ಎಲ್ಲಿದೆ ನಿಮ್ಮ ಧರ್ಮ?

ಭಾಗ-2

ಸ್ಥಳ: ಲಾಸ್ ಏಂಜಲೀಸ್, ದಿನಾಂಕ 30 ನೇ ಡಿಸೆಂಬರ್, 1968ಶ್ರೀಲ ಪ್ರಭುಪಾದರು ಮತ್ತು ಒಬ್ಬ ಪತ್ರಿಕೋದ್ಯಮಿ ಮಧ್ಯೆ ನಡೆದ ಸಂವಾದ ರೂಪ

– ಅನುವಾದ : ಡಾ.ಕೆ. ವೈ. ಬಾಲರಾಜ್

ಪತ್ರಿಕೋದ್ಯಮಿ : ಅಮೆರಿಕದ ಸ್ತ್ರೀ ಪುರುಷರಿಗೆ ಭಗವಂತನನ್ನು ಪ್ರೇಮಿಸಲು ಅಥವಾ ಬೈಬಲ್ಲಿನ 10 ಆಜ್ಞಾವಿಧಿಗಳನ್ನು (ಟೆನ್ ಕಮಾಂಡ್‌ಮೆಂಟ್ಸ್‌) ಅನುಸರಿಸಲು ತಡೆಗಟ್ಟುತ್ತಿರುವ ದೊಡ್ಡ ಸಮಸ್ಯೆಯೆಂದರೆ ಲೈಂಗಿಕ ಸಮಸ್ಯೆ.

ಈ ಕಠಿಣವಾದ ಸಮಸ್ಯೆ ಯನ್ನು ಎದುರಿಸಲು ಪಾಶ್ಚಿಮಾತ್ಯರ ಸಂಸ್ಕೃತಿಯಲ್ಲಿ ಯಾವ ಉಪಾಯವೂ ಇಲ್ಲ. ಇಂದಿನ ಯುವ ಜನಾಂಗದವರು ಈ ಕಠಿಣವಾದ ಸಮಸ್ಯೆಯನ್ನು ಎದುರಿಸಲು ನಿಮ್ಮಲ್ಲಿ ಯಾವುದಾದರೂ ಉಪಾಯವಿದೆಯೇ ಅಥವಾ ಸಂದೇಶವಿದೆಯೇ?

ಶ್ರೀಲ ಪ್ರಭುಪಾದ : ನಾನು ನನ್ನ ಎಲ್ಲ ಶಿಷ್ಯರಿಗೂ ವಿವಾಹವಾಗಲು ಹೇಳುತ್ತೇನೆ. ಅವರು ಗರ್ಲ್ ಫ್ರೆಂಡ್, ಬಾಯ್‌ ಫ್ರೆಂಡ್ ಆಗಿ ಜೊತೆಯಾಗಿರಲು ನಾನು ಒಪ್ಪುವುದಿಲ್ಲ. ನಿಮ್ಮ ಹೆಂಡತಿಯನ್ನು “ಸಹಾಯಕಳು’ ಎಂದು ತಿಳಿಯಿರಿ ಮತ್ತು ನಿಮ್ಮ ಪತಿಯನ್ನು ‘ಒದಗಿಸುವವನು’ ಎಂದು ತಿಳಿದು ಸಭ್ಯಸ್ಥರಾಗಿ ಬಾಳಿ ಎಂದು ನಾನು ಬೋಧಿಸುತ್ತೇನೆ.

ಈ ಹುಡುಗ ಮತ್ತು ಹುಡುಗಿ ಗರ್ಲ್ ಫ್ರೆಂಡ್, ಬಾಯ್‌ ಫ್ರೆಂಡ್ ಆಗಿ ಒಟ್ಟಾಗಿರುತ್ತಿದ್ದರು. ನಾನು ಇದನ್ನು ಒಪ್ಪಲಿಲ್ಲ. ಈಗ ನಾಲ್ಕು ದಿವಸದ ಹಿಂದೆ ಈ ಹುಡುಗ, ಹುಡುಗಿ ಮದುವೆಯಾಗಿದ್ದಾರೆ. ಈ ಹುಡುಗ ಪ್ರೊಫೆಸರ್ ಆಗಿದ್ದಾನೆ. ನನ್ನ ಹತ್ತಿರ ಅನೇಕ ವಿವಾಹಿತ ಶಿಷ್ಯರಿದ್ದಾರೆ. ಅವರೆಲ್ಲರೂ ಸಂತೋಷದಿಂದ ಬಾಳುತ್ತಿದ್ದಾರೆ.

ಪತ್ರಿಕೋದ್ಯಮಿ : ಈ ಆವಶ್ಯಕ ವಿಷಯಕ್ಕೆ ಸಂಬಂಧಿಸಿದಂತೆ 14, 15, 16 ವರ್ಷದ ಹುಡುಗರ ಬಗ್ಗೆ ನೀವೇನು ಹೇಳುತ್ತೀರಿ? ಶ್ರೀಲ ಪ್ರಭುಪಾದ : ನಾವು ನಮ್ಮ ಹುಡುಗರಿಗೆ ಬ್ರಹ್ಮಚಾರಿಯಾಗಿರಲು ಕಲಿಸುತ್ತೇವೆ. ಅಂದರೆ ಬ್ರಹ್ಮಚಾರಿ ಜೀವನವನ್ನು ಕೈಗೊಳ್ಳುವುದು ಎಂದರ್ಥ.

ಪತ್ರಿಕೋದ್ಯಮಿ : ಹೌದು, ನನಗೆ ಅರ್ಥವಾಗಿದೆ.

ಶಿಷ್ಯ : ಬ್ರಹ್ಮಚಾರಿಯೆಂದರೆ ಇಂದ್ರಿಯಗಳ ನಿಗ್ರಹ. ಇವರು ನಮಗೆ ಇಂದ್ರಿಯಗಳನ್ನು ಹೇಗೆ ನಿಯಂತ್ರಿಸಬಹುದು ಎಂದು ಕಲಿಸುತ್ತಾರೆ. ಸಾಮಾನ್ಯ ಹುಡುಗನಿಗೆ 22,23,24,25 ವರ್ಷ ಆಗುವವರೆಗೆ ಮದುವೆ ಆಗುವುದಿಲ್ಲ.

ಪತ್ರಿಕೋದ್ಯಮಿ : ಅಂದರೆ ಅದು ಭಾರತೀಯ ಸಂಸ್ಕೃತಿಯಲ್ಲಿದೆಯಾ?

ಶ್ರೀಲ ಪ್ರಭುಪಾದ : ಹೌದು, ನಾವು 16,17 ವರ್ಷದ ಹುಡುಗಿಯನ್ನು ಆಯ್ಕೆಮಾಡಿ 24 ವರ್ಷಕ್ಕಿಂತ ಹೆಚ್ಚಾಗಿರದ ಹುಡುಗನೊಂದಿಗೆ ಮದುವೆ ಮಾಡುತ್ತೇವೆ. ಅವರ ಚಿತ್ತ ಕೃಷ್ಣಪ್ರಜ್ಞೆಯಲ್ಲಿರುವುದರಿಂದ ಅವರಿಗೆ ಲೈಂಗಿಕ ಜೀವನದ ಬಗ್ಗೆ ಕಡಮೆ ಆಸಕ್ತಿಯಿರುತ್ತದೆ ಮತ್ತು ಅವರು ಒಂದು ಒಳ್ಳೆಯ ಕಾರ್ಯದಲ್ಲಿ ನಿಯೋಜಿತರಾಗಿರುತ್ತಾರೆ.

ಪರಂ ದೃಷ್ಟ್ವಾ ನಿವರ್ತತೆ. ನಾವು ಅವರಿಗೆ “ಅದನ್ನು ಮಾಡಬೇಡಿ’ ಎಂದು ಹೇಳುವುದಿಲ್ಲ. ಆದರೆ ಅದಕ್ಕಿಂತ ಉತ್ತಮವಾದ ಬೇರೊಂದನ್ನು ಕೊಡುತ್ತೇವೆ. ಆಗ ತನಗೆ ತಾನೇ ಅದು ”ಬೇಡ” ಎಂಬುವುದು ಬರುತ್ತದೆ.

ಪತ್ರಿಕೋದ್ಯಮಿ : ಸರಿಯಾದ ಸಮಯದಲ್ಲಿ.

ಶ್ರೀಲ ಪ್ರಭುಪಾದ : ಕೂಡಲೇ ನಾವು ಅವರಿಗೆ ಉತ್ತಮವಾದ ಬೇರೆ ಕೆಲಸ ಕೊಡುತ್ತೇವೆ.

ಪತ್ರಿಕೋದ್ಯಮಿ : ಏನದು?

ಶ್ರೀಲ ಪ್ರಭುಪಾದ : ನಮ್ಮ ಹುಡುಗರು ಮತ್ತು ಹುಡುಗಿಯರೆಲ್ಲರೂ ಕೃಷ್ಣಪ್ರಜ್ಞೆಯ ಕಾರ್ಯಗಳಾದ – ದೇವಸ್ಥಾನದ ಕೆಲಸಗಳು, ಚಿತ್ರಕಲೆ, ಟೈಪಿಂಗ್, ರೆಕಾರ್ಡಿಂಗ್ ಮುಂತಾದ ಅನೇಕ ಕೆಲಸಗಳಲ್ಲಿ ತೊಡಗಿಸಿಕೊಳ್ಳುತ್ತಾರೆ ಮತ್ತು ಅವರೆಲ್ಲರೂ ಸಂತೋಷದಿಂದ ಇದ್ದಾರೆ.

ಅವರು ಸಿನಿಮಾ, ಕ್ಲಬ್ ಗಳಿಗೆ ಹೋಗುವುದಿಲ್ಲ ಮತ್ತು ಮದ್ಯಪಾನ, ಧೂಮಪಾನ ಮಾಡುವುದಿಲ್ಲ. ಅವರಿಗೆ ನಾನು ಪ್ರಾಯೋಗಿಕವಾಗಿ ಹೇಗೆ ಇಂದ್ರಿಯಗಳನ್ನು ನಿಗ್ರಹಿಸಬಹುದು ಎಂದು ಹೇಳಿಕೊಡುತ್ತೇನೆ. ಇದರರ್ಥ ಇದು ಸಾಧ್ಯ.

ಇಲ್ಲಿರುವ ಹುಡುಗರು ಮತ್ತು ಹುಡುಗಿಯರೂ ಅಮೆರಿಕದವರು, ಇವರನ್ನು ಭಾರತದಿಂದ ಆಮದು ಮಾಡಿಕೊಂಡಿಲ್ಲ. ಅವರೆಲ್ಲ ಏಕೆ ಈ ಪದ್ಧತಿಯನ್ನು ಸ್ವೀಕರಿಸಿದ್ದಾರೆಂದರೆ ಇದು ಉತ್ತಮವಾಗಿದೆ ಮತ್ತು ಇದು ಅವರಿಗೆ ಇಷ್ಟವಾಗಿದೆ. ನೀವು ಈ ಪದ್ಧತಿಯನ್ನು ಹರಡಿದರೆ ಎಲ್ಲವೂ ಪರಿಹಾರವಾಗುತ್ತದೆ.

ಪತ್ರಿಕೋದ್ಯಮಿ : ಓ, ಸರಿ….

ಶ್ರೀಲ ಪ್ರಭುಪಾದ : ನಾವು ಪುರುಷರಿಗೆ ಸ್ತ್ರೀಯರೊಂದಿಗೆ ಸೇರಬೇಡಿ, ಲೈಂಗಿಕ ಜೀವನ ನಿಲ್ಲಿಸಿ ಎಂದು ಹೇಳುವುದಿಲ್ಲ. ಆದರೆ ಎಲ್ಲವೂ ಕೃಷ್ಣಪ್ರಜ್ಞೆಯಲ್ಲಿ ನಿಯಂತ್ರಿತವಾಗಿರಲಿ ಎಂದು ಹೇಳುತ್ತೇವೆ. ನಮ್ಮ ಗುರಿ ಉನ್ನತವಾಗಿದೆ.

ಪತ್ರಿಕೋದ್ಯಮಿ : ಉತ್ತರವು ತುಂಬಾ ಸರಳ ಮತ್ತು ಸಮಯೋಚಿತವಾಗಿದೆ.

ಶ್ರೀಲ ಪ್ರಭುಪಾದ : ಒಂದು ವೇಳೆ ನೀವು ಸಹಕರಿಸಿದರೆ ನಾನು ನಿಮ್ಮ ದೇಶವನ್ನು ಸಂಪೂರ್ಣವಾಗಿ ಬದಲಾಯಿಸಬಲ್ಲೆ. ಆಗ ಎಲ್ಲವೂ ಒಳ್ಳೆಯದಾಗುತ್ತದೆ ಮತ್ತು ಜನರು ಸಂತೋಷದಿಂದ ಇರುತ್ತಾರೆ. ಈ ಕೃಷ್ಣಪ್ರಜ್ಞಾ ಆಂದೋಲನ ತುಂಬಾ ಚೆನ್ನಾಗಿದೆ.

ಆದರೆ ಯಾರೂ ಸಹಕರಿಸುತ್ತಿಲ್ಲ. ಈ ಹುಡುಗರು ಬಂದು ಸಹಕರಿಸುತ್ತಿದ್ದಾರೆ. ಆದ್ದರಿಂದ ನನ್ನ ಆಂದೋಲನ ನಿಧಾನವಾಗಿಯಾದರೂ ಬೆಳೆಯುತ್ತಿದೆ. ಒಂದು ವೇಳೆ ಅಮೆರಿಕದ ನಾಯಕರು ಈ ಪದ್ಧತಿಯನ್ನು ಬಳಸಿಕೊಂಡರೆ ಆಗ ನಿಮ್ಮ ದೇಶ ಜಗತ್ತಿನಲ್ಲೇ ಉತ್ತಮ ದೇಶವಾಗುತ್ತದೆ.

ಪತ್ರಿಕೋದ್ಯಮಿ : (ಶ್ರೀಲ ಪ್ರಭುಪಾದರ ಶಿಷ್ಯನಿಗೆ): ಸ್ವಾಮೀಜಿಯವರು ಹೇಳುತ್ತಿರುವ ಈ ಲೈಂಗಿಕತೆಯ ಬಗ್ಗೆ ಪ್ರಾಯೋಗಿಕವಾಗಿ ಇದು ನಿಮಗೆ ಹೇಗೆ ಮನಸ್ಸಿಗೆ ತಟ್ಟಿದೆ? ಅವರು ಹೇಳುತ್ತಿರುವುದೆಲ್ಲವೂ ನಿಮಗೇನಾದರೂ ಪರಿಣಾಮಕಾರಿಯಾಗಿ ಕಂಡಿದೆಯಾ? ನನ್ನ ಪ್ರಕಾರ ಯುವ ಜನರಿಗೆ ಇದು ಸರ್ವಶ್ರೇಷ್ಠ ಸಮಸ್ಯೆ.

ಶಿಷ್ಯ : ಇಲ್ಲಿ ಆಸೆಗಳಿವೆ ಮತ್ತು ನಮಗೂ ಅನೇಕ ಆಸೆಗಳಿವೆ. ಅದರಲ್ಲಿಯೂ ಲೈಂಗಿಕವಾದ ಆಸೆ ತುಂಬಾ ಬಲವತ್ತರ ಆಸೆಯಾಗಿದೆ.

ಶ್ರೀಲ ಪ್ರಭುಪಾದ : ಹೌದು, ಹೌದು.

ಶಿಷ್ಯ : ಹೇಳಿರುವ ಈ ಆಸೆಗಳನ್ನು ‘ಕೃಷ್ಣನ ಕಡೆಗೆ’ ಹರಿಯುವ ಹಾಗೇ ಮಾಡಲಾಗುತ್ತದೆ.

ಪತ್ರಿಕೋದ್ಯಮಿ : ನನಗೆ ಅರ್ಥವಾಗುತ್ತದೆ. ಆದರೆ ನಾನು ಕೇಳುತ್ತಿರುವುದು ಇದು ಪರಿಣಾಮಕಾರಿಯಾಗಿದೆಯೇ? ಇದು ಕೆಲಸ ಮಾಡುತ್ತದೆಯೇ?

ಶಿಷ್ಯ: ಹೌದು, ಇದು ಪರಿಣಾಮಕಾರಿಯಾಗಿದೆ. ಆದರೆ ಇದಕ್ಕೆ ನೀವು ಅಂಟಿಕೊಂಡಿರಬೇಕು. ಮೊದಲಿಗೆ ಇದು ಕಷ್ಟವಾಗಬಹುದು. ಆದರೆ ಇದು ಕೆಲಸ ಮಾಡುತ್ತದೆ.

ಪತ್ರಿಕೋದ್ಯಮಿ : ಈಗ, ನಾನು ಅದನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದೇನೆ. ಬೇರೆ ಮಾತುಗಳಲ್ಲಿ ಹೇಳುವುದಾದರೆ ನೀವು  ಯಾವುದನ್ನೂ ಬಿಟ್ಟುಕೊಡುತ್ತಿಲ್ಲ ಎಂದು ನಿಮಗೆ ಅನಿಸುತ್ತದೆ.

ಶಿಷ್ಯ : ಇಲ್ಲ ಯಾವಾಗ ನೀವು ಒಳ್ಳೆಯದನ್ನು ನೋಡುತ್ತೀರಾ…..

ಪತ್ರಿಕೋದ್ಯಮಿ : ಅದೇ ನಾನು ಹೇಳುತ್ತಿರುವೆ.

ಶ್ರೀಲ ಪ್ರಭುಪಾದ : ಹೌದು, ನೀವು ಶ್ರೇಷ್ಠತರವಾದುದನ್ನು ಸ್ವೀಕರಿಸುತ್ತಿದ್ದೀರಿ.

ಪತ್ರಿಕೋದ್ಯಮಿ : ಶ್ರೇಷ್ಠತರ. ಹೌದು. “ಇದನ್ನು ನಾನು ಮುಟ್ಟುವುದಿಲ್ಲ. ಇದನ್ನು ನಾನು ಮುಟ್ಟುವುದಿಲ್ಲ” ಎಂದು ನಾಲಗೆ ಕಚ್ಚಿಕೊಳ್ಳುವುದಲ್ಲ. ಇದಕ್ಕಿಂತ ಶ್ರೇಷ್ಠವಾದ ಬೇರೊಂದಿದೆ.

ಶಿಷ್ಯ : ಉತ್ತಮವಾದದ್ದು ಸಿಗದೆ ಇನ್ನೊಂದನ್ನು ಬಿಡಲು ಸಾಧ್ಯವಿಲ್ಲ. ಆದ್ದರಿಂದ ಒಂದನ್ನು ಬಿಡಬೇಕಾದರೆ ಅದಕ್ಕಿಂತಲೂ ಉತ್ತಮವಾದದ್ದು ಇನ್ನೊಂದಿರಬೇಕು.

ಶ್ರೀಲ ಪ್ರಭುಪಾದ : ಹೌದು.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi