಗತಿಗಳಲ್ಲಿ ತರಬೇತಿ ಪಡೆದಿರುತ್ತಾನೆ.

ಬಾಲಕ ಪ್ರಹ್ಲಾದನ ಗುರುಗಳಿಗೆ ಹಿರಣ್ಯಕಶಿಪುವು ತನ್ನ ಮಗನಿಗೆ ಆಡಳಿತದ ಈ ಎಲ್ಲ ನಿಯಮಗಳನ್ನು ಕಲಿಸಬೇಕೆಂದು ತಾಕೀತು ಮಾಡಿದ್ದನು. ಉತ್ತಮ ರಾಜನಾಗಬೇಕೆಂದರೆ ಇಂತಹ ತರಬೇತಿಯ ಅಗತ್ಯವಿದೆ ಎಂಬುದನ್ನು ಆತನು ಅರಿತಿದ್ದನು. ಪ್ರಭುಪಾದರು ದೇವಕಿ ಕೂಡ ಇಂತಹ ಗುಣವನ್ನು ಅಳವಡಿಸಿಕೊಂಡಿದ್ದಳೆನ್ನುವುದನ್ನು ವಿವರಿಸುತ್ತಾರೆ. ಪ್ರಭುಪಾದರು ಹಿಂದಿನ ಶ್ಲೋಕದಲ್ಲಿ ಆಕೆಯು ಮೃದುವಾಗಿ, ಮಾತನಾಡುವುದನ್ನು ಉಲ್ಲೇಖಿಸುತ್ತಾರೆ;

ದೇವಕಿಯು ಕಂಸನನ್ನು `ಕಲ್ಯಾಣಗುಣ’ ದವನೆಂದು ಹೊಗಳುತ್ತಾ, ಆತನು ತನ್ನ ಮಕ್ಕಳನ್ನು ಕೊಂದುದು ವಿಧಿ ಲಿಖಿತವೆಂದು ಹೇಳುತ್ತಾಳೆ. ಹಾಗೇ ಮುಂದುವರಿದು, ಇದೊಂದು ಮಗುವನ್ನು ತನಗೆ ಬಿಟ್ಟುಕೊಡುವಂತೆ ಕೇಳುತ್ತಾಳೆ. ಇಲ್ಲಿ ನಾವು ದೇವಕಿಯು ಯಾವೆಲ್ಲ ವಿಧಾನಗಳ ಮೂಲಕ ಪಣ ತೊಟ್ಟಿದ್ದಾಳೆ ಎಂಬುದನ್ನು ಗಮನಿಸಬಹುದು.

ಈ ಉದಾಹರಣೆಯ ಮೂಲಕ ಪ್ರಭುಪಾದರು ದೇವಕಿಯ ನೈಪುಣ್ಯವನ್ನು ಎತ್ತಿ ತೋರಿಸುತ್ತಿದ್ದಾರೆ. ದೇವಕಿಗೆ ಆಡಳಿತ ತಂತ್ರಗಳ ಅರಿವಿದೆ. ಅವಳು ಜ್ಞಾನ ಪಡೆದವಳಾಗಿದ್ದಾಳೆ. ಕ್ಷತ್ರಿಯ ಕುಲದಿಂದ ಬಂದ ಆಕೆಗೆ ಅವೆಲ್ಲದರ ತರಬೇತಿಯಿದೆ. ಅವಳು ತನ್ನ ನೈಪುಣ್ಯವನ್ನು ಅಗತ್ಯವಿದ್ದಾಗ ಪ್ರದರ್ಶಿಸಿದ್ದಾಳೆ ಕೂಡ.

ಅವಳ ತಂದೆ, ಮಂತ್ರಿಗಳು ಇವರೆಲ್ಲರ ನಡವಳಿಕೆಯನ್ನು ದೇವಕಿ ಅರಿತಿದ್ದಳು. ಪ್ರಭುಪಾದರು ಇಲ್ಲಿ ಮತ್ತೊಂದು ಅಂಶವನ್ನು ಎತ್ತಿಹಿಡಿಯುತ್ತಾರೆ. ದೇವಕ ಅಷ್ಟೊಂದು ಸಮರ್ಥಳಾಗಿದ್ದರೂ ಕೂಡ ಅದನ್ನು ಅನಾವಶ್ಯಕವಾಗಿ ಪ್ರಯೋಗಿಸಲಿಲ್ಲ. ಮಹಾಭಾರತದುದ್ದಕ್ಕೂ ನಾವು ಅನೇಕ ವಿಧಗಳಿಂದ ಸಮರ್ಥರಾದ ಮಹಿಳೆಯರ ಚಿತ್ರಣವನ್ನು ಕಾಣಬಹುದು.

ಆದರೆ ಅವರು ಯಾರೂ ಕೂಡ ರಾಜ್ಯದ ಆಡಳಿತ ಸೂತ್ರವನ್ನು ಕೈಗೆತ್ತಿಕೊಳ್ಳಲಿಲ್ಲ. ವೈದಿಕ ಶಾಸ್ತ್ರಗಳಲ್ಲಿ ಸ್ತ್ರೀಯರಿಗೆಂದೇ ವಿಶೇಷ ಕರ್ತವ್ಯಗಳನ್ನು ನಿರ್ದೇಶಿಸಲಾಗಿದೆ. ಅವರಿಗೆ ವಿಶಿಷ್ಟ ಸ್ಥಾನವನ್ನೂ ನೀಡಲಾಗಿದೆ. ಅದರಂತೆ, ಅವರು ಸದಾ ರಕ್ಷಣೆಯಲ್ಲಿರುತ್ತಾರೆ. ಮನು ಸಂಹಿತೆಯಲ್ಲಿ ಇದನ್ನು ವಿವರಿಸಲಾಗಿದೆ.

ಸು೦ದರ ತರುಣಿಯರು ಪುರುಷರಲ್ಲಿ ಕಾಮ ವಾಂಛೆಯನ್ನು ಪ್ರಚೋದಿಸುತ್ತಾರೆ. ಇದು ಪ್ರಕೃತಿ ಸಹಜ ಅಂಶ. ಇದರಿಂದ ಪುರುಷನು ಸ್ತ್ರೀಯೊಂದಿಗೆ ಅನೈತಿಕವಾಗಿ ನಡೆದುಕೊಳ್ಳುವ ಸಾಧ್ಯತೆ ಇರುತ್ತದೆ. ಇಂತಹ ಘಟನೆಗಳು ನಡೆಯಬಾರದೆಂದೇ ಶಾಸ್ತ್ರಗಳು ಸ್ತ್ರೀಯರು ಸದಾ ರಕ್ಷಣೆಯಲ್ಲಿರಬೇಕೆಂದು ನಿರ್ದೇಶಿಸಿವೆ.

ಬಾಲ್ಯದಲ್ಲಿ ಹೆಣ್ಣು ಮಕ್ಕಳು ತಂದೆಯಿಂದ ರಕ್ಷಿಸಲ್ಪಡಬೇಕು; ಯೌವನದಲ್ಲಿ ಪತಿಯಿಂದ ರಕ್ಷಿಸಲ್ಪಡಬೇಕು, ಮತ್ತು ವೃದ್ಧಾಪ್ಯದಲ್ಲಿ ಮಗನಿಂದ ರಕ್ಷಿಸಲ್ಪಡಬೇಕು. – ಇದು ನಿಯಮ. ಈ ನಿಯಮದ ಹಿಂದೆ ಕಾರಣಗಳಿಲ್ಲವೆಂದಲ್ಲ. ಅವರು ಧಾರ್ಮಿಕ, ಆಧ್ಯಾತ್ಮಿಕ ಪ್ರಕ್ರಿಯೆಗಳಲ್ಲಿ ಪಾಲ್ಗೊಳ್ಳುವಂತಿಲ್ಲವೆಂದಲ್ಲ. ಖಂಡಿತ ಅವರೂ ಅದನ್ನು ಸಾಧಿಸಬಹುದು. ಸ್ವತಃ ಶ್ರೀಕೃಷ್ಣನೇ ಭಗವದ್ಗೀತೆಯಲ್ಲಿ ಇದನ್ನು ಸ್ಪಷ್ಟಪಡಿಸಿದ್ದಾನೆ.

ಮಾಂ ಹಿ ಪಾರ್ಥ ವ್ಯಪಾಶ್ರಿತ್ಯ ಯೇಽಪಿ ಸ್ಯುಃ ಪಾಪಯೋನಯಃ |

ಸ್ತ್ರೀಯೋ ವೈಶ್ಯಾಸ್ತಥಾ ಶೂದ್ರಾಸ್ತೇಽಪಿ ಯಾನ್ತಿ ಪರಾಂ ಗತಿಮ್ ||

ತೇಪಿ ಯಾನ್ತಿ… ಅವರು ಕೂಡ ಪರಮಗತಿಯನ್ನೇ ಪಡೆಯಬಲ್ಲರು. ಸ್ತ್ರೀಯರು, ವೈಶ್ಯರು, ಶೂದ್ರರು ಕೂಡ. ಇವರು ಯಾರಿಗೂ ಉನ್ನತ ಆಧ್ಯಾತ್ಮ ಜ್ಞಾನ ಹೊಂದದಂತೆ ನಿರ್ಬಂಧವಿಲ್ಲ. ಆದರೆ, ಸಾಮಾಜಿಕವಾಗಿ, ಸಮಾಜ ಜೀವನದಲ್ಲಿ ಅವರ ಪಾತ್ರಗಳ ಕುರಿತಾಗಿ ಕೆಲವು ನಿರ್ಬಂಧಗಳಿವೆಯಷ್ಟೆ.

ಇವೆಲ್ಲವೂ ಅವರ ಒಳಿತಿಗಾಗಿಯೇ ಇವೆ. ಅವರ ಆಧ್ಯಾತ್ಮಿಕ, ಲೌಕಿಕ ಮತ್ತು ಸಾಮಾಜಿಕ ಬದುಕಿನ ಲಾಭಕ್ಕಾಗಿಯೇ ಇವೆ. ಪ್ರಭುಪಾದರು ಹೇಳುವಂತೆ, ಈ ವ್ಯವಸ್ಥೆ ಉತ್ತಮ ಸಮಾಜದ ನಿರ್ಮಾಣಕ್ಕಾಗಿಯೇ ಮಾಡಲಾಗಿದೆ. ಇದರಿಂದ ಸಮಾಜದಲ್ಲಿ ಶಾಂತಿ ನೆಲೆಸಿರುತ್ತದೆ.

ಆದರೆ ಇಂದಿನ ಜನರು ಈ ವ್ಯವಸ್ಥೆಯನ್ನು ಒಪ್ಪಿಕೊಳ್ಳುವುದಿಲ್ಲ. ಇದು ಕಲಿಯುಗದ ಪ್ರಭಾವವೇ ಸರಿ. ಬಹುತೇಕ ಜನರು ಈ ಬಗೆಯ ಯೋಜನೆಯ ವಿರುದ್ಧವಿದ್ದಾರೆ ಮತ್ತು ಶಾಸ್ತ್ರಗಳ ನಿರ್ದೇಶನವನ್ನೂ ಸಮ್ಮತಿಸಲು ಅವರು ಸರ್ವಥಾ ಸಿದ್ಧರಿಲ್ಲ. ಆಚಾರ್ಯರಿಂದ ನೀಡಲ್ಪಟ್ಟ ನಿರ್ದೇಶನಗಳನ್ನು ಅವರು ಅಂಗೀಕರಿಸುವುದಿಲ್ಲ. ಇದೊಂದು ದುರದೃಷ್ಟ.

ಇಲ್ಲಿ ದೇವಕಿ ಮತ್ತೊಂದು ಮಾತನ್ನು ಹೇಳುತ್ತಿದ್ದಾಳೆ

ಬಹವೋ ಹಿಂಸಿತಾ ಭ್ರಾತಃ ಶಿಶವಃ ಪಾವಕೋಪಮಾಃ |

 ತ್ವಯಾ ದೈವನಿಸೃಷ್ಟೇನ ಪುತ್ರಿಕೈಕಾ ಪ್ರದೀಯತಾಮ್ ||

(ಭಾಗವತ 10.4.5)

ಅವಳು ಅದೆಲ್ಲವೂ ‘ವಿಧಿಲಿಖಿತ’ ವೆಂದು ಹೇಳುತ್ತಿದ್ದಾಳೆ. ಈ ಎಲ್ಲ ದುಃಖಗಳು, ಯಾತನೆಗಳು ಇವೆಲ್ಲವೂ ದೈವದಿಂದ ನಿರ್ಧರಿಸಲ್ಪಟ್ಟದ್ದು ಎಂದು ಅವಳು ಅರಿತಿದ್ದಾಳೆ. ಭಾಗವತದಲ್ಲಿ ನೀಡಲಾಗಿರುವ ಈ ಬೋಧನೆಯು ಅತ್ಯಂತ ಪ್ರಮುಖವಾದುದು. ಇದು ನಮ್ಮನ್ನು ಆಧ್ಯಾತ್ಮಿಕತೆಯನ್ನು ಗಂಭೀರವಾಗಿ ಪರಿಗಣಿಸುವಂತೆ ಪ್ರೇರೇಪಿಸುತ್ತದೆ.

ನಾರದ ಮುನಿಗಳು ವೇದವ್ಯಾಸರಿಗೆ ಈ ನಿರ್ದೇಶನವನ್ನು ನೀಡಿದ್ದಾರೆ;

ತಸ್ಸೈವ ಹೇತೋಃ ಪ್ರಯತೇತ ಕೋವಿದೋ

ಲಭ್ಯತೇ ಯ‌ದ್‌ ಭ್ರಮತಾಮುಪರ್ಯಧಃ |

ತಲ್ಲಭ್ಯತೇ ದುಃಖವದನ್ಯತಃ ಸುಖಂ

ಕಾಲೇನ ಸರ್ವತ್ರ ಗಭೀರ ರಂಹಸಾ ||

ಈ ಶ್ಲೋಕವನ್ನು ಪ್ರಭುಪಾದರು ಬಹಳ ಬಾರಿ ಉಲ್ಲೇಖಿಸಿದ್ದಾರೆ. ಇದರ ಅರ್ಥ ಬಹಳ ಸ್ವಾರಸ್ಯಕರವಾಗಿಯೂ ತಾರ್ಕಿಕವಾಗಿಯೂ ಇದೆ.

ಅತ್ಯಂತ ಮೇಲಿನ ಬ್ರಹ್ಮಲೋಕದಿಂದ ಅತ್ಯಂತ ಕೆಳಗಿನ ಪಾತಾಳ ಲೋಕದವರೆಗೆ ಅಲೆದರೂ ಯಾವುದು ದುರ್ಲಭವಾಗಿದೆಯೋ ಅಂತಹ ಉದ್ದೇಶಸಾಧನೆಗಾಗಿ ಮಾತ್ರವೇ ಬುದ್ಧಿವಂತರೂ ಮತ್ತು ತತ್ವ್ತಾಸಕ್ತರೂ ಆದವರು ಪ್ರಯತ್ನಿಸಬೇಕು. ಇಂದ್ರಿಯಭೋಗದಿಂದ ಸಿಗುವ ಸುಖದ ಬಗ್ಗೆ ಒಂದು ಮಾತು. ನಾವು ಬಯಸದಿದ್ದರೂ ಕಾಲಾನಂತರ ನಮಗೆ ಹೇಗೆ ದುಃಖ ಪ್ರಾಪ್ತವಾಗುವುದೋ ಹಾಗೆಯೇ ವಿಷಯಸುಖ ಕೂಡ ಕಾಲಾನಂತರ ತಾನಾಗಿಯೇ ಲಭ್ಯವಾಗುತ್ತದೆ.

ಅತಿ ಹೆಚ್ಚಿನ ಪ್ರಮಾಣದಲ್ಲಿ ಇಂದ್ರಿಯಭೋಗ ಅನುಭವಿಸಲು ಎಲ್ಲರೂ ಎಲ್ಲಕಡೆಯಲ್ಲೂ ನಾನಾ ಪ್ರಯತ್ನ ಮಾಡುತ್ತಿದ್ದಾರೆ. ವ್ಯಾಪಾರ, ಉದ್ದಿಮೆ, ಆರ್ಥಿಕ ಅಭಿವೃದ್ಧಿ, ರಾಜಕೀಯ ಪ್ರಾಮುಖ್ಯ ಇವೇ ಮೊದಲಾದವುಗಳಲ್ಲಿ ಕೆಲವರು ನಿರತರಾಗಿದ್ದಾರೆ. ಇನ್ನು ಕೆಲವರು ಮುಂದಿನ ಜನ್ಮಗಳಲ್ಲಿ ಮೇಲಿನ ಲೋಕಗಳನ್ನು ಪಡೆದು ಸುಖಪಡುವುದಕ್ಕಾಗಿ ಕಾಮ್ಯಕರ್ಮಗಳಲ್ಲಿ ನಿರತರಾಗಿದ್ದಾರೆ.

ಚಂದ್ರ ಲೋಕದಲ್ಲಿರುವವರು ಸೋಮರಸವನ್ನು ಸೇವಿಸಿ ಹೆಚ್ಚಿನ ಇಂದ್ರಿಯಸುಖ ಪಡೆಯುವರು ಎನ್ನಲಾಗಿದೆ. ಹಾಗೆಯೇ ದಾನಧರ್ಮಗಳನ್ನು ಮಾಡಿದವರು ಪಿತೃಲೋಕಕ್ಕೆ ಹೋಗುವರು ಎಂದೂ ಹೇಳಲಾಗಿದೆ. ಆದ್ದರಿಂದ ಈ ಜನ್ಮದಲ್ಲಿಯೋ, ಮುಂದಿನ ಜನ್ಮಗಳಲ್ಲಿಯೋ, ವಿಷಯಭೋಗ ಅನುಭವಿಸಲು ಬಗೆಬಗೆಯ ಕಾರ್ಯಕ್ರಮಗಳನ್ನು ಹಾಕಿಕೊಳ್ಳಲಾಗುತ್ತಿದೆ.

ಸ್ಪುಟ್‌ನಿಕ್ ಮೊದಲಾದ ಯಂತ್ರಗಳನ್ನು ಬಳಸಿ ಚಂದ್ರನನ್ನೋ ಅಥವಾ ಇತರ ಲೋಕಗಳನ್ನೋ ತಲಪಲು ಮತ್ತೆ ಕೆಲವರು ಪ್ರಯತ್ನಿಸುತ್ತಿದ್ದಾರೆ. ಯಾವುದೇ ಉತ್ತಮ ಕರ್ಮವನ್ನು ಮಾಡದೆ ಅಂತಹ ಲೋಕಗಳಲ್ಲಿ ಸೇರಿಕೊಳ್ಳಲು ಅವರು ತುಂಬ ಆತುರರಾಗಿದ್ದಾರೆ. ಆದರೆ ಹಾಗೆ ಆಗುವುದಿಲ್ಲ.

ಅವರವರು ಮಾಡಿದ ಕರ್ಮಾನುಸಾರ ಬೇರೆ ಬೇರೆ ಮಟ್ಟದ ಜೀವಿಗಳಿಗೆ ಬೇರೆ ಬೇರೆ ಸ್ಥಾನಗಳು ದೊರೆಯುವಂತೆ ಪರಮ ಪುರುಷನ ನಿಯಮವಿದೆ. ಶಾಸ್ತ್ರಗಳಲ್ಲಿ ಹೇಳಿರುವಂತೆ ಸತ್ಕರ್ಮಗಳನ್ನು ಮಾಡುವುದರಿಂದ ಮಾತ್ರವೇ, ಒಬ್ಬ ವ್ಯಕ್ತಿಯು ಒಳ್ಳೆಯ ಕುಟುಂಬದಲ್ಲಿ ಜನಿಸಿ ಐಶ್ವರ್ಯ, ವಿದ್ಯೆ, ರೂಪಗಳನ್ನು ಹೊಂದುತ್ತಾನೆ.

ಸತ್ಕರ್ಮದ ಫಲವಾಗಿ ಈ ಜನ್ಮದಲ್ಲಿ ಕೂಡ ವಿದ್ಯೆ, ಐಶ್ವರ್ಯಗಳನ್ನು ಗಳಿಸುವುದನ್ನು ನಾವು ಕಾಣುತ್ತೇವೆ. ಹಾಗೆಯೇ ಸತ್ಕರ್ಮದಿಂದ ಮಾತ್ರವೇ ನಮ್ಮ ಮುಂದಿನ ಜನ್ಮದಲ್ಲಿ ನಾವು ಬಯಸಿದ ಪದವಿಗಳನ್ನು ಪಡೆಯುತ್ತೇವೆ. ಇಲ್ಲದಿದ್ದರೆ ಇಬ್ಬರು ವ್ಯಕ್ತಿಗಳು ಏಕ ಕಾಲದಲ್ಲಿ ಒಂದೇ ಸ್ಥಳದಲ್ಲಿ ಹುಟ್ಟಿದರೂ, ತಮ್ಮ ಹಿಂದಿನ ಕರ್ಮಗಳಿಗೆ ತಕ್ಕಂತೆ ಬೇರೆ ಬೇರೆ ಸ್ಥಾನಗಳನ್ನು ಪಡೆಯುತ್ತಿರಲಿಲ್ಲ.

ಇಷ್ಟಾದರೂ ಅಂತಹ ಎಲ್ಲ ಲೌಕಿಕ ಸ್ಥಾನಮಾನಗಳು ನಶ್ವರವಾದವು. ಅತ್ಯುನ್ನತವಾದ ಬ್ರಹ್ಮಲೋಕ ಮತ್ತು ಅತಿ ಕೆಳಗಿನ ಪಾತಾಳ ಲೋಕಗಳ ಸ್ಥಾನಮಾನಗಳು ಸಹ ನಮ್ಮ ಕರ್ಮಗಳಿಗೆ ಅನುಗುಣವಾಗಿ ಬದಲಾಗುತ್ತವೆ. ತಾತ್ವಿಕವಾದ ಆಸಕ್ತಿ ಇರುವವನು ಬದಲಾವಣೆಗೆ ಗುರಿಯಾದ ಅಂತಹ ಸ್ಥಾನಮಾನಗಳ ಪ್ರಲೋಭನೆಗೆ ಸಿಗಬಾರದು.

ಜ್ಞಾನ ಆನಂದಗಳಿಂದ ಕೂಡಿದ ಶಾಶ್ವತ ಜೀವನಕ್ಕಾಗಿಯೇ ಅವನು ಯತ್ನಿಸಬೇಕು. ಅದನ್ನು ಪಡೆದವರು ಮತ್ತೆ ಈ ಲೋಕದ ಅಥವಾ ಇತರ ಲೋಕಗಳ ಕ್ಲೇಶಮಯ ಜೀವನಕ್ಕೆ ಎಂದೂ ಹಿಂದಿರುಗಬೇಕಾಗಿಲ್ಲ; ಕ್ಲೇಶಗಳು ಮತ್ತು ದುಃಖಮಿಶ್ರಿತ ಸುಖಗಳು ಲೋಕಜೀವನದ ಎರಡು ಲಕ್ಷಣಗಳು.

ಅವುಗಳನ್ನು ಬ್ರಹ್ಮಲೋಕ ಅಥವಾ ಇತರ ಲೋಕಗಳಲ್ಲಿಯೂ ಪಡೆಯಬಹುದು. ದೇವತೆಗಳ ಬಾಳಿನಲ್ಲಿ ಹೇಗೋ ಹಾಗೆ, ಹಂದಿ ನಾಯಿಗಳ ಬಾಳಿನಲ್ಲಿಯೂ ಅವು ಲಭ್ಯವಾಗುತ್ತವೆ. ಎಲ್ಲ ಜೀವಿಗಳ ಬಾಳಿನಲ್ಲಿಯೂ ಇರುವ ಕ್ಲೇಶ ಅಥವಾ ದುಃಖ ಮಿಶ್ರಿತ ಸುಖಗಳು ಕೇವಲ ಗುಣದರ್ಜೆಗಳಲ್ಲಿ ಮಾತ್ರ ಭಿನ್ನವಾಗಿವೆ ಅಷ್ಟೇ.

ಆದರೆ ಹುಟ್ಟು, ಸಾವು, ರೋಗ, ವೃದ್ಧಾಪ್ಯಗಳಿಂದ ಯಾರೂ ಮುಕ್ತರಲ್ಲ. ಅದೇ ರೀತಿ ಪ್ರತಿಯೊಬ್ಬನಿಗೂ ಇಷ್ಟೇ ಸುಖವೆನ್ನುವುದೂ ಪೂರ್ವನಿಯೋಜಿತವಾಗಿದೆ. ಕೇವಲ ತನ್ನ ಪ್ರಯತ್ನಗಳಿಂದ ಯಾರೂ ಇವುಗಳನ್ನು ಹೆಚ್ಚು ಕಡಮೆ ಪಡೆಯುವಂತಿಲ್ಲ. ಹಾಗೆ ಪಡೆದರೂ ಅವು ಮತ್ತೆ ನಷ್ಟವಾಗಬಹುದು. ಆದ್ದರಿಂದ ಯಾರೂ ಈ ಕ್ಷುಲ್ಲಕ ವಸ್ತುಗಳಿಗಾಗಿ ಕಾಲವ್ಯಯ ಮಾಡಬಾರದು; ಭಗವದ್ಧಾಮಕ್ಕೆ ಮರಳಲು ಮಾತ್ರವೇ ಯತ್ನಿಸಬೇಕು. ಅದೇ ಪ್ರತಿ ಮಾನವನ ಜೀವನದ ಧ್ಯೇಯವಾಗಬೇಕು.

ಸುಖಕ್ಕಾಗಿ ನಾವೇಕೆ ಕಾಯಬೇಕು? ಕಾಲದೊಡನೆ ದುಃಖವು ಒದಗಿಬಂದಂತೆ, ಸುಖವೂ ತಾನೇ ತಾನಾಗಿ ಬರುತ್ತದೆ. ಇದನ್ನು ಅರ್ಥಮಾಡಿಕೊಂಡರೆ, ಖಂಡಿತವಾಗಿಯೂ ನಾವು ಸುಖಕ್ಕಾಗಿ ಪರಿತಪಿಸುವುದನ್ನು ಬಿಡುತ್ತೇವೆ. ದುಃಖವನ್ನು ಯಾತನೆಯನ್ನು ಅನುಭವಿಸುವುದಕ್ಕಾಗಿ ನಾವೆಂದೂ ದೊಡ್ಡ ದೊಡ್ಡ ಯೋಜನೆಗಳನ್ನು ಹಾಕಿಕೊಳ್ಳುವುದಿಲ್ಲವಲ್ಲ?

ಕಾಲದೊಂದಿಗೆ ಅವು ಬಂದೇ ಬರುತ್ತವೆ. ಹಾಗಾದರೆ ಸಂತಸದಿಂದಿರಲಿಕ್ಕೆ ಯೋಜನೆಗಳನ್ನು ಏಕೆ ಹಾಕಿಕೊಳ್ಳಬೇಕು? ಅದಕ್ಕಾಗಿ ಕಾಯುತ್ತ ಕೂರಬೇಕೇ? ದುಃಖದಂತೆಯೇ ಸುಖವೂ ತಾನಾಗಿಯೇ ಒದಗಿ ಬರುತ್ತದೆ. ಇದೊಂದು ಬಲವಾದ ತರ್ಕ. ‘ಕಾಲೇನ ಗಭೀರ ರಮ್‌ಹಸಾ’ – ಕಾಲನ ಚಲನೆಯೊಂದಿಗೆ ಅವು ತೆರೆದುಕೊಳ್ಳುತ್ತವೆ. ಅವು ನಮ್ಮ ಕೈಲಿರುವಂಥದ್ದಲ್ಲ. ಇದು ಭಾಗವತದ ಬೋಧನೆ.

ಸುಖ ದುಃಖಗಳು ನಮ್ಮ ಕೈ ಮೀರಿದ ಸಂಗತಿಗಳೆಂದಾದ ಮೇಲೆ ನಾವೇಕೆ ಅದರ ಬಗ್ಗೆ ಚಿಂತಿಸುತ್ತ ಸಮಯ ವ್ಯರ್ಥ ಮಾಡಿಕೊಳ್ಳಬೇಕು? ಭಾಗವತ ಹೇಳುವುದು ಅದನ್ನೇ. ಇದರಲ್ಲಿ ಹೇಳಿರುವಂತೆ, ಸದಾ ಕೃಷ್ಣನನ್ನು ಧ್ಯಾನಿಸುತ್ತ ಭಕ್ತಿಸೇವೆಯಲ್ಲಿ ನಿರತರಾಗುವುದೊಂದೆ ನಮಗಿರುವ ಮಾರ್ಗ. ಇದು ನಮ್ಮನ್ನು ಭಗವದ್ಧಾಮಕ್ಕೆ ಮರಳಿ ಕೊಂಡೊಯ್ದು ಶಾಶ್ವತ ಸುಖ ದೊರಕುವಂತೆ ಮಾಡುತ್ತದೆ. ಮತ್ತೇಕೆ ಇಂದ್ರಿಯಗಳನ್ನು ತೃಪ್ತಿಪಡಿಸುವ ಕ್ಷಣಿಕ ಸುಖದ ಬಗ್ಗೆ ನಾವು ಚಿಂತಿಸುತ್ತ ಕೂಡಬೇಕು?

ನಮ್ಮ ನಮ್ಮ ಸುಖದ ಹೊಣೆಯನ್ನು ನಾವು ಅನಾವಶ್ಯಕವಾಗಿ ಹೊತ್ತಿರುವೆವು. ಶ್ರೀಲ ಪ್ರಭುಪಾದರು ಇದನ್ನು ಬೊಗಳುವ ನಾಯಿಗಳ ಸಾಮ್ಯದೊಂದಿಗೆ ವಿವರಿಸುತ್ತಾರೆ. ಒಂದು ಬೀದಿಯಲ್ಲಿ ಒಂದಷ್ಟು ನಾಯಿಗಳಿವೆಯೆಂದುಕೊಳ್ಳಿ. ಅವು ಆ ಬೀದಿಯನ್ನು ತಮ್ಮದಾಗಿಸಿಕೊಂಡಿರುತ್ತವೆ. ತಾವೇ ತಾನಾಗಿ ಅದನ್ನು ಕಾಯುವ ಹೊಣೆ ಹೆಗಲಿಗೆ ಹೊತ್ತಿರುತ್ತವೆ.

ಅವಕ್ಕೆ ಯಾರೂ ಬೀದಿ ಕಾಯುವಂತೆ ನಿರ್ದೇಶಿಸಿರುವುದಿಲ್ಲ. ಆದರೂ ತಾವಾಗಿಯೇ ಅದನ್ನು ಹೊರುತ್ತವೆ. ಯಾರಾದರೂ ಅಪರಿಚಿತರು ಬಂದರೆ ಒಗ್ಗಟ್ಟಾಗಿ ಬೊಗಳುತ್ತವೆ. ನಾವೂ ಹಾಗೆಯೇ. ನಮ್ಮ ಸುಖದ ಹೊಣೆ ಹೊರಲು ನಮಗೆ ನಿರ್ದೇಶಿಸಲಾಗಿಲ್ಲ. ಆದರೂ ಬದ್ಧಾತ್ಮರಾದ ನಾವು ಇದನ್ನು ಮಾಡುವುದು ನಮ್ಮ ಜವಾಬ್ದಾರಿ ಎಂದು ಮೈಮೇಲೆ ಎಳೆದುಕೊಂಡಿದ್ದೇವೆ.

ಆದರೆ ವಾಸ್ತವವಾಗಿ ನಮಗಿರುವ ಏಕೈಕ ಕರ್ತವ್ಯವೆಂದರೆ, ಅದು ಕೃಷ್ಣನ ಸೇವೆ. ನಾವೆಲ್ಲರೂ ಆತನ ಅಂಶಗಳೆಂದು ನಾವು ಅರಿತಿರಬೇಕು. ಪ್ರಭುಪಾದರು ಇದನ್ನು ಸ್ಪಷ್ಟವಾಗಿ ಹೇಳಿದ್ದಾರೆ; ‘ಶ್ರೀಕೃಷ್ಣನ ಭಕ್ತಿಸೇವೆಯ ಹೊರತಾಗಿ ಮಾನವ ಜೀವಿಗೆ ಇನ್ಯಾವ ಲೌಕಿಕ ಜವಾಬ್ದಾರಿಗಳೂ ಇಲ್ಲ’ ಎಂದು.

ಆದ್ದರಿಂದ, ಇಂದ್ರಿಯ ತೃಪ್ತಿಗಾಗಿ ಯೋಜನೆಗಳನ್ನು ಹಾಕಿಕೊಳ್ಳುವ ನಮ್ಮ ಪ್ರಯತ್ನಗಳು ಅಪ್ರಯೋಜಕ ಎಂದು ನಾವು ಅರಿತಿರಬೇಕು. ಈ ಉನ್ನತ ತರ್ಕವನ್ನು ಅರಿತಿರುವ ದೇವಕಿ ಕಂಸನಿಗೆ ಹೇಳುತ್ತಿದ್ದಾಳೆ….. ʼಎಲ್ಲವೂ ದೈವ ನಿಯೋಜಿತ. ಇನ್ನು ನೀನು ಕೊಂದೆ ಎನ್ನುವ ಮಾತೇಕೆ?’ ಎಂದು ಅವಳಿಗೆ ಅರ್ಥವಾಗಿದೆ.

ಕಂಸನೊಬ್ಬ ಪರಮನೀಚ. ಅವನಿಗೆ ಏನು ಬುದ್ಧಿ ಮಾತು ಹೇಳಿದರೂ ಪ್ರಯೋಜನವಾಗದು. ಅವನಿಗದೊಂದೂ ತಲೆಗೆ ಹೋಗದು. ಅವನೊಬ್ಬಮೂರ್ಖ. “ಮೂರ್ಖರಿಗೆ ಉಪದೇಶ ನೀಡುವುದು ವ್ಯರ್ಥ ಕೆಲಸ” ವೆನ್ನುತ್ತಾನೆ ಚಾಣಕ್ಯ. ಮೂರ್ಖರಿಗೆ ಉಪದೇಶ ನೀಡಹೋದರೆ, ಅವರದನ್ನು ಅರ್ಥೈಸಿಕೊಳ್ಳುವ ಬದಲು ನಿಮ್ಮ ಮೇಲೆ ಕೋಪಗೊಳ್ಳುತ್ತಾರೆ ಎನ್ನುವುದು ಅವನ ವಿವರಣೆ.

ಅದು ಸರಿಯಾದ ಮಾತು. ಮೂರ್ಖರಿಗೆ ಬುದ್ಧಿವಾದ ಹೇಳಹೋದರೆ ಅವರಿಗದು ತಿಳಿಯುವುದಿಲ್ಲ. ನಿಮ್ಮ ಸಲಹೆಯ ಪ್ರಯೋಜನವನ್ನು ಅವರು ಮನಗಾಣುವುದಿಲ್ಲ. ನೀವು ಅಂಥವರನ್ನು ಸಮಾಧಾನಪಡಿಸಲಾರಿರಿ. ದೇವಕಿಗೆ ಇದು ತಿಳಿದಿತ್ತು. ಅವಳು ತನ್ನ ಮಗುವನ್ನು ಉಳಿಸಿಕೊಳ್ಳಲು ಹಲವು ತರ್ಕಗಳನ್ನು ಬಳಸಿದಳು. ಕೊನೆಗೆ, ಈವರೆಗಿನ ಘಟನೆಗೆ ಯಾರೂ ಜವಾಬ್ದಾರರಲ್ಲ ಈ ಮಗುವನ್ನಾದರೂ ನನಗೆ ಉಳಿಸಿಕೊಡು ಎಂದು ಕಂಸನಲ್ಲಿ ಕೇಳಿಕೊಂಡಳು.

ಶ್ರೀಲ ಪ್ರಭುಪಾದರು ತಮ್ಮ ಭಾವಾರ್ಥದ ಮೂಲಕ ಇಲ್ಲಿ ದೇವಕಿಯ ಉನ್ನತ ತಿಳುವಳಿಕೆ ಮತ್ತು ಸದ್ಗುಣಗಳನ್ನು ಸುಂದರವಾಗಿ ನಿರೂಪಿಸಿದ್ದಾರೆ. ಇದರ ಜೊತೆಗೆ ವೈದಿಕ ಸಂಸ್ಕೃತಿ ಮತ್ತು ಭಾಗವತ ತತ್ತ್ವಜ್ಞಾನಗಳು ಕೂಡ ದೇವಕಿಯ ಮಾತುಗಳ ಮೂಲಕ ಸ್ಪಷ್ಟವಾಗಿ ಅಭಿವ್ಯಕ್ತಗೊಂಡಿವೆ.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi